ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಸ್ತಾಪವಾದ ‘ದಿಮಾಗೀ ನಕ್ಸಲ್’ ಪದ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ರಾಜಕೀಯ ವ್ಯಂಗ್ಯಕ್ಕೆ ಕಾರಣವಾಗಿದೆ. ‘ದಿಮಾಗೀ ನಕ್ಸಲ್ ಪಾರ್ಟಿ’ ಹೆಸರಿನಲ್ಲಿ ಆರಂಭವಾಗಿರುವ ಸಾಮಾಜಿಕ ಜಾಲತಾಣ ಖಾತೆಗಳಿಗೆ ಭಾರೀ ಪ್ರಮಾಣದಲ್ಲಿ ಫಾಲೋವರ್ಸ್ ಸೇರ್ಪಡೆಯಾಗುತ್ತಿದ್ದಾರೆ.
‘ದಿಮಾಗೀ ನಕ್ಸಲ್ ಪಾರ್ಟಿ’ ಹೆಸರಿನ Instagram ಖಾತೆ @dimaginaxalpartyy ಒಂದೇ ದಿನದಲ್ಲಿ 1.8 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಗಳಿಸಿದ್ದು, ಸೋಮವಾರ ಮಧ್ಯಾಹ್ನದ ವೇಳೆಗೆ ವಿವಿಧ ವರದಿಗಳ ಪ್ರಕಾರ ಅದರ ಫಾಲೋವರ್ಸ್ ಸಂಖ್ಯೆ 1.9 ಲಕ್ಷದ ಆಸುಪಾಸಿಗೆ ತಲುಪಿತ್ತು. ಖಾತೆ ಕೆಲಕಾಲ ಲಭ್ಯವಿರಲಿಲ್ಲ. ಆದರೆ ಮತ್ತೆ ‘We are back’ ಎಂಬ ಸಂದೇಶದೊಂದಿಗೆ ಕಾಣಿಸಿಕೊಂಡಿದೆ. ಖಾತೆಯ ಹಿಂದೆ ಯಾರು ಇದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಇದೇ ಹೆಸರಿನ ‘ದಿಮಾಗೀ ನಕ್ಸಲ್ ಜನತಾ ಪಾರ್ಟಿ’ (@DNJP_India) ಖಾತೆಯೂ Xನಲ್ಲಿ ವೇಗವಾಗಿ ಗಮನ ಸೆಳೆದಿದೆ. ಈ ಖಾತೆ ಒಂದೇ ದಿನದಲ್ಲಿ 57 ಸಾವಿರಕ್ಕೂ ಅಧಿಕ ಅನುಯಾಯಿಗಳನ್ನು ಗಳಿಸಿತ್ತು ಎಂದು ವರದಿಯಾಗಿದೆ.
Instagram ಮತ್ತು X ಖಾತೆಗಳ ಬಯೋದಲ್ಲಿ ‘Think | Research | Resist’ ಎಂಬ ಘೋಷವಾಕ್ಯ ಬಳಸಲಾಗಿದೆ. ಭಗತ್ ಸಿಂಗ್ ಅವರ ವಿಚಾರಧಾರೆಯನ್ನು ಅನುಸರಿಸುವುದಾಗಿ ಖಾತೆಯ ಪೋಸ್ಟ್‌ಗಳಲ್ಲಿ ಹೇಳಿಕೊಂಡಿದ್ದು, ‘ನಮ್ಮ ಆಯುಧ ಮನಸ್ಸು, ನಮ್ಮ ಕ್ರಾಂತಿ ವಿಚಾರಗಳದ್ದು’ ಎಂಬ ಸಂದೇಶಗಳನ್ನೂ ಹಂಚಿಕೊಳ್ಳಲಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಪ್ರಧಾನಿ ಮೋದಿ ಅವರ ‘ದಿಮಾಗೀ ನಕ್ಸಲ್’ ಹೇಳಿಕೆ ಕುರಿತು ರಾಜಕೀಯ ಚರ್ಚೆಯೂ ತೀವ್ರಗೊಂಡಿದೆ. ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ‘ದಿಮಾಗೀ ನಕ್ಸಲ್’ ಆಗಿರುವುದಕ್ಕೆ ಹೆಮ್ಮೆ ಇದೆ ಎಂದು ಪ್ರತಿಕ್ರಿಯಿಸಿದ್ದರೆ, ಕೇಂದ್ರ ಸಚಿವ ಕಿರಣ್ ರಿಜಿಜು ಅವರು ‘ದಿಮಾಗೀ ನಕ್ಸಲ್’ ಎಂಬ ಪದವನ್ನು ಮಾವೋವಾದಿ ಸಿದ್ಧಾಂತವನ್ನು ಬೆಂಬಲಿಸುವವರು, ಸಂವಿಧಾನವನ್ನು ತಿರಸ್ಕರಿಸುವವರು ಹಾಗೂ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವವರಿಗಾಗಿ ಬಳಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಂದೇ ಹೆಸರಿನ ಸಾಮಾಜಿಕ ಜಾಲತಾಣ ಖಾತೆಗಳು ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಒಟ್ಟು ಫಾಲೋವರ್ಸ್‌ಗಳನ್ನು ಸೆಳೆಯುವ ಮೂಲಕ, ‘ದಿಮಾಗೀ ನಕ್ಸಲ್’ ವಿವಾದಕ್ಕೆ ಹೊಸ ಡಿಜಿಟಲ್ ಆಯಾಮ ನೀಡಿವೆ. ಆದರೆ ಈ ಖಾತೆಗಳ ಹಿಂದೆ ಇರುವ ವ್ಯಕ್ತಿ ಅಥವಾ ಸಂಘಟನೆಯ ಗುರುತು ಇನ್ನೂ ಬಹಿರಂಗವಾಗಿಲ್ಲ.

