Saturday, December 7, 2024

ಹಿಂದೂ ಹಬ್ಬಗಳು ಮತ್ತು ಮಾಂಸಾಹಾರ

Most read

ಈಗಿನ ಕಾಲದಲ್ಲಿ ಹಬ್ಬ ಹುಣ್ಣಿವೆ ಸಮಯದಲ್ಲಿ, ಅಥವಾ ಊರಿನ ಯಾವುದೇ ಜಾತ್ರೆಯ ಸಂದರ್ಭದಲ್ಲಿ ದೇವರ ಹೆಸರಲ್ಲಿ ಮಾಂಸಾಹಾರ ವರ್ಜ್ಯ ಎಂಬ ಆದೇಶ ಹೊರಡಿಸಿ ಬಡ ಮೀನುಗಾರ ಮಹಿಳೆಯರ ಹೊಟ್ಟೆಗೆ ಕಲ್ಲು ಹಾಕುವ ಹಿಂದೂ ಧಾರ್ಮಿಕ ಮುಖಂಡರು ಇದ್ದಾರೆ!  ಮೂಲತಃ ಎಲ್ಲಾ ಆಹಾರವನ್ನು ಸೃಷ್ಟಿಸಿದ ದೇವರಿಗೆ ಮಾನವ ನಿರ್ಮಿತ ಜಾತಿವಾರು ಆಹಾರ ಪದ್ಧತಿಯನ್ನು ಅಂಟಿಸುವುದು ಸರಿಯೇ? ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ಯಾವುದೇ ಹಿಂದೂ ಹಬ್ಬ, ಜಾತ್ರೆ, ಪವಿತ್ರ ಸಂದರ್ಭ ಬಂದರೂ ಅದಕ್ಕೆ ಮೊದಲ ಬಲಿ ಆಗುವುದು ಹಿಂದೂಗಳ ಮಾಂಸಾಹಾರ!  ವೈದಿಕ ದೇವರಿಗೆ ಮಾಂಸಾಹಾರ ಯಾಕೆ ವರ್ಜ್ಯ ಎಂದು ಯಾರೂ ಹೇಳುತ್ತಿಲ್ಲ. ಕೇವಲ ಕುರುಡು ಅನುಕರಣೆ ಅಷ್ಟೇ. ಮೊದಲೆಲ್ಲಾ ನರಕ ಚತುರ್ದಶಿ ಮತ್ತು ದೀಪಾವಳಿಯಂದು ಕಡ್ಡಾಯ ಮೀನಿನ ಅಡುಗೆ ಮಾಡಬೇಕು ಎಂಬ ನಿಯಮ ನಮ್ಮ ತುಳುನಾಡಿನ ಬ್ರಾಹ್ಮಣೇತರರಲ್ಲಿ ಇತ್ತು. ಆದರೆ ಮುಂಬೈಯವರ ಪ್ರಭಾವದಿಂದ, ಲಕ್ಷ್ಮೀದೇವಿಗೆ ಮೀನು ವರ್ಜ್ಯ ಎಂಬ ನೆಪದಲ್ಲಿ ದೀಪಾವಳಿಯಂದು ಮೀನು ಪದಾರ್ಥ ಮಾಡುವುದನ್ನು ಈಗ ಬಹಳಷ್ಟು ತುಳುವರು ನಿಲ್ಲಿಸಿದ್ದಾರೆ. ಮುಂಬೈಯಲ್ಲಿಯ ಮರಾಠಿಗರು ದೀಪಾವಳಿಯಂದು ಮೀನು-ಮಾಂಸ ತಿನ್ನುವುದಿಲ್ಲ.

ಭರತ ಖಂಡದಲ್ಲಿ 2,600 ವರ್ಷಗಳ ಹಿಂದೆ ಮೊಟ್ಟ ಮೊದಲು ಕಟ್ಟಾ ಸಸ್ಯಾಹಾರ ಶುರು ಮಾಡಿದವರು ಜೈನರು. ತದನಂತರ ಜೈನ ಧರ್ಮದ ಜನಪ್ರಿಯತೆ ನೋಡಿ ವೈದಿಕರೂ ಸಸ್ಯಾಹಾರ ಅಳವಡಿಸಿಕೊಂಡರು. ಅದಕ್ಕೆ ಮುಂಚೆ ಎಲ್ಲಾ ಬ್ರಾಹ್ಮಣರು ಪಕ್ಕಾ ಮಾಂಸಾಹಾರಿಗಳಾಗಿದ್ದರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅಷ್ಟೇ ಅಲ್ಲ ಬೃಹದಾರಣ್ಯಕ ಉಪನಿಷತ್ತಿನಲ್ಲಿಯೂ ಮಾಂಸಾಹಾರದ ಮಹತ್ವ ಮತ್ತು ಬೇರೆ ಬೇರೆ ಪ್ರಾಣಿಗಳ ಮಾಂಸ ತಿನ್ನುವುದರಿಂದ ಎಂತಹಾ ಉತ್ತಮ ಗುಣ ಇರುವ ಮಕ್ಕಳು ಜನಿಸುತ್ತವೆ ಎಂಬ ವಿವರಣೆ ಇದೆ.

ದೇವರಾದ ರಾಮ, ಕೃಷ್ಣ ಇವರೆಲ್ಲಾ ಮಾಂಸಾಹಾರಿ ಆಗಿದ್ದರು ಎಂದು ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖವಿದೆ. ರಾಮ ಸೀತೆ ವನವಾಸದಲ್ಲಿ ಇದ್ದಾಗ ಲಕ್ಷ್ಮಣನು ಜಿಂಕೆ, ಮೊಲ, ಪಾರಿವಾಳ ಮುಂತಾದವನ್ನು ಬೇಟೆಯಾಡಿ ತಂದು ಸೀತೆಗೆ ಅಡುಗೆ ಮಾಡಲು ಕೊಡುತ್ತಿದ್ದ ವಿವರ ವಾಲ್ಮೀಕಿ ರಾಮಯಣದಲ್ಲಿ ಇದೆ. ಕೃಷ್ಣನೂ ಅರ್ಜುನನೊಂದಿಗೆ ಬೇಟೆಗೆ ಹೋಗಿ ಕಾಡು ಹಂದಿ ಬೇಟೆಯಾಡಿದ್ದು, ಹಾಗೂ ಅಲ್ಲಿ ಶಿವನು ಮಾರುವೇಷದಲ್ಲಿ ಬಂದು ಅರ್ಜುನನ ನಿಷ್ಠೆಯನ್ನು ಪರೀಕ್ಷಿಸಿ ನಂತರ ಅರ್ಜುನನಿಗೆ ಪಾಶುಪತಾಸ್ತ್ರ ಕೊಟ್ಟಿದ್ದು ಹಾಗೂ ಅದುವೇ ಸ್ಥಳ ಶ್ರೀಶೈಲ ಕ್ಷೇತ್ರದ ಉಗಮಕ್ಕೆ ಕಾರಣವಾಗಿದ್ದ ಕುರಿತು ಮಹಾಭಾರತದಲ್ಲಿ ಉಲ್ಲೇಖವಿದೆ .

ಈಗಲೂ ಪ್ರತಿ ದಿನ ಊಟವಾದ ಮೇಲೆ ಎಲ್ಲಾ ಬ್ರಾಹ್ಮಣರೂ ತಮ್ಮ ಹೊಟ್ಟೆಯ ಮೇಲೆ ಎಡಗೈ ಇಟ್ಟು “ವಾತಾಪಿ ಜೀರ್ಣೋಭಾವ “ ಎಂದು ಹೇಳುತ್ತಾರೆ. ಇದರ ಹಿಂದೆ ಋಷಿ ಮುನಿಗಳು ಆದಿ ಕಾಲದಿಂದಲೂ ಮಾಂಸಾಹಾರ ಸೇವಿಸುತ್ತಿದ್ದರು ಎಂಬ ಪೌರಾಣಿಕ ಕತೆಯಿದೆ. ರಾಕ್ಷಸರಾಗಿದ್ದ ವಾತಾಪಿ-ಇಲ್ವಲ ಎಂಬ ಸಹೋದರರು ತಮ್ಮ ರಾಜ್ಯಕ್ಕೆ ಹೊರಗಿನಿಂದ ಆಗಮಿಸುವ ಅತಿಥಿಗಳಿಗೆ ಆಡಿನ ಮಾಂಸದ ಔತಣ ಬಡಿಸುತ್ತಿದ್ದರು. ತಮ್ಮನಾದ ವಾತಾಪಿ ಆಡಿನ ರೂಪ ಧರಿಸುತ್ತಿದ್ದ  ಮತ್ತು ಅಣ್ಣ ಇಲ್ವಲನು  ಆ ಆಡನ್ನು ಕೊಂದು ಅದರ ಮಾಂಸ ಬೇಯಿಸಿ ಬಂದಿರುವ ಅತಿಥಿಗಳಿಗೆ ಬಡಿಸುತ್ತಿದ್ದನು. ಊಟ ಆದ ಮೇಲೆ ಅಣ್ಣ ಇಲ್ವಲನು ‘ವಾತಾಪಿ ಹೊರಗೆ ಬಾ’ ಎಂದು ಕರೆಯುತ್ತಿದ್ದನು. ಆಗ ವಾತಾಪಿ ಅತಿಥಿಗಳ ಹೊಟ್ಟೆ ಒಡೆದು ಹೊರಗೆ ಬಂದು ಆ ಅತಿಥಿಗಳನ್ನೇ ತಿನ್ನುತ್ತಿದರು. ಒಮ್ಮೆ ಅಗಸ್ತ್ಯ ಋಷಿ ಮತ್ತು ಶಿಷ್ಯರು ವಾತಾಪಿಯ ಮನೆಗೆ ಭೋಜನಕ್ಕೆ ಬಂದಿದ್ದಾಗ ಎಂದಿನಂತೆ ಇಲ್ವಲನು ಆಡಿನ ಮಾಂಸವಾಗಿ ಅಗಸ್ತ್ಯರ ಹೊಟ್ಟೆ ಸೇರಿದನು. ಆದರೆ ಆಗಸ್ತ್ಯರಿಗೆ ವಾತಾಪಿ-ಇಲ್ವಲರ ಕುತಂತ್ರ ಅಂತರ್‌ ಜ್ಞಾನದಿಂದ ಗೊತ್ತಾಗಿ, ಅವರು ತಮ್ಮ ಮಂತ್ರ ಬಲದಿಂದ “ವಾತಾಪಿ ಜೀರ್ಣೋಭಾವ” ಎಂಬ ಮಂತ್ರ ಹೇಳಿ ಅತಿಥಿಗಳ ಹೊಟ್ಟೆಯಲ್ಲಿಯೇ ವಾತಾಪಿ ಜೀರ್ಣೆಯಾಗಿ ಹೋಗಲಿ ಎಂದು ಶಪಿಸಿದಾಗ ವಾತಾಪಿ ರಾಕ್ಷಸನು  ಅಗಸ್ತ್ಯ ಮತ್ತು ಶಿಷ್ಯರ ಹೊಟ್ಟೆಯಲ್ಲಿಯೇ ಸತ್ತು ಹೋಗುತ್ತಾನೆ. ನಂತರ ಇಲ್ವಲನನ್ನೂ ಅಗಸ್ತ್ಯರು ಮಂತ್ರಶಕ್ತಿಯಿಂದ ಕೊಲ್ಲುತ್ತಾರೆ. ಈ ಪುರಾಣ ಕಥೆಯ ಅಂತರಾರ್ಥ ಏನೆಂದರೆ ಮಾಂಸಾಹಾರ ಸೇವಿಸಿದ ನಂತರ ಎಲ್ಲರಿಗೂ ಸ್ವಲ್ಪ ವಾತ-ಪಿತ್ತ ಉಂಟಾಗುತ್ತದೆ, ಅದು ಶಮನವಾಗಲಿ ಎಂದು ಬಯಸುವ ಔಷಧಿ ಗುಣದ ಮಂತ್ರವಿದಂತೆ. ಆ ಕಾಲದಲ್ಲಿ ಋಷಿಮುನಿಗಳೂ ಅವರ ವೈದಿಕ ಶಿಷ್ಯರೂ ಮಾಂಸಾಹಾರ ಸೇವಿಸುತ್ತಿದ್ದರು ಎಂದು ಸೂಚಿಸುವ ಕತೆಯಿದು.  ಮಹಾಭಾರತದ ದ್ರೋಣ ಪರ್ವದಲ್ಲಿ ಪಾಂಡವರ ಪೂರ್ವಜ ರಂತಿದೇವ  ಎಂಬ ಮಹಾನ್ ರಾಜನು ದಿನಾಲೂ 2,000 ಗೋವುಗಳನ್ನು ಕಡಿದು ಅವುಗಳ ಮಾಂಸವನ್ನು ಸಾವಿರಾರು ಬ್ರಾಹ್ಮಣರಿಗೆ ಬಡಿಸುತ್ತಿದ್ದುದರಿಂದ ಅವನಿಗೆ ಮೋಕ್ಷ ಲಭಿಸಿತು ಎಂಬ ಉಲ್ಲೇಖ ಇದೆ. ಅಂದರೆ ಮಹಾಭಾರತ ಕಾಲದಲ್ಲಿ ಕ್ಷತ್ರಿಯರಿಗೆ ಮತ್ತು ಬ್ರಾಹ್ಮಣರಿಗೆ ಮಾಂಸಾಹಾರ ಸೇವನೆ ಕಡ್ಡಾಯವಾಗಿತ್ತು!

ಆದರೂ ಈಗಿನ ಕಾಲದಲ್ಲಿ ಹಬ್ಬ ಹುಣ್ಣಿವೆ ಸಮಯದಲ್ಲಿ, ಅಥವಾ ಊರಿನ ಯಾವುದೇ ಜಾತ್ರೆಯ ಸಂದರ್ಭದಲ್ಲಿ ದೇವರ ಹೆಸರಲ್ಲಿ ಮಾಂಸಾಹಾರ ವರ್ಜ್ಯ ಎಂಬ ಆದೇಶ ಹೊರಡಿಸಿ ಬಡ ಮೀನುಗಾರ ಮಹಿಳೆಯರ ಹೊಟ್ಟೆಗೆ ಕಲ್ಲು ಹಾಕುವ ಹಿಂದೂ ಧಾರ್ಮಿಕ ಮುಖಂಡರು ಇದ್ದಾರೆ!  ಮೂಲತಃ ಎಲ್ಲಾ ಆಹಾರವನ್ನು ಸೃಷ್ಟಿಸಿದ ದೇವರಿಗೆ ಮಾನವ ನಿರ್ಮಿತ ಜಾತಿವಾರು ಆಹಾರ ಪದ್ಧತಿಯನ್ನು ಅಂಟಿಸುವುದು ಸರಿಯೇ?  ಕಾಡು ಪ್ರಾಣಿಗಳಲ್ಲಿ ಮತ್ತು ಪಕ್ಷಿಗಳಲ್ಲಿ ಮಾಂಸಾಹಾರಿ ಮತ್ತು ಶಾಕಾಹಾರಿ ಎರಡೂ ಇವೆ. ದೇವರು ಮಾಂಸಾಹಾರಕ್ಕೆ ವಿರುದ್ಧ ಎಂದಾಗಿದ್ದರೆ ಅವನು ಪಕ್ಕಾ ಮಾಂಸಾಹಾರಿಯಾದ ಹುಲಿ ಸಿಂಹ ಚಿರತೆ, ಗರುಡ ಹಾವು ಮತ್ತು ವಿವಿಧ ಮೀನುಗಳನ್ನು ಸೃಷ್ಟಿಸುತ್ತಲೇ ಇರಲಿಲ್ಲ.

ನಾವು ಪೂಜಿಸುವ ವೈದಿಕ ದೇವರುಗಳು ಸವಾರಿ ಮಾಡುವ ವಾಹನಗಳೆಲ್ಲಾ ಅಪ್ಪಟ ಮಾಂಸಾಹಾರಿಗಳು. ದುರ್ಗಾದೇವಿಯ ಸಿಂಹ ಅಥವಾ ಹುಲಿ ಎಂದಾದರೂ ಹುಲ್ಲು ತಿನ್ನಲು ಸಾಧ್ಯವೇ!  ವಿಷ್ಣುವಿನ ವಾಹನ ಗರುಡ ಇತರ ಜೀವಂತ ಪ್ರಾಣಿಪಕ್ಷಿ ಬಿಟ್ಟು ಬೇರೇನನ್ನೂ ತಿನ್ನುವುದಿಲ್ಲ. ಅದು ಪವಿತ್ರ ನಾಗನನ್ನೂ ತಿನ್ನುತ್ತದೆ. ಕಾರ್ತಿಕೇಯನ ವಾಹನ ನವಿಲು, ಇದು ಕೂಡಾ ನಾಗನನ್ನು ತಿನ್ನುತ್ತದೆ. ಗಣಪತಿಯ ವಾಹನ ಇಲಿ, ಹುಳು ಹುಪ್ಪಟೆ ತಿನ್ನುತ್ತದೆ. ಬ್ರಹ್ಮ ಮತ್ತು ಸರಸ್ವತಿಯ ವಾಹನ ಹಂಸ, ಕೂಡಾ ಮೀನು ಮತ್ತು ಎರೆಹುಳಗಳನ್ನು ತಿನ್ನುತ್ತದೆ. ಶನಿದೇವರ ವಾಹನ ಕಾಗೆಯೂ ಸಣ್ಣ ಇಲಿ, ಕೋಳಿ ಮರಿ, ಹುಳು, ಸಣ್ಣ ಪಕ್ಷಿಗಳನ್ನು ಬೇಟೆಯಾಡುತ್ತದೆ. ಲಕ್ಷ್ಮಿದೇವಿಯ ವಾಹನ ಗೂಬೆ, ಅದು ತಿನ್ನುವುದು ಕೇವಲ ಇಲಿ ಹೆಗ್ಗಣ, ಮೊಲದ ಮರಿ, ಇತರ ಪಕ್ಷಿಗಳ ಮರಿಗಳನ್ನು ಹಾಗೂ ಸಣ್ಣ ಹಾವುಗಳನ್ನು.

ಬೆಂಗಾಲಿ ಬ್ರಾಹ್ಮಣರ ಹಬ್ಬ ಹರಿದಿನಗಳ ಊಟ (ಸಾಂದರ್ಭಿಕ ಚಿತ್ರ)

ಈಗಲೂ ಕಾಶ್ಮೀರದ ಪಂಡಿತರು ಮತ್ತು ಬೆಂಗಾಲಿ ಬ್ರಾಹ್ಮಣರು ಹಬ್ಬ ಹರಿದಿನಗಳಲ್ಲಿ ತಮ್ಮ ಮನೆಯಲ್ಲಿ ಕುರಿಯ ಮಾಂಸ ಮತ್ತು ಮೀನಿನ ಊಟ ತಯಾರಿಸಿ ದೇವರಿಗೂ ಆ ಮಾಂಸಾಹಾರದ ನೈವೇದ್ಯ ಇಡುತ್ತಾರೆ. ಕೇವಲ ನಮ್ಮಲ್ಲಿ ಕೆಳ ಜಾತಿಯವರನ್ನು ಮಾನಸಿಕವಾಗಿ ಹಿಂಸಿಸಲು ಮಾತ್ರ ಕಾವಿ ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಸಸ್ಯಾಹಾರದ ಕಾಲ್ಪನಿಕ ಆರೋಗ್ಯಲಾಭಕ್ಕೆ ಪ್ರಚಾರ ಕೊಡುವ ಷಡ್ಯಂತ್ರಗಾರರ ಒಂದು ದೊಡ್ಡ ಸೈನ್ಯ ಇತ್ತೀಚೆಗೆ ಹುಟ್ಟಿದೆ. ಸರಕಾರವು ಬಡ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ಕೊಡುವುದನ್ನು ಈಗ ವಿರೋಧಿಸುವವರೂ ಈ ಷಡ್ಯಂತ್ರಗಾರರೇ!  ಅಷ್ಟೇ ಅಲ್ಲ ದೇವರ ನೈವೇದ್ಯಕ್ಕೆ ಬಳಸುವ ಆಹಾರದಲ್ಲಿ ಈರುಳ್ಳಿ ಬೆಳ್ಳುಳ್ಳಿ ಬಳಸಬಾರದು ಎಂಬ ಮೂರ್ಖ ನಿಯಮ ಮಾಡಿದವರೂ ಇವರೇ. ನಿಜವಾಗಿ ಶುದ್ಧ ಸಸ್ಯಾಹಾರ ಆಗಿರುವ ಈರುಳ್ಳಿ ಬೆಳ್ಳುಳ್ಳಿಯಲ್ಲಿ ಇರುವಷ್ಟು ಪೌಷ್ಟಿಕಾಂಶ ಮತ್ತು ಔಷಧಿ ಗುಣ ಇತರ ಯಾವುದೇ ಶಾಕಾಹಾರದಲ್ಲಿ ಇಲ್ಲ. ಆದರೂ ಈರುಳ್ಳಿ-ಬೆಳ್ಳುಳ್ಳಿ ಮನುಷ್ಯರಲ್ಲಿ ತಾಮಸಿಕ ಗುಣ ಬೆಳೆಸುತ್ತದೆ ಮತ್ತು ಮನಸ್ಸನ್ನು ಚಂಚಲ ಮಾಡುತ್ತದೆ ಎಂಬ ಪೊಳ್ಳು ನೆಪದಲ್ಲಿ ಅದು ಸಾತ್ವಿಕರಿಗೆ ವರ್ಜ್ಯವಂತೆ!  ಹೀಗೆ ದೇವರ ಹೆಸರಲ್ಲಿ ತಮ್ಮ ಆಹಾರ ಪದ್ದತಿಯನ್ನು ಇತರರ ಮೇಲೆ ಹೇರುವ ಸವರ್ಣೀಯರ ಷಡ್ಯಂತ್ರವನ್ನು ಜನಸಾಮಾನ್ಯರು ವಿಫಲಗೊಳಿಸಬೇಕು.

ಸ್ವತಃ ಗೋಲ್ವಲ್ಕರ್ ತಮ್ಮ “ಬಂಚ್ ಆಫ್ ಥಾಟ್ಸ್” ನಲ್ಲಿ, ಕೆಳಜಾತಿಯವರಿಗೆ ಪೌಷ್ಟಿಕ ಆಹಾರ ಸಿಕ್ಕರೆ ಅವರ ದೇಹ ಆರೋಗ್ಯಕರವಾಗಿ ಬೆಳೆಯುತ್ತದೆ. ಮಕ್ಕಳ ದೇಹ ಆರೋಗ್ಯಕರವಾಗಿ ಚುರುಕಾಗಿದ್ದರೆ ಅವರ ಮೆದುಳು ಸಹಾ ತೀಕ್ಷ್ಣವಾಗಿ ಬೆಳೆಯುತ್ತದೆ, ಮುಂದೆ ಅವರು ಸವರ್ಣೀಯರನ್ನು ತಮ್ಮ ಬುದ್ಧಿ ಬಲದಿಂದ ಹಿಂದಿಕ್ಕಬಹುದು. ಹಾಗಾಗಿ ಕೆಳ ಜಾತಿಯವರಿಗೆ ಪೌಷ್ಟಿಕ ಆಹಾರ ಸಿಗದಂತೆ ದೇವರ ಹೆಸರಲ್ಲಿ ಮೌಢ್ಯ ಹರಡಬೇಕು ಹಾಗೂ ಅವರು ಮಂದ ಬುದ್ಧಿಯವರಾಗಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ನೇರವಾಗಿ ಬರೆದಿದ್ದಾರೆ. ಅದುವೇ ಈಗ ರಾಮ, ಕೃಷ್ಣ, ದುರ್ಗೆ, ಗಣಪತಿ ಮುಂತಾದ ವೈದಿಕ ದೇವರ ಹೆಸರಲ್ಲಿ ಹಿಂಬಾಗಿಲಿನಿಂದ ಅನುಷ್ಟಾನಗೊಳ್ಳುತ್ತಿದೆ.

ಜಗತ್ತಿನ ವಿಜ್ಞಾನ ಲೋಕದಲ್ಲಿ ಹೊಸ ಹೊಸ ಆವಿಷ್ಕಾರ ಮಾಡುತ್ತಿರುವ ವಿಜ್ಞಾನಿಗಳೆಲ್ಲಾ ಪಕ್ಕಾ ಮಾಂಸಹಾರಿಗಳೆ ಆಗಿದ್ದಾರೆ. ಆದರೆ 2 ನೇ ವಿಶ್ವ ಯುದ್ಧದಲ್ಲಿ ಮೂರು ಕೋಟಿ ಜನರ ಮರಣಕ್ಕೆ ನೇರ ಕಾರಣಕರ್ತನಾದ  ಮಹಾದುಷ್ಟ ಅಡಾಲ್ಫ್ ಹಿಟ್ಲರ್ ಮಾತ್ರ ಪಕ್ಕಾ ವೇಗನ್ (ಅಪ್ಪಟ ಶಾಕಾಹಾರಿ) ಆಗಿದ್ದ. ಅಚ್ಚ ಸಸ್ಯಾಹಾರಿ ಕುಟುಂಬದಿಂದ ಬಂದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಹೇಳಿದ್ದೇನೆಂದರೆ – ಒಂದು ವೇಳೆ ತಾನೇನಾದರೂ ಮಾಂಸಾಹಾರಿಯಾಗಿ ಬದಲಾಗಿರದಿದ್ದರೆ ತಾನೆಂದೂ ಬ್ಯಾಡ್ಮಿಂಟನ್ ಚಾಂಪಿಯನ್ ಆಗಲು ಸಾಧ್ಯವೇ ಇರಲಿಲ್ಲ!  ನಮ್ಮ ದೇಶ ರಕ್ಷಿಸುತ್ತಿರುವ ವೀರ ಸೇನಾಪಡೆಯಲ್ಲಿ ಇರುವ ಯೋಧರೆಲ್ಲಾ ಪೂರ್ಣ ಮಾಂಸಾಹಾರಿಗಳು. ಅವರಿಲ್ಲದಿದ್ದರೆ ನಮ್ಮ ದೇಶ ಎಂದೋ ವೈರಿಗಳ ಪಾಲಾಗುತ್ತಿತ್ತು. ಮಾಂಸಾಹಾರ ಇರದಿದ್ದರೆ ನಮ್ಮ ದೇಶದ ಉತ್ತರ ಗಡಿಯಲ್ಲಿ ಕೊರೆಯುವ ಹಿಮಗಾಳಿಯಲ್ಲಿ ಯೋಧರು ತಮ್ಮ ದೇಹದ ಉಷ್ಣತೆ ಕಾಪಾಡಿಕೊಳ್ಳಲಾಗದೆ ರಕ್ತ ಹೆಪ್ಪುಗಟ್ಟಿ ಸಾಯುತ್ತಿದ್ದರು.  ಕೊನೆಗೆ, ಸರಕಾರಕ್ಕೆ ನನ್ನದೊಂದು ಮನವಿ- ಕೇವಲ ಸಸ್ಯಾಹಾರಿಗಳೆ ಇರುವ ಒಂದು ಮಿಲಿಟರಿ ರೆಜಿಮೆಂಟ್ ಸ್ಥಾಪಿಸಿ, ಆ ಸಸ್ಯಾಹಾರಿ ಯೋಧರನ್ನೆಲ್ಲಾ ಹಿಮ ಪರ್ವತವಿರುವ ಕಾರ್ಗಿಲ್ ಗಡಿಗೆ ಕಳುಹಿಸಬೇಕು. ಅಲ್ಲಿದ್ದುಕೊಂಡು ಅವರು ಸಸ್ಯಾಹಾರದ ಮಹತ್ವ ಜಗತ್ತಿಗೆ ಬೋಧಿಸಲಿ.

ಪ್ರವೀಣ್ ಎಸ್ ಶೆಟ್ಟಿ

ಚಿಂತಕರು

ಇದನ್ನೂ ಓದಿ- ಲಕ್ಷ್ಮೀದೇವಿಯ ವಾಹನ ಮತ್ತು ದೀಪಾವಳಿ ಆಚರಣೆ

More articles

Latest article