ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ನ್ಯಾಯಾಲಯದಲ್ಲಿ ತಾವು ನಿನ್ನೆ ಮಾಡಿದ ಮಾತುಗಳನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಉಲ್ಲೇಖಿಸಿರುವುದಾಗಿ ಹೇಳಿ ವಿಷಾದ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಿ, ದೇಶದ ಯುವಕರ ವಿರುದ್ಧ ಟೀಕೆ ಮಾಡಿದಂತೆ ತೋರಿಸಿರುವುದು ಸಂಪೂರ್ಣ ತಪ್ಪು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ನಡೆದ ಒಂದು ಅಷ್ಟೇನು ಮುಖ್ಯವಲ್ಲದ ಪ್ರಕರಣದ ವಿಚಾರಣೆಯ ವೇಳೆ ಸಿಜೆಐ ಕೆಲವು ಕಠಿಣ ಮಾತುಗಳನ್ನು ಬಳಸಿದ್ದರು. ಇದನ್ನು ಕೆಲವು ಮಾಧ್ಯಮಗಳು “ಯುವಕರನ್ನು ಪರಾವಲಂಬಿಗಳೆಂದು (parasites) ಕರೆಯಲಾಗಿದೆ” ಎಂದು ವರದಿ ಮಾಡಿದ್ದವು. ಆದರೆ ಇದನ್ನು ಖಂಡಿಸಿದ ಸಿಜೆಐ, “ನಾನು ಸಾಮಾನ್ಯ ಯುವಕರ ಬಗ್ಗೆ ಮಾತನಾಡಿಲ್ಲ. ನಕಲಿ ಮತ್ತು ಬೋಗಸ್ ಪದವಿಗಳ ಮೂಲಕ ಕಾನೂನು ವೃತ್ತಿಗೆ ಪ್ರವೇಶಿಸಿದವರ ಬಗ್ಗೆ ಮಾತ್ರ ಟೀಕಿಸಿದ್ದೆ” ಎಂದು ಹೇಳಿದ್ದಾರೆ.
“ಇಂತಹ ನಕಲಿ ಅರ್ಹತೆ ಹೊಂದಿದವರು ಕೇವಲ ಕಾನೂನು ವೃತ್ತಿಯಲ್ಲೇ ಅಲ್ಲ, ಮಾಧ್ಯಮ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಇತರ ಗೌರವಾನ್ವಿತ ವೃತ್ತಿಗಳಲ್ಲಿಯೂ ನುಸುಳಿದ್ದಾರೆ. ಇವರು ವ್ಯವಸ್ಥೆಗೆ ಹಾನಿ ಮಾಡುವವರಾಗಿದ್ದಾರೆ” ಎಂದು ಹೇಳಿದರು.
ಯುವಕರ ಬಗ್ಗೆ ತಾನು ಅವಹೇಳನಕಾರಿ ಮಾತು ಆಡಿದ್ದೇನೆ ಎನ್ನುವುದು ಸಂಪೂರ್ಣ ಆಧಾರರಹಿತ ಎಂದು ಅವರು ಸ್ಪಷ್ಟಪಡಿಸಿದರು. “ನಾನು ಭಾರತದ ಯುವಕರ ಬಗ್ಗೆ ಹೆಮ್ಮೆಪಡುತ್ತೇನೆ. ನಮ್ಮ ದೇಶದ ಇಂದಿನ ಹಾಗೂ ಭವಿಷ್ಯದ ಮಾನವ ಸಂಪನ್ಮೂಲ ಅತ್ಯಂತ ಶಕ್ತಿಶಾಲಿಯಾಗಿದೆ. ಪ್ರತಿಯೊಬ್ಬ ಯುವಕರೂ ನನಗೆ ಪ್ರೇರಣೆಯಾಗಿದ್ದಾರೆ” ಎಂದು ಹೇಳಿದ್ದಾರೆ.
“ಭಾರತದ ಅಭಿವೃದ್ಧಿಯಲ್ಲಿ ಯುವಕರೇ ಮುಖ್ಯ ಸ್ತಂಭಗಳು. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರು ನನ್ನ ಮೇಲೆ ಸಹ ವಿಶ್ವಾಸ ಮತ್ತು ಗೌರವ ಹೊಂದಿದ್ದಾರೆ” ಎಂದು ಕೂಡ ಸಿಜೆಐ ತಿಳಿಸಿದ್ದಾರೆ.

