ಮುಸ್ಲಿಂ ದ್ವೇಷ, ಹಿಂದೂ ಧ್ರುವೀಕರಣ, ಚುನಾವಣಾ ಆಯೋಗ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ಅಕ್ರಮ ವಲಸೆ, ಭ್ರಷ್ಟಾಚಾರ, ನಿರುದ್ಯೋಗ, ಅಭಿವೃದ್ಧಿ ಶೂನ್ಯತೆ ಹಾಗೂ ಮಹಿಳಾ ಅಸುರಕ್ಷತೆ ಎನ್ನುವ ಆರೋಪಗಳನ್ನು ಮಮತಾರವರ ಸರಕಾರದ ಮೇಲೆ ನಿರಂತರವಾಗಿ ಮಾಡುವ ಮೂಲಕ 2026 ರ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದ ಅಧಿಕಾರವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಮಮತಾರವರ ಟಿಎಂಸಿ ಪಕ್ಷವನ್ನು 81 ಸ್ಥಾನಗಳಿಗೆ ಸೀಮಿತಗೊಳಿಸಲಾಯ್ತು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಹೀಗೇ ಆಗಬಹುದು ಎನ್ನುವ ಊಹೆ ಇತ್ತು, ಆದರೆ ಹೀಗೆಲ್ಲಾ ಆಗಬಹುದೆಂಬ ಯೋಚನೆಯಂತೂ ಇರಲಿಲ್ಲ. ಯಾರಿಗೂ ಇಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಯುತ್ತದೆ ಎಂಬುದರ ಬಗ್ಗೆ ನಂಬಿಕೆಯಿರಲಿಲ್ಲ. ಆದರೆ ಇಷ್ಟೊಂದು ಅಪ್ರಾಮಾಣಿಕ ರೀತಿಯಲ್ಲಿ ಎಲೆಕ್ಷನ್ ನಡೆಯುತ್ತದೆಂದು ನಿರೀಕ್ಷಿಸಿರಲಿಲ್ಲ. ಅದು ಪಶ್ಚಿಮ ಬಂಗಾಳ. ಚುನಾವಣೆ ಕಣ ಎಂದರೆ ರಣರಂಗ ಎನ್ನುವಂತಹ ವಾತಾವರಣ.
ಹದಿನೈದು ವರ್ಷಗಳಿಂದ ಆಡಳಿತದಲ್ಲಿದ್ದ ಟಿಎಂಸಿ ಪಕ್ಷವನ್ನು ಹಾಗೂ ಆ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿಯವರನ್ನು ಹೇಗಾದರೂ ಮಾಡಿ 2026 ರ ಚುನಾವಣೆಯಲ್ಲಿ ಸೋಲಿಸಲೇಬೇಕೆಂಬ ಹಠಕ್ಕೆ ಬಿಜೆಪಿ ಪಣ ತೊಟ್ಟಿತ್ತು. ಅದಕ್ಕೆ ಬೇಕಾದ ಎಲ್ಲಾ ಮಾರ್ಗೋಪಾಯಗಳನ್ನು ಮಾಡಿಕೊಂಡಿತ್ತು. ಮಮತಾರವರ ಸುತ್ತಲೂ ತಂತ್ರ ಕುತಂತ್ರ ಶಡ್ಯಂತ್ರಗಳ ಸೂತ್ರಗಳನ್ನು ಹೆಣೆಯಲಾಗಿತ್ತು. ಅವುಗಳು ಯಾವುವೆಂದರೆ..
ಕೇಂದ್ರದ ಯೋಜನೆಗಳ ಸ್ಥಗಿತ:

ಭ್ರಷ್ಟಾಚಾರದ ನೆಪ ಹೇಳಿ ನರೇಗಾ ಸೇರಿದಂತೆ ಕೇಂದ್ರ ಸರಕಾರದ ಅನುದಾನದಿಂದ ನಡೆಯುವ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವುದನ್ನು ನಿಲ್ಲಿಸಲಾಯ್ತು. ಇದರಿಂದ ಕೆಲವಾರು ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ ನಿಂತು ಹೋಗಿ ನಿರುದ್ಯೋಗ ಹೆಚ್ಚಾಯಿತು. ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ದೀದಿ ಸರಕಾರ ಅಸಮರ್ಥವಾಗಿದೆ ಎಂದು ಬಿಜೆಪಿ ತನ್ನ ಗೋದಿ ಮಾಧ್ಯಮಗಳ ಮೂಲಕ ಅಪಪ್ರಚಾರ ಶುರುಮಾಡಿ ದೀದಿ ಸರಕಾರದ ವಿರುದ್ಧ ನಕಾರಾತ್ಮಕ ನರೇಟಿವ್ ಬಿಲ್ಡಪ್ ಮಾಡತೊಡಗಿತು. ಇದಕ್ಕೆಲ್ಲಾ ಸೊಪ್ಪು ಹಾಕದ ಮಮತಾರವರು ಸುಪ್ರೀಂ ಕೋರ್ಟ್ ಮೆಟ್ಟಲೇರಿದರು.
ಮತದಾರರ ಪರಿಷ್ಕರಣೆ ಎಂಬ ಕಪಟತನ
SIR ಅಂದರೆ ಮತದಾರರ ವಿಶೇಷ ತೀವ್ರ ಪರಿಷ್ಕರಣೆಯನ್ನು ಬಂಗಾಳ ಚುನಾವಣೆ ಘೋಷಣೆಗೆ ಕೆಲ ತಿಂಗಳ ಮುಂಚೆ ಆರಂಭಿಸಲಾಯ್ತು. 91 ಲಕ್ಷ ಮತದಾರರನ್ನು ಅನರ್ಹಗೊಳಿಸಲಾಯ್ತು. ಪಶ್ಚಿಮ ಬಂಗಾಳದಲ್ಲಿ ನಿರ್ಣಾಯಕವಾಗಿರುವ ಹಾಗೂ ಮಮತಾ ದೀದಿ ಪರವಾಗಿರುವ ಲಕ್ಷಾಂತರ ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಯ್ತು. ಟಿಎಂಸಿ ಬೆಂಬಲಿಗರಿಗೆ ಮತ ಹಾಕುವ ಅವಕಾಶವನ್ನೇ ಕಿತ್ತುಕೊಂಡಿದ್ದರಿಂದ ನೂರಕ್ಕೂ ಹೆಚ್ಚು ಮತಕ್ಷೇತ್ರಗಳಲ್ಲಿ ಮಮತಾರವರಿಗೆ ಹಿನ್ನಡೆ ಆಯ್ತು. ಮಮತಾರವರ ಮತ ಕ್ಷೇತ್ರದಲ್ಲಿಯೇ 50 ಸಾವಿರಕ್ಕೂ ಹೆಚ್ಚು ಮತದಾರರನ್ನು ಅನರ್ಹ ಗೊಳಿಸಿದ್ದರಿಂದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ದೀದಿ ಸೋಲಬೇಕಾಯ್ತು. ಟಿಎಂಸಿ ಪಕ್ಷ ನೆಲ ಕಚ್ಚುವಂತಾಯ್ತು.
ಸುಪ್ರೀಂ ಕೋರ್ಟ್ ಪರೋಕ್ಷ ಸಹಕಾರ
“91 ಲಕ್ಷದಷ್ಟು ಅರ್ಹ ಮತದಾರರ ಹೆಸರನ್ನು ಲಿಸ್ಟ್ ನಿಂದ ಅಳಿಸಿ ಹಾಕಲಾಗಿದೆ. ಅದರಲ್ಲಿ 27 ಲಕ್ಷದಷ್ಟು ಮತದಾರರು ದಾಖಲೆ ಸಲ್ಲಿಸಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆಲ್ಲಾ ಮತದಾನ ಮಾಡಲು ಅವಕಾಶ ಕೊಡಿಸಬೇಕು” ಎಂದು ಮಮತಾರವರು ಸುಪ್ರೀಂ ಕೋರ್ಟ್ ಗೆ ಕೇಳಿದರೆ, “ಈಗ ಎಲ್ಲಾ ಸಿದ್ಧತೆಗಳಾಗಿದ್ದರಿಂದ ಅವರೆಲ್ಲಾ ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಲಿ” ಎಂದು ಕೋರ್ಟ್ ಆದೇಶಿಸಿ ಅರ್ಹ ಮತದಾರರ ಮತದಾನದ ಹಕ್ಕನ್ನು ಕಿತ್ತುಕೊಂಡಿತು. ಚುನಾವಣೆಯ ಮತಗಳ ಎಣಿಕೆಯಲ್ಲಿ ಕೇಂದ್ರ ಸರಕಾರದ ಅಧಿಕಾರಿಗಳೇ ಯಾಕಿದ್ದಾರೆ? ಎಂದು ಪ್ರಶ್ನಿಸಿದರೆ, “ಇರಲಿ ಬಿಡಿ ಏನಿವಾಗ, ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಲಾಗದು” ಎಂದು ಸುಪ್ರೀಂ ಕೋರ್ಟ್ ಹೇಳುವ ಮೂಲಕ ಕೇಂದ್ರ ಸರಕಾರದ ಕೈಗೊಂಬೆ ಆಗಿರುವ ಚುನಾವಣಾ ಆಯೋಗದ ಪರವಾಗಿ ಆದೇಶ ನೀಡಿತು.
ಹಿಂದೂ ಮತಗಳ ಧ್ರುವೀಕರಣ

“ಬೇರೆ ದೇಶದ ಮುಸ್ಲಿಂ ನುಸುಳುಕೋರರಿಗೆ ಮಮತಾರವರು ಆಶ್ರಯ ಕೊಟ್ಟು ಅನುಕೂಲಗಳನ್ನು ಒದಗಿಸಿದ್ದಾರೆ. ನುಸುಳುಕೋರ ಬಾಂಗ್ಲಾ ಮುಸಲ್ಮಾನರು ರಾಜ್ಯದ ಜನತೆಯ ಅವಕಾಶಗಳನ್ನು ಕಿತ್ತುಕೊಂಡು ನಿರುದ್ಯೋಗಕ್ಕೆ ಕಾರಣರಾಗಿದ್ದಾರೆ. ದೇಶದ ಭದ್ರತೆ ಮತ್ತು ರಕ್ಷಣೆಗೆ ಅಪಾಯಕಾರಿಯಾಗಿದ್ದಾರೆ. ಮಮತಾ ದೀದಿ ಈ ಮುಸಲ್ಮಾನರನ್ನು ಓಲೈಸುತ್ತಿದ್ದು ಹಿಂದೂಗಳಿಗೆ ಅನ್ಯಾಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಾಬರಿ ಮಸೀದಿಯನ್ನು ಕಟ್ಟಲು ತಯಾರಿ ನಡೆದಿದೆ. ಇದು ಹಿಂದೂ ವಿರೋಧಿ ಸರಕಾರ” ಎಂದು ಪ್ರಧಾನ ಮಂತ್ರಿಯಾದಿಯಾಗಿ ಬಿಜೆಪಿಯ ಮುಖಂಡರುಗಳೆಲ್ಲಾ ದ್ವೇಷ ಭಾಷಣಗಳನ್ನು ಮಾಡುತ್ತಾ ಹಿಂದೂ ಮತದಾರರನ್ನು ಮಮತಾರವರ ವಿರುದ್ಧ ಪ್ರಚೋದಿಸಿ ಮತ ಕ್ರೋಢೀಕರಣ ಮಾಡಿದ್ದರಿಂದಾಗಿ ಟಿಎಂಸಿ ಪಕ್ಷಕ್ಕೆ ತೀವ್ರ ಹಿನ್ನಡೆ ಆಯ್ತು.
ನುಸುಳುಕೋರರ ಆರೋಪ
“ಲಕ್ಷಾಂತರ ಬಾಂಗ್ಲಾ ಮತ್ತು ರೋಹಿಂಗ್ಯಾ ನುಸುಳುಕೋರರನ್ನು ರಾಜ್ಯದೊಳಗೆ ಬಿಟ್ಟುಕೊಂಡು ಎಲ್ಲಾ ಅನುಕೂಲಗಳನ್ನು ಮಮತಾ ದೀದಿ ಮಾಡಿದ್ದಾರೆ” ಎಂಬುದು ಬಿಜೆಪಿಯ ಪ್ರಮುಖ ಆರೋಪವಾಗಿತ್ತು. ಆದರೆ ದೇಶದ ಗಡಿಗಳ ರಕ್ಷಣೆ ಹಾಗೂ ನುಸುಳುಕೋರರ ನಿಯಂತ್ರಣ ಕೇಂದ್ರ ಸರಕಾರದ ಗೃಹ ಸಚಿವಾಲಯದ ಕೆಲಸ. ಅದಕ್ಕೂ ರಾಜ್ಯ ಸರಕಾರಕ್ಕೂ ಸಂಬಂಧವೇ ಇಲ್ಲ. ಗಡಿಗಳ ರಕ್ಷಣೆಗೆ ಕೇಂದ್ರ ಸರಕಾರದ BSF ಅಂದ್ರೆ ಗಡಿ ರಕ್ಷಣಾ ಪಡೆ ಇದೆಯಲ್ವಾ. ಇದೆಲ್ಲಾ ಇದ್ದೂ ಲಕ್ಷಾಂತರ ನುಸುಳುಕೋರರು ರಾಜ್ಯವನ್ನು ಅಕ್ರಮವಾಗಿ ಪ್ರವೇಶಿಸಿದ್ದೇ ಆದರೆ ಅದು ಕೇಂದ್ರ ಸರಕಾರದ ಗೃಹ ಇಲಾಖೆಯ ವೈಫಲ್ಯವೇ ಹೊರತು ರಾಜ್ಯ ಸರಕಾರದ್ದಲ್ಲ. ಆದರೆ ಕೇಂದ್ರದ ವೈಫಲ್ಯವನ್ನೂ ಮಮತಾರವರ ಮೇಲೆ ಹಾಕಿ ಗೋದಿ ಮಾಧ್ಯಮಗಳ ಮೂಲಕ ಜನರನ್ನು ನಂಬಿಸುವಲ್ಲಿ ಮೋದಿ ಸರಕಾರ ಯಶಸ್ವಿಯಾಯಿತು.
ಪ್ರಚಾರಕ್ಕೆ ಕೇಂದ್ರ ಸರಕಾರದ ಆಡಳಿತ
ಭಾರತದ ಪ್ರಧಾನ ಮಂತ್ರಿ, ಗೃಹ ಮಂತ್ರಿ, ಕೇಂದ್ರ ಸಚಿವ ಸಂಪುಟದ ಸಮಸ್ತ ಸಚಿವರು, ಬಿಜೆಪಿ ಆಡಳಿತದ 19 ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ 200 ಕ್ಕೂ ಹೆಚ್ಚು ಸಚಿವರುಗಳು, 500 ಕ್ಕೂ ಹೆಚ್ಚು ಶಾಸಕರುಗಳು, ಬಿಜೆಪಿ ಎಂಪಿ ಗಳು.. ಹೀಗೆ ಬಿಜೆಪಿ ಪಕ್ಷದ ಸಮಸ್ತರು ಒಬ್ಬ ಮಹಿಳೆಯನ್ನು ಸೋಲಿಸಲು ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ದಂಡೆತ್ತಿ ಬಂದು ದಾಳಿ ಮಾಡಿ ಗೆಲುವನ್ನು ಸಾಧಿಸಿದರು. ಮಮತಾ ದೀದಿ ಸೋತುಹೋದರು.
ಆರೆಸ್ಸೆಸ್ ಕೈವಾಡ
ಅತ್ತ ಬಿಜೆಪಿಯ ಸಮಸ್ತ ನಾಯಕರುಗಳು ದೀದಿ ವಿರುದ್ಧ ನಿರಂತರವಾಗಿ ಅಬ್ಬರದ ಅಪಪ್ರಚಾರದಲ್ಲಿ ತೊಡಗಿದ್ದರೆ, ಇತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರುಗಳು ತಣ್ಣಗೇ ಬೂತ್ ಮಟ್ಟದಲ್ಲಿ ಜನರನ್ನು ಮರಳು ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಲಕ್ಷಾಂತರ ಸಭೆಗಳನ್ನು ಮಾಡಿದರು. ಯುವಜನರ ಮನಸಲ್ಲಿ ಧಾರ್ಮಿಕ ವಿಭಜನೆಯ ವಿಷ ಬೀಜಗಳನ್ನು ಬಿತ್ತತೊಡಗಿದರು. ಆ ಬೀಜಗಳೆ ಬಿಜೆಪಿ ಪರ ಮತಗಳಾಗಿ ಮಮತಾರವರ ಸೋಲಿಗೆ ಕಾರಣವಾದವು. ಆರೆಸ್ಸೆಸ್ಸಿನ ಸನಾತನ ಹಿಂದೂ ರಾಷ್ಟ್ರಸ್ಥಾಪನೆಯ ಉದ್ದೇಶಕ್ಕೆ ಮಮತಾ ದೀದಿ ಕಂಟಕವಾಗಿದ್ದರಿಂದ ಆ ಸಂಕಟವನ್ನು ದೂರಮಾಡಲು ಸಂಘದ ವಟುಗಳು ಹಗಲು ರಾತ್ರಿ ಶ್ರಮಿಸಿದವು. ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಒಂದು ಹೆಜ್ಜೆ ಮುಂದಡಿ ಇರಿಸಿದವು.
ತನಿಖಾ ಸಂಸ್ಥೆಗಳ ದುರ್ಬಳಕೆ
ಕೇವಲ ಚುನಾವಣಾ ಆಯೋಗವನ್ನು ಮಾತ್ರವಲ್ಲ, ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳಾದ ಐಟಿ, ಈಡಿ, ಸಿಬಿಐ, ಎನ್ ಐ ಎ ಮುಂತಾದ ಸಂಸ್ಥೆಗಳನ್ನು ಬಳಸಿಕೊಂಡು ಟಿಎಂಸಿ ಪಕ್ಷವನ್ನು ದುರ್ಬಲ ಗೊಳಿಸಲಾಯ್ತು. ಉದಾಹರಣೆಗೆ.. ಟಿಎಂಸಿ ಪಕ್ಷದ ಚುನಾವಣಾ ತಂತ್ರಗಳನ್ನು ರೂಪಿಸುತ್ತಿದ್ದ ಐ-ಪ್ಯಾಕ್ ಸಂಸ್ಥೆಯ ಮೇಲೆ ಈಡಿ ದಾಳಿ ಮಾಡಿ ಚುನಾವಣಾ ತಂತ್ರಗಾರಿಕೆಯ ಯೋಜನೆಯ ಮಾಹಿತಿಗಳ ದಾಖಲೆಗಳನ್ನೆಲ್ಲಾ ಮಮತಾರವರ ಪ್ರತಿರೋಧದ ನಡುವೆಯೂ ವಶಪಡಿಸಿಕೊಳ್ಳಲಾಯ್ತು. ಐ-ಪ್ಯಾಕ್ ಸಂಸ್ಥೆಯ ನಿರ್ದೇಶಕರನ್ನು ಮನಿ ಲ್ಯಾಂಡರಿಂಗ್ ಎನ್ನುವ ಸುಳ್ಳು ಆರೋಪದ ಮೇಲೆ ಬಂಧಿಸಲಾಯ್ತು. ಎಪ್ರಿಲ್ 29 ರಂದು ಮತದಾನ ಮುಗಿದ ಮಾರನೆಯ ದಿನ ಅವರನ್ನು ಬೇಲ್ ಮೇಲೆ ಬಿಡುಗಡೆಗೊಳಿಸಲಾಯ್ತು.
ಕೇಂದ್ರದ ಸೇನೆ ನಿಯೋಜನೆ: ಭಯರಹಿತ ಚುನಾವಣೆ ಹೆಸರಲ್ಲಿ ಕೇಂದ್ರ ಸರಕಾರ ಎರಡೂವರೆ ಲಕ್ಷಕ್ಕೂ ಹೆಚ್ಚು ಕಮಾಂಡೋಗಳ ಪಹರೆಯನ್ನು ರಾಜ್ಯಾದ್ಯಂತ ಆಯೋಜಿಸಿತು. ಶಾಂತಿ ಸುವ್ಯವಸ್ಥೆಗಾಗಿ ಕಮಾಂಡೋಗಳು ಶ್ರಮಿಸುವ ಬದಲಾಗಿ ಕೇಂದ್ರ ಸರಕಾರದ ಏಜೆಂಟರಂತೆ ವರ್ತಿಸಿದವು. ಮತದಾರರನ್ನು ಬೆದರಿಸಲಾಯ್ತು, ಕೆಲವರನ್ನು ಮತಗಟ್ಟೆಗೆ ಹೋಗದಂತೆ ತಡೆಯಲಾಯ್ತು, ಇವಿಎಂ ಯಂತ್ರಗಳನ್ನು ಬದಲಾಯಿಸಲಾಯ್ತು ಎಂಬ ಆರೋಪಗಳೂ ಕೇಳಿ ಬಂದವು. ಇಷ್ಟೆಲ್ಲಾ ಕಮಾಂಡೋಗಳಿದ್ದರೂ ಕೆಲವು ಕಡೆ ಅಹಿತಕರ ಘಟನೆಗಳು ಹೇಗೆ ನಡೆದವು? ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಗೂಂಡಾಗಳು ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಕಚೇರಿಗಳಿಗೆ ಹೇಗೆ ಬೆಂಕಿ ಹಚ್ಚಿದರು. ಕಮಾಂಡೋಗಳು ಯಾರ ಆದೇಶದ ಮೇಲೆ ಮೌನವಾಗಿದ್ದರು?

ಹೀಗೆ ಕುತಂತ್ರಿ ರಾಜಕಾರಣದ ಎಲ್ಲಾ ಪಟ್ಟುಗಳನ್ನೂ ವ್ಯಾಪಕವಾಗಿ ಬಳಸಿಕೊಂಡ ಬಿಜೆಪಿ ಕೇಂದ್ರ ಸರಕಾರದ ಎಲ್ಲಾ ಅಧಿಕಾರವನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಹದಿನೈದು ವರ್ಷಗಳ ಕಾಲ ಆಡಳಿತದಲ್ಲಿದ್ದ ದೀದಿ ಸರಕಾರದ ವಿರುದ್ಧ ಜನರಲ್ಲಿ ಇದ್ದ ಅಡಳಿತ ವಿರೋಧಿ ಅಲೆಯ ಕಿಡಿಗಳನ್ನು ಬೆಂಕಿಯಾಗಿಸಿದ ಬಿಜೆಪಿ ಟಿಎಂಸಿ ಸರಕಾರವನ್ನೇ ಆಹುತಿ ತೆಗೆದುಕೊಂಡಿತು
ಮುಸ್ಲಿಂ ದ್ವೇಷ, ಹಿಂದೂ ಧ್ರುವೀಕರಣ, ಚುನಾವಣಾ ಆಯೋಗ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ಅಕ್ರಮ ವಲಸೆ, ಭ್ರಷ್ಟಾಚಾರ, ನಿರುದ್ಯೋಗ, ಅಭಿವೃದ್ಧಿ ಶೂನ್ಯತೆ ಹಾಗೂ ಮಹಿಳಾ ಅಸುರಕ್ಷತೆ ಎನ್ನುವ ಆರೋಪಗಳನ್ನು ಮಮತಾರವರ ಸರಕಾರದ ಮೇಲೆ ನಿರಂತರವಾಗಿ ಮಾಡುವ ಮೂಲಕ 2026 ರ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದ ಅಧಿಕಾರವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಮಮತಾರವರ ಟಿಎಂಸಿ ಪಕ್ಷವನ್ನು 81 ಸ್ಥಾನಗಳಿಗೆ ಸೀಮಿತಗೊಳಿಸಲಾಯ್ತು.
ಹೀಗೆ ಚುನಾವಣಾ ಅಕ್ರಮಗಳ ಮೂಲಕ, ಧಾರ್ಮಿಕ ಧ್ರುವೀಕರಣದ ಮೂಲಕ, ವ್ಯಾಪಕ ಅಪಪ್ರಚಾರದ ಮೂಲಕ, ಕೇಂದ್ರದ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವುದರ ಮೂಲಕ ಬಿಜೆಪಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ದಿಗ್ವಿಜಯ ಸಾಧಿಸಿದೆ. ಭಯಮುಕ್ತ ರಾಜ್ಯವನ್ನಾಗಿಸುವ ಭರವಸೆಯನ್ನು ಮೋದಿಯವರು ತಮ್ಮ ಭಾಷಣದಲ್ಲಿ ಕೊಟ್ಟಿದ್ದಾರೆ. ಅತ್ತ ಬಿಜೆಪಿಯ ಗೂಂಡಾ ಕಾರ್ಯಕರ್ತರು ಟಿಎಂಸಿ ಕಚೇರಿ ಮತ್ತು ಕಾರ್ಯಕರ್ತರ ಮೇಲೆ ಮುಗಿಬಿದ್ದು ಹಿಂಸಾಕಾಂಡ ಸೃಷ್ಟಿಸುತ್ತಿದ್ದಾರೆ. ಪೊಲೀಸರು ಹಾಗೂ ಕಮಾಂಡೋಗಳು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ಪಶ್ಚಿಮ ಬಂಗಾಳದ ಜನರಿಗೆ ತಾವು ಹೇಗೆ ಬೆಂಕಿಯಿಂದ ಬಾಣಲೆಗೆ ಬಿದ್ದಿದ್ದೇವೆ ಎಂಬ ಅರಿವು ಕೆಲವೇ ವರ್ಷಗಳಲ್ಲಿ ಅನುಭವಕ್ಕೆ ಬರಲಿದೆ. ಬೇಸತ್ತ ಜನರು ಮತ್ತೆ ಬದಲಾವಣೆ ಬಯಸುವವರೆಗೂ ಬಂಗಾಳಿಗಳು ಐದು ವರ್ಷಗಳ ಕಾಲ ಕಾಯಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಮಮತಾ ಬ್ಯಾನರ್ಜಿ ಕೇಡಿಯಾದರೆ; ಬಂಗಾಳದ ಕಮ್ಯುನಿಷ್ಟರು ಏನು?


