ಹಿಜಾಬ್ ನಿಷೇಧ ಅಮಾನ್ಯ; ಶಿಕ್ಷಣದಲ್ಲಿಲ್ಲ ಮತಾಂಧತೆಗೆ ಮೌಲ್ಯ

ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರಕಾರ 2026, ಮೇ 13 ರಂದು ಶಾಲೆ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಕುರಿತಾದ 2022 ರ ಬಿಜೆಪಿ ಸರಕಾರದ ಆದೇಶವನ್ನು ಹಿಂಪಡೆಯಿತು. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದೊಂದಿಗೆ ಮಿತವಾದ ಸಾಂಪ್ರದಾಯಿಕ ಚಿಹ್ನೆಗಳಾದ ಹಿಜಾಬ್, ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟ ಇತ್ಯಾದಿಗಳನ್ನು ವಿದ್ಯಾರ್ಥಿಗಳ ಧರ್ಮಾಚರಣೆಗೆ ತಕ್ಕಂತೆ ಧರಿಸಲು ಅನುಮತಿ ನೀಡಲಾಯ್ತು. ಜೊತೆಗೆ ಮಖ ಕಾಣಿಸುವಂತಿರಬೇಕು ಹಾಗೂ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಶರತ್ತುಗಳನ್ನೂ ಹಾಕಲಾಯ್ತು.

ಈ ಪರಿಷ್ಕೃತ ಆದೇಶಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸತೊಡಗಿದವು. “ಇದು ಮುಸ್ಲಿಂ ಸಮಾಜದ ಓಲೈಕೆ, ಹಾಗೂ ಹಿಜಾಬಿಗೆ ಅನುಮತಿ ನೀಡಿದರೆ ಕೇಸರಿ ಶಾಲಿಗೂ ಅವಕಾಶ ಕೊಡಬೇಕು” ಎಂದು ಆಗ್ರಹಿಸತೊಡಗಿದವು.

ಹಿಜಾಬ್ ವಿವಾದದ ಹಿನ್ನೆಲೆ

2022 ರಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಅಂಗಗಳು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ಶಿರವಸ್ತ್ರವಾಗಿ ಧರಿಸುವ ಸಾಂಪ್ರದಾಯಿಕ ಹಿಜಾಬಿಗೆ ತಕರಾರು ಎತ್ತಿದರು. ಕಾಲೇಜಿನಲ್ಲಿ ಹಿಜಾಬಿಗೆ ಅನುಮತಿ ಕೊಟ್ಟರೆ ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಕೊಳ್ಳಲು ಅನುಮತಿ ಕೊಡಬೇಕು ಎಂದು ಹಠ ಹಿಡಿದು ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲನ್ನು ವಿತರಿಸಿ ಕಾಲೇಜಿಗೆ ಕಳುಹಿಸಿದರು. ಉಡುಪಿಯ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಹಾಗೂ ಇತರ ಬಿಜೆಪಿ ಮುಖಂಡರು ಹಿಜಾಬ್ ವಿರೋಧಿ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡು ಹಿಂದು ವಿದ್ಯಾರ್ಥಿಗಳನ್ನು ಮುಸ್ಲಿಂ ವಿರುದ್ದ ಪ್ರಚೋದಿಸಿದರು ಹಾಗೂ ಬೇರೆ ಕಾಲೇಜ್‌ ಗಳಿಗೂ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ವಿಸ್ತರಿಸಿದರು. ಯಾವಾಗ ಈ ಕೇಸರಿ ಪಡೆಯ ರಾಜಕಾರಣ ಕಾಲೇಜಿನೊಳಗೆ ತಮ್ಮ ಧರ್ಮದ್ವೇಷದ ಕಾರ್ಯಾಚರಣೆಯನ್ನು ಆರಂಭಿಸಿತೋ ಆಗ ವಿವಾದ ತಾರಕಕ್ಕೇರಿತು. 2023 ರಲ್ಲಿ ರಾಜ್ಯದಲ್ಲಿ ಚುನಾವಣೆಗಳು ಇರುವುದರಿಂದ ಕಾಲೇಜಿನ ಮೂಲಕ ತಮ್ಮ ಕೋಮು ವಿಭಜಕ ಹಿಂದೂ ಧ್ರುವೀಕರಣ ರಾಜಕಾರಣವನ್ನು ಬಿಜೆಪಿ ಚಲಾವಣೆಗೆ ತಂದಿತು. ಆಗ ಅವರದೇ ಬಿಜೆಪಿ ಸರಕಾರ ಇದ್ದಿದ್ದರಿಂದ 2022 ಫೆ.5 ರಂದು ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಅಡಿಯಲ್ಲಿ “ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಉಡುಪುಗಳನ್ನು ನಿಷೇಧಿಸಿ ಆದೇಶ ಹೊರಡಿಸಿತು. ಅದಕ್ಕೆ ಸಮಾನತೆ ಮತ್ತು ಶಿಕ್ಷಣದ ವಾತಾವರಣ ಎಂದು ಸಮರ್ಥನೆ ಕೊಡಲಾಯ್ತು. ಹೇಗೂ ಮೊದಲಿನಿಂದಲೂ ಯಾವತ್ತೂ ಕೇಸರಿ ವಸ್ತ್ರ ಹಾಕಿಕೊಂಡು ಶಾಲೆ ಕಾಲೇಜಿಗೆ ಬರುವ ಸಂಪ್ರದಾಯ ಇಲ್ಲದೇ ಇದ್ದುದರಿಂದ, ಹಿಜಾಬ್ ಬ್ಯಾನ್ ಮಾಡಲು ಮಾತ್ರ ಕೇಸರಿ ವಸ್ತ್ರ ಅಸ್ತ್ರವಾಗಿ ಬಳಕೆಯಾಗಿದ್ದರಿಂದ, ಹಿಜಾಬ್ ಬ್ಯಾನ್ ಮಾಡುವ ಮೂಲಕ ಬಿಜೆಪಿ ತನ್ನ ಮುಸ್ಲಿಂ ದ್ವೇಷ ಸಾಧನೆಯ ಹಾಗೂ ಹಿಂದೂ ಓಲೈಕೆ ರಾಜಕಾರಣದಲ್ಲಿ ಯಶಸ್ವಿಯಾಯ್ತು.

ಆದರೆ ಬಿಜೆಪಿಯ ಧರ್ಮರಾಜಕಾರಣದಿಂದ ನೂರಾರು ಸಂಪ್ರದಾಯವಾದಿ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜನ್ನೇ ತೊರೆದರು. ಈ  ಹಾಳು ವಿಭಜಕ ರಾಜಕಾರಣದಿಂದಾಗಿ ಅವರ ಶೈಕ್ಷಣಿಕ ಭವಿಷ್ಯವೇ ಅಂತ್ಯವಾಯ್ತು. ಮೊದಲೇ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣದ ಕೊರತೆ ಇದೆ. ಕಲಿಯುವ ಆಸೆಯಿಂದ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರ ಕಲಿಕೆಯ ಬಯಕೆಯನ್ನೂ ಈ ಧರ್ಮರಾಜಕಾರಣ ಬಲಿ ತೆಗೆದುಕೊಂಡಿತು.

ಕೋರ್ಟಿನಲ್ಲಿ ಹಿಜಾಬ್ ವಿವಾದ ವಿಚಾರಣೆ

ಕೆಲವು ಮುಸ್ಲಿಂ ಸಮುದಾಯದವರು ಹೈಕೋರ್ಟಿಗೆ ಮನವಿ ಮಾಡಿಕೊಂಡರು. ಹಿಜಾಬ್ ಧರಿಸಿ ಶಾಲೆ ಕಾಲೇಜಿಗೆ ಹೋಗಲು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು. ವಿಚಾರಣೆ ನಡೆಸಿದ ಕರ್ನಾಟಕದ ಹೈಕೋರ್ಟ್ ” ಹಿಜಾಬ್ ಇಸ್ಲಾಮಿನ ಅನಿವಾರ್ಯ ಧಾರ್ಮಿಕ ಆಚರಣೆಯಲ್ಲ” (Not  Essential religious practices ERP) ಎಂದು ತೀರ್ಪಿತ್ತು ಸರಕಾರದ ಹಿಜಾಬ್ ನಿಷೇಧ ನಿರ್ಣಯವನ್ನು ಎತ್ತಿಹಿಡಿಯಿತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಯ್ತು.

ಸುಪ್ರಿಂ ಕೋರ್ಟಿನ ದ್ವಿಸದಸ್ಯ ಪೀಠ 2022 ಅಕ್ಟೋಬರ್ 13 ರಲ್ಲಿ ವೈರುಧ್ಯದ ತೀರ್ಪಿತ್ತಿತು.

ನ್ಯಾಯಮೂರ್ತಿ ಹೇಮಂತ್ ಗುಪ್ತಾರವರು ಬಿಜೆಪಿ ಸರಕಾರದ ಹಿಜಾಬ್ ನಿಷೇಧಕ್ಕೆ ಬೆಂಬಲಿಸಿ ಈ ರೀತಿ ಆದೇಶಿಸಿದರು.

* ಹಿಜಾಬ್ ಇಸ್ಲಾಮಿನ ಅನಿವಾರ್ಯ ಧಾರ್ಮಿಕ ಆಚರಣೆಯಲ್ಲ.

* ಶಾಲಾ ಕಾಲೇಜುಗಳು ಧರ್ಮನಿರಪೇಕ್ಷ (Secular) ಸ್ಥಳಗಳು.

* ಇಲ್ಲಿ ಏಕರೂಪದ ಸಮವಸ್ತ್ರ ಏಕತೆ, ಸಮಾನತೆ, ಸಹೋದರತ್ವವನ್ನು ಉತ್ತೇಜಿಸುತ್ತದೆ.

* ವಿದ್ಯಾರ್ಥಿಗಳ ನಡುವೆ ಧಾರ್ಮಿಕ ಚಿಹ್ನೆಗಳು ಅಸಮಾನ ಭಾವ ಮೂಡಿಸುತ್ತವೆ.

* ರಾಜ್ಯ ಸರಕಾರಕ್ಕೆ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆ ಕಾಪಾಡುವ ಹಾಗೂ ಶಿಸ್ತು ಉಳಿಸುವ ಹಕ್ಕಿದೆ.

ಇನ್ನೊಬ್ಬರು ನ್ಯಾಯಾಧೀಶರಾದ ನ್ಯಾ.ಸುಧಾಂಶು ಧುಲಿಯಾರವರು ಹಿಜಾಬ್ ಬೆಂಬಲಿಸಿ ಈ ಕೆಳಗಿನಂತೆ ತೀರ್ಪು ನೀಡುತ್ತಾರೆ.

* ಹಿಜಾಬ್ ನಿಷೇಧದ ಕುರಿತ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಲಾಗುವುದು.

* ಹಿಜಾಬ್ ಧರಿಸುವುದು ವೈಯಕ್ತಿಕ ಆಯ್ಕೆ ಮತ್ತು ಸ್ವಾತಂತ್ರ್ಯ. ಇದು ಸಂವಿಧಾನದ ಆರ್ಟಿಕಲ್ 19 (1) (a) ಅಭಿವ್ಯಕ್ತಿ ಸ್ವಾತಂತ್ರ್ಯ, ಆರ್ಟಿಕಲ್ 21 ರ ಪ್ರೈವಸಿ ಮತ್ತು ಡಿಗ್ನಿಟಿ, ಆರ್ಟಿಕಲ್ 25 ರ ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಣೆ ಪಡೆಯುತ್ತದೆ.

* ಧರ್ಮ ನಿರಪೇಕ್ಷತೆ ಎಂದರೆ ಏಕರೂಪತೆ ( Uniformity) ಅಲ್ಲ. ಅದು ಬಹುತ್ವದ ಸಹಿಷ್ಣುತತೆ ( Tolerance to diversity).

* ಹಿಜಾಬ್ ನಿಷೇಧವು ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗೆ ಅಡ್ಡಿಯಾಗುತ್ತದೆ.

* ನ್ಯಾಯಾಲಯಗಳು ಧಾರ್ಮಿಕ ಆಚರಣೆಗಳನ್ನು ಅನಿವಾರ್ಯವೇ ಎಂದು ಪರೀಕ್ಷಿಸುವುದು ಸರಿಯಲ್ಲ. ವ್ಯಕ್ತಿಯ ಆಯ್ಕೆಗೆ ಗೌರವ ನೀಡಬೇಕು.

ಹೀಗೆ ಒಂದೇ ನ್ಯಾಯಪೀಠದ ಇಬ್ಬರು ನ್ಯಾಯಾಧೀಶರು ವಿಭಿನ್ನ ತೀರ್ಪನ್ನು ನೀಡಿದ್ದರಿಂದಾಗಿ ಹಿಜಾಬ್ ಕೇಸಿನ ವಿಚಾರಣೆ ಸುಪ್ರೀಂ ಕೋರ್ಟಿನ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ. ಇಲ್ಲಿಯವರೆಗೂ ವಿಚಾರಣೆ ಹಂತದಲ್ಲಿದ್ದು ಅಂತಿಮ ತೀರ್ಪು ಇನ್ನೂ ಬಂದಿಲ್ಲ.

ಈಗ ಮೇ 13 ರಂದು ಕಾಂಗ್ರೆಸ್ ನೇತೃತ್ವದ ಸರಕಾರವು 2022 ರಲ್ಲಿ ಬಿಜೆಪಿ ನೇತೃತ್ವದ ಸರಕಾರ ಹಿಜಾಬ್ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಶಾಲೆ ಕಾಲೇಜುಗಳಲ್ಲಿ ಸಮವಸ್ತ್ರದೊಂದಿಗೆ ಸಾಂಪ್ರದಾಯಿಕ ಸಂಕೇತಗಳಾದ ಹಿಜಾಬ್, ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟ ಇತ್ಯಾದಿಗಳನ್ನು ಧರಿಸಲು ಅನುಮತಿ ನೀಡಿದೆ. ( ಅದು ಸಮವಸ್ತ್ರದ ನಿಯಮದೊಳಗಿರಬೇಕು) ಈ ಪರಿಷ್ಕೃತ ಸರಕಾರಿ ಆದೇಶ ಮತ್ತೆ ಹಿಜಾಬ್ ವಿವಾದವನ್ನು ಮುನ್ನೆಲೆಗೆ ತಂದಿದೆ. ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿದೆ. ವಿರೋಧ ಪಕ್ಷದ ಬಿಜೆಪಿ ನಾಯಕರು ಸರಕಾರದ ಕ್ರಮಕ್ಕೆ ಹೀಗೆ ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

* “ಶಾಲೆಗಳು ಧರ್ಮನಿರಪೇಕ್ಷ ಸ್ಥಳಗಳು, ಸಮವಸ್ತ್ರದಿಂದ ಸಮಾನತೆ, ಏಕತೆ ಬರುತ್ತದೆ. ಹಿಜಾಬ್ ಧಾರ್ಮಿಕ ಆಚರಣೆ ಅಲ್ಲ”

* ಸಮವಸ್ತ್ರದ ಮೂಲ ಆಶಯ ಮಕ್ಕಳಲ್ಲಿ ಮೇಲು ಕೀಳು, ಜಾತಿ ಮತದ ಬೇಧ ಅಳಿಸಿ ಸಮಾನತಾ ಭಾವ ಮೂಡಿಸುವುದಾಗಿದೆ.

* ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ಮತಕ್ಷೇತ್ರದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಸ್ಪರ್ಧಿಸಲು ಅವಕಾಶ ನೀಡದೇ ಇದ್ದುದರಿಂದ ಆ ಸಮುದಾಯ ಮುನಿಸುಗೊಂಡಿದೆ. ಹೀಗಾಗಿ ಅವರನ್ನು ಓಲೈಸಲು ಹಿಜಾಬ್ ಪರ ನಿಲುವನ್ನು ಕಾಂಗ್ರೆಸ್ ಸರಕಾರ ತೆಗೆದುಕೊಂಡಿದೆ.

* ಸಿದ್ದರಾಮಯ್ಯನವರ ಸರಕಾರ ಶೈಕ್ಷಣಿಕ ಸಮಾನತೆಗಿಂತ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದೆ.

* ಮುಸ್ಲಿಂ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ, ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಲು ನಿರ್ಬಂಧಿಸಿರುವುದು ತುಘಲಕ್ ಆದೇಶ.

* ಹಿಜಾಬ್ ವಿವಾದ ಸುಪ್ರೀಂ ಕೋರ್ಟ್‌ ನಲ್ಲಿದ್ದು ಇನ್ನೂ ಅಂತಿಮ ತೀರ್ಮಾನ ಬಂದಿಲ್ಲ. ಅಷ್ಟರಲ್ಲಿ ಹಿಜಾಬ್ ನಿಷೇಧ ಹಿಂಪಡೆದದ್ದು ಕೋರ್ಟ್‌ ಗೆ ಮಾಡಿದ ಅಪಚಾರವಾಗಿದ್ದು ಇದು ನ್ಯಾಯಾಂಗ ನಿಂದನೆಯಾಗುತ್ತದೆ.

ಎನ್ನುವುದು ವಿರೋಧ ಪಕ್ಷದ ನಾಯಕರುಗಳ ಪ್ರತಿರೋಧದ ಮಾತುಗಳಾಗಿವೆ.

ಇದಕ್ಕೆ ಪ್ರತಿಯಾಗಿ ಆಳುವ ಕಾಂಗ್ರೆಸ್ ಪಕ್ಷದ ನೇತಾರರಾದ ಸಚಿವ ಪ್ರಿಯಾಂಕ ಖರ್ಗೆಯವರು ” ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡರೆ ಗೋರಕ್ಷಣೆ ಧರ್ಮರಕ್ಷಣೆ ಮಾಡಿದರೆ ಉದ್ಯೋಗ ಸಿಗುತ್ತದೆಯೇ? ಎಲ್ಲಾ ಧರ್ಮಗಳ ಆಚರಣೆಗೂ ಸಂವಿಧಾನ ಅವಕಾಶ ನೀಡಿದೆ” ಎನ್ನುತ್ತಾರೆ. “ಕೋಮುವಾದ ವಾತಾವರಣ ನಿರ್ಮಾಣ ಮಾಡುವುದೇ ಬಿಜೆಪಿ ಕಾರ್ಯಸೂಚಿಯಾಗಿದ್ದು ಆ ಪಕ್ಷದವರಿಗೆ ವಿದ್ಯಾರ್ಥಿಗಳ ಮೇಲೆ ಕಾಳಜಿ ಇದ್ದಿದ್ದರೆ ನೀಟ್ ಪರೀಕ್ಷೆ ನಿಲ್ಲಿಸಿದ್ದರ ವಿರುದ್ಧ, ಪ್ರಶ್ನೆಪತ್ರಿಕೆ ಲೀಕ್ ವಿರುದ್ಧ ಹೋರಾಟ ಮಾಡಲಿ, ಹಿಜಾಬ್ ಎಂದರೆ ಒಂದು ಸ್ಕಾರ್ಫ್ ಅಷ್ಟೇ ಅದಕ್ಕೆ ವಿಶೇಷ ಅರ್ಥ ಬೇಕಿಲ್ಲ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ರವರು  ಹೇಳುತ್ತಾರೆ. ವಿದ್ಯಾರ್ಥಿಗಳು ಜನಿವಾರ, ರುದ್ರಾಕ್ಷಿ, ಹಿಜಾಬ್ ಸೇರಿದಂತೆ ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು. ಕೇಸರಿ ಶಾಲಿಗೆ ಅವಕಾಶವಿಲ್ಲ” ಎಂದು ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯನವರು ಹೇಳಿದ್ದಾರೆ. “ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದಾಗ ಒಂದು ಸಮುದಾಯಕ್ಕೆ ನೋವಾಗುತ್ತದೆ, ಹಾಗೆಯೇ ಹಿಜಾಬ್ ತೆಗೆಸಿದಾಗ ಮತ್ತೊಂದು ಸಮುದಾಯಕ್ಕೆ ನೋವಾಗುತ್ತದೆ ಎಂಬುದನ್ನು ಬಿಜೆಪಿ ನಾಯಕರು ಯಾಕೆ ಯೋಚಿಸುವುದಿಲ್ಲ” ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಹೀಗಾಗಿ ಈ ಹಿಜಾಬ್ ವಿವಾದ ಧರ್ಮ, ರಾಜಕಾರಣ ಮತ್ತು ಶಿಕ್ಷಣದ ಸಂಕೀರ್ಣತೆಯನ್ನು ಪ್ರತಿಬಿಂಬಿಸುತ್ತದೆ. ಈ ವಿವಾದವನ್ನು ಯಾರು ಹುಟ್ಟುಹಾಕಿದರು, ಯಾಕೆ ಹುಟ್ಟುಹಾಕಿದರು ಎಂಬುದನ್ನು ಮೊದಲು ತಿಳಿಯಬೇಕಿದೆ.

ಉಡುಪಿಯ ಸರಕಾರಿ ಕಾಲೇಜಿನಲ್ಲಿ ಎಲ್ಲವೂ ಚೆನ್ನಾಗಿತ್ತು. ಹಿಜಾಬ್ ಹಾಕಿಕೊಂಡು ಬರಬಾರದು ಎಂದು ಆಡಳಿತ ಮಂಡಳಿ ಯಾವತ್ತೂ ಹೇಳಿರಲಿಲ್ಲ. ಮೊದಲಿನಿಂದಲೂ ಮುಸ್ಲಿಂ ವಿದ್ಯಾರ್ಥಿನಿಯರು ಶಿರವಸ್ತ್ರವಾದ ಹಿಜಾಬ್ ಧರಿಸಿಕೊಂಡೇ ಕಾಲೇಜಿಗೆ ಬರುತ್ತಿದ್ದರು. 2023 ರಲ್ಲಿ ವಿಧಾನಸಭೆಗೆ ಚುನಾವಣೆ ಆಗುತ್ತಿತ್ತು. ಬಿಜೆಪಿಯವರಿಗೆ ಕೋಮು ಭಾವನೆ ಕೆರಳಿಸುವಂತಹ ವಿಷಯವೊಂದು ಬೇಕಿತ್ತು. ಅವರ ಕಣ್ಣು ಉಡುಪಿಯ ಕಾಲೇಜಿನ ಮೇಲೆ ಬಿತ್ತು. ಅಲ್ಲಿರುವ ಹಿಂದೂ ವಿದ್ಯಾರ್ಥಿಗಳಲ್ಲಿ ಕೋಮು ವಿಷ ಬಿತ್ತಿ ಪ್ರಚೋದಿಸಲಾಯ್ತು. “ಮುಸಲ್ಮಾನರು ಹಿಜಾಬ್ ಧರಿಸಿದರೆ ನಾವು ಹಿಂದೂಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತೇವೆ” ಎಂದು ಗಲಾಟೆ ಎಬ್ಬಿಸಲಾಯ್ತು. ಸಂಘ ಪರಿವಾರದ ಹಿಂದೂ ಸಂಘಟನೆಯವರು ಕಾಲೇಜು ಆವರಣ ಪ್ರವೇಶಿಸಿ ಕೇಸರಿ ಶಾಲನ್ನು ಹಂಚಿ ದೊಡ್ಡ ಸೀನನ್ನೇ ಕ್ರಿಯೇಟ್ ಮಾಡಿದರು. ಬಿಜೆಪಿ ಶಾಸಕರೇ ಮುಂದೆ ನಿಂತು ಹಿಜಾಬ್ ವಿರುದ್ಧ ಪ್ರತಿಭಟನೆಯನ್ನು ಪ್ರಚೋದಿಸಿದರು. ಈ ಹಿಜಾಬ್ ವಿರೋಧಿ ಪ್ರಕರಣವನ್ನು ಬೇರೆ ಕಾಲೇಜುಗಳಿಗೂ ವಿಸ್ತರಿಸುವಂತೆ ಮಾಡಿದರು. ಪೊಲೀಸರು ಕಾಲೇಜು ಪ್ರವೇಶಿಸಿದರು. ಕಾಲೇಜಿನ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಮೇಲೆ ಒತ್ತಡ ಹೇರಲಾಯ್ತು. ಹಿಜಾಬ್ ಹಾಕಿ ಬಂದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿಷೇಧಿಸಲಾಯ್ತು. ಪರೀಕ್ಷೆ ಬರೆಯಲೂ ಅವಕಾಶ ಕೊಡಲಿಲ್ಲ. ಬಿಜೆಪಿ ಪಕ್ಷದ್ದೇ ಸರಕಾರ ಇದ್ದಿದ್ದರಿಂದ ಕೊನೆಗೆ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ನ್ನೇ ನಿರ್ಬಂಧಿಸಲಾಯ್ತು. ಇದರಿಂದ ನೂರಾರು ಮುಸ್ಲಿಂ ಯುವತಿಯರ ಶೈಕ್ಷಣಿಕ ಭವಿಷ್ಯ ಅಂತ್ಯವಾಯ್ತು. ಧಾರ್ಮಿಕ ಆಚರಣೆಯನ್ನು ಪಾಲಿಸುವ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಓದಲು ಕಳುಹಿಸಲಿಲ್ಲ. ಹೀಗಾಗಿ ಈ ಕೋಮುವಾದಿಗಳ ಧರ್ಮದ್ವೇಷ ಹಾಗೂ ಮತಾಂಧ ರಾಜಕೀಯದಿಂದ ನೂರಾರು ಮುಸ್ಲಿಂ ಹೆಣ್ಣುಮಕ್ಕಳು ಓದಿಗೆ ವಿಮುಖವಾಗಬೇಕಾಯ್ತು.

ಈಗ ಇರುವ ಕಾಂಗ್ರೆಸ್ ಸರಕಾರವು ಮುಸ್ಲಿಂ ಸಮುದಾಯವನ್ನು ಓಲೈಸಲು ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆದಿದೆ ಎಂದು ಆರೋಪಿಸುತ್ತಿದೆ. ಆದರೆ ಶಾಂತವಾಗಿದ್ದ ಕಾಲೇಜಿನ ಪರಿಸರದಲ್ಲಿ ಧಾರ್ಮಿಕ ಬೇಧ ಸೃಷ್ಟಿಸಿ ಹಿಂದೂ ಧ್ರುವೀಕರಣ ರಾಜಕೀಯ ಆರಂಭಿಸಿದ್ದು ಯಾರು? ಮುಸ್ಲಿಂ ವಿರೋಧದ ಮೂಲಕ ಹಿಂದೂಗಳನ್ನು ಪ್ರಚೋದಿಸಿದ್ದೂ ಹಿಂದೂ ಓಲೈಕೆಯ ತಂತ್ರ ಅಲ್ಲವೇ? ಹಿಂದಿನಿಂದಲೂ ಹಿಜಾಬ್‌ ಗೆ ಇಲ್ಲದಿದ್ದ ವಿರೋಧವನ್ನು ಸೃಷ್ಟಿಸಿ ಅದಕ್ಕೆ ವಿರುದ್ಧವಾಗಿ ಕೇಸರಿ ಶಾಲನ್ನು ಹುಟ್ಟಿಸಿದ್ದು ಯಾರು? ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟಿದೆ ಅಲ್ವಾ?. ಸಂಪ್ರದಾಯದಂತೆ ಅವರವರ ಧರ್ಮದ ಸಂಕೇತಗಳನ್ನು ಆಯಾ ಧರ್ಮದವರು ಅನುಕರಿಸುತ್ತಾರೆ. ಜನಿವಾರ, ಶಿವದಾರ, ಮಂಗಳಸೂತ್ರ, ಕುಂಕುಮ, ರುದ್ರಾಕ್ಷಿ, ವಿಭೂತಿ ನಾಮಗಳನ್ನು ಧರಿಸುತ್ತಾರೆ. ಇದಕ್ಕೆ ಬೇಡ ಎಂದವರು ಯಾರು? ಎಂದೂ ಇಲ್ಲದ ಕೇಸರಿ ಶಾಲು ಈಗ ಹಿಂದೂ ಸಂಕೇತವಾಗಿ ಬಂದಿದ್ಯಾಕೆ? ಇದೆಲ್ಲದರ ಹಿಂದೆ ಇರುವುದು ಬಿಜೆಪಿ ಪಕ್ಷದವರ ಇಸ್ಲಾಮೊಫೋಬಿಯಾ ಕಾಯಿಲೆ ಹಾಗೂ ಆಮೂಲಕ ಕೋಮು ಧ್ರುವೀಕರಣ ಪ್ರಯತ್ನ ಮಾತ್ರ.

ಶಾಲೆ ಕಾಲೇಜುಗಳಲ್ಲಿ ಸಮಾನತೆ ಏಕತೆಗೆ ಧಕ್ಕೆಯಾಗುತ್ತದೆ ಎಂದು ಹಿಜಾಬ್ ನಿಷೇಧಿಸಿದ ಬಿಜೆಪಿ ಸರಕಾರ ಜನಿವಾರಾದಿಯಾಗಿ ಹಿಂದೂ ಸಾಂಪ್ರದಾಯಿಕ ಸಂಕೇತಗಳ ಬಳಕೆಯನ್ನು ಯಾಕೆ ಸಂಪೂರ್ಣವಾಗಿ ನಿಷೇಧಿಸಲಿಲ್ಲ. ಇತ್ತೀಚೆಗೆ ಸಿಇಟಿ ಪರೀಕ್ಷೆಯಲ್ಲಿ ಒಂದೆರಡು ಕಾಲೇಜುಗಳಲ್ಲಿ ಒಬ್ಬಿಬ್ಬರು ವಿದ್ಯಾರ್ಥಿಗಳ ಜನಿವಾರ ಬಿಚ್ಚಿಸಿದ್ದಕ್ಕೆ ಇದೇ ಬಿಜೆಪಿಗರು ಹಿಂದೂಗಳಿಗೆ ಅಪಮಾನ ಎಂದು ಹುಯಿಲೆಬ್ಬಿಸಿ ರಾಜ್ಯ ಸರಕಾರವನ್ನು ಟೀಕಿಸಿದರಲ್ಲಾ,  ಒಂದು ವಾರದ ನಂತರ ಕೇಂದ್ರ ಸರಕಾರದ ರೈಲ್ವೇ ಇಲಾಖೆಯ ನೇಮಕಾತಿ ಪರೀಕ್ಷೆಯ ಹಾಲ್ ಟಿಕೇಟಿನಲ್ಲೇ ಜನಿವಾರ ನಿಷೇಧಿಸಿದ್ದು ತಿಳಿದೂ ಯಾಕೆ ಪ್ರತಿಭಟಿಸಲಿಲ್ಲ?. ಮೋದಿ ಹಿಂದೂ ವಿರೋಧಿ ಎಂದು ಸರಕಾರವನ್ನು ಟೀಕಿಸಲಿಲ್ಲ?.

ಈಗಲಾದರೂ ಎಚ್ಚೆತ್ತ ಕರ್ನಾಟಕ ಸರಕಾರ ಶೈಕ್ಷಣಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧವನ್ನು ತೆಗೆದು ಹಾಕಿದೆ. ಅವರವರ ಆಚರಣೆಗೆ ಸಂಬಂಧಿಸಿದಂತೆ ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು ಎಂದೂ ಆದೇಶಿಸಿದೆ. ಆದರೆ ಕೇಸರಿ ಶಾಲಿಗೆ ಅನುಮತಿ ನಿರಾಕರಿಸಿದೆ. ಯಾಕೆಂದರೆ ಅದು ಈ ಹಿಂದೆ ಎಂದೂ ಧಾರ್ಮಿಕ ಸಂಕೇತ ಆಗಿರಲಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮಾನ್ಯ ಸುಧಾಂಶುರವರು ಆದೇಶಿಸಿದಂತೆ ಭಾರತದ ಸಂವಿಧಾನದ ಆರ್ಟಿಕಲ್ 19(1), 21 ಹಾಗೂ 25 ಪ್ರಕಾರ ಹಿಜಾಬ್ ಧಾರಣೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಾಗಿದೆ. ಅದನ್ನೇ ಜಾರಿಗೆ ತರಲು ಕಾಂಗ್ರೆಸ್ ಸರಕಾರ ದಿಟ್ಟವಾದ ಹೆಜ್ಜೆ ಇಟ್ಟಿದೆ.

ಈ ಆದೇಶವನ್ನು 2024 ರಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣವೇ ಮಾಡಬೇಕಾಗಿತ್ತು. ಮಾಡಲಿಲ್ಲ. ಈಗಲಾದರೂ ಮಾಡಿದರಲ್ಲಾ ಎನ್ನುವ ಸಮಾಧಾನ.  ಆಗ ಮಾಡಿದ್ದರೂ ಈ ಕೇಸರಿಗರು ಇಸ್ಲಾಂ ತುಷ್ಟೀಕರಣ ಎಂದು ಬೊಬ್ಬೆ ಹೊಡೀತಿದ್ದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ.

ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಈ ತೋಟದಲ್ಲಿ ಕೇವಲ ಕೇಸರಿ ಹೂಗಳಷ್ಟೇ ಅರಳಬೇಕೆಂಬುದು ಮತಾಂಧ ಮನುವಾದಿಗಳ ಉದ್ದೇಶ. ತರಾವರಿ ಬಣ್ಣ ಬಣ್ಣದ ಹೂಗಳು ಅರಳಿದರೇ ತೋಟಕ್ಕೊಂದು ದಿವ್ಯ ಕಳೆ. ಅದೇ ರೀತಿ  ಶಿಕ್ಷಣಕ್ಷೇತ್ರದಲ್ಲಿ ಯೂನಿಫಾರಂ ಜೊತೆಗೆ ಅವರವರ ಧರ್ಮದ ಸಾಂಪ್ರದಾಯಿಕ ಸಂಕೇತಗಳನ್ನು ಬಳಸುವವರು ಬಳಸಲಿ, ಬೇಡವಾದವರು ಬಿಡಲಿ. ಅಲ್ಲಿ  ಕುಂಕಮವೂ ಇರಲಿ, ಜನಿವಾರವೂ ಹಾಕಿರಲಿ, ಹಿಜಾಬ್ ಕೂಡಾ ಇರಲಿ, ಟರ್ಬನ್ ಪೇಟ ತೊಟ್ಟಿರಲಿ, ಕತ್ತಲ್ಲಿ ಕ್ರಾಸ್ ಹಾಕಿರಲಿ.. ಆಯಾ ಮತ ಪಂಥ ಜಾತಿ ಧರ್ಮದ ಸಂಕೇತಗಳು ಶೈಕ್ಷಣಿಕ ಕ್ಷೇತ್ರದ ಜ್ಞಾನ ತೋಟದಲ್ಲಿ ಅರಳಲಿ.

ಯಾರು ಏನೇ ಹೇಳಲಿ ಜಾತಿ ಧರ್ಮಗಳು ಈ ದೇಶದಲ್ಲಿರುವ ವಾಸ್ತವ. ಕಾಯಿದೆ ಕಾನೂನುಗಳ ಮೂಲಕ, ಇಲ್ಲವೇ ನಿಷೇಧಗಳನ್ನು ಹೇರುವ ಮೂಲಕ ಧಾರ್ಮಿಕ ಭಾವನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಭಾರತದ ಸಂವಿಧಾನ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಿದೆ. ಅವರವರ ಧರ್ಮಗಳನ್ನು ಆಚರಿಸಲಿ, ಎಲ್ಲರೂ ಅನ್ಯ ಧರ್ಮಗಳನ್ನು ಗೌರವಿಸಲಿ. ನಮ್ಮ ನಾಡು ಧಾರ್ಮಿಕ ಸೌಹಾರ್ದತೆಯ ಬೀಡಾಗಲಿ. ಕೋಮು ಸೌಹಾರ್ದತೆಯನ್ನು ಒಡೆಯುವ ವ್ಯಕ್ತಿ ಹಾಗೂ ಶಕ್ತಿಗಳ ಪ್ರಯತ್ನವನ್ನು ವಿರೋಧಿಸೋಣ. ಈ ದೇಶ ಎಲ್ಲರಿಗೂ ಸೇರಿದ್ದು ಎಲ್ಲರೂ ಸೌಹಾರ್ದಯುತವಾಗಿ ಬದುಕೋಣ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article

Most read