ಸಂಪಾದಕೀಯ | ಮೋದಿ ಹುಟ್ಟುಹಾಕಿದ ಹೊಸ ಪದ -ದಿಮಾಗೀ ನಕ್ಸಲರು: ಭಿನ್ನಮತವನ್ನು ಹತ್ತಿಕ್ಕುವ ಹೊಸ ಪರಿಭಾಷೆ

 ದಿಮಾಗೀ ನಕ್ಸಲ್ ಯಾರು? ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತನಾ? ಸರ್ಕಾರದ ನೀತಿಯನ್ನು ಟೀಕಿಸುವ ಲೇಖಕನಾ? ಶೋಷಣೆಯ ವಿರುದ್ಧ ಕವಿತೆ ಬರೆಯುವ ಕವಿಯೇ?‌ ಆದಿವಾಸಿಗಳ ಹಕ್ಕುಗಳ ಬಗ್ಗೆ ಮಾತನಾಡುವ ಸಾಮಾಜಿಕ ಕಾರ್ಯಕರ್ತನೆ? ಅಭಿವೃದ್ಧಿ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಜನರ ಪರ ನಿಲ್ಲುವ ವಕೀಲನೇ? ವಿಶ್ವವಿದ್ಯಾಲಯದಲ್ಲಿ ಸರ್ಕಾರದ ವಿರುದ್ಧ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವ ವಿದ್ಯಾರ್ಥಿಯೇ? ಅಥವಾ ಸರ್ಕಾರದ ಯಾವುದೇ ನೀತಿಯನ್ನು ಒಪ್ಪದ ಸಾಮಾನ್ಯ ನಾಗರಿಕನೇ? ಅಥವಾ ಈ ಎಲ್ಲರೂ ದಿಮಾಗೀ ನಕ್ಸಲ್ ಆಗುತ್ತಾರೆಯೇ?- ದಿನೇಶ್‌ ಕುಮಾರ್‌ ಎಸ್‌ ಸಿ, ಸಂಪಾದಕರು, ಕನ್ನಡ ಪ್ಲಾನೆಟ್.ಕಾಮ್

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ದಿನದ ತಮ್ಮ ಭಾಷಣದಲ್ಲಿ ಬಳಸಿದ ‘ದಿಮಾಗೀ ನಕ್ಸಲ್’ ಎಂಬ ಪದಪ್ರಯೋಗ ದೇಶದ ಪ್ರಜಾಪ್ರಭುತ್ವದ ಸ್ವರೂಪದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಶಸ್ತ್ರ ನಕ್ಸಲಿಸಂ ಹೋರಾಟಕ್ಕೂ, ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಬೌದ್ಧಿಕ, ಸಾಮಾಜಿಕ ಅಥವಾ ರಾಜಕೀಯ ಅಭಿಪ್ರಾಯಗಳಿಗೂ ಒಂದೇ ಪದದ ಮೂಲಕ ಸಂಬಂಧ ಕಲ್ಪಿಸುವುದು ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಯನ್ನು ಕೇಳಲೇಬೇಕಾಗಿದೆ.

ಸಶಸ್ತ್ರ ಹಿಂಸಾಚಾರ ನಡೆಸುವ ವ್ಯಕ್ತಿ ಅಥವಾ ಸಂಘಟನೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ದೇಶದ ಭದ್ರತೆಗೆ ಸವಾಲು ಹಾಕುವ ಶಸ್ತ್ರಸಜ್ಜಿತ ಚಳವಳಿಯನ್ನು ನಿಯಂತ್ರಿಸುವ ಅಗತ್ಯದ ಬಗ್ಗೆ ಭಿನ್ನಾಭಿಪ್ರಾಯವಿರಬೇಕಾಗಿಲ್ಲ. ಆದರೆ ಬಂದೂಕು ಹಿಡಿದ ನಕ್ಸಲರ ವಿರುದ್ಧದ ಹೋರಾಟ ಮುಗಿದ ನಂತರ, ಅವರಂತೆ ಯೋಚಿಸುವ ಅಥವಾ ಅವರ ವಿಚಾರಗಳನ್ನು ಬೆಂಬಲಿಸುವವರ ಬಗ್ಗೆ ಎಚ್ಚರಿಕೆ ನೀಡುವುದಾದರೆ, ಆ ‘ಅವರಂತೆ ಯೋಚಿಸುವವರು’ ಯಾರು ಎಂಬುದನ್ನು ಸ್ಪಷ್ಟಪಡಿಸುವ ಹೊಣೆಗಾರಿಕೆಯೂ ಸರ್ಕಾರದ್ದೇ ಆಗುತ್ತದೆ.

‘ದಿಮಾಗೀ ನಕ್ಸಲ್’ ಎಂಬ ಪದಕ್ಕೆ ಕಾನೂನಿನಲ್ಲಿ ನಿಖರವಾದ ವ್ಯಾಖ್ಯಾನವಿಲ್ಲ. ಹಾಗಿದ್ದರೆ ದಿಮಾಗೀ ನಕ್ಸಲ್  ಯಾರು? ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತನಾ? ಸರ್ಕಾರದ ನೀತಿಯನ್ನು ಟೀಕಿಸುವ ಲೇಖಕನಾ? ಶೋಷಣೆಯ ವಿರುದ್ಧ ಕವಿತೆ ಬರೆಯುವ ಕವಿಯೇ?‌ ಆದಿವಾಸಿಗಳ ಹಕ್ಕುಗಳ ಬಗ್ಗೆ ಮಾತನಾಡುವ ಸಾಮಾಜಿಕ ಕಾರ್ಯಕರ್ತನೆ? ಅಭಿವೃದ್ಧಿ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಜನರ ಪರ ನಿಲ್ಲುವ ವಕೀಲನೇ? ವಿಶ್ವವಿದ್ಯಾಲಯದಲ್ಲಿ ಸರ್ಕಾರದ ವಿರುದ್ಧ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವ ವಿದ್ಯಾರ್ಥಿಯೇ? ಅಥವಾ ಸರ್ಕಾರದ ಯಾವುದೇ ನೀತಿಯನ್ನು ಒಪ್ಪದ ಸಾಮಾನ್ಯ ನಾಗರಿಕನೇ? ಅಥವಾ ಈ ಎಲ್ಲರೂ ದಿಮಾಗೀ ನಕ್ಸಲ್ ಆಗುತ್ತಾರೆಯೇ?

ಈ ಪ್ರಶ್ನೆಗಳಿಗೆ ಉತ್ತರ ನೀಡದೆ ‘ದಿಮಾಗೀ ನಕ್ಸಲ್’ ಎಂಬ ಒಂದು ವಿಶಾಲವಾದ ರಾಜಕೀಯ ಲೇಬಲ್ ಬಳಸಿದರೆ, ನಾಳೆ ಆ ಪದವು ಯಾರ ಮೇಲಾದರೂ ಅಂಟಿಸಬಹುದಾದ ಅಪಾಯಕಾರಿ ಮುದ್ರೆಯಾಗಬಹುದು.

ಪ್ರಜಾಪ್ರಭುತ್ವದ ಸೌಂದರ್ಯವೇನೆಂದರೆ, ಸರ್ಕಾರವನ್ನು ಬೆಂಬಲಿಸುವ ಹಕ್ಕು ನಿಮಗೆ ಇದ್ದ ಹಾಗೆಯೇ ಸರ್ಕಾರವನ್ನು ಪ್ರಶ್ನಿಸುವ ಹಕ್ಕೂ ಇರುತ್ತದೆ. ದೇಶದ್ರೋಹ ಮತ್ತು ಭಿನ್ನಮತ ಒಂದೇ ಅಲ್ಲ, ಒಂದೇ ಆಗಲು ಸಾಧ್ಯವೂ ಇಲ್ಲ. ಹಿಂಸಾಚಾರ ಮತ್ತು ವೈಚಾರಿಕತೆ ಒಂದೇ ಅಲ್ಲ. ಸರ್ಕಾರದ ವಿರುದ್ಧದ ಟೀಕೆ ಮತ್ತು ರಾಷ್ಟ್ರದ ವಿರುದ್ಧದ ಕೃತ್ಯ ಒಂದೇ ಅಲ್ಲ. ಈ ವ್ಯತ್ಯಾಸವನ್ನು ಅಳಿಸಿಹಾಕುವ ಯಾವುದೇ ಭಾಷೆ ಅಂತಿಮವಾಗಿ ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸುತ್ತದೆ.

ಒಬ್ಬ ಲೇಖಕ ಸರ್ಕಾರದ ಆರ್ಥಿಕ ನೀತಿಯನ್ನು ಪ್ರಶ್ನಿಸಿದರೆ ಆತ ನಕ್ಸಲನೆಂದು ಹಣೆ ಪಟ್ಟಿ ಹಚ್ಚಲಾದೀತೆ ? ಒಬ್ಬ ಕಲಾವಿದ ಸಮಾಜದಲ್ಲಿನ ಅಸಮಾನತೆಯನ್ನು ತನ್ನ ಕೃತಿಯಲ್ಲಿ ಪ್ರತಿಬಿಂಬಿಸಿದರೆ ಆತ ನಕ್ಸಲನಾಗುತ್ತಾನೆಯೇ? ಒಬ್ಬ ವಿದ್ಯಾರ್ಥಿ ಸಂವಿಧಾನದ ಆಶಯಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಪ್ರಶ್ನಿಸಿದರೆ ಆತನ ಚಿಂತನೆ ‘ನಕ್ಸಲ್’ ಆಗುತ್ತದೆಯೇ? ಒಬ್ಬ ಪತ್ರಕರ್ತ ಸರ್ಕಾರದ ತಪ್ಪುಗಳನ್ನು ಬಯಲಿಗೆಳೆದರೆ ಆತನ ಮಿದುಳನ್ನು ಶಂಕಿಸುವುದು ಪ್ರಜಾಪ್ರಭುತ್ವದ ಯಾವ ಮೌಲ್ಯವನ್ನು ಬೆಳೆಸುತ್ತದೆ?

ಪ್ರಶ್ನಿಸುವ ಮನಸ್ಸು ಎಂದಿಗೂ ಪ್ರಜಾಪ್ರಭುತ್ವದ ಶತ್ರುವಲ್ಲ. ವಾಸ್ತವವಾಗಿ, ಪ್ರಶ್ನಿಸುವ ಮನಸ್ಸೇ ಪ್ರಜಾಪ್ರಭುತ್ವದ ರಕ್ಷಣಾ ಕವಚ. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ನಾಗರಿಕನಿಗೆ ಉತ್ತರ ನೀಡುವುದು ಸರ್ಕಾರದ ದೌರ್ಬಲ್ಯವಲ್ಲ; ಅದು ಅದರ ಪ್ರಜಾಸತ್ತಾತ್ಮಕ ಹೊಣೆಗಾರಿಕೆ. ಪ್ರಶ್ನೆಗಳೇ ಪ್ರಜಾಪ್ರಭುತ್ವವನ್ನು ಬೆಳೆಸುತ್ತವೆ.

ಪ್ರಭುತ್ವಕ್ಕೆ ವಿಧೇಯ ನಾಗರಿಕರು ಮಾತ್ರ ಬೇಕೆಂಬ ಕಲ್ಪನೆ ಪ್ರಜಾಪ್ರಭುತ್ವದ ಮೂಲಭೂತ ಸ್ವಭಾವಕ್ಕೆ ವಿರುದ್ಧವಾಗಿದೆ. ಸರ್ಕಾರವು ಜನರಿಂದ ಅಧಿಕಾರ ಪಡೆದ ಸಂಸ್ಥೆ; ಜನರು ಸರ್ಕಾರದಿಂದ ಅಧಿಕಾರ ಪಡೆದವರಲ್ಲ. ಆದ್ದರಿಂದ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಜನರಿಗೆ ಸಂವಿಧಾನ ನೀಡಿರುವ ಮೂಲಭೂತ ಪ್ರಜಾಸತ್ತಾತ್ಮಕ ಅವಕಾಶ.

ವಿಶೇಷವಾಗಿ ‘ಮಿದುಳು’ ಅಥವಾ ‘ಚಿಂತನೆ’ಯನ್ನೇ ರಾಜಕೀಯ ಅನುಮಾನಕ್ಕೆ ಒಳಪಡಿಸುವ ಭಾಷೆ ಅತ್ಯಂತ ಎಚ್ಚರಿಕೆಯಿಂದ ಬಳಕೆಯಾಗಬೇಕು. ಒಬ್ಬ ನಾಗರಿಕ ತಪ್ಪು ಮಾಡಿದರೆ ಆತನ ಕೃತ್ಯವನ್ನು ಕಾನೂನಿನ ಅಡಿಯಲ್ಲಿ ಪರಿಶೀಲಿಸಬಹುದು. ಆತನ ಭಾಷಣ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬಹುದು. ಆತನ ಬರಹದಲ್ಲಿ ಹಿಂಸೆಗೆ ಪ್ರಚೋದನೆ ಇದ್ದರೆ ಕಾನೂನು ತನ್ನ ಕೆಲಸ ಮಾಡಬಹುದು. ಆದರೆ ಆತ ಏನು ಯೋಚಿಸುತ್ತಾನೆ ಎಂಬುದನ್ನೇ ಅಪರಾಧದ ಪೂರ್ವಭಾವಿಯಾಗಿ ನೋಡುವ ಮನೋಭಾವ ಬೆಳೆದರೆ, ಅದು ನಾಗರಿಕ ಸ್ವಾತಂತ್ರ್ಯದ ಗಡಿಯನ್ನು ಅಪಾಯಕಾರಿ ರೀತಿಯಲ್ಲಿ ಕುಗ್ಗಿಸುತ್ತದೆ.

ಇತಿಹಾಸದಲ್ಲಿ ಯಾವುದೇ ಅಧಿಕಾರಶಾಹಿ ವ್ಯವಸ್ಥೆ ತನ್ನನ್ನು ಟೀಕಿಸುವವರನ್ನು ಮೊದಲು ‘ಅಪಾಯಕಾರಿ’, ನಂತರ ‘ದೇಶವಿರೋಧಿ’, ಅಂತಿಮವಾಗಿ ‘ಶತ್ರು’ ಎಂದು ಗುರುತಿಸುವ ಪ್ರವೃತ್ತಿಯನ್ನು ತೋರಿಸಿದೆ. ಪದಗಳು ಬದಲಾಗಬಹುದು; ಆದರೆ ಉದ್ದೇಶ ಒಂದೇ—ವಿರೋಧದ ಧ್ವನಿಗೆ ಸಾಮಾಜಿಕ ಮಾನ್ಯತೆ ಸಿಗದಂತೆ ಮಾಡುವುದು. ಇದು ಒಂದು ರೀತಿಯಲ್ಲಿ ಸರ್ವಾಧಿಕಾರಿ ಮನಸ್ಥಿತಿಯ ರೂಪಕಗಳು.

ಸರ್ಕಾರ ನಿಜವಾಗಿಯೂ ‘ದಿಮಾಗೀ ನಕ್ಸಲ’ ಎಂಬ ಪದವನ್ನು ಸಶಸ್ತ್ರ ನಕ್ಸಲಿಸಂನ ಪರವಾಗಿ ಬೌದ್ಧಿಕ ಬೆಂಬಲ ನೀಡುವ ನಿರ್ದಿಷ್ಟ ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಸೂಚಿಸಲು ಬಳಸುತ್ತಿದ್ದರೆ, ಅದರ ಮಾನದಂಡಗಳನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ಯಾವ ಕೃತ್ಯ? ಯಾವ ಹೇಳಿಕೆ? ಯಾವ ಸಂಘಟನೆ? ಯಾವ ಕಾನೂನು? ಯಾವ ಸಾಕ್ಷ್ಯ? ಈ ಪ್ರಶ್ನೆಗಳಿಗೆ ಉತ್ತರ ಇರಬೇಕು.

ಇಲ್ಲದಿದ್ದರೆ, ಇಂದು ‘ದಿಮಾಗೀ ನಕ್ಸಲ್’ ಎಂದು ಕರೆಯಲ್ಪಡುವವನು ನಾಳೆ ಸರ್ಕಾರವನ್ನು ಪ್ರಶ್ನಿಸುವ ಪ್ರತಿಯೊಬ್ಬನಿಗೂ ಅನ್ವಯವಾಗುವ ರಾಜಕೀಯ ಬೈಗುಳವಾಗಿ ಮಾರ್ಪಡುವ ಅಪಾಯವಿದೆ.

ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ದೇಶದ ನಾಗರಿಕರಿಗೆ ನೀಡಬೇಕಾದ ದೊಡ್ಡ ಸಂದೇಶವೆಂದರೆ—‘ಭಯಪಡಬೇಡಿ, ಪ್ರಶ್ನಿಸಿ’ ಎಂಬುದಾಗಿರಬೇಕಿತ್ತು. ಯಾಕೆಂದರೆ ಸ್ವಾತಂತ್ರ್ಯ ಎಂದರೆ ಕೇವಲ ವಿದೇಶಿ ಆಳ್ವಿಕೆಯಿಂದ ಮುಕ್ತಿ ಪಡೆದ ದಿನವನ್ನು ನೆನಪಿಸಿಕೊಳ್ಳುವುದಲ್ಲ. ಸ್ವಾತಂತ್ರ್ಯ ಎಂದರೆ ನಮ್ಮದೇ ಸರ್ಕಾರವನ್ನು ಪ್ರಶ್ನಿಸುವ ಧೈರ್ಯವನ್ನೂ ಉಳಿಸಿಕೊಳ್ಳುವುದು.

ಭಿನ್ನಮತ ದೇಶದ್ರೋಹವಲ್ಲ. ವಿಮರ್ಶೆ ರಾಷ್ಟ್ರವಿರೋಧವಲ್ಲ. ಪ್ರಶ್ನಿಸುವುದು ನಕ್ಸಲಿಸಂ ಅಲ್ಲ. ಚಿಂತನೆ ಅಪರಾಧವಲ್ಲ. ಇದು ನರೇಂದ್ರ ಮೋದಿಯವರಿಗೆ ಪ್ರಧಾನಿಯಾಗಿ 12 ವರ್ಷ ಕಳೆದರೂ ಅರ್ಥವಾಗದೆ ಇರುವುದು ನೋವಿನ ವಿಷಯ.

ಸಶಸ್ತ್ರ ಹಿಂಸೆಯನ್ನು ಖಂಡಿಸೋಣ. ನಕ್ಸಲಿಸಂ ಅನ್ನು ವಿರೋಧಿಸೋಣ. ಆದರೆ ಅದೇ ಸಂದರ್ಭದಲ್ಲಿ ಭಿನ್ನವಾಗಿ ಯೋಚಿಸುವ ಹಕ್ಕನ್ನೂ ರಕ್ಷಿಸೋಣ. ಏಕೆಂದರೆ ಬಂದೂಕಿನ ವಿರುದ್ಧ ರಾಜ್ಯ ತನ್ನ ಶಕ್ತಿಯನ್ನು ಬಳಸಬಹುದು; ಆದರೆ ಒಂದು ವಿಚಾರವನ್ನು ಸೋಲಿಸಲು ವಿಚಾರವೇ ಬೇಕು. ವಿಚಾರವನ್ನು ಲೇಬಲ್ ಮಾಡಿ ಮೌನಗೊಳಿಸುವ ಪ್ರಯತ್ನ ಪ್ರಜಾಪ್ರಭುತ್ವದ ಗೆಲುವಲ್ಲ—ಅದು ಅದರ ಸೋಲಿನ ಆರಂಭ.

ಆದ್ದರಿಂದ ಪ್ರಧಾನಮಂತ್ರಿಯವರು ‘ದಿಮಾಗೀ ನಕ್ಸಲ್’ ಎಂಬ ಪದಪ್ರಯೋಗದ ವ್ಯಾಪ್ತಿ ಮತ್ತು ಉದ್ದೇಶವನ್ನು ಪುನರ್‌ವಿಮರ್ಶೆ ಮಾಡಬೇಕಾಗಿದೆ. ದೇಶಕ್ಕೆ ಬೇಕಿರುವುದು ಒಂದೇ ರೀತಿಯಲ್ಲಿ ಯೋಚಿಸುವ ನಾಗರಿಕರ ಸಮಾಜವಲ್ಲ; ವಿಭಿನ್ನವಾಗಿ ಯೋಚಿಸಿದರೂ ಒಂದೇ ಸಂವಿಧಾನದ ಅಡಿಯಲ್ಲಿ ಬದುಕಬಲ್ಲ ನಾಗರಿಕರ ಸಮಾಜ.

ಪ್ರಜಾಪ್ರಭುತ್ವಕ್ಕೆ ವಿಧೇಯ ತಲೆಗಳಿಗಿಂತ, ಸ್ವತಂತ್ರವಾಗಿ ಯೋಚಿಸುವ ತಲೆಗಳು ಹೆಚ್ಚು ಅಗತ್ಯ.

ದಿನೇಶ್‌ ಕುಮಾರ್‌ ಎಸ್‌ ಸಿ
ಸಂಪಾದಕರು, ಕನ್ನಡ ಪ್ಲಾನೆಟ್‌.ಕಾಮ್‌

ಇದನ್ನೂ ಓದಿ- ಸರ್ಕಾರವನ್ನು ಪ್ರಶ್ನಿಸುವ ಯುವಕರನ್ನು ನಕ್ಸಲರು ಎಂದು ಕರೆಯುವುದು ದುರಹಂಕಾರ: ಮೋದಿ ಭಾಷಣಕ್ಕೆ ಸಿಜೆಪಿ ಆಕ್ರೋಶ

More articles

Latest article

Most read