(ಅದೊಂದು ಹಳ್ಳಿಯ ಬಸ್‌ಸ್ಟಾಪಿನ ಟೀ ಶಾಪ್. ಗೂಡಂಗಡಿ. ಅದರ ಮಾಲೀಕಳು ಇಂದ್ರಮ್ಮ. ಹಲವಾರು ಜನ ಬರ್ತಾರೆ, ಕಾಫಿ ಕುಡೀತಾ ರಾಜಕೀಯ ಮಾತಾಡ್ತಾರೆ. )
ಸಂಘಿ ಸಂತು : ಚೆ ಛೇ ಏನ್ ಬಿಸಿಲು ಇಂದ್ರಮ್ಮಾ.. ಒಂದು ಕೂಲಾಗಿರೊ ಕೋಲ್ಡ್ರಿಂಕ್ಸ್ ಕೊಡು ತಾಯಿ.
ಇಂದ್ರಮ್ಮ : (ಕೋಲ್ಡ್ರಿಂಗ್ಸ್ ಕೊಡುತ್ತಾ) ಏನ್ ಸಂತೂ ನಿಮ್ಮ ಸಂತೋ಼ಷ್ಜಿ ಮಾತು. ದೇಶಾದ್ಯಂತ ಪುಲ್ ಹವಾ..
ಸಂಘಿ ಸಂತು : ಮತ್ತೆ.. ನಮ್ಮ ಸಂಘದವರು ಅಂದ್ರ ಹೆಂಗೆ.. ಅವ್ರೇನೇ ಮಾತಾಡಿದ್ರೂ ಗುಂಡ್ ಹೊಡ್ದಂಗೆ ಕಣವ್ವಾ.
ಇಂದ್ರವ್ವ: ಇರಬೋದು ಬಿಡಪ್ಪಾ. ರಾತ್ರಿ ಗುಂಡು ಹೊಡೀತಾನೇ ಇರ್ತವ್ರೆ, ಹಗಲೊತ್ತು ರೈಲು ಬಿಡ್ತಾನೇ ಇರ್ತಾರೆ ಅಲ್ವಾ ಕುಮ್ರಣ್ಣಾ..
ಕುಮ್ರಣ್ಣಾ : ಅಕ್ಕೋ.. ಅವ್ರು ರೈಲಾದ್ರೂ ಬಿಡ್ಲಿ, ಇಲ್ಲಾ ರಾಕೆಟ್ ಆದ್ರೂ ಬಿಡ್ಲಿ. ನಮ್ಗೇನು? ಸುಮ್ಕೆ ಎರಡಿಡ್ಲಿ ಕೊಡಕ್ಕೋ..
ಇಂದ್ರವ್ವಾ : (ಇಡ್ಲಿ ಕೊಟ್ಟು) ಅಲ್ರಪ್ಪಾ ಈಗೇನದು ಹೊಸಾ ಸುದ್ದಿ.
ಅರ್ವಿಂದಾ : ಸುದ್ದಿ ಅಂತಾ ಏನ್ ಕೇಳ್ತಿ ಯಕ್ಕೋ. ಆ ಸಾವರ್ಕರ್ರು ಸತ್ತಾಗ ನಿಮ್ಮ ನೆಹ್ರು ಸಂಸತ್ತಿನೊಳಗ ಸಂತಾಪ ಸೂಚನೆ ಮಾಡಾಕಿಲ್ಲಾ ಅಂದ್ರಂತೆ.
ಸಂಘಿ ಸಂತು : ಇದು ನ್ಯಾಯಾನಾ? ನಮ್ಮ ಸಾವರ್ಕರ್ರು ಎಂತಾ ಸ್ವಾಂತಂತ್ರ್ಯ ಹೋರಾಟಗಾರ್ರು. ಹುತಾತ್ಮರಾದಾಗ ತಿಲಾಂಜಲಿ ಹೇಳೋದು ಬ್ಯಾಡ್ವಾ?
ಗುರು ಗೋವಿಂದ : ಅದು ತಿಲಾಂಜಲಿ ಅಲ್ಲಯ್ಯಾ ಶ್ರದ್ಧಾಂಜಲಿ. ಇಂದ್ರವ್ವಾ ಒಂದು ಟೀ ಕೊಡವ್ವಾ..
ಇಂದ್ರಮ್ಮಾ : (ಟೀ ಕೊಡುತ್ತಾ) ಬರ್ರಿ ರಿಟೈರ್ಡ್ ಮೇಷ್ಟ್ರೇ.. ಈಗ ನೀವೇ ಹೇಳ್ರೀ.. ನಮ್ಮ ನೆಹ್ರು ರವರು ಇವರ ಸಾವರ್ಕರ್ ಸತ್ತಾಗ ಸಂಸತ್ತಿನೊಳಗss ಯಾಕ್ ಸಂತಾಪ ಹೇಳಲಿಲ್ಲಾ?
ಗುರು ಗೋವಿಂದ : ಯಾರವ್ವಾ ಹಂಗಂತಾ ಹೇಳಿದ್ದು..?
ಸಂಘಿ ಸಂತು : ಪೇಪರ್ ಓದೋದಿಲ್ವಾ ಮೇಷ್ಟ್ರೇ.. ನಮ್ಮ ಜೀ ಯವ್ರೇ ಖುದ್ದಾಗಿ ಹೇಳವ್ರೆ. ನೆಹ್ರು ಎಂತಾ ಪೆಕ್ರು ಅಂತಾ. ಅಲ್ಲಾ ಒಂದು ತಿಲಾಂಜಲಿ.. ಹೋ ಅದು ಶ್ರದ್ಧಾಂಜಲಿ ಹೇಳಿದ್ರೆ ಈ ಕಾಂಗ್ರೆಸ್ಸಿನವ್ರ ಮನಿ ಗಂಟೇನು ಹೋಗ್ತಿತ್ತೂ ಅಂತಾ.. ಎಲ್ಲಾದ್ರಲ್ಲೂ ಬರೀ ರಾಜಕೀಯಾ..
ಗುರು ಗೋವಿಂದ : ಅಲ್ಲಯ್ಯಾ ಸಂತು.. ಸಾವರ್ಕರ್ ಸತ್ತಿದ್ದು..
ಸಂಘಿ ಸಂತು : ಸತ್ರು ಗಿತ್ರು ಅಂತೆಲ್ಲಾ ಹೇಳಿ ಸ್ವಾಂತಂತ್ರ್ಯ ವೀರ ಸಾವರ್ಕರ್ ರವರಿಗೆ ಅವಮಾನ ಮಾಡಬ್ಯಾಡಿ ಮೇಷ್ಟ್ರೇ. ಅವರು ಸತ್ತದ್ದಲ್ಲಾ ಹುತಾತ್ಮರಾಗಿದ್ದು..
ಇಂದ್ರಮ್ಮ : ಹೋ..ಯಾವ ಯುದ್ಧ ಮಾಡಿ ಹುತಾತ್ಮರಾಗಿದ್ರೋ..
ಗುರು ಗೋವಿಂದ : ಹೆಂಗೋ ಒಂದು ತೀರಿಕೊಂಡಿದ್ರಲ್ಲಾ. ಅದೇ ಯಾವಾಗ? ನಿನಗೆಲ್ಲಿ ಗೊತ್ತಿರುತ್ತೆ ಬಿಡು ಸಂತು.. ನಾನೇಳ್ತೀನಿ ಕೇಳು. ಸಾವರ್ಕರ್ ಸತ್ತಿದ್ದು.. ಅಲ್ಲಾ ಹುತಾತ್ಮರಾಗಿದ್ದು 1966 ರಲ್ಲಿ.
ಸಂಘಿ ಸಂತು : ಯಾವಾಗಾದ್ರೂ ಹುತಾತ್ಮರಾಗ್ಲಿ ಮೇಷ್ಟ್ರೇ.. ಒಂದು ತಿ ತೀ.. ಅದೇ ಶ್ರದ್ಧಾಂಜಲಿ ಸಲ್ಲಿಸೋದಕ್ಕೆ ಈ ನೆಹ್ರುಗೆ ಏನ್ ಬಂದಿತ್ತು ದೊಡ್ರೋಗ?
ಇಂದ್ರಮ್ಮಾ : ಹೇಳೂದನ್ನ ಪೂರಾ ಮೊದ್ಲ ಕೇಳಯ್ಯೋ.. ನೀವ್ ಹೇಳ್ರಿ ಮೇಷ್ಟ್ರೇ..
ಗುರು ಗೋವಿಂದ : ನೋಡಯ್ಯಾ.. ಸಾವರ್ಕರ್ ತೀರಿಕೊಂಡಿದ್ದು 1966 ರಲ್ಲಿ. ನೆಹರೂರವರು ಸತ್ತಿದ್ದು 1964 ರಲ್ಲಿ.
ಸಂಘಿ ಸಂತು : ಯಾರು ಯಾವಾಗ ಸತ್ರು, ಯಾರು ಅತ್ರು ಅನ್ನೋದೆಲ್ಲಾ ಈಗ್ಯಾಕೆ ಮೇಷ್ಟ್ರೇ.. ನೆಹ್ರು ಸಂತಾಪ ಸೂಚನೆ ಯಾಕ್ ಮಾಡಿಲ್ಲಾ ಅಷ್ಟ ಹೇಳ್ರಿ ಸಾಕು.
ಗುರು ಗೋವಿಂದ : ಅದು ಸಾಧ್ಯಾನೇ ಇಲ್ಲಯ್ಯಾ. ಹಂಗೆಲ್ಲಾ ಹೇಳೋಕೆ ಹೆಂಗಯ್ಯಾ ಆಗುತ್ತೆ..
ಸಂಘಿ ಸಂತು : ಯಾಕಾಗಿಲ್ಲಾ ಮೇಷ್ಟ್ರೇ. ಹೇಳಬೇಕಾಗಿತ್ತು. ಹೇಳೋಕೆ ಮನಸಿರಲಿಲ್ಲ. ಅದಕ್ಕೆ ಹೇಳಿಲ್ಲಾ,,ಅಷ್ಟೇ ಈ ಕಾಂಗಿಗಳ ದ್ವೇಷ ರಾಜ್ಕಾರಣಾ..
ಗುರು ಗೋವಿಂದ : ತಡ್ಕೊ ತಮ್ಮಾ ಹೇಳ್ತೀನಿ. ಯಾಕ ಅಸಾಧ್ಯ ಅಂದ್ರೆ, ಆ ನಿಮ್ಮ ದೇವರು ಸಾವರ್ಕರ್ ಹರೋಹರ ಅನ್ನೋಕೂ ಎರಡು ವರ್ಷದ ಮುಂಚೆ ನೆಹ್ರುರವರು ಶಿವ ಶಿವಾ ಅಂತಾ ಶಿವನ ಪಾದಾ ಸೇರಿದ್ರು.
ಅರ್ವಿಂದಾ: ಹಾಂ ಈಗೇಳಪ್ಪಾ.. ಆ ನೆಹ್ರು ದೆವ್ವಾ ಆಗಿ ಬಂದು ಸಂಸತ್ತಿನಲ್ಲಿ ನಿಂತು ಶ್ರದ್ಧಾಂಜಲಿ ಅಂತಾ ಹೇಳ್ಬೇಕಾಗಿತ್ತಾ? ನಾನ್ಸೆನ್ಸ್ ..
ಸಂಘಿ ಸಂತು : (ತಲೆ ಕೆರಕೊಂಡು) ಹೌದಾ.. ಹಂಗಾ.. ಮತ್ಯಾಕೆ ನಮ್ಮ ಜೀ ರವರು ಹಿಂಗ್ ಹೇಳಿದ್ರು?
ಇಂದ್ರಮ್ಮಾ : ರೋಗ ಕಣಪ್ಪಾ ಸಂತು. ಸುಳ್ಳು ಹೇಳೋ ರೋಗ. ಏನಾದ್ರೂ ಅದಕ್ಕೆಲ್ಲಾ ನೆಹ್ರೂನೇ ಕಾರಣ ಅಂತಾ ಹೇಳೋ ಮಹಾರೋಗ..
ಗುರು ಗೋವಿಂದ : ನೋಡಯ್ಯಾ.. ಸುಳ್ಳು ಹೇಳೋದು ಒಂದು ಕಲೆ. ಅದಕ್ಕೆ ಪುಂಗ್ಲಿ ವಿದ್ಯೆ ಅಂತಾ ಹೇಳ್ತಾರೆ. ಯಾವಾಗ ಹೆಂಗ್ ಪುಂಗ್ಲಿ ಅಂತಾ ಸಂಘದವ್ರು ಕಾಯ್ತಾ ಇರ್ತಾರೆ. ಅವ್ರು ಪುಂಗ್ತಾವ್ರೇ ನಿಮ್ಮಂತಾ ಅಂಧಭಕ್ತರು ನಂಬ್ತಾರೆ.. ಅಷ್ಟೇಯಾ..
ಸಂಘಿ ಸಂತು : ನೋಡಿ ಮೇಷ್ಟ್ರೇ ನನಗೆ ಅಂಧಭಕ್ತ ಅಂತಾ ಹೇಳ್ಕೊಳ್ಳೋಕೆ ಹೆಮ್ಮೆ ಇದೆ. ನಾನೊಬ್ನೇ ಅಲ್ಲಾ, ನನ್ನಂತೋರು ಕೊಟ್ಯಾಂತರ ಜನಾ ಈ ದೇಶದೊಳಗೆ ಇದ್ದಾರೆ. ಅಂಧಭಕ್ತಿ ಅಂದ್ರೆ ಅಪಾರವಾದ ನಿಷ್ಟೆ, ಅಧಮ್ಯವಾದ ನಂಬಿಕೆ. ನೀವೇನೇ ಹೇಳಿದ್ರೂ ನಾವು ನಂಬಾಕಿಲ್ಲಾ. ನಮ್ಮ ಜೀ ಅವ್ರು ಹೇಳಿದ್ಮೇಲೆ ಅದೇ ಸತ್ಯಾ. ನೆಹ್ರು ಯಾವಾಗ ಸತ್ರು ಅನ್ನೋದು ನಮಗೆ ಇಂಪಾರ್ಟೆಂಟ್ ಅಲ್ಲವೇ ಅಲ್ಲಾ.. ಅಂಧಭಕ್ತರ ಆರಾಧ್ಯ ದೈವ ಸಾವರ್ಕರ್ಜಿ ಹುತಾತ್ಮರಾದಾಗ ಯಾಕೆ ಶ್ರದ್ಧಾಂಜಲಿ ಸಲ್ಲಿಸಲಿಲ್ಲಾ ಅನ್ನೋದಷ್ಟೆ ಮ್ಯಾಟರ್ರು. ನೆಹ್ರು ಇರದಿದ್ರೆ ಏನಾಯ್ತು, ಇಂದ್ರಾ ಗಾಂಧಿ ಇದ್ರು, ರಾಜೀವ್ ಗಾಂಧಿ ಬದುಕಿದ್ರು, ಹೋಗಲಿ ರಾಹುಲ್ ಗಾಂಧಿಯವರಿಗೇನಾಗಿತ್ತು..
ಇಂದ್ರಮ್ಮಾ : ಲೇ ತಮ್ಮಾ ನಮ್ಮ ರಾಹುಲ್ ಗಾಂಧಿಯವ್ರು ಆಗಿನ್ನೂ ಹುಟ್ಟೇ ಇರಲಿಲ್ಲಯ್ಯಾ.. ಹೆಂಗಯ್ಯಾ ಶ್ರದ್ಧಾಂಜಲಿ ಹೇಳ್ತಾರೆ.
ಸಂಘಿ ಸಂತು : ಆಗ ಹೇಳದಿದ್ರೆ ಏನಾಯ್ತು.. ಈಗ ಶ್ರದ್ಧಾಂಜಲಿ ಸಲ್ಲಿಸ್ಬೋದಿತ್ತಲ್ಲಾ..
ಗುರು ಗೋವಿಂದ : ಹಂಗೆಲ್ಲಾ ಸಲ್ಲಿಸೋಕೆ ಅದೇನು ತಿರುಪತಿ ಹರಕೇನಾ? ರಾಹುಲ್ ಗಾಂಧಿಯವ್ರಿನ್ನೂ ಪ್ರಧಾನೀನೇ ಆಗಿಲ್ವಲ್ಲಯ್ಯಾ?
ಸಂಘಿ ಸಂತು : ಓ ಹೌದಲ್ವಾ? ನಾವು ಸಮಸ್ತ ಅಂಧಭಕ್ತರಿರೋವರ್ಗೂ ಪ್ರಧಾನಿ ಆಗೋಕೆ ಬಿಡೋದಿಲ್ಲಾ ಬಿಡಿ ಮೇಷ್ಟ್ರೇ. ಏನೇ ಆದ್ರೂ ಆ ನೆಹ್ರು ಸಾಯೋಕೆ ಮುಂಚೆನಾದ್ರೂ ಅಡ್ವಾನ್ಸಾಗಿ ನಮ್ಮ ಸಾವರ್ಕರ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸ್ಬಹುದಿತ್ತಲ್ವಾ ಮೇಷ್ಟ್ರೇ..?
ಇಂದ್ರಮ್ಮಾ : ಎಲ್ಲಾ ಇಲ್ಲಿ ಕೇಳ್ರಪ್ಪೋ ಕೇಳಿ. ನಮ್ಮೂರಲ್ಲಿರೋ ಸಂಘಿ ಸಂತು ಎನ್ನೋ ಅತೃಪ್ತ ಆತ್ಮಕ್ಕೆ ಶಾಂತಿ ಕೋರಿ ನಾವೆಲ್ಲ ಒಂದು ನಿಮ್ಸಾ ಮೌನಾಚರಣೆ ಮಾಡೋಣಾ..ಎಲ್ಲಾ ಎದ್ದು ನಿಲ್ರೀ.
ಸಂಘಿ ಸಂತು : ಏನ್ ಇಂದ್ರಕ್ಕಾ ನೀನು. ನಾನಿನ್ನೂ ಬದುಕೇ ಇದ್ದೀನಲ್ವಾ. ಇದ್ದಾಗಲೇ ಸತ್ತಿದ್ದೀನಿ ಅಂತಾ ಹೇಳ್ತಿಯಲ್ಲಕ್ಕಾ.. ಇದು ನ್ಯಾಯಾನಾ?
ಅರ್ವಿಂದ : ಸಾವರ್ಕರ್ ಸಾಯೋಕ್ಮುಂಚೆ ನೆಹ್ರು ಅಡ್ವಾನ್ಸಾಗಿ ಸಂತಾಪ ಸೂಚನೆ ಮಾಡೋದು ನ್ಯಾಯಾ ಅನ್ಬೂದಾದ್ರ ಮುಂದೆಂದೋ ಸಾಯೋ ನಿನ್ಗೆ ಈಗಲೇ ಸಂತಾಪ ಸಲ್ಲಿಸೋದು ನ್ಯಾಯಾ ಅಲ್ವಾ ಸಂತಣ್ಣಾ.
ಸಂಘಿ ಸಂತು : ಆಯ್ತು.. ಎಲ್ಲಾ ಸೇರಿ ಮೊದ್ಲು ನನ್ನ ಸಾಯ್ಸಿ ಆಮೇಲೆ ಸಂತಾಪ ಸೂಚನೆ ಮಾಡ್ರಪ್ಪಾ.
ಗುರು ಗೋವಿಂದ : ಅಯ್ಯೋ ಒಬ್ಬ ಅಂಧಭಕ್ತ ಸತ್ರೆ ಹತ್ತಾರು ಅಂಧಭಕ್ತರು ಹುಟ್ಕೋತಾರಲ್ಲಯ್ಯಾ. ನೀನೇನೂ ಸಾಯ್ಬ್ಯಾಡಾ.. ಮೊದಲು ನಿಮ್ನ ಅಂಧಭಕ್ತೀನಾ ಸಾಯ್ಸು. ಪ್ರಶ್ನೆ ಮಾಡೂದನ್ನ ರೂಢಿ ಮಾಡ್ಕೋ?
ಸಂಘಿ ಸಂತು : ಪ್ರಶ್ನೆ ಹಂಗಂದ್ರೇನು ಮೇಷ್ಟ್ರೇ? ನಮ್ಮ ನಾಯಕ್ರು ಏನ್ ಹೇಳ್ತಾರೊ ಅದನ್ನ ಪ್ರಶ್ನೆ ಮಾಡದೇ ನಂಬೋದಷ್ಟೇ ನಮ್ಮ ಕೆಲ್ಸಾ.. ಅಂಧಭಕ್ತಿ ಅಂದ್ರೆ ಸುಮ್ನೇನಾ?
ಅರ್ವಿಂದ : ಹೌದೌದು.. ಸುಮ್ನೆ ಅಲ್ಲಾ ಬಿಡು. ಇಂದ್ರಕ್ಕಾ ಇವನಿಗಿನ್ನೊಂದು ಕೋಲ್ಡ್ರಿಂಕ್ಸ್ ಕೊಡು.
ಇಂದ್ರಮ್ಮ : ಇಕಾ ತಗೋಳ್ಳಪ್ಪಾ. ತಗೊಂಡು ಕುಡ್ದ ಸಾಯಿ. ಆಗಾದ್ರೂ ಅಂಧಭಕ್ತನ ಅಕಾಲಿಕ ಸಾವಿಗೆ ನಾವೆಲ್ಲಾ ಸೇರಿ ಈ ನಮ್ಮ ಟೀಶಾಪ್ ಸಂಸತ್ತಿನಲ್ಲಿ ಸಂತೋಷಕೂಟ ಏರ್ಪಾಡು ಮಾಡಿ ಸಂತಾಪ ಸಭೆ ಮಾಡ್ತೀವಿ.
ಸಂಘಿ ಸಂತು : ( ಎದ್ದು ಹೋಗುತ್ತಾ) ಮಾಡ್ತೀರಾ ಮಾಡೇ ಮಾಡ್ತೀರಾ. ನಾನು ಸಾಯೋದನ್ನೇ ಕಾಯ್ತಾ ಇದ್ದೀರಾ? ಇದನ್ನಾ ನನ್ನ ಉದ್ರಿ ಲೆಕ್ಕಕ್ಕೆ ಬರ್ಕೋಳ್ಳಕ್ಕಾ.
ಅರ್ವಿಂದಾ : ಏ ಇರೋ. ನೆಹ್ರು ಆತ್ಮ ಬಂದು ನಿನ್ನ ಅತೃಪ್ತ ಆತ್ಮಕ್ಕೆ ಸಂತಾಪ ಹೇಳುತ್ತೆ.
ಸಂಘಿ ಸಂತು : ಸಂತಾಪ ಅಂತೆ ಸಂತಾಪ. ನಿಮ್ಮ ಪಿಂಡಾ. ( ಎನ್ನುತ್ತಾ ಎದ್ದು ಹೋಗುವನು)
ಇಂದ್ರಮ್ಮಾ : ಮೇಷ್ಟ್ರೇ ಇಂತವರ್ಗೆ ಎಷ್ಟು ಹೇಳಿದ್ರೂ ಅರ್ಥಾನೇ ಆಗಾಕಿಲ್ಲಾ ಅಲ್ವರಾ?
ಗುರು ಗೋವಿಂದ : ಅದೆಂಗೆ ಆಗುತ್ತೆ.. ಇಂತವ್ರ ತಲೇಲಿ ಮೆದುಳು ಅನ್ನೋದೆ ಇಲ್ಲಕ್ಕಾ.. ಅದನ್ನ ತೆಗೆದಾಕಿ ಹಿಂದುತ್ವಾ ಅನ್ನೋ ಸಗಣಿ ತುಂಬಿರ್ತಾರಲ್ವಾ. ಈ ಸಂಘಿಗಳು ಬಾಯ್ಬಿಟ್ರೆ ಬರೀ ಸುಳ್ಳು.
ಇಂದ್ರಮ್ಮ : ಹಾಂ.. ಸರಿಯಾಗಿ ಹೇಳಿದ್ರಿ ಮೇಷ್ಟ್ರೇ. ಸಂಘಿಗಳ ದೇವ್ರೇ ಸುಳ್ಳು. ಅಂಧಭಕ್ತರ ಆರಾಧ್ಯ ದೈವವೇ ಸುಳ್ಳು. ಎಷ್ಟೇಳಿದ್ರೂ ಅಷ್ಟೇ ಬಿಡಿ ಮೇಷ್ಟ್ರೇ.
(ಎಲ್ಲರೂ ನಗುವರು)
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಅಗೋಚರ ನಿರುದ್ಯೋಗ


