ಮಂಗಳೂರಿನ “ಮುಂಗಾರು” ಪತ್ರಿಕೆಯ ಧೀಮಂತ ಸಂಪಾದಕರಾಗಿದ್ದ, ಪ್ರಸಿದ್ಧ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಯವರ ಮಗ ಮಧುಕರ್ ಶೆಟ್ಟಿಯವರು ಖಡಕ್ ಪೊಲೀಸ್ ಅಧಿಕಾರಿಯಾಗಿದ್ದವರು. ದಿಟ್ಟ ನಡೆ, ನೇರ ನುಡಿ ಹಾಗೂ ಪ್ರಾಮಾಣಿಕತೆಗೆ ಹೆಸರಾದವರು. ಅಲ್ಪಾಯುವಾದ ಅವರು ಇದ್ದಷ್ಟೇ ವರ್ಷಗಳ ಕಾಲ ಜನಸೇವೆಯಲ್ಲಿ ಸಾರ್ಥಕ ಬದುಕನ್ನು ಕಂಡುಕೊಂಡು ಮಾದರಿಯಾದವರು.
ಇಂತಹ ದಕ್ಷ ಆರಕ್ಷಕ ಅಧಿಕಾರಿಯ ಅಲಿಖಿತ ಆತ್ಮಕಥೆಯ ಕೆಲವು ಪ್ರಮುಖ ಭಾಗಗಳನ್ನು ರಂಗದಂಗಳದಲ್ಲಿ ನಾಟಕವಾಗಿ ಯುವ ನಿರ್ದೇಶಕ ಸಿದ್ದರಾಂ ಕೊಪ್ಪರ್ ರವರು ಬಿಡಿ ಬಿಡಿ ದೃಶ್ಯಗಳಾಗಿ ಕಟ್ಟಿ ಕೊಟ್ಟಿದ್ದಾರೆ. ಕಾರ್ಮಿಕ ರಂಗಭೂಮಿ ನಿಂತೇ ಹೋಯ್ತಲ್ಲಾ ಎನ್ನುವ ಆತಂಕದ ಕಾಲಘಟ್ಟದಲ್ಲಿ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕ ರಂಗ ಚಟುವಟಿಕೆಗಳನ್ನು ಜೀವಂತವಾಗಿಟ್ಟವರು ಸಿದ್ದರಾಂ ಕೊಪ್ಪರ್. ಸ್ವತಃ ಬಿಎಂಟಿಸಿ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಕಾಯಕ ಮಾಡುವ ಸಿದ್ದರಾಮ ಯಾವಾಗಲೂ ವೈಚಾರಿಕ ಪ್ರಜ್ಞೆಯ ನಾಟಕಗಳನ್ನು ನಿರ್ದೇಶಿಸುತ್ತಾ ಬಂದವರು. ರಂಗದಿಗ್ಗಜ ಸಿಜಿಕೆ ಯವರ ಸ್ಪೂರ್ತಿಯ ಮುಂದಿನ ತಲೆಮಾರಿನವರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಚಾಲಕರು, ನಿರ್ವಾಹಕರು ಹಾಗೂ ಇತರೆ ನೌಕರರನ್ನು ಸೇರಿಸಿಕೊಂಡು “ಖಾಕಿಯೊಳಗೊಬ್ಬ ಸಂತ” ನಾಟಕವನ್ನು ನಿರ್ದೇಶಿಸುವ ಮೂಲಕ ದಿಟ್ಟ ಪೊಲೀಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿಯವರ ಸರಳ ಬದುಕು ಹಾಗೂ ವಿರಳ ಸಾಧನೆಯನ್ನು ನೋಡುಗರಿಗೆ ಮನಮುಟ್ಟುವಂತೆ ನಾಟಕ ರೂಪದಲ್ಲಿ ಕಟ್ಟಿ ಕೊಟ್ಟಿದ್ದು, ಮೇ 14 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ‘ನಯನ ರಂಗಮಂದಿರ’ದಲ್ಲಿ ಅದು ಪ್ರಥಮ ಪ್ರಯೋಗವಾಗಿ ಪ್ರದರ್ಶನಗೊಂಡಿತು.
“ಕರ್ನಾಟಕದ ರಿಯಲ್ ಸಿಂಗಂ” ಎಂದೇ ಜನಪ್ರಿಯರಾಗಿರುವ ಡಾ.ಕೆ.ಮಧುಕರ್ ಶೆಟ್ಟಿ ಯವರು ಕರ್ನಾಟಕ ಕೇಡರಿನ 1999 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದವರು. ಪ್ರತಿಷ್ಠಿತ ದೆಹಲಿಯ ಜವಾಹರಲಾಲ್ ನ್ಯಾಷನಲ್ ಯುನಿವರ್ಸಿಟಿಯಿಂದ ( JNU) ಸಮಾಜಶಾಸ್ತ್ರದಲ್ಲಿ ಎಂಎ ಮಾಡಿ ಅಮೇರಿಕದ ಅಲ್ಬನಿ ಯುನಿವರ್ಸಿಟಿಯಿಂದ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ನಲ್ಲಿ ಪಿಹೆಚ್ಡಿ ಮಾಡಿದವರು.

ಡಾ.ಮಧುಕರ್ ಶೆಟ್ಟಿಯವರು ಕರ್ನಾಟಕ ಲೋಕಾಯುಕ್ತ ಎಸ್ಪಿ ಆಗಿದ್ದಾಗ ಬಳ್ಳಾರಿಯ ಅಕ್ರಮ ಕಬ್ಬಿಣ ಅದಿರು ಗಣಿ ಹಗರಣ ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಿಕ್ಕಮಗಳೂರಿನಲ್ಲಿ 2005-06 ರಲ್ಲಿ ಎಸ್ಪಿ ಆಗಿದ್ದಾಗ ಭೂಕಬಳಿಕೆ ತಡೆಗಟ್ಟಿ ಭೂ ಒತ್ತುವರಿ ತೆರವುಗೊಳಿಸಿ ಆಕ್ರಮಿತ ಸರಕಾರಿ ಭೂಮಿಯನ್ನು ಬಡವರಿಗೆ ಹಂಚಿದ್ದರು. ವೀರಪ್ಪನ್ ವಿರುದ್ಧ ಕಾರ್ಯಾಚರಣೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ವಿಶೇಷ ಟಾಸ್ಕ್ ಫೋರ್ಸ್ ನಲ್ಲಿ ಭಾಗವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಎಸ್ಪಿ ಯಾಗಿ, ಚಾಮರಾಜನಗರ ಜಿಲ್ಲೆಯ ಎಸ್ಪಿ ಆಗಿ, ಟ್ರಾಫಿಕ್ ಡಿಸಿಪಿ ಆಗಿ, ಆಂಟಿ ನಕ್ಸಲ್ ಫೋರ್ಸ್ ಇನ್ ಚಾರ್ಜ್ ಆಗಿ ಖಡಕ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು. ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಕರಿಕಲ್ಲು ಮರಳು ಸಾಗಾಣಿಕೆ ತಡೆದಿದ್ದರು. ಲೋಕಾಯುಕ್ತ ಎಸ್ಪಿ ಆಗಿದ್ದಾಗ ಇಲಾಖೆಯೊಳಗಿನ ಭ್ರಷ್ಟಾಚಾರಕ್ಕೆ ವಿರೋಧ ವ್ಯಕ್ತಪಡಿಸಿ ಸಂಚಲನ ಸೃಷ್ಟಿಸಿದ್ದರು. ಭೂಹಗರಣಗಳಲ್ಲಿ ಸಚಿವರನ್ನು ಬಂಧಿಸುವ ಧೈರ್ಯ ಪ್ರದರ್ಶಿಸಿದ್ದರು. ಕೊನೆಗೆ ಕೇಂದ್ರ ಸರಕಾರದ ಸೇವೆಯಲ್ಲಿ ಹೈದರಾಬಾದ್ ನಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿದ್ದಾಗ 47 ನೇ ಕಿರಿಯ ವಯಸ್ಸಿನಲ್ಲಿ 2018 ಡಿಸೆಂಬರ್ 28 ರಂದು H1N1 ಹಾಗೂ ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಅಕಾಲಿಕ ಮರಣಕ್ಕೆ ಈಡಾದರು. ಆದರೂ ಅವರ ಮರಣದ ಬಗ್ಗೆ ಸಂದೇಹ ವ್ಯಕ್ತವಾಗಿದ್ದರಿಂದ ಡಾ.ದೇವಿಶೆಟ್ಟಿಯವರ ನೇತೃತ್ವದ ವೈದ್ಯಕೀಯ ತಜ್ಞರ ಸಮಿತಿ ತನಿಖೆ ನಡೆಸಿತು.
ಡಾ.ಮಧುಕರ್ ಶೆಟ್ಟಿಯವರ ಸಾಧನೆಗಳು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಆದರ್ಶವಾಗಿ ಉಳಿದಿವೆ. ಪ್ರತಿ ವರ್ಷ ಅವರ ಜಯಂತಿ ಅಂಗವಾಗಿ ವಿವಿಧ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 2021 ರಲ್ಲಿ SVPNPA ಅಕಾಡೆಮಿಯ ಮುಖ್ಯ ಸಭಾಂಗಣಕ್ಕೆ ಮಧುಕರ್ ಶೆಟ್ಟಿಯವರ ಹೆಸರನ್ನಿಟ್ಟು ಗೌರವಿಸಲಾಗಿದೆ.
ನೇರ ನುಡಿ ಹಾಗೂ ದಿಟ್ಟ ನಡೆಗಾಗಿ ಹೆಸರುವಾಸಿಯಾಗಿದ್ದ ಡಾ.ಮಧುಕರ್ ಶೆಟ್ಟಿಯವರ ಸರಳ ಜೀವನ ಹಾಗೂ ಸಾರ್ಥಕ ಸಾಧನೆಗಳನ್ನು “ಖಾಕಿಯೊಳಗಿನ ಸಂತ” ನಾಟಕದಲ್ಲಿ ಅನಾವರಣಗೊಳಿಸಲಾಗಿದೆ.
ಈ ಬಯೋಪಿಕ್ ಮಾದರಿಯ ನಾಟಕ ಇನ್ನೂ ಕಟ್ಟುವ ಹಂತದಲ್ಲಿದೆ. ಮುಂದಿನ ಪ್ರದರ್ಶನಗಳಲ್ಲಿ ಬದಲಾವಣೆ ಆಗಬಹುದಾದ ಚಿಕ್ಕಪುಟ್ಟ ನ್ಯೂನತೆಗಳೂ ಇವೆ. ಮೊದಲ ಪ್ರದರ್ಶನವಾಗಿದ್ದರಿಂದ ಒಂದು ಗ್ರ್ಯಾಂಡ್ ರಿಹರ್ಸಲ್ ಎನ್ನುವಂತಹ ಪ್ರಯೋಗ ಇದಾಗಿದೆ. ಬ್ಲಾಕಿಂಗ್, ಮೂವ್ಮೆಂಟ್, ಎಂಟ್ರಿ, ಎಕ್ಸಿಟ್ ಗಳ ಬಗ್ಗೆ ನಿರ್ದೇಶಕರು ಇನ್ನಷ್ಟು ಗಮನ ಹರಿಸಬೇಕಿದೆ. ವೇದಿಕೆಯ ಮಧ್ಯದ ಬಲಭಾಗದಲ್ಲೇ ಬಹುತೇಕ ದೃಶ್ಯಗಳು ಸೀಮಿತವಾಗಿದ್ದು ಸ್ಟೇಜ್ ಬ್ಯಾಲನ್ಸ್ ಮಾಡಬಹುದಾಗಿದೆ. ಪೊಲೀಸ್ ಉನ್ನತಾಧಿಕಾರಿಯಾದವರ ಸರಳ ಬದುಕನ್ನು ತೋರಿಸುವ ಧಾವಂತದಲ್ಲಿ ಮನೆ ಸೆಟ್ ನಲ್ಲಿ ಅಶಿಸ್ತಿನ ವಾತಾವರಣ ನಿರ್ಮಿಸಿದ್ದು ಪ್ರಶ್ನಾರ್ಹವಾಗಿದೆ. ಮಧುಕರ್ ಶೆಟ್ಟಿಯವರು ತಮ್ಮ ಅಗೋಚರ ತಂದೆ ಹಾಗೂ ವೈಚಾರಿಕ ಗುರುವಿನ (ಹೆಚ್ ಎನ್) ಜೊತೆ ಸಂಭಾಷಣೆ ಮಾಡುವುದು ಸೊಗಸಾದ ರೂಪಕವಾಗಿ ಮೂಡಿಬಂದಿದೆ. ಆ ಅಗೋಚರ ಪಾತ್ರಗಳನ್ನು ಪರದೆಯ ಹಿಂದೆ ಗೋಚರವಾಗುವಂತೆ ಮಾಡಿದ್ದರೆ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು. ದೃಶ್ಯಗಳ ನಡುವಿನ ಬ್ಲಾಕೌಟ್ ಹಾಗೂ ಸೆಟ್ ಬದಲಾವಣೆಯ ಅವಧಿ ಹೆಚ್ಚಾಗಿದ್ದು ಇನ್ನೂ ವೇಗವನ್ನು ಅಳವಡಿಸಿಕೊಳ್ಳಬೇಕಿದೆ.
ಈ ನಾಟಕದ ಪಾತ್ರಧಾರಿಗಳು ಅನುಭವೀ ನಟ ನಟಿಯರಲ್ಲದಿದ್ದರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಮಧುಕರ್ ಶೆಟ್ಟಿಯವರನ್ನು ಸ್ವಕಾಯ ಪ್ರವೇಶ ಮಾಡಿಕೊಂಡಂತೆ ನಟಿಸಿದ ರಂಗಸ್ವಾಮಿಯವರ ಅಭಿನಯ ಗಮನಾರ್ಹವಾಗಿದೆ. ಒಬ್ಬರೇ ವ್ಯಕ್ತಿ ಎರಡು ಮೂರು ಪಾತ್ರಗಳನ್ನು ಮಾಡುವಾಗ ಪಾತ್ರೋಚಿತವಾಗಿ ಲುಕ್ ನಲ್ಲಿ ಒಂದಿಷ್ಟು ಬದಲಾವಣೆ ಮಾಡಿದ್ದರೆ ಚೆನ್ನಾಗಿತ್ತು. ಹೈದರಾಬಾದಿನ ಆಸ್ಪತ್ರೆಯ ಮುಂದೆ ಆತಂಕದಿಂದ ಕಾಯುತ್ತಿದ್ದ ಮಲೆನಾಡಿನವರ ಗುಂಪಿನಲ್ಲಿ ಕೆಲವರು ಅರೆಬೆತ್ತಲಾಗಿದ್ದು ಯಾಕೋ ಸಮಂಜಸ ಎನ್ನಿಸುವಂತಿಲ್ಲ.

ದೇಸಿ ಮೋಹನ್ ರವರ ಹಿನ್ನೆಲೆ ಸಂಗೀತ ನಾಟಕಕ್ಕೆ ಅಗತ್ಯವಾದ ಮೂಡ್ ಒದಗಿಸಿದೆ. ಅಂತ್ಯದಲ್ಲಿ ಸಂವಿಧಾನದ ಪೀಠಿಕೆಯ ಹಾಡನ್ನು ಅಳವಡಿಸಿದ್ದು ನಾಟಕಕ್ಕೆ ಪೂರಕವಲ್ಲದಿದ್ದರೂ ಪ್ರೇಕ್ಷಕರ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಸಹಕಾರಿಯಾಗಿದೆ.
ಒಟ್ಟಿನ ಮೇಲೆ ಸಾಧಕರೊಬ್ಬರ ಕುರಿತಾದ ಈ ನಾಟಕದ ಆಕೃತಿಯಲ್ಲಿ ಒಂಚೂರು ಲೋಪಗಳಿದ್ದರೂ ಆಶಯವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸ್ ಎಂದರೆ ಭ್ರಷ್ಟಾಚಾರದ ಗಂಗೋತ್ರಿ ಎನ್ನುವ ನಕಾರಾತ್ಮಕ ಭಾವನೆ ಜನರಲ್ಲಿದೆ. ಮಧುಕರ್ ಶೆಟ್ಟಿಯವರಂತಹ ಪ್ರಾಮಾಣಿಕ ದಿಟ್ಟ ದಾರ್ಶನಿಕ ಅಧಿಕಾರಿಗಳೂ ಈ ಇಲಾಖೆಯಲ್ಲಿ ಇದ್ದಾರೆಂಬುದನ್ನು ಈ ನಾಟಕ ಸಾಬೀತು ಪಡಿಸುತ್ತದೆ. ಪೊಲೀಸರಿಗೆ ಪ್ರೇರಣೆಯನ್ನು ಕೊಡುವಂತಹ, ಜನರಲ್ಲಿ ಪೊಲೀಸ್ ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತಹ “ಖಾಕಿಯೊಳಗೊಬ್ಬ ಸಂತ” ನಾಟಕವು ರಾಜ್ಯಾದ್ಯಂತ ಪೊಲೀಸ್ ಕ್ವಾರ್ಟರ್ಸ್ ಗಳಲ್ಲಿ ಹಾಗೂ ಕಾರಾಗೃಹಗಳಲ್ಲಿ ಪ್ರದರ್ಶನವಾಗಬೇಕಿದೆ. ಮಧುಕರ್ ಶೆಟ್ಟಿಯಂತಹ ದಕ್ಷ ಅಧಿಕಾರಿ ಇದ್ದರು ಎನ್ನುವುದು ಇಂದಿನ ತಲೆಮಾರಿನವರಿಗೆ ಗೊತ್ತಾಗಬೇಕಿದೆ. ಬಿಎಂಟಿಸಿ ಕಾರ್ಮಿಕ ಕಲಾವಿದರ ಶ್ರಮ ಸಾರ್ಥಕವಾಗಬೇಕಿದೆ. ಈ ನಾಟಕ ನಿರ್ಮಿತಿಗೆ ಕಾರಣವಾಗಿರುವ ಬಿಎಂಟಿಸಿ ಆಯುಕ್ತರಾದ ಮಾನ್ಯ ಅಬ್ದುಲ್ ಅಹದ್ (IPS) ಇವರಿಗೆ ಅಭಿನಂದನೆ ಹೇಳಲೇಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿಗಳು
ಇದನ್ನೂ ಓದಿ- ಪ್ರಭುತ್ವದ ಆರ್ಥಿಕ ವೈಫಲ್ಯದ ಹೊಣೆ; ಪ್ರಜೆಗಳ ಬದುಕಿನ ಮೇಲೆ ಹೊರೆ


