ಬೆಂಗಳೂರು/ಚಿಕ್ಕಮಗಳೂರು: ಸುಮಾರು ಐದು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣಾ ವಿವಾದಕ್ಕೆ ಮಹತ್ವದ ತಿರುವು ದೊರೆತಿದೆ. ಕರ್ನಾಟಕ ಹೈಕೋರ್ಟ್ ಶುಕ್ರವಾರ ಮುಚ್ಚಿದ ಲಕೋಟೆಯಲ್ಲಿ (ಸೀಲ್ಡ್ ಕವರ್) ಸಲ್ಲಿಸಲಾಗಿದ್ದ ಮರುಎಣಿಕೆ ವರದಿಯನ್ನು ಪ್ರಕಟಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಎ.ವಿ. ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ವಿಜೇತರಾಗಿದ್ದಾರೆ ಎಂದು ಘೋಷಿಸಿದೆ. ಈ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಅವರಿಗೆ ಹಿನ್ನಡೆಯಾಗಿದೆ.
ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಪೀಠವು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನ್ಯಾಯಾಲಯದ ವಶದಲ್ಲಿದ್ದ ಸೀಲ್ಡ್ ಕವರ್ ತೆರೆಯಿತು. ಮರುಎಣಿಕೆ ವರದಿಯ ಆಧಾರದ ಮೇಲೆ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದಾಗಿ ಅಧಿಕೃತವಾಗಿ ಪ್ರಕಟಿಸಲಾಯಿತು. ಇದರೊಂದಿಗೆ 2021ರ ಚುನಾವಣಾ ಫಲಿತಾಂಶದ ಕುರಿತು ನಡೆದಿದ್ದ ದೀರ್ಘ ಕಾನೂನು ಹೋರಾಟಕ್ಕೆ ಅಂತಿಮ ಸ್ಪಷ್ಟತೆ ದೊರೆತಿದೆ.
2021ರ ಡಿಸೆಂಬರ್‌ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಂ.ಕೆ. ಪ್ರಾಣೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರನ್ನು ಕೇವಲ 6 ಮತಗಳ ಅಂತರದಿಂದ ಸೋಲಿಸಿ ವಿಜೇತರಾಗಿದ್ದರು. ಆಗ ಒಟ್ಟು 2,410 ಮತಗಳು ಚಲಾವಣೆಯಾಗಿದ್ದು, 39 ಮತಗಳು ಅಮಾನ್ಯಗೊಂಡಿದ್ದವು. ಅಂತಿಮ ಎಣಿಕೆಯಲ್ಲಿ ಪ್ರಾಣೇಶ್ 1,188 ಮತಗಳನ್ನು ಹಾಗೂ ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದಿದ್ದರು.
ಈ ಫಲಿತಾಂಶವನ್ನು ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಿದ್ದರು. ಪಟ್ಟಣ ಪಂಚಾಯಿತಿಗಳಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಸದಸ್ಯರಿಗೆ ಈ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆದರೂ ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಜೊತೆಗೆ ಮತ ಎಣಿಕೆಯಲ್ಲೂ ಅಕ್ರಮಗಳು ನಡೆದಿವೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ನಾಮನಿರ್ದೇಶಿತ ಸದಸ್ಯರ ಮತಗಳನ್ನು ಪ್ರತ್ಯೇಕಿಸಿ ಮರುಎಣಿಕೆ ನಡೆಸುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್ ಮರುಎಣಿಕೆಗೆ ಅನುಮತಿ ನೀಡಿದರೂ, ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸದೆ ಸೀಲ್ಡ್ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಮರುಎಣಿಕೆ ನಡೆಸಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಜುಲೈ 16ರಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ ಎಂ.ಕೆ. ಪ್ರಾಣೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಪಟ್ಟಣ ಪಂಚಾಯಿತಿಗಳ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದ ಸುಪ್ರೀಂ ಕೋರ್ಟ್, ಅಂತಹ ಮತಗಳನ್ನು ಪರಿಗಣಿಸಿರುವುದು ಕಾನೂನುಬಾಹಿರ ಎಂದು ಹೇಳಿತ್ತು. ಅಲ್ಲದೆ ಮರುಎಣಿಕೆ ವರದಿಯನ್ನು ಕರ್ನಾಟಕ ಹೈಕೋರ್ಟ್‌ಗೆ ಕಳುಹಿಸಿ ಅದರ ಆಧಾರದ ಮೇಲೆ ಅಂತಿಮ ಆದೇಶ ಹೊರಡಿಸುವಂತೆ ನಿರ್ದೇಶಿಸಿತ್ತು.
ಅದರಂತೆ ಶುಕ್ರವಾರ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರ ಪೀಠ ಮುಚ್ಚಿದ ಲಕೋಟೆಯನ್ನು ತೆರೆದು ಫಲಿತಾಂಶವನ್ನು ಪ್ರಕಟಿಸಿತು. ಮರುಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಮುನ್ನಡೆ ಸಾಧಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ವಿಜೇತೆಯೆಂದು ಘೋಷಿಸಲಾಯಿತು. ಇದರೊಂದಿಗೆ 2021ರಲ್ಲಿ ಘೋಷಣೆಯಾಗಿದ್ದ ಎಂ.ಕೆ. ಪ್ರಾಣೇಶ್ ಅವರ ಗೆಲುವು ಅಮಾನ್ಯಗೊಂಡಿದೆ.
ಈ ತೀರ್ಪು ರಾಜ್ಯ ರಾಜಕೀಯದಲ್ಲಿಯೂ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಕೇವಲ ಆರು ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಗಾಯತ್ರಿ ಶಾಂತೇಗೌಡ ಅವರು ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸಿ ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಬೆಂಬಲಿತ ಎಂ.ಕೆ. ಪ್ರಾಣೇಶ್ ಅವರಿಗೆ ಇದು ದೊಡ್ಡ ಹಿನ್ನಡೆಯಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ್ದ ಗಾಯತ್ರಿ ಶಾಂತೇಗೌಡ, ತಡವಾಗಿಯಾದರೂ ನ್ಯಾಯ ದೊರೆತಿದೆ. ಜನರು ನೀಡಿದ್ದ ಬೆಂಬಲಕ್ಕೆ ನ್ಯಾಯ ಒದಗಿಸುವ ಅವಕಾಶ ಸಿಕ್ಕಿದ್ದು, ಉಳಿದಿರುವ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.
ಕರ್ನಾಟಕ ಹೈಕೋರ್ಟ್ ಸೀಲ್ಡ್ ಕವರ್‌ನಲ್ಲಿದ್ದ ಮರುಎಣಿಕೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿರುವುದರಿಂದ ಸುಮಾರು ಐದು ವರ್ಷಗಳಿಂದ ನಡೆಯುತ್ತಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಕಾನೂನು ವಿವಾದಕ್ಕೆ ಇದೀಗ ತೆರೆ ಬಿದ್ದಂತಾಗಿದೆ.

