ಬೆಂಗಳೂರು : ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ನ ಹಿರಿಯ ಮುಖಂಡೆ ಉಮಾಶ್ರೀ ಇಂದು ನಾಮಪತ್ರ ಸಲ್ಲಿಸಿದರು. ವಿಧಾನಪರಿಷತ್ ಕಾರ್ಯದರ್ಶಿ ಜ್ಯೋತಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಲ್ಮನೆ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಇದ್ದರು.
ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವು ಈ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನಲೆ ಉಮಾಶ್ರೀ ಅವರು ಉಪಸಭಾಪತಿಯಾಗಿ ಅವಿರೋಧ ಆಯ್ಕೆ ಬಹುತೇಕ ಖಚಿತಬವಾಗಿ. ನಾಳೆ ಸದನದಲ್ಲಿ ಅಧಿಕೃತವಾಗಿ ಅವರ ಆಯ್ಕೆಯನ್ನು ಪ್ರಕಟವಾಗಲಿದೆ.
ಉಪಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಮಾಶ್ರೀ ಅವರು ನನಗೆ ಸಹಜವಾಗಿ ರಾಜ್ಯ ಸಚಿವ ಸಂಪುಟದಲ್ಲಿ ಸಚಿವೆ ಆಗುವ ಆಕಾಂಕ್ಷೆ ಇತ್ತು. ಆದರೆ, ನಮ್ಮ ಕಾಂಗ್ರೆಸ್ ಪಕ್ಷ ನನಗೆ ಸಚಿವ ಸ್ಥಾನಕ್ಕಿಂತಲೂ ಅತ್ಯಂತ ಉನ್ನತವಾದ ಸಾಂವಿಧಾನಿಕ ಸ್ಥಾನವನ್ನು ಗೌರವದಿಂದ ನೀಡಿದೆ. ಹಾಗಾಗಿ ನನಗೆ ಈ ಸ್ಥಾನ ಸಿಕ್ಕಿದ್ದಕ್ಕೆ ಅತ್ಯಂತ ತೃಪ್ತಿಯಿದೆ ಎಂದು ಹೇಳಿದರು.

