‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾ ತನ್ನ ಕಥಾನಾಯಕನನ್ನು ಒಬ್ಬ ಸಹಜ ಮನುಷ್ಯನನ್ನಾಗಿ ಕಟ್ಟಿಕೊಡುವ ಬದಲು ಆದರ್ಶದ ಪ್ರತಿಮೆಯನ್ನಾಗಿ ಮಾಡಿದ್ದು, ಅಲ್ಪಸಂಖ್ಯಾತರು ಸಮಾಜದಲ್ಲಿ ಒಪ್ಪಿಗೆ ಪಡೆಯಲು ಸದಾ ಅಗ್ನಿಪರೀಕ್ಷೆ ಎದುರಿಸಬೇಕೆಂಬ ಒಳಧ್ವನಿಯನ್ನು ಹೊಂದಿರುವುದು ವಿಮರ್ಶಾತ್ಮಕವಾಗಿ ಚರ್ಚೆಯಾಗಬೇಕಾದ ಸಂಗತಿಯಾಗಿದೆ – ಡಾ. ರವಿ ಎಂ.ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಪೂರ್ಣಚಂದ್ರ ತೇಜಸ್ವಿಯವರ ‘ಅಬಚೂರಿನ ಪೋಸ್ಟ್ ಆಫೀಸ್’ ಕಥಾಸಂಕಲನದ ‘ಡೇರ್ ಡೆವಿಲ್ ಮುಸ್ತಫಾ’(1973) ಕಥೆಯನ್ನು ಆಧರಿಸಿ, ಇದೇ ಹೆಸರಿನಲ್ಲಿ ಶಶಾಂಕ್ ಸೋಗಲ್ ನಿರ್ದೇಶಿಸಿರುವ ಈ ಸಿನಿಮಾ(2023), ಕೇವಲ ಒಂದು ನಾಸ್ಟಾಲ್ಜಿಕ್ ಶಾಲಾ-ಕಾಲೇಜು ಕಥೆಯಾಗಿ ಮಾತ್ರ ಉಳಿಯುವುದಿಲ್ಲ. ಬದಲಾಗಿ, ಇಂದಿನ ಭಾರತದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ತಲ್ಲಣಗಳಿಗೆ ಹಿಡಿದ ಕೈಗನ್ನಡಿಯಾಗಿ ರೂಪುಗೊಂಡಿದೆ. ಬುರ್ಖಾ, ಕೇಸರಿ ಶಾಲು, ಲವ್ ಜಿಹಾದ್, ಉಡುಗೆ-ತೊಡುಗೆ, ಆಹಾರ ಪದ್ಧತಿಗಳ ಸುತ್ತ ದ್ವೇಷದ ರಾಜಕಾರಣ ನಡೆಯುತ್ತಿರುವ, ಯುವಜನಾಂಗದ ಶೈಕ್ಷಣಿಕ ವ್ಯವಸ್ಥೆಗಳು ಕೋಮು ದ್ವೇಷದ ಪ್ರಯೋಗಶಾಲೆಗಳಾಗುತ್ತಿರುವ ಇಂದಿನ ದಿನಮಾನಗಳಲ್ಲಿ, ಮುಸ್ತಫಾನ ಕಥೆ ಒಂದು ಬಲವಾದ ಪ್ರತಿಕ್ರಿಯೆಯಾಗಿ ಮೂಡಿಬಂದಿದೆ. ಪ್ರಭುತ್ವದ ಮುಖವಾಣಿಯಾಗಿ ಮಾಧ್ಯಮಗಳು ಮತ್ತು ಕೆಲವೇ ಕೆಲವು ಪ್ರೊಪಗಾಂಡ ಸಿನಿಮಾಗಳು ಸಮಾಜವನ್ನು ವಿಭಜಿಸುತ್ತಿರುವ ಸಂದರ್ಭದಲ್ಲಿ, ‘ಡೇರ್ ಡೆವಿಲ್ ಮುಸ್ತಫಾ’ ಪ್ರೀತಿ, ಗೆಳೆತನ ಮತ್ತು ಸಹಬಾಳ್ವೆಯ ಕಥೆಯನ್ನು ಹೇಳುವ ಮೂಲಕ ತೇಜಸ್ವಿಯವರ ಆಶಯವನ್ನು ಆಧುನಿಕ ಸಂದರ್ಭಕ್ಕೆ ಬೆಸೆಯಲು ಪ್ರಯತ್ನಿಸುತ್ತದೆ. ಆದಾಗ್ಯೂ, ಈ ಸಿನಿಮಾವನ್ನು ಕೇವಲ ಭಾವುಕತೆಯಿಂದ ಅಪ್ಪಿಕೊಳ್ಳದೆ, ಒಬ್ಬ ಸಮಚಿತ್ತದ ಪ್ರೇಕ್ಷಕನಾಗಿ ಇದರ ಒಳನೋಟಗಳನ್ನು ಹಾಗೂ ಇತಿಮಿತಿಗಳನ್ನು ವಿಶ್ಲೇಷಿಸುವುದು ಇಂದಿನ ತುರ್ತಾಗಿದೆ.
ಸಿನಿಮಾದ ಹಿನ್ನೆಲೆ ಅಬಚೂರು ಎಂಬ ಕಾಲ್ಪನಿಕ ಊರಾದರೂ, ಅದು ಇಂದಿನ ಕರ್ನಾಟಕದ ಅಥವಾ ಭಾರತದ ಯಾವುದೇ ಕಾಲೇಜಿನ ಕ್ಯಾಂಪಸ್ ಆಗಿರಬಹುದು. ಹಿಜಾಬ್, ಬುರ್ಖಾ ಮತ್ತು ಕೇಸರಿ ಶಾಲುಗಳ ವಿವಾದದಲ್ಲಿ ಕಾಲೇಜುಗಳು ತಮ್ಮ ಮೂಲ ಶೈಕ್ಷಣಿಕ ಉದ್ದೇಶವನ್ನು ಕಳೆದುಕೊಂಡು ವಿಭಜನೆಯ ಅಖಾಡಗಳಾಗಿದ್ದನ್ನು ನಾವೆಲ್ಲ ಇತ್ತೀಚೆಗಷ್ಟೇ ನೋಡಿದ್ದೇವೆ. ಕೇಸರಿ ಶಾಲಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ! ಮುಸ್ತಫಾ ಇಡೀ ಕಾಲೇಜಿಗೆ ಏಕೈಕ ಮುಸ್ಲಿಂ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಾಗ, ಅವನ ಟೋಪಿ(ತೊಡುಗೆ) ಮತ್ತು ಅವನ ಮನೆಯ ಆಹಾರ ಪದ್ಧತಿಗಳು ಸಹಪಾಠಿಗಳಲ್ಲಿ ಹುಟ್ಟುಹಾಕುವ ಅಪನಂಬಿಕೆಗಳು ಕೇವಲ ಕಾಲ್ಪನಿಕವಲ್ಲ, ಅವು ಇಂದಿನ ಯುವಜನಾಂಗದ ತಲೆಗೆ ವ್ಯವಸ್ಥಿತವಾಗಿ ತುಂಬಲಾಗುತ್ತಿರುವ ದ್ವೇಷದ ನೇರ ಪ್ರತಿಫಲನಗಳು. ಮುಸ್ತಫಾನನ್ನು ‘ಬೇರೆ ಲೋಕದಿಂದ ಬಂದವನಂತೆ’ ನೋಡುವ, ಅವನೆಂದರೆ ಭಯಪಡುವ ವಿದ್ಯಾರ್ಥಿಗಳ ಕಣ್ಣೋಟ, ನಮ್ಮ ಇಂದಿನ ಶೈಕ್ಷಣಿಕ ವ್ಯವಸ್ಥೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಬದಲು ಕೋಮು ಪೂರ್ವಾಗ್ರಹಗಳನ್ನು ಹೇಗೆ ಪೋಷಿಸುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಧ್ವನಿಸುತ್ತದೆ. ಕಾಲೇಜಿನ ಪ್ರಾಧ್ಯಾಪಕರುಗಳು(ಉದಾಹರಣೆಗೆ ಚರಿತ್ರೆ ಮತ್ತು ಕನ್ನಡದ ಮೇಷ್ಟ್ರುಗಳು) ಕೂಡ ತಮ್ಮ ಸಂಕುಚಿತ ಮನಸ್ಥಿತಿಯಿಂದ ಹೊರಬರದಿರುವುದು ಮತ್ತು ಮುಸ್ತಫಾನನ್ನು ಶಂಕೆಯಿಂದಲೇ ನೋಡುವುದು, ಆಳುವ ವ್ಯವಸ್ಥೆಯ ಮೂಲಭೂತ ವೈಫಲ್ಯವನ್ನು ಎತ್ತಿತೋರಿಸುತ್ತದೆ.
ಸಿನಿಮಾದಲ್ಲಿ ‘ರಮಾಮಣಿ’ ಪಾತ್ರದ ಮೂಲಕ ಬರುವ ಪ್ರೇಮದ ಎಳೆಯ ಸುತ್ತ ಹೆಣೆಯಲಾದ ದೃಶ್ಯಗಳು, ಇಂದಿನ ‘ಲವ್ ಜಿಹಾದ್’ ಭೀತಿಯನ್ನು ಬಹು ಮಾರ್ಮಿಕವಾಗಿ ಅಣಕಿಸುವಂತಿವೆ. ಮುಸ್ತಫಾ ಆಕೆಯನ್ನು ಮಾತನಾಡಿಸಿದರೂ, ಕೇವಲ ಅವಳ ಕಡೆ ನೋಡಿದರೂ ಇತರೆ ಹಿಂದೂ ವಿದ್ಯಾರ್ಥಿಗಳಲ್ಲಿ(ವಿಶೇಷವಾಗಿ ರಾಮಾನುಜ ಅಯ್ಯಂಗಾರಿ ಮತ್ತು ತಂಡದಲ್ಲಿ) ಉಂಟಾಗುವ ಅಭದ್ರತೆ, ಇಂದಿನ ಸಮಾಜದಲ್ಲಿ ಅನ್ಯ ಧರ್ಮದ ಯುವಕನೊಬ್ಬ ಹಿಂದೂ ಯುವತಿಯೊಂದಿಗೆ ಗೆಳೆತನ ಬೆಳೆಸಿದರೆ ಹುಟ್ಟಿಕೊಳ್ಳುವ ಪ್ಯಾರನೋಯಾ(ಭಯ ಮತ್ತು ಅನುಮಾನ)ದ ನಿಖರ ಚಿತ್ರಣವಾಗಿದೆ. ಗೆಳೆತನ ಎಂಬುದು ಅತ್ಯಂತ ಸಹಜವಾಗಿ ಮತ್ತು ಮುಗ್ಧವಾಗಿ ಮೂಡಬೇಕಾದ ವಯಸ್ಸಿನಲ್ಲಿ, ಜಾತಿ ಮತ್ತು ಧರ್ಮದ ಗೋಡೆಗಳು ಯುವಜನರನ್ನು ಹೇಗೆ ಕಟ್ಟಿಹಾಕಿವೆ, ಹಾಗೂ ಕಾಲೇಜು ಚುನಾವಣೆ-ರಾಜಕೀಯಗಳೆಂಬುದು ಹೇಗೆ ಈ ಭೇದಭಾವಗಳನ್ನೇ ಬಂಡವಾಳ ಮಾಡಿಕೊಳ್ಳುತ್ತವೆ ಎಂಬುದನ್ನು ನಿರ್ದೇಶಕರು ಬಹಳ ದೃಶ್ಯರೂಪಕಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಮುಸ್ತಫಾ, ತನ್ನ ಮೇಲಿನ ಎಲ್ಲ ಆರೋಪಗಳನ್ನು, ದೈಹಿಕ ಹಲ್ಲೆಗಳನ್ನು ಎದುರಿಸಿಯೂ, ಕ್ರೀಡೆಯ(ಕ್ರಿಕೆಟ್) ಮೂಲಕ ಮತ್ತು ತನ್ನ ಪ್ರಬುದ್ಧತೆಯ ಮೂಲಕ ಆ ಗೋಡೆಗಳನ್ನು ಒಡೆಯಲು ಯತ್ನಿಸುವುದು ಸಿನಿಮಾದ ಅತ್ಯಂತ ಪ್ರಬಲ ಹಾಗೂ ಧನಾತ್ಮಕ ಅಂಶ. ಕ್ರೀಡೆ ಎಂಬುದು ಇಲ್ಲಿ ಕೇವಲ ಆಟವಾಗಿ ಉಳಿಯದೆ, ಧರ್ಮಗಳನ್ನು ಮೀರಿ ಮನುಷ್ಯರನ್ನು ಬೆಸೆಯುವ ಸಮಾನತೆಯ ಅಸ್ತ್ರವಾಗಿ ಬಳಕೆಯಾಗಿದೆ.

ಆದರೆ, ಕೇವಲ ಇದೇ ಕಾರಣಕ್ಕೆ ಸಿನಿಮಾವನ್ನು ಸರ್ವಾಂಗೀಣವಾಗಿ ದೋಷಮುಕ್ತ ಎನ್ನಲಾಗುವುದಿಲ್ಲ. ಸಿನಿಮಾದಲ್ಲಿ ಕೆಲವು ನೇತ್ಯಾತ್ಮಕ ಅಥವಾ ಮಿತಿಯ ಅಂಶಗಳೂ ಪ್ರೇಕ್ಷಕನಿಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಮೊದಲನೆಯದಾಗಿ, ಮುಸ್ತಫಾನ ಪಾತ್ರವನ್ನು ಅತಿಯಾದ ಆದರ್ಶೀಕರಣಕ್ಕೆ(Idealization) ಒಳಪಡಿಸಲಾಗಿದೆ. ಅವನು ತಪ್ಪುಗಳೇ ಮಾಡದ, ಎಲ್ಲ ನೋವುಗಳನ್ನು ನುಂಗಿಕೊಂಡು ತ್ಯಾಗಮಯಿಯಾಗಿ ನಿಲ್ಲುವ ‘ಪರ್ಫೆಕ್ಟ್’ ಮನುಷ್ಯನಾಗಿ ಬಿಡುತ್ತಾನೆ. ಇಂದಿನ ರಾಜಕೀಯ ತಲ್ಲಣಗಳಿಗೆ ಉತ್ತರಿಸುವ ಭರದಲ್ಲಿ, ಅವನಲ್ಲಿನ ಸಹಜ ಮನುಷ್ಯ ಸುಲಭದ ಕೋಪ, ಹತಾಶೆ, ದೌರ್ಬಲ್ಯಗಳನ್ನು ನಿರ್ದೇಶಕರು ಅಷ್ಟಾಗಿ ತೆರೆದಿಡುವುದಿಲ್ಲ. ಎಲ್ಲರನ್ನು ಕ್ಷಮಿಸುವ ಬುದ್ಧನ ಸ್ಥಾನಕ್ಕೆ ಅವನನ್ನು ಏರಿಸಲಾಗಿದೆ. ಎರಡನೆಯದಾಗಿ, ಅಲ್ಪಸಂಖ್ಯಾತ ಸಮುದಾಯದವರು ಸಮಾಜದ ಮುಖ್ಯವಾಹಿನಿಯಲ್ಲಿ ಒಪ್ಪಿಗೆ(Acceptance) ಪಡೆಯಬೇಕಾದರೆ, ಅವರು ತಮ್ಮನ್ನು ತಾವು ನಿರಂತರವಾಗಿ ‘ಒಳ್ಳೆಯವರು’ ಎಂದು ಸಾಬೀತುಪಡಿಸುತ್ತಲೇ ಇರಬೇಕು, ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸುತ್ತಲೇ ಇರಬೇಕು, ಅಥವಾ ಅಸಾಧಾರಣ ಪ್ರತಿಭೆಯನ್ನು(ಬೆಂಕಿಗೆ ಬೆದರಿ ರೌದ್ರಾವತಾರ ತಾಳಿದ ಗೂಳಿ ಹಿಡಿಯಬೇಕು, ಕ್ರಿಕೆಟ್, ಮ್ಯಾಜಿಕ್ ಇತ್ಯಾದಿ) ಹೊಂದಿರಲೇಬೇಕು ಎಂಬ ಒಂದು ಅಪಾಯಕಾರಿ ಮತ್ತು ಅಲಿಖಿತ ಸ್ಟೀರಿಯೋಟೈಪ್ ಅನ್ನು ಈ ಸಿನಿಮಾ ಪರೋಕ್ಷವಾಗಿ ಪೋಷಿಸುವಂತಿದೆ. ಒಬ್ಬ ಸಾಮಾನ್ಯ ಮುಸ್ಲಿಂ ಯುವಕನಿಗೆ ಕೇವಲ ‘ಸಾಮಾನ್ಯ ಮನುಷ್ಯ’ನಾಗಿ ಬದುಕುವ ಅವಕಾಶವೇಕಿಲ್ಲ? ಅವನು ಹೀರೋ ಆಗಿಯೇ ಏಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ನೈತಿಕ ಪ್ರಶ್ನೆ ವಿಮರ್ಶಕನ ಕಣ್ಣಿಗೆ ಕಾಡದೇ ಇರದು.
ಇಂದಿನ ಕಾಲಘಟ್ಟದಲ್ಲಿ ಆಳುವ ಪ್ರಭುತ್ವದ ಮುಖವಾಣಿಯಾಗಿ ಮಾಧ್ಯಮಗಳು ದ್ವೇಷವನ್ನು ಬಿತ್ತುತ್ತಿರುವಾಗ, ಪ್ರೊಪಗಾಂಡಾ ಸಿನಿಮಾಗಳು ಒಂದು ನಿರ್ದಿಷ್ಟ ಸಮುದಾಯವನ್ನು ಖಳನಾಯಕರನ್ನಾಗಿ ಪ್ರಮೋಟ್ ಮಾಡುವ ಸಂದರ್ಭದಲ್ಲಿ, ಡೇರ್ ಡೆವಿಲ್ ಮುಸ್ತಫಾ ಒಂದು ಕೌಂಟರ್-ನ್ಯಾರೇಟಿವ್(ಪ್ರತಿಯೋಜನೆ) ಕಟ್ಟಿಕೊಡಲು ಮಾಡುವ ಪ್ರಯತ್ನ ಶ್ಲಾಘನೀಯ. ಆದರೂ, ಸಿನಿಮಾ ತನ್ನ ದೃಶ್ಯಭಾಷೆಯಲ್ಲಿ ಕೆಲವು ಕಡೆ ಅತಿಯಾದ ನಾಟಕೀಯತೆಗೆ ಜಾರುತ್ತದೆ. ಕಮರ್ಷಿಯಲ್ ಚೌಕಟ್ಟಿಗೆ ಹೊಂದಿಕೊಳ್ಳಲು ಕಾಮಿಡಿ ಟ್ರ್ಯಾಕ್ ಗಳನ್ನು ತುರುಕುವ ಭರದಲ್ಲಿ, ಕೋಮು ದ್ವೇಷದಂತಹ ಅತ್ಯಂತ ಗಂಭೀರ ಹಾಗೂ ಸೂಕ್ಷ್ಮ ವಿಷಯದ ತೀವ್ರತೆಯನ್ನು ಕೆಲವೊಮ್ಮೆ ಹಗುರಗೊಳಿಸಿದಂತೆ ಭಾಸವಾಗುತ್ತದೆ. ಎಲ್ಲವೂ ಸುಖಾಂತ್ಯವಾಯಿತೆನ್ನುವಷ್ಟರಲ್ಲಿ ಮುಸ್ತಫಾನನ್ನು ಊರು ಬಿಟ್ಟು ಹೋಗುವಂತೆ ಮಾಡುವ ಕ್ಲೈಮ್ಯಾಕ್ಸ್, ವಾಸ್ತವದ ಕಟು ಸತ್ಯವನ್ನು ಹೇಳುತ್ತದೆಯಾದರೂ, ಅದು ಒಂದು ರೀತಿಯ ಪಲಾಯನವಾದದಂತೆ ಕಾಣುತ್ತದೆ. ಸಮಸ್ಯೆಗಳನ್ನು ಎದುರಿಸಿ ನಿಲ್ಲುವ ಬದಲು, ಜಾಗ ಖಾಲಿ ಮಾಡುವುದೇ ಅಂತಿಮ ಪರಿಹಾರವೇ ಎಂಬ ಹತಾಶೆಯ ಪ್ರಶ್ನೆಯನ್ನು ಪ್ರೇಕ್ಷಕನ ಮಡಿಲಿಗೆ ಹಾಕಿ ಚಿತ್ರ ಜಾರಿಕೊಳ್ಳುತ್ತದೆ.
‘ಡೇರ್ ಡೆವಿಲ್ ಮುಸ್ತಫಾ’ ಕೇವಲ ಒಂದು ಕಥೆಯಾಗಿರದೆ, ಇಂದಿನ ಕಲುಷಿತ ರಾಜಕೀಯ, ಧಾರ್ಮಿಕ ಅಸಹಿಷ್ಣುತೆ, ಉಡುಗೆ-ಆಹಾರದ ಮೇಲಿನ ಫ್ಯಾಸಿಸ್ಟ್ ನಿಯಂತ್ರಣಗಳು ಮತ್ತು ಯುವ ಮನಸ್ಸುಗಳಲ್ಲಿ ಬಿತ್ತಲಾಗುತ್ತಿರುವ ದ್ವೇಷದ ಹಿನ್ನೆಲೆಯಲ್ಲಿ ನೋಡಲೇಬೇಕಾದ ಮಹತ್ವದ ಚಿತ್ರವಾಗಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ರಾಷ್ಟ್ರಕವಿಯ ಆಶಯವನ್ನು ಕ್ಲೈಮ್ಯಾಕ್ಸ್ನಲ್ಲಿ ಹಾಡಾಗಿ ಬಳಸಿಕೊಳ್ಳುವ ಮೂಲಕ ಪೂರ್ಣಚಂದ್ರ ತೇಜಸ್ವಿಯವರ ಮಾನವತಾವಾದಿ ದೃಷ್ಟಿಕೋನವನ್ನು ಇಂದಿನ ಪೀಳಿಗೆಗೆ ದಾಟಿಸುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಇದು ಬಲಪಂಥೀಯ ಅತಿರೇಕಗಳಿಗೆ, ವ್ಯವಸ್ಥಿತ ದ್ವೇಷದ ಕಾರ್ಖಾನೆಗಳಿಗೆ ತನ್ನದೇ ಆದ ರೀತಿಯಲ್ಲಿ ಒಂದು ಕಲಾತ್ಮಕ ಎಚ್ಚರಿಕೆಯನ್ನು ನೀಡುತ್ತದೆ. ಆದರೆ, ಈ ಸಿನಿಮಾ ತನ್ನ ಕಥಾನಾಯಕನನ್ನು ಒಬ್ಬ ಸಹಜ ಮನುಷ್ಯನನ್ನಾಗಿ ಕಟ್ಟಿಕೊಡುವ ಬದಲು ಆದರ್ಶದ ಪ್ರತಿಮೆಯನ್ನಾಗಿ ಮಾಡಿದ್ದು, ಅಲ್ಪಸಂಖ್ಯಾತರು ಸಮಾಜದಲ್ಲಿ ಒಪ್ಪಿಗೆ ಪಡೆಯಲು ಸದಾ ಅಗ್ನಿಪರೀಕ್ಷೆ ಎದುರಿಸಬೇಕೆಂಬ ಒಳಧ್ವನಿಯನ್ನು ಹೊಂದಿರುವುದು ವಿಮರ್ಶಾತ್ಮಕವಾಗಿ ಚರ್ಚೆಯಾಗಬೇಕಾದ ಸಂಗತಿಯಾಗಿದೆ. ಬುರ್ಖಾ, ಕೇಸರಿ ಶಾಲುಗಳಾಚೆಗೆ ಮನುಷ್ಯನನ್ನು ಕೇವಲ ಮನುಷ್ಯನಾಗಿ ನೋಡುವ ಕನಸನ್ನು ಈ ಸಿನಿಮಾ ಬಿತ್ತುತ್ತದೆಯಾದರೂ, ಆ ಶಾಂತಿಯ ತೋಟದಲ್ಲಿ ಬೆಳೆದಿರುವ ದ್ವೇಷದ ಕಳೆ ಕೀಳುವ ಜವಾಬ್ದಾರಿಯನ್ನು ಕೇವಲ ವ್ಯವಸ್ಥೆಗೆ ಬಲಿಯಾಗುವವರ ತಲೆಗೇ ಕಟ್ಟಬಾರದು ಎಂಬ ಎಚ್ಚರವನ್ನು ಪ್ರತಿಯೊಬ್ಬ ಪ್ರೇಕ್ಷಕನೂ ಹೊಂದಬೇಕಾಗಿದೆ. ಇಂದಿನ ಕರಾಳ ವಾಸ್ತವದ ನಡುವೆಯೂ ಒಲವಿನ ಆಶಾವಾದವನ್ನು ಮೂಡಿಸುವ ಈ ಚಿತ್ರ ಭಾರತದ ಪ್ರಸ್ತುತ ತಲ್ಲಣಗಳಿಗೆ ಒಂದು ಗಟ್ಟಿ ಮತ್ತು ಸಂಕೀರ್ಣ ಪ್ರತಿಕ್ರಿಯೆಯಾಗಿದೆ.
ಡಾ. ರವಿ ಎಂ ಸಿದ್ಲಿಪುರ
ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಇವರು ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಹಿಜಾಬ್ ನಿಷೇಧ ಅಮಾನ್ಯ; ಶಿಕ್ಷಣದಲ್ಲಿಲ್ಲ ಮತಾಂಧತೆಗೆ ಮೌಲ್ಯ


