ಮುಂಬೈ : ನಟ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಆಯ್ದ ಚಿತ್ರಮಂದಿರಗಳಲ್ಲಿ ನಿನ್ನೆ ರಾತ್ರಿ ಪೇಯ್ಡ್ ಪ್ರಿವ್ಯೂ ಪ್ರದರ್ಶನಗಳು ನಡೆದಿದ್ದು, ಇಂದು ಹಲವು ದೇಶಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಕಂಡಿದೆ.
ವರದಿಗಳ ಪ್ರಕಾರ, ಸೋನಿ ಪಿಕ್ಚರ್ಸ್ ಈ ಸಿನಿಮಾವನ್ನು 100ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು 50 ಸಾವಿರ ಚಿತ್ರಮಂದಿರಗಳ ಪರದೆಗಳಲ್ಲಿ ವಿತರಿಸುತ್ತಿದೆ. ಭಾರತದಲ್ಲಿ ಹೆಚ್ಚುವರಿಯಾಗಿ 9 ಸಾವಿರ ಪರದೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ ಎನ್ನಲಾಗಿದೆ. ಭಾರತದಲ್ಲಿ ಅಧಿಕೃತ ಬಿಡುಗಡೆಗೂ ಮುನ್ನವೇ ಮುಂಗಡ ಟಿಕೆಟ್ ಬುಕ್ಕಿಂಗ್ನಲ್ಲಿ ಸಿನಿಮಾ 130 ಕೋಟಿ ರೂಪಾಯಿಗೂ ಅಧಿಕ ಮೊತ್ತ ಗಳಿಸಿದೆ ಎಂದು ವರದಿಯಾಗಿದೆ.
ಚಿತ್ರದ ಅದ್ಧೂರಿ ದೃಶ್ಯ ವೈಭವಕ್ಕೆ ಹಲವು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇಂಗ್ಲಿಷ್ ಡಬ್ಬಿಂಗ್ ಆವೃತ್ತಿ ಸೇರಿದಂತೆ ಕೆಲವು ವಿಚಾರಗಳಲ್ಲಿ ಸಣ್ಣಪುಟ್ಟ ನ್ಯೂನತೆಗಳಿವೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿದೆ. ಎರಡೂ ಭಾಗಗಳ ಒಟ್ಟು ಬಜೆಟ್ ಸುಮಾರು 4 ಸಾವಿರ ಕೋಟಿ ರೂಪಾಯಿ ಎನ್ನಲಾಗಿದೆ. ಎರಡನೇ ಭಾಗ ಮುಂದಿನ ವರ್ಷದ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ ನಟಿಸಿದ್ದರೆ, ‘ಕೆಜಿಎಫ್’ ಖ್ಯಾತಿಯ ಯಶ್ ರಾವಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಕುಲ್ ಪ್ರೀತ್ ಸಿಂಗ್ ಶೂರ್ಪನಖಿಯಾಗಿ, ‘ಪಂಚಾಯತ್’ ಖ್ಯಾತಿಯ ಫೈಸಲ್ ಮಲಿಕ್ ಕುಂಭಕರ್ಣನಾಗಿ ಅಭಿನಯಿಸಿದ್ದಾರೆ. ಅರುಣ್ ಗೋವಿಲ್, ಲಾರಾ ದತ್ತಾ ಮತ್ತು ಸನ್ನಿ ಡಿಯೋಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ವಿದೇಶಿ ಮುಂಗಡ ಬುಕ್ಕಿಂಗ್ನಲ್ಲೂ ರಾಮಾಯಣ ಹವಾ
ಚಿತ್ರ ವಹಿವಾಟು ವಿಶ್ಲೇಷಣಾ ಸಂಸ್ಥೆ ಸ್ಯಾಕ್ನಿಲ್ಕ್ ವರದಿ ಪ್ರಕಾರ, ‘ರಾಮಾಯಣ: ಪಾರ್ಟ್ 1’ ಚಿತ್ರದ ವಿದೇಶಿ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಕ ವಾರಾಂತ್ಯಕ್ಕೆ ಸುಮಾರು 3 ಮಿಲಿಯನ್ ಡಾಲರ್ ಸಮೀಪಿಸಿದೆ. ಸದ್ಯದ ಬುಕ್ಕಿಂಗ್ ಮೊತ್ತ 2.85 ಮಿಲಿಯನ್ ಡಾಲರ್ ಆಗಿದ್ದು, ಇದರಲ್ಲಿ ಉತ್ತರ ಅಮೆರಿಕಾದ ಪಾಲು 2.15 ಮಿಲಿಯನ್ ಡಾಲರ್ ಎನ್ನಲಾಗಿದೆ.
ಭಾರತೀಯ ಸಿನಿಮಾಗಳ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಚಿತ್ರದ ಮುಂಗಡ ಬುಕ್ಕಿಂಗ್ ಇನ್ನೂ ಆರಂಭವಾಗಿಲ್ಲ ಎಂದು ವರದಿಯಾಗಿದೆ. ಈ ಹಿಂದೆ ‘ಧುರಂಧರ್’ ಸಿನಿಮಾ ಮಧ್ಯಪ್ರಾಚ್ಯದಲ್ಲಿ ನಿಷೇಧಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ, ಆ ಮಾರುಕಟ್ಟೆಯಲ್ಲಿ ‘ರಾಮಾಯಣ’ ಚಿತ್ರಕ್ಕೆ ಅನುಕೂಲವಾಗಬಹುದು ಎಂಬ ನಿರೀಕ್ಷೆ ಇದೆ. ಈ ಮೂಲಕ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದ ಒಟ್ಟು ಗಳಿಕೆಯನ್ನು ರಾಮಾಯಣ ಮೀರಿಸಲಿದೆಯೇ ಎಂಬ ಕುತೂಹಲವೂ ಮೂಡಿದೆ.
ಕಳೆದ ವಾರ ಲಾಸ್ ಏಂಜಲೀಸ್ನ ಅಕಾಡೆಮಿ ಥಿಯೇಟರ್ನಲ್ಲಿ ಚಿತ್ರದ ವಿಶೇಷ ಪ್ರದರ್ಶನ ನಡೆದಿತ್ತು. ಮೂರು ಗಂಟೆ 15 ನಿಮಿಷಗಳಿಗೂ ಹೆಚ್ಚು ಅವಧಿಯ ಈ ಸಿನಿಮಾಗೆ ಯು (U) ಪ್ರಮಾಣಪತ್ರ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ವೀಕ್ಷಣೆಗೆ ಅವಕಾಶವಿರುವ ‘ಧುರಂಧರ್’ ಚಿತ್ರದ ಎ (A) ಪ್ರಮಾಣಪತ್ರಕ್ಕೆ ಹೋಲಿಸಿದರೆ, ಕುಟುಂಬ ಸಮೇತ ವೀಕ್ಷಿಸಲು ಅವಕಾಶ ನೀಡುವ ಯು ಪ್ರಮಾಣಪತ್ರವೂ ‘ರಾಮಾಯಣ’ಕ್ಕೆ ಅನುಕೂಲವಾಗಬಹುದು ಎನ್ನಲಾಗಿದೆ.
ಬಿಡುಗಡೆಯ ಮೊದಲ ದಿನವೇ ವಿಶ್ವಾದ್ಯಂತ 180ರಿಂದ 200 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆಯನ್ನು ಚಿತ್ರತಂಡ ಮತ್ತು ಸಿನಿ ವಹಿವಾಟು ವಲಯ ಹೊಂದಿದೆ. ದೀಪಾವಳಿ ರಜೆಯೂ ಚಿತ್ರಕ್ಕೆ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ಸಾಧ್ಯತೆಯಿದೆ. ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾ ಯೋಜನೆಗಳಲ್ಲಿ ಒಂದೆಂದು ಬಿಂಬಿತವಾಗಿರುವ ‘ರಾಮಾಯಣ’ ಪ್ರೇಕ್ಷಕರ ನಿರೀಕ್ಷೆಗಳನ್ನು ತಲುಪುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಮೊದಲ ದಿನದ ಬಾಕ್ಸ್ ಆಫೀಸ್: ಬೆಳಗ್ಗೆ 9 ಗಂಟೆಗೆ ₹9.72 ಕೋಟಿ ಗಳಿಕೆ
ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ: ಪಾರ್ಟ್ 1’ ಸಿನಿಮಾ ಮೊದಲ ದಿನದ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ.
ವ್ಯಾಪಾರ ವಿಶ್ಲೇಷಣಾ ತಾಣ ಸ್ಯಾಕ್ನಿಲ್ಕ್ ಪ್ರಕಾರ, ಇಂದು ಬೆಳಗ್ಗೆ 9 ಗಂಟೆಯ ವೇಳೆಗೆ ಭಾರತದಲ್ಲಿ ಸಿನಿಮಾ 5,150 ಪ್ರದರ್ಶನಗಳ ಮೂಲಕ 9.72 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ.
ಭಾಷಾವಾರು ಗಳಿಕೆಯ ವಿವರ ಹೀಗಿದೆ:
- ಹಿಂದಿ: 4,168 ಪ್ರದರ್ಶನಗಳ ಮೂಲಕ ₹6.80 ಕೋಟಿ
- ಕನ್ನಡ: 357 ಪ್ರದರ್ಶನಗಳ ಮೂಲಕ ₹1.63 ಕೋಟಿ
- ತೆಲುಗು: 355 ಪ್ರದರ್ಶನಗಳ ಮೂಲಕ ₹87 ಲಕ್ಷ
- ತಮಿಳು: 182 ಪ್ರದರ್ಶನಗಳ ಮೂಲಕ ₹32 ಲಕ್ಷ
- ಮಲಯಾಳಂ: 88 ಪ್ರದರ್ಶನಗಳ ಮೂಲಕ ₹10 ಲಕ್ಷ
ಇದರೊಂದಿಗೆ ಚಿತ್ರದ ಭಾರತದ ಒಟ್ಟು ಗ್ರಾಸ್ ಗಳಿಕೆ 11.47 ಕೋಟಿ ರೂಪಾಯಿಗೆ ತಲುಪಿದ್ದರೆ, ನಿವ್ವಳ ಗಳಿಕೆ 9.72 ಕೋಟಿ ರೂಪಾಯಿ ಆಗಿದೆ.
ರಾವಣನಾಗಿ ಯಶ್ ಅಭಿನಯಕ್ಕೆ 5ರಲ್ಲಿ 5 ಅಂಕ!
‘ರಾಮಾಯಣ: ಪಾರ್ಟ್ 1’ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ನೀಡಿರುವ ಅಭಿನಯಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯಶ್ ಅವರ ತೆರೆಯ ಮೇಲಿನ ಪ್ರಭಾವ, ಪಾತ್ರದ ತೀವ್ರತೆ, ಸಂಭಾಷಣೆ ಹೇಳುವ ಶೈಲಿ ಮತ್ತು ಮುಖಭಾವಗಳನ್ನು ಶ್ಲಾಘಿಸಿರುವ ಅವರು, ರಾವಣನ ಪಾತ್ರದಲ್ಲಿ ಯಶ್ ಅದ್ಭುತವಾಗಿ ಮಿಂಚಿದ್ದಾರೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಚಿತ್ರ ವೀಕ್ಷಕರು, “ರಾಮಾಯಣಕ್ಕೆ 5/5. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಪ್ಪಟ ಬೆಂಕಿ! ಅವರ ಗಂಭೀರ ನಿಲುವು, ಅದ್ಭುತ ವ್ಯಕ್ತಿತ್ವ, ಪಾತ್ರದ ತೀವ್ರತೆ, ಶಕ್ತಿಯುತ ಸಂಭಾಷಣೆ ಮತ್ತು ವಿದ್ಯುತ್ ಸಂಚಲನ ಮೂಡಿಸುವ ಮುಖಭಾವಗಳು ಅದ್ಭುತವಾಗಿವೆ. ಯಶ್ ಕಾಣಿಸಿಕೊಳ್ಳುವ ಪ್ರತಿಯೊಂದು ದೃಶ್ಯವೂ ಪ್ರೇಕ್ಷಕರಿಗೆ ಹಬ್ಬ. ಅವರು ಕೇವಲ ರಾವಣನ ಪಾತ್ರ ನಿರ್ವಹಿಸಿಲ್ಲ, ಆ ಪಾತ್ರವನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಇದು ದೀರ್ಘಕಾಲ ನೆನಪಿನಲ್ಲಿ ಉಳಿಯುವಂತಹ ಅಭಿನಯ!” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

