ಬೆಂಗಳೂರಿನ ರವೀಂದ್ರನಾಥ ಠಾಗೋರ್ ನಗರದ ನಾಗರಿಕ ಉದ್ಯಾನದಲ್ಲಿ ನವಂಬರ್ 1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೆ ಪಿ ಸುರೇಶ ಅವರು ಮಾಡಿದ ಭಾಷಣದ ತಿದ್ದಿದ ಈ ಪ್ರಸ್ತುತಿಯಲ್ಲಿ ಕರ್ನಾಟಕ ಎದುರಿಸುತ್ತಿರುವ ಭಾಷಾ ಅವನತಿಯ ಅನೂಹ್ಯ ಮುಖಗಳು,ನೆಲ ಜಲ ಬದುಕಿನ ಅತ್ಯಂತ ಗಂಭೀರ ಸಮಸ್ಯೆ ಬಿಕ್ಕಟ್ಟುಗಳ ಕುರಿತು ತೀಕ್ಷ್ಣ ಒಳನೋಟಗಳುಳ್ಳ ಕಟು ವಾಸ್ತವದ ಚಿತ್ರಣಗಳಿವೆ.
ಪ್ರತಿದಿನ ಎದ್ದಾಗಲೂ ನಮಗೆ ಎಷ್ಟೋ ಪ್ರಶ್ನೆಗಳು ಬರ್ತಾ ಇರುತ್ತವೆ. ವರ್ತಮಾನದ ಬಗ್ಗೆ, ಚರಿತ್ರೆಯ ಬಗ್ಗೆ… ಪ್ರಶ್ನೆಗಳೇ ಇಲ್ಲದಿದ್ದರೆ ನಾವು ಬದುಕೋದಕ್ಕೆ ಸಾಧ್ಯನೇ ಇಲ್ಲ. ಅದರ ಮಧ್ಯೆ ಕೆಲವು ಕೋಲ್ಮಿಂಚುಗಳ ಭರವಸೆಗಳು ಇರುತ್ತವೆ.
ಭಾರತದಲ್ಲಿ ಅತ್ಯಂತ ಹೆಚ್ಚು ದ್ವಿಭಾಷಿಕ ಪ್ರಜೆಗಳು ಇರುವ ರಾಜ್ಯ ಕರ್ನಾಟಕ
ಮಾತೃಭಾಷೆ ಅನ್ಯವಾಗಿದ್ದೂ, ಕನ್ನಡವನ್ನ ‘ಇದು ನಮ್ಮ ಭಾಷೆ’ ಅಂತ ಒಪ್ಪಿಕೊಂಡಂಥ ಭೌಗೋಳಿಕ ಪ್ರದೇಶ ಅತ್ಯಧಿಕ ಇದ್ದರೆ, ಅದು ಕರ್ನಾಟಕ ಮಾತ್ರ. ಸುಮಾರು 30% ಮಾತ್ರ ಅಚ್ಚಗನ್ನಡದ ಪ್ರದೇಶ. ಹಳೆ ಮೈಸೂರು ಸಂಸ್ಥಾನದ ಎಲ್ಲವೂ ಅಲ್ಲ. ಹಳೆ ಮೈಸೂರು ಸಂಸ್ಥಾನದ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು ಬಿಟ್ಟರೆ, ಮೈಸೂರು ಸಂಸ್ಥಾನದ ಉಳಿದ ಎಲ್ಲ ಜಿಲ್ಲೆಗಳಲ್ಲೂ ಕೂಡ ತೆಲುಗು–ಕನ್ನಡ, ತಮಿಳು–ಕನ್ನಡ… ಚಾಮರಾಜನಗರ ಇರಬಹುದು, ತುಮಕೂರು ಇರಬಹುದು.
ಮತ್ತೆ ನಾವು ಸೇರಿಸಿಕೊಂಡ ಇಂದಿನ ಈ ದೊಡ್ಡ ಕರ್ನಾಟಕ ಏನಿದೆಯೋ, ಇವತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ರಾಜ್ಯ . ಅದರಲ್ಲಿ ಪ್ರಾಯಶಃ ಶೇಕಡ 60–65ರಷ್ಟು ಕನ್ನಡ ಮಾತೃಭಾಷೆ ಅಲ್ಲದ ಕನ್ನಡಿಗರು. ಅವರೆಲ್ಲರನ್ನ ಒಂದು ಹದದಲ್ಲಿ, ಒಂದು ಭಾವೈಕ್ಯತೆಯಲ್ಲಿ ಬೆಳೆಸಿಕೊಂಡು ಬಂದಿರುವ 70 ವರ್ಷದ ಇತಿಹಾಸವನ್ನ ನಾವು ನೆನಪು ಮಾಡ್ಕೋಬೇಕು. ನಾವೆಲ್ಲ ಭಾಷೆ ಒಂದು ಭಾವೈಕ್ಯತೆಯ, ನಮ್ಮೆಲ್ಲರನ್ನು ಒಂದುಗೂಡಿಸುವ ಮಂತ್ರದಂಡ ಅಂತ ಹೇಳಿದೀವಲ್ಲ… ಒಂದೇ ಮಾತೃಭಾಷೆಯಾಗಿದ್ದ ಆಂಧ್ರ ಯಾಕೆ ಒಡೆದು ಹೋಯಿತು?ಒಂದೇ ಭಾಷೆಯಾಗಿದ್ದ ಉತ್ತರ ಪ್ರದೇಶದಿಂದ ಉತ್ತರಾಖಂಡ ಯಾಕೆ ಬೇರೆ ಆಯಿತು? ಅಲ್ಲಿ ಇನ್ನೂ ಎರಡು ಮೂರು ಪ್ರದೇಶಗಳು, ‘ನಾವು ಸ್ವತಂತ್ರ ರಾಜ್ಯಗಳಾಗಬೇಕು’ ಅಂತ ಹೇಳ್ತಿದ್ದಾರೆ.
ಅರ್ಥಾತ್, ಭಾಷೆ ಒಂದೇ ತನ್ನಷ್ಟಕ್ಕೆ ಒಂದು ಐಕ್ಯತೆಯ ಮಂತ್ರದಂಡ ಆಗೋಕೆ ಸಾಧ್ಯವಿಲ್ಲ. ಪೊಟ್ಟಿ ಶ್ರೀರಾಮುಲು ಅಂತವರು ಭಾಷಾವಾರು ರಾಜ್ಯದ ಸ್ಥಾಪನೆಗೆ ಕಾರಣರಾದ ಹುತಾತ್ಮರು. ಅವಿರತವಾಗಿ ಉಪವಾಸ ಕೂತು ತೀರಿಕೊಂಡ್ರಲ್ಲ… ಇದರ ಪರಿಣಾಮವಾಗಿ ಆಂಧ್ರಪ್ರದೇಶ ಮೊದಲು ಹುಟ್ಟಿದ್ದು. ಅಂತಹ ಪೊಟ್ಟಿ ಶ್ರೀರಾಮುಲು ಅವರ ಕನಸಿನ ಆಂಧ್ರ, ತೆಲಂಗಾಣ ಮತ್ತು ಆಂಧ್ರವಾಗಿ ಒಡೆದು ಹೋಯಿತು.
ಆ ದೃಷ್ಟಿಯಿಂದ ಕರ್ನಾಟಕ ಇಡೀ ರಾಷ್ಟ್ರದಲ್ಲಿ ಒಂದು ಅದ್ಭುತವಾದ ರೂಪಕ. ನಮ್ಮ ಮಲೆನಾಡಿನ ಕೊಡಗು, ದಕ್ಷಿಣ ಕನ್ನಡ, ಉಡುಪಿ… ಕನ್ನಡ ಮಾತೃಭಾಷೆ ಅಲ್ಲ. ಬೀದರ್, ಗುಲ್ಬರ್ಗದಂತಲ್ಲೂ ಪ್ರಾಯಶಃ ಕನ್ನಡ ಮಾತೃಭಾಷೆಯಾಗಿರುವವರು ಕಡಿಮೆ. ಬೆಂಗಳೂರು – ಪೂನಾ ಹೈವೇಯ ಪೂರ್ವಕ್ಕಿರುವುದರಲ್ಲಿ ಶೇಕಡ 60ರಷ್ಟು ತೆಲುಗು ಭಾಷಿಕರು. ಬಾಗೇಪಲ್ಲಿಯಲ್ಲಿ ತುಂಬಾ ಜನಕ್ಕೆ ಕನ್ನಡವೇ ಬರಲ್ಲ. ನಾನು ಹೋದಾಗ ನನಗೆ ಒಬ್ಬ ದುಭಾಷಿ ಬೇಕಾಗಿತ್ತು. ಆದರೆ ಯಾವ ಸಮಸ್ಯೆಯೂ ಇಲ್ಲ. ಒಂದು ಅಪೂರ್ವ ಮಾದರಿಯಾಗಿ ಕರ್ನಾಟಕ ಇದೆ ಅನ್ನೋದು ನಾವು ಬಹಳ ಹೆಮ್ಮೆ ಪಡಬೇಕಾದ ವಿಚಾರ.
70… 70 ಅಂತಂದ್ರೆ, ಇನ್ನೊಂದು 10 ವರ್ಷ ಕಳೆದರೆ ಸಹಸ್ರ ಚಂದ್ರದರ್ಶನದ ವಯಸ್ಸಾಗುತ್ತೆ ಕರ್ನಾಟಕಕ್ಕೆ! ಅಂದ್ರೆ ವಯಸ್ಸಾಯಿತು. ಎರಡು ತಲೆಮಾರು ತನ್ನ ಕರ್ತವ್ಯವನ್ನು ಮುಗಿಸಿ ನಿವೃತ್ತಿಯಾಗುವ ಹಂತದಲ್ಲಿ, ಈಗಿನ ತಲೆಮಾರಿನ ಆಶೋತ್ತರಗಳೇನು, ಅದು ಹೇಗೆ ಬದಲಾಗ್ತಿದೆ, ಅವರು ಕನ್ನಡವನ್ನು ಹೇಗೆ ನೋಡ್ತಾ ಇದ್ದಾರೆ ಅನ್ನೋದರ ಬಗ್ಗೆ ಬಹಳ ಕಳವಳ ಇದೆ.
ಈಗಷ್ಟೇ ಇವರಲ್ಲಿ ಹೇಳ್ತಾ ಇದ್ದೆ. ಕನ್ನಡದಲ್ಲಿ ಈ ಬಾರಿ ಎಸ್ಎಸ್ಎಲ್ಸಿಯಲ್ಲಿ ಒಂದೂವರೆ ಲಕ್ಷ ಮಕ್ಕಳು ಫೇಲ್ ಆಗಿದ್ದಾರೆ,. ಅದರಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಶೇಕಡ 80. ನನಗೆ ಬಹಳ ಮುಖ್ಯವಾದದ್ದು. ರಾಜ್ಯದ ಕೆಲವು ಶಾಲೆಗಳಲ್ಲಿ, ಪ್ರಾಯಶಃ, ‘ಲರ್ನಿಂಗ್ ಡಿಫಿಷಿಯನ್ಸಿ’ ಅಂತ ಒಂದು ಸರ್ಟಿಫಿಕೇಟ್ ಮಾಡಿಸ್ತಿದಾರಂತೆ. ಓದುವ ಸಾಮರ್ಥ್ಯ ಇಲ್ಲ ಅಂತ. ಯಾವುದೇ ಸಬ್ಜೆಕ್ಟ್ ಮೇಲೆ ಡಾಕ್ಟರ್ ಆ ಸರ್ಟಿಫಿಕೇಟ್ ಕೊಟ್ಟರೆ, ಎಸ್ಎಸ್ಎಲ್ಸಿಯಲ್ಲಿ ನೀವು ಆ ಸಬ್ಜೆಕ್ಟಿನ ಪರೀಕ್ಷೆಯನ್ನು ತಗೋಬೇಕಾಗಿಲ್ಲ., ಎಲ್ಡಿ ಅಂತ ಕರೀತಾರೆ. ಹಲವು ಶಾಲೆಗಳಲ್ಲಿ ಎಲ್ಡಿ ಸರ್ಟಿಫಿಕೇಟ್ ಮಾಡ್ಸಿರೋದು ಮ್ಯಾಥಮೆಟಿಕ್ಸ್ಗಲ್ಲ, ಸೈನ್ಸ್ಗಲ್ಲ, ಇಂಗ್ಲಿಷ್ಗಲ್ಲ, ಕೋರ್ ಸಬ್ಜೆಕ್ಟ್ಗಲ್ಲ… ಕನ್ನಡಕ್ಕೆ!
ಕನ್ನಡದಲ್ಲಿ ಲರ್ನಿಂಗ್ ಡಿಫಿಷಿಯನ್ಸಿ ಇದೆ. ಆದ್ದರಿಂದ ಆ ಮಕ್ಕಳು ಎಸ್ಎಸ್ಎಲ್ಸಿಯಲ್ಲಿ ಕನ್ನಡ ಪರೀಕ್ಷೆಯನ್ನೇ ತಗೊಳ್ಳಬೇಕಾಗಿಲ್ಲ. ಇದು ಯಾವ ದಾಖಲೆಗಳಲ್ಲೂ ರಿಜಿಸ್ಟರ್ ಆಗಲ್ಲ. ಇದು ಕನ್ನಡದ ಚೈತನ್ಯವನ್ನೇ ಉಡುಗಿಸುವಂತ ಒಂದು ವರ್ತಮಾನ. ಇವತ್ತು ಸಣ್ಣ ಪ್ರಮಾಣದಲ್ಲಿ ಇರಬಹುದು. ಇನ್ನೊಂದು 10 ವರ್ಷದಲ್ಲಿ ಈ ಸರ್ಟಿಫಿಕೇಟಿನ ಅವಶ್ಯಕತೆಯೇ ಇರೋದಿಲ್ಲ. ಯಾಕೆಂದ್ರೆ ಕನ್ನಡವೇ ಇರೋದಿಲ್ಲ!
ನಾವೆಲ್ಲ ನಮ್ಮ ಮಕ್ಕಳನ್ನು ಓದಿಸುವಾಗ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಓದಿಸಿದ್ವಲ್ಲ, ಓದಿದ್ವಲ್ಲ… ನಾನು ಸಂಸ್ಕೃತ ವಿಷಯದಲ್ಲಿ ಕೇಳಿದ್ದೆ. ನನ್ನ ಗೆಳೆಯನೇ ಒಬ್ಬ ಪ್ರೊಫೆಸರ್ ಆಗಿ ರಿಟೈರ್ಡ್ ಆಗಿದ್ದ. ‘ನೀವು ಸಂಸ್ಕೃತವನ್ನು ಮೊದಲ ಭಾಷೆಯಾಗಿ ಮಾಡ್ತಿದ್ರೆ, ಸಂಸ್ಕೃತದಲ್ಲಿ ಬರಿಸಿ ನೋಡೋಣ’ ಅಂತ. ಇಂಗ್ಲಿಷ್ ಪರೀಕ್ಷೆಯನ್ನ ಕನ್ನಡದಲ್ಲಿ ಬರೆಯುವ ಅವಕಾಶ ಇದೆಯೇ? ಸಂಸ್ಕೃತವನ್ನು ನೀವು ಕನ್ನಡದಲ್ಲೂ ಬರೀಬಹುದು ಅಂತ! ಅರ್ಥಾತ್, ಅದು ಅಂಕಗಳ ಒಂದು ಮ್ಯಾಜಿಕ್ಗೆ ಬೇಕಾಗಿ ಬಳಸಿದ ಒಂದು ಶಿಕ್ಷಣ ದ್ರೋಹದ ಹೆಜ್ಜೆ. ಸಂಸ್ಕೃತವನ್ನು ಕಲಿಯುವ ಆಸಕ್ತಿಯಾಗಲಿ, ಅದರ ಪಾರಮ್ಯವಾಗಲಿ, ಅದರ ಪಾರಂಗತತನವಾಗಲಿ ಆ ಮಕ್ಕಳಿಗೆ ಇಲ್ಲ. ಖಂಡಿತ ಆ ಮಕ್ಕಳು ಒಬ್ಬ ಕಾಳಿದಾಸನನ್ನು, ಒಬ್ಬ ಭಾಸನನ್ನು ಓದಿದ ಕುರುಹು ಕೂಡ ಇಲ್ಲ. ಅಷ್ಟೇ ಅಲ್ಲ, ಎಸ್ಎಸ್ಎಲ್ಸಿ ಆದಮೇಲೆ ಅದನ್ನು ಮುಟ್ಟಿದ ಉದಾಹರಣೆಯೂ ಇಲ್ಲ. ಕನ್ನಡದಲ್ಲಿ ಒಂದು ಅಪೂರ್ವವಾದಂತಹ ಮಂಡ್ಯದ ಕಡೆ ಗಾದೆ ಇದೆ: ‘ಹೆಂಗೆ ಬಿದ್ರೂ ಅಂಡಿಗೆ ಪೆಟ್ಟು’ ಅಂತ. ಈ ಎಲ್ಲ ಶೈಕ್ಷಣಿಕ ದುಸ್ಸಾಹಸಗಳ ಪರಿಣಾಮಕ್ಕೆ ಬಲಿಯಾಗಿದ್ದು ಕನ್ನಡ.
ಆ ರೀತಿಯ ಒಂದು ಟಿಪ್ಪಿಂಗ್ ಸ್ಕೇಲ್ ಅಂತ ಬರುತ್ತೆ. ತಕ್ಕಡಿ ಯಾವುದೋ ಒಂದು ಘಟ್ಟದಲ್ಲಿ ಹಿಂಗೆ ವಾಲಿದರೆ ಮತ್ತೆ ಇತ್ತ ಬರಲ್ಲ.. ಇಕಾಲಜಿ/ ಪರಿಸರದಲ್ಲಿ ಅದಾಗುತ್ತೆ. ಬೆಂಗಳೂರಿನ ಅತ್ಯಂತ ದುರ್ದಮವಾದಂತಹ ನಾಶವನ್ನು ನಾವು ನೋಡಿದೀವಿ. ಇಲ್ಲಿನ ಅಪೂರ್ವವಾದ ಕೆರೆಗಳು ಎಷ್ಟು ಕೆಟ್ಟಿದಾವೆ ಅಂದ್ರೆ, ಮತ್ತೆ ಅದನ್ನು ಪೂರ್ವಸ್ಥಿತಿಗೆ ತರೋಕೆ ಸಾಧ್ಯ ಇಲ್ಲ. ಕನ್ನಡದ ಸ್ಥಿತಿಯೂ ಹಾಗೆ ಇದೆ.
ಆದರೆ ಇನ್ನೊಂದು ಭಾಗವನ್ನು ನಾನುಹೇಳೋಕೆ ಬಹಳ ಇಷ್ಟಪಡ್ತೀನಿ.
ಬೆಂಗಳೂರು ಕರ್ನಾಟಕದ ಸುಮಾರು ಆರನೇ ಒಂದರಷ್ಟು ಶಾಸಕರನ್ನು ಹೊಂದಿದೆ. ಆರನೇ ಒಂದು ಜನಸಂಖ್ಯೆಯನ್ನು ಹೊಂದಿದೆ. ಆದರೆ ಬೆಂಗಳೂರೇ ಕರ್ನಾಟಕ ಅಲ್ಲ. ಬೆಂಗಳೂರು ಕರ್ನಾಟಕದ ರಾಜಧಾನಿ. ಎಲ್ಲರನ್ನೂ ಸೆಳೆಯುವಂತ ಒಂದು ಆರ್ಥಿಕತೆಯನ್ನ ಸೃಷ್ಟಿ ಮಾಡಿದಂತ ಒಂದು ಅಪೂರ್ವ ಮೆಟ್ರೋಪೊಲೀಸ್.
ಇದರಿಂದ ಆಚೆಗೆ ಕರ್ನಾಟಕ ಇದೆಯಲ್ಲ, ಅಲ್ಲೇನಾಗ್ತಿದೆ? ಭಾಷಿಕವಾಗಿ ಅವರಿಗೇನು ಕನ್ನಡ ಹೇಳಿಕೊಡಬೇಕಾಗಿಲ್ಲ. ಇವತ್ತು ಕನ್ನಡದ ಅತ್ಯುತ್ತಮವಾದ ಬರಹಗಾರರು ಬರ್ತಾ ಇರೋದು ದಕ್ಷಿಣ ಕನ್ನಡದ ಬ್ಯಾರಿ ಜನಾಂಗದಿಂದ, ಅಥವಾ ಕೊಂಕಣಿ ಮಾತೃಭಾಷೆಯಾಗಿರುವವರಿಂದ. ಹೊಸ ತಲೆಮಾರಿನ ಕನ್ನಡದ ಲೇಖಕರು ಕೋಲಾರದಿಂದ ಹಿಡಿದು ಕೊಪ್ಪಳದವರೆಗೂ ಬಹುತೇಕ ತೆಲುಗು ಮಾತೃಭಾಷೆಯವರು.

ಸಮಸ್ಯೆ ಅದಲ್ಲ. ಸಮಸ್ಯೆ, ಕನ್ನಡ ಅನ್ನದ ಭಾಷೆಯಾಗೋಕೆ ಸಾಧ್ಯನೋ ಅಂತ ಒಂದು ಪ್ರಶ್ನೆಯನ್ನ ಇಡ್ತಿದೀವಿ.
ಯಾವ ಅನ್ನ ದುಡಿಯೋದು? ಇಂಜಿನಿಯರಿಂಗ್ ಕಲಿತು, ಯಾವುದೋ ಬಹುರಾಷ್ಟ್ರೀಯ ಕಂಪನಿಯಲ್ಲಿ ಕಾರಕೂನಗಿರಿ ಮಾಡಿಕೊಳ್ಳುತ್ತಾ… (ಗುಲಾಮಗಿರಿ ಅನ್ನೋ ಪದ ಬಳಸಬಾರದು…) ಅದು ಅನ್ನದ ದಾರಿಯೋ? ಇಡೀ ಕರ್ನಾಟಕದ ಶೇಕಡ 60ರಷ್ಟು ಜನಸಮುದಾಯ ಇಂದಿಗೂ ನಂಬಿಕೊಂಡಿರುವಂತ ಕೃಷಿಯನ್ನೇ ಆಧಾರವಾಗಿ ಇಟ್ಟುಕೊಂಡ ಗ್ರಾಮೀಣ ಕರ್ನಾಟಕದ ಜೀವನ ಮುಖ್ಯಾನೋ?
ಬೆಂಗಳೂರಿಗೆ ಎಷ್ಟು ವಲಸೆ ಕಾರ್ಮಿಕರು ಬರ್ತಿದ್ದಾರೆ ಅಂದ್ರೆ, ಇಲ್ಲಿನ ಎಲ್ಲ ಕನ್ಸ್ಟ್ರಕ್ಷನ್ ವರ್ಕಿನಲ್ಲಿರುವ ಶೇಕಡ 70ರಷ್ಟು ಜನ ಹೈದರಾಬಾದ್ ಕರ್ನಾಟಕದ ಕಾರ್ಮಿಕರು. ಅವರೇನು ಬೆಂಗಳೂರಿಗೆ ಆಸೆಪಟ್ಟುಕೊಂಡು ಬರ್ತಿದ್ದಾರೆಯೇ? . ಒಂದು ಸೈಟ್ನಲ್ಲಿ , ನಾಯಿ ಗೂಡಿಗಾದರೂ ಒಂದು ಕಿಟಕಿ ಇಟ್ಟಿರ್ತೀವಿ ನಾವು. ಅವರು ಉಳಿದುಕೊಳ್ಳುವುದಕ್ಕೆ, ಮೆಟೀರಿಯಲ್ ಸಂಗ್ರಹಕ್ಕೆ, ಸಿಮೆಂಟ್ ಹಾಕದ ಇಟ್ಟಿಗೆಗಳನ್ನು ಜೋಡಿಸಿ, ನಾಲ್ಕು ಶೀಟ್ ಹಾಕಿದ್ರಲ್ಲಿ ಆ ಫ್ಯಾಮಿಲಿಯನ್ನು ಕೂರಿಸಿ… ಆ ಮನೆ ಪೂರ್ತಿಯಾದ ತಕ್ಷಣ ಅವರು ಅಲ್ಲಿಂದ… ಇನ್ನೊಂದೆಡೆಗೆ.
ತಾವು ಹುಟ್ಟಿದ ಊರು, ತಮ್ಮ ಪ್ರೀತಿಯ ಊರು, ತಮ್ಮ ಕಳ್ಳುಬಳ್ಳಿ ಸಂಬಂಧ ಇರೋದು, ನಮ್ಮ ಹಬ್ಬ ಹರಿದಿನ, ನಮ್ಮ ದೇವರುಗಳು ಇರುವ ಊರನ್ನು ಬಿಟ್ಟು ಬರುವುದು ಅಂತ ಯಾಕೆ ಅನ್ಸುತ್ತೆ? ಆ ಸನ್ನಿವೇಶವನ್ನು ಯಾಕೆ ಸೃಷ್ಟಿ ಮಾಡಿದ್ದೀವಿ ನಾವು? ಇದು ಕನ್ನಡದ ಪ್ರಶ್ನೆ. ಇದು ಕನ್ನಡದ ಪ್ರಶ್ನೆ ಆಗಬೇಕು.
ಒಂದು ಕಾಲದಲ್ಲಿ ಇಡೀ ಡೆಕ್ಕನ್, ದಖ್ಖಣದ ಗೇಟ್ವೇ ಅಂತ ಆಗಿದ್ದಂತಹ ಹೈದರಾಬಾದ್ ಕರ್ನಾಟಕ ಏನಾಗಿದೆ? ಮೈಸೂರಿನಂತ ಒಂದು ಸಾಮ್ರಾಜ್ಯ ಸ್ಥಾಪನೆಯಾಗಿ ಪ್ರವರ್ಧಮಾನಕ್ಕೆ ಬಂದಿದ್ದು ಕಳೆದ ಎರಡು ಮೂರು ಶತಮಾನದಲ್ಲಿ ಅಷ್ಟೇ. ಅದಕ್ಕೂ ಮೊದಲು ಕರ್ನಾಟಕದ ಹಿರಿಮೆಯ ಸಾಮ್ರಾಜ್ಯಗಳಾಗಲಿ, ಸಂಸ್ಥಾನಗಳಾಗಲಿ ಬಹಳ ದೊಡ್ಡ ಮಟ್ಟದ ಸಮೃದ್ಧಿಯನ್ನು ಕಂಡಿದ್ದು ತುಂಗಭದ್ರೆಯಿಂದ ಆಚೆ, ತುಂಗಭದ್ರ- ಕೃಷ್ಣಾದ ದಂಡೆಯಲ್ಲಿ.
ಬೀದರ್, ಬಿಜಾಪುರ, ಗುಲ್ಬರ್ಗ… ಈ ಪ್ರದೇಶಗಳು ಎಷ್ಟು ದೊಡ್ಡ ಅಧಿಕಾರ ಕೇಂದ್ರ ಮಾತ್ರ ಅಲ್ಲ, ಶಿಕ್ಷಣದ ಕೇಂದ್ರವಾಗಿತ್ತು, ವಾಣಿಜ್ಯದ ಕೇಂದ್ರವಾಗಿತ್ತು. ಇವತ್ತು ಯಾಕೆ ಅದು ಕರ್ನಾಟಕದ ಅತ್ಯಂತ ದಾರಿದ್ರ್ಯದ ಸ್ಥಿತಿಯ ಒಂದು ರೂಪಕವಾಗಿದೆ? ‘ಮೋಸ್ಟ್ ಬ್ಯಾಕ್ವರ್ಡ್ ಡಿಸ್ಟ್ರಿಕ್ಟ್ಸ್ ಇನ್ ಕರ್ನಾಟಕ’ ಅಂತ ಇದ್ದರೆ, ಆ ಕಲ್ಯಾಣ ಕರ್ನಾಟಕ ಅಂತ ನಾವು ಗುರುತಿಸಿರುವಂತಹ ಎಂಟು ಜಿಲ್ಲೆಗಳು ಬರುತ್ತವೆ.
70 ವರ್ಷ ಮೊದಲು ಹಾಗೆ ಇತ್ತು ತಾನೇ? ಗುಲ್ಬರ್ಗವಾಗಲಿ, ಬಿಜಾಪುರವಾಗಲಿ, ರಾಯಚೂರಾಗಲಿ… ಆ ಜಿಲ್ಲೆಗಳು ಇಂದಿಗೂ ಅದೇ ರೀತಿಯಲ್ಲಿ ಇವೆಯಲ್ಲ. ಅದರ ಬಗ್ಗೆ ನಮಗೊಂದು ಪಾಪಪ್ರಜ್ಞೆ ಕಾಡಬಾರದೇ? ‘ದಿ ಫೌಂಡೇಶನ್ ಆಫ್ ಎನಿ ಡೆವಲಪ್ಮೆಂಟಲ್ ಆಕ್ಟಿವಿಟಿ’ ಯಾವುದೇ ಅಭಿವೃದ್ಧಿಯ ಬುನಾದಿ ಯೋಜನೆ ಎಂದರೆ ನೀರಾವರಿ. ಅದಕ್ಕೆ ನೆಹರು ಅವರು ಮೊದಲು ಶುರು ಮಾಡಿದ್ದು ಅಣೆಕಟ್ಟುಗಳನ್ನು. ಒಂದು ಅಣೆಕಟ್ಟು ಕಟ್ಟಿ, ನೀರಾವರಿ ವ್ಯವಸ್ಥೆ ನೀಡಿದರೆ, ರೈತರು ಮಳೆಯ ಹಂಗಿನಲ್ಲಿ ಇಲ್ಲದೆ ಬೆಳೆಗಳನ್ನು ಬೆಳೆದುಕೊಳ್ಳಬಹುದು. ಅದು ಒಂದು ಆರ್ಥಿಕತೆಯನ್ನು ಬೆಳೆಸುತ್ತೆ, ರೈತರಲ್ಲಿ ದುಡ್ಡು ಓಡಾಡಿಸುತ್ತೆ. ಆಮೇಲೆ ಉಳಿದಿದ್ದೆಲ್ಲ ಬರುತ್ತೆ ಅಂತ.
ಆ ಹೈದರಾಬಾದ್ ಕರ್ನಾಟಕದಲ್ಲಿ ನೀರಾವರಿ ತಂದಲ್ಲಿ, ‘ಇದ್ದದ್ದು ಕೆಡ್ತು ಮದ್ದಿನ ಗುಣದಿಂದ’ ಅಂದಂಗೆ… ನೀರಾವರಿ ಬಂದಿದ್ದೆಲ್ಲ ಶ್ರೀಮಂತ ಪ್ರದೇಶ ಆಯ್ತು. ಅದರ ಪಕ್ಕದಲ್ಲೇ ಡ್ರೈಲ್ಯಾಂಡ್ ಅಗ್ರಿಕಲ್ಚರ್ ಅಂತ ಏನು ಕರೀತೀವಿ, ಅಲ್ಲಿನ ಬಡತನ ನೋಡಿದರೆ ಅಕ್ಷರಶಃ ಅನ್ನ ಸೇರಲ್ಲ.
ಹೋಗಲಿ, ಈ ನೀರಾವರಿ ಪ್ರದೇಶದ ಸ್ವಾಮ್ಯ ಯಾರಿಗೆ ಬಂತು? ತುಂಗಭದ್ರೆಯಲ್ಲಿ ಅಲ್ಲಿನ ಎಲ್ಲ ಕಡೆ ನೀರಾವರಿ ಆಗುತ್ತೆ ಅಂತ ಗೊತ್ತಾದ ತಕ್ಷಣ, ಅಲ್ಲಿನ ಎಲ್ಲ ರೈತರ ಭೂಮಿಯನ್ನು ಆಂಧ್ರದ ಬಹಳ ದೊಡ್ಡ ಮಾಲೀಕರು ತಗೊಂಡರು. ಅದಕ್ಕೆ ‘ಕ್ಯಾಂಪ್’ ಅಂತ ಹೆಸರು. ಈ ರೀತಿಯ ಒಂದು ಅಂತರವನ್ನು ನಾವೇ ಹುಟ್ಟುಹಾಕಿದ, ಸೃಷ್ಟಿಸಿದಂತಹ ಅಭಿವೃದ್ಧಿ ಮಾದರಿ ತಂದುಹಾಕಿದೆ.
ಮಂಡ್ಯದ ಬಗ್ಗೆಯೂ ಬಹಳ ದೊಡ್ಡ ಅಪಕಲ್ಪನೆ ಇದೆ. ಮಂಡ್ಯ ಕಬ್ಬಿನ ನಾಡು ಅಂತ. ಹಂಗೆ ಬೋರ್ಡ್ ಕೂಡ ಹಾಕ್ತಿರುತ್ತಾರೆ ಅವರು!! . ಶೇಕಡ 50 ಮಾತ್ರ ಮಂಡ್ಯ ನೀರಾವರಿಗೆ ಒಳಪಟ್ಟಿರುವುದು. ನಾಗಮಂಗಲವಾಗಲಿ, ಮೇಲ್ಕೋಟೆಯ ಒಂದು ಭಾಗವಾಗಲಿ, ಮಳವಳ್ಳಿಯ ಒಂದು ಭಾಗವಾಗಲಿ ನೀರಾವರಿ ಇಲ್ಲ. ಅಲ್ಲಿನ ಯುವಕರೆಲ್ಲಾ ವ್ಯಾನ್ ಹತ್ಕೊಂಡು ಬೆಂಗಳೂರಿಗೆ ಬಂದಿದ್ದಾರೆ.
ಇದು ಕನ್ನಡಿಗರ ಅನ್ನ ಕಸಿಯುವ ಕೆಲಸ ಅಲ್ಲ. ಕನ್ನಡಿಗರ ಅನ್ನವೇ ಇಲ್ಲದಂತಹ ಒಂದು ದುಃಸ್ಥಿತಿಯನ್ನ ತಂದಿರುವಂತದ್ದು. ಇದರ ಬಗ್ಗೆ ನಾವೇನಾದರೂ ಯೋಚನೆ ಮಾಡಿದೀವಾ?. ಉತ್ತರ ಕರ್ನಾಟಕದಿಂದ, ಬರಪೀಡಿತ ಜಿಲ್ಲೆಗಳಿಂದ ನಮ್ಮ ಕನ್ನಡದ ಅಣ್ಣತಮ್ಮಂದಿರು, ತಾಯಂದಿರು ಇಲ್ಲಿಗೆ ಬರೋ ದುರಂತ ನಮ್ಮನ್ನು ತಟ್ಟದೆ ಇದ್ದರೆ, ನಮ್ಮ ಕನ್ನಡ ಅಭಿಮಾನ ಸಂಪೂರ್ಣ ಹುಸಿ ಅಂತ ಅರ್ಥ.
40 ವರ್ಷ ಮೊದಲು .. ಬೆಂಗಳೂರಿನ ಆರ್ಥಿಕತೆಯನ್ನು ಕಟ್ಟಿದ್ದು ಹೆಚ್ಎಂಟಿ ಅವರು ಇರಬಹುದು, ಬಿಎಚ್ಇಎಲ್ ಇರಬಹುದು, ಕಿರ್ಲೋಸ್ಕರ್ನಂತ ಖಾಸಗಿ ಇರಬಹುದು. ಒಂದು ಕೈಗಾರಿಕೆಯನ್ನು ಮಾಡುವುದು ಎಷ್ಟು ಕಷ್ಟ ಅಂತ ಕಾರ್ಮಿಕ ನಾಯಕರಾದ ಲಾರೆನ್ಸ್ ಫರ್ನಾಂಡಿಸ್ ಹೇಳ್ತಾರೆ. ಕೈಗಾರಿಕೆ ಕಟ್ಟೋದಿಕ್ಕೆ ನೀವು ಮೆಟೀರಿಯಲ್ ತರಬೇಕು, ಪ್ರೊಡಕ್ಷನ್ ಮಾಡಬೇಕು, ಮಾರ್ಕೆಟಿಂಗ್ ನೋಡ್ಕೋಬೇಕು. ಕಳೆದ 20 ವರ್ಷದಲ್ಲಿ ಯಾವ ಕಷ್ಟವೂ ಇಲ್ಲ. ಉತ್ಪಾದನೆಯ ತಳಪಾಯವಾಗಬೇಕಾಗಿದ್ದಂತಹ ಭೂಮಿಯೇ ಒಂದು ಮಾರಾಟದ ಸರಕಾಯಿತು. ರಿಯಲ್ ಎಸ್ಟೇಟ್ ಆಯಿತು.
ನೀವು ಕೈಗಾರಿಕೆ ಮಾಡಬೇಕಾಗಿಲ್ಲ, ಪ್ರೊಡಕ್ಷನ್ ಮಾಡಬೇಕಾಗಿಲ್ಲ, ಉದ್ಯೋಗಿಗಳನ್ನು ಇಟ್ಟುಕೊಳ್ಳಬೇಕಾಗಿಲ್ಲ. ಅವರಿಗೆ ಏನೋ ಒಂದು ಕ್ಯಾಂಟೀನ್ ಊಟನೋ, ಇನ್ಯಾವುದೋ ಪಿಎಫ್ ಕೊಡಬೇಕಾದ ಯಾವ ಸಮಸ್ಯೆಯೂ ಇಲ್ಲ. ಸ್ಪೆಕ್ಯುಲೇಟಿವ್, ಊಹಾತ್ಮಕ… ನಾಳೆ ರೇಟ್ ಜಾಸ್ತಿ ಆಗುತ್ತೆ ಅನ್ನೋ ಹುಚ್ಚಿನಿಂದ, ಹುಚ್ಚು ಹಚ್ಚಿಸಿದ ಒಂದು ಎಕಾನಮಿಯನ್ನ ಬೆಂಗಳೂರು ಸೃಷ್ಟಿ ಮಾಡಿದೆ. ನಾವು ಅದರಲ್ಲೂ ಬದುಕುತ್ತಾ ಇದ್ದೀವಿ.
ಅಭದ್ರತೆಯ ಉದ್ಯೋಗಗಳಲ್ಲಿ, ನಾಳೆಯ ದಿನವಾದರೂ ಉತ್ತಮ ಇರುವುದು ಅನ್ನುವ ಒಂದು ಆಸೆಯಲ್ಲಿ ನಮ್ಮ ಯುವಕರಿದ್ದಾರೆ. ಗಿಗ್ ವರ್ಕರ್ಸ್ ಅಂತ ಕರೀತೀವಿ. ಹೊಟ್ಟೆ ಉರಿಯುತ್ತೆ ನೋಡಿದ್ರೆ. ಆ ಜೊಮಾಟೋನೋ ಇನ್ಯಾವುದರಲ್ಲೋ ಸಪ್ಲೈ ಮಾಡ್ತಾ ಇರೋ ಹುಡುಗರು ಇಡೀ ದಿನ ದುಡೀತಾರೆ. ಕೇಳಿದರೆ, ‘ಇಲ್ಲ ಸರ್, ಇನ್ನೊಂದು ಎರಡು ವರ್ಷ’ ಅಂತ ಹೇಳ್ತಾರೆ… ದಟ್ ಡೇ ನೆವರ್ ಕಮ್ಸ್.
ಅಂತಹ ಕನ್ನಡಿಗ ಯುವಕರ ಪರಿಸ್ಥಿತಿ ಏನಾಗಿದೆ ಅಂದ್ರೆ, ಮಂಡ್ಯದಲ್ಲಿ ಹೆಣ್ಣು ಸಿಗದೇನೇ ಮಲೆಮಾದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡೋಕೆ ಶುರುಮಾಡಿದ್ದಾರೆ, ಹರಕೆ! ಇವತ್ತು ಕರ್ನಾಟಕದ ಡೆಮೋಗ್ರಾಫಿಕ್ ಡಿವಿಡೆಂಡ್ ಅಂತ ಏನು ಕರೀತೀವಿ ನಾವು… ಒಂದು 20ರಿಂದ 30ರ ಒಳಗಿನ ಯುವಕರಿಗೆ ಉದ್ಯೋಗವೂ ಇಲ್ಲ, ನೆಟ್ಟಗೆ ವಿದ್ಯಾಭ್ಯಾಸವೂ ಸಿಕ್ಕಿಲ್ಲ. ಮದುವೆಯ ಕನಸು ದೂರವೇ ಉಳಿಯಿತು.
ಇವರು ಅಮೃತಕಾಲದ ವರ್ಷವನ್ನ, 2047ನ್ನ ಹೇಗೆ ನೋಡಬಹುದು ಅಂತ ಯೋಚನೆ ಮಾಡಿ.
ಇದು ಕರ್ನಾಟಕದ ಮುಂದಿನ ದಿನಗಳ ಭವಿಷ್ಯದ ಯೋಜನೆಯ ಒಂದು ಪ್ರಶ್ನೆಯನ್ನ ನಮ್ಮಲ್ಲಿ ಹುಟ್ಟುಹಾಕಬೇಕು. ಏನೋ ಒಂದು ಭ್ರಮೆಯಲ್ಲಿ ನಾವು ಬಹಳ ದೊಡ್ಡದಾದಂತಹ ಹೊಸ ಸಮಸ್ಯೆಗಳನ್ನ ಹುಟ್ಟುಹಾಕುತ್ತಾ ಇದ್ದೀವಿ. ಜೀವನೋಪಾಯವೇ ಅಭದ್ರವಾಗಿದ್ದರೆ, ಅದನ್ನ ನಂಬಿಕೊಂಡ ಕುಟುಂಬದ ಕನಸುಗಳು ಅಭದ್ರವಾದರೆ, ಭಾಷೆ ಹೇಗೆ ಉಳಿಯೋಕೆ ಸಾಧ್ಯ?
ನಮ್ಮ ದಕ್ಷಿಣ ಕನ್ನಡದ… ನಮಗೆಲ್ಲರಿಗೂ ಗೊತ್ತು, ಬಹುಶಃ 60–70ರಲ್ಲಿ ಸಾವಿರಾರು ಕುಟುಂಬಗಳು ಮುಂಬೈಗೆ ವಲಸೆ ಹೋಗಿದ್ದು. ಹೊಟ್ಟೆಗೆ ಇಲ್ಲದೆ ದಕ್ಷಿಣ ಕನ್ನಡದ ಹಿರಿಯರು ಮುಂಬೈಗೆ ವಲಸೆ ಹೋಗಿ, ಅಲ್ಲಿ ಶಿವಸೇನೆಯ ಕೈಯಿಂದ ಬಹಳ ದೊಡ್ಡ ದಾಳಿಗೆ ಒಳಗಾಗಿದ್ದರು.
ಒಬ್ಬ ಗೆಲ್ಲುವಾಗ ಒಂಬತ್ತು ಜನ ಬಿದ್ದಿರುತ್ತಾರೆ. ಅದು ಕ್ರಿಕೆಟ್ನಲ್ಲಿ ಆಗಲಿ, ಉದ್ಯಮದಲ್ಲಿ ಆಗಲಿ, ಯಾವುದರಲ್ಲಾದರೂ. ಸಕ್ಸೆಸ್ ಸ್ಟೋರಿ ಇಸ್ ಜಸ್ಟ್ 1%. 90% ಸಿಂಪ್ಲಿ ಡ್ರಾಪ್ ಔಟ್, ಡ್ರೌನ್… ಮುಳುಗಿ ಹೋಗಿರುತ್ತಾರೆ. ನಮ್ಮಲ್ಲಿ ಒಂದು ಮಾತಿದೆ, ಹೆಬ್ಬೆರಳೇ ದಪ್ಪಾಗೋದು ಅಂತ. ಅದು ಆರೋಗ್ಯದ ಲಕ್ಷಣ ಅಲ್ಲ. ಬೆಂಗಳೂರು ಹೀಗೆ ಬೆಳೆದು ಜಗತ್ತಿನ ಹೆಗ್ಗುರುತಾದರೆ, ಉಳಿದ ಭಾಗಗಳ ಕಥೆ ಏನು?
ಉತ್ತರ ಕನ್ನಡ, ಒಂದು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಇಲ್ಲದ ಒಂದು ಏಕೈಕ ಜಿಲ್ಲೆ. ಅತ್ಯಂತ ಸಂಪತ್ತು ಭರಿತವಾದಂತಹ ಪ್ರಾಕೃತಿಕ ಸಂಪನ್ಮೂಲಗಳನ್ನ ಹೊಂದಿರುವ ಉತ್ತರ ಕನ್ನಡದಲ್ಲಿ ಒಂದು ಆಸ್ಪತ್ರೆ ಇಲ್ಲ. ಈ ರೀತಿಯ ಪ್ರಾದೇಶಿಕ ಅಸಮತೋಲನವನ್ನು ಹೋಗಲಾಡಿಸುವಂತಹ ಒಂದು ಪ್ರಾಮಾಣಿಕವಾದಂತಹ ಅಭಿವೃದ್ಧಿ ಪ್ರಯತ್ನಗಳನ್ನು ಮಾಡದೆ ಇದ್ದರೆ, ಬಹಳ ದುರ್ಭರ ಸನ್ನಿವೇಶವನ್ನ ಕರ್ನಾಟಕ ಎದುರಿಸಬೇಕಾಗಿ ಬರಬಹುದು.
ನಗರವಾಸಿಗಳಲ್ಲಿ ಪದೇ ಪದೇ ಹೇಳಬೇಕಾದ ಒಂದು ಸಂಗತಿ ಇದೆ., ಒಂದು ಸಂಪರ್ಕ ಹತ್ತಿರದಲ್ಲಿದೆ. ನೀವು ಗ್ರಾಮೀಣ ಭಾಗದ ಅಬಲರ, ವಲ್ನರೇಬಲ್ ಆದವರ ಸಮಸ್ಯೆಗಳಿಗೆ ಧ್ವನಿ ಆಗಬಹುದು. ಕೇವಲ ನೀರು ಬಂದಿಲ್ಲ, ಕರೆಂಟ್ ಬಂದಿಲ್ಲ ಅಂತ ನಿಮ್ಮ ನಗರದ ಸಮಸ್ಯೆಗಳಿಂದ ಆಚೆಗೆ ಸ್ವಲ್ಪ… ನಮ್ಮ ನಮ್ಮ ಊರಿನ ಸಮಸ್ಯೆಗಳಿಗೆ ಕಿವಿ ಕೊಟ್ಟರೆ?
ನಮ್ಮ ಉಊರಿನವರು ಆಗಾಗ್ಗೆ ನನಗೆ ಊರಿನ ಸಮಸ್ಯೆ ಅಂಟಿಸುವುದಿದೆ. ವಿಧಾನ ಸೌಧಕ್ಕೆ ತಲುಪಿಸಲು.
‘ಅಲ್ಲ, ನನಗೆ ಯಾರೂ ಗೊತ್ತಿಲ್ಲ ಮಾರಾಯ.’ ಅಂತ ನಾನಂದರೆ ‘ನಿನಗೆ ಗೊತ್ತಿಲ್ಲದಿದ್ದರೂ ನಿನಗೆ ವಿಧಾನಸೌಧದ ದಾರಿ ಗೊತ್ತಲ್ಲ! ನಮಗೆ ವಿಧಾನಸೌಧದ ಒಳಗೆ ಯಾರನ್ನೂ ಗೊತ್ತಿಲ್ಲ. ಅಷ್ಟೇ ಅಲ್ಲ.. ವಿಧಾನ ಸೌಧಕ್ಕೆ ಹೋಗುವ ದಾರಿಯೂ ಗೊತ್ತಿಲ್ಲ! ನಮಗೆ ಅದಕ್ಕೂ ದುಡ್ಡು ಖರ್ಚು ಮಾಡಬೇಕು ಮಾರಾಯ’ ಅಂತಾರೆ. ಈಗಲೂ ಅವರು ಇಮೇಲ್ ಮಾಡಲ್ಲ. ಆ ಅರ್ಜಿಗಳನ್ನು ಪ್ರಿಂಟ್ ಮಾಡಿ ಪೋಸ್ಟ್ ಮಾಡ್ತಾರೆ ನನಗೆ.
‘ಇಮೇಲ್ ಬರುವುದಿಲ್ಲ ನಮಗೆ. ನಮಗೆ ಒಂದು ಒಂದೂವರೆ ಕಿಲೋಮೀಟರ್ ಮಾರ್ಗ ಸಂಪೂರ್ಣ ಹಾಳಾಗಿದೆ. ಅಲ್ಲಿ ಒಂದು ತೋಡು ದಾಟೋಕೆ ಬೇಕಾದ ಸಂಕ ಕೂಡ ಇಲ್ಲ…’
ನಾನು ಅದನ್ನು ನೋಡಿದಾಗೆಲ್ಲ, ಈ ಬಗ್ಗೆ ಒಂದು 10% ಆದ್ರೂ ನಾನು ಪೋಸ್ಟ್ಮ್ಯಾನ್ ಕೆಲಸ ಮಾಡದೆ ಇದ್ದರೆ, ತೀರಿಕೊಂಡಿರುವ ನಮ್ಮ ಅಪ್ಪ ನನ್ನ ಬಗ್ಗೆ ಬಹಳ ಅಸಹ್ಯ ಪಡಬಹುದು ಅಂತ ಅನ್ಸುತ್ತೆ. ಇದು ನಾವು ವಹಿಸಿಕೊಳ್ಳಬೇಕಾದಂತಹ ಬಹಳ ದೊಡ್ಡ ನೈತಿಕ ಜವಾಬ್ದಾರಿ.
ಕನ್ನಡ ತಾಯಿ ಭುವನೇಶ್ವರಿ ಅನಾವರಣ ಆದದ್ದನ್ನು ನೋಡಿದ ಮೊದಲ ತಲೆಮಾರು ನಾವು. ಆದರೆ ಆವಾಗಿದ್ದ ಸಮಸ್ಯೆಗಳು ಇನ್ನೂ ಉಳಕೊಂಡಿವೆ ಅಂತಂದ್ರೆ, ಅದಕ್ಕೆ ನೈತಿಕವಾಗಿಯೂ ನಾವು ಸ್ವಲ್ಪ ಮಟ್ಟಿಗೆ ಜವಾಬ್ದಾರರಾಗುತ್ತೇವೆ. ಆದ್ದರಿಂದ ಈ ನವೆಂಬರ್ 1 ಒಂದು ಹಬ್ಬ, ಸಂಭ್ರಮ, ನಿಜ. ಆದರೆ ಒಂದು ಆಳವಾದಂತಹ ಆತ್ಮನಿರೀಕ್ಷಣೆಗೂ ಕಾರಣ ಆಗಬೇಕು. ಈ ನಾಡು ಎಷ್ಟು ಸಮೃದ್ಧವಾಗಬಹುದಾಗಿತ್ತೋ ಅಷ್ಟು ಸಮೃದ್ಧವಾಗದೆ ಇರೋದಕ್ಕೆ ಕಾರಣ ಏನು ಅನ್ನೋದು ನಮ್ಮನ್ನು ಕದಡಬೇಕು
ಸೋ, ಎ ಡೇ ಆಫ್ ಸೆಲೆಬ್ರೇಷನ್, ಈಸ್ ಆಲ್ಸೋ ಎ ಡೇ ಆಫ್ ರಿಫ್ಲೆಕ್ಷನ್.
ಇದು ಯಾಕೆ ಹೇಳ್ತಾ ಇದ್ದೀನಿ ಅಂದ್ರೆ, ಈ ವರ್ಷ ಪ್ರಾಯಶಃ ಕಳೆದ ಎರಡು ದಶಕಗಳಲ್ಲಿ ಕಂಡು ಕೇಳರಿಯದಂತಹ ಬರಕ್ಕೆ ನಾವು ಸಾಕ್ಷಿಯಾಗಲಿದ್ದೇವೆ. ಅದಕ್ಕೆ ಎಲ್ ನಿನೋ ಅನ್ನುವ ಒಂದು ಎನ್ವಿರಾನ್ಮೆಂಟಲ್ ಫಿನಾಮಿನನ್ ಕಾರಣ ಆಗಿದೆ. ಅದನ್ನ ಈ ಬಾರಿ ಸೂಪರ್ ಎಲ್ ನಿನೋ ಅಂತ ಕರೀತಾರೆ. ಈ ಶತಮಾನದಲ್ಲಿ ಕಂಡು ಕೇಳರಿಯದಂತ ಬರಕ್ಕೆ ಈ ಎಲ್ ನಿನೋ ಕಾರಣವಾಗಬಹುದು. ರಾಜಸ್ಥಾನ ಬಿಟ್ಟರೆ ಭಾರತದಲ್ಲಿ ಅತ್ಯಂತ ಹೆಚ್ಚು ಬರ ಸಂಭಾವ್ಯತೆಯ ಅತ್ಯಂತ ಹೆಚ್ಚು ಪ್ರದೇಶ ಕರ್ನಾಟಕದಲ್ಲಿದೆ. ಇದರ ಭೀಕರ ಪರಿಣಾಮಗಳನ್ನು ಯುಗಾದಿ ವೇಳೆಗೆ ನಾವು ನೋಡಲಿದ್ದೇವೆ..
ಕನಿಷ್ಠ ಈ ರಾಜ್ಯ ಮುಂದಿನ ದಿನಗಳಲ್ಲಿ, ಅನುಭವಿಸಲಿರುವಂತಹ ಭೀಕರವಾದ ಒಂದು ಬರ ಇರಬಹುದು, ಅದು ತರಬಹುದಾದ ದಾರಿದ್ರ್ಯ ಇರಬಹುದು, ದುಃಖ ಇರಬಹುದು… ಅದಕ್ಕೆ ನಾವು ಹೇಗೆ ಸ್ಪಂದಿಸಬಹುದು ಎಂಬುದು ನಮ್ಮ ಕನ್ನಡತನವನ್ನು ನಿರ್ಧರಿಸುತ್ತೆ. ಹಾಡು, ಹಬ್ಬಗಳಲ್ಲ.
ಕೆ ಪಿ ಸುರೇಶ
ಹಿರಿಯ ಲೇಖಕರು, ಚಿಂತಕರು
ಇದನ್ನೂ ಓದಿ- ಕೇಂದ್ರದಲ್ಲಿ ಖಾತೆ, ರಾಜ್ಯದಲ್ಲಿ ಕ್ಯಾತೆ – ಎಚ್ಡಿಕೆ ಸಮರ


