ಪಶ್ಚಿಮಘಟ್ಟದ ಸೆರಗಿನ ಮಲೆನಾಡಿನಲ್ಲಿ ಮೈಚಾಚಿಕೊಂಡಿರುವ ಕಾರ್ಕಳ, ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ, ಭೌಗೋಳಿಕ, ಚಾರಿತ್ರಿಕ, ಸಾಮಾಜಿಕ-ಸಾಂಸ್ಕೃತಿಕ ಹೀಗೆ ಅನೇಕ ವಿಷಯಗಳಲ್ಲಿ, ಭಿನ್ನವೂ ವಿಶಿಷ್ಟವೂ ಆದ ಒಂದು ತಾಲೂಕು.
ನೈಋತ್ಯದಲ್ಲಿರುವ ಸಮುದ್ರ ತೀರದ ಮಹಾನಗರ ಮಂಗಳೂರನ್ನು ಹಾಗೂ ವಾಯುವ್ಯದಲ್ಲಿರುವ ಕರಾವಳಿಯ ಇನ್ನೊಂದು ಪಟ್ಟಣವಾದ ಉಡುಪಿಯನ್ನು ಸಂಪದ್ಭರಿತ ಮಲೆನಾಡಿನೊಂದಿಗೆ ಬೆಸೆಯುವ ಆಯಕಟ್ಟಿನಲ್ಲಿರುವ ಕಾರ್ಕಳ ತಾಲೂಕು ಸಮುದ್ರ ಮಟ್ಟದಿಂದ 241 ಅಡಿ ಎತ್ತರದಲ್ಲಿದೆ. ಕಾಡು, ಕಲ್ಲು, ನೆಲ, ಜಲಗಳಿಂದ ಸಮೃದ್ಧವಾದ ಈ ತಾಲೂಕು ವಾರ್ಷಿಕ ಸರಾಸರಿ 5742.8 ಮಿಲಿಮೀಟರ್ (ಜಿಲ್ಲೆಯಲ್ಲಿಯೇ ಗರಿಷ್ಠ) ಮಳೆ ಪಡೆಯುತ್ತದೆ. ʼಕಾರ್ಕಳʼ ಎಂಬ ಹೆಸರು ಬರಲು ಇಲ್ಲಿನ ಮಳೆಯೂ ಕಾರಣವಂತೆ (ಕಾರ್ ಕಳ, ಮಳೆಯ ಊರು). ಇನ್ನು ಕರಿಕಲ್ಲಿನ ಕಾರಣವಾಗಿ ಕಾರ್ಕಳ ಎಂಬ ಹೆಸರು ಬಂದಿದೆ ಎಂಬ ವಾದವೂ ಇದೆ.
ನೀವು ಆಗುಂಬೆ ಘಾಟಿಯ ಕೆಳಭಾಗದ ಸೋಮೇಶ್ವರದಿಂದ ತಾಲೂಕನ್ನು ಮಧ್ಯಭಾಗದಿಂದ ಸೀಳಿ ಮುದ್ರಾಡಿ, ವರಂಗ, ಕಾರ್ಕಳ ಹೀಗೆ ಬಜಗೋಳಿ ಮಾಳದವರೆಗೆ ಪಯಣ ಬೆಳೆಸಿದರೆ, ಎಡಕ್ಕೆ ಪಶ್ಚಿಮ ಘಟ್ಟ ಶ್ರೇಣಿಯನ್ನು ತಬ್ಬಿ ಹಿಡಿದು ಸಾಗುವ ಕಾರ್ಕಳ ತಾಲೂಕಿನ ಮೋಹಕ ಹಸಿರು ಸೌಂದರ್ಯವನ್ನು ಆಸ್ವಾದಿಸಬಹುದು. ತಾಲೂಕಿನ ಪೂರ್ವ ಭಾಗವು ಪಶ್ಚಿಮ ಘಟ್ಟದ ದಟ್ಟ ಪ್ರಭಾವಕ್ಕೆ ಒಳಗಾಗಿದ್ದರೆ, ನಿಮ್ಮ ಸಂಚಾರದ ದಾರಿಯ ಬಲಕ್ಕೆ ಬಂದಂತೆ ಈ ಹಸಿರು ಸಂಪತ್ತು ಕಡಿಮೆಯಾಗುತ್ತಾ ಕಗ್ಗಲ್ಲಿನ ವಿಸ್ತಾರವಾದ ಪಾದೆಗಳು, ಬಂಡೆಗಳು, ಬೆಟ್ಟಗಳು ಅವುಗಳ ನಡುವೆ ಅಲ್ಲಲ್ಲಿ ಒಂದಿಷ್ಟು ಗದ್ದೆ ಬಯಲುಗಳನ್ನು ಕಾಣಬಹುದು.

ಕರಿಕಲ್ಲಿನ ಊರು ಕಾರ್ಕಳದ ಅನೇಕ ಭಾಗಗಳಲ್ಲಿ ಕಗ್ಗಲ್ಲಿನದೇ ಸಂಪತ್ತು, ಗ್ರಾನೈಟ್ ಕಲ್ಲುಗಳು ಇಲ್ಲಿ ಚಿನ್ನ ಇದ್ದ ಹಾಗೆ (ಈಗಂತೂ ಆರ್ಥಿಕ ದೃಷ್ಟಿಯಿಂದ ಈ ಕಗ್ಗಲ್ಲುಗಳು ಚಿನ್ನವೇ). ಹಾಗೆಯೇ ಇಲ್ಲಿನ ಕಲ್ಲುಗಳು ಊರ ಪರವೂರಿನ ಅನೇಕ ಪ್ರತಿಮೆಗಳಿಗೆ ಜನ್ಮ ನೀಡಿವೆ. ಇಲ್ಲಿನ ಗುಮ್ಮಟಬೆಟ್ಟದ ಬಾಹುಬಲಿ ಮೂರ್ತಿ, ಧರ್ಮಸ್ಥಳದ ಬಾಹುಬಲಿ, ಅಲ್ಲದೆ ಹೊರ ರಾಜ್ಯಗಳಿಗೆ ಹೋದ ಅನೇಕ ಬೃಹತ್ ಶಿಲಾ ಮೂರ್ತಿಗಳು ಇಲ್ಲಿನ ಕಲ್ಲುಗಳಲ್ಲೇ ಹುಟ್ಟಿ ಅರಳಿದವು.
ತಾಲೂಕಿನ ಉತ್ತರ ತುದಿಯಿಂದ ದಕ್ಷಿಣ ತುದಿಯವರೆಗೆ ಸಂಚರಿಸುತ್ತಾ ಹೋಗುವಾಗ ಏಕಕಾಲಕ್ಕೆ ನೀವು ಇಲ್ಲಿನ ರೋಚಕ ಚಾರಿತ್ರಿಕ ವೈಶಿಷ್ಟ್ಯಗಳಿಗೂ ಮುಖಾಮುಖಿಯಾಗುತ್ತಾ ಸಾಗುತ್ತೀರಿ. ಇಲ್ಲಿನ ಪ್ರತಿಮೆಗಳು, ಬಸದಿಗಳು, ಗುಡಿಗಳು, ಮಾನಸ್ತಂಭಗಳು, ಕೆರೆ ಸರೋವರಗಳು ಹೀಗೆ ವಿಶಿಷ್ಟವಾದ ಕಲೆ ಸಾಂಸ್ಕೃತಿಕ ಕೇಂದ್ರಗಳು, ಇತಿಹಾಸದ ಕಥನಗಳು ಒಂದು ಕ್ಷಣ ನಿಮ್ಮನ್ನು ಭಾವುಕಗೊಳಿಸದಿರವು, ಸಾವಿರಾರು ವರ್ಷಗಳ ಇತಿಹಾಸದ ಹಿಂದಕ್ಕೆ ನಿಮ್ಮನ್ನು ಒಯ್ಯದಿರವು.
1791 ರಲ್ಲಿ ಮರಾಠಾ ಸೈನ್ಯ ಶೃಂಗೇರಿಯ ಮಠದ ಮೇಲೆ ದಾಳಿ ಮಾಡಿ ಲೂಟಿ ಮಾಡಿದಾಗ ಅಂದಿನ ಶೃಂಗೇರಿ ಮಠದ ಜಗದ್ಗುರುಗಳಾದ ಮೂರನೆಯ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಮಠವನ್ನು ತೊರೆದು ಆಶ್ರಯ ಪಡೆದುದು ಕಾರ್ಕಳದಲ್ಲಿ. ಆಗ ಧಾಳಿಕೋರರನ್ನು ಓಡಿಸಿ, ಮಠವನ್ನು ದುರಸ್ತಿ ಮಾಡಿ, ಅದಕ್ಕೆ ರಕ್ಷಣೆ, ಉಂಬಳಿ ನೀಡಿ ಸ್ವಾಮೀಜಿಗಳು ಮಠಕ್ಕೆ ಮರಳುವಂತೆ ಮಾಡಿದ್ದು ಟಿಪ್ಪುಸುಲ್ತಾನ್.
1880 ರ ಕಾಲಘಟ್ಟದಲ್ಲಿಯೇ ಹೆಣ್ಣುಮಕ್ಕಳ ಬಗೆಗಿನ ಸಮಾಜದ ಪ್ರತಿಗಾಮಿ ಆಲೋಚನೆಗಳನ್ನು ಧಿಕ್ಕರಿಸಿ ನಿರಾಶ್ರಿತ ಮಹಿಳೆಯರು ಮತ್ತು ಅನಾಥ ಬಾಲಕಿಯರ ಶಿಕ್ಷಣ ಮತ್ತು ಏಳಿಗೆಗೆ ಅಸಾಧಾರಣ ಕೆಲಸ ಮಾಡಿ ಜಗತ್ತಿನ ಗೌರವಕ್ಕೆ ಪಾತ್ರರಾದ ಸಮಾಜ ಸುಧಾರಕಿ ʼಪಂಡಿತಾ ರಮಾಬಾಯಿ ಸರಸ್ವತಿʼಯವರು (1858-1922) ಇದೇ ಕಾರ್ಕಳದವರು. ಕಾರ್ಕಳದಿಂದ ಸುಮಾರು 6 ಕಿ.ಮೀ ದೂರದ ಪಶ್ಚಿಮ ಘಟ್ಟದ ಮಡಿಲಲ್ಲಿರುವ ಗಂಗಾಮೂಲದ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ರಮಾಬಾಯಿಯವರು 16 ರ ಹರೆಯದಲ್ಲಿಯೇ ಕಲ್ಕತ್ತಾಕ್ಕೆ ತೆರಳಿ, ಆನಂತರ ಇಂಗ್ಲೆಂಡ್, ಅಮೆರಿಕಾ, ಜಪಾನ್ ಮೊದಲಾದ ದೇಶಗಳಲ್ಲಿ ಸಂಚರಿಸಿ, ಭಾರತಕ್ಕೆ ಮರಳಿ ಸಮಾಜ ಸುಧಾರಣೆಯ ಕೆಲಸಕ್ಕೆ ತಮ್ಮ ಬದುಕು ಮುಡಿಪಾಗಿಟ್ಟವರು.
ಜೈನರ ಆಳ್ವಿಕೆಯಲ್ಲಿ ಕಾರ್ಕಳ
ಸರಿ ಸುಮಾರು ಸಾವಿರ ವರ್ಷಗಳಿಂದಲೂ ಆಳುಪರು, ಶಾಂತಾರರು, ಅಜಿಲರು, ಚೌಟರು, ತೋಳಹರು, ಕಳಸಕಾರ್ಕಳದರಸರು ಹೀಗೆ ನಾನಾ ರಾಜರುಗಳ ಆಳ್ವಿಕೆಗೆ ಒಳಪಟ್ಟ ಈ ಭೂಪ್ರದೇಶ ತನ್ನ ಆಯಕಟ್ಟಿನ ಜಾಗದ ಕಾರಣವಾಗಿಯೂ, ಯುದ್ಧಗಳ ಸಂಕಟಗಳಿಗೆ ವಿಶೇಷವಾಗಿ ಈಡಾಗದೆ ಶಾಂತವಾಗಿ ಉಳಿದುಕೊಂಡ ಪ್ರದೇಶ. ಹಾಗಾಗಿಯೇ, ಇಲ್ಲಿ ಹಲವು ಶತಮಾನಗಳಿಂದ ವಿಶಿಷ್ಟ ಕಲೆ ಸಂಸ್ಕೃತಿ ಬೆಳೆದು ಬರಲು ಮತ್ತು ಅವು ಹೆಚ್ಚು ಹಾನಿ ಅನುಭವಿಸದೆ ಹೊಚ್ಚ ಹೊಸದರಂತೆ ಉಳಿದುಕೊಳ್ಳಲು ಕಾರಣವಾಯಿತು.
ಸುಮಾರು ಅರ್ಧ ಸಹಸ್ರಮಾನ ಹಿಂದೆ ಈ ಭಾಗ ಜೈನ ರಾಜರುಗಳ ಆಳ್ವಿಕೆಯಲ್ಲಿ ಏಳಿಗೆಯನ್ನು ಕಂಡಿತು. ಆ ಕಾಲಕ್ಕೆ ಘಟ್ಟದ ಕೆಳಗಿನ ಮಾತ್ರವಲ್ಲ ಘಟ್ಟದ ಮೇಲಿನ ಕೆಲವು ಭಾಗಗಳೂ ಕಾರ್ಕಳ ರಾಜ್ಯಕ್ಕೇ ಸೇರಿದ್ದು ಕಳಸ, ಕೆರವಾಸೆ, ಕಾರ್ಕಳ ಮೊದಲಾದ ಊರುಗಳನ್ನು ತಮ್ಮ ರಾಜಧಾನಿ ಮಾಡಿಕೊಂಡು ಇಲ್ಲಿನ ರಾಜರು ಅಳಿದ್ದಿದೆ. ಹೊಂಬುಚ, ವರಂಗ, ಕಾರ್ಕಳ, ಅಳದಂಗಡಿ, ವೇಣೂರು, ಧರ್ಮಸ್ಥಳ, ಪಂಜ, ಕುಕ್ಕೆ ಸುಬ್ರಹ್ಮಣ್ಯ ಭಾಗದ ತನಕವೂ ಜೈನ ಸಂಸ್ಕೃತಿಯ ಪಟ್ಟಿ ಬೆಳೆದಿದ್ದು ಈ ಭಾಗದಲ್ಲಿ ಜೈನ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಲ್ಲೆಲ್ಲ ಅನೇಕ ಜೈನ ತೀರ್ಥಕ್ಷೇತ್ರಗಳೂ ಜೈನ ಇತಿಹಾಸದ ಪಳೆಯುಳಿಕೆಗಳೂ ಇವೆ.
ವಿಶಾಲ ಕೆರೆಯ ಮಧ್ಯೆ ಫಳಫಳಿಸುವ ಪದ್ಮಾವತಿ ದೇವಿಯ ಬಸದಿ ಇರುವ ವರಂಗದ ʼಕೆರೆ ಬಸದಿʼ ನಿರ್ಮಾಣವಾದುದು 12 ನೇ ಶತಮಾನದಲ್ಲಿ. ಕಾರ್ಕಳವನ್ನು ಸುಮಾರು 14 ರಿಂದ 16 ನೇ ಶತಮಾನದವರೆಗೆ ಶಾಂತಾರ ಮತ್ತು ಭೈರರಸರು ಆಳಿದ್ದು, ಇವರು ಜೈನ ಧರ್ಮದ ಪ್ರಮುಖ ಪೋಷಕರಾಗಿದ್ದರು. 450 ಎಕರೆ ವಿಸ್ತೀರ್ಣದ ರಾಮಸಮುದ್ರ ಸರೋವರ 14 ನೇ ಶತಮಾನದಲ್ಲಿ ರಾಜವೀರಭೈರವನಿಂದ ನಿರ್ಮಾಣವಾದುದು (ಸಂಜೆ ಹೊತ್ತು ಚತುರ್ಮುಖ ಬಸದಿಯ ಬೆಟ್ಟದಲ್ಲಿ ಕುಳಿತು ನೀವು ರಾಮಸಮುದ್ರವನ್ನು ನೋಡಬೇಕು. ಅದೊಂದು ಅವರ್ಣನೀಯ ಅನುಭವ). ವೀರಪಾಂಡ್ಯ ಭೈರರಸನ ಕಾಲದಲ್ಲಿ, 1432 ರಲ್ಲಿ 42 ಅಡಿ ಎತ್ತರದ ಕಾರ್ಕಳ ಬಾಹುಬಲಿಯ ಏಕಶಿಲಾ ಮೂರ್ತಿಯ ನಿರ್ಮಾಣವಾಯಿತು. ಮೂಡಬಿದಿರೆಯ ಸಾವಿರಕಂಬದ ಬಸದಿಯ ನಿರ್ಮಾಣ 1430 ರಲ್ಲಿ ಆರಂಭವಾಗಿ 1462 ರಲ್ಲಿ ಪೂರ್ಣಗೊಂಡಿತು. ವಿಶಾಲ ಆನೆಕೆರೆಯ ಮಧ್ಯೆ 1545 ರಲ್ಲಿ ಚತುರ್ಮುಖ ಕೆರೆಬಸದಿ ನಿರ್ಮಾಣಗೊಂಡಿತು. ಇಮ್ಮಡಿ ಭೈರರಸ 1586 ರಲ್ಲಿ ಬೆಟ್ಟದ ಮೇಲಿನ ಚತುರ್ಮುಖ ಬಸದಿ ನಿರ್ಮಿಸಿದ. ಇವರ ಕಾಲದಲ್ಲಿಯೇ ಅನಂತಶಯನ ಮತ್ತು ವೆಂಕಟರಮಣ ದೇವಾಲಯಗಳು ನಿರ್ಮಾಣಗೊಂಡವು.
ಇಲ್ಲಿ ಆಳಿದ ಅರಸರು ಧರ್ಮಭೀರುಗಳಾಗಿದ್ದ ಹಾಗೆಯೇ, ಪರಧರ್ಮ ಸಹಿಷ್ಣುಗಳು ಮಾತ್ರವಲ್ಲ ಪರ ಧರ್ಮ ಪೋಷಕರೂ ಆಗಿದ್ದರು. ಇದನ್ನು ಇಲ್ಲಿನ ಅನೇಕ ಧಾರ್ಮಿಕ-ಸಾಂಸ್ಕೃತಿಕ ಕೇಂದ್ರಗಳು ಪುಷ್ಟೀಕರಿಸುತ್ತವೆ. ಇಮ್ಮಡಿ ಭೈರರಸ ಜೈನ ಧರ್ಮೀಯನಾಗಿದ್ದರೂ ಈತನ ನೆರವಿನಿಂದಲೇ ಇಲ್ಲಿನ ಗೌಡಸಾರಸ್ವತ ಬ್ರಾಹ್ಮಣ ಸಮುದಾಯದ ʼಪಡುತಿರುಪತಿʼ ಎಂದು ಖ್ಯಾತವಾದ ವೆಂಕಟರಮಣ ದೇವಾಲಯ ನಿರ್ಮಾಣವಾಯಿತು ಎನ್ನಲಾಗಿದೆ (1537). ಗೋವಾದಲ್ಲಿ ಪೋರ್ಚುಗೀಸರು ಅನ್ಯ ಧರ್ಮೀಯರ ಮೇಲೆ ನಡೆಸುತ್ತಿದ್ದ ದಬ್ಬಾಳಿಕೆಯನ್ನು ಸಹಿಸಲಾಗದೆ ಅಲ್ಲಿಂದ ಪಲಾಯನ ಗೈದ ಸಮುದಾಯಗಳಲ್ಲಿ ಈ ಗೌಡಸಾರಸ್ವತ ಸಮುದಾಯವೂ ಒಂದು. ಜೈನ ಧರ್ಮಕ್ಕೆ ಸೇರದ ಇಲ್ಲಿನ ಅನಂತಶಯನ ದೇಗುಲ ಕೂಡಾ ಇದೇ ಕಾಲಕ್ಕೆ ನಿರ್ಮಾಣವಾಯಿತು (1567). ಅದಕ್ಕೂ ನೆರವು ನೀಡಿದ್ದು ಜೈನ ಅರಸ.
ಮತೀಯ ಸಾಮರಸ್ಯ
ಕಾರ್ಕಳದ ಬಗ್ಗೆ ನನಗೆ ಒಂದು ರೀತಿಯ ವಿಶೇಷ ಅಭಿಮಾನ ಹಾಗೂ ಆದರ. ಇದಕ್ಕೆ ಮುಖ್ಯ ಕಾರಣ, ಕಾರ್ಕಳದಲ್ಲಿ ಬಹುಧರ್ಮೀಯರಿದ್ದಾರೆ ಮತ್ತು ಶತಮಾನ ಕಾಲದಿಂದ ಅವರೆಲ್ಲರೂ ಸೌಹಾರ್ದದಿಂದ ಬದುಕಿದ್ದಾರೆ. ಇಲ್ಲಿ ಹಿಂದೂಗಳಿದ್ದಾರೆ (ಗೌಡ ಸಾರಸ್ವತರು, ರಾಜಾಪುರ ಸಾರಸ್ವತರು, ಚಿತ್ರಾಪುರ ಸಾರಸ್ವತ ಬ್ರಾಹ್ಮಣರು, ಚಿತ್ಪಾವನರು, ಬಂಟರು, ಬಿಲ್ಲವರು, ಕೊರಗರು), ಮುಸ್ಲಿಮರಿದ್ದಾರೆ, ಕ್ರೈಸ್ತರಿದ್ದಾರೆ, ವಿಶೇಷವಾಗಿ ಇಲ್ಲಿ ಜೈನರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.
ಇವರೆಲ್ಲರಿಗೂ ತಮ್ಮದೇ ಆದ ಶ್ರದ್ಧಾಕೇಂದ್ರಗಳೂ ಇವೆ. ಹಿಂದೂಗಳಿಗೆ ಅನಂತಶಯನ ದೇಗುಲವಿದ್ದರೆ, ಗೌಡಸಾರಸ್ವತ ಸಮುದಾಯಕ್ಕೆ ಕಾರ್ಕಳ ವೆಂಕಟರಮಣ ದೇವಸ್ಥಾನವಿದೆ (ವೆಂಕಟರಮಣ ದೇವಾಲಯದ ದೀಪೋತ್ಸವ ತುಂಬಾ ಪ್ರಸಿದ್ಧ. ಅಲ್ಲದೆ, ಇಲ್ಲಿ ಪ್ರತೀ ವಾರವೂ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ವರ್ಷ ವರ್ಷಗಳಿಂದಲೂ ನಡೆದು ಬರುತ್ತಿದೆ). ಮುಸ್ಲಿಮರಿಗೆ ತಾಲೂಕು ಆಫೀಸ್ ಬಳಿಯ ಅತ್ಯಾಧುನಿಕ ಮತ್ತು ಆಕರ್ಷಕ ಮಸೀದಿಯಿದೆ, ಸಾಲ್ಮರದಿಂದ ಕಾರ್ಕಳ ಪೇಟೆ ಪ್ರವೇಶಿಸುವಾಗಲೂ ಒಂದು ಮಸೀದಿ ಸಿಗುತ್ತದೆ. ಜೈನರಿಗಂತೂ ವರಂಗ ಕೆರೆಬಸದಿಯಿಂದ ಹಿಡಿದು, ಕಾರ್ಕಳ ಗುಮ್ಮಟ ಬೆಟ್ಟದ ಬಾಹುಬಲಿ, ರಾಮಸಮುದ್ರ, ಆನೆಕೆರೆಯ ಕೆರೆಬಸದಿ, ಹಿರಿಯಂಗಡಿಯ ಬಸದಿ ಹೀಗೆ ಲೆಕ್ಕವಿಲ್ಲದಷ್ಟು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಕೇಂದ್ರಗಳಿವೆ. ಇನ್ನು ಕ್ರೈಸ್ತರಿಗೆ ಅತ್ತೂರಿನ ಸೈಂಟ್ ಲಾರೆನ್ಸ್ ಇಗರ್ಜಿಯಿದೆ. 1759 ರಷ್ಟು ಹಿಂದಿನ ಇತಿಹಾಸ ಹೊಂದಿರುವ ಇದನ್ನು 2016 ರಲ್ಲಿ ಪೋಪ್ ಫ್ರಾನ್ಸಿಸ್ ಮೈನರ್ ಬ್ಯಾಸಿಲಿಕಾ ಸ್ಥಾನಕ್ಕೆ ಏರಿಸಿದರು.
ಪ್ರತೀ ವರ್ಷ ಜನವರಿ ತಿಂಗಳಾಂತ್ಯಕ್ಕೆ ಅತ್ತೂರಿನ ಇಗರ್ಜಿಯಲ್ಲಿ ಸಾಂತ್ ಮಾರಿ ನಡೆಯುತ್ತದೆ. ಇದರಲ್ಲಿ ದೂರದೂರದಿಂದ ಕ್ರೈಸ್ತ ಬಾಂಧವರು ಮಾತ್ರವಲ್ಲ, ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳು ಕಾಣಿಸಿಕೊಳ್ಳುತ್ತಾರೆ. ದೇವರು ಯಾವ ಮತಧರ್ಮದವರಾದರೇನು, ಒಟ್ಟಿನಲ್ಲಿ ತಮ್ಮ ಕಷ್ಟ ಪರಿಹರಿಸಿದರಾಯಿತು ಎಂಬ ಮುಗ್ಧ ಮನೋಭಾವನೆಯ ಮತ್ತು ನಿಜ ಅರ್ಥದಲ್ಲಿ ಭಾರತೀಯ ಧಾರ್ಮಿಕ ಸಾಮರಸ್ಯ ಪರಂಪರೆಯ ಪ್ರತಿನಿಧಿಗಳಾದ ಅವರೂ ಮೊಂಬತ್ತಿ ಉರಿಸಿ, ಕಾಣಿಕೆ ಹಾಕಿ ದೈವಿಕಶಕ್ತಿಗೆ ನಡೆದುಕೊಳ್ಳುತ್ತಾರೆ.
ಸಾಂತ್ ಮಾರಿಯಲ್ಲಿ ನಮ್ಮ ಸಂತೆ ವ್ಯಾಪಾರ
ಅತ್ತೂರು ಸಾಂತ್ ಮಾರಿಯ ದಿನ ನಮ್ಮ ಕಾಲೇಜಿಗೂ ರಜಾ ಕೊಡುತ್ತಿದ್ದರು. ಹೇಗೂ ರಜೆಯಲ್ಲವೇ, ಸಾಮಾನ್ಯವಾಗಿ ಕಾರ್ಕಳದ ದೇಗುಲಗಳ ಜಾತ್ರೆ ಸಮಯ ಸಣ್ಣದೊಂದಾದರೂ ಹಾಜರಿ ಹಾಕುವ ಅಭ್ಯಾಸ ಇರುವ ನಾನು, ಕಾರ್ಕಳದ ಮಸೀದಿಯ ಬಳಿಯ ರಸ್ತೆ ಹಿಡಿದು ಅತ್ತೂರಿಗೆ ಸೈಕಲ್ ನಲ್ಲಿ ಹೊರಟುಬಿಡುತ್ತಿದ್ದೆ. ನಾಸ್ತಿಕನಾದ ನನ್ನಂಥವರಿಗೆ ಆಗ ಅಲ್ಲಿ ವಿಶೇಷವಾದುದೇನೂ ಇಲ್ಲ. ಬೆಟ್ಟದ ಮೇಲೆ ಅನೇಕರು ಭಕ್ತಿಯಿಂದ ನಡೆದುಕೊಳ್ಳುವ ಒಂದು ಪುರಾತನ ಇಗರ್ಜಿ ಅಷ್ಟೇ. ಆದರೆ ಎಲ್ಲ ಜಾತ್ರೆಗಳಂತೆಯೇ ಇಲ್ಲೂ ಪ್ರಮುಖ ಆಕರ್ಷಣೆ ಎಂದರೆ ಸಂತೆ. ಹಾಗೆಯೇ ಜನಜಂಗುಳಿ, ಮೇಣದ ಬತ್ತಿ ಉರಿಸುವ ಸರ್ವಧರ್ಮದ ಭಕ್ತಾದಿಗಳು, ಏನಾದರೂ ಬಿಡಿಗಾಸು ಸಿಕ್ಕೀತೋ ಎಂದು ಕಾದು ಕೂರುವ ಭಿಕ್ಷುಕರ ದಂಡು, ಹುಡುಗಿಯರತ್ತ ವಾರೆ ನೋಟ ಹರಿಸಿ ಖುಷಿಪಡಲೆಂದೇ ಬಂದು ಕೆಲವೇ ಗಂಟೆಗಳಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಹೀಗೆ ಒಟ್ಟು ಹಲವು ಕಿಲೋಮೀಟರ್ ಚಪ್ಪಲಿ ಸವೆಸುವ ಪಡ್ಡೆಗಳು.
ಅತ್ತೂರಿನಿಂದ ಪಶ್ಚಿಮದ ಹಾದಿ ಹಿಡಿದರೆ ಅದು ಕುದುರೆಮುಖ ಪಡುಬಿದ್ರಿಯನ್ನು ಸಂಪರ್ಕಿಸುವ ಹೆದ್ದಾರಿಯ ದೂಪದಕಟ್ಟೆ ಎಂಬಲ್ಲಿಗೆ ಹೋಗುತ್ತದೆ. ಮಂಗಳೂರು ಭಾಗದವರು ಕಾರ್ಕಳದವರ ಹಾಗೆ ಈ ಚರ್ಚ್ ಇರುವ ಜಾಗವನ್ನು ʼಅತ್ತೂರುʼ ಎನ್ನುವುದಿಲ್ಲ, ಅವರು ಹೇಳುವುದು ʼದೂಪದಕಟ್ಟೆʼ ಎಂದೇ. ಸಾಂತ್ ಮಾರಿಯ ಆ ದಿನಗಳಲ್ಲಿ ʼದೂಪದಕಟ್ಟೆʼ ಎಂಬ ಬೋರ್ಡ್ ಹಾಕಿಕೊಂಡ ಅನೇಕ ಬಸ್ ಗಳು ಮಂಗಳೂರು ಮತ್ತು ದೂಪದಕಟ್ಟೆ ನಡುವೆ ಓಡಾಡುವುದನ್ನು ಕಾಣಬಹುದು.
ಅತ್ತೂರು ಜಾತ್ರೆಯ ಸಂದರ್ಭದಲ್ಲಿ ಅಂಗಡಿ ವ್ಯಾಪಾರದ ಭರಾಟೆ ಜೋರಾಗಿಯೇ ಇರುತ್ತದೆ. ಎಲ್ಲೆಲ್ಲಿಂದಲೋ ಎಲ್ಲ ಮಣಿಸರಕು ಇತ್ಯಾದಿ ಅಂಗಡಿ ಹಾಕುವವರು ಬರುತ್ತಾರೆ. ಅಂಗಡಿಯ ನೆಲವನ್ನು ಮೊದಲೇ ಪಂಚಾಯತ್ ನವರು ಹರಾಜು ಹಾಕುತ್ತಾರೆ. ನೆಲಬಾಡಿಗೆ ಆಧಾರದಲ್ಲಿ ಅಂಗಡಿಗೆ ಜಾಗ ಪಡೆಯಬಹುದು.
1981 ರ ಜನವರಿ ತಿಂಗಳು. ನಾವು ಕೆಲವರು ಗೆಳೆಯರಿಗೆ ಅಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡಿ ಭಾರೀ ಲಾಭ ಮಾಡುವ ಉಮೇದು ಬಂತು. ನಮ್ಮ ಗೆಳೆಯರು ಎಂದರೆ ಅದು ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಸರ್ವಜನಾಂಗದ ಶಾಂತಿಯ ತೋಟ. ಯಾವ ಅಂಗಡಿ ಹಾಕುವುದು? ಸಾಂತ್ ಮಾರಿಯಲ್ಲಿ ಸಂಜೆ ಹೊತ್ತು ಬ್ರೆಡ್ ಆಮ್ಲೆಟ್ ಗೆ ಬೇಡಿಕೆ ಜಾಸ್ತಿ. ಉಳಿದ ಹೊತ್ತಿನಲ್ಲಿ ಐಸ್ ಕ್ರೀಂ. ಹಾಗಾಗಿ ಬ್ರೆಡ್ ಆಮ್ಲೆಟ್ ಮತ್ತು ಐಸ್ ಕ್ರೀಂ ಅಂಗಡಿ ಹಾಕುವುದು ಎಂದಾಯಿತು.

ಅಂಗಡಿಗೆ ನೆಲ ಹರಾಜು ಹಾಕುವ ದಿನ ನಾವು ಕೆಲವರು ಅಲ್ಲಿಗೆ ಹೋದೆವು. ಜೀವನದಲ್ಲಿ ಮೊದಲ ಬಾರಿ ಅಂಗಡಿ ಹಾಕುತ್ತಿರುವವರು ನಾವು. ಬಿಡಿಗಾಸಿಗೂ ಅಪ್ಪ ಅಮ್ಮನನ್ನು ಅವಲಂಬಿಸಿದ ಬಡವರ ಬಳಿ ಹರಾಜಿನಲ್ಲಿ ಜಾಗ ಕೊಂಡುಕೊಳ್ಳುವಷ್ಟು ಹಣ ಎಲ್ಲಿಂದ? ಹಾಗಾಗಿ ಪಂಚಾಯತ್ ನವರಲ್ಲಿ ನಮ್ಮ ಆರ್ಥಿಕ ದುಸ್ಥಿತಿಯನ್ನು ಹೇಳಿಕೊಂಡು, ಅಂಗಾಲಾಚಿ, ಕಡಿಮೆ ಬಾಡಿಗೆಯಲ್ಲಿ ನೆಲ ಕೊಂಡುಕೊಂಡೆವು.
ಅಂಗಡಿ ಎಂದರೆ ಮಡಲಿನ ತಡಿಕೆ, ಮಡಲಿನ ಚಪ್ಪರ. ಜಾತ್ರೆಯ ಮುನ್ನಾ ದಿನ ನಮ್ಮಲ್ಲಿ ಕೆಲವರು ನೈಟ್ ವಾಚ್ ಮನ್ ಆಗಿ ಅಲ್ಲಿ ತಳವೂರಿದರು. ನಮ್ಮ ಅಂಗಡಿಗೆ ತಾಗಿಕೊಂಡಂತೆ ಇದ್ದುದು ಕಬ್ಬಿನ ಜ್ಯೂಸಿನ ಅಂಗಡಿ. ರಾತ್ರಿ ನಮ್ಮ ಗೆಳೆಯರು ಮಡಲಿನ ಗೋಡೆಯ ಅಡಿಯಿಂದ ಒಂದೊಂದೇ ಕಬ್ಬು ಎಳೆದು ಜಗಿದ್ದೇ ಜಗಿದದ್ದು. ರಾತ್ರಿ ಬೆಳಗಾಗುವಾಗ ದೊಡ್ಡ ಸಂಖ್ಯೆಯಲ್ಲಿ ಕಬ್ಬು ನಾಶವಾಗಿರಬಹುದು. ಪಾಪ ಅವನಿಗೆ ಎಷ್ಟು ನಷ್ಟವಾಯಿತೋ ಏನೋ.
ಮಾರನೇ ದಿನ ನಾವೆಲ್ಲ ಅಂಗಡಿಯಲ್ಲಿ ಸೇರಿದೆವು. ಆಮ್ಲೆಟ್ ಮಾಡುವುದಕ್ಕೆಂದು ಸಂಬಳದ ಮೇಲೆ ಒಬ್ಬರು ಪರಿಣತರನ್ನು ನೇಮಿಸಿದೆವು. ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ. ಒಬ್ಬರು ತಿಂಡಿ ಪ್ಲೇಟ್‌ನಲ್ಲಿ ಹಾಕಿ ಕೊಡುವುದು, ಇನ್ನೊಬ್ಬರು ಹಣ ತೆಗೆದುಕೊಳ್ಳುವುದು, ಮತ್ತೊಬ್ಬರು ಮೈಕ್ ನಲ್ಲಿ ಅನೌನ್ಸ್ ಮಾಡುವುದು ಹೀಗೆ. ಅಂಗಡಿಯಲ್ಲಿ ನಮ್ಮ ಬಳಿ ಅತ್ಯಾಧುನಿಕ ಎಫ್ ಎಂ ರೇಡಿಯೋ ವ್ಯವಸ್ಥೆ ಇದ್ದು ವಯರ್‌ಲೆಸ್ ಬಳಸಿ ನಾವು ಪ್ರಚಾರ ಮಾಡುತ್ತಿದ್ದೆವು. ಇತರರ ಬಳಿ ಇರದ ಈ ಎಫ್ ಎಂ ವ್ಯವಸ್ಥೆ ದೊಡ್ಡ ಆಕರ್ಷಣೆಯಾಗಿತ್ತು. ಜನರನ್ನು ಸೆಳೆಯಲು ಇದೂ ಕಾರಣವಾಯಿತು.
ಜಹೂರನಿಗೆ, ಕೊಂಚ ದೂರದಲ್ಲಿ ನಿಂತಿರುವ ಐಸ್ ಕ್ರೀಂ ವ್ಯಾನ್‌ನಿಂದ ತಲಾ ನೂರರಂತೆ ಐಸ್ ಕ್ರೀಂ ಕೊಂಡು ತರುವುದು ಕೆಲಸ. ಆ ವ್ಯಾನಿನವರು ಇಪ್ಪತ್ತ ನಾಲ್ಕರ ನಾಲ್ಕು ಪೊಟ್ಟಣ ಮತ್ತು ನಾಲ್ಕು ಐಸ್ ಕ್ರೀಂ ಬಿಡಿಯಾಗಿ ಕೊಡುತ್ತಿದ್ದರು. ತರುವಾಗ ನಾಲ್ಕು ಪೊಟ್ಟಣ ಮಾತ್ರ ತಂದು ಬಿಡಿಯಾಗಿ ಕೊಟ್ಟ ನಾಲ್ಕನ್ನು ಜಹೂರ ದಾರಿಯಲ್ಲಿಯೇ ಖಾಲಿಮಾಡಿ ಬರುತ್ತಿದ್ದ. ಈ ಸತ್ಯ ತಿಳಿಯುವಾಗ ನಮಗೆ ತಡವಾಗಿತ್ತು.
ಸಂಜೆಯಾಗುವಾಗ ಬ್ರೆಡ್ ಆಮ್ಲೆಟ್ ಗೆ ವಿಪರೀತ ಬೇಡಿಕೆ ಏರುತ್ತಿತ್ತು. ಎಷ್ಟು ಬೇಡಿಕೆ ಎಂದರೆ ಆಮ್ಲೆಟ್ ತಯಾರಿಸುವವನಿಗೆ ಸುಸ್ತಾಗಿ ಹೋಗುತ್ತಿತ್ತು. ಎಷ್ಟು ಸುಸ್ತು ಎಂದರೆ, ಆ ದಿನದ ಸಂಬಳ ಪಡೆದು ಹೋದ ಅವ ಮಾರನೇ ದಿನ ಇತ್ತ ತಲೆಹಾಕಲಿಲ್ಲ. ಒಟ್ಟಿನಲ್ಲಿ ನಾವೇ ಆಮ್ಲೆಟ್ ಮಾಡುವ ಪರಿಸ್ಥಿತಿ ತಲೆದೋರಿತು. ಜೀವನದಲ್ಲಿ ಮೊದಲ ಬಾರಿ ಆಮ್ಲೆಟ್ ಮಾಡಿದರೆ ಕತೆ ಏನಾಗಬಹುದು? ವ್ಯಾಪಾರ ಇಳಿಮುಖವಾಯಿತು.
ಅಂಗಡಿ ಒಂದು. ಪಾಲು ಬಂಡವಾಳಗಾರರು ಹತ್ತಿಪ್ಪತ್ತು ಮಂದಿ! ಮೂರು ದಿನದ ವ್ಯಾಪಾರದಲ್ಲಿ ಸುಮಾರು ಐನೂರು ರುಪಾಯಿ ಲಾಭವಾಗಿತ್ತು. ಎಲ್ಲರಿಗೂ ಹಂಚಿದಾಗ ಸಿಕ್ಕಿದ್ದು ಹತ್ತಿಪ್ಪತ್ತು ರುಪಾಯಿ! ನಷ್ಟವಾಗಲಿಲ್ಲ ಎನ್ನುವುದೇ ದೊಡ್ಡ ಸಮಾಧಾನ. ಅಂಗಡಿ ಮಾಲೀಕರು ತಾವು ಮಾರಿದ್ದಕಿಂತ ತಿಂದದ್ದೇ ಹೆಚ್ಚಾದರೆ ಇನ್ನೇನಾಗುತ್ತದೆ? ಅದೇನೇ ಇರಲೀ, ಇಂದಿಗೆ ನಲವತ್ತೈದು ವರ್ಷ ಹಿಂದಿನ ಅತ್ತೂರು ಸಾಂತ್ ಮಾರಿ ಜಾತ್ರೆಯ ನಮ್ಮ ಬ್ರೆಡ್ ಆಮ್ಲೆಟ್ ಅಂಗಡಿಯ ವ್ಯಾಪಾರವಂತೂ ಅವಿಸ್ಮರಣೀಯ.
ಹಬ್ಬದೂಟ
ಕಾರ್ಕಳದ ಯಾವುದೇ ಭಾಗ ತೆಗೆದುಕೊಳ್ಳಿ. ಅಲ್ಲಿ ಜೈನರು, ಕ್ರೈಸ್ತರು, ಹಿಂದೂಗಳು, ಮುಸ್ಲಿಮರ ಒಂದೊಂದು ಮನೆಯನ್ನು ಕಾಣಬಹುದು. ಹಾಗಾಗಿ ಒಂದಿಲ್ಲೊಂದು ಹಬ್ಬಹರಿದಿನ, ಜಾತ್ರೆಗಳಿಂದ ಈ ಊರು ಸಾಂಸ್ಕೃತಿಕವಾಗಿ ಸದಾ ಜೀವಂತ.
ಶಾಲೆ ಕಾಲೇಜಿಗೆ ಹೋದರೂ ಅಲ್ಲಿನ ವಿದ್ಯಾರ್ಥಿಗಳಲ್ಲಿ ಈ ಎಲ್ಲ ಸಮುದಾಯವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳನ್ನು ಕಾಣಬಹುದು. ನನಗೆ ಕಾಲೇಜಿನಲ್ಲಿ ಸೈಯದ್ ಮಸೂದ್ ಎಂಬ ಮುಸ್ಲಿಂ ಚಿತ್ರಕಲಾವಿದ ಗೆಳೆಯನಿದ್ದರೆ, ಹೊರಗಡೆ ಮುಶ್ತಾಖ್, ಖಲೀಲ್, ಜಹೂರ್ ಮೊದಲಾದ ಮುಸ್ಲಿಂ ಗೆಳೆಯರಿದ್ದರು. ಕಾಲೇಜಿನಲ್ಲಿ ಮುನಿರಾಜ ರೆಂಜಾಳ, ಶ್ರೀವರ್ಮ ಅಜ್ರಿ ಮೊದಲಾದ ಜೈನ ಗೆಳೆಯರಿದ್ದರೆ, ನಮ್ಮ ಮನೆ ಪಕ್ಕದಲ್ಲೇ ಜಿನರಾಜ ಕಡಂಬರ ಮನೆಯಿದ್ದು ಅವರೊಂದಿಗೆ ನಮಗೆ ಹೆಚ್ಚಿನ ಒಡನಾಟವಿತ್ತು. ಇನ್ನು ಕ್ರೈಸ್ತ ಧರ್ಮೀಯರಾದ ನಕ್ರೆಯ ರೊನಾಲ್ಡ್ ಫೆರ್ನಾಂಡಿಸ್ ಮತ್ತು ಕಣಂಜಾರಿನ ಇನಾಸ್ ಮಿನೇಜಸ್ ನನಗೆ ಕಾಲೇಜು ಮಿತ್ರರಾಗಿದ್ದರು.
ದೀಪಾವಳಿ ಬಂತೆಂದರೆ ಮೂರು ದಿನಗಳ ಕಾಲ ಜೈನರ ಮನೆಗಳಲ್ಲಿ ವಿಶಿಷ್ಟ ಉಪ್ಪಿನ ಕಾಯಿ ಸಹಿತ ಉದ್ದಿನ ದೋಸೆ ಸಿದ್ಧವಿರುತ್ತಿತ್ತು. ಅದರ ಸ್ವಾದವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಜಿನರಾಜರ ಮನೆಯ ದೀಪಾವಳಿಯ ಸಂದರ್ಭದಲ್ಲಿ ನಾನು ತಪ್ಪದೆ ಹಾಜರಿರುತ್ತಿದ್ದೆ, ವಿಶೇಷವಾಗಿ ದೋಸೆ ಸವಿಯುವುದಕ್ಕಾಗಿ. ರೆಂಜಾಳದ ಮುನಿರಾಜ ಕಾಲೇಜಿನಲ್ಲಿ ನನ್ನ ಜ್ಯೂನಿಯರ್ ಆಗಿದ್ದು ಆತನಿಗೂ ಸಾಹಿತ್ಯಾಸಕ್ತಿ ಇತ್ತು. ಮುಂದೆ ಆತ ಮೂಡಬಿದಿರೆಯ ಜೈನ್ ಜ್ಯೂನಿಯರ್ ಕಾಲೇಜಿನಲ್ಲಿ ಶಿಕ್ಷಕನಾದ, ಜೈನಸಾಹಿತ್ಯದ ದೊಡ್ಡ ಜ್ಞಾನಿಯಾಗಿ ಮಹಾಮಸ್ತಾಭಿಷೇಕ ಇತ್ಯಾದಿ ಸಂದರ್ಭಗಳಲ್ಲಿ ವೀಕ್ಷಕ ವಿವರಣೆ ನೀಡುವ ಕೆಲಸವನ್ನು ಅದ್ಭುತವಾಗಿ ಮಾಡುತ್ತಿದ್ದ. ನನ್ನನ್ನೊಮ್ಮೆ ರೆಂಜಾಳದ ಮನೆಗೆ ಕರೆದುಕೊಂಡು ಹೋಗಿ ಒಂದು ದಿನ ಅಲ್ಲಿ ಉಳಿಸಿಕೊಂಡಿದ್ದ, ಜೈನ ಸಂಪ್ರದಾಯಗಳನ್ನು ಪರಿಚಯಿಸಿದ್ದ, ಜೈನ ತಿಂಡಿ ತಿನಿಸುಗಳನ್ನು ತಿನ್ನಿಸಿದ್ದ.
ರಮ್ಜಾನ್, ಈದ್ ಇತ್ಯಾದಿ ಮುಸ್ಲಿಂ ಹಬ್ಬಗಳು ಬಂತೆಂದರೆ ಮುಷ್ತಾಖ್ ನ ಮನೆಯಿಂದ ನನಗೆ ಅಹ್ವಾನ ಬರುತ್ತಿತ್ತು. ಅಂದು ಅಲ್ಲಿ ತಿಂದ ಬಿರಿಯಾನಿ ನೆನಪಿಸಿಕೊಂಡರೆ ಇಂದಿಗೂ ಬಾಯಿಯಲ್ಲಿ ನೀರೂರುತ್ತದೆ.
ಕ್ರಿಸ್‌ಮಸ್ ಸಮಯದಲ್ಲಿ ಇನಾಸ್ ಮಿನೆಜಸ್ ಮತ್ತು ರೊನಾಲ್ಡ್ ಫೆರ್ನಾಂಡಿಸ್ ಇದ್ದೇ ಇದ್ದಾರಲ್ಲ. ನಕ್ರೆಯ ರೊನಾಲ್ಡ್ ಮನೆಯಲ್ಲಿ ಇಡ್ಲಿ ಮತ್ತು ಪೋರ್ಕ್ ಅಲ್ಲದೆ ಸಣ್ಣದೊಂದು ಬಾಟಲಿಯೂ ಇದ್ದೇ ಇರುತ್ತಿತ್ತು. ಕಣಂಜಾರಿನ ತನ್ನ ಮನೆಗೂ ಇನಾಸ್ ಮಿನೆಜಸ್ ಕರೆದುಕೊಂಡು ಹೋಗಿ ಹಬ್ಬದೂಟ ಮಾಡಿಸುತ್ತಿದ್ದ.
ಹೀಗೆ ಸರ್ವಧರ್ಮೀಯರೂ ಮತೀಯ ಗಡಿ ದಾಟಿ ಹಬ್ಬದ ಸಂತಸವನ್ನು ಹಂಚಿಕೊಳ್ಳುತ್ತಿದ್ದರು. ಇಲ್ಲೆಲ್ಲೂ ಮತೀಯ ಭೇದಭಾವ ಅನುಭವಿಸಿದ ಅನುಭವವೇ ನನಗಿಲ್ಲ. ಎಲ್ಲರೂ ತಮ್ಮ ಮನೆಮಂದಿಯಂತೆ ನಮ್ಮನ್ನು ಪ್ರೀತಿಯಿಂದ ಉಪಚರಿಸುತ್ತಿದ್ದರು. ಅಡುಗೆ ಮನೆಯವರೆಗೂ ನನಗೆ ಪ್ರವೇಶವಿತ್ತು. ಇದ್ದುದರಲ್ಲಿ ಮಡಿ ಮೈಲಿಗೆಯ ಭೇದ ಭಾವ ಹಿಂದೂಗಳ ತಥಾಕಥಿತ ಮೇಲ್ಜಾತಿಯಲ್ಲೇ ಅಧಿಕ. ಬಾಳೆಲೆಯಲ್ಲಿ ಜಗಲಿಯಲ್ಲಿ ಊಟ ಮಾಡಿ ಬಳಿಕ ದನದ ಕೊಟ್ಟಗೆಗೆ ಹೋಗಿ, ಒಂದಿಷ್ಟು ಸೆಗಣಿ ತಂದು, ಊಟ ಮಾಡಿದ ಜಾಗದ ಮೇಲೆ ಪ್ರೋಕ್ಷಿಸಿ ಶುದ್ಧಮಾಡಬೇಕು! ಅದನ್ನೂ ಮಾಡಿದ ಅನುಭವಿ ನಾನು.
ಇವೆಲ್ಲದರ ನಡುವೆ ದುಃಖದ ವಿಷಯವೆಂದರೆ, ನಾನು ಯಾರೊಬ್ಬರನ್ನೂ ನನ್ನ ಮನೆಗೆ ಕರೆದು ಏನನ್ನಾದರೂ ತಿನ್ನಿಸಿದ ನೆನಪಿಲ್ಲ. ಯಾಕೆಂದರೆ ಮನೆಯ ದುಸ್ಥಿತಿ ಮತ್ತು ಬಡತನ. ಅವರೆಲ್ಲರೂ ಸುಸಜ್ಜಿತ ಮನೆ, ಕರೆಂಟ್ ಎಲ್ಲ ಇದ್ದವರು. ನಮ್ಮಲ್ಲಿ ಅಂತಹ ಯಾವ ಪರಿಸ್ಥಿತಿಯೂ ಇರಲಿಲ್ಲ.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕ
ಇದನ್ನೂ ಓದಿ- https://kannadaplanet.com/its-a-big-story-autobiography-series-21/


