ಪದ್ದಮ್ಮನ ಹೆಸರು ಅಸಲೀ ಪದ್ಮಾವತಿ. ಚಿಕ್ಕಂದಿನಲ್ಲಿ ಬಡತನದ ಕಾರಣ ಒಬ್ಬ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರಿಂದಾಗಿ, ಜಾತಿಯ ಕಾರಣವೂ ಸೇರಿ ಪದ್ಮಾ ಪದ್ದು ಆಗಿದ್ದಲ್ಲದೆ ಒಡೆಯರ ಮನೆಮಂದಿಗೆ ವಯಸ್ಸಿನ ಹಂಗಿಲ್ಲದೆ ಪೆದ್ದುನೇ ಆಗಿದ್ದರು. ಊರವರೆಲ್ಲಾ ಪದ್ದಮ್ಮಾ ಎಂದು ಕರೆದರೂ ಒಡೆಯರ ಮನೆಯ ಚೋಟುನೂ ಪೆದ್ದೂ ಅಂತಲೇ ಕರೆಯುವುದು. ಪದ್ದಮ್ಮನಿಗೆ ಮಾತ್ರ ಬೇಜಾರಿಲ್ಲ. ಎಷ್ಟಾದರೂ ಅವರು ಒಡೆಯರು. ಒಂದ್ ಕಾಲ್ದಲ್ಲಿ ನನ್ಗೆ ಹೊಟ್ಟೆಗೇ ಇಲ್ದಾಗ ಅನ್ನ ಕೊಟ್ಟೋವ್ರು. ಹಳೇದಾಗ್ಲಿ ಎಂತಾರಾಗ್ಲಿ ಬಟ್ಟೆ ಕೊಟ್ಟೋವ್ರು. ಅವ್ರ್ ರಿಣ ಮರೀಕಾತ್ತಾ? ಎಂತಲೇ ಈಗಲೂ ತನಗೆ ವಯಸ್ಸಾಗಿ ಕೆಲಸ ಮಾಡಲು ಕೈ ಸಾಗದ ಸಮಯದಲ್ಲೂ ಅವರ ಮನೆಗೆ ಹೋಗುವುದನ್ನು ನಿಲ್ಲಿಸದೆ ತನ್ನ ಕೈಲಾಗಿದ್ದ ಕೆಲಸ ಮಾಡಿಕೊಡುವಷ್ಟು ನಿಷ್ಠೆ ಇಟ್ಟುಕೊಂಡಿರುವವರು ಪದ್ದಮ್ಮ. ಅವ್ರೇನ್ ಪುಕ್ಕಟೆ ಊಟ ಕೊಟ್ಟಿದ್ರಾ? ಅದಕ್ ಡಬಲ್ ಕೆಲ್ಸ ನೀವ್ ಮಾಡ್ಲಿಲ್ವಾ? ಅಂತ ಕೇಳಿದ್ರೆ, ಡಬಲ್ ಅಲ್ಲ ಎಷ್ಟೋ ಸರ್ತಿ ನಾಲ್ಕ್ ಪಟ್ಟು ಮಾಡಿದ್ನಿ. ಆರೂ ನಮ್ಮಂಥವ್ರಿಗೆ ಯಾರ್ ಆಗಿನ್ ಕಾಲ್ದಲ್ ಕೆಲ್ಸ ಕೊಡ್ತಿದ್ರು? ಅದೂ ಅಲ್ದೆ ಈಗಿನ್ ಅಜ್ಜ ಇದ್ರಲಾ ಅವ್ರು ದೇವ್ರಂಥವ್ರು. ಒಂದ್ಸಾರಿನೂ ಯಾವ್ ಹೆಣ್ಮಕ್ಳನ್ನೂ ಕೆಟ್ ದೃಷ್ಟಿಂದ ನೋಡ್ದರಲ್ಲ. ಹೊಟ್ಟೆಕಿಂತಾ ಮರ್ವಾದೆ ದೊಡ್ದಲ್ಲಮಾ?
ಹೀಗಿರುತ್ತಾ ಇತ್ತೀಚೆಗೆ ಯಾಕೋ ಅಜ್ಜನ ಮೊಮ್ಮಕ್ಕಳು ಅಜ್ಜನ ಮಾತೇ ಕೇಳಲೊಲ್ಲರು. ಅಕ್ಕಪಕ್ಕದವರ ಬಳಿ ಮನಸ್ತಾಪ. ಅವರಿಗೆ ಇವರಿಗೆ ಹಚ್ಚಿಕೊಡುತ್ತಾ ವ್ಯಾಜ್ಯ ನಿರಂತರವಾಗಿ ಇರುವಂತೆ ನೋಡಿಕೊಳ್ಳುವುದು, ತಾವೇ ಪಂಚಾಯ್ತಿ ನಡೆಸಲು ಮುಂದಾಗುವುದು, ನ್ಯಾಯ(ಅನ್ಯಾಯ) ತೀರ್ಮಾನ ಮಾಡುವುದು ಹೀಗೆಲ್ಲಾ ಮಾಡುತ್ತಾ ಥೇಟ್ ಪಾಳೆಗಾರರಂತೆ ವರ್ತಿಸುತ್ತಾರೆ. ಹಿಂದಿನಿಂದಲೂ ಅವರ ಧೋರಣೆ ಅದೇ. ಆದರೆ ಪದ್ದಮ್ಮ ಮಾತ್ರ ಇತ್ತೀಚೆಗೆ ದೇವರು ಹೀಗೆ ಆಡ್ತಾರಂತ ಅಂದುಕೊಳ್ಳುತ್ತಾರೆ.
ಇವತ್ತೇನ್ ಸಮಾಚಾರ ಪದ್ದಮ್ಮಾ? ಒಡೇರ್ ಮನೇಲೆಲ್ಲಾ ಆರಾಮ?
ಎಂಥಾ ಆರಾಮ ಅಮಾ, ದಿನಾ ಒಂದಿಲ್ ಒಂದ್ ರಗ್ಳಿ.
ರಗ್ಳಿಯಾ? ಯಾರ್ ಮಾಡೂದ್ ರಗ್ಳಿ ನಿಮ್ ದೇವ್ರಾ?
ಅಯ್ಯೋ ಅವ್ರ್ದೆಂಥಾ ರಗ್ಳಿ ಅಲ್ಲ. ಹಿಂಗೇ ಇರ್ತಲಾ ಅಮಾ, ಅವರ್ಯಾರೋ ಪಾಟ್ನರ್ ಅಂಬ್ರ್. ಅವ್ರ್ ಕೂಡೆ ಎಂಥದೋ ಕಟಾಪಿಟಿ. ದೊಡ್ಡೋರ್ ಇಷ್ಯ ನಂಗ್ ಅರ್ಥ ಆತಿಲ್ಲಪಾ.
ಅರ್ಥ ಆಗ್ದೇ ಇರದ್ ಎಂಥಿದೆ ಪದ್ದಮ್ಮಾ, ನಾ ಹೇಳ್ತೀನ್ ಕೇಳ್ರಿ. ನಿಮ್ ದೇವ್ರ್ ಮೊಮ್ಮಗ ಇದಾನಲಾ ಅಂವ ಕಡಿಮೆ ಇಲ್ಲ.
ಹೌದೌದು ಅಂವ್ ಸೊಲ್ಪ ಜೋರು ಅಂತ ಕೇಳಿದ್ದೆ.
ಕೇಳದೆಂಥದು ನಿಮಗೆ ಗೊತ್ತಾಗಿಲ್ವಾ ? ಸತ್ಯ ಹೇಳಿ.
ಹೌದಮಾ. ಆದ್ರೆ ನಮಗೆಲ್ಲಾ ಎಂಥಾ ಮಾಡ್ತಿಲ್ಲ ಅಮಾ ಸುಮ್ನೆ ಸುಳ್ ಹೇಳ್ಬಾರ್ದಲಾ ಆ ದೇವ್ರ್ ಮೆಚ್ಚದಿಲ್ಲ ಕಾಣಿ.
ಯಾರ್ ಮೆಚ್ಲಿ ಬಿಡ್ಲಿ ಅಂವ ಘಮಂಢಿ ಅಂತೂ ಹೌದು. ಆ ಪಾರ್ಟ್ನರ್ ಇಂವ್ ಹೇಳ್ದಂಗೇ ಕೇಳ್ಬೇಕು ಅಂತ ರೋಪ್ ಹಾಕ್ತಾನೆ. ಅವನ್ಯಾಕ್ ಕೇಳ್ಬೇಕು ಅಲ್ವಾ?
ಅದ್ ಹೌದು. ಆದ್ರೂ ನಮ್ ಒಡೀರು ಊರಿಗೆಲ್ಲಾ ದೊಡ್ಡೌವ್ರು. ಶ್ರೀಮಂತ್ರು ಅಂದ್ರೆ ಎಂಥಾ ಶ್ರೀಮಂತ್ರು ಅಂದ್ಕಂಡ್ರಿ? ಊರ್ ತುಂಬಾ ತ್ವಾಟ, ಮಣಗಟ್ಲೆ ಬಂಗಾರ, ಆಳು, ಕಾಳು ನೋಡ್ಬೇಕ್ ನೀವು. ಯಾವ್ಯಾವ್ ಊರಿಂದೆಲ್ಲಾ ಕೆಲ್ಸ ಕೇಣ್ಕಂಡ್ ಬತತ್ರ್ ಸೊಲ್ಪಾ ಅಲ್ಲ ಜನ.
ಸಾಕು ಬಿಡ್ರೀ ಅದೆಷ್ಟು ತಾರೀಪು ಮಾಡ್ತೀರಿ, ಅವ್ರ್ ಶ್ರೀಮಂತಿಕೆ ನಾ ಕಾಣದ್ದಾ? ಅಷ್ಟೂ ಕಂಡವ್ರ ತಲೆ ಒಡ್ದು ಮಾಡಿದ್ದು. ಈಗಿರೋ ಜಮೀನಲ್ಲಿ ಇದ್ದ ಜನನೆಲ್ಲಾ ಹೆದ್ರಿಸಿ ಬೆದ್ರಿಸಿ ಧಮಕಿ ಹಾಕಿ ಕೊಂದು ಒಳಗ್ಹಾಕ್ಕಂಡಿದ್ದು. ಎಲ್ಲರಿಗೂ ಗೊತ್ತಿರದೇ.
ಅವ್ರ್ ಯಾರೋ ಹಿರೇರ್ ಮಾಡಿದ್ದಂಬ್ರಲಾ ಅದೆಲ್ಲಾ? ಅಮ್ಮ ಎಲ್ಲಾ ಹೇಳೀರು ನಂಗೆ. ಅಮ್ಮಿದ್ರಲಾ ಸಾಕ್ಷಾತ್ ಶ್ರೀ ದೇವಿನೇ ಕಣ್ರಮಾ. ಗಂಡ ಹೆಂಡ್ತಿ ಕಂಡ್ರ್ ರಾಮ ಸೀತೆಯೇ. ಅಯೋಧ್ಯೆಗ್ ಎಂತಕ್ ಹೋಪ್ದು ಇಲ್ಲೇ ಕಾಣ್ತ್ರಲಾ. ಮಗ ಸೊಲ್ಪ ಯಡವಟ್.
ಹೋಗ್ಲಿ ನೀವೂ ಅಯೋಧ್ಯೆಗ್ ಹೋಗದ್ಬೇಡ, ನಾ ಹೆಂಗೂ ಹೋಗದಿಲ್ಲ, ಪಾರ್ಟ್ನರ್ ಕಥೆ ಎಂಥಾ ಆಯ್ತು ಹೇಳ್ರಿ.
ಅಂವ ನಿಮ್ ಪಾಟ್ನರ್ ಬೇಡ ಬ್ಯಾರೇವ್ರ್ ಹತ್ರ ಹೋಗ್ತೀನಿ ನನ್ ಪಾಲ್ ಕೊಡಿ ಅಂದ್ನಂಬ್ರ್. ಅದಕ್ ಇವ್ರಿಗ್ ಸಿಟ್ ಬಂದ್ ಎಂಥದೂ ಕೊಡದಿಲ್ಲ ಎಂಥಾ ಮಾಡ್ಕತೀಯೋ ಮಾಡ್ಕೋ ಹೋಗ್ ಅಂದ್ರಂಬ್ರ್. ಇವ್ರ್ ತೆಂಗಿನ್ ಪ್ಲಾಟ್ ಇತ್ತಲಾ ಇವ್ರ್ ಹತ್ರನೇ ಎಣ್ಣಿ ತಗಳಕಂಬ್ರ್. ಒಂದಕ್ಕೆರಡ್ ರೇಟು ಇವ್ರದ್ದು. ಊರಾಗಿಲ್ದಿದ್ ಕಾನೂನು. ನಿನ್ ಜನನೆಲ್ಲಾ ವಾಪಾಸ್ ಕರ್ಕ ಹೋಗು ಅಂಬದು, ಅವ್ರಿಗ್ ಕಡ್ಮೆ ಸಂಬ್ಳ ಕೊಡದು, ಆ ಕಡೇವ್ರ್ ಹತ್ರ ವ್ಯವಾರ ಮಾಡ್ಬೇಡ, ಈ ಕಡೇವ್ರ್ ಹತ್ರ ವ್ಯವಾರ ಮಾಡ್ಬೇಡ ಅನ್ನದು, ಒಟ್ ತನ್ಕಿಂತಾ ಶ್ರೀಮಂತ್ರ್ ಹತ್ರ ಯಾರೂ ಮಾತಾಡಂಗಿಲ್ಲ. ಹೊಟ್ಟೆಕಿಚ್ಚು. ಅಹಂಕಾರ ತಾನೇ ದೊಡ್ಡವ್ನು ಅಂತ ಬಾಯಿಗ್ ಬಂದಿದ್ ಮಾತಾಡದು.
ಸರಿ ಪಾರ್ಟ್ನರ್ ಎಂಥಾ ಅಂದ?
ಎಂಥಾ ಅಂತ? ಅಂವ ತಗ್ಗಿ ಬಗ್ಗಿ ಕುಂಯ್ ಕುಂಯ್ ಅಂದ.
ಪಾಪ.
ಎಂಥಾ ಪಾಪ? ಅವ್ನೇನ್ ಕಮ್ಮಿ ಇಲ್ಲ, ಹೆಚ್ಚೂ ಕಮ್ಮಿ ಇವ್ರಷ್ಟೇ ಸೊಕ್ಕು ಅವಂಗೂ. ಮತ್ ಸುಮ್ನೆ ಪಾಟ್ನರ್ ಆತ್ನಾ?
ತಲೆ ಕೆಟ್ಟು ಹೋಯ್ತು. ಈ ಮಾತುಕತೆ ನಡೆದಿದ್ದು ಇದೇ ಮೇ 27 ನೇ ತಾರೀಖಿನಂದು ಬುಧವಾರ. ಅವಾಗಷ್ಟೇ ದ ಹಿಂದೂ ನ್ಯೂಸ್ ಪೇಪರ್ ನ ಎಡಿಟೋರಿಯಲ್ ಓದಿ ಹೊರ ಬಂದಿದ್ದೆ. ಹಾಗಾದರೆ ಏನಿತ್ತು ಅದರಲ್ಲಿ ಅಂತಾನಾ?
ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಭಾರತ ಭೇಟಿ.
ಅಮೆರಿಕಾದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ರ ನಾಲ್ಕು ದಿನಗಳ ಭಾರತ ಭೇಟಿ 2026ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಮಾಡಿದ ಮೊದಲ ಭೇಟಿ. ಈ ಭೇಟಿ ಹಿಂದಿನ ವರ್ಷದಿಂದ ಘಾಸಿಗೊಂಡ ದ್ವಿಪಕ್ಷೀಯ ಸಂಬಂಧವನ್ನು ಮೃದುಗೊಳಿಸಲು ಎಂದು ಅಂದುಕೊಳ್ಳಲಾಗಿತ್ತು. ಸಮಸ್ಯೆಗಳು ಹಲವು ಮಜಲುಗಳಲ್ಲಿವೆ, ಅಮೆರಿಕಾ ಹಾಕಿದ ಅತೀ ಹೆಚ್ಚು ಸುಂಕದಿಂದ ಹಿಡಿದು ವೀಸಾ ಕಡಿತ, ವಲಸೆ ಕಡಿತ, ಹೊರಗುತ್ತಿಗೆ ಕಡಿತ, ಭಾರತದ ಹೂಡುವಿಕೆ, ಇಂಧನ ಖರೀದಿಯ ಮೇಲೆ ದಿಗ್ಬಂಧನ, ಚೀನಾ ಮತ್ತು ಪಾಕಿಸ್ತಾನದ ಜೊತೆ ಭಾರತದ ಸಂಬಂಧದ ಮೇಲೆ ಕಣ್ಣು, ಅಧ್ಯಕ್ಷ ಟ್ರಂಪ್ ಅಲ್ಲದೆ ಅವರ ಆಫೀಸಿನವರೂ ಭಾರತದ ಬಗ್ಗೆ ಆಡುವ ಅವಹೇಳನಕಾರಿ ಮಾತುಗಳ ವರೆಗೆ ಸಮಸ್ಯೆಗಳಿವೆ. ಮೋದಿ ಸರ್ಕಾರ ಅಮೆರಿಕಾದ ನಡೆಗಳನ್ನು ಟೀಕಿಸದಿದ್ದರೂ ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿ, ಹೊರ್ಮುಝ್ ಸಂಧಿಯ ತಡೆ ಇವುಗಳಿಂದಾಗಿ ಭಾರತಕ್ಕೆ ಆರ್ಥಿಕ ಅಡಚಣೆಗಳು ಗಣನೀಯವಾಗಿ ಆಗಿರುವುದಂತೂ ನಿಜ. ಹಾಗಾಗಿ ರುಬಿಯೋರವರ ಭೇಟಿ ಕ್ವಾಡ್ ವಿದೇಶೀ ಮಂತ್ರಿಗಳ ಸಭೆಯಲ್ಲಿ ಅಮೆರಿಕಾದ ಏಕಪಕ್ಷೀಯ ನಡೆಗಳಿಂದ ಭಾರತಕ್ಕೆ ಆದ ಹಾನಿಯನ್ನು ಸರಿಪಡಿಸಬಹುದೆಂದು ನಂಬಲಾಗಿತ್ತು. ಭಾರತವನ್ನು ನರಕದ ದ್ವಾರ ಎಂದು ಕರೆದು ಅಧ್ಯಕ್ಷ ಟ್ರಂಪ್ ಮಾಡಿದ ಪೋಸ್ಟ್ ನಿಂದಾಗಿ ವಲಸೆವಿರೋಧಿ ಮನಸ್ಥಿತಿ ಹೆಚ್ಚಾಗಿದ್ದರ ಬಗ್ಗೆ ಪದೇಪದೆ ಕೇಳಿದ ಪ್ರಶ್ನೆಗೆ ರುಬಿಯೋ ಕೊಟ್ಟ ಉತ್ತರ ಒಂದೇ. ಅಧ್ಯಕ್ಷ ಟ್ರಂಪ್ ಭಾರತವನ್ನು ಪ್ರೀತಿಸುತ್ತಾರೆ, ಅಮೆರಿಕಾ ಭಾರತದ ಸಂಬಂಧ ಸರಿಯಾಗಿಯೇ ಇದೆ ಎಂದು. ಶಿಷ್ಟಾಚಾರ ಬದಿಗಿರಿಸಿ ಪ್ರಧಾನಿ ನರೇಂದ್ರ ಮೋದಿ ರುಬಿಯೋ ರನ್ನು ಎದುರುಗೊಳ್ಳಲು ಹೋಗಿದ್ದಲ್ಲದೆ ವಿದೇಶಾಂಗ ಸಚಿವ ಜೈಶಂಕರ್ ವಾರಾಂತ್ಯಗಳನ್ನು ಅವರ ಜೊತೆಯಲ್ಲೇ ಕಳೆದರು. ಭಾನುವಾರ ಅಮೆರಿಕಾದ 250ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆಯಲ್ಲಿ ಭಾಗಿಯಾದರು. ಅಂದು ರುಬಿಯೋರ ಹುಟ್ಟುಹಬ್ಬವೂ ಆಗಿತ್ತು. ರುಬಿಯೋ ಕೋಲ್ಕತ್ತಾದ ಮಿಷನರೀಸ್ ಆಫ್ ಚಾರಿಟಿಯನ್ನು ಭೇಟಿ ಮಾಡಿ, ಆಗ್ರಾ ಮತ್ತು ಜೈಪುರಕ್ಕೆ ಪ್ರವಾಸ ಹೋದರು. ದ್ವಿಪಕ್ಷೀಯ ಮಾತುಕತೆಯಲ್ಲಿ ಇಬ್ಬರೂ ವ್ಯಾಪಾರ, ಇಂಧನ, ನಾಗರಿಕ ಅಣು ತಂತ್ರಜ್ಞಾನ ಹಾಗೂ ರಕ್ಷಣಾ ಸಹಕಾರ ಅಲ್ಲದೆ ಸ್ಥಳೀಯ ಹಾಗೂ ಜಗತ್ತಿನ ರಾಜಕೀಯ ಸಂಘರ್ಷಗಳ ಬಗ್ಗೆಯೂ ಚರ್ಚೆ ನಡೆಸಿದರು.
ಆದರೆ ನಿರ್ಣಾಯಕ ಅದಿರು ಸಹಕಾರದ ಬಗ್ಗೆ ಮಾಡಿದ ಒಂದು ಒಪ್ಪಂದವನ್ನು ಬಿಟ್ಟರೆ ಬೇರೆ ಯಾವ ಗಮನಾರ್ಹ ಫಲಿತಾಂಶವೂ ಭೇಟಿಯಿಂದ ಸಿಗಲಿಲ್ಲ. ಅಮೆರಿಕಾ ಭಾರತ ಸಂಬಂಧದಲ್ಲಿ ಇರುವ ಸಮಸ್ಯೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ ರುಬಿರೋ ವರ್ತನೆ ಹಿಂದೆ ಭಾರತದ ನಂಬಿಕಸ್ಥ ಪಾಲುದಾರನೆನಿಸಿದ ಅಮೆರಿಕಾ ನವದೆಹಲಿಯ ಕಾಳಜಿ ಅರ್ಥಮಾಡಿಕೊಳ್ಳಲು ಸೋತಿದೆ ಎಂಬುದನ್ನು ತೋರಿಸುತ್ತದೆ. ಇವೆಲ್ಲವೂ ಅಂದರೆ ನವದೆಹಲಿಯ ಅಂದರೆ ಭಾರತದ ಸಂಕಷ್ಟಗಳ ವಿವರಗಳು ರುಬಿಯೋರವರಿಗೆ ಗೊತ್ತಿದೆ ಎಂದು ನಂಬಲಾಗಿದೆ. ಜೂನ್ ಮಧ್ಯದಲ್ಲಿ ಫ್ರಾನ್ಸ್ ನಲ್ಲಿ ನಡೆವ ಜಿ7 ಸಮ್ಮಿಟ್ ನಲ್ಲಿ ಸಂಭವನೀಯ ಮೋದಿ ಟ್ರಂಪ್ ಮುಖಾಮುಖಿಯಲ್ಲಿ ಬಿಕ್ಕಟ್ಟಿಗೆ ಸಿಲುಕಿದ ಸಂಬಂಧಗಳ ಸರಿಪಡಿಸುವ ಬಗ್ಗೆ ಮಾತನಾಡಬಹುದು.
ಪದ್ದಮ್ಮರ ರಾಜಕೀಯ ತಿಳುವಳಿಕೆಗೂ ನಾನೋದಿದ ಸಂಪಾದಕೀಯಕ್ಕೂ ಏನಾದರೂ ದ್ವಿಪಕ್ಷೀಯ ಸಂಬಂಧ ಇದ್ದರೆ ನಾನಂತೂ ಜವಾಬ್ದಾರಳಲ್ಲ.
ವೃಂದಾ ಹೆಗ್ಡೆ
ಅತಿಥಿ ಉಪನ್ಯಾಸಕರು
ಇದನ್ನೂ ಓದಿ- ನನ್ನ ಜಾತಿಯ ಕಹಿ ನೆನಪುಗಳು


