ಬೆಂಗಳೂರು, ಸೆ.5: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಶ್ರೀ ಮಧು ಬಂಗಾರಪ್ಪ ಅವರು ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಶಿಕ್ಷಕರಿಗೆ ಶುಭ ಕೋರುವ ಮೂಲಕ ಶಿಕ್ಷಕ ವೃಂದದವರ ಖುಷಿಗೆ ಕಾರಣರಾದರು.
ಮೊದಲಿಗೆ ಬೆಂಗಳೂರಿನ ತಣಿಸಂದ್ರದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರೊಂದಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು. ಶಿಕ್ಷಣ ಇಲಾಖೆಯ ಸಚಿವರೊಬ್ಬರು ಶಾಲೆಯೊಂದರಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿ, ಶಿಕ್ಷಕರೊಂದಿಗೆ ದಿನಾಚಾರಣೆ ಆಚರಿಸಿದ್ದ ಇದೇ ಮೊದಲು.
ಸಚಿವರು ಶಾಲೆಗೆ ಆಗಮಿಸಿ ಶಿಕ್ಷಕರೊಂದಿಗೆ ಶಿಕ್ಷಕರ ದಿನಾಚರಣೆ ಆಚರಿಸಿದ್ದಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಸಂತಸ ವ್ಯಕ್ತಪಡಿಸಿದರು. “ಇದು ನಮಗೆ ಸಿಕ್ಕಿರುವ ಸುವರ್ಣಾವಕಾಶ. ಸಚಿವರು ನಮ್ಮ ಶಾಲೆಗೆ ಆಗಮಿಸಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜಕ್ಕೂ ಖುಷಿಯ ಸಂಗತಿ. ಶಿಕ್ಷಣ ಸಚಿವರಿಂದ ಶಿಕ್ಷಕರಿಗೆ ಸಿಕ್ಕ ದೊಡ್ಡ ಗೌರವ ಇದು ಎಂದು ಭಾವಿಸುತ್ತೇನೆ” ಎಂದು ಹೇಳಿದರು.
ಕಾರ್ಯಕ್ರದಲ್ಲಿ ಮಾತನಾಡಿದ, 9ನೇ ತರಗತಿ ವಿದ್ಯಾರ್ಥಿನಿ ಸಾಭಮ್ಮ ಮಾತನಾಡಿ, “ಖಾಸಗಿ ಶಾಲೆಗಳಿಗಿಂತ ನಮ್ಮ ಸರ್ಕಾರಿ ಶಾಲೆ ಯಾವುದಕ್ಕೂ ಕಡಿಮೆಯಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ನಮಗೆ ಯಾವುದೇ ಕೊರತೆಯಿಲ್ಲ” ಎಂದು ಹೆಮ್ಮೆಯಿಂದ ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಶಿಕ್ಷಣ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿದರು. ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಪ್ರೋತ್ಸಾಹಿಸಲು ಅವರು ದಿನಕ್ಕೆ ಒಂದು ರೂಪಾಯಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಉಳಿಸಿಕೊಳ್ಳಲು ಉತ್ತೇಜನ ನೀಡಿದ್ದನ್ನು ನೆನಪಿಸಿಕೊಂಡರು.
ತಂದೆ-ತಾಯಿ ಜನ್ಮ ನೀಡಿದರೆ, ದಾರಿ ತೋರಿಸುವವರು ಶಿಕ್ಷಕರು: ಮಧು ಬಂಗಾರಪ್ಪ
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ಮಕ್ಕಳು ಬಹಳ ಚೆಂದವಾಗಿ ಮಾತನಾಡಿದರು. ಇಲ್ಲಿಯ ಶಿಕ್ಷಕರು ಹೇಗೆ ಕಲಿಸುತ್ತಿದ್ದಾರೆ ಎಂಬುದು ಇಲ್ಲೇ ಅರ್ಥವಾಗುತ್ತದೆ. ತಂದೆ-ತಾಯಿ ಜನ್ಮ ನೀಡಿದರೆ, ಬದುಕಿನ ದಾರಿ ತೋರಿಸುವವರು ಶಿಕ್ಷಕರು. ಸಾವಿರಾರು ಮಕ್ಕಳಿಗೆ ಬದುಕಿನ ದಾರಿ ತೋರಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಶಿಕ್ಷಕರಿಗೆ ಹೇಳಿದರು.
“ಸರ್ಕಾರಿ ಶಾಲೆಯ ಬಗ್ಗೆ ಮಾಧ್ಯಮದಲ್ಲಿ ಟೀಕೆ-ಟಿಪ್ಪಣಿ ಬರುತ್ತಲೇ ಇರುತ್ತವೆ. ಆದರೆ ಈ ಶಾಲೆಯಂತಹ ಸರ್ಕಾರಿ ಶಾಲೆಗಳ ಸಾಧನೆ, ಇಲ್ಲಿರುವ ಸೌಕರ್ಯಗಳನ್ನು ರಾಜ್ಯ ಜನರಿಗೆ ತೋರಿಸುವುದಿಲ್ಲ. ಈ ಶಾಲೆ ದೆಹಲಿಯಲ್ಲಿನ ಸರ್ಕಾರಿ ಶಾಲೆಗಳಿಗಿಂತಲೂ ಉತ್ತಮವಾಗಿದೆ. ನಮ್ಮ ಸರ್ಕಾರ ಯಾವತ್ತೂ ಶಿಕ್ಷಕರನ್ನು ಮರೆಯುವುದಿಲ್ಲ. ಮನುಷ್ಯನಾಗಿ ನನಗೆ ಜೀವನದಲ್ಲಿ ಸಾಧನೆ ಮಾಡಲು ದಾರಿ ತೋರಿಸಿದವರು ಶಿಕ್ಷಕರು. ಹೀಗೆ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಿರುವ ನಿಮ್ಮನ್ನು ನಾನು ನೋಡುವುದೇ ನನ್ನ ಭಾಗ್ಯ. ಶಿಕ್ಷಕರು ಹಲವು ವಿಚಾರಗಳನ್ನು ತಮ್ಮ ಗಮನಕ್ಕೆ ತಂದಿದ್ದು, ನಿವೃತ್ತರಾದ ಶಿಕ್ಷಕರು ಆಸಕ್ತಿಯಿಂದ ಮತ್ತೆ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಕೇಳಿದ್ದಾರೆ. ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
46 ಸಾವಿರ ಶಾಲೆಗಳು; ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ
ರಾಜ್ಯದಲ್ಲಿ ಸುಮಾರು 46 ಸಾವಿರ ಶಾಲೆಗಳಿದ್ದು, ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ರಾಜ್ಯದ ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುವುದು. ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಶಾಲಾ ಮಕ್ಕಳಿಗೆ ಬಿಸಿಯೂಟದಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕೊಡುಗೆಯನ್ನೂ ಸಚಿವರು ಸ್ಮರಿಸಿದರು. ನಮ್ಮ ತಂದೆ ಅವರು ಜಾರಿ ಮಾಡಿದ್ದ ಶಾಲಾಗೆ ಹಾಜರಾಗುವ ಮಕ್ಕಳಿಗೆ ದಿನಕ್ಕೆ 1 ರೂ. ಕೊಡುವ ʻಅಕ್ಷಯʼ ಯೋಜನೆಯೇ ಮುಂದೆ ಬಿಸಿಯೂಟ ಯೋಜನೆ ಜಾರಿಗೆ ಬರಲು ಬಳಸಿಕೊಂಡರು ಎಂದು ತಿಳಿಸಿದರು.
13 ಸಾವಿರ ಶಿಕ್ಷಕರ ನೇಮಕ; 15 ಸಾವಿರಕ್ಕೂ ಹೆಚ್ಚು ಹುದ್ದೆಗಳ ಪ್ರಕ್ರಿಯೆ
“ಅಧಿಕಾರಕ್ಕೆ ಬಂದ ಕೂಡಲೇ ಹಿಂದಿನ ಸರ್ಕಾರದ ಯಡವಟ್ಟಿನಿಂದ ಕೋರ್ಟ್ ವಿಚಾರಣೆಯಲ್ಲಿ ತಡೆಹಿಡಿದಿದ್ದ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. 52 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಿಕ್ಷಕರೇ ಇಲ್ಲ ಎಂಬ ಸ್ಥಿತಿಯನ್ನು ನಾನು ಒಪ್ಪುವುದಿಲ್ಲ. 15 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ” ಎಂದು ಅವರು ತಿಳಿಸಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ನೋಟ್ಸ್
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 1ರಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕಗಳನ್ನು ನೀಡಲಾಗುವುದು. ಸಾಧ್ಯ ಆದರೆ ಇದೇ ವರ್ಷದಿಂದ ಜಾರಿ ಮಾಡುತ್ತೇವೆ. ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಬೆಸ್ಟ್ ಗುರುಗಳು ಸಿಗುವುದು ಸರ್ಕಾರಿ ಶಾಲೆಗಳಲ್ಲಿ ಮಾತ್ರ. ಉಳಿದ ಶಿಕ್ಷಕರ ಬಗ್ಗೆಯೂ ನನಗೆ ಗೌರವವಿದೆ. ಆದರೆ ಸರ್ಕಾರಿ ಶಾಲೆಗಳ ಶಿಕ್ಷಕರು ನೀಡುತ್ತಿರುವ ಸೇವೆ ಅತ್ಯಂತ ಮಹತ್ವದ್ದು ಎಂದರು.
ಕಾರ್ಯಕ್ರಮದ ಅಂತ್ಯದಲ್ಲಿ ಸಚಿವ ಮಧು ಬಂಗಾರಪ್ಪ ಅವರು ನೆರೆದಿದ್ದ ಎಲ್ಲ ಶಿಕ್ಷಕರಿಗೂ ಗುಲಾಬಿ ಹೂ ನೀಡಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.
ಬಳಿಕ ಆರ್ ಕೆ ಹೆಗ್ಗಡೆನಗರದಲ್ಲಿನ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಮತ್ತು ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಚಿವರು ಭೇಟಿ ನೀಡಿ ಶಿಕ್ಷಕರಿಗೆ ಶಿಕ್ಷಕರಿಗೆ ಶುಭಾಶಯ ತಿಳಿಸಿದರು.

