ಬೆಂಗಳೂರು : ಕೇಂದ್ರ ಚುನಾವಣಾ ಅಯೋಗ ರಾಜ್ಯದಲ್ಲಿ ನಡೆಸುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ( SIR) ಅವಧಿಯನ್ನು ಆಗಸ್ಟ್ 17ರವರೆಗೆ ವಿಸ್ತರಿಸಿದೆ. ಇದುವರೆಗೂ ಆಗಸ್ಟ್ 8ರತನಕ ಕೊನೆ ದಿನವಾಗಿತ್ತು. ಈಗ ಅದನ್ನು ಮತ್ತೆ 9 ದಿನಗಳನ್ನು ಹೆಚ್ಚಿಸಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ SIR 2026ರ ಕಾರ್ಯ ಪ್ರಗತಿಯಲ್ಲಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಆಯೋಗ ಪ್ರಕಟಿಸಿದೆ.
ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ಭೇಟಿ ನೀಡಿ ಗಣತಿ ಅರ್ಜಿ ವಿತರಣೆ ಹಾಗೂ ಸಂಗ್ರಹಿಸುವ ಕೆಲಸ ಜೂನ್ 30 ರಂದು ಆರಂಭವಾಯಿತು. ಈ ಕಾರ್ಯ ಆಗಸ್ಟ್ 17ರವರೆಗೆ ನಡೆಯಲಿದೆ. ಈ ಹಿಂದೆ ಆಗಸ್ಟ್ 8ರವರೆಗೆ ಅವಕಾಶ ನೀಡಲಾಗಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ, ಮತಗಟ್ಟೆಗಳ ಮರು ಜೋ ಡಣೆ ಹಾಗೂ ಮರು ಹೊಂದಾಣಿಕೆ ಕಾರ್ಯವನ್ನು ಆಗಸ್ಟ್ 17 ರಂದು ಪೂರ್ಣಗೊಳಿಸಲಾಗುವುದು. ಕರಡು ಮತದಾರರ ಪಟ್ಟಿಯನ್ನು ಆ. 24ರಂದು ಪ್ರಕಟಿಸಲಾಗುತ್ತದೆ.
ಇದಾದ ಬಳಿಕ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿಯನ್ನು ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ ನಡೆಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27 ರಂದು ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

