ಬೆಂಗಳೂರು : ಎಲ್ ನಿನೋ ಪರಿಣಾಮದಿಂದ ಈ ಬಾರಿ ಮುಂಗಾರು ಮಳೆ ಕೊರತೆ ಆಗಿರುವುದರಿಂದ ಕೆಆರ್ಎಸ್ ಆಣೆಕಟ್ಟೆಯ ನೀರನ್ನು ಹೊರಗೆ ಬಿಡದೆ ಯಥಾಸ್ಥಿತಿ ಕಾಯ್ದುಕೊಳ್ಳಬಹುದು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಹೇಳಿದೆ. ಈ ಮೂಲಕ ನಮ್ಮಲ್ಲಿ ಮಳೆ ಇಲ್ಲದಿದ್ದರೂ ತಮಿಳುನಾಡಿಗೆ ನೀರು ಬಿಡಬೇಕಾದ ಅನಿವಾರ್ಯತೆಯಿಂದ ತಾತ್ಕಾಲಿಕ ನಿರಾಳ ಸಿಕ್ಕದೆ.
ನವದೆಹಲಿಯಲ್ಲಿ ಜಲಶಕ್ತಿ ಭವನದಲ್ಲಿ ಬುಧವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಗೆ ಬರುವ ಕರ್ನಾಟಕ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಜಲಸಂಪನೂಲ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಜರುಗಿತು. ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಿಡಬ್ಲ್ಯೂಎಂಎ ಸಭೆಯಲ್ಲಿ ರಾಜ್ಯದ ಜಲಸಂಪನ್ಮೂಲ ರಾಮಲಿಂಗಾರೆಡ್ಡಿ ಸೇರಿ ರಾಜ್ಯದ ಅಧಿಕಾರಿಗಳು ಆನ್ಲೈನ್ ಮೂಲಕ ಭಾವಹಿಸಿದ್ದರು. ಅತ್ತ ತಮಿಳುನಾಡಿನಿಂದಲೂ ಅಧಿಕಾರಿಗಳು ಭಾಗವಹಿಸಿ ವರ್ಚ್ಯುವಲ್ ಮೂಲಕ ತಮ್ಮ ವಾದಗಳನ್ನು ಮಂಡಿಸಿದರು. ಮಳೆ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ. ಕುಡಿಯುವ ನೀರು ಹಾಗೂ ರೈತರ ಹಿತಾಸಕ್ತಿಗೆ ಆದ್ಯತೆ ನೀಡಬೇಕಿದ್ದು ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ವಾದಿಸಿತು.
ರಾಜ್ಯದ ಪರವಾಗಿ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕರ್ನಾಟಕದಲ್ಲಿ ಈ ಬಾರಿ ಜುಲೈ ತಿಂಗಳ ಮಧ್ಯ ಭಾಗ ಸಮೀಪಿಸಿದ್ದರೂ ನಮಗೆ ವಾಡಿಕೆಯಂತೆ ಮಳೆ ಬಂದಿಲ್ಲ. ಕಾವೇರಿ ಜಲಾನಯನ ಪ್ರದೇಶಗಳ ವ್ಯಾಪ್ತಿಗೆ ಒಳಪಡುವ ಕೆಆರ್ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಕ್ತಿ ಇಲಾಖೆಗಳಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಸಭೆಗೆ ವಿವರಿಸಿದರು.
ಒಂದು ವಾರದ ಹಿಂದೆ ಅಲ್ಪಪ್ರಮಾಣದ ಮಳೆಯಾದ ಪರಿಣಾಮ ಜಲಾಶಯಗಳಿಗೆ ಕೊಂಚಮಟ್ಟಿನ ನೀರು ಹರಿದುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಏನೇನೂ ಸಾಲದು. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮತ್ತೊಂದೆಡೆ, ತಮಿಳುನಾಡು ತನ್ನ ಪಾಲಿನ ನೀರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿತು. ಜೂನ್ ತಿಂಗಳಿಗೆ 9.19 ಟಿಎಂಸಿ ಹಾಗೂ ಜುಲೈ ತಿಂಗಳಿಗೆ 31.24 ಟಿಎಂಸಿ ಸೇರಿ ಒಟ್ಟು 40.43 ಟಿಎಂಸಿ ನೀರನ್ನು ಕರ್ನಾಟಕ ಹರಿಸಬೇಕೆಂಬುದು ತಮಿಳುನಾಡು ವಾದಿಸಿತು.
ಇನ್ನು ಜಲಾಶಯಗಳಲ್ಲಿನ ನೀರಿನ ಪ್ರಮಾಣ, ಮಳೆ ಕೊರತೆ ಪರಿಗಣಿಸಿದ ಸಮಿತಿ ಈ ಹಂತದಲ್ಲಿ ಕರ್ನಾಟಕಕ್ಕೆ ನೀರು ಬಿಡುಗಡೆ ಮಾಡುವಂತೆ ತಕ್ಷಣಕ್ಕೆ ಯಾವುದೇ ಆದೇಶ ಮಾಡಿಲ್ಲ. ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ, ಅಗತ್ಯವಿದ್ದರೆ ಮುಂದಿನ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಕಾವೇರಿ ಕೊಳ್ಳದ ಜಲಾಶಯಗಳು ಭರ್ತಿಯಾದರೆ ನೀರು ಹರಿಸಬೇಕಾಗಬಹುದು. ತಮಿಳುನಾಡಿಗೆ ಜೂನ್ ಹಾಗೂ ಜುಲೈ ತಿಂಗಳ ಒಟ್ಟು 40.43 ಟಿಎಂಸಿ ನೀರು ಹರಿಸಬೇಕಾಗಿದೆ. ಜಲಾಶಯಗಳು ಭರ್ತಿಯಾದರೆ ನೀರು ಹರಿಸುವಂತೆ ಸಮಿತಿ ರಾಜ್ಯಕ್ಕೆ ಸೂಚಿಸಬಹುದು ಎಂದು ಹೇಳಲಾಗಿದೆ.

