ಸಾವರ್ಕರ್ ಅವರನ್ನು ಆರಾಧಿಸುವ ಸನಾತನವಾದಿಗಳು ಸಾವರ್ಕರ್ ಅವರನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕೇವಲ ತಮ್ಮ ಮನುವಾದಿ ವರ್ಣಸಿದ್ಧಾಂತದ ಜಾರಿಯ ಗುರಿಯನ್ನು ಮುಟ್ಟಲು ಸಾವರ್ಕರರವರನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದುತ್ವದ ಐಕಾನ್ ಎನ್ನುವಂತೆ ವಿಜೃಂಭಿಸುತ್ತಿದ್ದಾರೆ. ಸಾವರ್ಕರರವರನ್ನು ಪ್ರಶ್ನಿಸಿದವರ ಮೇಲೆ ಕೇಸ್ ಹಾಕಿ ಕಿರುಕುಳ ಕೊಡುತ್ತಿದ್ದಾರೆ. “ಹಿಂದುತ್ವ ಎಂದರೆ ಬಹುತ್ವದ ನಾಶ ಹಾಗೂ ಅನ್ಯಧರ್ಮ ದ್ವೇಷ” ಎಂಬುದಕ್ಕೆ ಅನ್ವರ್ಥರಾಗಿದ್ದಾರೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಹೌದು.. ಸಾವರ್ಕರ್ ಬ್ರಿಟೀಷರ ಮುಂದೆ 5 ಸಲ ಕ್ಷಮಾಪಣೆ ಕೇಳಿದ್ದು ಸತ್ಯ” ಎಂದು ಸಾವರ್ಕರ್ ಅವರ ಮೊಮ್ಮಗ ಸತ್ಯಕಿಯವರು ಪುಣೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿಯವರು 2023 ರಲ್ಲಿ ಲಂಡನ್ನಿನಲ್ಲಿ ಸಾವರ್ಕರ್ ಅವರನ್ನು ಟೀಕಿಸಿ “ಸಾವರ್ಕರ್ ಬರೆದ ಪುಸ್ತಕವೊಂದರಲ್ಲಿ ಅವರು ಸ್ನೇಹಿತರ ಜೊತೆ ಸೇರಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಆನಂದ ಪಟ್ಟಿದ್ದರು” ಎಂದು ಹೇಳಿಕೆ ಕೊಟ್ಟಿದ್ದರ ವಿರುದ್ಧ ಸಾವರ್ಕರ್ ಕುಟುಂಬದವರು “ರಾಹುಲ್ ರವರ ಹೇಳಿಕೆ ಸುಳ್ಳು, ಕಾಲ್ಪನಿಕ ಹಾಗೂ ಉದ್ದೇಶಪೂರ್ವಕ” ಎಂದು ಆರೋಪಿಸಿ, ಪುಣೆಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆಯನ್ನು ದಾಖಲಿಸಿದ್ದು ವಿಚಾರಣೆ ನಡೆಯುತ್ತಿದೆ. ಆ ಕೇಸಿನ ವಿಚಾರಣೆಗೆ ಹಾಜರಾಗಿದ್ದ ಸಾವರ್ಕರ್ ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ರವರು ಪಾಟಿ ಸವಾಲಿನಲ್ಲಿ ಕೆಲವು ಮಹತ್ವದ ವಿಷಯಗಳನ್ನು ಬಹಿರಂಗಪಡಿಸಿದರು.
* ಸಾವರ್ಕರ್ ರವರು ಸೆಲ್ಯುಲಾರ್ ಜೈಲಲ್ಲಿರುವಾಗ ಬ್ರಿಟೀಷರಿಗೆ ಐದು ಸಲ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದು ನಿಜ.
* ಸಾವರ್ಕರ್ ಗೋವನ್ನು ದೇವರೆಂದು ಎಂದಿಗೂ ಉಲ್ಲೇಖಿಸಿಲ್ಲ, ಅದು ಉಪಯುಕ್ತ ಪ್ರಾಣಿ ಎಂಬುದು ಅವರ ನಿಲುವಾಗಿತ್ತು.
* ದೇಶ ವಿಭಜನೆಯ ದ್ವಿರಾಷ್ಟ್ರ ಕಲ್ಪನೆಯನ್ನು ಸಾವರ್ಕರ್ ಪ್ರಸ್ತಾಪಿಸಿದ್ದಾರೆಂಬುದು ನಿಜವಲ್ಲ. ಮೊದಲು ಪ್ರಸ್ತಾಪಿಸಿದವರು ಸರ್ ಸೈಯದ್ ಅಹ್ಮದ್ ಖಾನ್ ರವರು.
* ಸ್ವಾತಂತ್ರ್ಯ ವೀರ ಎಂಬ ಬಿರುದು ಸರ್ಕಾರದಿಂದ ನೀಡಲಾಗಿಲ್ಲ. ಬರಹಗಾರ ಸದಾಶಿವ ರಾನಡೆಯವರು ಬರೆದ ಬಯೋಗ್ರಫಿಯಲ್ಲಿ ಪ್ರಸ್ತಾಪವಾಗಿದೆ.
* ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟೀಷ್ ಸೇನೆಗೆ ಸೇರುವಂತೆ ಭಾರತೀಯ ಯುವಕರಿಗೆ ಸಾವರ್ಕರ್ ಕರೆ ನೀಡಿದ್ದರು ಎಂಬುದು ನಿಜ.
* ಆರೆಸ್ಸೆಸ್ ಹಾಗೂ ಬಿಜೆಪಿಯಂತಹ ರಾಜಕೀಯ ಪಕ್ಷಗಳು ಯಾರನ್ನು ಸೈದ್ಧಾಂತಿಕ ಸ್ಪೂರ್ತಿಯಾಗಿ ಪರಿಗಣಿಸುತ್ತವೆ ಎಂಬುದು ನನಗೆ ತಿಳಿದಿಲ್ಲ.
ಎನ್ನುವಂತಹ ಕೆಲವಾರು ಅಂಶಗಳನ್ನು ಸತ್ಯಕಿಯವರು ನ್ಯಾಯಾಲಯದಲ್ಲಿ ಅನಾವರಣಗೊಳಿಸಿದರು. ಹೀಗೆ ಪಾಟಿ ಸವಾಲಿಗೆ ಉತ್ತರಿಸುತ್ತಲೇ ಈ ಆರೆಸ್ಸೆಸ್ ಹಾಗೂ ಬಿಜೆಪಿಯವರು ಸಾವರ್ಕರ್ ಅವರ ಕುರಿತು ಪ್ರಚಾರಪಡಿಸಿದ ಹಲವಾರು ಸಂಕಥನಗಳು ಸುಳ್ಳು ಎಂಬುದನ್ನೂ ಸತ್ಯಕಿರವರ ಕೆಲವಾರು ಹೇಳಿಕೆಗಳು ಸಾಬೀತುಪಡಿಸಿದವು.

ವಿನಾಯಕ್ ದಾಮೋದರ್ ಸಾವರ್ಕರ್ ರವರನ್ನು ವೈಭವೀಕರಿಸಲು ಸನಾತನಿ ಸಂಘಿಗಳು ಕೆಲವಾರು ದಂತಕತೆಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿ “ಅಂಡಮಾನ್ ಜೈಲಿನಲ್ಲಿದ್ದ ಸಾವರ್ಕರ್ ರವರು ಆಗಾಗ ಬುಲ್ ಬುಲ್ ಹಕ್ಕಿಯ ಮೇಲೆ ಕುಳಿತು ಹಾರಿ ಭಾರತಕ್ಕೆ ಬಂದು ಹೋಗುತ್ತಿದ್ದರು” ಎಂಬ ಬುಲ್ ಬುಲ್ ಪ್ರಕರಣವೂ ಒಂದು.
ಸ್ವಾತಂತ್ರ್ಯ ವೀರ ಸಾವರ್ಕರ್ ಎನ್ನುವುದು ಇನ್ನೊಂದು ಸಂಘಿಗಳ ನರೇಟಿವ್. ಸತ್ಯಕಿ ಯವರೇ ಹೇಳಿದಂತೆ ಸದಾಶಿವ ರಾನಡೆಯವರು ಸಾವರ್ಕರ್ ಕುರಿತು ಬರೆದ ಆತ್ಮಕಥೆಯಲ್ಲಿ ಸ್ವಾತಂತ್ರ್ಯ ವೀರ ಪದವನ್ನು ಬಳಸಿದ್ದಾರೆ. ಆದರೆ ಭಾರತದ ಸ್ವಾತಂತ್ರ್ಯಕ್ಕಾಗಿ ಸಾವರ್ಕರ್ ಅವರ ಕೊಡುಗೆ ಪ್ರಶ್ನಾರ್ಹವಾಗಿದೆ. ಲಂಡನ್ನಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಾವರ್ಕರರವರನ್ನು 1910 ರಲ್ಲಿ ಜಿಲ್ಲಾಧಿಕಾರಿಯ ಕೊಲೆಯ ಪ್ರಕರಣದಲ್ಲಿ ಲಂಡನ್ನಿನಲ್ಲಿ ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಯಾಕೆಂದರೆ ಹತ್ಯೆಗೆ ಬಳಸಿದ ರಿವಾಲ್ವರ್ ಸಾವರ್ಕರ್ ಹೆಸರಿನಲ್ಲಿತ್ತಂತೆ. ಡಿಸಿ ಹತ್ಯೆಗೆ ಶಸ್ತ್ರವನ್ನು ಒದಗಿಸಿದ ಆರೋಪ ಅವರ ಮೇಲಿತ್ತು. ವಿಚಾರಣೆ ನಡೆದು ಎರಡು ಅವಧಿಯ ಜೀವಾವಧಿ ಶಿಕ್ಷೆಯಾಗಿ (50 ವರ್ಷಗಳು) ಅಂಡಮಾನಿನ ಸೆಲ್ಯುಲಾರ್ ಜೈಲಿಗೆ ಕಳುಹಿಸಲಾಗಿತ್ತು. ಇದು ಬಿಟ್ಟು ಯಾವತ್ತೂ ಸ್ವಾತಂತ್ರ್ಯದ ಆಂದೋಲನದಲ್ಲಿ ಅವರು ಭಾಗವಹಿಸಿದ್ದೇನೂ ಇಲ್ಲಾ. 1911 ರಿಂದ 1921 ರವರೆಗೆ ಅಂಡಮಾನ್ ಜೈಲಿನಲ್ಲಿದ್ದಾಗ ಬ್ರಿಟೀಷರಿಗೆ 5 ರಿಂದ 7 ಕ್ಷಮಾಪಣೆ ಪತ್ರ ಬರೆದಿದ್ದರು. ಅದರಲ್ಲಿ “ಬ್ರಿಟೀಷರ ವಿರುದ್ದದ ಹೋರಾಟದಲ್ಲಿ ಎಂದೂ ಭಾಗವಹಿಸುವುದಿಲ್ಲ ಹಾಗೂ ಬ್ರಿಟೀಷರಿಗೆ ನಿಷ್ಠನಾಗಿ ಇರುತ್ತೇನೆ” ಎಂದು ಸಂಪೂರ್ಣ ಶರಣಾಗತಿಯನ್ನು ಘೋಷಿಸಿಕೊಂಡಿದ್ದರು.
ಆದರೆ ಈ ಸನಾತನಿ ಹಿಂದುತ್ವವಾದಿಗಳು ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ನಂಬಿಸಲು ಪ್ರಯತ್ನಿಸುತ್ತಿವೆ. ಜೈಲಿನಿಂದ ಬಿಡುಗಡೆಯಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಕ್ಷಮಾಪಣೆ ಪತ್ರ ಬರೆಯುವ ತಂತ್ರಗಾರಿಕೆಯನ್ನು ಸಾವರ್ಕರ್ ಮಾಡಿದ್ದರು ಎಂದು ಸಂಘಿಗಳು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಕ್ಷಮಾಪಣೆ ಯಾಚಿಸಿ ಶರತ್ತುಗಳ ಮೇಲೆ ಜೈಲಿನಿಂದ 1924ರಲ್ಲಿ ಬಿಡುಗಡೆಯಾಗಿ ಬಂದ ಸಾವರ್ಕರ್ ಬ್ರಿಟೀಷರಿಗೆ ಮಾತು ಕೊಟ್ಟಂತೆ ಕೊನೆಯವರೆಗೂ ಅವರಿಗೆ ನಿಷ್ಠರಾಗೇ ಇದ್ದರು. ಬ್ರಿಟೀಷರಿಂದ ಪಿಂಚಣಿ ಪಡೆದರು. ಬ್ರಿಟಿಷ್ ಸೇನೆಗೆ ಭಾರತೀಯ ಯುವಕರನ್ನು ಸೇರ್ಪಡೆಯಾಗುವಂತೆ ಕರೆ ಕೊಟ್ಟರು. 1937 ರಿಂದ 1943 ರವರೆಗೆ ಹಿಂದೂ ಮಹಾ ಸಭಾದ ಅಧ್ಯಕ್ಷರಾಗಿ ಹಿಂದುತ್ವ ಸಿದ್ಧಾಂತದ ಪ್ರತಿಪಾದಕರಾದರು.
ಗಾಂಧಿ ಹತ್ಯೆ ಸಂಚುಕೋರ
ಕೋಮು ಸೌಹಾರ್ದತೆಗಾಗಿ ಸತ್ಯಾಗ್ರಹ ಮಾಡುತ್ತಿದ್ದ ಮಹಾತ್ಮಾ ಗಾಂಧಿಯವರ ಹತ್ಯೆಯ ಸಂಚಿನ ರೂವಾರಿ ಎಂದು ಬಂಧನಕ್ಕೊಳಗಾಗಿ ಸಾಕ್ಷಿಗಳ ಕೊರತೆಯಿಂದ ಬಿಡುಗಡೆಯಾದರು. ಆದರೆ ಕೇಂದ್ರ ಸರಕಾರವು ಗಾಂಧಿ ಹತ್ಯೆಯ ಮರುತನಿಖೆಗಾಗಿ ಜಸ್ಟೀಸ್ ಜೀವನ್ಲಾಲ್ ಕಪೂರ್ ಅವರ ನೇತೃತ್ವದಲ್ಲಿ 1966 ರಲ್ಲಿ ಕಮಿಷನ್ ಒಂದನ್ನು ನೇಮಿಸಿತು. ದಫೇದಾರ್ ಅಪ್ಪಾ ಕಸರ್ ರವರ ಹೇಳಿಕೆಯ ಆಧಾರದಲ್ಲಿ ಗಾಂಧೀಜಿ ಹತ್ಯೆಯ ಸಂಚಿನಲ್ಲಿ ಸಾವರ್ಕರ್ ಶಾಮೀಲಾಗಿದ್ದಾರೆಂದು 1969 ರಲ್ಲಿ ಕಪೂರ್ ಆಯೋಗವು ವರದಿ ಸಲ್ಲಿಸಿತು. ಆದರೆ 1966 ರಲ್ಲೇ ಸಾವರ್ಕರ್ ಮರಣ ಹೊಂದಿದ್ದರು.
ಗೋವು ದೇವರಲ್ಲ ಅದೊಂದು ಪ್ರಾಣಿ
ಈಗ ಸಂಘಿ ಪರಿವಾರದವರು ಗೋವನ್ನು ಪವಿತ್ರ ದೇವತೆಯಾಗಿ ಪೂಜಿಸುತ್ತಿದ್ದಾರೆ. ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ಇದ್ದಾರೆಂದು ಜನರನ್ನು ನಂಬಿಸುತ್ತಿದ್ದಾರೆ. ಆಕಳ ಮಲ ಮೂತ್ರಗಳಲ್ಲಿ ಔಷಧೀಯ ಸತ್ವಗಳಿವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಗೋಹತ್ಯೆಯನ್ನು ನಿಷೇಧಿಸಿ ಶಿಕ್ಷಾರ್ಹ ಅಪರಾಧವಾಗಿಸಿದ್ದಾರೆ. “ಗೋವು ದೇವರಲ್ಲ ಉಪಯುಕ್ತ ಪ್ರಾಣಿ” ಎಂದು ಹೇಳಿದ ಸಾವರ್ಕರ್ ಅವರ ಮಾತಿಗೆ ವಿರುದ್ಧವಾಗಿ ಗೋವನ್ನು ದೇವರನ್ನಾಗಿಸಿ ಹಿಂದೂ ಧ್ರುವೀಕರಣಕ್ಕೆ ಆರೆಸ್ಸೆಸ್ ಹಾಗೂ ಬಿಜೆಪಿ ಅತೀ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ. ಈ ಸಂಘಿಗಳ ಸಂಕಥನಕ್ಕೆ ಸತ್ಯಕಿಯವರ ಸಾಕ್ಷ ವಿರುದ್ಧವಾಗಿದೆ.
‘ಸ್ವಾತಂತ್ರ್ಯ ವೀರ’ ಎಂಬ ಸಂಕಥನ
ಹಾಗೆಯೇ ಸಾವರ್ಕರ್ ಅವರನ್ನು “ಸ್ವಾತಂತ್ರ್ಯ ವೀರ” ಎಂದು ಜನರನ್ನು ನಂಬಿಸಲು ಸಂಘ ಹಾಗೂ ಅದರ ಅಂಗಗಳು ಪ್ರಯತ್ನಿಸುತ್ತಿವೆ. ಆದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಾವರ್ಕರ್ ಕೊಡುಗೆ ನಗಣ್ಯವಾಗಿದೆ. ‘ಸ್ವಾತಂತ್ರ್ಯ ವೀರ’ ಎನ್ನುವ ಬಿರುದನ್ನು ಅವರ ಆತ್ಮಚರಿತ್ರೆ ಬರೆದ ಸದಾಶಿವ ರಾನಡೆಯವರು ಕೊಟ್ಟಿದ್ದಾರೆಂದು ಸತ್ಯಕಿಯವರೇ ಸಾಕ್ಷ್ಯ ನುಡಿದಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಆರೆಸ್ಸೆಸ್ ಕೊಡುಗೆ ಏನೂ ಇಲ್ಲ ಎನ್ನುವ ಆರೋಪಕ್ಕೆ ಸ್ವಾತಂತ್ರ್ಯ ವೀರ ಸಾವರ್ಕರ್ ಇದ್ದಾರಲ್ಲಾ ಎಂದು ಸಮರ್ಥಿಸಿಕೊಳ್ಳುತ್ತಿದ್ದ ಸಂಘಿಗಳಿಗೆ ಸತ್ಯಕಿಯವರ ಹೇಳಿಕೆ ಸ್ಪಷ್ಟೀಕರಣ ಕೊಡುವಂತಿದೆ. ಸ್ವಾತಂತ್ರ್ಯ ವೀರ ಎನ್ನುವುದು ಬರಹಗಾರನೊಬ್ಬ ಕೊಟ್ಟ ಬಿರುದೇ ಹೊರತು ಸಾವರ್ಕರ್ ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಿ ಪಡೆದ ಹೆಗ್ಗಳಿಕೆ ಏನಲ್ಲ. 1924 ರಲ್ಲಿ ಜೈಲಿನಿಂದ ಬಿಡುಗಡೆಯಾಗಿ ಬಂದ ಮೇಲೂ ಸಹ ಸಾವರ್ಕರ್ ಯಾವುದೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ದಾಖಲೆಗಳಿಲ್ಲ.
ಸಾವರ್ಕರ್ ಅವರ ದ್ವಿರಾಷ್ಟ್ರ ಪ್ರಸ್ತಾಪ

ಅಖಂಡ ಭಾರತವನ್ನು ಇಬ್ಭಾಗ ಮಾಡಿ ಧರ್ಮಾಧಾರಿತವಾಗಿ ಹಿಂದುಸ್ಥಾನ ಮತ್ತು ಪಾಕಿಸ್ಥಾನ ಎನ್ನುವ ಎರಡು ದೇಶಗಳನ್ನು ಸ್ಥಾಪಿಸಬೇಕು ಎನ್ನುವ ಪ್ರಸ್ತಾಪವನ್ನು ಸಾವರ್ಕರ್ ಮೊದಲು ಪ್ರತಿಪಾದಿಸಿದರು ಹಾಗೂ ಅದನ್ನೇ ಮಹಮದ್ ಅಲಿ ಜಿನ್ನಾರವರು ದೇಶ ವಿಭಜನೆಯ ರಾಜಕೀಯ ಬೇಡಿಕೆಯಾಗಿ ಬಳಸಿಕೊಂಡರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಸತ್ಯಕಿಯವರು ಮೊದಲು ದ್ವಿರಾಷ್ಟ್ರ ಪ್ರಸ್ತಾಪ ಮಾಡಿದವರು ಸೈಯದ್ ಅಹ್ಮದ್ ಖಾನ್ ರವರು ಎಂದು ಹೇಳುತ್ತಾರೆ. ಖಾನ್ ರವರು 1880 ರಲ್ಲಿ ಮಾಡಿದ್ದ ಪ್ರಸ್ತಾಪವನ್ನು 1925 ರಲ್ಲಿ ಸಾವರ್ಕರ್ ಬೆಂಬಲಿಸಿದ್ದರು. ಪ್ರಸ್ತಾಪವನ್ನು ಯಾರು ಮಾಡಿದರೇನು ದೇಶ ವಿಭಜನೆಯನ್ನು ಸಾವರ್ಕರ್ ಸಮರ್ಥಿಸಿಕೊಂಡಿದ್ದಂತೂ ಸತ್ಯ. ಆದರೆ ಸಂಘಿಗಳು ದೇಶ ವಿಭಜನೆಗೆ ನೆಹರುರವರೇ ಕಾರಣ ಎಂಬ ಸುಳ್ಳು ಹೇಳುತ್ತಲೇ ಇದ್ದಾರೆ.
ಹಿಂದೂ ರಾಷ್ಟ್ರ ಪರಿಕಲ್ಪನೆ
ಸಾವರ್ಕರ್, ಭಾರತವನ್ನು ಧರ್ಮದ ಆಧಾರದಲ್ಲಿ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಯೋಜನೆಯಲ್ಲಿದ್ದರು. ಅವರ ಹಿಂದುತ್ವ ಕುರಿತ ಪುಸ್ತಕದಲ್ಲಿ ಅದನ್ನೇ ಪ್ರಸ್ತಾಪಿಸಿದ್ದರು. ಆರೆಸ್ಸೆಸ್ ಸಂಘದ ಉದ್ದೇಶವೂ ಸಹ ಜಾತ್ಯತೀತ ಭಾರತವನ್ನು ಹಿಂದುತ್ವದ ಆಧಾರದ ಹಿಂದೂ ರಾಷ್ಟ್ರವನ್ನಾಗಿಸುವುದೇ ಆಗಿದೆ. ಈ ಸಿದ್ಧಾಂತದ ಮೂಲ ಪುರುಷ ಸಾವರ್ಕರ್ ನಂತರ ಗೋಲ್ವಾಲ್ಕರ್ ರವರಾಗಿದ್ದಾರೆ. ಆದರೆ ಅಂಬೇಡ್ಕರ್ ರವರ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲವಾಗಿದೆ. ಈ ದೇಶ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರದೇ ಸಮಸ್ತ ಭಾರತೀಯರದ್ದಾಗಿದೆ. ಆದರೂ ಸಾವರ್ಕರ್ ಅವರ ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಜಾರಿ ಮಾಡಲು ಸಂಘವು ಪ್ರಯತ್ನಿಸುತ್ತಲೇ ಇದೆ.
ಬ್ರಿಟೀಷ್ ಸೇನೆಗೆ ಹಿಂದೂಗಳು
ಎರಡನೇ ಮಹಾಯುದ್ಧದ ( 1942) ಸಮಯದಲ್ಲಿ ಬ್ರಿಟೀಷ್ ಸೇನೆ ಸೇರುವಂತೆ ಹಿಂದೂ ಯುವಕರಿಗೆ ಸಾವರ್ಕರ್ ಕರೆ ಕೊಟ್ಟಿದ್ದು ನಿಜ ಎಂದು ಸತ್ಯಕಿಯವರು ಒಪ್ಪಿಕೊಳ್ಳುತ್ತಾರೆ, ಹಾಗೂ ಇತಿಹಾಸವೂ ಅದನ್ನೇ ಹೇಳುತ್ತದೆ. ಸಾವರ್ಕರ್ ರವರ ಈ ಹೇಳಿಕೆ ಹಿಂದೆ ಬ್ರಿಟೀಷರ ಓಲೈಕೆ ಮುಖ್ಯವಾಗಿತ್ತು. ತಮ್ಮ ಬಿಡುಗಡೆಗಾಗಿ ಬ್ರಿಟೀಷರ ಜೊತೆಗೆ ಮಾಡಿಕೊಂಡ ಶರತ್ತಿನ ಭಾಗವಾಗಿತ್ತು. ಇಡೀ ದೇಶವೇ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಆಂದೋಲನ ಮಾಡುತ್ತಿರುವಾಗ, ಗಾಂಧೀಜಿಯವರು ಬ್ರಿಟೀಷರನ್ನು ಓಡಿಸಲು ಕ್ವಿಟ್ ಇಂಡಿಯಾ ಚಳುವಳಿ ಮಾಡುತ್ತಿರುವಾಗ, ಬ್ರಿಟೀಷರು ಭಾರತದಲ್ಲಿ ದಬ್ಬಾಳಿಕೆ ಮಾಡುತ್ತಿರುವಾಗ ಬ್ರಿಟೀಷ್ ಸೈನ್ಯ ಸೇರಿ ಎಂದು ಸಾವರ್ಕರ್ ಸಾರ್ವಜನಿಕವಾಗಿ ಕರೆ ಕೊಟ್ಟಿದ್ದು ದೇಶ ವಿರೋಧಿ ಕೃತ್ಯವಾಗಿದೆ. ಆದರೆ ಇದನ್ನು ಮರೆಮಾಚಲು ಸಾವರ್ಕರ್ ಹಾಗೆ ಹೇಳಿದ್ದಲ್ಲ, “ಬ್ರಿಟೀಷ್ ಸೈನ್ಯದಲ್ಲಿ ಸೇರಿ ಹಿಂದೂಗಳು ಯುದ್ಧ ಕಲೆ ಕಲಿತರೆ ಮುಂದೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಉಪಯೋಗಕ್ಕೆ ಬರುತ್ತದೆ” ಎನ್ನುವ ಅರ್ಥದಲ್ಲಿ ಹಾಗೆ ಕರೆ ಕೊಟ್ಟಿದ್ದು ಎಂದು ಸಂಘಿಗಳು ಸಮರ್ಥಸಿಕೊಳ್ಳುತ್ತಾರೆ.
ಹಿಂದೂ ಧರ್ಮ ಎಂದು ಸಂಘ ಪರಿವಾರದವರು ಹೇಳುತ್ತಲೇ ಇರುತ್ತಾರೆ. ಆದರೆ ಹಿಂದೂ ಎನ್ನುವುದು ಧರ್ಮವಲ್ಲ ಅದೊಂದು ರಾಷ್ಟ್ರೀಯ ಗುರುತು ಎಂದು ಸಾವರ್ಕರ್ 1923 ರಲ್ಲಿ ಬರೆದ ಹಿಂದುತ್ವ ಕೃತಿಯಲ್ಲಿ ಹೇಳುತ್ತಾರೆ. ಹಾಗೆಯೇ ಭಾರತ ಹಿಂದೂಗಳ ಪುಣ್ಯ ಭೂಮಿ ಎಂದೂ ಸಮರ್ಥಿಸಿಕೊಳ್ಳುತ್ತಾರೆ. ಹಿಂದು ಎನ್ನುವುದು ರಾಷ್ಟ್ರೀಯತೆ (Nationality) ಎಂದಿದ್ದಾರೆ. ಆದರೆ ಭಾರತದಲ್ಲಿ ಇರುವವರೆಲ್ಲರ ರಾಷ್ಟ್ರೀಯತೆ ಒಂದೇ ಎಂದು ಸಂವಿಧಾನ ಸಾರುತ್ತದೆ.

ಸಾವರ್ಕರ್ ರವರನ್ನು ಹಿಂದುತ್ವದ ಪರಮ ಗುರು ಎಂದು ಆರಾಧಿಸುವ ಆರೆಸ್ಸೆಸ್ ಹಾಗೂ ಬಿಜೆಪಿಗರು ಸಾವರ್ಕರ್ ಪ್ರತಿಪಾದಿಸಿದ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ವಿಪರ್ಯಾಸ.
* ಸಾವರ್ಕರ್ ಗೋವನ್ನು ಕೇವಲ ಒಂದು ಪ್ರಾಣಿ ಎಂದರೆ ಈ ಸಂಘಿಗಳು ಪವಿತ್ರ ದೇವತೆ ಎಂಬಂತೆ ಪೂಜಿಸುತ್ತಾರೆ.
* ಸಾವರ್ಕರ್ ನಾಸ್ತಿಕರಾಗಿದ್ದರೆ ಈ ಸಂಘಿಗಳು ದೇವತೆಗಳ ಆರಾಧಕರಾಗಿ ದೇವರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ.
* ಸಾವರ್ಕರ್ ಜಾತಿ ವ್ಯವಸ್ಥೆಯ ವಿರುದ್ಧವಾಗಿದ್ದರೆ, ಈ ಸಂಘಿ ಪರಿವಾರದವರು ಜಾತಿ ವರ್ಣ ವ್ಯವಸ್ಥೆಯ ಪ್ರತಿಪಾದಕರಾಗಿದ್ದಾರೆ.
* ಸಾವರ್ಕರ್ ಹಿಂದೂಗಳನ್ನು ಒಂದಾಗಿ ನೋಡುವಂತೆ ಕರೆ ಕೊಟ್ಟಿದ್ದರು. ಆದರೆ ರಾಜಕೀಯ ಕಾರಣಕ್ಕೆ “ನಾವೆಲ್ಲಾ ಹಿಂದು, ನಾವೆಲ್ಲಾ ಒಂದು” ಎನ್ನುವ ಸಂಘ ಬ್ರಾಹ್ಮಣ ಶ್ರೇಷ್ಠತೆಯನ್ನೇ ಆಚರಣೆಗೆ ತಂದು ಜಾತಿ ತಾರತಮ್ಯವನ್ನು ಮುಂದುವರೆಸಿದೆ. ವರ್ಣವ್ಯವಸ್ಥೆಯ ಪ್ರತಿಪಾದಕ ಮನುಸ್ಮೃತಿಯನ್ನೇ ಆಧರಿಸಿದ ಹಿಂದುತ್ವವಾದಿ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ.
* ಸಾವರ್ಕರ್ ಹಿಂದುತ್ವವನ್ನು ಧಾರ್ಮಿಕ ಕಲ್ಪನೆಯಿಂದ ರಾಷ್ಟ್ರೀಯ ಕಲ್ಪನೆಯಾಗಿ ಬದಲಾಯಿಸಲು ಪ್ರಯತ್ನಿಸಿದರು. ಆದರೆ ಆರೆಸ್ಸೆಸ್ ಹಾಗೂ ಬಿಜೆಪಿಗರು ಹಿಂದುತ್ವವನ್ನು ಧಾರ್ಮಿಕ ಕೇಂದ್ರಿತವನ್ನಾಗಿಸಿದರು. ರಾಷ್ಟ್ರೀಯ ಒಗ್ಗಟ್ಟಿಗಿಂತಲೂ ಧಾರ್ಮಿಕ ಬಿಕ್ಕಟ್ಟನ್ನೇ ಆಂದೋಲನವಾಗಿಸಿಕೊಂಡರು. ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವ ಸಂಕಥನವನ್ನು ಮುಂದಿಟ್ಟುಕೊಂಡು ದ್ವೇಷಮಯ ವಾತಾವರಣವನ್ನು ಸೃಷ್ಟಿಸಿದರು.
* ಸಾವರ್ಕರ್ ‘ಹಿಂದೂ ಆಗಿರಬೇಕಾದರೆ ಭಾರತ ಪಿತೃಭೂಮಿಯಾಗಿರಬೇಕು’ ಎಂದು ಹೇಳಿದರು. ಆದರೆ ಅವರ ಆರಾಧಕರು ಭಾರತವನ್ನು ಮಾತೃಭೂಮಿಯನ್ನಾಗಿಸಿ ಭಾವನಾತ್ಮಕಗೊಳಿಸಿದರು. ‘ಭಾರತ ಪುಣ್ಯಭೂಮಿಯಾಗಿರಬೇಕು’ ಎಂದರು. ಆದರೆ ಕೇವಲ ಅಯೋಧ್ಯೆ ಕಾಶಿ ಮಥುರಾಗಳಂತಹ ಧಾರ್ಮಿಕ ಕ್ಷೇತ್ರಗಳನ್ನು ಪುಣ್ಯಭೂಮಿಯನ್ನಾಗಿಸಲು ಸಂಘ ಪ್ರಯತ್ನಿಸಿತು. ‘ ಹಿಂದೂ ಆದವನು ಭಾರತದ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು’ ಎಂದರು. ಆದರೆ ಸನಾತನ ಮನುವಾದಿ ಸಂಸ್ಕೃತಿಯನ್ನು ಬಹುತ್ವದ ಭಾರತದ ಮೇಲೆ ಹೇರಲು ಸಂಘಿಗಳು ಪ್ರಯತ್ನಿಸಿದರು.
ಹೀಗೆ.. ಸಾವರ್ಕರ್ ಅವರನ್ನು ಆರಾಧಿಸುವ ಸನಾತನವಾದಿಗಳು ಸಾವರ್ಕರ್ ಅವರನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕೇವಲ ತಮ್ಮ ಮನುವಾದಿ ವರ್ಣಸಿದ್ಧಾಂತದ ಜಾರಿಯ ಗುರಿಯನ್ನು ಮುಟ್ಟಲು ಸಾವರ್ಕರರವರನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದುತ್ವದ ಐಕಾನ್ ಎನ್ನುವಂತೆ ವಿಜೃಂಭಿಸುತ್ತಿದ್ದಾರೆ. ಸಾವರ್ಕರರವರನ್ನು ಪ್ರಶ್ನಿಸಿದವರ ಮೇಲೆ ಕೇಸ್ ಹಾಕಿ ಕಿರುಕುಳ ಕೊಡುತ್ತಿದ್ದಾರೆ. “ಹಿಂದುತ್ವ ಎಂದರೆ ಬಹುತ್ವದ ನಾಶ ಹಾಗೂ ಅನ್ಯಧರ್ಮ ದ್ವೇಷ” ಎಂಬುದಕ್ಕೆ ಅನ್ವರ್ಥರಾಗಿದ್ದಾರೆ.
ಶಶಿಕಾಂತ್ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ದೀದಿ ಸುತ್ತ ಮೋದಿ ಶಡ್ಯಂತ್ರಗಳ ಹುತ್ತ


