ಬೆಂಗಳೂರು : ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿದ್ದು, ಯಾರ ಹೆಸರು ಅಂತಿಮಗೊಳಿಸಬೇಕು ಎಂಬ ಗೊಂದಲ ಕಂಡುಬರುತ್ತಿದೆ. ರಾಜ್ಯದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಇಂದು ಸೋಮವಾರ ಅಧಿಸೂಚನೆಯೂ ಪ್ರಕಟವಾಗಿದೆ. ಈ ಪೈಕಿ ಮೂರು ಸ್ಥಾನಗಳು ಆಡಳಿತಾರೂಢ ಕಾಂಗ್ರೆಸ್ ಪಾಲಾದರೆ, ಒಂದು ಸ್ಥಾನ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸಿಗುತ್ತದೆ.
ಈಗಾಗಲೇ ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮರು ಆಯ್ಕೆ ಮಾಡಲು ಜೆಡಿಎಸ್ ಆಸಕ್ತಿ ತೋರಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರುಗಳ ಜೊತೆಗೆ ಕೇಂದ್ರ ನಾಯಕರ ಮನವೊಲಿಕೆ ಕಸರತ್ತು ಸಹ ಮಾಡಲಾಗುತ್ತಿದೆ. ಮತ್ತೊಂದೆಡೆ ರಾಜ್ಯ ಬಿಜೆಪಿಯು ಇತ್ತೀಚೆಗೆ ನಡೆಸಿದ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಹೆಸರನ್ನು ರಾಜ್ಯಸಭೆಗೆ ಶಿಫಾರಸು ಮಾಡಿ ಕೇಂದ್ರಕ್ಕೆ ವರದಿ ನೀಡಿದೆ.
ಮೂರು ದಿನದಲ್ಲಿ ಮತ್ತೆ ಸಭೆ: ಭಾನುವಾರ ನವದೆಹಲಿಯಲ್ಲಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸಭೆ ಸೇರಿ ಯಾರನ್ನು ಅಂತಿಮಗೊಳಿಸಬೇಕು ಎಂದು ಚರ್ಚೆ ನಡೆಸಿತು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಪಾಲ್ಗೊಂಡು ರಾಜ್ಯದಿಂದ ಯಾರನ್ನು ಚುನಾಯಿಸಬೇಕು ಎಂದು ಚರ್ಚೆ ನಡೆಸಿದ್ದಾರೆ. ಆದರೆ ಇನ್ನು ಯಾರನ್ನು ಅಂತಿಮಗೊಳಿಸಿಲ್ಲ. ಮೂರು ದಿನದಲ್ಲಿ ಮತ್ತೊಮ್ಮೆ ಸಭೆ ಸೇರಿ ಹೆಸರು ಅಂತಿಮಗೊಳಿಸುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ತಂದೆಯನ್ನು ರಾಜ್ಯಸಭೆಗೆ ಮತ್ತೊಮ್ಮೆ ಕಳುಹಿಸಲು ನವದೆಹಲಿಯಲ್ಲಿ ಇನ್ನಿಲ್ಲದ ಪ್ರಯತ್ನ ಮುಂದುವರಿಸಿದ್ದಾರೆ. ಎರಡು ವಾರಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ದೇವೇಗೌಡರನ್ನು ಮರು ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್ ದೇವೇಗೌಡರ ಬಗ್ಗೆ ಒಲವು ಹೊಂದೆ ಎಂದು ಹೇಳಲಾಗುತ್ತಿದೆ.
ಆದರೆ, ಬಿಜೆಪಿಗೆ ಲಭ್ಯವಾಗಿರುವ ಈ ಸ್ಥಾನವನ್ನು ಬಿಜೆಪಿಗೇ ದಕ್ಕಿಸಲು ರಾಜ್ಯ ನಾಯಕರು ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಸದಾನಂದಗೌಡರನ್ನು ರಾಜ್ಯಸಭೆಗೆ ಕಳುಹಿಸಿದರೆ ಮುಂದಿನ ಚುನಾವಣೆಗಳಿಗೆ ಪಕ್ಷಕ್ಕೆ ಅನುಕೂಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಬೆಳವಣಿಗೆ ಜೊತೆಗೆ ಬಿಜೆಪಿ ಹೈಕಮಾಂಡ್‌ನಿಂದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರ ವಿವರ ಪಡೆಯಲಾಗಿದೆ ಎಂಬ ಚರ್ಚೆಗಳು ಹರಿದಾಡುತ್ತಿವೆ. ಕಳೆದ ಅವಧಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಸಂಸದೆ ಆಗಿದ್ದ ಸುಲಮತಾ ಬಳಿಕ ಬಿಜೆಪಿ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾದಾಗ ಸುಮಲತಾ ಅಂಬರೀಶ್ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಲಾಗಿತ್ತು.

ಹೀಗಾಗಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಆಯ್ಕೆಯಾಗಿ ಈಗ ಕೇಂದ್ರ ಸಂಸದರಾಗಿದ್ದಾರೆ. ಹೀಗಾಗಿ ಕ್ಷೇತ್ರ ಬಿಟ್ಟುಕೊಟ್ಟ ಸುಮಲತಾ ಅಂಬರೀಶ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಜೆಡಿಎಸ್ ಸಹಕಾರ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಒಕ್ಕಲಿಗ ಸಮುದಾಯ ಮತ್ತು ಮಹಿಳೆ ಎಂಬ ದೃಷ್ಟಿಯಿಂದ ಸುಮಲತಾ ಅವರ ಆಯ್ಕೆ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
ಮಹಾರಾಷ್ಟ್ರದಿಂದ ಸ್ಪರ್ಧಿಸಲು ಎಚ್‌ಡಿಡಿ ನಕಾರ:
ದೇವೇಗೌಡರನ್ನು ನೆರೆಯ ಮಹಾರಾಷ್ಟ್ರದಿಂದ ಕಣಕ್ಕೆ ಇಳಿಸಿ ಎಂದು ರಾಜ್ಯ ಬಿಜೆಪಿ ಘಟಕ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವರಿಷ್ಟರು ದೇವೇಗೌಡರನ್ನು ಸಂಪರ್ಕಿಸಿದಾಗ ಮಹಾರಾಷ್ಟ್ರದಿಂದ ಸ್ಪರ್ಧಿಸಲು ದೇವೇಗೌಡರು ಒಲವು ತೋರಲಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ ಮೈತ್ರಿ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.

