ಬಾನು ಮುಷ್ತಾಕ್ ಕಥನಗಳಲ್ಲಿ ಅಧಿಕಾರ, ಅಸ್ಮಿತೆ ಮತ್ತು ಪ್ರತಿರೋಧ

ಬಾನು ಮುಷ್ತಾಕ್ ಅವರ ಕಥೆಗಳು ಕೇವಲ ಒಂದು ಸಮುದಾಯದ ಕಥನಗಳಾಗಿ ಉಳಿಯುವುದಿಲ್ಲ. ಅವು ಅಧಿಕಾರ, ಅಸ್ಮಿತೆ ಮತ್ತು ಅಸ್ತಿತ್ವಕ್ಕಾಗಿ ಜಗತ್ತಿನಾದ್ಯಂತ ನಡೆಯುತ್ತಿರುವ ಹೋರಾಟದ ಸಾರ್ವತ್ರಿಕ ಸ್ವರೂಪವನ್ನು ಧ್ವನಿಸುತ್ತವೆ. ಇದು ಕೇವಲ ನೋವಿನ ದಾಖಲೆಯಲ್ಲ, ಬದಲಾಗಿ ದಮನದ ನಡುವೆಯೂ ಘನತೆಗಾಗಿ ನಡೆಸುವ ನಿರಂತರ ಹೋರಾಟದ, ಆರದ ಭರವಸೆಯ, ಒಂದು ಮಹಾಕಾವ್ಯವೂ ಹೌದು- ಡಾ. ರವಿ ಎಂ ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.

ಬಹುಸ್ತರದ ಹೆಣಿಗೆಗಳ ಶೋಧ

ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಕೆಲವು ಲೇಖಕರು ಕೇವಲ ಕಥೆಗಳನ್ನು ಹೇಳುವುದಿಲ್ಲ, ಬದಲಿಗೆ ತಮ್ಮ ಕಾಲದ ಆತ್ಮಸಾಕ್ಷಿಯನ್ನು ಅಕ್ಷರಗಳಲ್ಲಿ ದಾಖಲಿಸುತ್ತಾರೆ. ದಮನಿತರ ಮೌನಕ್ಕೆ ದನಿಯಾಗುತ್ತಾರೆ, ಅಧಿಕಾರದ ಅಗೋಚರ ವಿನ್ಯಾಸಗಳನ್ನು ನಿರ್ದಾಕ್ಷಿಣ್ಯವಾಗಿ ಬಯಲಿಗೆಳೆಯುತ್ತಾರೆ. ಮೌರೀಸ್ ಬ್ಲಾಂಚಟ್‌ನ ಭಾಷೆಯಲ್ಲಿ ಹೇಳುವುದಾದರೆ, ಸಾಹಿತ್ಯವು ‘ಮೌನದ ಭಾಷೆ’ಯಾಗಿ ಮಾರ್ಪಡುತ್ತದೆ- ಮಾತನಾಡಲಾಗದ ಸತ್ಯಗಳಿಗೆ ದನಿ ಕೊಡುವ ಮಾಧ್ಯಮವಾಗಿ. ಅಂತಹ ವಿಶಿಷ್ಟ ಪರಂಪರೆಯಲ್ಲಿ, ಬಾನು ಮುಷ್ತಾಕ್ ಅವರ ಹೆಸರು ಒಂದು ದಿಟ್ಟ, ತೀಕ್ಷ್ಣ ಮತ್ತು ಸಂವೇದನಾಶೀಲ ಧ್ವನಿಯಾಗಿ ಶಾಶ್ವತವಾಗಿ ದಾಖಲಾಗಿದೆ. ಮುಸ್ಲಿಂ ಸಮುದಾಯದ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಆಂತರಿಕ ಜಗತ್ತನ್ನು ಅನಾವರಣಗೊಳಿಸುವಂತೆ ತೋರುವ ಅವರ ಕಥೆಗಳು, ಆಳದಲ್ಲಿ ಪಿತೃಪ್ರಧಾನ ವ್ಯವಸ್ಥೆಯ ಸಾರ್ವತ್ರಿಕ ಸ್ವರೂಪ, ಅಧಿಕಾರದ ಸಂಕೀರ್ಣ ರಾಜಕಾರಣ ಮತ್ತು ಮಾನವೀಯ ಅಸ್ತಿತ್ವದ ಜಟಿಲ ಸಂಘರ್ಷಗಳನ್ನು ಶೋಧಿಸುವ ಪ್ರಬಲ ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿವೆ. ಅವರ ಕಥಾ ಜಗತ್ತಿನ ಕೇಂದ್ರದಲ್ಲಿರುವ ‘ಎದೆಯ ಹಣತೆ’ ಎಂಬ ಸಶಕ್ತ ರೂಪಕವು, ಕೇವಲ ಹೆಣ್ಣಿನ ಅಸ್ತಿತ್ವ, ಚೈತನ್ಯ ಮತ್ತು ಕನಸುಗಳ ಸಂಕೇತವಲ್ಲ; ಅದು ‘ವಂಶದ ಮರ್ಯಾದೆ’, ‘ಧಾರ್ಮಿಕ ಶಾಸನ’ ಮತ್ತು ‘ಕೌಟುಂಬಿಕ ಅಧಿಕಾರ’ಗಳೆಂಬ ಬಿರುಗಾಳಿಗೆ ಸಿಲುಕಿ ಆರದಂತೆ ಉಳಿಯಲು ಹೋರಾಡುವ ಜೀವಂತ ಜ್ವಾಲೆಯಾಗಿದೆ.

ಬಾನು ಮುಷ್ತಾಕ್ ಅವರ ಕಥೆಗಳು ಕೇವಲ ‘ಹೆಣ್ಣಿಗೆ ಏನಾಗುತ್ತಿದೆ?’ ಎಂಬ ಪ್ರಶ್ನೆಯನ್ನು ಕೇಳಿ ನಿಲ್ಲುವುದಿಲ್ಲ. ಬದಲಾಗಿ, ‘ಗಂಡಸರು ಹೀಗೆ ಏಕೆ ವರ್ತಿಸುತ್ತಿದ್ದಾರೆ?’ ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತುವ ಮೂಲಕ, ಒಂದು ಇಡೀ ಸಾಮಾಜಿಕ ವ್ಯವಸ್ಥೆಯ ಆತ್ಮವಿಮರ್ಶೆಗೆ ಓದುಗರನ್ನು ಆಹ್ವಾನಿಸುತ್ತವೆ. ಆದ್ದರಿಂದಾಗಿ ಅವರ ಕಥೆಗಳನ್ನು ಕೇವಲ ಸಾಮಾಜಿಕ ವಾಸ್ತವವಾದದ ಚೌಕಟ್ಟಿನಲ್ಲಿ ನೋಡುವುದು ಅಪೂರ್ಣ ವಿಶ್ಲೇಷಣೆಯಾದೀತು. ಈ ಬರಹವು, ಅವರ ಕಥೆಗಳಲ್ಲಿ ಹಾಸುಹೊಕ್ಕಾಗಿರುವ ಅಧಿಕಾರ, ಅಸ್ಮಿತೆ ಮತ್ತು ಪ್ರತಿರೋಧದ ಬಹುಸ್ತರದ ಹೆಣಿಗೆಯನ್ನು ಬಿಡಿಸಿ, ಹೆಣ್ಣಿನ ಅನುಭವ, ಗಂಡುತನದ ನಿರ್ಮಾಣ, ದಮನಿತರ ಪ್ರತಿರೋಧ ಮತ್ತು ಸಾಮಾಜಿಕ ರಚನೆಗಳ ಸೂಕ್ಷ್ಮತೆಯನ್ನು ಗ್ರಹಿಸಲು ಹೊಸ ದಾರಿಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತದೆ.

ಪೌರುಷದ ನಿರ್ಮಾಣ ಮತ್ತು ಪಿತೃಪ್ರಧಾನ ವ್ಯವಸ್ಥೆಯ ಪಹರೆಗಾರರು

ಬಾನು ಮುಷ್ತಾಕ್ ಅವರ ಕಥೆಗಳು ಪುರುಷ ಪಾತ್ರಗಳನ್ನು ಕೇವಲ ಖಳನಾಯಕರನ್ನಾಗಿ ಚಿತ್ರಿಸುವುದಿಲ್ಲ, ಬದಲಿಗೆ ಅವರು ಒಂದು ಇಡೀ ಸಾಮಾಜಿಕ ವ್ಯವಸ್ಥೆಯ ಉತ್ಪನ್ನಗಳು, ರಕ್ಷಕರು ಮತ್ತು ಕೆಲವೊಮ್ಮೆ ಬಲಿಪಶುಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ವಿಶ್ಲೇಷಿಸುತ್ತವೆ. ರ್ಯಾವೆನ್ ಕಾನೆಲ್(Raewyn Connell)ಳ ‘ಪ್ರಾಬಲ್ಯದ ಪೌರುಷ’(Hegemonic Masculinity) ಪರಿಕಲ್ಪನೆಯ ಪ್ರಕಾರ, ‘ಗಂಡುತನ’(Masculinity) ಎನ್ನುವುದು ಕೇವಲ ಲಿಂಗ ಸೂಚಕವಲ್ಲ; ಅದೊಂದು ಸಾಮಾಜಿಕವಾಗಿ ನಿರ್ಮಿಸಲ್ಪಟ್ಟ ಅಧಿಕಾರದ ಸ್ಥಾನ. ಈ ಗಂಡುತನವು ‘ವಂಶದ ಮರ್ಯಾದೆ’, ‘ಧಾರ್ಮಿಕ ಶ್ರೇಷ್ಠತೆ’ ಮತ್ತು ‘ಕುಟುಂಬದ ನಿಯಂತ್ರಣ’ ಎಂಬ ಪರಿಕಲ್ಪನೆಗಳೊಂದಿಗೆ ಅವಿಭಾಜ್ಯವಾಗಿ ಬೆಸೆದುಕೊಂಡಿದೆ.

 ‘ಹುಟ್ಟು’ ಕಥೆಯ ಸಯ್ಯದ್ ಅಹಮದ್ ಪಾತ್ರವು ಇದಕ್ಕೆ ಶ್ರೇಷ್ಠ ಉದಾಹರಣೆ. ಪ್ರೀತಿಸಿ ಮದುವೆಯಾಗುವ ಮೂಲಕ ತನ್ನ ಅಧಿಕಾರ ಮತ್ತು ನಿರ್ಣಯಕ್ಕೆ ಸವಾಲೆಸೆದ ಮಗಳ ಅಸ್ತಿತ್ವವನ್ನೇ ನಿರಾಕರಿಸಲು, ಅವಳ ಹೆಸರಿನಲ್ಲಿ ಖಾಲಿ ಗೋರಿ ಕಟ್ಟುವ ಆತನ ಕ್ರಿಯೆಯು, ವೈಯಕ್ತಿಕ ಕ್ರೌರ್ಯಕ್ಕಿಂತ ಹೆಚ್ಚಾಗಿ ಪಿತೃಪ್ರಧಾನ ವ್ಯವಸ್ಥೆಯ ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಒಂದು ಸಾಂಕೇತಿಕ ಕ್ರಿಯೆಯಾಗಿದೆ. ಮಗಳು ಸಾಮಾಜಿಕ ನಿಯಮವನ್ನು ಮೀರಿದಾಗ, ಆಕೆಯನ್ನು ಸಾಮಾಜಿಕವಾಗಿ ‘ಸಾಯಿಸುವ’ ಮೂಲಕ ತನ್ನ ಗಂಡು ಅಸ್ಮಿತೆಯನ್ನು ಮತ್ತು ಅಧಿಕಾರವನ್ನು ಪುನರ್ ಸ್ಥಾಪಿಸಲು ಆತ ಯತ್ನಿಸುತ್ತಾನೆ. ಇದೇ ರೀತಿ, ‘ಎದೆಯ ಹಣತೆ’ ಕಥೆಯ ಮೆಹರುನ್‌ಳ ಸಹೋದರರು, ಆಶ್ರಯ ಬೇಡಿ ಬಂದ ತಂಗಿಯ ಸಂಕಟಕ್ಕಿಂತ ಕುಲದ ಗೌರವವನ್ನೇ ಪ್ರಧಾನವಾಗಿ ಕಾಣುತ್ತಾರೆ. ‘ಡೋಲಿ ಹೋದ ಮನೆಯಿಂದಲೇ ನಿನ್ನ ಡೋಲ ಹೊರಬರಬೇಕು’ ಎಂಬ ಅವರ ಮಾತು, ಅವರು ವ್ಯವಸ್ಥೆಯ ನಿಷ್ಠಾವಂತ ಸಿಪಾಯಿಗಳೇ ಹೊರತು, ರಕ್ತ ಸಂಬಂಧದ ವಾತ್ಸಲ್ಯಕ್ಕೆ ಬೆಲೆ ಕೊಡುವ ವ್ಯಕ್ತಿಗಳಲ್ಲ ಎಂಬುದನ್ನು ಪರೋಕ್ಷವಾಗಿ ಅರಹುತ್ತದೆ. ಈ ಪಾತ್ರಗಳು, ‘ಪ್ರಾಬಲ್ಯದ ಪೌರುಷ’ವನ್ನು(Hegemonic Masculinity) ಕಾಪಾಡಲು, ತಮ್ಮ ಮನೆಯ ಹೆಣ್ಣುಗಳನ್ನೇ ಬಲಿ ಕೊಡುವ ವ್ಯವಸ್ಥೆಯ ಕ್ರೌರ್ಯವನ್ನು ಪ್ರತಿನಿಧಿಸುತ್ತವೆ. ಪಿಯೆರ್ ಬೌರ್ಡಿಯು(Pierre Bourdieu)ನ ಸಾಂಸ್ಕೃತಿಕ ಬಂಡವಾಳ(Cultural Capital) ಸಿದ್ಧಾಂತದ ಪ್ರಕಾರ, ಸಾಮಾಜಿಕ ಮರ್ಯಾದೆ ಮತ್ತು ಖ್ಯಾತಿಯು ಒಂದು ರೀತಿಯ ಶಕ್ತಿ ಸಂಬಂಧವಾಗಿದೆ ಎಂಬ ನಿಲುವಿನ ಅನಾವರಣವಿಲ್ಲಿದೆ.

ಇದೇ ವೇಳೆ, ‘ಹೃದಯದ ತೀರ್ಪು’ ಕಥೆಯ ಯೂಸುಫ್ ಪಾತ್ರವು ಗಂಡುತನದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತದೆ. ತಾಯಿ ಮತ್ತು ಹೆಂಡತಿಯ ನಡುವಿನ ಸಂಘರ್ಷದಲ್ಲಿ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗದೆ ತೊಳಲಾಡುವ ಆತನದು, ಅಧಿಕಾರಯುತ ಗಂಡುತನಕ್ಕಿಂತ ಹೆಚ್ಚಾಗಿ ‘ಪೌರುಷದ ಬಿಕ್ಕಟ್ಟನ್ನು’(Crisis of Masculinity) ಎದುರಿಸುವ ದುರ್ಬಲ ಮನಸ್ಥಿತಿ. ಈ ಪಾತ್ರದ ಮೂಲಕ, ಪಿತೃಪ್ರಧಾನ ವ್ಯವಸ್ಥೆಯು ಪುರುಷರ ಮೇಲೆ ಹೇರುವ ನಿರೀಕ್ಷೆಗಳು ಮತ್ತು ಒತ್ತಡಗಳು ಅವರನ್ನು ಹೇಗೆ ಅಸಹಾಯಕ ಮತ್ತು ಭಾವನಾತ್ಮಕವಾಗಿ ಅಪಕ್ವ ವ್ಯಕ್ತಿಗಳನ್ನಾಗಿ ಮಾಡುತ್ತವೆ ಎಂಬುದನ್ನು ಲೇಖಕಿ ಸೂಕ್ಷ್ಮವಾಗಿ ದಾಖಲಿಸುತ್ತಾರೆ.

ಧರ್ಮದ ದ್ವಂದ್ವ ನಿಲುವು

ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಧರ್ಮವು ಒಂದು ಏಕಶಿಲಾಕೃತಿಯಾಗಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ, ಅದು ಅಧಿಕಾರದ ರಾಜಕಾರಣದಲ್ಲಿ ದ್ವಂದ್ವಾತ್ಮಕ ಪಾತ್ರವನ್ನು ವಹಿಸುತ್ತದೆ. ಒಂದೆಡೆ, ಅದನ್ನು ಪುರುಷ ಪ್ರಧಾನ ವ್ಯವಸ್ಥೆಯು ತನ್ನ ಅಧಿಕಾರವನ್ನು ಸ್ಥಾಪಿಸಲು ಮತ್ತು ಹೆಣ್ಣಿನ ಹಕ್ಕುಗಳನ್ನು ನಿರಾಕರಿಸಲು ಪ್ರಬಲ ಅಸ್ತ್ರವಾಗಿ ಬಳಸಿಕೊಂಡರೆ, ಮತ್ತೊಂದೆಡೆ, ಅದೇ ಧರ್ಮವು ಜ್ಞಾನ ಮತ್ತು ವಿಮೋಚನೆಯ ಮಾರ್ಗವಾಗಿಯೂ ಚಿತ್ರಿತವಾಗಿದೆ.

‘ಕರಿ ನಾಗರಗಳು’ ಮತ್ತು ‘ಬೆಂಕಿ ಮಳೆ’ ಕಥೆಗಳಲ್ಲಿ ಬರುವ ಮುತವಲ್ಲಿಗಳು(ಧಾರ್ಮಿಕ ಮುಖಂಡರು), ಧರ್ಮವನ್ನು ತಮ್ಮ ಸ್ವಾರ್ಥ ಮತ್ತು ಅಧಿಕಾರ ಸ್ಥಾಪನೆಗೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದಕ್ಕೆ ಸ್ಪಷ್ಟ ನಿದರ್ಶನಗಳು. ‘ಕರಿ ನಾಗರಗಳು’ ಕಥೆಯ ಯಾಕೂಬ್, ಬಹುಪತ್ನಿತ್ವಕ್ಕೆ ಅನುಮತಿ ನೀಡುವ ಶರೀಯತ್ ಕಾನೂನನ್ನು ತನ್ನ ಕಾಮ ತೃಪ್ತಿಗಾಗಿ ಬಳಸಿಕೊಳ್ಳುತ್ತಾನೆಯೇ ಹೊರತು, ಅದರ ಜೊತೆ ಬರುವ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾನೆ. ಇದು ಫೂಕಾಲ್ಟ್ನ ‘ವಿಷಯೀಕರಣ’(Subjectification) ಪ್ರಕ್ರಿಯೆಗೆ ಸ್ಪಷ್ಟ ಉದಾಹರಣೆಯಾಗಿದೆ. ನ್ಯಾಯ ಕೇಳಲು ಹೋದಾಗ, ಮುತವಲ್ಲಿಯು ಗಂಡಿನ ತಪ್ಪನ್ನು ಮುಚ್ಚಿಹಾಕಿ, ಹೆಣ್ಣಿನ ನ್ಯಾಯಯುತ ಹಕ್ಕನ್ನು ನಿರಾಕರಿಸುತ್ತಾನೆ. ‘ಬೆಂಕಿ ಮಳೆ’ಯಲ್ಲಿ ಮುತವಲ್ಲಿ ಉಸ್ಮಾನ್ ಸಾಹೇಬರು, ತಂಗಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಲು ಧರ್ಮದ ಹೆಸರಿನಲ್ಲಿ ಇಡೀ ಜಮಾತಿನ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಈ ಪಾತ್ರಗಳ ಮೂಲಕ, ಧಾರ್ಮಿಕ ಸಂಸ್ಥೆಗಳು ಮತ್ತು ಕಾನೂನುಗಳು ಹೇಗೆ ವ್ಯವಸ್ಥಿತವಾಗಿ ಪುರುಷ ಹಿತಾಸಕ್ತಿಯನ್ನು ಕಾಪಾಡುವ ಸಾಧನಗಳಾಗುತ್ತವೆ ಮತ್ತು ಧರ್ಮದ ಪಿತೃಪ್ರಧಾನ ವ್ಯಾಖ್ಯಾನಗಳು ಹೇಗೆ ಶೋಷಣೆಯನ್ನು ನ್ಯಾಯಸಮ್ಮತಗೊಳಿಸುತ್ತವೆ ಎಂಬುದನ್ನು ಕಥೆಗಾರ್ತಿ ನಿರ್ದಾಕ್ಷಿಣ್ಯವಾಗಿ ಬಯಲಿಗೆಳೆಯುತ್ತಾರೆ.

ಇದಕ್ಕೆ ತದ್ವಿರುದ್ಧವಾಗಿ, ‘ಕರಿ ನಾಗರಗಳು’ ಕಥೆಯ ಜುಲೇಖಾ ಬೇಗಮ್ ಪಾತ್ರವು ಧರ್ಮದ ವಿಮೋಚನಾತ್ಮಕ ಸಾಧ್ಯತೆಯನ್ನು ಪ್ರತಿನಿಧಿಸುತ್ತದೆ. ತನ್ನ ಶೈಕ್ಷಣಿಕ ಅರಿವಿನಿಂದ, ಆಕೆ ಇಸ್ಲಾಂ ಧರ್ಮಗ್ರಂಥಗಳೇ ಮಹಿಳೆಗೆ ನೀಡಿರುವ ಶಿಕ್ಷಣ, ಆಸ್ತಿ ಮತ್ತು ವಿಚ್ಛೇದನದ ಹಕ್ಕುಗಳನ್ನು ಪ್ರತಿಪಾದಿಸುತ್ತಾಳೆ. ಅವಳ ವಾದವು ಧರ್ಮದ ಮೂಲತತ್ವದ ವಿರುದ್ಧವಾಗಿರದೆ, ಅದರ ಪುರುಷಕೇಂದ್ರಿತ ಮತ್ತು ಅನುಕೂಲಸಿಂಧು ವ್ಯಾಖ್ಯಾನಗಳ ವಿರುದ್ಧವಾಗಿದೆ. ಈ ಮೂಲಕ, ಬಾನು ಮುಷ್ತಾಕ್ ಅವರ ವಿಮರ್ಶೆಯು ಧರ್ಮದ ಮೇಲಿನ ದಾಳಿಯಲ್ಲ, ಬದಲಿಗೆ ಧರ್ಮದ ಹೆಸರಿನಲ್ಲಿ ಅಧಿಕಾರ ಚಲಾಯಿಸುವ ಪಿತೃಪ್ರಧಾನ ವ್ಯವಸ್ಥೆಯ ಮೇಲಿನ ದಾಳಿ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಅಂತರ್ ವಿಭಾಗೀಯತೆ(Intersectionality) ಮತ್ತು ಸ್ತ್ರೀ ಅಸ್ತಿತ್ವದ ಸಂಕೀರ್ಣ ಹೋರಾಟ

ಕಿಂಬರ್ಲೆ ಕ್ರೆನ್ಶಾ(Kimberlé Crenshaw)ಳ ಅಂತರ್ ವಿಭಾಗೀಯತೆಯ ಸಿದ್ಧಾಂತದ ಪ್ರಕಾರ, ವ್ಯಕ್ತಿಯ ಅಸ್ಮಿತೆಯು ಒಂದೇ ವರ್ಗೀಕರಣದಿಂದ(ಲಿಂಗ, ಜಾತಿ, ಧರ್ಮ, ವರ್ಗ) ನಿರ್ಧರಿಸಲ್ಪಡುವುದಿಲ್ಲ, ಬದಲಿಗೆ ಈ ವಿವಿಧ ಅಸ್ಮಿತೆಗಳ ಸಂಕೀರ್ಣ ಅಂತಃಕ್ರಿಯೆಯಿಂದ(Intersection) ರೂಪುಗೊಳ್ಳುತ್ತದೆ. ಬಾನು ಮುಷ್ತಾಕ್ ಅವರ ಸ್ತ್ರೀ ಪಾತ್ರಗಳು ‘ಹೆಣ್ಣು’ ಎಂಬ ಒಂದೇ ಅಸ್ಮಿತೆಯಡಿಯಲ್ಲಿ ದಮನಕ್ಕೆ ಒಳಗಾಗುವುದಿಲ್ಲ. ಅವರ ಶೋಷಣೆಯು, ಅವರ ಲಿಂಗ, ಧರ್ಮ, ವರ್ಗ, ಶೈಕ್ಷಣಿಕ ಹಿನ್ನೆಲೆ ಮತ್ತು ಕೌಟುಂಬಿಕ ಸ್ಥಾನಮಾನಗಳ(ಉದಾಹರಣೆಗೆ, ಗಂಡು ಮಗುವನ್ನು ಹೆರದಿರುವುದು) ಅಂತರ್ ವಿಭಾಗೀಯ ಹೆಣಿಗೆಯಲ್ಲಿ ರೂಪುಗೊಂಡಿದೆ. ಅವರ ಪಾತ್ರಗಳ ಅನುಭವವನ್ನು ಅರ್ಥಮಾಡಿಕೊಳ್ಳಲು ಈ ಸೈದ್ಧಾಂತಿಕ ಚೌಕಟ್ಟು ಅತ್ಯಂತ ಸಹಕಾರಿಯಾಗಿದೆ.

‘ಎದೆಯ ಹಣತೆ’ಯ ಮೆಹರುನ್, ಕೇವಲ ಹೆಣ್ಣಾಗಿ ಶೋಷಣೆಗೆ ಒಳಗಾಗುವುದಿಲ್ಲ. ಅವಳು ಶಿಕ್ಷಣ ವಂಚಿತಳು, ಆರ್ಥಿಕವಾಗಿ ಪರಾಧೀನಳು ಮತ್ತು ಗಂಡನಿಂದ ವಂಚಿಸಲ್ಪಟ್ಟವಳು. ಈ ಎಲ್ಲಾ ಅಸ್ಮಿತೆಗಳು ಒಟ್ಟಾಗಿ ಸೇರಿ, ತವರಿನಲ್ಲಿ ಆಶ್ರಯ ನಿರಾಕರಿಸಿದಾಗ ಅವಳನ್ನು ಸಂಪೂರ್ಣವಾಗಿ ಅಧಿಕಾರರಹಿತಳನ್ನಾಗಿಸುತ್ತವೆ. ಅವಳ ದುರಂತವು ಕೇವಲ ಲಿಂಗದ ಕಾರಣದಿಂದಲ್ಲ, ಬದಲಿಗೆ ಅವಳ ಬಹುಸ್ತರದ ಅಧೀನತೆಯ ಸಂಯುಕ್ತ ಪರಿಣಾಮವಾಗಿದೆ. ಇದೇ ರೀತಿ, ‘ಕರಿ ನಾಗರಗಳು’ ಕಥೆಯ ಅಶ್ರಫ್, ಗಂಡು ಮಗುವನ್ನು ಹೆರಲು ವಿಫಲಳಾದ ಕಾರಣಕ್ಕಾಗಿ ತಿರಸ್ಕಾರಕ್ಕೆ ಒಳಗಾಗುತ್ತಾಳೆ. ಅವಳ ಹೆಣ್ಣುತನವು ಮಾತೃತ್ವದ ಸಾಂಪ್ರದಾಯಿಕ ನಿರೀಕ್ಷೆಯನ್ನು ಪೂರೈಸದಿದ್ದಾಗ, ಅವಳ ಅಸ್ತಿತ್ವವೇ ಪ್ರಶ್ನಿಸಲ್ಪಡುತ್ತದೆ.

‘ದೇವರು ಮತ್ತು ಅಪಘಾತ’ ಕಥೆಯ ಮರಿಯಮ್‌ಳ ಬದುಕು, ಬಡತನವು ಹೆಣ್ಣಿನ ಬದುಕನ್ನು ಹೇಗೆ ಸೀಮಿತಗೊಳಿಸುತ್ತದೆ ಎಂಬುದನ್ನು ಚಿತ್ರಿಸುತ್ತದೆ. ಇತರರ ಸಾವಿನಲ್ಲಿ ತನ್ನ ಬದುಕನ್ನು ಕಂಡುಕೊಳ್ಳುವ ಅವಳ ಸ್ಥಿತಿ, ವರ್ಗ ಮತ್ತು ಲಿಂಗದ ಶೋಷಣೆಗಳು ಹೇಗೆ ಒಂದನ್ನೊಂದು ಮತ್ತಷ್ಟು ಬಲಪಡಿಸುತ್ತವೆ ಎಂಬುದಕ್ಕೆ ನಿದರ್ಶನವಾಗಿದೆ. ಈ ಪಾತ್ರಗಳ ಮೂಲಕ, ಸ್ತ್ರೀವಾದಿ ವಿಮರ್ಶೆಯು ಕೇವಲ ಲಿಂಗದ ನೆಲೆಯಲ್ಲಿ ನಿಲ್ಲದೆ, ಸಮಾಜದ ಇತರ ಅಧಿಕಾರದ ರಚನೆಗಳನ್ನು(ವರ್ಗ, ಧರ್ಮ ಇತ್ಯಾದಿ) ಏಕಕಾಲದಲ್ಲಿ ಪರಿಗಣಿಸಬೇಕು ಎಂಬ ಅಂತರ್ ವಿಭಾಗೀಯತೆಯ ಆಶಯವನ್ನು ಬಾನು ಅವರ ಕಥನಗಳು ಸಹಜವಾಗಿಯೇ ಒಳಗೊಂಡಿವೆ.

 ಭಾವನೆಗಳ ರಾಜಕಾರಣ(Affect Theory) ಮತ್ತು ಸಾಮೂಹಿಕ ಭಾವದ ಶಕ್ತಿ

ಬರೂಚ್ ಸ್ಪಿನೋಝಾ, ಗಿಲ್ಸ್ ಡೆಲ್ಯೂಜ್, ಬ್ರಯಾನ್ ಮಸೂಮಿ, ಸಾರಾ ಅಹ್ಮದ್- ಮೊದಲಾದವರು ಪ್ರತಿಪಾದಿಸಿದ ಭಾವನೆಗಳ ರಾಜಕಾರಣವು- ರಾಜಕೀಯ, ಮಾಧ್ಯಮ, ಜಾಹೀರಾತು, ಕಲೆಗಳು ನಮ್ಮನ್ನು ವೈಚಾರಿಕವಾಗಿ ಒಪ್ಪಿಸುವುದಕ್ಕಿಂತ ಹೆಚ್ಚಾಗಿ, ನಮ್ಮ ದೇಹದ ಮೇಲೆ ನೇರವಾಗಿ ಹೇಗೆ ಪರಿಣಾಮ ಬೀರಿ, ನಮ್ಮನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಕ್ರಿಯಾಶೀಲರನ್ನಾಗಿ ಮಾಡುತ್ತವೆ ಎಂಬುದನ್ನು ವಿಶ್ಲೇಷಿಸುತ್ತದೆ. ಇದು ‘ಭಾವನೆಗಳ ರಾಜಕಾರಣ’ವನ್ನು(Politics of Emotion) ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಅಂದರೆ ಭಾವಗಳು ಕೇವಲ ವೈಯಕ್ತಿಕವಲ್ಲ. ಅವು ಸಾಮಾಜಿಕ ಶಕ್ತಿಗಳಾಗಿ ಕೆಲಸ ಮಾಡುತ್ತವೆ. ಅವಮಾನ, ನೋವು, ಸಿಟ್ಟು ಮತ್ತು ಪ್ರೀತಿಯಂತಹ Affects ಒಂದು ಸಮುದಾಯದಲ್ಲಿ ಹೇಗೆ ಹರಡುತ್ತವೆ? ಹಾಗೆಯೇ ಅವು ಎಂತಹ ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಲ್ಲವು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ.

ಈ ದೃಷ್ಟಿಕೋನದಿಂದ ಬಾನು ಮುಷ್ತಾಕ್ ಅವರ ಕಥೆಗಳಲ್ಲಿನ ಪಾತ್ರಗಳ ಭಾವನಾತ್ಮಕ ಸ್ಥಿತಿಗಳನ್ನು ಸಾಮಾಜಿಕ ಚೌಕಟ್ಟಿನಲ್ಲಿಟ್ಟು ನೋಡಬಹುದಾಗಿದೆ. ‘ಬೆಂಕಿ ಮಳೆ’ ಕಥೆಯಲ್ಲಿ ಈ ಪರಿಕಲ್ಪನೆ ಸ್ಪಷ್ಟವಾಗಿ ಕಾಣುತ್ತದೆ. ಒಬ್ಬ ಮುಸ್ಲಿಂ ಯುವಕನ ಶವಕ್ಕೆ ಹಿಂದೂ ಸ್ಮಶಾನದಲ್ಲಿ ಸಂಸ್ಕಾರವಾಯಿತು ಎಂಬ ಸುದ್ದಿ ಹರಡಿದಾಗ, ಅದು ಕೇವಲ ಒಂದು ಮಾಹಿತಿಯಾಗಿ ಉಳಿಯುವುದಿಲ್ಲ. ಅದು ಇಡೀ ಸಮುದಾಯದಲ್ಲಿ ಅವಮಾನ ಮತ್ತು ನೋವಿನ ಸಾಮೂಹಿಕ ಭಾವವನ್ನು ಸೃಷ್ಟಿಸುತ್ತದೆ. ಈ ಸಾಮೂಹಿಕ ಭಾವವೇ ಮುತವಲ್ಲಿ ಮತ್ತು ಯುವಕರನ್ನು ಕ್ರಿಯಾಶೀಲರನ್ನಾಗಿಸುತ್ತದೆ. ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸದ ಮುತವಲ್ಲಿ, ಈ ಸಾಮೂಹಿಕ ಭಾವದ ಒತ್ತಡಕ್ಕೆ ಮಣಿದು ಹೋರಾಟಕ್ಕೆ ಮುಂದಾಗುತ್ತಾನೆ. ಇಲ್ಲಿ, ‘ಅವಮಾನ’ ಎಂಬ ಭಾವವು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಕೆಲಸ ಮಾಡುತ್ತದೆ.

‘ಸಾವು’ ಕಥೆಯ ಸಬಾ ಅನುಭವಿಸುವ ದುಃಖ ತೀವ್ರವಾಗಿ ವೈಯಕ್ತಿಕವಾದದ್ದು. ಆದರೆ ಕಥೆಯ ನಿರೂಪಣೆಯು ಆ ನೋವನ್ನು, ಆ ತಳಮಳವನ್ನು ಓದುಗರಿಗೆ ದಾಟಿಸುತ್ತದೆ. ಓದುಗರು ಕೂಡ ಅವಳ ದುಃಖದಲ್ಲಿ ಪಾಲುದಾರರಾಗುತ್ತಾರೆ. ಇಲ್ಲಿ ನೋವು ಕೇವಲ ಪಾತ್ರದ ಸ್ಥಿತಿಯಾಗಿರದೆ, ಓದುಗ ಮತ್ತು ಕೃತಿಯ ನಡುವೆ ಹರಿಯುವ ಒಂದು ಭಾವನಾತ್ಮಕ(Emotion) ಶಕ್ತಿಯಾಗುತ್ತದೆ.

ಅಧೀನರ ಪ್ರತಿರೋಧ

ಅಧಿಕಾರದ ಬೃಹತ್ ರಚನೆಗಳೆದುರು, ಬಾನು ಅವರ ಸ್ತ್ರೀಪಾತ್ರಗಳ ಪ್ರತಿರೋಧವು ನೇರ ಸಂಘರ್ಷ ಅಥವಾ ಘೋಷಣೆಗಳ ರೂಪದಲ್ಲಿ ವ್ಯಕ್ತವಾಗುವುದಿಲ್ಲ. ಬದಲಿಗೆ, ಗಾಯತ್ರಿ ಸ್ಪಿವಾಕ್ ಅಂತಹ ಚಿಂತಕರಿಂದ ಪ್ರೇರಿತವಾದ ಅಧೀನರ ಅಧ್ಯಯನ(Subaltern Studies) ವಿಶ್ಲೇಷಿಸುವಂತೆ, ಅದು ಸೂಕ್ಷ್ಮ, ಮೌನ, ಸಾಂಕೇತಿಕ ಮತ್ತು ದೈನಂದಿನ ನೆಲೆಗಳಲ್ಲಿ ಚಿಗುರೊಡೆಯುತ್ತದೆ. ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಎದುರಿಸಲು ಸಾಧ್ಯವಾಗದಿದ್ದಾಗ, ತಮ್ಮ ದನಿಯ ಮೂಲಕವೇ ಪ್ರತಿಭಟಿಸುವ ಅನನ್ಯ ಮಾರ್ಗಗಳನ್ನು ಈ ಪಾತ್ರಗಳು ಕಂಡುಕೊಳ್ಳುತ್ತವೆ. ‘ಕರಿ ನಾಗರಗಳು’ ಕಥೆಯ ಅಂತ್ಯದಲ್ಲಿ ಮೊಹಲ್ಲಾದ ಹೆಂಗಸರು ತೋರುವ ಸಾಮೂಹಿಕ ಪ್ರತಿರೋಧವು ಕನ್ನಡ ಸಾಹಿತ್ಯದಲ್ಲಿಯೇ ಒಂದು ಅನನ್ಯ ಚಿತ್ರಣ. ಗಂಡನ ಮತ್ತು ಮುತವಲ್ಲಿಯ ಅನ್ಯಾಯದ ವಿರುದ್ಧ ನೇರವಾಗಿ ಮಾತನಾಡಲು ಸಾಧ್ಯವಾಗದಿದ್ದಾಗ, ಅವರು ತಮ್ಮ ಅಂಗಳದ ಕೋಳಿಗೆ ಬೈಯುವ ಮೂಲಕ, ಶಾಪ ಹಾಕುವ ಮೂಲಕ ಪರೋಕ್ಷವಾಗಿ ತಮ್ಮ ಆಕ್ರೋಶ ಮತ್ತು ತಿರಸ್ಕಾರವನ್ನು ವ್ಯಕ್ತಪಡಿಸುತ್ತಾರೆ. ಇದೊಂದು ಶ್ರೇಷ್ಠ ದರ್ಜೆಯ ಅಧೀನರ ರಾಜಕಾರಣ(Subaltern Politics). ವ್ಯವಸ್ಥೆಯು ಕಸಿದುಕೊಂಡ ದನಿಯನ್ನು, ಸಾಂಕೇತಿಕ ಕ್ರಿಯೆಯ ಮೂಲಕ ಮರಳಿ ಪಡೆಯುವ ಒಂದು ಪ್ರಬಲ ಪ್ರಯತ್ನವಿದು.

‘ಹೃದಯದ ತೀರ್ಪು’ ಕಥೆಯಲ್ಲಿ ಮಹಬೂಬ್ ಬೀ ತನ್ನ ಇಡೀ ಬದುಕನ್ನು ಮಗನಿಗಾಗಿ ತ್ಯಾಗ ಮಾಡಿದರೂ, ಕೊನೆಯಲ್ಲಿ ಸೊಸೆಯ ಪರವಾಗಿ ನಿಲ್ಲುವ ಮೂಲಕ, ತನ್ನ ಬದುಕಿನ ನಿಯಂತ್ರಣವನ್ನು ಅನಿರೀಕ್ಷಿತವಾಗಿ ತನ್ನ ಕೈಗೆ ತೆಗೆದುಕೊಳ್ಳುತ್ತಾಳೆ. ಅವಳ ತ್ಯಾಗವೇ ಅವಳ ಅಂತಿಮ ಪ್ರತಿರೋಧದ ಅಸ್ತ್ರವಾಗುತ್ತದೆ. ‘ತೊಲೆಗಂಬವಿಲ್ಲದ ಗಗನ’ ಕಥೆಯ ಆಧುನಿಕ, ಶಿಕ್ಷಿತ ನಾಯಕಿ, ಪ್ರೀತಿಯ ಹೆಸರಿನಲ್ಲಿ ನಡೆಯುವ ಆರ್ಥಿಕ ಮತ್ತು ಭಾವನಾತ್ಮಕ ಶೋಷಣೆಯ ಸಂಬಂಧವನ್ನು ಕಡಿದುಕೊಂಡು ಹೊರನಡೆಯುವ ನಿರ್ಧಾರವು, ಪ್ರಜ್ಞಾಪೂರ್ವಕ ಪ್ರತಿರೋಧದ ಮತ್ತೊಂದು ಸ್ವರೂಪ. ಕುಟುಂಬದಿಂದ ಬಹಿಷ್ಕೃತಳಾದ ‘ಹುಟ್ಟು’ ಕಥೆಯ ನಿಶಾತ್, ತನ್ನ ಮಗಳನ್ನು ತವರಿಗೆ ಕಳುಹಿಸುವುದು ಕೇವಲ ಒಂದು ಭಾವನಾತ್ಮಕ ಕ್ರಿಯೆಯಲ್ಲ, ಅದು ತನ್ನ ಅಸ್ತಿತ್ವವನ್ನು ಮತ್ತು ಹಕ್ಕನ್ನು ಸ್ಥಾಪಿಸುವ ಒಂದು ದಿಟ್ಟ ರಾಜಕೀಯ ನಡೆ. ಈ ಎಲ್ಲಾ ಪ್ರತಿರೋಧದ ನೆಲೆಗಳು, ದಮನದ ನಡುವೆಯೂ ಚಿಗುರುವ ಮಾನವ ಚೈತನ್ಯದ ಮತ್ತು ಅಸ್ಮಿತೆಯ ಹುಡುಕಾಟದ ಸಂಕೇತಗಳಾಗಿವೆ.

ಶಿಕ್ಷಣದ ಬೆಳಕು ಮತ್ತು ಅಧಿಕಾರದ ಸ್ಥಳದ ರಾಜಕಾರಣ

ಈ ಎಲ್ಲಾ ಸಾಮಾಜಿಕ ಸಂಕೋಲೆಗಳಿಂದ ಬಿಡುಗಡೆ ಹೊಂದುವ ಪ್ರಮುಖ ಮಾರ್ಗವಾಗಿ ಶಿಕ್ಷಣವು ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ನಿರಂತರವಾಗಿ ಪ್ರತಿಧ್ವನಿಸುತ್ತದೆ. ಶಿಕ್ಷಣವು ಕೇವಲ ಅಕ್ಷರ ಜ್ಞಾನವಲ್ಲ, ಅದೊಂದು ವಿಮರ್ಶಾತ್ಮಕ ಪ್ರಜ್ಞೆ ಮತ್ತು ಆತ್ಮಗೌರವದ ಸಂಕೇತ. ಶಿಕ್ಷಣ ವಂಚಿತರಾದ ಮೆಹರುನ್ ಮತ್ತು ಅಶ್ರಫ್, ವ್ಯವಸ್ಥೆಯ ಕುತರ್ಕಗಳೆದುರು ನಿರುತ್ತರರಾಗಿ ದುರಂತವನ್ನು ಅನುಭವಿಸಿದರೆ, ಶಿಕ್ಷಿತಳಾದ ಜುಲೇಖಾ ಬೇಗಮ್ ವ್ಯವಸ್ಥೆಯನ್ನು ಪ್ರಶ್ನಿಸಲು ಮತ್ತು ಇತರ ಹೆಣ್ಣುಮಕ್ಕಳಿಗೆ ದಾರಿದೀಪವಾಗಲು ಸಮರ್ಥಳಾಗುತ್ತಾಳೆ. ‘ಎದೆಯ ಹಣತೆ’ಯಲ್ಲಿ ಮೆಹರುನ್‌ಳು, ತನ್ನ ಶಿಕ್ಷಣವನ್ನು ಮೊಟಕುಗೊಳಿಸಿದ್ದೇ ತನ್ನ ದುರಂತಕ್ಕೆ ಕಾರಣವೆಂದು ಪರಿತಪಿಸುವುದು, ಶಿಕ್ಷಣದ ನಿರಾಕರಣೆಯು ಹೆಣ್ಣಿನ ರೆಕ್ಕೆಗಳನ್ನು ಕತ್ತರಿಸುವ ಒಂದು ಪಿತೃಪ್ರಧಾನ ತಂತ್ರ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಅಧಿಕಾರದ ಸ್ವರೂಪವು ಸ್ಥಳ ಬದಲಾದಂತೆ ಹೇಗೆ ಬದಲಾಗುತ್ತದೆ ಎಂಬುದನ್ನು ಅವರ ಕಥೆಗಳು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತವೆ. ಇಲ್ಲಿ ಸ್ಥಳದ ರಾಜಕಾರಣವು(Spatial Politics) ಪ್ರಮುಖ ಪಾತ್ರ ವಹಿಸುತ್ತದೆ. ಮನೆಯ ಅಂಗಳವು ಹೆಣ್ಣಿನ ದುಃಖ, ಸಂಕಟ ಮತ್ತು ಮೌನ ಪ್ರತಿರೋಧದ ರಂಗಸ್ಥಳವಾದರೆ, ಮಸೀದಿಯ ಕಟ್ಟೆಯು ನ್ಯಾಯ ನಿರಾಕರಣೆಯ ಮತ್ತು ಪುರುಷ ಅಧಿಕಾರದ ಪ್ರದರ್ಶನದ ಕೇಂದ್ರವಾಗುತ್ತದೆ. ಬೀದಿಯು ಅವಮಾನ ಮತ್ತು ಸಾಮಾಜಿಕ ಬಹಿಷ್ಕಾರದ ಸಂಕೇತವಾಗುತ್ತದೆ. ‘ಶಾಯಿಸ್ತ ಮಹಲ್’ ಎಂಬುದು ಕೇವಲ ಒಂದು ಮನೆಯಲ್ಲ, ಅದು ಗಂಡಿನ ಒಡೆತನದ ಮತ್ತು ಹೆಣ್ಣಿನ ಅಸ್ತಿತ್ವವನ್ನು ಅಳಿಸಿಹಾಕುವ ಒಂದು ರೂಪಕ. ಹೀಗೆ, ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳು ಹೇಗೆ ಲಿಂಗ ರಾಜಕಾರಣದಿಂದ ನಿರ್ಮಿಸಲ್ಪಟ್ಟಿವೆ ಮತ್ತು ಹೆಣ್ಣಿನ ಚಲನವಲನವನ್ನು ನಿಯಂತ್ರಿಸಲು ಬಳಸಲ್ಪಡುತ್ತವೆ ಎಂಬುದನ್ನು ಅವರ ಕಥನಗಳು ಶೋಧಿಸುತ್ತವೆ.

ಘನತೆಯ ಕಥನಗಳು

ಬಾನು ಮುಷ್ತಾಕ್ ಅವರ ಕಥಾಲೋಕವು ಪಿತೃಪ್ರಧಾನ ವ್ಯವಸ್ಥೆಯ ಕತ್ತಲೆಯಲ್ಲಿ ಮಿನುಗುವ ‘ಎದೆಯ ಹಣತೆ’ಯೊಂದರ ಸೂಕ್ಷ್ಮ, ಸಂಕೀರ್ಣ ಮತ್ತು ನಿರ್ದಾಕ್ಷಿಣ್ಯ ಅನಾವರಣವಾಗಿದೆ. ವಂಶದ ಮರ್ಯಾದೆ, ಧಾರ್ಮಿಕ ಅಧಿಕಾರ ಮತ್ತು ಕೌಟುಂಬಿಕ ಪ್ರತಿಷ್ಠೆಯೆಂಬ ಎಣ್ಣೆಯಿಂದಲೇ ಉರಿಯುವ ಇಲ್ಲಿನ ಗಂಡು ಜಗತ್ತಿನ ಹಣತೆಯು, ಕರುಣೆ ಅಥವಾ ನ್ಯಾಯದ ಬೆಳಕನ್ನು ಸೂಸುವ ಬದಲು, ಹೆಣ್ಣಿನ ಅಸ್ತಿತ್ವ, ಅಸ್ಮಿತೆ ಮತ್ತು ಕನಸುಗಳನ್ನೇ ದಹಿಸಿಬಿಡುವ ಕಠೋರ ಜ್ವಾಲೆಯಾಗಿ ಮಾರ್ಪಡುತ್ತದೆ. ಅವರ ಕಥನಗಳು ಪುರುಷ ಪ್ರಧಾನ ವ್ಯವಸ್ಥೆಯ ಅಧಿಕಾರದ ಸ್ವರೂಪಗಳನ್ನು ಮತ್ತು ಅದರ ಉತ್ಪನ್ನಗಳಾದ ಗಂಡುತನದ ವಿಭಿನ್ನ ಮುಖಗಳನ್ನು ಬಯಲಿಗೆಳೆಯುವುದರ ಜೊತೆಗೆ, ಆ ವ್ಯವಸ್ಥೆಯ ಬಿರುಕುಗಳಲ್ಲಿಯೇ ಅರಳುವ ಪ್ರತಿರೋಧದ ಹೂವುಗಳನ್ನು ಮತ್ತು ಆರದ ಭರವಸೆಯ ಹಣತೆಗಳನ್ನು ಶೋಧಿಸುತ್ತವೆ.

ಆದರೆ, ಈ ದಮನದ ಗಾಳಿಗೆ ಪ್ರತಿಯಾಗಿ, ಅವರ ಸ್ತ್ರೀಪಾತ್ರಗಳ ಎದೆಯ ಹಣತೆಯು ನಿರಂತರವಾಗಿ ನಲುಗಿದರೂ ಪೂರ್ಣವಾಗಿ ಆರದ ಜ್ಯೋತಿಯಾಗಿ ಉಳಿಯುತ್ತದೆ. ಅವರ ಸಾಹಿತ್ಯವು ಕೇವಲ ನಿರಾಶೆಯ ಕತ್ತಲೆಯಲ್ಲಿ ಕೊನೆಗೊಳ್ಳುವುದಿಲ್ಲ. ‘ಹುಟ್ಟು’ ಕಥೆಯ ಸಯ್ಯದ್ ಅಹಮದ್ ಅವರಲ್ಲಿ ಅಂತಿಮವಾಗಿ ‘ಮರ್ಯಾದೆ’ಯ ಕಠೋರ ಹಣತೆ ಆರಿ, ‘ವಾತ್ಸಲ್ಯ’ದ ಸಹಜ ಹಣತೆ ಹೊತ್ತಿಕೊಳ್ಳುವ ಒಂದು ಕ್ಷಣದಲ್ಲಿ ಮತ್ತು ಮೆಹರುನ್‌ನಳ ಮಗಳು ಸಲ್ಮಾಳಂತಹ ಮುಂದಿನ ಪೀಳಿಗೆಯ ಪಾತ್ರಗಳಲ್ಲಿ ಬದಲಾವಣೆಯ ಭರವಸೆಯ ಕಿಡಿಯನ್ನು ಲೇಖಕಿ ಜೀವಂತವಾಗಿರಿಸುತ್ತಾರೆ.

ಡಾ. ರವಿ ಎಂ ಸಿದ್ಲಿಪುರ

ಇವರು ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ- ಪ್ರಜಾಪ್ರಭುತ್ವದ ಅಂತರಾತ್ಮ ಮತ್ತು ಸೌಂದರ್ಯದ ಬಿಕ್ಕಟ್ಟು

More articles

Latest article

Most read