ಸಾವರ್ಕರ್ ಬಗ್ಗೆ ಸತ್ಯವನ್ನೇ ಹೇಳಿಕೊಂಡು ಮಾತನಾಡುವುದಕ್ಕೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಇಲ್ಲದಿರುವಲ್ಲಿ, ಗಾಂಧಿ ವಿರುದ್ಧ ಸುಳ್ಳುಗಳನ್ನು ಹೆಣೆದು ಕಟ್ಟಿದ ನಾಟಕ ಪ್ರದರ್ಶನಕ್ಕೆ ವೇದಿಕೆ ಒದಗಿಸಿ ಚಂದ ನೋಡುತ್ತಾರೆಂದರೆ ಏನರ್ಥ? ಕಾರ್ಯಪ್ಪಗೆ ಮಸಿ ಬಳಿದದ್ದು ತಪ್ಪು ಇರಬಹುದು. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೌನ, ಗಾಂಧಿ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಕೊಟ್ಟ ಮೌನ ಸಮ್ಮತಿ ಅಡ್ಡಂಡಗೆ ಮಸಿ ಬಳಿದದ್ದಕ್ಕಿಂತಲೂ ದೊಡ್ಡ ತಪ್ಪು ಎಂದು ಈ ಲೇಖನದಲ್ಲಿ ಲೇಖಕ ಶರೀಫ್ ಕಾಡುಮಠ ಅಭಿಪ್ರಾಯ ಪಟ್ಟಿದ್ದಾರೆ.
ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದದ್ದು ಸರಿಯೋ ತಪ್ಪೋ ಎನ್ನುವ ಅವಲೋಕನ ಮೊನ್ನೆಯಿಂದ ನಡೆಯತೊಡಗಿದೆ. ಅವರಂತೆ ನಾವೂ ಮಾಡಿದರೆ ನಾಳೆ ಅವರು ಮಾಡಿದ್ದನ್ನು ತಪ್ಪು ಎಂದು ಹೇಳುವ ಅಧಿಕಾರ ನಮಗಿರುವುದಿಲ್ಲ ಎಂಬ ಅಭಿಪ್ರಾಯ, ಮಹಾತ್ಮ ಗಾಂಧಿಗೇ ಮಸಿ ಬಳಿದಂತಾಗಿದೆ ಎಂದು ಇನ್ನೊಂದು ಅಭಿಪ್ರಾಯ ವ್ಯಕ್ತವಾಗಿದೆ.
ಹೆಚ್ಚಿನವರಿಂದ ಆತನಿಗೆ ಹಾಗೆಯೇ ಆಗಬೇಕಿತ್ತು, ಚಪ್ಪಲಿಯಲ್ಲಿ ಬಾರಿಸಬೇಕಿತ್ತು, ಇನ್ನೇನ್ ಫೇರ್ ಆ್ಯಂಡ್ ಲವ್ಲಿ ಹಚ್ಚಬೇಕಿತ್ತ ಎಂಬ ಸಮರ್ಥನೆಯ ಮಾತುಗಳೂ ಬಂದಿವೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಗೋಡ್ಸೆ ಆರಾಧಕರು ಗಾಂಧಿಯ ವ್ಯಕ್ತಿತ್ವಕ್ಕೆ ಮಸಿ ಬಳಿದು, ಗೋಡ್ಸೆಯನ್ನು ವಿಜೃಂಭಿಸುವ ನಾಟಕ ಪ್ರದರ್ಶಿಸಿದರೆ ಆ ಪ್ರದರ್ಶನಕ್ಕೆ ಅವಕಾಶ ಕೊಡಬೇಕು, ಅಡ್ಡಿಪಡಿಸಬಾರದು ಎನ್ನುವ ಅಭಿಪ್ರಾಯವನ್ನೂ ಗಮನಿಸಿದೆ. ಈ ರೀತಿಯ ಉದಾರತೆಯ ಫಲಿತಾಂಶವೇ ಸದ್ಯದ ಭಾರತ.
ನಾವು ಉಸಿರಾಡುವ ಗಾಳಿಗೆ ವಿಷ ಬೆರೆಸಲಾಗುತ್ತಿದೆ, ಅಥವಾ ನಾವು ತಿನ್ನುವ ಅನ್ನದಲ್ಲಿ ವಿಷ ಬೆರೆಸಲಾಗುತ್ತಿದೆ ಎಂಬ ಅರಿವು ನಮಗೆ ಇರುವಾಗ, ಅದು ನಮ್ಮ ಕಣ್ಣೆದುರೇ ನಡೆಯುವಾಗ, ಅದನ್ನು ಸೇವಿಸಿದರೆ ಆಗಬಹುದಾದ ಅಪಾಯವನ್ನು ನಾವು ತಪ್ಪಿಸಬೇಕೋ ಅಥವಾ ಅದನ್ನು ಸೇವಿಸಿ ಜನರೆಲ್ಲ ಸತ್ತ ಮೇಲೆ, ಉಳಿದ ಕೆಲವರು ಅದರ ಪರಿಣಾಮಗಳ ಕುರಿತು ಟಿವಿಯಲ್ಲಿ ಚರ್ಚೆ ಮಾಡಿ ಯಾವುದು ಸರಿ ಯಾವುದು ತಪ್ಪು ಎಂದು ಕಂಡುಹಿಡಿಯಬೇಕೋ?

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಅಭಿವ್ಯಕ್ತಿಗೆ ವೇದಿಕೆ ಒದಗಿಸುವುದು, ಅವಕಾಶ ಕಲ್ಪಿಸುವುದು ತಪ್ಪಲ್ಲ. ಆದರೆ ಆ ಸೈದ್ಧಾಂತಿಕ ಚಿಂತನೆಯ ಹೆಸರಿನಲ್ಲಿ ಮನುಷ್ಯ ವಿರೋಧಿಯಾದ, ಕೊಲೆಯನ್ನು ಸಮರ್ಥಿಸುವ ಅಭಿಪ್ರಾಯಗಳನ್ನು ಕಲೆಯ ಹೆಸರಿನಲ್ಲಿ ಪ್ರಚುರ ಪಡಿಸುವುದಕ್ಕೆ ಅವಕಾಶ ಮಾಡಿಕೊಡುವುದು ಯಾವ ಅರ್ಥದಲ್ಲಿ ಸರಿ? ಅದು ಸರಿ ಎಂದಾದರೆ ದ್ವೇಷ ಭಾಷಣವೂ ತಪ್ಪಲ್ಲ ಅಲ್ಲವೇ? ಭಾಷಣ ಮಾಡಲಿ ಬಿಡಿ, ನಾವು ಆಮೇಲೆ ಅದರ ಸಾಧಕ- ಬಾಧಕಗಳ ಕುರಿತು ಚರ್ಚಿಸೋಣ ಎಂದರೆ?
ಮಸಿ ಬಳಿದ ಪ್ರಕರಣದಲ್ಲಿ ಗಮನಿಸಬೇಕಾದ ಸಂಗತಿಯೊಂದಿದೆ. ಅದು ಈ ಪ್ರಕರಣದಿಂದ ಅಡ್ಡಂಡ ಕಾರ್ಯಪ್ಪ ಕಲಿಯಬಹುದಾದ ಪಾಠವೂ ಹೌದು; ಅದು, ಈ ಕಾಲದಲ್ಲಿಯೂ ಕೂಡ ನಾವು ಪಾಲಿಸಬೇಕಿರುವುದು ಗಾಂಧಿ ಮಾರ್ಗವನ್ನೇ ಹೊರತು ಗೋಡ್ಸೆ ಮಾರ್ಗವನ್ನಲ್ಲ ಎಂಬುದು.
ಮಸಿ ಬಳಿದ ಘಟನೆ ನಡೆದಾಗ ಎಲ್ಲರಿಗೂ ನೆನಪಾಗಿದ್ದು ಗಾಂಧಿ ಮತ್ತು ಗಾಂಧಿಯ ಅಹಿಂಸಾ ತತ್ವ. ಎಂತಹ ವ್ಯಂಗ್ಯ ನೋಡಿ. ಗೋಡ್ಸೆಯನ್ನು ಸಮರ್ಥಿಸುವವರ ನಿರೀಕ್ಷೆ ಎಂದರೆ ಗಾಂಧಿವಾದಿಗಳು ನಮ್ಮನ್ನು ಗಾಂಧಿಯಂತೆಯೇ ಅಹಿಂಸೆಯಿಂದ ನಡೆಸಿಕೊಳ್ಳಬೇಕು, ನಾವು ಮಾತ್ರ ಗೋಡ್ಸೆಯ ಮನಸ್ಥಿತಿಯನ್ನು ಹೊಂದಿಯೇ ಇರುತ್ತೇವೆ ಎಂದು.
ಗೋಡ್ಸೆ ಮಾರ್ಗ ಅನುಸರಿಸದ ಕಾರಣ ಅವರು ಮಸಿ ಬಳಿದರು. ಅನುಸರಿಸುವವರಾಗಿದ್ದಿದ್ದರೆ ಗೋಡ್ಸೆ ಗಾಂಧಿಗೆ ಮಾಡಿದ್ದನ್ನೇ ಅವರು ಅಡ್ಡಂಡ ಕಾರ್ಯಪ್ಪಗೆ ಮಾಡುತ್ತಿದ್ದರಲ್ಲವೇ? ಅದನ್ನು ಗೋಡ್ಸೆವಾದಿಗಳು ತಪ್ಪು ಎಂದು ಹೇಗೆ ಹೇಳುತ್ತಿದ್ದರು? ‘ನಾವು ಗೋಡ್ಸೆಯನ್ನು ಪಾಲಿಸಿದೆವು’ ಎಂದರೆ ಮುಗಿಯಿತಲ್ಲ? ಹಾಗಾಗಿ ಈ ಕಾಲಕ್ಕೂ ಗಾಂಧಿಯ ಅಹಿಂಸಾ ಮಾರ್ಗವೇ ಪ್ರಸ್ತುತ ಎನ್ನುವ ಬಹುಮುಖ್ಯ ಪಾಠವನ್ನು ಅಡ್ಡಂಡ ಇನ್ನಾದರೂ ಅರಿತುಕೊಳ್ಳಲಿ.
ಮಸಿ ಬಳಿದ ಘಟನೆಯನ್ನು ವಾಸ್ತವದಲ್ಲಿ ಪೂರ್ಣಪ್ರಮಾಣದಲ್ಲಿ ಒಪ್ಪಿಕೊಳ್ಳುವ ಮನಸ್ಸು ಯಾರಿಗೂ ಇರಲಿಲ್ಲ. ಅಡ್ಡಂಡ ಕಾರ್ಯಪ್ಪ ಗಾಂಧಿ ಕುರಿತು ಆಡಿದ ಮಾತುಗಳನ್ನು ಹುಡುಕಿ ಹುಡುಕಿ ನೋಡಿದವರಿಗೆ ಆ ಘಟನೆಯನ್ನು ಹೆಚ್ಚಿನವರು ಒಲ್ಲದೆಯೂ ಏಕೆ ಒಪ್ಪಿಕೊಂಡರು ಎಂಬುದು ಅರ್ಥವಾಗುತ್ತದೆ. ಹೀಗೆ ಒಪ್ಪುವಂತಾದದ್ದಕ್ಕೆ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಕಾರಣ. ‘ನಮ್ಮದು ಗಾಂಧಿ ಪರಂಪರೆ’ ಎಂದು ತಮ್ಮ ಪಕ್ಷದ ಮುಖವಾಗಿ ಮಹಾತ್ಮ ಗಾಂಧಿಯನ್ನು ಸ್ವಾತಂತ್ರ್ಯ ಪೂರ್ವದ ಇತಿಹಾಸದೊಂದಿಗೆ ಎತ್ತಿ ಮೆರೆದಾಡುವ ಕಾಂಗ್ರೆಸ್, ಅದೇ ಮಹಾತ್ಮ ಗಾಂಧಿಗೆ ಕಾರ್ಯಪ್ಪನಂಥವರು, ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿಯೇ ಈ ಮಟ್ಟಕ್ಕೆ ಅವಮಾನ ಮಾಡುತ್ತಿರುವಾಗ ಮೌನ ವಹಿಸಿದ್ದರ ಫಲವೇ ಸ್ವತಃ ಜನರು ಮಸಿ ಬಳಿಯುವಂತಾಗಿದ್ದು. ಸರ್ಕಾರವೇ ಕ್ರಮ ಕೈಗೊಂಡಿದ್ದಿದ್ದರೆ ಜನರೇಕೆ ಮಸಿ ಬಳಿಯುತ್ತಿದ್ದರು? ಸರ್ಕಾರದ ಆಲಸ್ಯ, ನಿರ್ಲಕ್ಷ್ಯ, ಮೌನವೇ ಅಲ್ಲವೇ ಇದಕ್ಕೆ ಹೊಣೆ?
ಶರೀಫ್ ಕಾಡುಮಠ
ಕವಿಗಳು, ಬರಹಗಾರರು
ಇದನ್ನೂ ಓದಿ- ಕೇಂದ್ರದಲ್ಲಿ ಖಾತೆ, ರಾಜ್ಯದಲ್ಲಿ ಕ್ಯಾತೆ – ಎಚ್ಡಿಕೆ ಸಮರ


