ಬೆಂಗಳೂರು, ಆಗಸ್ಟ್ 15: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಮೊದಲ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕರ್ನಾಟಕದ ಭವಿಷ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ತೆರೆದಿಟ್ಟಿದ್ದು, ಯುವಶಕ್ತಿ, ಕೃತಕ ಬುದ್ಧಿಮತ್ತೆ, ಉದ್ಯೋಗ ಸೃಷ್ಟಿ, ಬೆಂಗಳೂರು ಅಭಿವೃದ್ಧಿ, ಮೆಟ್ರೋ ವಿಸ್ತರಣೆ, ನೀರಿನ ಭದ್ರತೆ ಹಾಗೂ ಗ್ರಾಮೀಣ ಮೂಲಸೌಕರ್ಯಗಳಿಗೆ ವಿಶೇಷ ಒತ್ತು ನೀಡಿದರು.
ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ, ಬೆಂಗಳೂರಿನ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದು ಎಂದರು. ಕರ್ನಾಟಕವನ್ನು ದೇಶದ ಆರ್ಥಿಕ ಶಕ್ತಿಯ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಬಲಪಡಿಸುವ ಗುರಿ ಹೊಂದಿರುವುದಾಗಿ ಹೇಳಿದರು.
1.28 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ
ಪಂಚ ಗ್ಯಾರಂಟಿ ಯೋಜನೆಗಳನ್ನು ‘ಕ್ರಾಂತಿಕಾರಿ ಯೋಜನೆಗಳು’ ಎಂದು ಬಣ್ಣಿಸಿದ ಡಿಕೆಶಿ, ರಾಜ್ಯ ಸರ್ಕಾರದ ಗ್ಯಾರಂಟಿ ಮಾದರಿಯನ್ನು ದೇಶದ ಹಲವು ಭಾಗಗಳು ಗಮನಿಸುತ್ತಿವೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರಿಗೆ ನೆರವು ನೀಡಲಾಗಿದ್ದು, ಇದುವರೆಗೆ ₹77 ಸಾವಿರ ಕೋಟಿಗೂ ಹೆಚ್ಚು ಹಣವನ್ನು ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯದ ಆರ್ಥಿಕತೆಯಲ್ಲಿ ಕರ್ನಾಟಕದ ಪಾಲು ಶೇ.9.19ರಷ್ಟಿದೆ ಎಂದು ಹೇಳಿದ ಅವರು, ಜಿಎಸ್ಟಿ ಹಾಗೂ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.
ಕರ್ನಾಟಕದ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸುವುದೇ ತಮ್ಮ ಪ್ರಮುಖ ಗುರಿ ಎಂದು ಮುಖ್ಯಮಂತ್ರಿ ಹೇಳಿದರು.
‘ಯುವ ಕರ್ನಾಟಕ–ನವ ಭಾರತ’
ಯುವಜನರ ಮೇಲೆ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲಿದೆ ಎಂದು ಘೋಷಿಸಿದ ಡಿಕೆಶಿ, ‘ಯುವ ಕರ್ನಾಟಕ–ನವ ಭಾರತ’ ತಮ್ಮ ಧ್ಯೇಯ ಎಂದು ಹೇಳಿದರು.
6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ₹1,200 ಕೋಟಿ ನೆರವು ನೀಡಲಾಗಿದೆ ಎಂದು ತಿಳಿಸಿದರು. ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ‘ಯುವ ಉದ್ಯೋಗ ಸೇತು’ ಎಂಬ ಹೊಸ ಯೋಜನೆ ಆರಂಭಿಸಲಾಗುವುದು ಎಂದು ಘೋಷಿಸಿದರು.
ರಾಜ್ಯದಲ್ಲಿನ ಖಾಲಿ ಹುದ್ದೆಗಳ ಪೈಕಿ ಪ್ರಮುಖ 72 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ರಾಜ್ಯದ ಶಾಲೆಗಳಲ್ಲಿ 6ನೇ ತರಗತಿಯಿಂದ AI ಶಿಕ್ಷಣ
ಮುಖ್ಯಮಂತ್ರಿಗಳ ಭಾಷಣದ ಪ್ರಮುಖ ಘೋಷಣೆಗಳಲ್ಲಿ ಕೃತಕ ಬುದ್ಧಿಮತ್ತೆ ಶಿಕ್ಷಣವೂ ಒಂದಾಗಿದೆ. ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯ ಸ್ಥಾಪಿಸುವ ಕಾರ್ಯ ಆರಂಭವಾಗಿದೆ ಎಂದು ಡಿಕೆಶಿ ತಿಳಿಸಿದರು.
2027ರ ಜನವರಿ ವೇಳೆಗೆ AI ಪ್ರಮಾಣಪತ್ರ ಕೋರ್ಸ್ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ 6ನೇ ತರಗತಿಯಿಂದ AI ಶಿಕ್ಷಣ ಪರಿಚಯಿಸಲಾಗುವುದು ಎಂದರು.
‘AI ಅಕ್ಷರ ಅಭಿಯಾನ’ ಹಾಗೂ ‘ಕೋಡಿಂಗ್ ಗುರುಕುಲ’ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು. ವಿದ್ಯಾರ್ಥಿಗಳಿಗೆ ಉಚಿತ ಕೋಡಿಂಗ್ ವಿಶೇಷ ತರಗತಿಗಳನ್ನು ನಡೆಸಿ, ಪ್ರತಿಯೊಬ್ಬ ವಿದ್ಯಾರ್ಥಿಗೂ AI ಮತ್ತು ಕೋಡಿಂಗ್ ಕೌಶಲ್ಯ ಕಲಿಯುವ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕೆ
ಉದ್ಯೋಗಕ್ಕಾಗಿ ಯುವಕರು ನಗರಗಳಿಗೆ ಮತ್ತು ರಾಜ್ಯದ ಹೊರಗೆ ವಲಸೆ ಹೋಗುವುದನ್ನು ತಪ್ಪಿಸುವುದು ಸರ್ಕಾರದ ಆಶಯ ಎಂದು ಡಿಕೆಶಿ ಹೇಳಿದರು. ಹಿಂದುಳಿದ ತಾಲೂಕುಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.
“ಯುವ ಶಕ್ತಿಯೇ ಭಾರತದ ಶಕ್ತಿ, ಕರ್ನಾಟಕದ ಶಕ್ತಿ” ಎಂಬ ಸಂದೇಶವನ್ನು ನೀಡಿದ ಮುಖ್ಯಮಂತ್ರಿ, ಯುವಜನರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು.
ಎತ್ತಿನಹೊಳೆ, ಗ್ರಾಮೀಣ ರಸ್ತೆಗೆ ₹5,200 ಕೋಟಿ
ಹಲವರ ವಿರೋಧದ ನಡುವೆಯೂ ಎತ್ತಿನಹೊಳೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಡಿಕೆಶಿ ಹೇಳಿದರು. ಗ್ರಾಮೀಣ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ‘ಪ್ರಗತಿ ಪಥ’ ಯೋಜನೆಯಡಿ ₹5,200 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.
ಕರ್ನಾಟಕದ ಆರ್ಥಿಕತೆಯೇ ದೇಶದ ಆರ್ಥಿಕತೆಯ ಪ್ರಮುಖ ಎಂಜಿನ್ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಬೆಂಗಳೂರಿಗೆ ₹1.50 ಲಕ್ಷ ಕೋಟಿ ಅಭಿವೃದ್ಧಿ ಯೋಜನೆ
ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಭಾರೀ ಪ್ರಮಾಣದ ಹೂಡಿಕೆಗೆ ಮುಂದಾಗಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ₹1.50 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಡಿಕೆಶಿ ಘೋಷಿಸಿದರು.
ನಗರದ ಮೆಟ್ರೋ ಜಾಲವನ್ನು ಮೂರನೇ ಹಂತ ಸೇರಿದಂತೆ ವಿಸ್ತರಿಸುವ ಮೂಲಕ ಒಟ್ಟು 220 ಕಿಲೋಮೀಟರ್ ಮೆಟ್ರೋ ಮಾರ್ಗ ನಿರ್ಮಿಸುವ ಗುರಿ ಹೊಂದಲಾಗಿದೆ. ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಬೆಂಗಳೂರು ಹೊಂದಲಿದೆ ಎಂಬುದು ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಹೇಳಿದರು.
‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’
ನಗರದ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’ ಎಂಬ ಹೊಸ ಯೋಜನೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಅಂತ್ಯ ಹಾಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದರು.
ಬೆಂಗಳೂರು ಈಗಾಗಲೇ ದೇಶದ AI ಮತ್ತು ತಂತ್ರಜ್ಞಾನ ರಾಜಧಾನಿಯಾಗಿ ಹೊರಹೊಮ್ಮಿದೆ. ಕರ್ನಾಟಕದ ಆರ್ಥಿಕತೆಯ ಎಂಜಿನ್ ಆಗಿರುವ ಬೆಂಗಳೂರನ್ನು ಜಾಗತಿಕ ಮಟ್ಟದ ನಗರವನ್ನಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಐದು ಹೊಸ ಉದ್ಯಾನ, ಕೆರೆಗಳ ಅಭಿವೃದ್ಧಿ
ಬೆಂಗಳೂರು ನಗರದಲ್ಲಿ ಲಾಲ್ಬಾಗ್ ಮಾದರಿಯಲ್ಲಿ ಐದು ಉದ್ಯಾನವನಗಳನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಡಿಕೆಶಿ ತಿಳಿಸಿದರು.
ನಗರದ ಅಂತರ್ಜಲ ಮಟ್ಟ ಹೆಚ್ಚಿಸುವುದು ಹಾಗೂ ಕುಡಿಯುವ ನೀರಿನ ಭದ್ರತೆ ಖಚಿತಪಡಿಸುವ ನಿಟ್ಟಿನಲ್ಲಿ ಹಲವು ಕೆರೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು. ಹೆಸರುಘಟ್ಟ, ಬೆಟ್ಟದಕೋಟೆ, ಹೊಸಕೋಟೆ, ಎಲೆಮಲ್ಲಪ್ಪ ಶೆಟ್ಟಿ, ಬನ್ನೇರುಘಟ್ಟ ಹಾಗೂ ಬಾಗಲೂರು ಕೆರೆಗಳ ಜೊತೆಗೆ ಬೈರಮಂಗಲ ಕೆರೆಗೆ ಹೊಸ ರೂಪ ನೀಡಲಾಗುವುದು ಎಂದು ಘೋಷಿಸಿದರು.
ಕೆರೆಗಳ ಪುನಶ್ಚೇತನದ ಮೂಲಕ ಮಳೆನೀರಿನ ಸಂಗ್ರಹ, ಅಂತರ್ಜಲ ಮರುಪೂರಣ ಮತ್ತು ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಆಡಳಿತ ಸ್ಮರಿಸಿದ ಡಿಕೆಶಿ
ಭಾಷಣದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಡಿ.ಕೆ.ಶಿವಕುಮಾರ್ ಸ್ಮರಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೂರು ವರ್ಷಗಳ ಸೇವೆಯನ್ನು ಉಲ್ಲೇಖಿಸಿದ ಅವರು, ರಾಜ್ಯದ ಅಭಿವೃದ್ಧಿ ಪಯಣದಲ್ಲಿ ಹಿಂದಿನ ಆಡಳಿತದ ಕೊಡುಗೆಗಳನ್ನು ಸ್ಮರಿಸಬೇಕು ಎಂದರು.

