ಕನ್ನಡದ ಅಸ್ಮಿತೆ ಮತ್ತು ಭವಿಷ್ಯ: ಸಮಗ್ರ ಭಾಷಾ ನೀತಿಯತ್ತ ಒಂದು ದಿಟ್ಟ ಹೆಜ್ಜೆ

ನಾವು ಹೊಸ ಕರಡು ರಚನೆಗೆ ಮುಂದಾಗುವ ಮೊದಲು, ಈವರೆಗೂ ಕನ್ನಡ ನಾಡು, ನುಡಿ, ಗಡಿ ಮತ್ತು ನದಿಯ ಕುರಿತು ಬಂದಿರುವ ಎಲ್ಲಾ ವರದಿಗಳು, ಸರ್ಕಾರಿ ಆದೇಶಗಳು ಮತ್ತು ಕಾಯ್ದೆಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ‘ಸಮಗ್ರ ಭಾಷಾ ನೀತಿ’ಯಂತಹ ಕನ್ನಡದ ಸಂವಿಧಾನವನ್ನು ಅನುಷ್ಠಾನಕ್ಕೆ ತರುವಲ್ಲಿ ನಾವು ಈವರೆಗೂ ಎಲ್ಲೆಲ್ಲಿ ಎಡವಿದ್ದೇವೆ, ಹಿನ್ನೆಡೆಯಾಗಲು ಕಾರಣಗಳೇನು ಮತ್ತು ಇಂದಿಗೂ ಸವಾಲಾಗಿ ಉಳಿದಿರುವ ಅಂಶಗಳು ಯಾವುವು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು

ಕರ್ನಾಟಕದ ಇತಿಹಾಸದಲ್ಲಿ ಕನ್ನಡದ ಉಳಿವು ಮತ್ತು ಬೆಳವಣಿಗೆಯ ಕುರಿತು ಚರ್ಚೆಗಳು ದಶಕಗಳಿಂದ ನಡೆಯುತ್ತಲೇ ಇವೆ. ಆದರೆ, ಈ ಚರ್ಚೆಗಳಿಗೆ ಒಂದು ತಾರ್ಕಿಕ ಅಂತ್ಯ ಹಾಡಲು ಮತ್ತು ಕನ್ನಡದ ಉಸಿರನ್ನು ಗಟ್ಟಿಗೊಳಿಸಲು ‘ಸಮಗ್ರ ಭಾಷಾ ನೀತಿ’ಯೊಂದರ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ. ನೆನ್ನೆ ಅಂದರೆ, ಜೂನ್ 14ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಜರುಗಿದ ‘ಸಮಗ್ರ ಭಾಷಾ ನೀತಿ, ಸಮಗ್ರ ಭಾಷಾ ಯೋಜನೆ – ಕರ್ನಾಟಕದ ಸಾಧ್ಯತೆಗಳು ಮತ್ತು ಸವಾಲುಗಳು’ ಎಂಬ ದುಂಡು ಮೇಜಿನ ಸಭೆಯು ಈ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ನಾಡಿನ ಹೆಸರಾಂತ ಸಾಹಿತಿಗಳು, ಭಾಷಾ ತಜ್ಞರು ಮತ್ತು ಕಾನೂನು ಪರಿಣಿತರು, ಹೋರಾಟಗಾರರು, ಐಟಿ, ಮಾಧ್ಯಮ ಕ್ಷೇತ್ರದವರು- ಒಂದೆಡೆ ಸೇರಿ ಕನ್ನಡದ ಅಸ್ತಿತ್ವಕ್ಕೆ ಎದುರಾಗಿರುವ ಸಂಕಷ್ಟಗಳನ್ನು ವಿಶ್ಲೇಷಿಸಿ, ಒಂದು ಭದ್ರವಾದ ‘ಕನ್ನಡ ಸಂವಿಧಾನ’ ರೂಪಿಸುವ ಆಶಯವನ್ನು ವ್ಯಕ್ತಪಡಿಸಿದರು.

ಭಾಷಾ ತಜ್ಞರಾದ ಡಾ. ಕೆ. ವಿ. ನಾರಾಯಣ ಅವರು ಸುದೀರ್ಘ ಕಾಲದ ಭಾಷಾ ನೀತಿಗಳ ವೈಫಲ್ಯವನ್ನು ಎತ್ತಿ ತೋರಿಸುತ್ತಾ, ಈವರೆಗೆ ಜಾರಿಗೆ ಬಂದ ಯೋಜನೆಗಳೆಲ್ಲವೂ ಕೇವಲ ತತ್ಕಾಲದ ಸಮಸ್ಯೆಗಳಿಗೆ ನೀಡಿದ ತಾತ್ಕಾಲಿಕ ಪರಿಹಾರಗಳಾಗಿದ್ದವು ಎಂದು ವಿಷಾದಿಸಿದರು. ಸರ್ಕಾರದ ಮಟ್ಟದಲ್ಲಿ ಸಮಿತಿಗಳು ರಚನೆಯಾದರೂ, ಅವುಗಳ ವರದಿಗಳು ರಾಜಕೀಯ ಹಿತಾಸಕ್ತಿಗಳ ನಡುವೆ ಕಸದ ಬುಟ್ಟಿ ಸೇರುತ್ತಿರುವುದು ಇಂದಿನ ವಾಸ್ತವ. ಈ ಹಿನ್ನೆಲೆಯಲ್ಲಿ, ಕೇವಲ ಸರ್ಕಾರವನ್ನು ನಂಬಿ ಕೂರುವ ಬದಲು ಜನಸಮುದಾಯವೇ ಒಂದು ಪ್ರಬಲ ‘ಒತ್ತಡ ಗುಂಪು’(Pressure Group) ಆಗಿ ಕೆಲಸ ಮಾಡಬೇಕಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ಹಿಂದಿ-ಸಂಸ್ಕೃತ ಹೇರಿಕೆಯ ವಿರುದ್ಧ ಹೋರಾಡುತ್ತಲೇ, ರಾಜ್ಯದ ಆಡಳಿತ ಮತ್ತು ಶಿಕ್ಷಣದಲ್ಲಿ ಜನಸಾಮಾನ್ಯರ ಸಹಜ ಕನ್ನಡವನ್ನು ತರುವುದು ನಮ್ಮ ಮೊದಲ ಆದ್ಯತೆಯಾಗಬೇಕಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ಪರಿಸ್ಥಿತಿ ದಯನೀಯವಾಗಿದೆ ಎಂಬುದನ್ನು ಹಿರಿಯ ವಿದ್ವಾಂಸ ಹಂಪನಾ ಅವರು ಮನಗಾಣಿಸಿದ್ದಾರೆ. ಅನ್ಯಭಾಷಿಕರು ಕನ್ನಡ ಕಲಿಯಲು ಆಸಕ್ತಿ ತೋರುತ್ತಿದ್ದರೆ, ಕನ್ನಡಿಗರೇ ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ತಮ್ಮ ಮಕ್ಕಳನ್ನು ಕನ್ನಡದಿಂದ ದೂರ ಮಾಡುತ್ತಿರುವುದು ವಿಪರ್ಯಾಸ. ಇದಕ್ಕೆ ಪೂರಕವಾಗಿ ಪ್ರೊ. ಎಸ್. ಜಿ. ಸಿದ್ದರಾಮಯ್ಯನವರು ಹೇಳುವಂತೆ, 1986ರ ನಂತರದ ಅನುದಾನ ರಹಿತ ಶಾಲೆಗಳ ನೀತಿಯು ಕನ್ನಡದ ಅವನತಿಗೆ ರಹದಾರಿಯಾಯಿತು. ‘ಮಾತೃಭಾಷೆ’ ಎಂಬ ಪದದ ಕಾನೂನು ಪೆಚುಗಳನ್ನು ಬಳಸಿಕೊಂಡು ಖಾಸಗಿ ಸಂಸ್ಥೆಗಳು ನ್ಯಾಯಾಲಯದ ಮೂಲಕ ಕನ್ನಡ ಕಡ್ಡಾಯವನ್ನು ತಪ್ಪಿಸಿಕೊಳ್ಳುತ್ತಿವೆ. ಆದ್ದರಿಂದ ಕನ್ನಡವನ್ನು ‘ರಾಜ್ಯ ಭಾಷೆ’ ಅಥವಾ ‘ಪರಿಸರ ಭಾಷೆ’ ಎಂದು ಶಾಸನಬದ್ಧವಾಗಿ ಘೋಷಿಸುವುದು ಇಂದಿನ ತುರ್ತು.

ಕನ್ನಡವು ಕೇವಲ ಭಾವನಾತ್ಮಕ ವಿಷಯವಾಗಿ ಉಳಿಯಬಾರದು, ಅದು ಅನ್ನ ನೀಡುವ ಭಾಷೆಯಾಗಬೇಕು. ಕನ್ನಡ ಎಂಬುದು ಕರ್ನಾಟಕದ ಹೆಬ್ಬಾಗಿಲು ಆಗಬೇಕಿದೆ ಎಂಬುದು ಚಿತ್ರಸಾಹಿತಿ ಕವಿರಾಜ್ ಅವರ ಆಶಯ. ಇದೇ ಧಾಟಿಯಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು, ಕರ್ನಾಟಕದೊಳಗಿನ ತುಳು, ಕೊಡವ, ಲಂಬಾಣಿಯಂತಹ 27ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳನ್ನು ಕನ್ನಡದ ಜೊತೆಗೆ ಗೌರವಿಸುವುದರಿಂದ ಕನ್ನಡದ ವ್ಯಾಪ್ತಿ ಹೆಚ್ಚುತ್ತದೆ ಎಂಬ ಆಶಾವಾದಿ ಚಿಂತನೆಯನ್ನು ಮಂಡಿಸಿದರು. ಆದರೆ, ಈ ಎಲ್ಲಾ ಆಶಯಗಳ ಜಾರಿಗೆ ಅಡ್ಡವಾಗಿ ನಿಂತಿರುವುದು ಬ್ಯೂರೋಕ್ರಸಿ ಮತ್ತು ರಾಜಕಾರಣಿಗಳ ಸ್ವಹಿತಾಸಕ್ತಿ. ಐಟಿ-ಬಿಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ದೃಢವಾದ ಇಚ್ಛಾಶಕ್ತಿ ಬೇಕಿದೆ.

ಈ ಮಹತ್ವದ ಸಭೆಯಲ್ಲಿ ನಾನು ಕೂಡ ಭಾಗವಹಿಸಿ ಕೆಲವು ಅಭಿಪ್ರಾಯಗಳನ್ನು ಮಂಡಿಸಿದೆ. ಕರವೇ ಅಧ್ಯಕ್ಷರಾದ ಟಿ. ಎ. ನಾರಾಯಣಗೌಡರ ನೇತೃತ್ವದಲ್ಲಿ ಆರಂಭವಾಗಿರುವ ಈ ‘ಸಮಗ್ರ ಭಾಷಾ ನೀತಿ ಮತ್ತು ಯೋಜನೆ’ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪೂರ್ಣವಾಗಿ ಬೆಂಬಲಿಸಬೇಕಿದೆ. ಇದರ ಜೊತೆಗೆ ಸರ್ಕಾರದ ಇತರ ಎಲ್ಲಾ ಪ್ರಾಧಿಕಾರಗಳ ಸಹಯೋಗದಲ್ಲಿ, ನಾಡಿನ ವಿಶ್ವವಿದ್ಯಾಲಯಗಳು ಹಾಗೂ ಅಲ್ಲಿ ಸ್ಥಾಪಿತವಾಗಿರುವ ವಿವಿಧ ಪೀಠಗಳ ಸಹಕಾರದೊಂದಿಗೆ ಈ ನೀತಿಯ ಕರಡು ರಚನೆಗೆ ತುರ್ತು ಯೋಜನೆಗಳನ್ನು ರೂಪಿಸಬೇಕಾಗಿದೆ. ಇಲ್ಲಿ ‘ಸಮಗ್ರ’ ಎನ್ನುವ ಪದದ ಅರ್ಥವು ಕೇವಲ ಭಾಷೆಗೆ ಸೀಮಿತವಾಗದೆ, ಅದು ಇಡೀ ‘ಕರ್ನಾಟಕ’ದ ದೃಷ್ಟಿಕೋನವನ್ನೇ ಹೊಂದಿರಬೇಕು.

ನಾವು ಹೊಸ ಕರಡು ರಚನೆಗೆ ಮುಂದಾಗುವ ಮೊದಲು, ಈವರೆಗೂ ಕನ್ನಡ ನಾಡು, ನುಡಿ, ಗಡಿ ಮತ್ತು ನದಿಯ ಕುರಿತು ಬಂದಿರುವ ಎಲ್ಲಾ ವರದಿಗಳು, ಸರ್ಕಾರಿ ಆದೇಶಗಳು ಮತ್ತು ಕಾಯ್ದೆಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ‘ಸಮಗ್ರ ಭಾಷಾ ನೀತಿ’ಯಂತಹ ಕನ್ನಡದ ಸಂವಿಧಾನವನ್ನು ಅನುಷ್ಠಾನಕ್ಕೆ ತರುವಲ್ಲಿ ನಾವು ಈವರೆಗೂ ಎಲ್ಲೆಲ್ಲಿ ಎಡವಿದ್ದೇವೆ, ಹಿನ್ನೆಡೆಯಾಗಲು ಕಾರಣಗಳೇನು ಮತ್ತು ಇಂದಿಗೂ ಸವಾಲಾಗಿ ಉಳಿದಿರುವ ಅಂಶಗಳು ಯಾವುವು ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಇವುಗಳೊಂದಿಗೆ ಅಕ್ಕಪಕ್ಕದ ಹಾಗೂ ಇತರ ರಾಜ್ಯಗಳ ಭಾಷಾ ನೀತಿಗಳನ್ನು ಕೂಡ ನಾವು ಗಂಭೀರ ಅಧ್ಯಯನಕ್ಕೆ ಒಳಪಡಿಸಬೇಕು.

ಕನ್ನಡಕ್ಕೆ ಸಂಬಂಧಿಸಿದ ಅನೇಕ ಉತ್ತಮ ವರದಿಗಳು ಮತ್ತು ಆದೇಶಗಳು ಜಾರಿಗೆ ಬಾರದೆ ಮೂಲೆಗುಂಪಾಗಲು ಪ್ರಮುಖ ಕಾರಣ ಅವು ಕೇವಲ ಬ್ಯೂರೋಕ್ರಸಿ ಮತ್ತು ಸರ್ಕಾರ ಪೋಷಿತ ಬೌದ್ಧಿಕ ಗುಂಪುಗಳಿಂದ ಸಿದ್ಧವಾಗಿರುವುದು. ಯಾವುದೇ ನೀತಿ ಅಥವಾ ಯೋಜನೆಗಳು ಕೇವಲ ಕಚೇರಿಯ ಕಡತಗಳಾಗದೆ, ಇಡೀ ಕನ್ನಡಿಗರ ಸಾಮೂಹಿಕ ಒತ್ತಡದ ಭಾಗವಾಗಿ ರೂಪುಗೊಂಡರೆ ಮಾತ್ರ ಯಾವ ಸರ್ಕಾರವೇ ಅಧಿಕಾರದಲ್ಲಿದ್ದರೂ ಅದನ್ನು ಜಾರಿಗೆ ತರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡಿಗರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಶ್ಲಾಘನೀಯವಾದುದು.

ಇಂದಿನ ಕಾಲಘಟ್ಟದಲ್ಲಿ ಕನ್ನಡಿಗರಿಗೆ ಉದ್ಯೋಗದ ಭದ್ರತೆ ಬಹಳ ಮುಖ್ಯವಾಗಿದೆ. ಕೇವಲ ಸರ್ಕಾರಿ ನೇಮಕಾತಿಗಳಷ್ಟೇ ಅಲ್ಲದೆ, ಇಡೀ ಕನ್ನಡ ನೆಲದಲ್ಲಿರುವ ಎಲ್ಲಾ ಸರ್ಕಾರೇತರ ಸಂಸ್ಥೆಗಳು, ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳು, ಭರ್ತಿಯಾಗಲಿರುವ ಹುದ್ದೆಗಳು ಮತ್ತು ಅಲ್ಲಿರುವ ಒಟ್ಟು ಕನ್ನಡಿಗರ ವಿವರಗಳನ್ನು ಒಳಗೊಂಡ ಸಮಗ್ರ ‘ಉದ್ಯೋಗ ಪೋರ್ಟಲ್’ ರಚನೆಯಾಗಬೇಕು. ಇದು ನಮ್ಮ ಸಮಗ್ರ ಭಾಷಾ ಯೋಜನೆಯ ಒಂದು ಪ್ರಮುಖ ಭಾಗವಾಗಬೇಕು. ಇದರ ಜೊತೆಗೆ ಮಿತಿಮೀರುತ್ತಿರುವ ವಲಸೆಯನ್ನು ನಿಯಂತ್ರಿಸಲು ಒಂದು ದೃಢವಾದ ‘ವಲಸೆ ನೀತಿ’ಯ ಅಗತ್ಯವಿದೆ. ಹೊರಗಿನಿಂದ ಬರುವವರಿಂದಾಗಿ ಇಲ್ಲಿನ ಉದ್ಯೋಗ, ವ್ಯಾಪಾರ ಮತ್ತು ಭೂಮಿ ಕ್ರಮೇಣ ಅನ್ಯರ ಪಾಲಾಗುತ್ತಿವೆ. ಈ ವಲಸಿಗರ ಹಸ್ತಕ್ಷೇಪದಿಂದಲೇ ಕನ್ನಡದ ಅನೇಕ ಯೋಜನೆಗಳು ಧೂಳು ಹಿಡಿಯುತ್ತಿವೆ. ಆದ್ದರಿಂದ ವಲಸೆ ನೀತಿಯ ಅಡಿಯಲ್ಲಿ ಕಟ್ಟುನಿಟ್ಟಾದ ವ್ಯಾಪಾರ ಮತ್ತು ಭೂ ಖರೀದಿ ನಿಯಮಗಳನ್ನು ಅಳವಡಿಸಬೇಕು.

ನಾವಿಂದು ಕೃತಕ ಬುದ್ಧಿಮತ್ತೆಯ(AI) ಯುಗದಲ್ಲಿದ್ದೇವೆ. ನಮ್ಮ ಕನ್ನಡದ ಜ್ಞಾನಭಂಡಾರ ಕೇವಲ ಪುಸ್ತಕಗಳಲ್ಲಿ ಉಳಿಯದೆ ಸಂಪೂರ್ಣವಾಗಿ ಅಂತರ್ಜಾಲಕ್ಕೆ ಬರಬೇಕಿದೆ. ನಮ್ಮ ನುಡಿ ತಂತ್ರಾಂಶಗಳನ್ನು ಬಳಕೆದಾರರಿಗೆ ಇನ್ನೂ ಸರಳವಾಗಿಸಬೇಕಿದೆ. ಪ್ರಸ್ತುತ ಅನೇಕ ಎಐ ಚಾಟ್‌ಬಾಟ್‌ಗಳು ಕನ್ನಡವನ್ನು ತಪ್ಪುತಪ್ಪಾಗಿ ಬಿತ್ತರಿಸುತ್ತಿವೆ. ಈ ತಾಂತ್ರಿಕ ಸವಾಲನ್ನು ಎದುರಿಸಲು ಕನ್ನಡಕ್ಕೆ ಪೂರಕವಾದ ಆಧುನಿಕ ತಂತ್ರಾಂಶಗಳನ್ನು ರೂಪಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ. ಈ ಎಲ್ಲದರ ನಡುವೆ, ಮೊದಲು ನಾವು ಕನ್ನಡವನ್ನು ಉಳಿಸಿಕೊಳ್ಳುವ ಚರ್ಚೆಯನ್ನು ಮುನ್ನೆಲೆಗೆ ತರಬೇಕು. ಕನ್ನಡ ಉಳಿದರೆ ಮಾತ್ರ ಅದರ ಒಳನುಡಿಗಳು ಮತ್ತು ಇತರ ಮಾತೃಭಾಷೆಗಳು ಸುರಕ್ಷಿತವಾಗಿರುತ್ತವೆ; ಏಕೆಂದರೆ ಕನ್ನಡದಿಂದ ಎಂದಿಗೂ ಅನ್ಯ ಭಾಷೆಗಳಿಗೆ ಕುತ್ತು ಬರುವುದಿಲ್ಲ. ಆದರೆ ಸಂಸ್ಕೃತ ಮತ್ತು ಹಿಂದಿ ಹೇರಿಕೆಯಿಂದ ಕನ್ನಡವೇ ಉಳಿಯದಿದ್ದರೆ, ಅದರೊಂದಿಗೆ ನಮ್ಮೆಲ್ಲಾ ಸಾಂಸ್ಕೃತಿಕ ವೈವಿಧ್ಯತೆಯೂ ನಾಶವಾಗುತ್ತದೆ. ಅಂತಿಮವಾಗಿ, ಡಿ ಮತ್ತು ಸಿ ದರ್ಜೆಯ ಎಲ್ಲಾ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಒಂದು ಪತ್ರಿಕೆಯನ್ನು ಕನ್ನಡಕ್ಕಾಗಿಯೇ ಮೀಸಲಿಡಬೇಕು. ಈ ಎಲ್ಲ ಅಂಶಗಳನ್ನು ಒಳಗೊಂಡ ‘ಸಮಗ್ರ ಭಾಷಾ ನೀತಿ’ ಜಾರಿಯಾದಾಗ ಮಾತ್ರ ಕನ್ನಡದ ಭವಿಷ್ಯ ಭದ್ರವಾಗಲು ಸಾಧ್ಯ.

ಕರ್ನಾಟಕ ರಕ್ಷಣಾ ವೇದಿಕೆಯು ಆಗಸ್ಟ್ ತಿಂಗಳಲ್ಲಿ ಹಂಪಿಯಲ್ಲಿ ಹಮ್ಮಿಕೊಂಡಿರುವ ತಜ್ಞರ ಕಮ್ಮಟವು ಒಂದು ಸಮಗ್ರ ಕರಡು ಸಿದ್ಧಪಡಿಸಿ, ಅದನ್ನು ಕಾಯ್ದೆಯಾಗಿ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಿದೆ. ಇದು ಕೇವಲ ಒಂದು ಸಂಘಟನೆಯ ಹೋರಾಟವಲ್ಲ, ಇದು ಆರೂವರೆ ಕೋಟಿ ಕನ್ನಡಿಗರ ಅಸ್ತಿತ್ವದ ಹೋರಾಟವಾಗಬೇಕು. ಈ ಮಹತ್ಕಾರ್ಯವು ಯಶಸ್ವಿಯಾದಲ್ಲಿ ಮಾತ್ರ ಮುಂದಿನ ಪೀಳಿಗೆಗೆ ನಾವು ಕನ್ನಡದ ಕಂಪನ್ನು ಉಡುಗೊರೆಯಾಗಿ ನೀಡಲು ಸಾಧ್ಯ.‌

ಡಾ. ರವಿ ಎಂ ಸಿದ್ಲಿಪುರ

ಇವರು ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ- ಸಮಗ್ರ ಭಾಷಾ ನೀತಿ ಮತ್ತು ಸಮಗ್ರ ಭಾಷಾ ಯೋಜನೆ: ಕರ್ನಾಟಕದ ಸಾಧ್ಯತೆಗಳು ಮತ್ತು ಸವಾಲುಗಳು

More articles

Latest article

Most read