ಹಟ್ಟಿ ಚಿನ್ನದ ಗಣಿ ಸೆ.25: ಪಾಮನಕಲ್ಲೂರು ಕ್ರಾಸ್ ಹತ್ತಿರ ಮೂವತ್ತು ವರ್ಷಗಳಿಂದ ವಾಸಿಸುತ್ತಿರುವ ಸುಡುಗಾಡು ಸಿದ್ಧರ ಬಸವ ಜ್ಯೋತಿ ನಗರದ ನಮ್ಮ ಕೇರಿಗೆ ಮೂಲಭೂತ ಸೌಕರ್ಯ ಒದಗಿಸಲು ಅಲೆಮಾರಿ ಜಾಗೃತ ಸಂಘದ ನಿಯೋಗದ ವತಿಯಿಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯ ಮಾಡಿದರು.
ಮನವಿ ಪತ್ರ ಸ್ವೀಕರಿಸಿದ ಪಂಚಾಯತ್ ಕರ ವಸೂಲಿ ಅಧಿಕಾರಿ ಅಕ್ರಮ್ ಪ್ರತಿಕ್ರಿಯಿಸಿ, ವಾರದೊಳಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಪಡಿಸಲು ಕ್ರಮಕೈಗೊಳ್ಳಲಾಗುವುದು ಹಾಗೂ ಮಿಕ್ಕ ಸಮಸ್ಯೆಗಳಿಗೆ ಹಂತಹಂತವಾಗಿ ಗಮನಹರಿಸಲಾಗುವುದು ಎಂದು ಆಶ್ವಾಸನೆಯ ಭರವಸೆ ನೀಡಿದರು.
ನಾವು ಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾಮನಕಲ್ಲೂರು ಕ್ರಾಸ್ ಹತ್ತಿರದ ಬಸವ ಜ್ಯೋತಿ ನಗರದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಅಲೆಮಾರಿ ಪಟ್ಟಿಯಲ್ಲಿ ಬರುವ ಸುಡುಗಾಡು ಸಿದ್ಧ ಜನಾಂಗದವರಾಗಿದ್ದು, ಸುಮಾರು ಮೂರು ದಶಕಗಳ ಕಾಲ ಇಲ್ಲಿಯ ನಿವಾಸಿಗಳಾಗಿದ್ದು, ಆಗಿನಿಂದಲೂ ನಮ್ಮ ಓಣಿಯಲ್ಲಿ ಹಲವು ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸಾರ್ವಜನಿಕ ಸಮಸ್ಯೆಗಳು ದೀರ್ಘಕಾಲದಿಂದ ಪಂಚಾಯತ್ ಆಡಳಿತದ ನಿರ್ಲಕ್ಷ್ಯ ಧೋರಣೆಯಿಂದ ಹಾಗೆಯೇ ಮುಂದುವರೆದಿವೆ. ಈ ಸಮಸ್ಯೆಗಳಿಂದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲಾ ನಿವಾಸಿಗಳು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ. ಮುಖ್ಯಾಧಿಕಾರಿಗಳು ಈ ಮನವಿಯನ್ನು ತುರ್ತು ಸಾರ್ವಜನಿಕ ಸಮಸ್ಯೆಗಳ ಮನವಿಯಾಗಿ ಪರಿಗಣಿಸಿ, ಸ್ಥಳ ಪರಿಶೀಲನೆ ನಡೆಸಿ, ಒಂದು ವಾರದೊಳಗೆ ತುರ್ತು ಸಮಸ್ಯೆಗಳನ್ನು, ಮಿಕ್ಕ ಸಮಸ್ಯೆಗಳನ್ನು ಗರಿಷ್ಠ ಹದಿನೈದು ದಿನಗಳೊಳಗಾಗಿ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಒತ್ತಾಯಿಸಿತು.
ಕುಡಿಯುವ ನೀರು, ಮಹಿಳಾ ಶೌಚಾಲಯ, ಚರಂಡಿ, ಗುಮ್ಮಿಯ ದುರಸ್ತಿ, ಸೊಳ್ಳೆ ನಿಯಂತ್ರಣ, ಬೀದಿ ದೀಪಗಳ ಕೊರತೆ, ರಸ್ತೆಗಂಟಿದ ಗಿಡಗಂಟಿಗಳ ತೆರವುಗೊಳಿಸುವಿಕೆ ಹೀಗೆ ಎಲ್ಲಾ ಸಮಸ್ಯೆಗಳು ನಮ್ಮ ಜನರ ದೈನಂದಿನ ಜೀವನ, ಸಾರ್ವಜನಿಕ ಆರೋಗ್ಯ, ಸ್ವಚ್ಛತೆ ಹಾಗೂ ಸುರಕ್ಷತೆಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳಾಗಿವೆ. ಆದ್ದರಿಂದ, ಮಾನ್ಯ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಕೇರಿಯ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಅಗತ್ಯ ಕ್ರಮ ಕೈಗೊಂಡು, ಸಾಧ್ಯವಾದಷ್ಟು ಶೀಘ್ರವಾಗಿ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ, ಸಾರ್ವಜನಿಕರ ಹಕ್ಕುಗಳು ಮತ್ತು ಮೂಲಭೂತ ಸೌಕರ್ಯಗಳಿಗಾಗಿ ಕಾನೂನುಬದ್ಧ ಹಾಗೂ ಶಾಂತಿಯುತ ರೀತಿಯಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ವಿಷಯವನ್ನು ಕೊಂಡೊಯ್ಯುವುದು ಹಾಗೂ ಅಗತ್ಯಬಿದ್ದಲ್ಲಿ ಪಟ್ಟಣ ಪಂಚಾಯತ್ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ. ವಾರದೊಳಗೆ ನಮ್ಮ ಓಣಿಯ ಸಮಸ್ಯೆಗಳನ್ನು ಸಹಾನುಭೂತಿಯಿಂದ ತುರ್ತು ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಿಯೋಗದಲ್ಲಿ ಅಧ್ಯಕ್ಷ ಬಸವರಾಜ ಹಟ್ಟಿ, ಉಪಾಧ್ಯಕ್ಷ ಗಂಗಾಧರ್ ಶಂಖು, ಮಲ್ಲಿಕಾರ್ಜುನ ಶಂಖು, ಈರೇಶ(ಚಿಟ್ಟಿ), ರವಿಕುಮಾರ್, ಗೋಪಾಲ, ಶೇಖರ್, ಪ್ರಭು, ನಾಗಲಿಂಗ ಸೇರಿದಂತೆ ಇತರ ನಿವಾಸಿಗಳು ಇದ್ದರು.

