ಶೂರ್ಪನಖಿ, 50 ಕೋಟಿಯ ಗರ್ಲ್ ಫ್ರೆಂಡ್, ಕಾಂಗ್ರೆಸ್ ವಿಧವೆ ಎನ್ನುವಂತಹ ಪದಗಳು, ದೀದೀ.. ಓ ದೀದೀ.. ಎನ್ನುವ ವಿಕೃತ ಕುಹಕದ ಕೂಗು, ಸೈದ್ಧಾಂತಿಕ ಅಥವಾ ರಾಜಕೀಯ ವಿರೋಧಿಗಳು ಎನ್ನೋ ಕಾರಣಕ್ಕೆ ಸೋನಿಯಾ ರಾಹುಲ್ ರ ವಿಕೃತ ಚಿತ್ರಗಳ ಹಂಚಿಕೆ, ಮುಸಲ್ಮಾನನಿಗೆ ಹುಟ್ಟಿದವ ಎಂಬ ಎಗ್ಗಿಲ್ಲದ ಅತಾರ್ಕಿಕ ಲೇವಡಿಗಳು ಇವೆಲ್ಲವೂ ವೈಯುಕ್ತಿಕ ಮತ್ತು ತಂದೆ ತಾಯಿಗೆ ಮಾಡುವ ಅವಮಾನವಲ್ಲದೆ ಮತ್ತೇನು?- ಶಂಕರ್ ಸೂರ್ನಳ್ಳಿ, ಬರಹಗಾರರು.
ಭಾರತದಲ್ಲಿ ಹಲವೆಡೆ ತೀರಾ ಕೆಳಮಟ್ಟದ್ದೆನಿಸುವ ನಿಂದನೆಗಳು ಎಷ್ಟೊಂದು ಸಾಮಾನ್ಯವಾಗಿವೆಯೆಂದರೆ ಆ ಬೈಗುಳದ ಅರ್ಥ ಅತ್ಯಂತ ಅವಮಾನಕಾರಿಯಿದ್ದರೂ ಸಹ ಜನರು ಅದನ್ನು ತೀರಾ ಸಾಮಾನ್ಯವೆಂಬಂತೆ ಬಳಸುವುದುಂಟು.
2008 ರಲ್ಲಿ ನಮ್ಮ ಕ್ರಿಕೆಟಿಗ ಹರ್ಭಜನ್ ಸಿಂಗ್ ರವರು ಆಸ್ಟ್ರೇಲಿಯಾದಲ್ಲಿ ಒಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಆಸ್ಟ್ರೇಲಿಯನ್ ರಂತ ಆಸ್ಟ್ರೇಲಿಯನ್ನರನ್ನೇ ಜನಾಂಗ ನಿಂದನೆ ಮಾಡಿದ ಆರೋಪ (ಯುರೋಪ್ ಮೂಲದ ಶ್ವೇತವರ್ಣಿಯರ ಕುರಿತಂತೆ ಭಾರತೀಯರಿಗೆ ಬಣ್ಣ ಮತ್ತು ಭೌತಿಕ ರೂಪದ ಕುರಿತಂತೆ ಕೀಳರಿಮೆಯಿದೆಯೇ ಹೊರತು ಈ ವಿಷಯದಲ್ಲಿ ಜನಾಂಗೀಯ ಠೀಕೆಗೆ ಯಾರೂ ಹೋಗಲಾರರು ) ಅವರ ಮೇಲೆ ಬಂದಿತ್ತು. ಉತ್ತರ ಭಾರತೀಯರು ಸಾಮಾನ್ಯವಾಗಿ ಇಕ್ಕಟ್ಟು ಎದುರಾದಾಗ ಸಾಮಾನ್ಯವಾಗಿ ಬಳಸುವ (ತೇರಿ) ಮಾ ಕಿ .. ಎನ್ನುವ ಸ್ವಗತ ಬೈಗುಳನ್ನು ಕೇಳಿಸಿಕೊಂಡ ಹತ್ತಿರದಲ್ಲಿದ್ದ ಹಿಂದಿ ತಿಳಿಯದ ಆಸ್ಟ್ರೇಲಿಯನ್ ಆಟಗಾರರು ನಮ್ಮನ್ನು ಮಂಕಿ (ಮಾ ಕಿ) ಎಂದು ಜನಾಂಗೀಯ ನಿಂದನೆ ಮಾಡಿದ್ದ ಬಗ್ಗೆ ಭಜ್ಜಿ ಕುರಿತಂತೆ ಆರೋಪಿಸಿದ್ದರು. ಹರ್ಭಜನ್ ರವರೂ ಸಹ ಅದನ್ನು ತೀರಾ ಎಳೆಯಲು ಹೋಗಿಲ್ಲ ಯಾಕೆಂದರೆ ಮಂಕಿ ಎನ್ನುವ ಪದ ಈ ಮಾ ಕಿ ((ಕನ್ನಡದ ನಿನ್ನವ್.. ) ಎಂಬ ಹಿಂದಿಯ ಬೈಗಳು ವಿನ: ಒಳಾರ್ಥ (ತಾಯಿಯನ್ನು ನಿಂದಿಸುವ)ಕ್ಕಿಂತ ಎಷ್ಟೋ ಸಹ್ಯವಾಗಿತ್ತು. ಆದರೂ ಅವರು ತಮ್ಮ ಸ್ಥಳೀಯ ಸಹಜ ಬಳಕೆಯ ಮಾ ಕಿ ಪದದಿಂದಾಗಿ ಕೆಲ ಮ್ಯಾಚ್ ಗಳ ನಿರ್ಬಂಧವನ್ನು ಅನುಭವಿಸಬೇಕಾಗಿ ಬಂತು
ರಾಜಸ್ಥಾನ, ಬಿಹಾರ, ಉತ್ತರಪ್ರದೇಶಗಳಲ್ಲಿ ನನ್ನ ಕೆಲ ಸಹೋದ್ಯೋಗಿ ಮಿತ್ರರಿದ್ದಾರೆ. ಅವರು ಫೋನ್ ನಲ್ಲಿ ಒಂದು 20 ನಿಮಿಷ ಮಾತನಾಡುವಾಗ ಕನಿಷ್ಠ ಒಂದು ಹತ್ತು ಸಲವಾದರೂ ಮಾತಿನ ಮಧ್ಯೆ ಮಾ, ಬೆಹನ್ ಗಳನ್ನು ಮಾತಿನ ಮಧ್ಯೆ ತರುತ್ತಾರೆ. (ಉದಾ – ವೋ ಮಾದ… ಕೋ ಮೈನೆ ಕಹಾ ಥಾ …) ಅಂದ ಹಾಗೆ ಅವರು ಮಾತನಾಡುತ್ತಿರುವುದು ಯಾವುದೊ ಎದುರಾಳಿಗಳ ಜೊತೆಯಲ್ಲ ಕುಟುಂಬದವರೊಂದಿಗೆ. ಅಂದರೆ, ಅವೆಲ್ಲವೂ ಅವರಿಗೆ ತೀರಾ ಸಾಮಾನ್ಯ ಪದಗಳು. ಮೂಲಾರ್ಥ ಅವರಿಗಿಲ್ಲಿ ಅನವಶ್ಯ. ಹಿಂದಿವಾಲಗಳು ಬಿಡಿ ನಮ್ಮಲ್ಲೂ ಕೆಲವೆಡೆ ಸೂ.. ಮಗ ಎನ್ನುವುದು ಸರ್ಟಿಫಿಕೇಟ್ ಅಂತೆ. ಎಂಥ ತಮಾಷೆ..!! ಏನೇ ಇದ್ದರೂ ಇಂತಹ ಭಾಷೆಗಳು ಯಾವತ್ತಿಗೂ ಕೂಡ ಸಮ್ಮತವಲ್ಲ. ಅದು ಎಲ್ಲೇ ಇರಲಿ ಹೇಗೇ ಇದ್ದಿರಲಿ. ಯಾವುದೊ ಜಗಳದಲ್ಲಿ ಸಂಬಂಧವೇ ಇಲ್ಲದ ಹೆಣ್ಣನ್ನು ಎಳೆದು ತರುವುದು ಖಂಡಿತ ಒಪ್ಪತಕ್ಕದ್ದಲ್ಲ ಅಂದಹಾಗೆ, ಇತ್ತೀಚೆಗೆ ನಾಯಕರೊಬ್ಬರು ನನ್ನ ತಾಯಿಯನ್ನು ಇದೇ ರೀತಿ ನಿಂದಿಸಲಾಯಿತು ಎಂದು ಜನರ ಮುಂದೆ ಅಳಲನ್ನು ತೋಡಿಕೊಂಡಿದ್ದು ಸುದ್ದಿಯಾಗಿತ್ತು.

ಹಿಂದೆಲ್ಲ ಯುದ್ಧ ನಡೆದಾಗ ದಾಳಿಕೋರರು ಮೊದಲು ಅಲ್ಲಿನ ಹೆಂಗಸರ ಮೇಲೆ ದೌರ್ಜನ್ಯ ಎಸಗುತ್ತಿದ್ದರಂತೆ ಅಲ್ಲಿನವರ ನೈತಿಕ ಸ್ಥೈರ್ಯ ಕುಂದಿಸಲು ಇಂತಹ ಹೇಯ ನಡೆ ಮುಂದುವರೆಯುತ್ತಿತ್ತಂತೆ. ತಮ್ಮ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಕೆಲ ಗುಂಪುಗಳು ಇಂದಿಗೂ ಕೂಡ ಇದೇ ಮಾದರಿಯನ್ನು ಅನುಸರಿಸುತ್ತಿರುವುದು ಕೂಡ ಅಷ್ಟೇ ಸತ್ಯ. ವಿರೋಧಿಗಳ ನೈತಿಕ ಸ್ಥೈರ್ಯ ಕುಂದಿಸಲು ಜಾಲತಾಣಗಳಲ್ಲಿ ತಾಯಿ, ಮಕ್ಕಳನ್ನು ತೀರಾ ಅಸಹ್ಯವಾಗಿ ನಿಂದಿಸುವ ತಂತ್ರಗಾರಿಕೆಯ ಮೂಲ ಇದೇನೇ. ಇವರ ಅಸಭ್ಯ ಮಾತುಗಳು ಬರಹಗಳನ್ನು ನೋಡಿದಾಗ ಇಂಥವರ ಸಹವಾಸ ನಮಗ್ಯಾಕೆ ಎಂದು ದೂರ ಸರಿಯುವವರೇ ಹೆಚ್ಚು. ಅವರ ತರಬೇತು ಪಡೆದ ಐಟಿ ಸೆಲ್ ಗಳು ಈ ಕುರಿತಂತೆ ಸದಾ ಕಾರ್ಯಪ್ರವೃತ್ತವಾಗಿದ್ದು ನಿಂದನೆ, ದೂಷಣೆಗೆ ತಕ್ಕಂತೆ ಭತ್ಯೆಯನ್ನೂ ನೀಡುತ್ತವೆ ಎನ್ನುವುದು ಗುಟ್ಟಲ್ಲ
ಈ ಸೋನಿಯಾ ಗಾಂಧಿ ಯಾರೋ ಅದು ನಮಗ್ಯಾಕೆ, ಈ ರಾಹುಲ್ ಯಾರೋ ಅದೂ ಕೂಡ ಬೇಕಿಲ್ಲ. ಆದರೆ ಮೊದಲಿನದ್ದು ನಮ್ಮನ್ನಾಳಿದ ನಮ್ಮ ದೇಶದ ಪ್ರಧಾನಿಯೊಬ್ಬರ ಪತ್ನಿ. ಇನ್ನೊಂದು ಅದೇ ಪ್ರಧಾನಿಯ ಮಗ ಅಥವಾ ಮತ್ತೊಬ್ಬ ಹೆಸರಾಂತ ಪ್ರಧಾನಿಯೊಬ್ಬರ ಮೊಮ್ಮಗ ಮರಿಮಗ, ವಿರೋಧ ಪಕ್ಷದ ನಾಯಕ ಎಲ್ಲವೂ ಹೌದು. ಕೇವಲ ರಾಜಕೀಯ ಕಾರಣಕ್ಕಾಗಿ ಅವರನ್ನು ಅವಮಾನಿಸಿ ಜನರಲ್ಲಿ ಅವರ ಕುರಿತಂತೆ ಕೀಳು ಭಾವನೆ ಹುಟ್ಟಿಸಲು ಬಾರ್ ಡ್ಯಾನ್ಸರ್, ಪಪ್ಪು, ಜೆರ್ಸಿ ಹಸು, ಇತ್ಯಾದಿಯಾಗಿ ನಾಯಕನಿಂದ ಹಿಡಿದು ಚೇಲ ಪಟಾಲಮ್ಮುಗಳೆಲ್ಲ ಅವಮಾನಿಸುವಾಗ ಆ ಅವಮಾನ ಯಾವುದೊ ತಾಯಿಯ ಕುರಿತಂತೆ ಅನ್ನಿಸದಿರುವುದು ಮಾತ್ರ ಸೋಜಿಗವೇ.
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು ಬಂದರೆ ಮನದೊಳು ಕೋಪವ ತಾಳದೇ ಸಮಾಧಾನಿಯಾಗಿರಬೇಕು – ಇದು ಮಹಾದೇವಿಯಕ್ಕ ಹೇಳಿದಂತ ಮಾತು. ಅವರು ಹೇಳಿದ್ದಿಲ್ಲಿ ಯಾರಿಗೂ ಕೇಡ ಬಯಸದೆ, ಯಾರನ್ನೂ ನೋಯಿಸದೆ ಸಹಜವಾಗಿ ಬದುಕುವವರ ಕುರಿತಂತೆ. ಆದರೆ, ನಿಂದನೆಯನ್ನೇ ಉದ್ಯೋಗವನ್ನಾಗಿಸಿಕೊಂಡವರ ಬಗ್ಗೆ ಈ ಮಾತು ಒಪ್ಪದು. ಕೇವಲ ‘ತಿರುಗು ಬಾಣ’ ಎಂದಷ್ಟೇ ಹೇಳಲಡ್ಡಿಯಿಲ್ಲ. ಹೀಗಾಗಿ ಒಂದು ಕಾಲದಲ್ಲಿ ಪಟ್ಟಕ್ಕಾಗಿ ಮಹಾ ಮೆಟ್ಟಿಲುಗಳಾಗಿ ನಿಂತ ಜಾಲತಾಣಗಳು ಮತ್ತು ಯುವ ಜನತೆ ಇವತ್ತು ಸಮಸ್ಯೆಗಳಾಗಿ ಗೋಚರಿಸುತ್ತಿರುವುದು ಕಾಲದ ಅನಿವಾರ್ಯತೆಯೇ ವಿನಃ ಬೇರೇನಲ್ಲ.
ಶಂಕರ್ ಸೂರ್ನಳ್ಳಿ
ಲೇಖಕರು
ಇದನ್ನೂ ಓದಿ – ದಲಿತರ ಹ*ತ್ಯೆಗೆ ಕೊನೆಯೆಲ್ಲಿ?


