ದಿಲ್ಲಿ ನನ್ನ ಮಟ್ಟಿಗೆ ಒಂದು ಆಕಸ್ಮಿಕವಷ್ಟೇ ಆಗಿತ್ತು. ಹೇಳದೆ ಕೇಳದೆ ಬಂದ ಒಂದು ಅನಿರೀಕ್ಷಿತ ತಿರುವು. ಹೀಗೆ ದಕ್ಷಿಣ ಕನ್ನಡದ ಪುಟ್ಟ ಹಳ್ಳಿಯೊಂದರಿಂದ ಬಂದ ನಾನು “ಇಲ್ಲಿ ಇನ್ನೆಷ್ಟು ದಿನ” ಎಂದು ಹೇಳುತ್ತಲೇ ಭರ್ತಿ ಹದಿನೈದು ವರ್ಷಗಳು ಉರುಳಿವೆ. ಈ ಹದಿನೈದು ವರ್ಷಗಳಲ್ಲಿ ಗಂಗೆ-ಜಮುನೆಯಲ್ಲಿ ಸಾಕಷ್ಟು ನೀರು ಹರಿದಿದೆ. ಊರನ್ನು, ನಗರವನ್ನು ಮತ್ತು ಒಟ್ಟಾರೆಯಾಗಿ ಬದುಕನ್ನು ನೋಡುವ ದೃಷ್ಟಿಕೋನಗಳು ಬದಲಾಗಿವೆ. ಇವೆಲ್ಲದರ ನಡುವೆ ಕ್ಯಾಂಪು ಅನ್ನುವುದು ಈಗ ಕ್ಯಾಂಪಷ್ಟೇ ಅಲ್ಲ ಅನ್ನುವುದು ಕೂಡ ಕ್ರಮೇಣ ಸಾಬೀತಾಗಿದೆ – ಪ್ರಸಾದ್ ನಾಯ್ಕ್, ದೆಹಲಿ.
ಮನೆ ಅಂದ್ರೆ ಊರು. ಕ್ಯಾಂಪು ಅಂದ್ರೆ ನಗರ.
ಬಿಹಾರದ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ರವೀಶ್ ಕುಮಾರ್ ದಿಲ್ಲಿಯ ಬದುಕನ್ನು ಅಪ್ಪಿಕೊಳ್ಳಬೇಕಾಗಿ ಬಂದಾಗ ಅವರ ಮನದೊಳಗಿನ ತಲ್ಲಣಗಳು ಹೀಗಿತ್ತಂತೆ. ತಾವು ಹೊಸದಾಗಿ ದಿಲ್ಲಿಗೆ ಬಂದಿಳಿದಾಗ ಅವರಿಗಾಗಿದ್ದ ಆತಂಕ, ಈ ಆತಂಕದ ಹಿಂದಿದ್ದ ದಿಲೀಪ್ ಕುಮಾರ್ ಅಭಿನಯದ ಯಾವುದೋ ಸಿನೆಮಾ ದೃಶ್ಯವೊಂದರ ನೆನಪು, ವಾಪಾಸು ಊರಿಗೆ ಹೋದಾಗಲೆಲ್ಲ ಸಿಟಿ ಹುಡುಗನ ಬಗ್ಗೆ ಊರಿನವರಿಗಿದ್ದ ಕುತೂಹಲ, ನಗರಗಳ ಮತ್ತು ಅಲ್ಲಿಯ ಬದುಕಿನ ಬಗ್ಗೆ ಹಳ್ಳಿಯ ಜನರಿಗಿದ್ದ ಅರೆಬೆಂದ ನಂಬಿಕೆಗಳು, ಹಳ್ಳಿಯ ಬದುಕಿನ ಅಲಿಖಿತ ನಿಯಮಗಳು, ನಗರ ಜೀವನವು ನೀಡಿದ್ದ ಅನಾಮಿಕತೆಯ ರುಚಿ… ಹೀಗೆ ಎಲ್ಲವನ್ನೂ ನೆನಪಿಸಿಕೊಳ್ಳುವ ಖ್ಯಾತ ಪತ್ರಕರ್ತ ರವೀಶ್ ಕುಮಾರ್ “ಹಳ್ಳಿ” ಮತ್ತು “ನಗರ”ಗಳೆಂಬ ಎರಡು ಸಂಗತಿಗಳು, ಎರಡು ಧ್ರುವಗಳಾಗಿ ಅವರ ಮನಸ್ಸಿನಲ್ಲಿ ಹೇಗೆ ಬೇರೂರಿಬಿಟ್ಟಿದ್ದವು ಎಂದು ತಮ್ಮ ಪುಟ್ಟ ಕೃತಿಯೊಂದರಲ್ಲಿ ದಾಖಲಿಸುತ್ತಾರೆ. ಅವರು ಹೇಳುವ ಪ್ರಕಾರ ಆ ಕಾಲವೇ ಹಾಗಿತ್ತಂತೆ. ಆ ಆರಂಭಿಕ ದಿನಗಳಲ್ಲೆಲ್ಲ ಮನೆ ಎಂದರೆ ಯಾವತ್ತಿಗೂ ತಮ್ಮೂರೇ ಆಗಿತ್ತು. ನಗರ ಎಷ್ಟಾದರೂ ಕ್ಯಾಂಪೇ.
ಹೀಗೆ ಯಕಃಶ್ಚಿತ್ ಕ್ಯಾಂಪ್ ಆಗಿರುವ ನಗರವೊಂದು ನಿಧಾನವಾಗಿ ಮನೆಯಾಗುವ ಬಗ್ಗೆ ತಿಳಿಯಬೇಕಾದರೆ ನಗರಗಳಲ್ಲಿ ದೀರ್ಘಕಾಲದಿಂದ ನೆಲೆಯಾಗಿರುವವರನ್ನು ಕೇಳಬೇಕು. ಅದರಲ್ಲೂ ಪುಟ್ಟ ಹಳ್ಳಿ, ಪೇಟೆಗಳಿಂದ ನಗರಕ್ಕೆ ವಲಸಿಗರಾಗಿ ಬಂದವರಾದರೆ ಮತ್ತಷ್ಟು ಸೂಕ್ತ. ನನ್ನದೇ ಉದಾಹರಣೆಯನ್ನು ಪರಿಗಣಿಸುವುದಾದರೆ ದಿಲ್ಲಿ ನನ್ನ ಮಟ್ಟಿಗೆ ಒಂದು ಆಕಸ್ಮಿಕವಷ್ಟೇ ಆಗಿತ್ತು. ಹೇಳದೆ ಕೇಳದೆ ಬಂದ ಒಂದು ಅನಿರೀಕ್ಷಿತ ತಿರುವು. ಹೀಗೆ ದಕ್ಷಿಣ ಕನ್ನಡದ ಪುಟ್ಟ ಹಳ್ಳಿಯೊಂದರಿಂದ ಬಂದ ನಾನು “ಇಲ್ಲಿ ಇನ್ನೆಷ್ಟು ದಿನ” ಎಂದು ಹೇಳುತ್ತಲೇ ಭರ್ತಿ ಹದಿನೈದು ವರ್ಷಗಳು ಉರುಳಿವೆ. ಈ ಹದಿನೈದು ವರ್ಷಗಳಲ್ಲಿ ಗಂಗೆ-ಜಮುನೆಯಲ್ಲಿ ಸಾಕಷ್ಟು ನೀರು ಹರಿದಿದೆ. ಊರನ್ನು, ನಗರವನ್ನು ಮತ್ತು ಒಟ್ಟಾರೆಯಾಗಿ ಬದುಕನ್ನು ನೋಡುವ ದೃಷ್ಟಿಕೋನಗಳು ಬದಲಾಗಿವೆ. ಇವೆಲ್ಲದರ ನಡುವೆ ಕ್ಯಾಂಪು ಅನ್ನುವುದು ಈಗ ಕ್ಯಾಂಪಷ್ಟೇ ಅಲ್ಲ ಅನ್ನುವುದು ಕೂಡ ಕ್ರಮೇಣ ಸಾಬೀತಾಗಿದೆ.

ಸಾಮಾನ್ಯವಾಗಿ ಹಳ್ಳಿಗಳಲ್ಲೇ ತಮ್ಮ ಬಾಲ್ಯವನ್ನು ಕಳೆದು, ನಗರಗಳಿಗೆ ವಲಸೆ ಬಂದಿರುವ ಮಂದಿಗೆ ತಕ್ಕಮಟ್ಟಿಗೆ ಇದು ಸಹಜವೂ ಕೂಡ. ನಾನು ಓದಿದ ಶಾಲೆಗೆ ಸರಿಸುಮಾರು ಇಪ್ಪತ್ತೈದು ವರ್ಷಗಳ ನಂತರ ಮತ್ತೆ ಭೇಟಿ ಕೊಟ್ಟಾಗ ಆ ಜಾಗಗಳೆಲ್ಲ ಹೆಚ್ಚೇನೂ ಬದಲಾಗಿಲ್ಲ ಎಂದು ನನಗನ್ನಿಸಿತ್ತು. ಆ ಶಾಲೆ, ಮೈದಾನ, ಅವವೇ ಒಳದಾರಿಗಳು, ಮೂಲೆಯೊಂದರಲ್ಲಿ ತಣ್ಣಗಿರುವ ದೇವಸ್ಥಾನ, ಓಣಿಯಾಚೆಗಿರುವ ಮಸೀದಿ, ಮಬ್ಬುಬಣ್ಣದ ಗೋಡೆಯ ಸರಕಾರಿ ಕ್ವಾರ್ಟಸ್ಸುಗಳು… ಎಲ್ಲವೂ ಬಹುತೇಕ ಹಿಂದೆ ಇದ್ದಂತೆಯೇ ಇದ್ದವು. ಒಂದೆರಡು ಅಗಲವಾದ ರಸ್ತೆಗಳು ಮತ್ತು ಹೊಸದಾಗಿ ತಲೆಯೆತ್ತಿಕೊಂಡು ನಿಂತ ಕೆಲ ಪೆಟ್ಟಿಗೆಯಂತಹ ಕಟ್ಟಡಗಳನ್ನು ಬಿಟ್ಟರೆ ಊರು ಹೆಚ್ಚೇನೂ ಬದಲಾದಂತೆ ನನಗೆ ಕಂಡಿರಲಿಲ್ಲ. ಇನ್ನು ನಾಸ್ಟಾಲ್ಜಿಯಾದ ತಲಾಶೆಯಲ್ಲಿ ಹೋಗುವವರಿಗೆ ಇದು ನೀಡುವ ಸಂತಸವೂ ಬೇರೆ.
ಆದರೆ ನಗರಗಳ ವರಸೆ ಕೊಂಚ ಭಿನ್ನ. ನಗರಗಳಲ್ಲಿ ಏನಾದರೊಂದು ಪ್ರಾಜೆಕ್ಟುಗಳು, ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಒಂದೆಡೆ ನಿಂತರೆ ತಾನು ನಗರವೆಂದು ಕರೆಸಿಕೊಳ್ಳಲಿಕ್ಕೆ ಲಾಯಕ್ಕೇ ಇಲ್ಲ ಎಂಬಂತೆ! “ಗ್ರೇಟ್” ಆಗಿರುವ ಮಹಾನಗರಗಳಲ್ಲಿ ಇನ್ನು ಮಾಡುವಂಥದ್ದೇನೂ ಉಳಿದಿಲ್ಲ ಎಂಬ ಹಂತಕ್ಕೆ ಬಂದಾಗ, ನಗರದ ಹೊರವಲಯದ ಭಾಗಗಳು “ಗ್ರೇಟರ್” ಅನ್ನಿಸಿಕೊಂಡು ಲಗುಬಗೆಯಲ್ಲಿ ಹೊಸ ರೂಪವನ್ನು ಪಡೆದುಕೊಳ್ಳುತ್ತವೆ. ಹಾಗೆ ನೋಡಿದರೆ ಇವುಗಳೆಲ್ಲ ಸಾಕಾರವಾಗುವುದು ನಂತರದ ಮಾತು. ಅಸಲಿಗೆ “ಇಂಥವುಗಳೆಲ್ಲ ಆಗಲಿವೆ” ಎಂಬ ನಿರೀಕ್ಷೆಯಲ್ಲೇ ಹಲವು ಯೋಜನೆಗಳು ಗರಿಗೆದರಿಕೊಳ್ಳುತ್ತವೆ. ಮಹಾತ್ವಾಕಾಂಕ್ಷಿ ಕನಸುಗಳು ಮಾರಾಟವಾಗುತ್ತವೆ. ನಗರದ ಹೆಸರೊಂದು ತನ್ನ ಬೆನ್ನಿಗೆ “ಗ್ರೇಟರ್” ಫಲಕವನ್ನು ಅಂಟಿಸಿಕೊಳ್ಳುತ್ತದೆ. ಇಂತಹ ಮಹಾನಗರಗಳಲ್ಲಿರುವ ನೀವೇ “ಗ್ರೇಟೆಸ್ಟ್” ಎಂಬ ಮಾತನ್ನೂ ವ್ಯವಸ್ಥಿತವಾಗಿ ಹರಿಯಬಿಡಲಾಗುತ್ತದೆ.
“ಹಳ್ಳಿಗಳಲ್ಲಿ ನೀವು ಕಳೆದುಹೋಗುವುದು ಸಾಧ್ಯವಿಲ್ಲ. ಆದರೆ ನಗರಗಳಲ್ಲಿ ಇದು ಸಾಧ್ಯ”, ಎಂದು ಒಂದೆಡೆ ಬರೆಯುತ್ತಾರೆ ರವೀಶ್. “ಕಥಾಸಂಗಮ” ಚಿತ್ರದಲ್ಲಿ ಬರುವ ಲಚ್ಚವ್ವ ಪಾತ್ರವನ್ನೇ ನೋಡಿ. ಉತ್ತರ ಕರ್ನಾಟಕದ ಅದ್ಯಾವುದೋ ಹಳ್ಳಿಯೊಂದರಿಂದ ಬರುವ ಲಚ್ಚವ್ವ ಬೆಂಗಳೂರಿಗೆ ಹೊಸಬರು. ಚಿಕ್ಕದೊಂದು ಕೆಲಸಕ್ಕಾಗಿ ಒಂದರೆಕ್ಷಣ ಮನೆಬಾಗಿಲು ದಾಟಿ ಹೋಗುವ ಲಚ್ಚವ್ವ ಮನೆಯ ದಾರಿಯನ್ನೇ ಮರೆತು, ಗೊಂದಲದ ಗೂಡಾಗಿಬಿಡುತ್ತಾರೆ. ಮಹಾನಗರವು ಹೊರದಾರಿಯಿಲ್ಲದ ಚಕ್ರವ್ಯೂಹದಂತೆ ಅವರನ್ನು ಹೆದರಿಸತೊಡಗುತ್ತದೆ. ಇಲ್ಲಿ ಲಚ್ಚವ್ವನ ತಳಮಳವು ವೀಕ್ಷಕನನ್ನು ಅದ್ಯಾವ ಮಟ್ಟಿಗೆ ಕಾಡುತ್ತದೆಂದರೆ, ಇದೊಂದು ಸಿನೆಮಾ ಎಂಬುದನ್ನೇ ವೀಕ್ಷಕ ಕೆಲಕಾಲ ಮರೆತುಬಿಡುತ್ತಾನೆ. ಏಕೆಂದರೆ ಒಂದು ಹಂತದಲ್ಲಿ ಲಚ್ಚವ್ವನ ಆತಂಕ, ಗಾಬರಿ, ತಳಮಳಗಳೆಲ್ಲ ನಮ್ಮದೂ ಆಗಿಬಿಡುತ್ತದೆ.
ದಿಲ್ಲಿಯ ವೆಸ್ಟರ್ನ್ ಕೋರ್ಟ್ ಹೋಟೆಲ್ ನಲ್ಲಿ ಸಿಕ್ಕ ಬಿಲ್ಲೂ ಕೂಡ ಇಂಥದ್ದೇ ಒಂದು ಕತೆಯನ್ನು ನನಗೊಮ್ಮೆ ಹೇಳಿದ್ದ. ಅದು ಅವನದ್ದೇ ಬದುಕಿನ ಕತೆ. ಸುಮಾರು ಹದಿನೆಂಟು ವರ್ಷಗಳ ಹಿಂದೆ ನಡೆದಿದ್ದು. ಬಿಲ್ಲೂನದ್ದು ಕೂಡ ರವೀಶರಂತೆ ಬಿಹಾರ ಮೂಲ. ಉದ್ಯೋಗದ ತಲಾಶೆಯಲ್ಲಿ ಮೊದಲ ಬಾರಿ ಬಿಹಾರದಿಂದ ದಿಲ್ಲಿಗೆ ಬಂದಿದ್ದ ಬಿಲ್ಲೂ ದಾರಿಕಾಣದೆ ಕಂಗಾಲಾಗಿದ್ದ. ಜೂನ್ ತಿಂಗಳ ರಣಬಿಸಿಲು ಮತ್ತು ಹಲವು ದಿನಗಳ ಉಪವಾಸ ಅವನನ್ನು ಕಂಗೆಡಿಸಿತ್ತು. ಈ ನಡುವೆ ಅವನ ಅದೃಷ್ಟ ಖುಲಾಯಿಸಿತೆಂಬಂತೆ ಆತ ಹುಚ್ಚನಂತೆ ಅಲೆದಾಡುತ್ತಿದ್ದ ದಾರಿಯಲ್ಲಿ ಮಂತ್ರಿಯೊಬ್ಬರ ಕಾರೊಂದು ಬಂದು ನಿಂತಿತಂತೆ. ದಿಲ್ಲಿಯ ರಾಜಬೀದಿಯಲ್ಲಿ ಇವನ್ಯಾರಪ್ಪ ಅಬ್ಬೇಪಾರಿ ಎಂದು ಅನ್ನಿಸಿತ್ತೋ ಏನೋ! ಕಾರಿನಿಂದಿಳಿದ ಮಂತ್ರಿಗಳ ಆಪ್ತಸಹಾಯಕರು ಈತನ ಪೂರ್ವಾಪರಗಳನ್ನೆಲ್ಲ ವಿಚಾರಿಸಿ ಸಾಹೇಬರ ಎದುರು ತಂದು ನಿಲ್ಲಿಸಿದ್ದಾರೆ.

ಈ ವಿಚಾರಣೆಯಲ್ಲಿ ಮಾನ್ಯ ಮಂತ್ರಿಗಳಿಗೆ ಗೊತ್ತಾಗಿದ್ದೇನೆಂದರೆ ಈತನೂ ಕೂಡ ತನ್ನದೇ ಕ್ಷೇತ್ರದಿಂದ ಬಂದವನು ಎಂಬುದು. ಬಿಲ್ಲೂ ಆ ಕಾಲಕ್ಕೆ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡಿದ್ದ. ರೆಟ್ಟೆಯಲ್ಲಿ ಬಲ ಮತ್ತು ವ್ಯಕ್ತಿತ್ವದಲ್ಲಿ ಆತ್ಮವಿಶ್ವಾಸ ಇನ್ನೂ ಸಂಪೂರ್ಣವಾಗಿ ಬತ್ತಿರಲಿಲ್ಲ. ಬಿಲ್ಲೂನನ್ನು ತಮ್ಮ ಗರಡಿಗೆ ಕರೆಸಿಕೊಂಡ ಮಂತ್ರಿಮಹೋದಯರು ಅವನ ಜೀವನೋಪಾಯಕ್ಕೊಂದು ದಾರಿ ಮಾಡಿಕೊಟ್ಟರು. ಅವನ ಚುರುಕುತನವು ಬಹುಬೇಗನೆ ರಾಜಕೀಯ ನಾಯಕರ ಒಳವಲಯಕ್ಕೂ ಅವನನ್ನು ಹೊಕ್ಕಿಸಿತು. ಹೀಗೆ ಶುರುವಾದ ಬಿಲ್ಲೂನ ಪಯಣವು ಅಂದಿನಿಂದ ಇಂದಿನವರೆಗೂ ರಾಜಕೀಯ ಶಕ್ತಿಕೇಂದ್ರವಾದ ದಿಲ್ಲಿಯ ಸುತ್ತಮುತ್ತಲೇ ಓಡಾಡುತ್ತಿದೆ. ಒಬ್ಬರ ಕಾರ್ಯಾವಧಿಯು ಮುಗಿದಾಗ ಬಿಲ್ಲೂನ ಹೆಸರು ಮತ್ತೊಬ್ಬರಿಗೆ ಶಿಫಾರಸ್ಸಾಗುತ್ತದೆ. ಅವನೀಗ ಹಲವು ರಾಜಕಾರಣಿಗಳ ಜೊತೆ ನಿಕಟವಾಗಿ ಕೆಲಸ ಮಾಡಿರುವ ಅನುಭವಿ. ದಿಲ್ಲಿಯು ಅವನಿಗೀಗ ಕ್ಯಾಂಪಲ್ಲ. ಅಕ್ಷರಶಃ ಮನೆಯೇ ಸರಿ.
ಹೀಗೆ ಕ್ಯಾಂಪಾಗಿ, ಮನೆಯಾಗಿ, ನಂತರ ಮತ್ತೇನೋ ಆಗಿಬಿಡುವ ಮಹಾನಗರಗಳು ಕೆಲವೊಮ್ಮೆ ನಮ್ಮ ಐಡೆಂಟಿಯ ಭಾಗವೇ ಆಗಿಬಿಡುವುದು ಕೂಡ ಸತ್ಯ. ಲಂಡನ್, ನ್ಯೂಯಾರ್ಕ್‌ಗಳಲ್ಲಿ ನೆಲೆಸುವುದು ಈಗಲೂ ಹಲವರಿಗೆ ಪ್ರತಿಷ್ಠೆ. ಮೋಜೆಂದರೆ ತಕ್ಷಣ ನೆನಪಾಗುವುದು ಲಾಸ್ ವೇಗಾಸ್. ಅಮೆರಿಕಾದ ಒರೆಗಾನ್ ಪ್ರದೇಶದಲ್ಲಿರುವ ಓಶೋ ರಜನೀಶರ ಆಶ್ರಮವನ್ನು “ರಜನೀಶಪುರಂ” ಎಂದೇ ಕರೆಯಲಾಗುತ್ತಿತ್ತು. ಇನ್ನು ದೂರದ ಆಲ್ಬೇನಿಯಾದಿಂದ ಬರುವ ತೆರೇಸಾ ಎಂಬ ಯುವತಿಯೊಬ್ಬಳು, “ಮದರ್ ತೆರೇಸಾ ಆಫ್ ಕೋಲ್ಕತ್ತಾ” ಎಂಬ ಹೆಸರಿನಲ್ಲೇ ಮುಂದೆ ಖ್ಯಾತರಾಗುವುದು ಕೂಡ ಒಂದು ಸೋಜಿಗ.
ಇತ್ತ ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಕಳೆದ ಒಂದು ದಶಕದಲ್ಲಿ ಎಂಭತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ. ಖ್ಯಾತ ಲೇಖಕರ ಬೆಸ್ಟ್-ಸೆಲ್ಲರ್ ಪುಸ್ತಕಗಳು ಬೆನ್ನುಬೆನ್ನಿಗೆ ಬರುವಂತೆ ಅವರ ಪಾಸ್ ಪೋರ್ಟ್‌ಗಳು ಹೊಸದಾಗುತ್ತಲೇ ಇರುತ್ತವೆ. ಅಂದಾಜು ಎಂಭತ್ತರ ಹೊಸ್ತಿಲಿನಲ್ಲೂ ಹೀಗೆ ಸ್ವಇಚ್ಛೆಯಿಂದ, ನಿರಂತರ ಪ್ರಯಾಣದಲ್ಲಿರುವ ಇವರು ನನ್ನ ಮಟ್ಟಿಗೊಂದು ದೊಡ್ಡ ಅಚ್ಚರಿ. ಅವರೇ ಸ್ವತಃ ಹೇಳುವಂತೆ ತಿಂಗಳ ಅಂದಾಜು 50% ಅವಧಿಯಲ್ಲಿ ಅವರು ಪ್ರಯಾಣದಲ್ಲೇ ಇರುತ್ತಾರಂತೆ. ಹಾಗೆ ನೋಡಿದರೆ ವಾರಕ್ಕೆರಡು ಬಾರಿ ವಿಮಾನದಲ್ಲಿ ಹೋಗುವವರಿಗೆ ಅದೊಂದು ಯಕಃಶ್ಚಿತ್ ವಾಹನವಲ್ಲದೆ ಬೇರೇನೂ ಆಗಿರುವುದಿಲ್ಲ. ಹೀಗಾಗಿ ಊರು-ಕ್ಯಾಂಪುಗಳ ಹೋಲಿಕೆಗಳು ಇವರಿಗೆ ಒಂದು ಮಟ್ಟಿಗೆ ಅನ್ವಯವೇ ಆಗುವುದಿಲ್ಲ. ನಾನು ನಿಂತಲ್ಲೇ ಕ್ಯಾಂಪು, ಕಂಡಿದ್ದೇ ಊರು ಎಂಬ ಧಾಟಿ ಇವರದ್ದು.
ಅಷ್ಟಕ್ಕೂ ನಾವು ಈ ಊರು ಮತ್ತು ಕ್ಯಾಂಪುಗಳನ್ನು ತಕ್ಕಡಿಯಲ್ಲಿಟ್ಟುಕೊಂಡೇ ಯಾಕೆ ತೂಗಬೇಕು? ಕ್ಯಾಂಪಿನೊಳಗೆ ಮನೆಯೂ ಇರಬಹುದು. ಮನೆಯೊಳಗೆ ಕ್ಯಾಂಪೂ ಇರಬಹುದಲ್ಲ!
ಪ್ರಸಾದ್ ನಾಯ್ಕ್
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. ಇವರು ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ- SIR ಘೋಷಿಸಿದ ಚುನಾವಣಾ ಆಯೋಗಕ್ಕೆ 4 ಪ್ರಶ್ನೆಗಳು


