ವ್ಯಕ್ತಿ : ಅಯ್ಯೋ ಕಳ್ಳತನ, ಲೂಟಿ, ದರೋಡೆ, ಡಕಾಯತಿ..
ಅಂಧಭಕ್ತ : ಎಲ್ಲಿ ಎಲ್ಲಿ? ಕಳ್ಳರನ್ನ ತೋರಿಸು ಹಿಡಿದು ಹೊಡೆದು ಅಪ್ಪಚ್ಚಿ ಮಾಡ್ಬಿಡ್ತೀನಿ.
ವ್ಯಕ್ತಿ : ಅಯ್ಯೋ ದೇವಾಲಯದಲ್ಲಿ ದೇಣಿಗೆ ಕಳ್ಳತನ, ಹುಂಡಿ ಲೂಟಿ, ಬೆಳ್ಳಿ ಬಂಗಾರ ದರೋಡೆ..
ಅಂಧಭಕ್ತ : ಹೌದಾ.. ಇದು ಹಿಂದೂದ್ರೋಹಿಗಳ ದುಷ್ಕೃತ್ಯ. ದೇವರ ಹುಂಡಿಗೆ ಕೈ ಹಾಕಿದವರು ಯಾರು ಹೇಳು, ಕೈ ಕಟ್ ಮಾಡಿಬಿಡ್ತೀನಿ.
ವ್ಯಕ್ತಿ : ಅಲ್ಲಿ ಅಯೋಧ್ಯೆಯಲ್ಲಿ, ರಾಮಮಂದಿರದಲ್ಲಿ ಹುಂಡಿ ಹಣಕ್ಕೆ ಕನ್ನ, ಕಾಣಿಕೆಗಳೆಲ್ಲಾ ನಾಪತ್ತೆ.
ಅಂಧಭಕ್ತ : ಅಯ್ಯೋ.. ಯಾರು ಮಾಡಿದ್ದು.. ತಾಲಿಬಾನಿಗಳಾ, ಆತಂಕವಾದಿಗಳಾ ಇಲ್ಲಾ ನಕ್ಸಲರಾ?
ವ್ಯಕ್ತಿ : ಮೋದಿ… ಚೌಕೀದಾರ ಮೋದಿ.
ಅಂಧಭಕ್ತ : ಏ ಏನಂತಾ ಹೇಳ್ತಿ.. ನೋ ಚಾನ್ಸೇ ಇಲ್ಲಾ.
ವ್ಯಕ್ತಿ : ಹಾಗಾದ್ರೆ ಈಗ ಹೇಳು ರಾಮಮಂದಿರಕ್ಕೆ ಭೂಮಿ ಪೂಜೆ ಮಾಡಿದ್ದು ಯಾರು?
ಅಂಧಭಕ್ತ : ಪ್ರಧಾನಿ ನರೇಂದ್ರ ಮೋದಿ.
ವ್ಯಕ್ತಿ : ರಾಮಮಂದಿರದ ಉದ್ಘಾಟನೆ ಮಾಡಿದ್ದು ಯಾರು?
ಅಂಧಭಕ್ತ : ವಿಶ್ವಗುರು ನರೇಂದ್ರ ಮೋದಿ
ವ್ಯಕ್ತಿ : ಬಾಲರಾಮನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದು ಯಾರು? ದ್ವಜಾರೋಹಣ ನೆರವೇರಿಸಿದ್ದು ಯಾರು?
ಅಂಧಭಕ್ತ : ವಿಶ್ವಮಾನ್ಯ ನರೇಂದ್ರ ಮೋದಿ.
ವ್ಯಕ್ತಿ : ರಾಮಮಂದಿರದ ಟ್ರಸ್ಟ್ ರಚಿಸಿದ್ದು ಯಾರು?
ಅಂಧಭಕ್ತ : ಮಹಾಮಹಿಮ ನರೇಂದ್ರ ಮೋದಿ.
ವ್ಯಕ್ತಿ : ಆ ಟ್ರಸ್ಟಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು ಯಾರು?
ಅಂಧಭಕ್ತ : ಮತ್ಯಾರು, ನಮ್ಮ ಅವತಾರ ಪುರುಷ ನರೇಂದ್ರ ಮೋದೀಜಿ.
ವ್ಯಕ್ತಿ : ರಾಮಮಂದಿರದ ವ್ಯವಹಾರವನ್ನು ಮಾಹಿತಿ ಹಕ್ಕಿನಿಂದ ಹೊರಗೆ ಇಟ್ಟವರು ಯಾರು?
ಅಂಧಭಕ್ತ : ಇನ್ಯಾರು.. ನಮ್ಮ ದೇವತಾ ಪುರುಷ ನರೇಂದ್ರ ಮೋದೀಜಿ.
ವ್ಯಕ್ತಿ : ಅದೇ ಟ್ರಸ್ಟಿನವರ ಸಹಕಾರದಿಂದಲೇ ಹುಂಡಿ ಕಳ್ಳತನ ಆಗಿದೆ, ಕಾಣಿಕೆ ಕಾಣೆಯಾಗಿವೆ. ಟ್ರಸ್ಟಿಗಳಿಬ್ಬರು ರಾಜೀನಾಮೆ ಕೊಟ್ಟಿದ್ದಾರೆ.. ಇದೆಲ್ಲದಕ್ಕೂ ಮೂಲ ಕಾರಣ ಯಾರು?
ಅಂಧಭಕ್ತ : (ತಡವರಿಸುತ್ತಾ) ಅದು.. ಅದಕ್ಕೆಲ್ಲಾ ಕಾರಣ ನೆಹರು.
ವ್ಯಕ್ತಿ : ಯೋ.. ಯಾವತ್ತೋ ತೀರಿಕೊಂಡ ನೆಹುರುರವರಿಗೂ ಈಗ ಆದ ಹುಂಡಿ ದರೋಡೆಗೂ ಏನಯ್ಯಾ ಸಂಬಂಧ.
ಅಂಧಭಕ್ತ : ಐತೆ.. ಸಂಬಂಧ ಐತೆ. ದೇಶದಲ್ಲಿ ನಡೆಯುವ ಭ್ರಷ್ಟಾಚಾರ, ಕಳ್ಳತನಗಳೆಲ್ಲಾ ಆರಂಭ ಆಗಿದ್ದೇ ನೆಹರು ಕಾಲದಲ್ಲಿ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಈಗಿನವರು ನಡೆದುಕೊಳ್ತಾ ಇದ್ದಾರೆ. ಆಗಲೇ ನೆಹರುರವರು ಕಳ್ಳರು ಭ್ರಷ್ಟರನ್ನ ಹಿಡಿದು ನೇಣು ಹಾಕಿದ್ದರೆ ಈಗ ದೇವರ ಹುಂಡಿ ದೋಚುವ ಧೈರ್ಯ ಯಾರಿಗೂ ಇರ್ತಾ ಇರಲಿಲ್ಲ. ಎಲ್ಲಾದಕ್ಕೂ ನೆಹರೂ ಕಾರಣ..
ವ್ಯಕ್ತಿ : ಅಯ್ಯೋ ಅಂಧಭಕ್ತ ಮಹಾಶಯ.. ನೆಹರು ಕಾಲ ಎಂದೋ ಮುಗಿದಾಯ್ತು. ಈಗ ರಾಮರಾಜ್ಯ ಸ್ಥಾಪನೆ ಮಾಡ್ತೇನೆ ಅಂತಾ ಅಧಿಕಾರಕ್ಕೆ ಬಂದ ನಿಮ್ಮ ಮೋದಿಯವರು ಯಾಕೆ ಕಳ್ಳತನ ಭ್ರಷ್ಟಾಚಾರ ನಿಲ್ಲಿಸಲಿಲ್ಲ?. ರಾಮನ ಹುಂಡಿಗೆ ಕಳ್ಳರನ್ನ ಕಾವಲಿಗೆ ಇಟ್ಟಿದ್ದು ಯಾಕೆ? ಇದೇನಾ ರಾಮರಾಜ್ಯ? ಇದೇನಾ ಮೋದಿ ಸಾಮ್ರಾಜ್ಯ?
ಅಂಧಭಕ್ತ : ಏನು, ಹುಂಡಿ ಕಾಯೋದೇ ಮೋದಿಯವರ ಕೆಲಸಾನಾ? ಅದನ್ನೇ ಮಾಡಿದ್ರೆ ವಿದೇಶ ಸುತ್ತೋದು ಯಾವಾಗ, ಈ ದೇಶವನ್ನ ವಿಶ್ವಗುರು ಮಾಡೋದು ಯಾವಾಗ?
ವ್ಯಕ್ತಿ : ಮತ್ಯಾಕೆ ನಿಮ್ಮ ಮೋದಿಯವರು ತಮ್ಮನ್ನು ಚೌಕೀದಾರ ಅಂತಾ ಹೇಳಿಕೊಂಡಿದ್ದು?. ‘ನ ಖಾವುಂಗಾ ನ ಖಾನೆ ದೂಂಗಾ’ ಅಂತಾ ಪ್ರಚಾರ ಗಿಟ್ಟಿಸಿದ್ದು?. ರಾಮನ ನಗನಾಣ್ಯ ನುಂಗಿದ್ದು ಗೊತ್ತಾದ ಮೇಲೂ ಮೌನವಾಗಿರೋದು?.
ಅಂಧಭಕ್ತ : ಅದು..ಅದೇನಪಾಂತಂದ್ರೆ.
ವ್ಯಕ್ತಿ: ಅದೂ ಇಲ್ಲಾ, ಇದೂ ಇಲ್ಲಾ. ಅಲ್ಲಿ ಇದ್ದ ಮಸೀದಿ ಬೀಳಿಸಿ ಮಂದಿರ ಕಟ್ಟಿದ್ದಾದರೂ ಯಾಕೆ ಅಂತಾ ಗೊತ್ತಾ? ಮಸೀದಿಯಲ್ಲಿ ಕದಿಯೋಕೆ ಏನೂ ಸಿಗೋದಿಲ್ಲ. ಅದೇ ಭವ್ಯ ಮಂದಿರ ಕಟ್ಟಿದರೆ ಭಕ್ತಾದಿಗಳು ಕೋಟ್ಯಾಂತರ ಹಣ, ಬಂಗಾರ ಕಾಣಿಕೆ ಕೊಡ್ತಾರೆ. ಆಗ ಅದನ್ನ ಲೂಟಿ ಮಾಡಬಹುದು ಅಂತಾ..ಗೊತ್ತಾಯ್ತಾ.
ಅಂಧಭಕ್ತ : ನೀನೊಬ್ಬ ಧರ್ಮದ್ರೋಹಿ, ನಿನ್ನಂತವರು ದೈವದ್ರೋಹಿ. ರಾಮಮಂದಿರದಲ್ಲಿ ಏನಾಯ್ತು ಅಂತಾ ಕೇಳೋಕೆ ನೀನ್ಯಾರು?. ನೀನೇನಾದ್ರೂ ಕಾಣಿಕೆ ಕೊಟ್ಟಿದ್ದೀಯಾ? ರಾಮನೇ ಇಲ್ಲಾ ಅಂದೋರು ಈಗ ಬರ್ತೀರಾ ಕೇಳೋಕೆ.. ಏನೇ ಆದರೂ ಪ್ರಶ್ನಿಸೊ ಹಕ್ಕಿಲ್ಲ. ಕಳ್ಳತನ ಆಗಿದ್ರೆ SIT ತನಿಖೆ ಮಾಡಲಾಗುತ್ತೆ. ಕಳ್ಳರಿಗೆ ಶಿಕ್ಷೆ ಆಗುತ್ತೆ..
ವ್ಯಕ್ತಿ : ಮತ್ತೆ ಎಲ್ಲದರಲ್ಲೂ ಮೂಗು ತೂರಿಸಿಕೊಂಡು ಬರುವ ಇಡಿ ಸಿಬಿಐ ಗಳು ಯಾಕೆ ತನಿಖೆಗೆ ಬಂದಿಲ್ಲಾ.. ಹೋಗಲಿ ಕಾಣಿಕೆ ಕೊಡದವರು ಪ್ರಶ್ನಿಸುವಂತಿಲ್ಲಾ ಅಲ್ವಾ? ಹಾಗಾದರೆ ಈ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರೆಸ್ಸೆಸ್ ನವರಿಗಾಗಲೀ ಅದರ ಪರಿವಾರಿಗರಿಗಾಗಲೀ ಈ ದೇಶವನ್ನು ಆಳುವ ಹಕ್ಕು ಎಲ್ಲಿದೆ? ಅನ್ಯಾಯ ಭ್ರಷ್ಟಾಚಾರವನ್ನು ಪ್ರಶ್ನಿಸೋ ಹಕ್ಕನ್ನು ಸಂವಿಧಾನ ಎಲ್ಲರಿಗೂ ಕೊಟ್ಟಿದೆ. ‘ರಾಮ ನಾಮ ಜಪನಾ, ರಾಮನ ಹುಂಡಿ ಅಪನಾ’ ಎನ್ನುವವರನ್ನು ಪ್ರಶ್ನೆ ಮಾಡಬಾರದಾ?
ಅಂಧಭಕ್ತ : ನೋ.. ಪ್ರಶ್ನಿಸೋ ಹಾಗಿಲ್ಲ. ಅದಕ್ಕೆಂದೇ ರಾಮಮಂದಿರವನ್ನ RTI ಕಾಯ್ದೆಯಿಂದ ಹೊರಗಿಟ್ಟಿರೋದು. ಅದೆಲ್ಲವನ್ನೂ ಮೋದಿ ಯೋಗಿಯವರು ನೋಡಿಕೊಳ್ತಾರೆ. ಪ್ರಶ್ನೆ ಮಾಡೋರು ಶ್ರೀರಾಮನ ವಿರೋಧಿಗಳು, ಹಿಂದೂ ಧರ್ಮದ್ರೋಹಿಗಳು. ಜೈಶ್ರೀರಾಂ. ಜೈ ಮೋದಿ. (ಎನ್ನುತ್ತಾ ಹೊರಡುತ್ತಾನೆ)
ವ್ಯಕ್ತಿ : ನೋಡಿದ್ರಲ್ಲಾ ಈ ಅಂಧಭಕ್ತರನ್ನ. ಅಲ್ಲಿ ರಾಮ ಮಂದಿರವನ್ನ ಲೂಟಿ ಮಾಡಿ ಕೋಟ್ಯಾಂತರ ರಾಮಭಕ್ತರ ನಂಬಿಕೆಗೆ ದ್ರೋಹ ಮಾಡಲಾಗ್ತಿದೆ. ಅದಕ್ಕೆ ಚೌಕೀದಾರರ ಮೌನ ಸಮ್ಮತಿಯೂ ಇದ್ದಂತಿದೆ. ಚಿಕ್ಕ ಮೀನುಗಳನ್ನು ಹಿಡಿದು ದೊಡ್ಡ ತಿಮಿಂಗಿಲಗಳನ್ನು ರಕ್ಷಿಸುವ ಹುನ್ನಾರ ನಡೆದಿದೆ. ಇದೇನಾ ರಾಮರಾಜ್ಯ? ಇಂತಹ ಕಳ್ಳ ಕದೀಮರು ಇರುವಲ್ಲಿ ರಾಮನಿರಲು ಸಾಧ್ಯಾನಾ?
ಹಾಡು :
ರಾಮಮಂದಿರದಲಿ ರಾಮನಿಲ್ಲ
ಹುಂಡಿ ಕಳ್ಳರು ದಂಡಿಯಾಗಿದ್ದಾರಲ್ಲಾ
ಲೋಕಸಂಚಾರದಲಿ ಚೌಕೀದಾರ
ದೇವರ ಹೆಸರಲಿ ನಿರಂತರ ವ್ಯಾಪಾರ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ರಾಹುಲ್ ನಿಂದಕನಿಗೆ ಮೀಡಿಯಾ ಸೆಕ್ರಟರಿ ಪಟ್ಟ: ಸಿಎಂ ತಂತ್ರವೊ, ಸಂಘಿ ಕುತಂತ್ರವೊ?


