ಅದೊಂದು ದೊಡ್ಡ ಕತೆ | ಆತ್ಮಕಥನ ಸರಣಿ-21 ಓಟು ಕೇಳ ಬಂದರು ಇಂದಿರಾಗಾಂಧಿ

ನಾವು ಶಂಕರನಾರಾಯಣ ತೊರೆದು ಕಾರ್ಕಳಕ್ಕೆ ಮರಳಿದ 1978 ರ ದಿನಗಳು ರಾಷ್ಟ್ರ ರಾಜಕೀಯದಲ್ಲಿ ತೀವ್ರ ಅಲ್ಲೋಲಕಲ್ಲೋಲವಾಗುತ್ತಿದ್ದ ದಿನಗಳು.

ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯ ಕೊನೆಗೊಂಡಿತು. ಚುನಾವಣೆ ನಡೆದು, ಇಂದಿರಾಗಾಂಧಿ ಮತ್ತು ಆಕೆಯ ಪಕ್ಷ ಹೀನಾಯವಾಗಿ ಸೋತಿತ್ತು, ಒಂದು ಕಾಲದ ಪ್ರಭಾವೀ ಮತ್ತು ಬಾಂಗ್ಲಾ ವಿಮೋಚನೆ ಖ್ಯಾತಿಯ ಪ್ರಧಾನಿ ಸ್ವತಃ ಇಂದಿರಾ, ಒಂದು ದಿನಗಳ ಮಟ್ಟಿಗೆ ಬಂಧನಕ್ಕೊಳಗಾಗಿ ಬಿಡುಗಡೆಯೂ ಆದರು.

ಉತ್ತರಭಾರತವಿಡೀ ಕಾಂಗ್ರೆಸ್‌ ಗೆ ನೆಲೆಯಿಲ್ಲವಾಗಿತ್ತು. ಇಂದಿರಾ ಮತ್ತೆ ಲೋಕಸಭೆ ಸೇರಬೇಕಿದ್ದರೆ ಕಾಂಗ್ರೆಸ್‌ ನ ಭದ್ರ ಕೋಟೆಯಾಗಿದ್ದ ದಕ್ಷಿಣದಿಂದಲೇ ಅವರು ಸ್ಪರ್ಧಿಸಬೇಕಿತ್ತು. ತುರ್ತುಪರಿಸ್ಥಿತಿಯ ತರುವಾಯ ಉತ್ತರ ಭಾರತದಲ್ಲಿ ಇಂದಿರಾ ಕಾಂಗ್ರೆಸ್‌ ಧೂಳೀಪಟವಾದಾಗಾಲೂ, ದಕ್ಷಿಣ ಭಾರತ ಆಕೆಯ ಕೈ ಬಿಟ್ಟಿರಲಿಲ್ಲ. ಕರ್ನಾಟಕದಂತಹ ದಕ್ಷಿಣದ ರಾಜ್ಯದ 28 ಸ್ಥಾನಗಳಲ್ಲಿ ಆಗಲೂ ಕಾಂಗ್ರೆಸ್‌ 24 ಸ್ಥಾನಗಳನ್ನು ಗೆದ್ದಿತ್ತು!

ದಕ್ಷಿಣ ಭಾರತದಿಂದ ಇಂದಿರಾ ಸ್ಪರ್ಧಿಸುತ್ತಾರೆ ಎಂಬ ವದಂತಿಯೇನೋ ಇತ್ತು. ಆದರೆ, ಎಲ್ಲಿಂದ ಎಂಬುದು ಸ್ಪಷ್ಟವಿರಲಿಲ್ಲ. ಇದ್ದಕ್ಕಿದ್ದಂತೆ, ಇಂದಿರಾಗಾಂಧಿ ಕರ್ನಾಟಕದ ಚಿಕ್ಕಮಗಳೂರು ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ರೋಚಕ ಸುದ್ದಿ 1978 ರ ಅಕ್ಟೋಬರ್‌ ಸುಮಾರಿಗೆ ಹೊರಬಿತ್ತು. ಚಿಕ್ಕಮಗಳೂರಿನ ಆಗಿನ ಸಂಸದ ಡಿ ಬಿ ಚಂದ್ರೇಗೌಡರು ಇಂದಿರಾರಿಗಾಗಿ ತಮ್ಮ ಸ್ಥಾನ ತೆರವು ಮಾಡುವುದೆಂದು ನಿರ್ಧಾರವಾಯಿತು. ಚಿಕ್ಕಮಗಳೂರು ಕ್ಷೇತ್ರಕ್ಕೆ ಆಗ ಕಾರ್ಕಳವೂ ಸೇರಿದ್ದುದರಿಂದ ಅವರು ಕಾರ್ಕಳದಲ್ಲೂ ಮತಯಾಚನೆ ಮಾಡಬೇಕಿತ್ತು.

ಕಾರ್ಕಳ ಆಗ ಕಾಂಗ್ರೆಸ್‌ ನ ಭದ್ರಕೋಟೆ. ವೀರಪ್ಪ ಮೊಯ್ಲಿಯವರು ಅನೇಕ ವರ್ಷಗಳಿಂದ ಕಾರ್ಕಳದ ಕಾಂಗ್ರೆಸ್ ಶಾಸಕನಾಗಿ ಕೆಲಸ ಮಾಡುತ್ತಿದ್ದರು ಮಾತ್ರವಲ್ಲ, ಬಳಿಕ ಕರ್ನಾಟಕ ಸರಕಾರದಲ್ಲಿ ಮಂತ್ರಿಯಾದರು, ಮುಖ್ಯಮಂತ್ರಿಯೂ ಆದರು.

‌ಇಂದಿರಾ ಗಾಂಧಿ ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಘೋಷಣೆ ಹೊರಬೀಳುತ್ತಲೇ ಈ ಕ್ಷೇತ್ರ ದೇಶದ ಮಾತ್ರವಲ್ಲ, ಜಗತ್ತಿನ ಗಮನ ಸೆಳೆಯಿತು. ಬಿಬಿಸಿ ಸಹಿತ ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳೂ ಇಲ್ಲಿ ಬಂದಿಳಿದವು. ಎಲ್ಲೆಲ್ಲೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆಯಲಿರುವ ಚುನಾವಣೆಯದ್ದೇ ಮಾತು.

ಇಂದಿರಾ 1978 ರಲ್ಲಿ ಇಲ್ಲಿಂದ ಚುನಾವಣೆ ಸ್ಪರ್ಧಿಸಿದಾಗ ಅವರ ವಿರುದ್ಧ ಜನತಾಪಕ್ಷದಿಂದ ಸ್ಪರ್ಧಿಸಿದ್ದು ವೀರೇಂದ್ರ ಪಾಟೀಲ್. ಇಂದಿರಾ ಪರವಾಗಿ ಪ್ರಚಾರದ ನೇತೃತ್ವ ವಹಿಸಿದ್ದು ಆಗಿನ ಕರ್ನಾಟಕ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಕಾಂಗ್ರೆಸ್‌ ನಾಯಕ ಗುಂಡೂರಾವ್. ಜನತಾಪಕ್ಷದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದರಿಂದ ಇಂದಿರಾರನ್ನು ವಿರೋಧಿಸುತ್ತಿದ್ದ ರಾಜಕೀಯ ಶಕ್ತಿಗಳು ಆಗ ಪ್ರಬಲವಾಗಿದ್ದು, ಅವು ಕಾರ್ಕಳದಲ್ಲೂ ಹಾಜರಾದವು. ಪಾಟೀಲರ ಪರವಾಗಿ ಮತ ಯಾಚಿಸಲು, ಚುನಾವಣಾ ಪ್ರಚಾರ ಭಾಷಣ ಮಾಡಲು ಘಟಾನುಘಟಿ ರಾಜಕಾರಣಿಗಳು ಕಾರ್ಕಳಕ್ಕೆ ಬಂದಿಳಿಯತೊಡಗಿದರು.

ನನಗೆ ಆಗಲೇ ರಾಜಕೀಯ ಎಂದರೆ ಎಲ್ಲಿಲ್ಲದ ಆಸಕ್ತಿ. ರಾಜಕೀಯ ಸಭೆಗಳು ನಡೆಯುವಾಗಲೆಲ್ಲ ಬಿಡುವಿದ್ದರೆ ನಾನು ತಪ್ಪದೆ ಹಾಜರಿರುತ್ತಿದ್ದೆ (ನನಗಿನ್ನೂ ಮತದಾನ ಅಧಿಕಾರದ ವಯಸ್ಸು ಬಂದಿರಲಿಲ್ಲ. ಅದನ್ನು 18 ಕ್ಕೆ ಇಳಿಸಿದ್ದು ಮುಂದೆ ರಾಜೀವ ಗಾಂಧಿ). ಅದು ನಮಗೆ ಕಾಲೇಜು ಮಧ್ಯಾವಧಿ ರಜಾದಿನಗಳೂ ಆಗಿದ್ದವು. ಕಾರಣ ಗೊತ್ತಿಲ್ಲ, ಆಗ ನಾನೂ ಇಂದಿರಾ ವಿರೋಧಿ. ಇಂದಿರಾ ವಿರುದ್ಧದ ಜನತಾಪಕ್ಷಕ್ಕೆ ನನ್ನ ಬೆಂಬಲ.

ಸ್ವಾತಂತ್ರ್ಯ ಹೋರಾಟದಲ್ಲಿ ಕಾರ್ಕಳದ ಜಿಎಸ್‌ ಬಿ ಸಮುದಾಯದ ಅನೇಕ ಮುಂದಾಳುಗಳು ಸಕ್ರಿಯವಾಗಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದ ರಾಜಕೀಯ ಚರಿತ್ರೆ ಕಾರ್ಕಳಕ್ಕಿತ್ತು. ಆ ತಲೆಮಾರು ಆಗಲೂ ಈಗಲೂ ಕಾಂಗ್ರೆಸ್‌ ಪರವೇ ಇತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಈ ಸಮುದಾಯದ ಹೊಸ ತಲೆಮಾರು ಕಾಂಗ್ರೆಸ್‌ ವಿರೋಧಿಯಾಗಿತ್ತು. ಹಾಗಾಗಿ ಕಾರ್ಕಳದಲ್ಲಿ ಕಾಂಗ್ರೆಸ್‌ ವಿರುದ್ಧ ಕೆಲಸ ಮಾಡುತ್ತಿದ್ದ ಮಂದಿಯಲ್ಲಿ ಈ ಸಮುದಾಯದ ತರುಣರು ದೊಡ್ಡ ಸಂಖ್ಯೆಯಲ್ಲಿದ್ದರು. ಎಲ್ಲೆಲ್ಲೂ ಕಾಂಗ್ರೆಸ್‌ ವಿರುದ್ಧದ ಮತ್ತು ಜನತಾಪಕ್ಷದ ಪರ ಮಾತುಗಳು. ಆದರೆ ಕಾಂಗ್ರೆಸ್‌ ನ ಮತಬ್ಯಾಂಕು ಮಾತ್ರ ತಣ್ಣಗೆ, ಅಲುಗಾಡದೆಯೇ ಇತ್ತು. 

ಅಕ್ಟೋಬರ್‌ 1978. ದೇಶದ ಗಮನವೆಲ್ಲ ಕಾರ್ಕಳ ಸಹಿತ ಚಿಕ್ಕಮಗಳೂರು ಕ್ಷೇತ್ರದ ಮೇಲಿತ್ತು. ನವೆಂಬರ್‌ 5ಕ್ಕೆ ಚುನಾವಣೆ ನಿಗದಿಯಾಗಿತ್ತು. ಜನತಾಪಕ್ಷದ ಪರವಾಗಿ ಅತಿರಥ ಮಹಾರಥ ಧುರೀಣರು ಒಬ್ಬೊಬ್ಬರಾಗಿ ಬರತೊಡಗಿದರು. ಅಕ್ಟೋಬರ್‌ 22 ರಂದು ಕಾರ್ಕಳಕ್ಕೆ ಜಾರ್ಜ್‌ ಫೆರ್ನಾಂಡಿಸ್‌ ಬಂದರು. ರೈಲ್ವೇ ಮುಷ್ಕರ, ಬರೋಡಾ ಬಾಂಬ್‌ ಸ್ಫೋಟ ಸಹಿತ ತುರ್ತುಪರಿಸ್ಥಿತಿ ಕಾಲದ ಹೀರೋ ಆಗಿದ್ದ ಅವರನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಇಂದಿರಾರನ್ನು ವಿಷ ಸರ್ಪಕ್ಕೆ ಹೋಲಿಸಿದ ಫೆರ್ನಾಂಡಿಸ್‌, ಅವರನ್ನು ಯಾಕೆ ಸೋಲಿಸಬೇಕು ಎಂಬ ಬಗ್ಗೆ ಸ್ಫೂರ್ತಿದಾಯಕ ಭಾಷಣ ಮಾಡಿದರು. ಅಕ್ಟೋಬರ್‌ 22 ರ ಸಾರ್ವಜನಿಕ ಸಭೆಗೆ ವೀರೇಂದ್ರ ಪಾಟೀಲ್‌, ಸತ್ಯನಾರಾಯಣ, ನಂಬೂದಿರಿಪ್ಪಾಡ್‌ ಬಂದು ಭಾಷಣ ಮಾಡಿದರು. ಅಕ್ಟೋಬರ್‌ 28 ರಂದು ಜಗನ್ನಾಥರಾವ್‌ ಜೋಷಿ, ಇಬ್ರಾಹಿಂ, ಇಂಬಿಚ್ಚಿಬಾವಾ ಬಂದಿದ್ದರು.‌ ಅಕ್ಟೋಬರ್‌ 30 ರಂದು ಸುಷ್ಮಾ ಸ್ವರಾಜ್‌, ಎಚ್‌ ಎನ್ ಬಹುಗುಣ ಬಂದು ಜನತಾಪಕ್ಷದ ಪರ ಭಾಷಣ ಮಾಡಿದರು.

ಚಿಕ್ಕಮಗಳೂರು ಕ್ಷೇತ್ರದ ಮೂಲೆ ಮೂಲೆಯಲ್ಲೂ ಭಾಷಣ ಮಾಡುತ್ತಿದ್ದ ಜಾರ್ಜ್‌ ಫೆರ್ನಾಂಡಿಸ್ ಅಕ್ಟೋಬರ್‌ 31 ರಂದು ಕಾರ್ಕಳ ಜೋಡುರಸ್ತೆಯಂತಹ‌, ಅಷ್ಟೇನೂ ಮಹತ್ವವಲ್ಲದ ಜಾಗಕ್ಕೂ ಬಂದು ಭಾಷಣ ಮಾಡಿದರು. ಬೀದಿ ಬದಿಯಲ್ಲಿಯೇ ಭಾಷಣ ಮಾಡಿ, ಆ ಬಳಿಕ ಒಂದು ಬಕೆಟ್‌ ಹಿಡಿದು ಚುನಾವಣಾ ಪ್ರಚಾರದ ಖರ್ಚಿಗೆ ಹಣ ನೀಡುವಂತೆ ಜನರಲ್ಲಿ ಕೇಳಿಕೊಂಡರು. ಜನರು ಉದಾರವಾಗಿ ಒಂದು ರುಪಾಯಿ, ಎರಡು ರುಪಾಯಿ ಹೀಗೆ ಆ ಬಕೆಟ್‌ ಗೆ ಹಣ ಹಾಕಿದರು.

ಚುನಾವಣಾ ಕಾವು ನಿಧಾನವಾಗಿ ಏರುತ್ತಿತ್ತು. ರಾಜಕೀಯ ಕಾರ್ಯಕರ್ತರು ಉತ್ಸಾಹದಿಂದ, ಒಮ್ಮೊಮ್ಮೆ ಉನ್ಮಾದದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು, ಆಗಾಗ ಘರ್ಷಣೆಗಳೂ ಸಂಭವಿಸುತ್ತಿದ್ದವು. ಇಂತಹದೇ ಒಂದು ಘಟನೆಯಾಗಿ ನವೆಂಬರ್‌ 1 ರಂದು ಬೆಳ್ತಂಗಡಿಯ ಉಜಿರೆಯಲ್ಲಿ ಘರ್ಷಣೆ ನಡೆದು ಪೊಲೀಸರು ಗೋಲೀಬಾರ್‌ ನಡೆಸಿದರು. ಗೋಲಿಬಾರ್‌ ನಡೆಸಿದರೋ, ಅಥವಾ ಅಶ್ರುವಾಯು ಶೆಲ್‌ ಸಿಡಿಸಿದರೋ ಎಂಬ ಬಗ್ಗೆ ಅನೇಕ ವಾದವಿವಾದಗಳಿವೆ, ಅದಿರಲಿ. ಆದರೆ, ಈ ದುರಂತದಲ್ಲಿ ಬಲಿಯಾದುದು ಮಾತ್ರ ಉಜಿರೆ ಕಾಲೇಜಿನಲ್ಲಿ ಮೊದಲ ಬಿಎ ಓದುತ್ತಿದ್ದ ಗಾಯತ್ರಿ ಎಂಬ ಯುವತಿ.

ಇಂತಹ ಒಂದು ದುಃಖದ ಘಟನೆಯನ್ನೂ ರಾಜಕೀಯ ಪಕ್ಷದವರು ತಮ್ಮ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳದೆ ಬಿಡುತ್ತಾರೆಯೇ? ಹಾಗೆಯೇ ಆಯಿತು. ಜನತಾಪಕ್ಷದ ಮಂದಿ ಇದನ್ನು ದೊಡ್ಡ ಮಟ್ಟದಲ್ಲಿ ಬಳಸಿಕೊಂಡರು. ಮೃತ ವಿದ್ಯಾರ್ಥಿನಿ ಕಾರ್ಕಳದ ಮುದ್ರಾಡಿಯವಳು. ಆಕೆಯ ಶವವನ್ನು ಉಜಿರೆಯಿಂದಲೇ ಮುದ್ರಾಡಿಯ ತನಕ ಮೆರವಣಿಗೆ ಮಾಡಲು ನಿರ್ಧರಿಸಿದರು. ಕಾರ್ಕಳ ಪೇಟೆಯಲ್ಲಿಯೂ ಆಕೆಯ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಎಲ್ಲರಲ್ಲೂ ದುಃಖ ಮತ್ತು ಆಕ್ರೋಶ ಮಡುಗಟ್ಟಿತ್ತು.

ಇಂತಹದೇ ಒಂದು ದಿನ, ʼಇಂದಿರಾಗಾಂಧಿ ಕಾರ್ಕಳಕ್ಕೆ ಬರುತ್ತಾರೆʼ ಎಂಬ ಸುದ್ದಿ ಬಂತು. ಮಹಾನ್‌ ನಾಯಕಿ ಇಂದಿರಾಗಾಂಧಿಯನ್ನು ನೋಡುವ ಕುತೂಹಲ ಯಾರಿಗೆ ತಾನೇ ಇರುವುದಿಲ್ಲ? ಸರಿ, ಸಂಜೆಯ ಐದೋ ಆರೋ ಗಂಟೆಯ ಸಮಯ ಇರಬಹುದು, ನಾವೆಲ್ಲ ಕಾರ್ಕಳದ ಹೊರವಲಯದ, ಮೂಡಬಿದಿರೆಯಿಂದ ಕಾರ್ಕಳ ಪ್ರವೇಶಿಸುವಾಗ ಸಿಗುವ ʼಪುಲ್ಕೇರಿʼಗೆ ಧಾವಿಸಿದೆವು. ಸ್ವಲ್ಪ ಹೊತ್ತಿನ ಆನಂತರ ಇಂದಿರಾ ಅವರನ್ನು ಹೊತ್ತ ತೆರೆದ ಜೀಪು ಬಂದೇ ಬಿಟ್ಟಿತು. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಆನೆಕೆರೆಯ ಮೂಲಕ ಮೆರವಣಿಗೆ ಸಾಗಿತು. ಅವರೊಂದಿಗೆ ಸೇರಿಕೊಂಡು ನಾನೂ ಗಾಂಧಿ ಮೈದಾನದ ವರೆಗೆ ನಡೆದೆ. ಗಾಂಧಿ ಮೈದಾನದಲ್ಲಿ ಅವರ ಭಾಷಣ ಕಾರ್ಯಕ್ರಮ ಏರ್ಪಾಡಾಗಿತ್ತು.

ಇಂದಿರಾಗಾಂಧಿ

ನವೆಂಬರ್‌ 5 ರಂದು ಚುನಾವಣೆ ನಡೆಯಿತು. ನಾವು ಹುಡುಗರೆಲ್ಲ ಜನತಾಪಕ್ಷದ ಪರವಾಗಿ ಕೆಲಸ ಮಾಡಿದೆವು.‌ ನಮ್ಮ ಕೆಲಸವೆಂದರೆ ಜನತಾ ಪಕ್ಷದ ಬೂತ್‌ ಬಳಿ ನಿಂತು ಜನರಲ್ಲಿ, ʼಜನತಾಪಕ್ಷದ ಪರವಾಗಿ ಮತ ಚಲಾಯಿಸಿ ಪ್ಲೀಸ್‌ ಪ್ಲೀಸ್..‌ʼ ಎಂದು ವಿನಂತಿಸುವುದು. ಕಾರ್ಯಕರ್ತರು ಎರಡು ಬೆರಳು ತೋರಿಸುತ್ತಾ ಗೆಲುವಿನ ಸಂಕೇತ (ವಿಕ್ಟರಿ ಸಿಂಬಲ್) ತೋರಿಸುತ್ತಿದ್ದರು.‌ ಇದನ್ನೆಲ್ಲ ನೋಡುವಾಗ ಇಂದಿರಾ ಸೋಲುವುದು ಗ್ಯಾರಂಟಿ ಅನಿಸುತ್ತಿತ್ತು.

ಆದರೆ ಇಂದಿರಾ ಬಡ ಮಹಿಳೆಯರ ಪಾಲಿಗೆ ಇಂದಿರಮ್ಮನಾಗಿಯೇ ಉಳಿದಿದ್ದರು. ಅವರಲ್ಲಿ ಹೆಚ್ಚಿನವರು ವಸತಿ ಸಹಿತ ಇಂದಿರಾ ಸರಕಾರದ ಒಂದಲ್ಲ ಒಂದು ಯೋಜನೆಗಳ ಫಲಾನುಭವಿಗಳು. ಬಹುತೇಕ ಅನಕ್ಷರಸ್ಥರೂ ಅಮಾಯಕರೂ ಆಗಿದ್ದ ಅವರಿಗೆ ಈ ತುರ್ತುಪರಿಸ್ಥಿತಿ, ಅದರ ಅತಿರೇಕಗಳು ಇವೆಲ್ಲ ಗೊತ್ತಿರಲಿಲ್ಲ. ಇಂದಿರಾರ ಜನಪ್ರಿಯತೆಗೆ ಒಂದಿಷ್ಟೂ ಕುಂದು ಉಂಟಾಗಿರಲಿಲ್ಲ. ಚುನಾವಣೆಯಲ್ಲಿ ಅವರು ಸರಿಸುಮಾರು 75 ಸಾವಿರ ಮತಗಳ ಅಂತರದಿಂದ ವೀರೇಂದ್ರ ಪಾಟೀಲರನ್ನು ಸೋಲಿಸಿ ಮತ್ತೆ ಲೋಕಸಭೆ ಪ್ರವೇಶಿಸಿದರು. ಇಂದಿರಾಗೆ 2,49,376 ಮತಗಳು ಬಂದಿದ್ದರೆ, ಭಾರೀ ಪ್ರಚಾರದ ಹೊರತಾಗಿಯೂ ವೀರೇಂದ್ರ ಪಾಟೀಲ್‌ ಅವರಿಗೆ ಕೇವಲ 1,72,043 ಮತಗಳು ಬಂದಿದ್ದವು. ಕಾರ್ಕಳ ಸಹಿತವಾದ ಚಿಕ್ಕಮಗಳೂರು ಕ್ಷೇತ್ರ ಇಂದಿರಾ ಅವರಿಗೆ ರಾಜಕೀಯ ಪುನರ್ಜನ್ಮವನ್ನು ನೀಡಿತು.

ಇಂದಿರಾ ಲೋಕಸಭೆಯನ್ನೇನೋ ಪ್ರವೇಶಿಸಿದರು. ಆದರೆ ಮುಂದಿನ ವರ್ಷವೇ, ಅಂದರೆ 1979 ರ ಆಗಸ್ಟ್‌ ನಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಕ್ಷದ ಸರಕಾರ ಉರುಳಿತು. ಕೆಲವು ದಿನಗಳ ಕಾಲ ಚರಣ್‌ ಸಿಂಗ್‌ ಪ್ರಧಾನಿಯಾದರು, ಬಳಿಕ ಅವರ ಸರಕಾರವೂ ಉರುಳಿ ಹೊಸ ಚುನಾವಣೆ ಘೋಷಣೆಯಾಯಿತು. 1980 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ರಾಯ್‌ ಬರೇಲಿ ಮತ್ತು ಆಂಧ್ರದ ಮೇಡಕ್‌ ಎರಡೂ ಕ್ಷೇತ್ರಗಳಿಂದ ಗೆದ್ದರು ಮಾತ್ರವಲ್ಲ, ಮತ್ತೆ ಪ್ರಧಾನಿಯಾದರು. ಮುಂದೆ 1984 ರಲ್ಲಿ ಹಂತಕ ಗುಂಡಿಗೆ ಬಲಿಯಾಗುವ ತನಕವೂ ಪ್ರಧಾನಿಯಾಗಿಯೇ ಇದ್ದರು.

ಇಂದಿರಾ ಅವರ ಚಿಕ್ಕಮಗಳೂರು ವಾಸ್ತವ್ಯಕ್ಕಾಗಿ ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ಅತ್ಯಂತ ಸುಂದರವಾದ ಒಂದು ಪುಟ್ಟ ಮನೆಯನ್ನು ಹೆಚ್ಚಾಗಿ ಮರಮುಟ್ಟುಗಳನ್ನೇ ಬಳಸಿ ನಿರ್ಮಿಸಲಾಗಿತ್ತು. ಅತ್ಯಂತ ಚಳಿಯ ಅರಣ್ಯ ಪ್ರದೇಶದಲ್ಲಿ ಬಿಸಿ ನೀರಿನ ಸ್ನಾನಕ್ಕಾಗಿ ಮನೆಯಿಂದ ಕೊಂಚ ಮೇಲಕ್ಕೆ ಒಂದು ಕೊಪ್ಪರಿಗೆಯಲ್ಲಿ ನೀರು ಬಿಸಿ ಮಾಡಿ ಅದನ್ನು ಪೈಪ್‌ ಮೂಲಕ ಸ್ನಾನಗೃಹಕ್ಕೆ ಹರಿಸುವ ವ್ಯವಸ್ಥೆಯೂ ಇತ್ತು. ಮುಂದೆ 1993 ರಲ್ಲಿ ಒಮ್ಮೆ ನಾನು ಮುತ್ತೋಡಿ ಅರಣ್ಯಕ್ಕೆ, ಆರೋಹಣ ಚಾರಣ ತಂಡದ ಜಿ ಎನ್‌ ಅಶೋಕವರ್ಧನ ಅವರೊಂದಿಗೆ ಹೋದಾಗ ಇಂದಿರಾ ವಾಸ್ತವ್ಯ ಹೂಡಿದ ಆ ಚಾರಿತ್ರಿಕ ಮಹತ್ವದ ಮನೆಗೂ ಭೇಟಿ ನೀಡಿ, ಹಿಂದಿನ ಇಂದಿರಾ ಚುನಾವಣೆಯ ಘಟನೆಯನ್ನೆಲ್ಲ ಮತ್ತೊಮ್ಮೆ ನೆನಪಿಸಿಕೊಂಡು ರೋಮಾಂಚಿತನಾದೆ.

ಕಾಲೇಜಿನಲ್ಲಿ ಭಯಂಕರ ಮುಷ್ಕರ

ಚುನಾವಣೆ ಮುಗಿದು ನವೆಂಬರ್‌ 6, 1978 ರಂದು ಮತ್ತೆ ಕಾಲೇಜು ಆರಂಭವಾಯಿತು. ಉಜಿರೆ ಕಾಲೇಜು ವಿದ್ಯಾರ್ಥಿನಿ ಗಾಯತ್ರಿ ಮರಣದ ಪ್ರಯುಕ್ತ, ಗೌರವ ಸೂಚಕವಾಗಿ ಕಾಲೇಜಿಗೆ ಅಂದು ರಜೆ ಘೋಷಿಸಲಾಯಿತು.

ನಾನು, ಹಳ್ಳಿ ಎಂದರೂ ತಪ್ಪಾಗಲಾರದಂತಹ ಪುಟ್ಟ ಊರಿನ ಜ್ಯೂನಿಯರ್‌ ಕಾಲೇಜಿನಲ್ಲಿ ಓದಿದವನು. ನನಗೆ ಶಾಲೆಯಲ್ಲಿ ವಿದ್ಯಾರ್ಥಿ ಪ್ರತಿಭಟನೆ, ವಿದ್ಯಾರ್ಥಿ ಮುಷ್ಕರ ಎಂಬುದೆಲ್ಲ ತೀರಾ ಅಪರಿಚಿತ ಪದಗಳು.

ದ್ವಿತೀಯ ಪಿಯು ಓದಲು ಕಾರ್ಕಳ ಭುವನೇಂದ್ರ ಕಾಲೇಜು ಸೇರಿದ ಬಳಿಕ ಅಲ್ಲಿನ ಶಿಕ್ಷಕರು ಪಾಠ ಮಾಡುವ ʼಕಾಲೇಜು ಮಟ್ಟದʼ ರೀತಿಗೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದೆ. ಇಂಗ್ಲಿಷನ್ನೂ ಕನ್ನಡದಲ್ಲಿಯ ಕಲಿತ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದ ನಾನು, ಬಹುತೇಕ ಇಂಗ್ಲಿಷ್‌ ನಲ್ಲಿಯೇ ಮಾತನಾಡುತ್ತಿದ್ದ ಅವರ ಮಾತುಗಳನ್ನು ಅರ್ಥಮಾಡಿಕೊಂಡು ಹೊಸ ಪರಿಸರಕ್ಕೆ ಹೊಂದಿಕೊಳ್ಳುವಾಗ ಅದಾಗಲೇ ಅರ್ಧ ವರ್ಷ ಕಳೆದಿತ್ತು. ಇನ್ನೇನು ಕಾಲೇಜು ದಿನಗಳು ಸುಗಮವಾಗುತ್ತವೆ ಎನ್ನುವಾಗಲೇ ಕಾಲೇಜಿನಲ್ಲಿ ಭಯಂಕರ ಮುಷ್ಕರ ಆರಂಭವಾಯಿತು.

ಪ್ರಾಂಶುಪಾಲ ಪ್ರೊಫೆಸರ್‌ ದಾಮೋದರ ಕಿಣಿಯವರು

ಕಾಲೇಜು ವಿದ್ಯಾರ್ಥಿಗಳು ಅದ್ಯಾವುದೋ ಪಂದ್ಯದಲ್ಲಿ ವಿಜಯಶಾಲಿಗಳಾಗಿ ಟ್ರೋಫಿ ಗಳಿಸಿದ್ದರು. ಅದನ್ನು ಕಾರ್ಕಳ ಪೇಟೆಯಲ್ಲಿ ಮೆರವಣಿಗೆ ಮಾಡುವ ಬಯಕೆ ಅವರದು. ಆದರೆ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್‌ ದಾಮೋದರ ಕಿಣಿಯವರು ಶಿಸ್ತಿನ ಮನುಷ್ಯ. ಬರೇ ಶಿಸ್ತು ಅಲ್ಲ, ಮಿಲಿಟರಿ ಶಿಸ್ತಿನ ಮನುಷ್ಯ. ಕಾಲೇಜಿನ ಒಂದು ʼಸಣ್ಣʼ ಸಂಗತಿಯನ್ನು ಪೇಟೆಗೆ ಒಯ್ಯುವುದು ಅವರಿಗೆ ಇಷ್ಟವಿರಲಿಲ್ಲ. ಸಂಧಾನದ ಮೂಲಕ ವಿದ್ಯಾರ್ಥಿಗಳ ಮನವೊಲಿಸಬಹುದಾಗಿತ್ತೋ ಏನೋ. ಆದರೆ ಅವರು ಕಡ್ಡಿ ತುಂಡುಮಾಡಿದಂತೆ ʼಉಹುಂʼ ಎನ್ನುವ ಮನುಷ್ಯ. ವಿದ್ಯಾರ್ಥಿಗಳೋ ಇಪ್ಪತ್ತೊಂದರ ಹರೆಯದ ಬಿಸಿ ರಕ್ತದ ತರುಣರು. ಅವರು ಕೇಳುತ್ತಾರೆಯೇ? ಪ್ರಾಂಶುಪಾಲರ ಆದೇಶ ಧಿಕ್ಕರಿಸಿ ಅವರು ಕಾರ್ಕಳ ಪೇಟೆಯಲ್ಲಿ ಟ್ರೋಫಿಯ ಮೆರವಣಿಗೆ ನಡೆಸಿದರು. ಸಿಟ್ಟುಗೊಂಡ ಪ್ರಾಂಶುಪಾಲರು ಅಲ್ಲಿಗೆ ಹೋಗಿ ಅಷ್ಟು ಮಂದಿ ಯುವಕರ ನಡುವೆಯೇ ಆ ಟ್ರೋಫಿಯನ್ನು ಕಿತ್ತುಕೊಂಡು ಬಂದರು.

ಯುವಕರ ಸ್ವಾಭಿಮಾನಕ್ಕೆ ಭಾರೀ ಏಟು ಬಿತ್ತು. ಪರಿಣಾಮ ನವೆಂಬರ್‌ 28, 1978 ರಂದು ಭುವನೇಂದ್ರ ಕಾಲೇಜಿನಲ್ಲಿ ಭಯಂಕರ ಮುಷ್ಕರ ಆರಂಭವಾಯಿತು. ಮುಷ್ಕರ ನಿರತ ಹುಡುಗರು ಕಾಲೇಜಿನ ಗಾಜಿನ ಸೂಚನಾ ಫಲಕ ಸಹಿತ ಪ್ರತಿಯೊಂದು ಗಾಜಿನ ಕಿಟಕಿಗಳನ್ನು ಒಡೆದುಹಾಕಿದರು. ಹೂ ಕುಂಡಗಳನ್ನು ಕಿತ್ತೆಸೆದರು. ಕಾಲೇಜಿನ ಏಕೈಕ ದೂರವಾಣಿ ತಂತಿಯನ್ನು ಕತ್ತರಿಸಿ, ಪ್ರಾಂಶುಪಾಲರನ್ನು ಅವರ ಕೊಠಡಿಯಲ್ಲಿಯೇ ಬಂಧಿಯಾಗಿಸಿದರು. ಪೊಲೀಸರ ಮಧ್ಯಪ್ರವೇಶವೂ ಆಯಿತು. ಒಟ್ಟಿನಲ್ಲಿ ಇಪ್ಪತ್ತು ದಿನಗಳ ಕಾಲ ಕಾಲೇಜಿನಲ್ಲಿ ಪಾಠ ಪ್ರವಚನ ನಡೆಯಲಿಲ್ಲ.‌ ಕಾಲೇಜಿಗೆ ಭಾರೀ ನಷ್ಟವಾಯಿತು. ಪ್ರಾಂಶುಪಾಲರು ಸುಮ್ಮನಿರುವರೇ? ಆ ನಷ್ಟವನ್ನೆಲ್ಲ ವಿದ್ಯಾರ್ಥಿಗಳಿಂದ ʼಪುಂಡುಗಂದಾಯʼ ಮಾದರಿಯಲ್ಲಿ ಸಂಗ್ರಹಿಸಿದರು.

ಆ ಕಾಲದಲ್ಲಿ ಕಾಲೇಜುಗಳಲ್ಲಿ ಇಂತಹ ಮುಷ್ಕರಗಳು ಸಾಮಾನ್ಯವಾಗಿದ್ದವು. ಸೆಮಿಸ್ಟರ್‌ ಪದ್ಧತಿ ಇನ್ನೂ ಜಾರಿಗೊಂಡಿರದ ಕಾಲ, ವರ್ಷದ ಕೊನೆಗೆ ಓದಿದರಾಯಿತು, ಅಲ್ಲದೆ ಕಾಲೇಜುಗಳಲ್ಲಿ ಗಟ್ಟಿಮುಟ್ಟಿನ ಕೆಲವೊಮ್ಮೆ ಇಪ್ಪತ್ತು ಇಪ್ಪತ್ತೈದರ ಹರೆಯ ದಾಟಿದ ಧೈರ್ಯಶಾಲಿ ಮತ್ತು ಹಠಮಾರಿ ಯುವಕರು. ಮುಷ್ಕರ, ದಾಂಧಲೆ, ಮಾತ್ರವಲ್ಲ ಲಾಠಿ ಚಾರ್ಚ್‌, ಅಶ್ರುವಾಯು ಪ್ರಯೋಗ, ಗೋಲಿಬಾರ್‌ ಎಲ್ಲ ಸಾಮಾನ್ಯವಾಗಿತ್ತು. 1976-77 ರಲ್ಲಿ ಇರಬೇಕು, ಮಂಗಳೂರಿನ ಸರಕಾರಿ ಕಾಲೇಜಿನ ಒಳಗಡೆಯೇ ಗೋಲೀಬಾರ್‌ ನಡೆದು ಜಗನ್ನಾಥ ಶೆಟ್ಟಿ ಎಂಬ ಒಬ್ಬ ವಿದ್ಯಾರ್ಥಿ ಗುಂಡಿಗೆ ಬಲಿಯಾಗಿದ್ದ. ಮಣಿಪಾಲದ ಎಂ ಐ ಟಿ ಯಲ್ಲಿಯೂ ಅಮರನಾಥ ಶೆಟ್ಟಿ ಎಂಬ ಒಬ್ಬ ವಿದ್ಯಾರ್ಥಿ ಬಲಿಯಾಗಿದ್ದ (ಫೆಬ್ರವರಿ 1979), ಇದಕ್ಕೆ ಇತರ ಕಾಲೇಜುಗಳ ವಿದ್ಯಾರ್ಥಿಗಳೂ ಮುಷ್ಕರದ ಮೂಲಕ ಪ್ರತಿಕ್ರಿಯಿಸಿದ್ದರು.

ಮುಷ್ಕರದ ಪರಿಣಾಮ ನನ್ನ ದ್ವಿತೀಯ ಪಿಯು ಓದಿನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಮೊದಲೇ ನನ್ನ ಪಾಲಿಗೆ ಹೊಸ ಕಾಲೇಜು, ಸಾಲದೆಂಬಂತೆ ಸರಿಯಾಗಿ ಪಾಠ ಪ್ರವಚನಗಳೂ ಇಲ್ಲ. ಇವೆಲ್ಲದರ ಪರಿಣಾಮ ನನ್ನ ದ್ವಿತೀಯ ಪಿಯು ಫಲಿತಾಂಶದಲ್ಲಿ ಕಂಡಿತು. ಶಂಕರನಾರಾಯಣದಲ್ಲಿ ಮೊದಲ ವರ್ಷದ ಪಿಯುಸಿಯಲ್ಲಿ ಶೇಕಡಾ 60 ಅಂಕಗಳೊಂದಿಗೆ ಪಾಸ್‌ ಆಗಿದ್ದೆ. ಈಗ ಭುವನೇಂದ್ರ ಕಾಲೇಜಿನ ದ್ವಿತೀಯ ಪಿಯುಸಿಯಲ್ಲಿ ಅದು ಶೇಕಡಾ 55 ಅಂಕಕ್ಕೆ ಇಳಿಯಿತು (ಮುಷ್ಕರ ದಾಂಧಲೆಗಳಲ್ಲಿಯೂ ಮುಂದಿದ್ದ ಸಹಪಾಠಿ ಶರತ್‌ ಕೆ ರಾವ್‌  ಪಿಯ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿದ. ಮುಂದೆ ಆತ ಮಣಿಪಾಲ ಆಸ್ಪತ್ರೆಯಲ್ಲಿ ಪ್ರಸಿದ್ಧ ಎಲುಬು ತಜ್ಞ ಸರ್ಜನ್‌ ಆಗಿ ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE – ಮಾಹೆ) ನ ವಿಸಿ ಆಗಿದ್ದಾರೆ). ʼಒಳ್ಳೆಯ ಕಾಲೇಜಿಗೆ ಸೇರಿಯೂ ಹೀಗೇಕಾಯಿತು?ʼ ಎಂದು ಹಿರಿಯ ಅಣ್ಣ ಕೊಂಚ ಸಿಟ್ಟಿನಿಂದಲೇ ಪ್ರಶ್ನಿಸಿದ. ನನ್ನ ಓದಿಗೆ ಸಣ್ಣ ಪ್ರಮಾಣದಲ್ಲಿಯಾದರೂ ಹಣಕಾಸು ನೆರವು ನೀಡುತ್ತಿದ್ದ ಆತನಿಗೆ ಹಾಗೆ ಪ್ರಶ್ನಿಸುವ ಅಧಿಕಾರವೂ ಇತ್ತು. ಏನು ಉತ್ತರ ನೀಡುವುದು? ಕೇವಲ ಕಾಲೇಜು, ಮುಷ್ಕರ ಇತ್ಯಾದಿ ದೂರಿದರೆ ಸಾಕೇ? ನನ್ನ ತಪ್ಪೂ ಇಲ್ಲದಿರಲಿಕ್ಕಿಲ್ಲ ಅಲ್ಲವೇ? ನಾನು ಉತ್ತರಿಸಹೋಗಲಿಲ್ಲ.

ನನ್ನ ಪಿಯು ಅಂಕ ಚೆನ್ನಾಗಿರಲಿಲ್ಲ. ಅಲ್ಲದೆ, ಹಣಕಾಸಿನ ತೊಂದರೆಯೂ ಇತ್ತು. ಇಂದಿನಂತೆ ಸಿಇಟಿ ಮೂಲಕ ಬಡವರ ಮಕ್ಕಳೂ ಓದುವ ವ್ಯವಸ್ಥೆಯೂ ಆಗ ಇರಲಿಲ್ಲ. ಬಡವರ ಪಾಲಿಗೆ ಎಂಜೀನಿಯರಿಂಗ್‌ ಓದು ಎಲ್ಲ ಆಗ ಕೇವಲ ಕನಸಿನ ಮಾತು. ಎಲ್ಲಕ್ಕಿಂತ ಮುಖ್ಯವಾಗಿ, ಎಂಜೀನಿಯರಿಂಗ್‌, ವೈದ್ಯಕೀಯ ಇತ್ಯಾದಿ ಓದಿದರೇ ಬದುಕಿನ ಸಾರ್ಥಕತೆ ಎಂಬೆಲ್ಲ ಭ್ರಮೆಗಳೂ ಆಗ ಇರಲಿಲ್ಲ. ಏನನ್ನಾದರೂ ಸರಿಯೇ, ಓದಲು ಅವಕಾಶ ಇರುವುದೇ ಹೆಚ್ಚು ಎಂಬ ಕಾಲ. ಬಸ್‌ ಪ್ರಯಾಣದ ಖರ್ಚಿಲ್ಲದೆ ಸೈಕಲ್‌ ನಲ್ಲಿ ಮನೆಯಿಂದ ಹೋಗಿ ಓದಲು ನನಗೆ ಅವಕಾಶ ಇದ್ದುದು ಪದವಿ ಓದಲು ಮಾತ್ರ. ನಾನು ಬಿ ಎಸ್‌ ಸಿ (ಪಿಸಿಎಂ) ಸೇರಲು ನಿರ್ಧರಿಸಿದೆ.

ಶ್ರೀನಿವಾಸ ಕಾರ್ಕಳ
ಚಿಂತಕರು

ಇದನ್ನೂ ಓದಿ- ಮಮತಾ ಬ್ಯಾನರ್ಜಿ ಕೇಡಿಯಾದರೆ; ಬಂಗಾಳದ ಕಮ್ಯುನಿಷ್ಟರು ಏನು?

More articles

Latest article

Most read