ನವದೆಹಲಿ: ರಾಕಿಂಗ್ ಸ್ಟಾರ್ ಯಶ್ ಇದೇ ಮೊದಲ ಬಾರಿಗೆ ಜನಪ್ರಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ನಿರೂಪಕ ರಜತ್ ಶರ್ಮಾ ಕೇಳಿದ ಹಲವು ನೇರ ಹಾಗೂ ವಿವಾದಾತ್ಮಕ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಕನ್ನಡ ಚಿತ್ರರಂಗದಿಂದ ‘ಆಪ್ ಕಿ ಅದಾಲತ್’ಗೆ ಮೊದಲ ಬಾರಿಗೆ ಕನ್ನಡ ನಟರೊಬ್ಬರು ಅತಿಥಿಯಾಗಿ ಭಾಗವಹಿಸಿರುವುದು ವಿಶೇಷವಾಗಿದೆ.
ಕಾರ್ಯಕ್ರಮದಲ್ಲಿ ಯಶ್ ಅವರ ಸಿನಿಮಾ ವೃತ್ತಿಜೀವನ, ಕೆಜಿಎಫ್ ಯಶಸ್ಸು, ‘ಟಾಕ್ಸಿಕ್’ ಸಿನಿಮಾ, ಅಭಿಮಾನಿಗಳೊಂದಿಗಿನ ಸಂಬಂಧ, ರಶ್ಮಿಕಾ ಮಂದಣ್ಣ ಅವರ ಹಳೆಯ ‘ಮಿಸ್ಟರ್ ಶೋಆಫ್’ ಹೇಳಿಕೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬಂದಿವೆ.
‘ನನ್ನನ್ನು ಬೇರೆಯವರ ಅಭಿಪ್ರಾಯ ನಿರ್ಧರಿಸುವುದಿಲ್ಲ’
ರಶ್ಮಿಕಾ ಮಂದಣ್ಣ ಅವರು 2017ರಲ್ಲಿ ಯಶ್ ಅವರನ್ನು ‘ಮಿಸ್ಟರ್ ಶೋಆಫ್’ ಎಂದು ಕರೆದಿದ್ದ ಹಳೆಯ ಹೇಳಿಕೆಯನ್ನು ರಜತ್ ಶರ್ಮಾ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಯಶ್, ಬೇರೆಯವರು ತಮ್ಮ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾರೆ ಎಂಬುದು ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂಬ ಅರ್ಥದಲ್ಲಿ ಉತ್ತರಿಸಿದ್ದಾರೆ.
ಯಾರಾದರೂ ತಮ್ಮ ಬಗ್ಗೆ ಒಂದು ಅಭಿಪ್ರಾಯ ಹೊಂದಿದ್ದರೆ ಅದನ್ನು ಹಿಡಿದುಕೊಂಡು ಬದುಕಲು ಸಾಧ್ಯವಿಲ್ಲ. ತನ್ನ ಬಗ್ಗೆ ತಾನೇ ಹೊಂದಿರುವ ನಂಬಿಕೆಯೇ ಮುಖ್ಯ ಎಂಬ ಸಂದೇಶವನ್ನು ಯಶ್ ನೀಡಿದ್ದಾರೆ. ರಶ್ಮಿಕಾ ಅವರ ಆ ಹೇಳಿಕೆ ನಂತರ ಬೇರೆ ಸಂದರ್ಭಗಳಲ್ಲಿ ಸ್ಪಷ್ಟೀಕರಣಕ್ಕೂ ಒಳಗಾಗಿತ್ತು.
‘ನನ್ನ ಹಿಂದಿಯಲ್ಲಿ ತಪ್ಪಿದ್ದರೆ ಕ್ಷಮಿಸಿ’
ಕಾರ್ಯಕ್ರಮದ ಮತ್ತೊಂದು ವಿಶೇಷತೆ ಯಶ್ ತಮ್ಮ ಮಾತೃಭಾಷೆ ಕನ್ನಡವಾಗಿದ್ದರೂ ಇಡೀ ಕಾರ್ಯಕ್ರಮದಲ್ಲಿ ಹಿಂದಿಯಲ್ಲೇ ಮಾತನಾಡಲು ಪ್ರಯತ್ನಿಸಿರುವುದು. ಕೆಲೆವೆಡೆ ಅನಿವಾರ್ಯವಾಗಿ ಇಂಗ್ಲಿಷ್ ಬಳಸಿದ್ದಾರೆ.
‘ನೀವು ಎಲ್ಲಿಗೆ ಹೋದರೂ ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕಾದರೆ ಆ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಬೇಕು’ ಎಂಬ ನಿಲುವಿನೊಂದಿಗೆ ತಾವು ಹಿಂದಿಯಲ್ಲಿ ಮಾತನಾಡುತ್ತಿರುವುದಾಗಿ ಯಶ್ ಹೇಳಿದ್ದಾರೆ. ಹಿಂದಿಯಲ್ಲಿ ತಪ್ಪುಗಳಾದರೆ ಕ್ಷಮಿಸುವಂತೆ ಆರಂಭದಲ್ಲೇ ಮನವಿ ಮಾಡಿದ್ದಾರೆ.
‘ಅಭಿಮಾನಿಗಳಿಗೆ ಫೋಟೋ ಕೊಡಲು ನಾನು ಯಾವತ್ತೂ ಹಿಂದೇಟು ಹಾಕುವುದಿಲ್ಲ’
ಅಭಿಮಾನಿಗಳೊಂದಿಗೆ ತಮ್ಮ ಸಂಬಂಧದ ಬಗ್ಗೆಯೂ ಯಶ್ ಮಾತನಾಡಿದ್ದಾರೆ. ನೂರಾರು ಅಭಿಮಾನಿಗಳು ಫೋಟೋಗಾಗಿ ಕಾಯುತ್ತಿದ್ದ ಸಂದರ್ಭವನ್ನು ಪ್ರಸ್ತಾಪಿಸಿದಾಗ, ಅಭಿಮಾನಿಗಳಿಗೆ ವೈಯಕ್ತಿಕ ಫೋಟೋ ನೀಡುವುದರಿಂದ ಅವರಿಗೆ ಜೀವನಪೂರ್ತಿ ನೆನಪಾಗಿ ಉಳಿಯುತ್ತದೆ ಎಂದು ಯಶ್ ಹೇಳಿದ್ದಾರೆ.
ತಮಗೆ ಸಮಯವಿದ್ದಾಗ ಬೆಳಗ್ಗೆಯಿಂದ ಸಂಜೆಯವರೆಗೂ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡಿರುವ ಸಂದರ್ಭಗಳಿವೆ. ಆದರೆ ಕೆಲಸದ ಒತ್ತಡದಿಂದ ಕೆಲವೊಮ್ಮೆ ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದೂ ಅವರು ವಿವರಿಸಿದ್ದಾರೆ.
ಕಾರ್ಯಕ್ರಮದ ಚಿತ್ರೀಕರಣ ಮುಗಿದ ಬಳಿಕವೂ ಯಶ್ ಸ್ಟುಡಿಯೋದಲ್ಲಿದ್ದ ಪ್ರೇಕ್ಷಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ರಜತ್ ಶರ್ಮಾ ಅವರ ಕಾರ್ಯಕ್ರಮದ ಮುನ್ನೋಟದಲ್ಲಿ ಉಲ್ಲೇಖಿಸಿದ್ದಾರೆ.
ಅಭಿಮಾನಿಯ ಆತ್ಮಹತ್ಯೆ ಬಗ್ಗೆ ಯಶ್ ನೀಡಿದ ಮಹತ್ವದ ಉತ್ತರ
ಯಶ್ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿತು ರಜತ್ ಶರ್ಮಾ ಪ್ರಶ್ನೆ ಕೇಳಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ತಮ್ಮ ಅಂತಿಮ ಯಾತ್ರೆಗೆ ಯಶ್ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಬೇಕು ಎಂಬ ಬಯಕೆಯನ್ನು ಅಭಿಮಾನಿ ವ್ಯಕ್ತಪಡಿಸಿದ್ದ.
ಸಿದ್ದರಾಮಯ್ಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರೂ ಯಶ್ ಹೋಗಿರಲಿಲ್ಲ. ಇದರ ಹಿಂದಿನ ಕಾರಣವನ್ನು ವಿವರಿಸಿದ ಯಶ್, ತಾವು ಅಂತ್ಯಕ್ರಿಯೆಗೆ ಹೋದರೆ ಇಂತಹ ಕೃತ್ಯವನ್ನು ಬೇರೆ ಯಾರಾದರೂ ಅನುಸರಿಸುವ ತಪ್ಪು ಸಂದೇಶ ಹೋಗಬಹುದು ಎಂಬ ಆತಂಕ ತಮ್ಮಲ್ಲಿತ್ತು ಎಂದು ಹೇಳಿದ್ದಾರೆ.
‘ನಾನು ಬಂದರೆ ನನ್ನ ಅಂತಿಮ ಯಾತ್ರೆಗೆ ಯಶ್ ಬರುತ್ತಾರೆ’ ಎಂಬ ತಪ್ಪು ಮನಸ್ಥಿತಿಯನ್ನು ಯಾರಲ್ಲೂ ಬೆಳೆಸಬಾರದು. ಯಾರಾದರೂ ಜೀವನದಲ್ಲಿ ಏನನ್ನಾದರೂ ಸಾಧಿಸಿ ತಮ್ಮನ್ನು ಆಹ್ವಾನಿಸಿದರೆ ಸಾಧ್ಯವಾದರೆ ಖಂಡಿತ ಹೋಗುತ್ತೇನೆ; ಆದರೆ ಆತ್ಮಹತ್ಯೆಯನ್ನು ಪ್ರೋತ್ಸಾಹಿಸುವ ರೀತಿಯ ಉದಾಹರಣೆ ಸೃಷ್ಟಿಸಲು ತಾವು ಬಯಸುವುದಿಲ್ಲ ಎಂಬುದು ಯಶ್ ಅವರ ನಿಲುವಾಗಿದೆ.
‘ಯಾರು ಮುಂದೆ, ಯಾರು ಹಿಂದೆ ಎಂಬುದು ಮುಖ್ಯವಲ್ಲ’
ತಮ್ಮ ಜೀವನದ ತತ್ವದ ಬಗ್ಗೆಯೂ ಯಶ್ ಸ್ಪಷ್ಟವಾಗಿ ಮಾತನಾಡಿದ್ದಾರೆ.
‘ಜೀವನದಲ್ಲಿ ಕಳೆದುಕೊಳ್ಳಲು ಏನೂ ಇಲ್ಲ, ಹಾಗಾಗಿ ಭಯಪಡಲು ಏನೂ ಇಲ್ಲ’ ಎಂಬ ಅರ್ಥದಲ್ಲಿ ಮಾತನಾಡಿದ ಅವರು, ಈಗ ಯಾರು ಮುಂದೆ ಇದ್ದಾರೆ, ಯಾರು ಹಿಂದೆ ಇದ್ದಾರೆ ಎಂಬುದು ಮುಖ್ಯವಲ್ಲ. ದೀರ್ಘಕಾಲ ಉಳಿದುಕೊಂಡು ಜನರ ಹೃದಯದಲ್ಲಿ ಯಾರು ಉಳಿಯುತ್ತಾರೆ ಎಂಬುದೇ ಮುಖ್ಯ ಎಂದು ಹೇಳಿದ್ದಾರೆ.
‘ಟಾಕ್ಸಿಕ್’ ಬಗ್ಗೆಯೂ ಮುಕ್ತ ಮಾತು
ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಸುತ್ತ ಕೇಳಿಬಂದಿರುವ ಚರ್ಚೆಗಳ ಬಗ್ಗೆಯೂ ಕಾರ್ಯಕ್ರಮದಲ್ಲಿ ಪ್ರಶ್ನೆಗಳು ಎದುರಾಗಿವೆ. ಸಿನಿಮಾದಲ್ಲಿ ಹಿಂಸೆ, ರಕ್ತಪಾತ, ಶಸ್ತ್ರಾಸ್ತ್ರಗಳು ಹಾಗೂ ಲೈಂಗಿಕ ಅಂಶಗಳ ಬಳಕೆಯ ಬಗ್ಗೆ ಯಶ್ ಮಾತನಾಡಿದ್ದಾರೆ.
ಚಿತ್ರದ ವಿಷಯವನ್ನು ಕೇವಲ ವಿವಾದದ ದೃಷ್ಟಿಯಿಂದ ನೋಡದೆ, ಅದರ ಕಥೆ ಮತ್ತು ಪಾತ್ರಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕು ಎಂಬ ನಿಲುವನ್ನು ಯಶ್ ವ್ಯಕ್ತಪಡಿಸಿರುವುದು ಸಂದರ್ಶನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ಒಟ್ಟಿನಲ್ಲಿ, ‘ಆಪ್ ಕಿ ಅದಾಲತ್’ನಲ್ಲಿ ಯಶ್ ಅವರ ಸಂದರ್ಶನವು ಕೇವಲ ‘ಟಾಕ್ಸಿಕ್’ ಚಿತ್ರದ ಪ್ರಚಾರಕ್ಕೆ ಸೀಮಿತವಾಗದೆ, ಅವರ ವೈಯಕ್ತಿಕ ನಂಬಿಕೆಗಳು, ಅಭಿಮಾನಿಗಳ ಮೇಲಿನ ಜವಾಬ್ದಾರಿ, ಟೀಕೆಗಳಿಗೆ ಪ್ರತಿಕ್ರಿಯಿಸುವ ರೀತಿ ಹಾಗೂ ಪ್ಯಾನ್-ಇಂಡಿಯಾ ನಟನಾಗಿ ಅವರ ಪ್ರಯಾಣದ ಬಗ್ಗೆ ಗಮನ ಸೆಳೆದಿದೆ. ‘ಕೆಜಿಎಫ್’ ಮೂಲಕ ದೇಶಾದ್ಯಂತ ಖ್ಯಾತಿ ಪಡೆದ ಕನ್ನಡದ ನಟ ಯಶ್, ಈ ಕಾರ್ಯಕ್ರಮದ ಮೂಲಕ ಹಿಂದಿ ಪ್ರೇಕ್ಷಕರೊಂದಿಗೂ ಮತ್ತಷ್ಟು ನೇರ ಸಂಪರ್ಕ ಸಾಧಿಸಿದ್ದಾರೆ.
ಆಪ್ ಕಿ ಅದಾಲತ್’ನಲ್ಲಿ ಜನಮನ ಗೆದ್ದ ಯಶ್: ಅಭಿಮಾನಿ ಆತ್ಮ *ತ್ಯೆ ಯಿಂದ ‘ಟಾಕ್ಸಿಕ್’ ವಿವಾದದವರೆಗೆ ಖಡಕ್ ಉತ್ತರ

