‌ಚಿರಧ್ಯಾನಕ್ಕೆ ತೆರಳಿದ ಖ್ಯಾತ ಕಲಾವಿದ ಕೆ ಟಿ ಶಿವಪ್ರಸಾದ್

ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ, ಶಿಲ್ಪಕಲೆ, ಫೋಟೋಗ್ರಫಿ ಇವೆಲ್ಲದರ ಜೊತೆಯಲ್ಲಿ ನಾಡಿನ ಹಲವಾರು ಚಿಂತಕರ, ಸಾಹಿತಿಗಳ, ಜನಪರ ಚಳುವಳಿಗಳ ಸಂಪರ್ಕ ಮತ್ತು ತೊಡಗುವಿಕೆ ಎರಡೂ ಇದ್ದ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರು ಚಿರ ಧ್ಯಾನಕ್ಕೆ ತೆರಳಿದ್ದಾರೆ. ಅಗಲಿದ ಚೇತನಕ್ಕೆ ಕನ್ನಡ ಪ್ಲಾನೆಟ್‌ ತೀವ್ರ ಸಂತಾಪಗಳನ್ನು ಸಲ್ಲಿಸುತ್ತದೆ. ಕೆ ಟಿ ಯವರ ವ್ಯಕ್ತಿತ್ವವನ್ನು ಹೀಗೆಯೇ ಎಂದು ಹಿಡಿದಿಡಲಾಗದಿದ್ದರೂ ಅವರೊಂದಿಗಿನ ತಮ್ಮ  ಒಡನಾಟದಲ್ಲಿ ದಕ್ಕಿದಷ್ಟನ್ನು ಇಲ್ಲಿ ಹಂಚಿಕೊಂಡಿದ್ದಾರೆ ರಂಗಕರ್ಮಿ ಪ್ರಸಾದ್‌ ರಕ್ಷಿದಿ.

ಕೆ.ಟಿ. ಶಿವಪ್ರಸಾದ್‌,  ಶಾರ್ಟ್‌ ಫಾರ್ಮ್‌ ಕೆ.ಟಿ.ಎಸ್‌, ಇನ್ನೂ ಹತ್ತಿರದವರಿಗೆ ಬರಿಯ ಕೆ.ಟಿ.  (1947- 2026) ಹೀಗೆ ಖ್ಯಾತರಾಗಿದ್ದ  ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದ್ದವರು ಕಲಾವಿದ ಕೆ.ಟಿ.ಶಿವಪ್ರಸಾದ್‌. ಇವರ ವ್ಯಕ್ತಿತ್ವವನ್ನು ಹೀಗೆಯೇ ಎಂದು ಹಿಡಿದಿಡುವುದು ಬಹಳ ಕಷ್ಟದ ಕೆಲಸ.  ಒಂದರ್ಥದಲ್ಲಿ ಅವರೊಬ್ಬ  ಅವಧೂತ, ನಮ್ಮ ಒಬ್ಬರು ಹಿರಿಯ ರಂಗಕರ್ಮಿಯ ಬಗ್ಗೆ ನಾನೊಂದು ಸಭೆಯಲ್ಲಿ ಮಾತನಾಡುತ್ತ ಅವರೊಬ್ಬ “ ಮೋಸ್ಟ್‌ ಅನ್ ಪ್ರೆಡಿಕ್ಟೆಬಲ್‌  ಮಂಟೇ ಸ್ವಾಮಿ “ ಕಣ್ರೀ ಅಂದಿದ್ದೆ. ಇದೇ ವಿಶೇಷಣವನ್ನು ಕೆ.ಟಿ. ಅವರಿಗೂ ಹೇಳಬಹುದು.

ಹುಟ್ಟಿದ್ದು ದೊಡ್ಡ ಶ್ರೀಮಂತ ಕುಟುಂಬದಲ್ಲಿ, ಅವರ ಮನೆ ರಾಜಕಾರಣದ ಚಾವಡಿಯೂ ಹೌದು. ತಂದೆ ಉದ್ಯಮಿ ಎಲ್.ಟಿ ಕಾರ್ಲೆ ಅವರು ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣದಲ್ಲಿಯೂ ಇದ್ದರು. ಸಾಕಷ್ಟು ಜಮೀನೂ ಇತ್ತು. ಕೆ.ಟಿ. ಬಯಸಿದ್ದರೆ “ಸುಖವಾಗಿ ಬದುಕಬಹುದಿತ್ತು. ಆದರೆ ಬಾಲ್ಯದಿಂದಲೇ ಕೆ.ಟಿ.ಯೊಳಗೊಬ್ಬ ಜಂಗಮನಿದ್ದ. ಅನೇಕರಿಗೆ ಮನೆಕಟ್ಟಲು ನೆರವಾದ ವಾಸ್ತುತಜ್ಞ ಕೆ.ಟಿ. ಗೆ ಮನೆಯನೆಂದು ಕಟ್ಟದಿರು ಎನ್ನುವ ಸಿದ್ಧಾಂತ ಎದೆಯೊಳಗಿತ್ತು. 

ಹಾಸನ ಜಿಲ್ಲೆಯ  ಕೆ.ಟಿ.ಶಿವಪ್ರಸಾದ್‌ ಹುಟ್ಟಿದ್ದು ಕೊಡಗಿನ ಮಡಿಕೇರಿಯಲ್ಲಿ, ಇವರಿಗೆ  ಸುಳ್ಯ ತಾಲೂಕಿನ ಸಂಬಂಧ ಇದೆ. ಇದು ಅನೇಕರಿಗೆ ತಿಳಿಯದ ಸಂಗತಿ.!! ಅಲ್ಲಿ ಸ್ವಲ್ಪ ಕಾಲ ಅವರು ಶಾಲೆಗೆ ಹೋಗಿದ್ದಾರೆ.

ಕೆ ಟಿ ಶಿವಪ್ರಸಾದ್

ಅವರೊಳಗೊಬ್ಬ ಒಳ್ಳೆಯ ವಿಮರ್ಶಕನೂ ಇದ್ದ. ಅವರು ‌ಹೀಗೇ ಗೆಳೆಯರೊಂದಿಗೆ ಕುಳಿತು ಮಾತನಾಡುವಾಗ ಒಳ್ಳೆಯ ಮಾತುಗಾರ. ಆದರೆ ವೇದಿಕೆಯಲ್ಲಿ ನಿಂತು ಮಾತಾಡಿದರೆ ಅರ್ಥ ಮಾಡಿಕೊಳ್ಳಲು ಕಷ್ಟ !

ಗೆಳೆಯ ಕೆ.ಪಿ.ಸುರೇಶ ಹಿಂದೆ ಗಾಂಧಿ ವಿಚಾರಗಳ ಬಗ್ಗೆ ” ಮರಳಿ ಬಂದ ಮೂರು ಕತೆಗಳು” ಎಂಬ ಪುಸ್ತಕ ಮಾಡಿದ್ದರು. ಅದು ಒಂದು ಅಂತಾರಾಷ್ಟ್ರೀಯ ಸೆಮಿನಾರ್ ಯೋಜನೆಯಂತೆ ಮಾಡಿದ ಪುಸ್ತಕ. ಅದರಲ್ಲಿ ಖ್ಯಾತ ಕಲಾವಿದ ಮೋಹನ ಸೋನ ರಚಿಸಿದ ‘ ಗಾಂಧಿ ಚಿತ್ರಗಳು ಇದ್ದವು

ನಾನು ಒಮ್ಮೆ ಕೆ.ಟಿ. ಮನೆಗೆ ಹೋಗುವಾಗ ಈ ಪುಸ್ತಕ ವನ್ನು ತೆಗೆದುಕೊಂಡು ಹೋಗಿ ಅವರಿಗೆ ಕೊಟ್ಟೆ. ಅದರಲ್ಲಿ ಸೋನ ಹಾಗೂ ದಿನೇಶ್ ಕುಕ್ಕುಜಡ್ಕ ಮತ್ತು ಇಕ್ಬಾಲ್ ಅವರ ಚಿತ್ರಗಳಿವೆ ಎಂದೆ. ಕೆ.ಟಿ. ಆ ಚಿತ್ರಗಳನ್ನು ನೋಡಿ “ದಿನೇಶ ಕಾರ್ಟೂನ್ ನಲ್ಲೇ ಉಳಿಯಬಾರದು, ಹೆಚ್ಚು ಚಿತ್ರ ಬರೆಯಬೇಕು ಅವರ ಒರಿಜಿನಲ್ ಒರಟುತನ ಚೆನ್ನಾಗಿದೆ ಎಂದರು ! ಹಾಗೇ ಮೋಹನ ಸೋನ ಅವರ ಗಾಂಧಿ ಚಿತ್ರಗಳನ್ನು ನೋಡಿ ಒಳ್ಳೆಯ ಕಲಾವಿದ, ಸಜ್ಜನ ಗಾಂಧಿ ಯನ್ನು ತುಂಬ ಇನ್ನೋಸೆಂಟ್ ಆಗಿ ನಂಬಿದ್ದಾರೆ !! ಎಂದರು.. ಆಮೇಲೆ ನಾನೂ ಸುಳ್ಯದ ಸೋಣಂಗೇರಿಯಲ್ಲಿ ಇದ್ದೆ ! ಸ್ವಲ್ಪ ಕಾಲ ಅಲ್ಲಿ ಶಾಲೆಗೆ ಹೋಗಿದ್ದೇನೆ ಎಂದರು.

ಅಲ್ಲಿ ನನ್ನ ದೊಡ್ಡಮ್ಮನ ಮನೆ ಇದೆ ಎಂದರು. ಮತ್ತೆ ಯಾಕೆ ಅಲ್ಲಿಂದ ವಾಪಸ್ ಬಂದಿರಿ ? ಎಂದೆ.  

” ನನ್ನ ಸಂಭಾಳಿಸಿಕೊಂಡು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಬೇಕಲ್ಲ !  ಎಂದರು.

ನಂತರವೂ ಅವರು ಹಾಗೆಯೇ. ಇಂಜಿನಿಯರ್‌ ಆಗಲು ಹೊರಟ ಕೆ.ಟಿ. ಅರ್ಧಕ್ಕೇ ಅದನ್ನು ಬಿಟ್ಟು ಮುಂಬಯಿಯ ಜೆ.ಜೆ.ಚಿತ್ರಕಲಾ ಶಾಲೆ ಸೇರಿದರು.

ಕಲಾವಿದರಾಗಿ ಪ್ರಸಿದ್ಧರಾದಮೇಲೂ  ಕೆ.ಟಿ ಶಿವಪ್ರಸಾದ್ ಬರಿಯ ಕಲಾವಿದರಾಗಿರಲಿಲ್ಲ. ಅವರೊಬ್ಬ ಉತ್ತಮ ಆರ್ಕಿಟೆಕ್ಟ್ ಕೂಡಾ. ಹಲವಾರು ಜನ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರ ಮನೆಯ ವಿನ್ಯಾಸ ಮಾಡಿದವರೂ ಇವರೇ. ಅವರೇ ಹೇಳಿಕೊಂಡಂತೆ ನೂರಕ್ಕೂ ಹೆಚ್ಚು ಮನೆಗಳ ವಾಸ್ತು ಶಿಲ್ಪ ಇವರದ್ದು.

ಕೆ ಟಿ ಯವರ ಒಂದು ಕಲಾಕೃತಿ

ಎರಡು ಸಾವಿರದ ಹತ್ತನೆಯ ಇಸವಿಯಲ್ಲಿ ನಾವು ಕೆಲವರು ಗೆಳೆಯರು ಸೇರಿ, ಒಂದು ಟಿ.ವಿ.ಚಾನಲ್ ಗಾಗಿ ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ಮಾಡಿದ್ದೆವು.  ಆ ಸಾಕ್ಷ್ಯಚಿತ್ರ ಸಹಜವಾಗಿಯೇ ತೇಜಸ್ವಿಯವರ ಬಹುಕಾಲದ ಒಡನಾಡಿ ಕೆ.ಟಿ.ಶಿವಪ್ರಸಾದರ ಸಂದರ್ಶನವನ್ನು ಒಳಗೊಂಡಿತ್ತು. ಆ ಸಂದರ್ಶನದಲ್ಲಿ ಶಿವಪ್ರಸಾದ್ “ತೇಜಸ್ವಿ ಒಬ್ಬ ಮಾಂತ್ರಿಕ, ನನ್ನನ್ನು ರೂಪಿಸಿದವರು ಅವರೇ” ಎಂದು ನುಡಿದಿದ್ದರು.

ಚಿತ್ರಕಲೆ, ಶಿಲ್ಪಕಲೆ, ಫೋಟೋಗ್ರಫಿ ಇವೆಲ್ಲದರ ಜೊತೆಯಲ್ಲಿ ನಾಡಿನ ಹಲವಾರು ಚಿಂತಕರ, ಸಾಹಿತಿಗಳ, ಜನಪರ ಚಳುವಳಿಗಳ ಸಂಪರ್ಕ ಮತ್ತು ತೊಡಗುವಿಕೆ ಎರಡೂ ಇದ್ದ ಕೆ.ಟಿ. ಶಿವಪ್ರಸಾದರು ಈ ಹಂತಗಳನ್ನು ದಾಟಿ ಅವರು ಮುಂದಿನ ನಡೆ ಇಟ್ಟದ್ದು ಬುದ್ಧನ ಕಡೆಗೆ.

ನಾನು ಬುದ್ಧನ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತೇನೆ ಹೊರತು ಆಚರಣೆಗಳನ್ನಲ್ಲ, ಬುದ್ಧ ಧಮ್ಮ ಇಂದಿನವರೆಗೆ ಅತ್ಯಂತ ವೈಜ್ಞಾನಿಕವಾದದ್ದು. ಮುಂದೆ ಒಂದು ದಿನ ವಿಜ್ಞಾನ ಇನ್ನೂ ಬೆಳೆದಾಗ ಬುದ್ಧ ಧಮ್ಮವೂ ನಶಿಸಿಹೋಗುತ್ತದೆ ಎನ್ನುವ ಪ್ರಜ್ಞೆ ಕೆ.ಟಿ.ಯವರದ್ದು.

ಕೆ.ಟಿ ಗೆ ಪ್ರೊ. ನಂಜುಂಡಸ್ವಾಮಿಯವರ ಪರಿಚಯವಾದದ್ದು ಆಕಸ್ಮಿಕವಾಗಿ. ಒಮ್ಮೆ ಹಾಸನಕ್ಕೆ ಬರಲು ದಾರಿಬದಿಯಲ್ಲಿ ವಾಹನಕ್ಕಾಗಿ ಕಾಯುತ್ತಿದ್ದ ಕೆ.ಟಿ.ಯನ್ನು ನಂಜುಂಡಸ್ವಾಮಿ ತಮ್ಮ ವಾಹನಕ್ಕೆ ಹತ್ತಿಸಿಕೊಂಡಿದ್ದರು.  ನಂತರ ಅವರನ್ನು ತೇಜಸ್ವಿಗೆ ಪರಿಚಯಿಸಿದವರೂ ನಂಜುಂಡಸ್ವಾಮಿಯವರೇ.

ತೇಜಸ್ವಿಯವರ ಸಾಹಿತ್ಯವನ್ನು ಓದಿದ ಮತ್ತು ಸಾಮಾಜಿಕ ಬದುಕಿನಲ್ಲಿ ಹತ್ತಿರದಿಂದ ಒಡನಾಡಿದ ಹಾಗೆಯೇ ದೂರದಿಂದ ನೋಡಿ ಅವರ ಅನುಯಾಯಿ- ಅಭಿಮಾನಿ ಎಂದುಕೊಳ್ಳುತ್ತಿರುವವರಲ್ಲಿ ಎರಡು ಬಗೆಯವರಿದ್ದಾರೆ. ಮೊದಲನೆಯವರು ತೇಜಸ್ವಿಯವರ ಸಾಹಿತ್ಯವನ್ನು ಆಸ್ವಾದಿಸುತ್ತ, ಅದರಲ್ಲಿನ ಹಾಸ್ಯಪ್ರಜ್ಞೆಯನ್ನು ಕೊಂಡಾಡುತ್ತ ಅವರ ಫೋಟೋಗ್ರಫಿ, ಟ್ರೆಕ್ಕಿಂಗ್, ಜೀಪು ರಿಪೇರಿ, ಸ್ಕೂಟರಿನ ಕಥೆಗಳನ್ನೇ ಮಹತ್ತರವಾದುದೆಂದು ಬಿಂಬಿಸುತ್ತ, ತೇಜಸ್ವಿಯವರ ರಾಜಕೀಯ ನಿಲುವುಗಳು, ಜಾತಿವಿನಾಶದ ನಡೆಗಳು ಮುಂತಾದವುಗಳ ಬಗ್ಗೆ ಮೌನವಾಗಿ, ತಮ್ಮದೇ ಭಕ್ತಮಂಡಳಿ ರಚಿಸಿಕೊಂಡಿರುವವರು.

ಎರಡನೆಯ ಗುಂಪು, ಅವರ ಸಾಮಾಜಿಕ ಹೋರಾಟಗಳು, ರಾಜಕೀಯ ನಿಲುವುಗಳು, ತೇಜಸ್ವಿ ಸಾಹಿತ್ಯದ ಸಾಂಸ್ಕೃತಿಕ ಅನುಸಂಧಾನ ಹಾಗೂ ಅವರ ಮಿತಿಗಳು ಎಲ್ಲವನ್ನೂ ವಿಮರ್ಶೆಗೊಳಪಡಿಸುತ್ತಾ ತಮ್ಮ ಮಾನವಪರ ನಿಲುವುಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು. ಕೆ.ಟಿ. ಈ ಎರಡನೆಯ ಗುಂಪಿನವರು. ಆ ಕಾರಣದಿಂದಲೇ ಅವರು ನಂಜುಂಡಸ್ವಾಮಿ ಅವರ ಜೊತೆ ರೈತ ಚಳುವಳಿಯಲ್ಲಿ ಗುರುತಿಸಿಕೊಂಡರೂ, ರೈತಸಂಘಗಳ ಬಗೆಗಿನ ಅತೃಪ್ತಿ ಅವರನ್ನು ದಲಿತ ಸಂಘಟನೆಗಳತ್ತ ನಡೆಯುವಂತೆ ಮಾಡಿತು. ಮತ್ತು ತಮ್ಮನ್ನು ಅಲ್ಲಿಯೇ ಗುರುತಿಸಿಕೊಂಡರು.  “ನನ್ನನ್ನು ರೂಪಿಸಿದವರು ತೇಜಸ್ವಿ” ಎಂದು ಹೇಳಿದರೂ ಹಲವು ಸಂದರ್ಭದಲ್ಲಿ ತೇಜಸ್ವಿಯವರ ಅಭಿಪ್ರಾಯವನ್ನೂ ಒಪ್ಪದೆ ಗಟ್ಟಿಯಾಗಿ ನಿಲ್ಲಲು ಅವರಿಗೆ ಸಾಧ್ಯವಾಯಿತು.

ಕುವೆಂಪು ಮತ್ತು ತೇಜಸ್ವಿ ಇಬ್ಬರನ್ನೂ ಹತ್ತಿರದಿಂದ ಕಂಡಿದ್ದ, ಅವರಿಂದ ಸಾಕಷ್ಟನ್ನು ಪಡೆದಿದ್ದ ಕೆ.ಟಿ. ಅವರಿಬ್ಬರ ಸಮಾಧಿಯನ್ನೂ ನಿರ್ಮಿಸುವಂತಾದ್ದು ವಿಪರ್ಯಾಸವಾದರೂ… ಅದೊಂದು ಅನನ್ಯ ಕಲಾಕೃತಿಯಾಗಿ ನಮಗೆ ಉಳಿದದ್ದೂ ಅಷ್ಟೇ ನಿಜ. ಸಮಾಧಿಗಳ ನಿರ್ಮಾಣದಲ್ಲಿ ಸಿದ್ಧಾರ್ಥ ಹೆಗಡೆಯವರ ಸಹಕಾರವನ್ನೂ ಕೆ.ಟಿ. ಸ್ಮರಿಸಿದ್ದಾರೆ.

ರೈತ ಹೋರಾಟದಲ್ಲಿ ಕೆ ಟಿ ಯವರು

ಕುಪ್ಪಳಿಯಲ್ಲಿ  ಒಮ್ಮೆ  ಕೆ.ಟಿ ಸಿಕ್ಕಿದ್ದರು… 

ದಶಕಗಳ ಹಿಂದಿನ ಬಾಳ್ಳುಪೇಟೆ ದಲಿತ ಹೋರಾಟದ ಕಾಲದಿಂದ ನಾನು ಕೆ.ಟಿ. ಯವರನ್ನು ಬಲ್ಲೆ.  ಕುಪ್ಪಳಿಯ ಅಂದಿನ ಕಾರ್ಯಕ್ರಮದಲ್ಲಿ,  ನಮ್ಮ ಮಗಳು ಅಮೃತಾ ರಕ್ಷಿದಿ ಕೂಡಾ ನಮ್ಮ ಜೊತೆ ಇದ್ದಳು. ಅವಳಾಗ ಚಿತ್ರಕಲೆಯಲ್ಲಿ ಪದವಿಗಾಗಿ ಕಲಿಯುತ್ತಿದ್ದ ಸಮಯ, ಸುಮಾರು ಮುಕ್ಕಾಲು ಗಂಟೆ ಕೆ.ಟಿ.ಅವಳೊಡನೆ ಮಾತನಾಡುತ್ತ ಕುಳಿತರು. ಕುವೆಂಪು ಸಮಾಧಿಯ ಬೃಹತ್ ಶಿಲ್ಪಗಳಬಗ್ಗೆ ಮತ್ತು ಅವು ಪ್ರತಿಯೊಂದು ಋತುವಿನಲ್ಲಿಯೂ ಹೊಸ ಬಣ್ಣ ತಳೆದು ಹೊಸ ಅರ್ಥ ಕೊಡುವ ಬಗ್ಗೆಯೆಲ್ಲ ವಿವರಿಸಿದರು. “ಆ ಶಿಲ್ಪಗಳು ಪ್ರಕೃತಿಯೊಡನೆ ಮಾತಾಡುತ್ತಿವೆ. ಹಾಗೆ ನಾವು ಪ್ರಕೃತಿಯೊಡನೆ ಮಾತಾಡಬೇಕು” ಎಂದರು. ಹೀಗೆ ಅವರ ಮಾತು ಸಾಗಿತು.

ಮುಂದೆ ಅಂದಿನ ಭಾಷಣದಲ್ಲಿಯೂ ಕೆ.ಟಿ. ಕಲೆಯ ಬಗ್ಗೆ ಮುಖ್ಯವಾಗಿ ಅನೇಕ ಬೌದ್ಧ ಕಲಾಮೀಮಾಂಸೆಯ ಬಗ್ಗೆ ಹೇಳುತ್ತ, “ಇದು ಅಲ್ಲಿ ಕುಳಿತಿದ್ದಾಳಲ್ಲ ಅಮೃತ ಅವಳಿಗೆ ಅರ್ಥವಾಗುತ್ತದೆ” ಎಂದರು. ಕೆ.ಟಿ.ಗೆ ಹೀಗೆ ಎಳೆಯರೊಡನೆ ಮಾತು ಅನುಸಂಧಾನ ಸಹಜವಾಗಿ ಸಿದ್ಧಿಸಿತ್ತು.

ಅಮೃತಾ ಹೋದ ನಂತರ, ಹಾಸನದಲ್ಲಿ “ಅಮೃತ ಯಾನ” ಪುಸ್ತಕಕ್ಕೆ ಒಂದು ವರ್ಷವಾದ ಸಮಯದಲ್ಲಿ ಹಾಸನದಲ್ಲಿ ಚಲಂ ಹಾಡ್ಳ ಹಳ್ಳಿ ನಡೆಸಿದ ಕಾರ್ಯಕ್ರಮಕ್ಕೂ ಕೆ.ಟಿ ಬಂದಿದ್ದರು. 2021 ರಲ್ಲಿ ಅಮೃತಾ ಳ  ಚಿತ್ರಗಳ ಸಂಗ್ರಹ ಪುಸ್ತಕ  Amritha and her Paintings  ಪ್ರಕಟವಾದಾಗ ಅದರ ಬಿಡುಗಡೆ ಸಕಲೇಶಪುರದಲ್ಲಿ ನಡೆಯಿತು. ಪುಸ್ತಕ ಬಿಡುಗಡೆಗೆ .ಕೆ.ಟಿ.ಅವರನ್ನು ಆಹ್ವಾನಿಸಿದ್ದೆವು.  ಆ ದಿನ ನಿಗದಿತ ಸಮಯಕ್ಕಿಂತ ಒಂದೂವರೆ ಗಂಟೆ ಮೊದಲೇ ತಾವು ಬಂದು ಕುಳಿತು ನಂತರ ಕಾರ್ಯಕ್ರಮ ತಡವಾಯಿತೆಂದು ಕಾರಣ ಹೇಳಿ ಸಿಟ್ಟು ಮಾಡಿಕೊಂಡು ವಾಪಸ್‌ ಹೋಗಿದ್ದರು!! ಕೆ.ಟಿ.ಇದ್ದುದೇ ಹಾಗೆ. 

ಕೆ.ಟಿ.ಶಿವಪ್ರಸಾದ್ ಅವರ ಬದುಕೇ ಒಂದು ಕೊಲಾಜ್ ಚಿತ್ರ…… ಮತ್ತು ಅದರ ಹಿನ್ನೆಲೆಯಲ್ಲಿ ತೇಜಸ್ವಿ ಕಾಣುತ್ತಾರೆ. ನಾವು ಕೆ.ಟಿ.ಯವರ ಹಲವಾರು ವಿಚಾರಗಳನ್ನು ಒಪ್ಪದಿರಬಹುದು, ಆದರೆ ಅವುಗಳ ಹಿಂದಿನ ಜೀವಪರ ಒಲವುಗಳನ್ನು, ಆಶಯಗಳನ್ನು  ಒಪ್ಪದಿರಲು ಸಾಧ್ಯವಾಗದು.

ಕೆ.ಟಿ ಚಿರ ಧ್ಯಾನಕ್ಕೆ ತೆರಳಿದ್ದಾರೆ. ಇನ್ನು ಅವರ ಶಿಲ್ಪಗಳ ಮೂಲಕ, ಚಿತ್ರಗಳ ಮೂಲಕ ಮೌನ ಸಂಭಾಷಣೆಯಲ್ಲಿ ನಮ್ಮೊಂದಿಗೆ ಇರುತ್ತಾರೆ.

ಪ್ರಸಾದ್‌ ರಕ್ಷಿದಿ

ರಂಗಕರ್ಮಿಗಳು

ಇದನ್ನೂ ಓದಿ- ಸ್ಮರಣೆ | ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ

More articles

Latest article

Most read