ಒಬ್ಬ ಮನುಷ್ಯಳಾಗಿ ತಾನು ನಂಬಿದ ತತ್ವಸಿದ್ಧಾಂತಗಳ ಮಿತಿಯಲ್ಲಿ ಎಷ್ಟುಮಾತ್ರ ತನ್ನನ್ನು ಹೊಂದಾಣಿಕೆಗಳಿಗೆ ವಿಸ್ತರಿಸಿಕೊಳ್ಳಬಹುದಿತ್ತೋ, ಅದನ್ನವರು ಪ್ರಾಮಾಣಿಕವಾಗಿ ಮಾಡುತ್ತಿದ್ದರು. ಅಷ್ಟಕ್ಕೂ ಮನುಷ್ಯನ ನಿರೀಕ್ಷೆಗಳಿಗೆ ಗಡಿಗಳಾದರೂ ಎಲ್ಲಿರುತ್ತವೆ? ಅಂತಹ ನಿರೀಕ್ಷೆಗಳ ಮಾಪನದಲ್ಲಿ ಗೌರಿ ಒಬ್ಬ failed entrepreneur ಆಗಿ, undisciplined ಸಂಪಾದಕಿಯಾಗಿ, incomplete journalist ಆಗಿ ಗೋಚರಿಸುವ ಎಲ್ಲಾ ಅವಕಾಶಗಳನ್ನು ಈ ಸಮಾಜದ ಮುಂದೆ ಅವರು ಮುಕ್ತವಾಗಿಯೇ ಇರಿಸಿಹೋಗಿದ್ದಾರೆ – ಗಿರೀಶ್ ತಾಳಿಕಟ್ಟೆ, ಪತ್ರಕರ್ತರು.
ಅವತ್ತು ಗುರುವಾರ. ಸಾಮಾನ್ಯವಾಗಿ ಬುಧವಾರ ತಡರಾತ್ರಿ ಪತ್ರಿಕೆ ಮುದ್ರಣಕ್ಕೆ ಹೋಗುತ್ತಿದ್ದುದರಿಂದ ಗುರುವಾರ ಆಫೀಸಿನಲ್ಲಿ ರಜೆಯ ಮೂಡು. ಬಂಡಲ್‌ಗಳ ಡಿಸ್‌ಪ್ಯಾಚ್ ಕಾರಣಕ್ಕೆ ಮ್ಯಾನೇಜರ್ ರಾಜು, ಪ್ರಸಾದ್ ಮತ್ತು ಲಕ್ಷ್ಮಣ ಬಿಟ್ಟರೆ ಬೇರೆಯವರು ಅತ್ತ ಸುಳಿಯುತ್ತಿದ್ದುದು ಅಪರೂಪ. ಆದರೆ ಗೈಡ್ ಮಾಸಪತ್ರಿಕೆಯ ತಯಾರಿ ಮಾಡಬೇಕಿದ್ದುದರಿಂದ ನಾನು ಆ ನೀರಸ ಗುರುವಾರವೂ ಹಾಜರಾಗಿ ಕೆಲಸದಲ್ಲಿ ತಲ್ಲೀನನಾಗಿದ್ದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗೌರಿ ಮೇಡಂ ಕಾರು ಬಂದು ಪೋರ್ಟಿಕೊದಲ್ಲಿ ನಿಂತಿತು. ಮುದ್ರಣದ ಮಾರನೇ ದಿನ ಅವರು ಆಫೀಸಿಗೆ ಬರುತ್ತಿದ್ದುದು ವಿರಳ. ಹೋರಾಟ, ಸಭೆ, ಸಮಾರಂಭ, ಪ್ರತಿಭಟನೆ ಅಥವಾ ಏನಿಲ್ಲವೆಂದರೂ ಕೋರ್ಟ್ ಕೇಸುಗಳು ಅವರನ್ನು ಆಫೀಸಿನಿಂದ ದೂರ ಸೆಳೆದೊಯ್ಯುತ್ತಿದ್ದವು. ಹಾಗಾಗಿ ಅವತ್ತು ಅವರು ಆಫೀಸಿಗೆ ಬಂದಿದ್ದು ಕಂಡು ತುಸು ಅಚ್ಚರಿಯಾಯ್ತು. ಎಂದಿನಂತೆ ಕಾರು ಇಳಿದವರು, ತಮ್ಮ ಲಗೇಜು ಕೈಯಲ್ಲಿ ಹಿಡಿದು ಮೆಟ್ಟಿಲೇರಿ ತಮ್ಮ ಚೇಂಬರಿನತ್ತ ಹೋಗುವ ಮುನ್ನ, “ಏನ್ರೀ ಗಿರೀಶ್, ಇವತ್ತೂ ಆಫೀಸಿಗೆ ಬಂದಿದೀರಾ. ಮನೇಲೆ ಇರೋದು ತಾನೆ” ಅಂದರು.
ವಯಸ್ಸು, ಅನುಭವ, ಅರಿವು, ಬದ್ಧತೆ ಯಾವುದರಲ್ಲೂ ಅವರಿಗೆ ಸರಿಸಮನಲ್ಲದ ನಮ್ಮಂತಹ ಕಿರಿಯರನ್ನೂ ಅವರು ಬಹುವಚನದಲ್ಲೇ ಮಾತಾಡಿಸುತ್ತಿದ್ದರು. ತುಸು ಆತ್ಮೀಯವೆನಿಸಿದರೆ, ‘ಮರಿ’ ಎಂದು ಕಕ್ಕುಲಾತಿಯಿಂದ ಕರೆಯುತ್ತಿದ್ದರು. ಗೌರಿ ಮೇಡಂ ಕೇಳಿದ ಪ್ರಶ್ನೆಗೆ ನಾನು ಮುಜುಗರದಲ್ಲೆ, “ಗೈಡ್ ಮ್ಯಾಗಝೀನ್‌ನ ಕೆಲಸ ಇತ್ತು ಮೇಡಂ. ಅದಕ್ಕೋಸ್ಕರ ಬಂದೆ. ಮುಂದಿನ ವಾರ ಪತ್ರಿಕೆ ಜೊತೆ ಅದೂ ಮುದ್ರಣಕ್ಕೆ ಹೋಗಬೇಕಲ್ವಾ” ಅವರಿಗೆ ನೆನಪಿಸಿದೆ.
“ಇವತ್ತೇ ಪ್ರಿಂಟ್ ಗೆ ಹೋಗ್ಬೇಕಿಲ್ಲ ಅಲ್ವಾ, ಇನ್ನೂ ಒಂದು ವಾರ ಟೈಮ್ ಇದೆಯಲ್ವಾ, ನಿಧಾನಕ್ಕೆ ಮಾಡಿಕೊಂಡ್ರಾಗ್ತಿತ್ತು.” ಎಂದು ಹೇಳಿ ತಮ್ಮ ಚೇಂಬರಿನತ್ತ ನಡೆದರು.
ಒಬ್ಬ ಸಂಪಾದಕಿಯಾಗಿ, ಕಚೇರಿಯ ವ್ಯವಹಾರಿಕ ಒಡತಿಯಾಗಿ ತನ್ನ ಸಿಬ್ಬಂದಿಗೆ ‘ಕೆಲಕ್ಕೆ ಬರೋದರ ಬದಲು ರಜೆ ಹಾಕಿ ಮನೇಲಿರಬೇಕಿತ್ತು’ ಎಂದು ಹೇಳುವುದು ಬಹಳಷ್ಟು ಜನರಿಗೆ ವಿಚಿತ್ರ ಅನ್ನಿಸಬಹುದು. ಬಹುಶಃ, ಗೌರಿ ಲಂಕೇಶ್ ಪತ್ರಿಕೆಯ ಆಫೀಸ್‌ನ working environment ಹೇಗಿತ್ತು ಎಂಬುದನ್ನು ಕಣ್ಣಾರೆ ಕಂಡು, ಅನುಭವ ಇದ್ದವರಿಗೆ ಈ ಮಾತು ಅಚ್ಚರಿಯೆನಿಸದು. ಗೌರಿ ಆಫೀಸ್ ಎಂಬ ಪುಟ್ಟ ಪ್ರಪಂಚದ ವಿಶಿಷ್ಟವೇ ಅಂತದ್ದು.
ವಾರಕ್ಕೆ 72 ಗಂಟೆ ಕೆಲಸ ಮಾಡಿ ಎಂದು ಹೇಳುತ್ತಾ ನವಜೀತ ಪದ್ಧತಿಯನ್ನು ಪರೋಕ್ಷವಾಗಿ ಹೇರಲಾಗುತ್ತಿರುವ ಇಂದಿನ ಕಾರ್ಪೊರೇಟೀಕರಣವನ್ನು ಬರವಣಿಗೆ, ಭಾಷಣ, ಸಿದ್ಧಾಂತದಲ್ಲಿ ಮಾತ್ರವಲ್ಲದೆ ತಮ್ಮ ಬದುಕಿನಲ್ಲೂ ಗೌರಿ ಮೇಡಂ ವಿರೋಧಿಸಿಕೊಂಡು ಬಂದಂತವರು. ತಮ್ಮ ಆಫೀಸನ್ನು ಆ ಸೋಂಕಿನಿಂದ ದೂರವಿಡಲು ಸಾಕಷ್ಟು ಪ್ರಯತ್ನಪಟ್ಟವರು. ಈ ವಿಚಾರದ ಬಗ್ಗೆ ಅವರ ಆಪ್ತರಲ್ಲಿ ಅನೇಕರಿಗೆ ಅಪಸ್ವರವಿದ್ದುದು ನಿಜ. ಯಾಕೆಂದರೆ ಅಂತವರಿಗೆ ಗೌರಿಯವರ ವೈಖರಿ unorganized ಅಥವಾ undisciplined ಆಗಿ ಕಾಣಿಸುತ್ತಿದ್ದಿರಬಹುದು. ಒಂದು ಉದ್ಯಮ ಉಳಿದು ಬೆಳೆಯಬೇಕೆಂದರೆ operating ಶಿಸ್ತು ತುಂಬಾ ಮುಖ್ಯ. ಆದರೆ ಆ ಶಿಸ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?, ನಮ್ಮ ಉದ್ಯಮದ ಉದ್ದೇಶ ಮತ್ತು ವ್ಯಾಪ್ತಿಗೆ ತಕ್ಕಂತೆ ಹೇಗೆ ಅದನ್ನು tailoring ಮಾಡಿಕೊಳ್ಳುತ್ತೇವೆ? ಎನ್ನುವುದೂ ಅಷ್ಟೇ ಮುಖ್ಯ. ಆ ವಿಚಾರದಲ್ಲಿ ಗೌರಿ ಮೇಡಂಗೆ ಸ್ಪಷ್ಟತೆಯಿತ್ತು. ‘ಶಿಸ್ತು’ ಎನ್ನುವುದನ್ನು corporate ಶೈಲಿಯ copy-paste ರೀತಿ ಅವರು ಗ್ರಹಿಸಿರಲಿಲ್ಲ. ಎಲ್ಲಾ ಆಫೀಸುಗಳಲ್ಲಿ ಹೀಗಿರುತ್ತದೆ, ನಮ್ಮ ಆಫೀಸಿನಲ್ಲೂ ಹೀಗೇ ಇರಬೇಕು ಎಂದು ಬಯಸಿದವರಲ್ಲ. `ಗೌರಿ ಲಂಕೇಶ್ ಸಮೂಹ’ ಎನ್ನುವ ತನ್ನ ಪುಟಾಣಿ ಉದ್ಯಮದ ಉದ್ದೇಶವೇನು? ಅದರ ವ್ಯಾಪ್ತಿಯೇನು? ಆ ಉದ್ಯಮದಾಚೆಗೂ ನಾನು ಮಾಡಬೇಕಿರುವ ಹೊಣೆ ಎಂತದ್ದು? ಎಂದು ಅವರು ಅರಿತಿದ್ದರು.
ತಮ್ಮ ತಂದೆ ಲಂಕೇಶರಂತೆ ಗೌರಿ ಮೇಡಂ ಒಬ್ಬ ಮಹಾತ್ವಾಕಾಂಕ್ಷಿ ಉದ್ಯಮಿಯಾಗಿರಲಿಲ್ಲ. ಬದ್ಧತೆಗಳ ತೀವ್ರತೆಯಲ್ಲಿ ಇಬ್ಬರ ನಡುವೆ ವ್ಯತ್ಯಯಗಳಿದ್ದವು. ಬದುಕಿದ ಕಾಲಘಟ್ಟಗಳಲ್ಲೂ ಅಂತರಗಳಿದ್ದವು. ಲಂಕೇಶರು ಸಾಮಾಜಿಕ ಕಾರ್ಯಕರ್ತರಾದರೂ ಪ್ರಖ್ಯಾತ ಪತ್ರಕರ್ತರಾಗಿ ಛಾಪು ಮೂಡಿಸಿದರೆ; ಗೌರಿಯವರು ಪತ್ರಕರ್ತೆಯಾದರೂ ಹೆಮ್ಮೆಯ ಸಾಮಾಜಿಕ ಹೋರಾಟಗಾರ್ತಿಯಾಗಿ ದಾಖಲಾಗುತ್ತಾರೆ. ಪತ್ರಿಕೆಯನ್ನು ಒಂದು ಯಶಸ್ವಿ ಉದ್ಯಮವಾಗಿ ವಿಸ್ತರಿಸಿ ಅದರ ಮೂಲಕ ತಾವು ಬಯಸಿದ ಸಾಮಾಜಿಕ ಬದಲಾವಣೆಗೆ ಮುಂದಾಗುವ ಸ್ಪಷ್ಟ ಯೋಜನೆ ಲಂಕೇಶರಿಗಿತ್ತು. ಆದರೆ, ಗೌರಿಯವರ ಕಾಲಕ್ಕಾಗಲೇ, ಮುದ್ರಣ ಪತ್ರಿಕೋದ್ಯಮ ತನ್ನ ವ್ಯಾಪಾರಿ ವೈಭವವನ್ನು ಮಾತ್ರವಲ್ಲದೆ, ನೈತಿಕ ಘನತೆಯನ್ನೂ ಕಳೆದುಕೊಳ್ಳಲಾರಂಭಿಸಿತ್ತು. ಲಂಕೇಶರ ಮಗಳಾಗಿ ಪತ್ರಿಕೆಯನ್ನು ಮುಂದುವರೆಸುವ ಜರೂರಿನ ಜೊತೆಗೆ, ತಾನೊಬ್ಬ ಸ್ವಂತ ವ್ಯಕ್ತಿತ್ವದ ಗೌರಿಯಾಗಿ ಸಮಾಜದ ಒಳಿತಿಗೆ ಹೇಗೆ ತೆತ್ತುಕೊಳ್ಳಬೇಕು ಎಂಬುದರ ಬಗ್ಗೆ ಅವರು ನಿರ್ಧರಿಸಿಕೊಂಡಿದ್ದರು.

ಈ ಉದ್ದೇಶಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕೆಂದರೆ, ಪತ್ರಕರ್ತೆಯಾಗಿ ತನ್ನ ಆದ್ಯತೆ ಎಷ್ಟಿರಬೇಕು, ಹೋರಾಟಗಾರ್ತಿಯಾಗಿ ತನ್ನ ತೀವ್ರತೆ ಎಷ್ಟಿರಬೇಕು ಎಂಬುದನ್ನು ಮನಗಂಡಿದ್ದರು. ಆ ಆದ್ಯತೆಗೆ ಅನುಗುಣವಾಗಿ ತನ್ನ ಕಚೇರಿಯ ಶಿಸ್ತಿನ ವ್ಯಾಪ್ತಿಯನ್ನೂ ತೀರ್ಮಾನಿಸಿಕೊಂಡಿದ್ದರು. ಒಂದು ವಿಶಾಲ ಸಾಮಾಜಿಕ ಆಯಾಮಕ್ಕಾಗಿ ನಾವು ಕೆಲಸ ಮಾಡಬೇಕಿದೆ, ಅದಕ್ಕೆ ಪೂರಕವಾಗಿ ನಿರ್ದಿಷ್ಟ ಆರ್ಥಿಕ ಆಯಾಮದಿಂದಲೂ ದುಡಿಯಬೇಕಿದೆ. ಒಂದು ಪುಟ್ಟ ಸಿಬ್ಬಂದಿ ಪಡೆಯನ್ನು ಕಟ್ಟಿಕೊಂಡು ಈ ದುಡಿತವನ್ನು ಹೇಗೆ ಸಾಧಿಸಿಕೊಳ್ಳಬಹುದು ಎಂಬುದನ್ನು ಆಲೋಚಿಸಿ ಅವರು ತಮ್ಮದೇ ಕಚೇರಿ ಶಿಸ್ತನ್ನು tailor ಮಾಡಿಕೊಂಡಿದ್ದರು. ಕೆಲಸವಿದ್ದಾಗ ನಾವೆಲ್ಲರೂ, committed ಆಗಿ ಕೆಲಸ ಮಾಡೋಣ, ಕೆಲಸವಿಲ್ಲದೆ ಇದ್ದಾಗ ನಾನು ಹೇಗೆ ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದೇನೆಯೋ ಹಾಗೆಯೇ ನೀವೂ ನಿಮ್ಮನ್ನು ಸ್ವತಂತ್ರವಾಗಿ ಲಭ್ಯವಾಗಿಸಿಕೊಳ್ಳಿ ಎಂಬ ಧೋರಣೆ ಅವರದಾಗಿತ್ತು. ನಾನು ಹೇಗೆ ಇರಲು ಸಾಧ್ಯವಿಲ್ಲವೋ, ಹಾಗೆ ಇರಿ ಎಂದು ಬೇರೆಯವರನ್ನು ಒತ್ತಾಯಿಸುವ ಹಕ್ಕು ನನಗೆ ಇಲ್ಲವೆಂದು ಅವರು ಪರಿಗಣಿಸಿದ್ದಿರಬಹುದು. ನಮ್ಮ ನಡುವೆ ತನ್ನ Bossism ಅನ್ನು ವರ್ಜಿಸಲು ಅವರಿಗೆ ಸಾಧ್ಯವಾದದ್ದು ಇದೇ ಕಾರಣಕ್ಕೆ. ಕಚೇರಿಯ ಒಡತಿಯಾಗಿ ಮಾತ್ರವಲ್ಲ, ಪತ್ರಿಕೆಯ ಸಂಪಾದಕಿಯಾಗಿಯೂ ಅವರು ನಮಗ್ಯಾರಿಗು boss ಅನ್ನಿಸಲೇ ಇಲ್ಲ. ನಮಗೆಲ್ಲ ಕೊಂಚ ಮಟ್ಟಿಗೆ ಬಾಸ್ ಅನ್ನಿಸುತ್ತಿದ್ದುದು ಮ್ಯಾನೇಜರ್ ರಾಜು ಅವರನ್ನು ಕಂಡಾಗ ಮಾತ್ರ. ಯಾಕೆಂದರೆ ಗೌರಿ ಮೇಡಂ ಸೇರಿದಂತೆ ನಮಗೆಲ್ಲ ಸಂಬಳ ಕೊಡುತ್ತಿದ್ದ ವ್ಯಕ್ತಿ ಅವರೆ!
ಗೌರಿ ಮೇಡಂ ಅವರ ಆ ಪ್ರಯೋಗದ ಪರಿಣಾಮವೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ. ಬೆರಳೆಣಿಕೆಯೆನಿಸಿದರೂ ಅವರ ಆಶಯ, ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುವ committed ಸಿಬ್ಬಂದಿಗಳೇ ಅವರ ಕಚೇರಿಯಲ್ಲಿದ್ದೆವು. ನಮ್ಮ ನಡುವಿನ ಸಣ್ಣಪುಟ್ಟ misunderstand ಹೊರತಾಗಿಯೂ ಕೆಲಸ ಎಂದು ಬಂದಾಗ, ದಣಿವಿಲ್ಲದೆ ಮಾಡಿ ಮುಗಿಸುತ್ತಿದ್ದೆವು. ಬಂದ ಒತ್ತಡವನ್ನೆಲ್ಲ ಮೈಮೇಲೆ ಎಳೆದುಕೊಳ್ಳಲು ಎಲ್ಲರೂ ಸಿದ್ಧವಿದ್ದೆವು. ಯಾಕೆಂದರೆ, ನಮ್ಮೆಲ್ಲರಿಗಿಂತ ಮುಂಚೂಣಿಯಲ್ಲಿ ಗೌರಿ ಮೇಡಂ ಆ ಒತ್ತಡದ ಜೊತೆ ಸೆಣೆಸುತ್ತಿದ್ದ ದೃಶ್ಯ ನಮಗೆ ಗೋಚರಿಸುತ್ತಿರುತ್ತಿತ್ತು. ಬಹುಶಃ ತನ್ನ ಉದ್ಯೋಗಿಗಳ ಮೇಲೆ ಅವರಿಗಿದ್ದ ಆ ನಂಬಿಕೆಯೇ, ಅವರು ನಮ್ಮ ವಿಚಾರದಲ್ಲಿ ಅಷ್ಟು liberal ಆಗಿ; ಅಥವಾ ಬೇರೆಯವರ ದೃಷ್ಟಿಯಲ್ಲಿ unorganized, undisciplined ಆಗಿ ಇದ್ದುಬಿಡಲು ಕಾರಣ ಅನ್ನಿಸುತ್ತೆ. ಇಲ್ಲವಾಗಿದ್ದರೆ, ಲಂಕೇಶ್ ಮೇಷ್ಟ್ರು ಕಾಲದಿಂದ ಕೆಲಸ ಮಾಡುತ್ತಿದ್ದ ಸತೀಶ್ ತರಹದ ಸೀನಿಯರ್ ವ್ಯಕ್ತಿ, ಪತ್ರಿಕೆ ಇಬ್ಭಾಗವಾದಾಗ ಕೆಲ ಕಾಲ ಮೂಲಪತ್ರಿಕೆಯಲ್ಲಿ ಕೆಲಸ ಮಾಡಿ, ಮತ್ತೆ ಗೌರಿ ಮೇಡಂ ಬಳಿಗೆ ವಾಪಾಸು ಬರುತ್ತಿರಲಿಲ್ಲ.
ನಡುವೆ ಒಂದಷ್ಟು ಸಮಯ, ಕಚೇರಿಯ ವೈಖರಿಯನ್ನು organize ಮಾಡಿ, discipline ಗೆ ಒಳಪಡಿಸಬೇಕೆಂದು ಒಂದಷ್ಟು ಪ್ರಯತ್ನಗಳು ನಡೆದವು. ಗೌರಿಯವರಿಗೆ ಆ ಪ್ರಯತ್ನದ ಬಗ್ಗೆ ಎಷ್ಟು ಮಾತ್ರ ಒಲವಿತ್ತೋ ಗೊತ್ತಿಲ್ಲ, ಆದರೆ ಸಂಸ್ಥೆಯ ಒಟ್ಟಾರೆ productivity ಹೆಚ್ಚಾಗಿ, ಆ ಮೂಲಕ ಆದಾಯವೂ ಹೆಚ್ಚಾದರೆ, ಸಂಸ್ಥೆ ಈಗ ನರಳುತ್ತಿರುವ ಆರ್ಥಿಕ ಸಂಕಷ್ಟದಿಂದ ಆಚೆ ಬರಬಹುದು, ಇಲ್ಲವಾದರೆ ಪತ್ರಿಕೆಯನ್ನೇ ಮುಚ್ಚಬೇಕಾಗುತ್ತದೆ ಎಂಬ ಹಿತೈಷಿಗಳ ಕಿವಿಮಾತಿಗೆ ಓಗೊಟ್ಟು ಗೌರಿ ಮೇಡಂ ಆ ಪ್ರಯತ್ನಕ್ಕೆ ಸಮ್ಮತಿಸಿದ್ದರು. ಆದರೆ ಆ ನೀತಿ ಕಟ್ಟಳೆಗಳು ಬಾಳಿಕೆ ಬಂದದ್ದು ಕೇವಲ ಒಂದು ವಾರ ಮಾತ್ರ. ಕೆಲಸಗಾರರಿಗೆ ಆ ಕಟ್ಟಳೆಗಳಿಗೆ ಹೊಂದಿಕೊಳ್ಳುವುದರ ಬಗ್ಗೆ ಅಸಮ್ಮತಿಗಳಿದ್ದದ್ದು ನಿಜವಾದರೂ, ಸ್ವತಃ ಗೌರಿಯವರಿಗೇ ಆ ವ್ಯವಸ್ಥೆಯ ಬಗ್ಗೆ ಅಷ್ಟೇನು ಒಲವು ಇಲ್ಲದ್ದು, ಅವು ಮುರಿದುಬೀಳಲು ಮುಖ್ಯ ಕಾರಣ ಎನ್ನಬಹುದು.
ಆಫೀಸಿನ ಶಿಸ್ತು ವಿಚಾರದಲ್ಲಿ ಗೌರಿಯವರ ಈ ಉದಾಸೀನವೇ ಸಂಸ್ಥೆಯ ಆರ್ಥಿಕ ನಷ್ಟಕ್ಕೆ ಕಾರಣ ಎನ್ನುವವರೂ ಇದ್ದಾರೆ. ಅವರವರ ಮನದಂತೆ ದೃಷ್ಟಿಯೂ ಬೇರೆ! ಕೊನೆಕೊನೆಗೆ ತನ್ನ ಎಲ್‌ಐಸಿ ಮೆಚೂರಿಟಿ ಹಣದಿಂದ ನಮಗೆಲ್ಲ ಸಂಬಳ ಕೊಟ್ಟರು; ತಮ್ಮ ತಂದೆಯಂತೆ, ಜೀವಮಾನವಿಡೀ ಜಾಹೀರಾತುಗಳಿಲ್ಲದೆ ಪತ್ರಿಕೆ ನಡೆಸಿದ್ದ ಗೌರಿಯವರು, ಕೊನೆಗೆ ಹಿತೈಷಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಒಂದು ವಿಶೇಷಾಂಕದ ಮೂಲಕ ಜಾಹೀರಾತು ಪಡೆಯುವ ಯತ್ನಕ್ಕೂ ಒಲ್ಲದ ಮನಸ್ಸಿನಿಂದ ಮುಂದಾದರು (ಆ ವಿಶೇಷಾಂಕ ಪ್ರಕಟಗೊಳ್ಳುವ ಮೊದಲೇ ಅವರು ನಮ್ಮನ್ನಗಲಿ, ತಂದೆಯಂತೆ ಜಾಹೀರಾತು-ಮುಕ್ತ ಗೌರಿ ಎನ್ನುವ ಹೆಗ್ಗಳಿಕೆಯಲ್ಲೆ ಉಳಿದುಹೋದರು)…. ಅಷ್ಟಾದರೂ ತನ್ನ ಆಫೀಸಿನಲ್ಲಿ ತನಗಿಷ್ಟವಿಲ್ಲದ ಕಟ್ಟಳೆಗಳ ಮೂಲಕ ಸಿಬ್ಬಂದಿಗಳ ಮೇಲೆ corporatized ಶಿಸ್ತನ್ನು ಹೇರಿ, ಕೆಲಸಗಾರರನ್ನು ನಿಯಂತ್ರಿಸಿ, ಅವರ ದುಡಿಮೆಯನ್ನು ತೇಯ್ದು ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಲಿಲ್ಲ.
ಇಷ್ಟೆಲ್ಲಾ ಹೇಳಿದ ಮೇಲೆ ಕಚೇರಿ ತುಂಬಾ ಚೆಲ್ಲಾಪಿಲ್ಲಿಯಾಗಿ ನಡೆಯುತ್ತಿತ್ತು ಎಂದು ನಿಮಗನ್ನಿಸಬಹುದು. ಖಂಡಿತ ಇಲ್ಲ. ಆರ್ಥಿಕ ಮುಗ್ಗಟ್ಟು, ಮುದ್ರಣಕ್ಕೆ ನಿರ್ಬಂಧ, ಆಗಾಗ್ಗೆ ತಲೆದೋರುತ್ತಿದ್ದ ಆಂತರಿಕ ಮುನಿಸು-ಮನಸ್ತಾಪಗಳ ನಡುವೆಯೂ ಪತ್ರಿಕೆ ಓದುಗರನ್ನು ತಲುಪುವುದು ಯಾವತ್ತೂ ತಪ್ಪಲಿಲ್ಲ. ಗೌರಿಯವರ ಬದ್ಧತೆಯ ಜೊತೆಗೆ ಇಡೀ ತಂಡ ಮೈಮುರಿದು ಕೆಲಸ ಮಾಡಲು ತಯಾರಿತ್ತು ಎಂಬುದಕ್ಕೆ ಇದು ಸಾಕ್ಷಿ. ಎಂಥಾ ಸಂಕಟ ಬಂದಾಗಲೂ ಒಂದು ವಿಶ್ವಾಸಾರ್ಹ ನಂಬಿಕೆ ನಿಷ್ಪಕ್ಷಪಾತವಾಗಿ ನಮ್ಮನ್ನು ಕಾಯಲಿದೆ ಎಂಬ ಭರವಸೆ ಕೆಲಸಗಾರರಲ್ಲಿ ಮೂಡಿದರೆ ಇದು ಸಾಧ್ಯವಾಗುತ್ತದೆ. ನಮ್ಮ ಆಫೀಸಿಗೆ ಗೌರಿಯವರು ಅಂತಹ ನಂಬಿಕೆಯಾಗಿದ್ದರು. ಒಮ್ಮೊಮ್ಮೆ ಹೊರಗಿನ ವರದಿಗಳು ಬರುವುದು ತಡವಾಗಿಯೋ, ತಾಂತ್ರಿಕ ಕಾರಣದಿಂದಲೋ ಮುದ್ರಣದ ಡೆಡ್‌ಲೈನ್ ಸಮೀಪದಲ್ಲಿ ವಿಪರೀತ ಒತ್ತಡದಲ್ಲಿ ಎಲ್ಲರೂ ತೊಳಲಾಡಿ ಕೆಲಸ ಮಾಡುತ್ತಿದ್ದೆವು. ಪ್ರಿಂಟ್ ಕಳಿಸಿ ಹೊರಡುವ ಮುನ್ನ, ಎಲ್ಲರಿಗೂ ಗೌರಿ ಮೇಡಂ ತಪ್ಪದೇ ಹೇಳಿಹೋಗುತ್ತಿದ್ದ ಒಂದು ಥ್ಯಾಂಕ್ಸ್ ನಮ್ಮೆಲ್ಲ ಒತ್ತಡವನ್ನು ಕ್ಷಣ ಮಾತ್ರದಲ್ಲಿ ಕರಗಿಸುತ್ತಿತ್ತು. ಇವೆಲ್ಲವೂ ಅಶಿಸ್ತಿನ ಒಳಗೆ ಅಡಗಿದ್ದ ಶಿಸ್ತುಬದ್ಧ ಬಾಂಧವ್ಯಗಳು. ಅವು ಹೊರಗಿನವರಿಗೆ ಗೋಚರಿಸುವುದು ತುಸು ಕಷ್ಟ! ಒಂದೊಮ್ಮೆ ಗೋಚರಿಸಿದರೂ practical ಅಂತ ಅನ್ನಿಸುವುದು ಇನ್ನೂ ಕಷ್ಟ. ನೊಂದವರ ನೋವನ್ನು ನೋಯದವರು ಬಲ್ಲರೇ? ಎಂಬ ಶರಣವಾಣಿಯಂತೆ ಕೆಲವೊಂದು ಸಂತೃಪ್ತಿಗಳನ್ನು ಅನುಭವಿಸಿದವರಲ್ಲದೆ, ಅನುಭವಿಸದವರು ತೂಗಲಾರರು.
ಕಚೇರಿ ನಿರ್ವಹಣೆಯ ಗೌರಿಯವರ ಈ ವೈಖರಿ ಎಲ್ಲ ಕಡೆಯೂ ಅನ್ವಯಿಸಿ, ಯಶಸ್ಸು ಗಳಿಸುವಂತದ್ದೇ? ಈ ಪ್ರಶ್ನೆಗೆ ಖಂಡಿತ ನನ್ನ ಬಳಿ ಉತ್ತರವಿಲ್ಲ. ಆದರೆ, ತನ್ನ ಇಡೀ ಆಫೀಸನ್ನು ಒಂದು ಕುಟುಂಬವಾಗಿ ಒಗ್ಗೂಡಿಸಿ, ತೊಡಗಿಸಿಕೊಳ್ಳುವ ಮಟ್ಟಿಗೆ ಗೌರಿಯವರು ತನ್ನ ವೈಖರಿಯಲ್ಲಿ ಯಶಸ್ವಿಯಾಗಿದ್ದರು. ಇನ್ನು, ಸಂಸ್ಥೆ ಸಿಲುಕಿದ ಆರ್ಥಿಕ ಸಂಕಷ್ಟಕ್ಕೆ ಬೇರೆಲ್ಲಾ ವ್ಯವಹಾರಿಕ-ಸಾಮಾಜಿಕ ಏರಿಳಿತಗಳನ್ನು ಬದಿಗಿರಿಸಿ ಕೇವಲ ಕಚೇರಿ ನಿರ್ವಹಣೆಯ ವೈಖರಿಯನ್ನೇ ಆರೋಪಿಸುವುದಾದರೆ, ಗೌರಿಗಿಂತ ಮೊದಲು ಆ ಆರೋಪಗಳನ್ನು ಹೊರಲು ನಾವು ಸಿಬ್ಬಂದಿಗಳು ಸಾಲುಗಟ್ಟುತ್ತೇವೆ. ಆ ಸಾಲಿನಲ್ಲಿ ನಾನಂತೂ ಇರುತ್ತೇನೆ.
ಇಂಥಾ ಆಫೀಸಿನಲ್ಲಿ ಕೆಲವೊಂದು ಕಹಿಗಳು ಸುದೀರ್ಘಗೊಂಡದ್ದೂ ಇದೆ; ತಲುಪಬಾರದ ತಳವನ್ನು ತಲುಪಿದ್ದೂ ಇದೆ. ಅಂತಹ ಕಹಿಗಳ ಬಗ್ಗೆ ಗೌರಿಯವರು ನಿರಂತರವಾಗಿ ಮರುಗುತ್ತಲಿದ್ದದ್ದು, ಒಬ್ಬ ಮನುಷ್ಯನಿಗಿರುವ ಮಿತಿಯನ್ನು ಅರ್ಥಮಾಡಿಸುತ್ತವೆ. ಯಾಕೆಂದರೆ, ಗೌರಿಯವರು ದೇವತೆಯಲ್ಲ; ಕಾಣುವ ಮನುಷ್ಯರಿಗಿಂತ ಕಾಣದ ದೇವರುಗಳನ್ನು ನಂಬುವುದು ಅವರಿಗೆ ಇಷ್ಟವೂ ಇರಲಿಲ್ಲ. ಒಬ್ಬ ಮನುಷ್ಯಳಾಗಿ ತಾನು ನಂಬಿದ ತತ್ವಸಿದ್ಧಾಂತಗಳ ಮಿತಿಯಲ್ಲಿ ಎಷ್ಟುಮಾತ್ರ ತನ್ನನ್ನು ಹೊಂದಾಣಿಕೆಗಳಿಗೆ ವಿಸ್ತರಿಸಿಕೊಳ್ಳಬಹುದಿತ್ತೋ, ಅದನ್ನವರು ಪ್ರಾಮಾಣಿಕವಾಗಿ ಮಾಡುತ್ತಿದ್ದರು. ಅಷ್ಟಕ್ಕೂ ಮನುಷ್ಯನ ನಿರೀಕ್ಷೆಗಳಿಗೆ ಗಡಿಗಳಾದರೂ ಎಲ್ಲಿರುತ್ತವೆ? ಅಂತಹ ನಿರೀಕ್ಷೆಗಳ ಮಾಪನದಲ್ಲಿ ಗೌರಿ ಒಬ್ಬ failed entrepreneur ಆಗಿ, undisciplined ಸಂಪಾದಕಿಯಾಗಿ, incomplete journalist ಆಗಿ ಗೋಚರಿಸುವ ಎಲ್ಲಾ ಅವಕಾಶಗಳನ್ನು ಈ ಸಮಾಜದ ಮುಂದೆ ಅವರು ಮುಕ್ತವಾಗಿಯೇ ಇರಿಸಿಹೋಗಿದ್ದಾರೆ.
ಗಿರೀಶ್ ತಾಳಿಕಟ್ಟೆ
ಪತ್ರಕರ್ತರು
ಇದನ್ನೂ ಓದಿ- ಶಿಕ್ಷಕರ ದಿನಾಚರಣೆ ವಿಶೇಷ | ಬದಲಾಗುತ್ತಿರುವ ಶಿಕ್ಷಕ ಸಂಸ್ಕೃತಿ


