ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರ ಜಾಗೃತಿ, ಬಸವಣ್ಣನ ಇನ್ನಿಲ್ಲದ ಸಾಮಾಜಿಕ ಕ್ರಾಂತಿ, ಫುಲೆ, ಕುದ್ಮುಲ್ ರಂಗರಾಯರಂತವರ ವಿದ್ಯಾದಾನ, ಗಾಂಧೀಜಿಯವರ ಹರಿಜನ ಸೇವೆ ಇವೆಲ್ಲವುಗಳ ಪರಿಣಾಮದಿಂದ ಅಸಮಾನತೆ ತಕ್ಕಮಟ್ಟಿಗಾದರೂ ನಿವಾರಣೆಯಾಗಬೇಕಿತ್ತಲ್ಲವೇ? ಯಾಕಿನ್ನೂ ಯಾವ ಬದಲಾವಣೆಗಳೂ ಕೂಡ ತಳಮಟ್ಟದಲ್ಲಿ ಪರಿಣಾಮ ಬೀರಿಲ್ಲ? ಕಾರಣವಾದರೂ ಏನು? – ಶಂಕರ್ ಸೂರ್ನಳ್ಳಿ, ಲೇಖಕರು
ಮೊನ್ನೆ ಮೊನ್ನೆ ಹುಣಸೂರಿನ ಬ್ರಾಹ್ಮಣರ ಬೀದಿಯಲ್ಲಿನ ಶ್ರೀಲಕ್ಷ್ಮೀ ನರಸಿಂಹ ದೇಗುಲದಲ್ಲಿ ನಡೆದ ಸಹಪಂಕ್ತಿ ಭೋಜನ ಕಾರ್ಯಕ್ರಮ ಸುದ್ದಿ ಮಾಡಿತ್ತು. ಅಲ್ಲಿನ ಬ್ರಾಹ್ಮಣರ ಬೀದಿಯ ಶ್ರೀಯುತ ಗುರುರಾಜ್ ರವರ ಕುಟುಂಬ ಮತ್ತು ಇನ್ನಿತರ ಬ್ರಾಹ್ಮಣ ಪ್ರಮುಖರೆಲ್ಲ ಸೇರಿಕೊಂಡು ದೇಗುಲದ ಹೊರಭಾಗಕ್ಕಷ್ಟೇ ಸೀಮಿತವಿದ್ದ ದಲಿತರನ್ನು ಒಳಗೆ ಕರೆದು ಮಂಗಳಾರತಿಯನ್ನೂ ನೀಡಿ ಗೌರವಿಸಿದ್ದುದರ ಜೊತೆಗೆ ಬ್ರಾಹ್ಮಣ ಸಮುದಾಯದೊಂದಿಗೆ ಸಹಭೋಜನವನ್ನೂ ನಡೆಸಿದರು. ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡ ಅಲ್ಲಿನ ವಿಪ್ರಕೂಟ ನಿಜಕ್ಕೂ ಅಭಿನಂದನಾರ್ಹರು. ಆದರೆ ಈ ಕಾರ್ಯಕ್ರಮದ ಆಯೋಜಕರ ಆಶಯ ಇಲ್ಲಿಗೆ ನೆರೆವೇರಿದಂತಾಯ್ತೇ ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ.
ಹೌದು. ಈ ಸುಧಾರಣೆ ಬದಲಾವಣೆಗಳು ಇಂತವೆಲ್ಲ ಜಾದೂತಂತ್ರದಂತೆ ಒಂದೇ ಕ್ಷಣಕ್ಕೆ ಅಥವಾ ಒಂದೇ ದಿನಕ್ಕೆ ಆಗಿಬಿಡುವಂಥದ್ದೇನಲ್ಲ. ಹಾಗಾಗಿ ಜನರನ್ನು ಜಾಗೃತಿಗೊಳಿಸಲು ಇದೊಂದು ಪೂರಕ ಕ್ರಮ ಎಂದುಕೊಂಡರೂ ಕೂಡ ಇಂತಹ ತೋರಿಕೆಯ ಕಾರ್ಯಕ್ರಮಗಳು ನಡೆದರೆಷ್ಟು ಬಿಟ್ಟರೆಷ್ಟು ಅಂತನ್ನಿಸೋದು ಕೂಡ ಉಂಟು.
ಜಾತೀಯತೆ ಲಿಂಗ ತಾರತಮ್ಯ ಈ ದೇಶಕ್ಕಂಟಿದ ದೊಡ್ಡ ಶಾಪ. ಕೆಲವರು ಹೇಳುವುದುಂಟು ನಾವು ನಾಗರೀಕತೆಯ ಉತ್ತುಂಗದಲ್ಲಿದ್ದಾಗ ಇಂಗ್ಲೆಂಡ್ ಮೊದಲಾದೆಡೆಗಳಲ್ಲಿನ ಜನ ಅನಾಗರೀಕರಂತೆ ಅಲೆದಾಡುತ್ತಿದ್ದರು ಎಂದು. ಹೌದಪ್ಪ, ಅವರೆಲ್ಲ ಮೊನ್ನೆ ಮೊನ್ನೆ ನಾಗರೀಕತೆ, ಸೌಜನ್ಯ ಕಲಿತಂತವರು. ಹಾಗೂ ಅವರಲ್ಲೂ ಬಹಳಷ್ಟು ಭೇದಭಾವವಿತ್ತು ಎಂದೇ ತಿಳಿಯೋಣ. ಗುಲಾಮಗಿರಿಗಾಗಿ ಆಫ್ರಿಕಾದಿಂದ ಕರೆತಂದ ನೀಗ್ರೋಗಳನ್ನು ದನಗಳಂತೆ ಮಾರುತ್ತಿದ್ದರು. ಮಹಿಳೆಯರಿಗೆ ಮತಾಧಿಕಾರವಿದ್ದಿರಲಿಲ್ಲ ಮತ್ತು ಇನ್ನೇನೋ ಅಂದೇ ತಿಳಿಯೋಣ. ಆದರೆ ಅಲ್ಪ ಕಾಲದಲ್ಲಿ ಅವರುಗಳು ಬದಲಾವಣೆಗೆ ತೆರೆದುಕೊಂಡಂತಹ ರೀತಿ ಹಳೆಯ ನಾಗರೀಕರಾದ ನಮಗಿನ್ನೂ ಶತ ಸಹಸ್ರಮಾನ ಕಳೆದರೂ ಸಾಧ್ಯವಾಗದಿರುವುದು ನಿಜಕ್ಕೂ ಖೇದಕರ.

ಯುರೋಪಿನದ್ದೇ ಮತ್ತೊಂದು ತುಕಡಾ ಅನ್ನಿಸಿರುವ ಅಮೇರಿಕಾದಲ್ಲಿ ನೀಗ್ರೋ ಜನಾಂಗದ ವ್ಯಕ್ತಿ ರಾಷ್ಟ್ರಾಧ್ಯಕ್ಷನೂ ಆದರೆ ನಮ್ಮಲ್ಲಿ ಇಲ್ಲಿನದೇ ಮೂಲ ಜನಾಂಗದ ದಲಿತ ವ್ಯಕ್ತಿ ಮದುವೆಗೆಂದು ಕುದುರೆಯೇರಿದರೆ ಹಲ್ಲೆ ನಡೆಸುವಂತಹ ಪರಿಸ್ಥಿತಿ. ತಿಳಿಯದೇ ಪಕ್ಕದಲ್ಲಿ ಊಟಕ್ಕೆ ಕುಳಿತರೆ ಜಾತಿ ಕಾರಣಕ್ಕೆ ಮುಲಾಜಿಲ್ಲದೆ ಎಬ್ಬಿಸಿ ಕಳಿಸುವಂತಹ ಹೀನಾತಿಹೀನ ಸಂಪ್ರದಾಯಗಳು (ವರ್ಷಗಳ ಹಿಂದೆ ಉಡುಪಿಯ ದೇಗುಲವೊಂದರಲ್ಲಿ ಗೊತ್ತಿಲ್ಲದೇ ಬ್ರಾಹ್ಮಣ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದ ಮಹಿಳೆ, ಮಗು ಮತ್ತು ಹಿರಿಯ ವ್ಯಕ್ತಿಯನ್ನು ಮುಲಾಜಿಲ್ಲದೆ ಎಬ್ಬಿಸಲಾಗಿತ್ತು. ಅಂದಹಾಗೆ, ಆ ಕುಟುಂಬ ದಲಿತ ಯಾ ಹಿಂದುಳಿದ ಜಾತಿಗೆ ಸೇರಿದ್ದೇನಲ್ಲ ಮೇಲ್ವರ್ಗದ್ದೆ ಆದರೆ ಬ್ರಾಹ್ಮಣ ಸಮುದಾಯಕ್ಕೆ ಸೇರಿರಲಿಲ್ಲ ಅಷ್ಟೇ)
ಹುಣಸೂರಿನಲ್ಲಿ ನಡೆದ ಸಹಪಂಕ್ತಿ ಭೋಜನದ ನಡೆ ನಿಜಕ್ಕೂ ಅಭಿನಂದನಾರ್ಹ ಎಂಬುದಕ್ಕೆ ಎರಡು ಮಾತಿಲ್ಲ. ಆದರೆ ಈ ಎಲ್ಲ ಸದಾಶಯದ ಪ್ರಕ್ರಿಯೆಗಳೆಲ್ಲ ಕೊನೆಗೆ ಕೇವಲ ತೋರಿಕೆಯ ನಡೆಗಳಂತೆ ಪರಿವರ್ತಿತಗೊಳ್ಳುವುದು ಮಾತ್ರ ಯಾತಕ್ಕಾಗಿ ? ಸೀಮಿತ ಜನ ಮತ್ತು ಸೀಮಿತ ವೇಳೆಗಷ್ಟೇ ನಿರ್ಬಂಧಿತವೆನಿಸುವ (ನಂತರ ಅಲ್ಲೆಲ್ಲೂ ಕೂಡ ಭೇದಭಾವದ ಆಚರಣೆಗಳಲಿ ಎಳ್ಳಷ್ಟೂ ಬದಲಾವಣೆ ಕಾಣದು) ಇದು ಪರಿವರ್ತನೆಯ ಲಕ್ಷಣವಂತೂ ಖಂಡಿತ ಅಲ್ಲ. ಸುಮ್ಮನೆ ಗಮನಿಸಿ. ಮಹಾತ್ಮಾ ಬುದ್ಧನಿಂದ ಹಿಡಿದು ಬಸವಣ್ಣ, ಕನಕದಾಸರು ಶಾಹು ಮಹಾರಾಜ್, ಜೋತಿಬಾ ಫುಲೆ, ಕುದ್ಮುಲ್ ರಂಗರಾಯರು, ಅಂಬೇಡ್ಕರ್, ಮಹಾತ್ಮಾ ಗಾಂಧಿಯಿಂದ ಹಿಡಿದು ಇಂದಿನ ಹಲವಾರು ಸಹೃದಯಿಗಳ ತನಕ ಭೇದಭಾವ ತಾರತಮ್ಯಗಳ ವಿರುದ್ಧ ಹೋರಾಟ, ಚಳುವಳಿ ಅಥವಾ ಜಾಗೃತಿಗೊಳಿಸುವಂತಹ ಪ್ರಯತ್ನಗಳಾಗುತ್ತಲೇ ಇದ್ದರೂ ಕೂಡ ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಎಂಬಂತೆ ಕಾಲಕ್ಕೆ ತಕ್ಕಂತೆ ಇಂದಿನ ಆಧುನಿಕ ಕಾಲದಲ್ಲೂ ಸಹ ಜಾತೀಯತೆ ತಾರತಮ್ಯಗಳು ಒಂದಲ್ಲ ಒಂದು ಬಗೆಯಲ್ಲಿ ಜೀವಂತವಿರುವುದಾದರೂ ಯಾತಕ್ಕೆ ?
ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರ ಜಾಗೃತಿ, ಬಸವಣ್ಣನ ಇನ್ನಿಲ್ಲದ ಸಾಮಾಜಿಕ ಕ್ರಾಂತಿ, ಫುಲೆ, ಕುದ್ಮುಲ್ ರಂಗರಾಯರಂತವರ ವಿದ್ಯಾದಾನ, ಗಾಂಧೀಜಿಯವರ ಹರಿಜನ ಸೇವೆ ಇವೆಲ್ಲವುಗಳ ಪರಿಣಾಮದಿಂದ ಅಸಮಾನತೆ ತಕ್ಕಮಟ್ಟಿಗಾದರೂ ನಿವಾರಣೆಯಾಗಬೇಕಿತ್ತಲ್ಲವೇ? ಯಾಕಿನ್ನೂ ಯಾವ ಬದಲಾವಣೆಗಳೂ ಕೂಡ ತಳಮಟ್ಟದಲ್ಲಿ ಪರಿಣಾಮ ಬೀರಿಲ್ಲ? ಕಾರಣವಾದರೂ ಏನು?
ಹೌದು, ಜಾತೀಯತೆ ಮೊದಲಿನಂತಿಲ್ಲ. ಜನರಿಗೆ ಜಾತಿ ಲಿಂಗಗಳನ್ನೂ ಮೀರಿ ವಿದ್ಯೆ ಲಭಿಸುತ್ತಿದೆ. ಸ್ವಂತ ಕಾರು ಮನೆ ಜಮೀನುಗಳಿವೆ. ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕುಗಳಿವೆ. ಆದರಿದು ಸಾರ್ವತ್ರಿಕವೇನಲ್ಲ. ಪಟ್ಟಣಗಳಲ್ಲಿ ಸ್ವಲ್ಪ ಬದಲಾವಣೆಗಳಿದ್ದರೂ ಅದು ಸಂವಿಧಾನ, ಕಾನೂನು, ವಿದ್ಯೆಗಳ ಫಲವೇ ಹೊರತು ಸಂಪೂರ್ಣ ಜನಜಾಗೃತಿಯ ಫಲಗಳಲ್ಲ. ಹಳ್ಳಿಗಾಡಿನಲ್ಲಿ ಇನ್ನೂ ಕೂಡ ದೇಗುಲ ಪ್ರವೇಶಕ್ಕೆ ನಿರ್ಬಂಧವಿದೆ. ಸ್ವತಃ ಮಂತ್ರಿ ಶಾಸಕರೆನಿಸಿಕೊಂಡವರೂ ಸಹ ಹೊರಗೆ ನಿಲ್ಲುವ ಪರಿಪಾಠವಿದೆ.
ಕೆಲ ವರ್ಷದ ಹಿಂದೆ ನಮ್ಮದೇ ರಾಜ್ಯದ ಒಂದೆಡೆ ದಲಿತ ಬಾಲಕನೊಬ್ಬ ಗೊತ್ತಿಲ್ಲದೇ ದೇಗುಲ ಪ್ರವೇಶಿಸಿದನೆಂದು ಅವನ ಬಡ ಹೆತ್ತವರಿಗೆ ರು. ೨೫೦೦೦ ದಂಡವನ್ನು ಹಾಕಲಾಗಿತ್ತು. ಕನಿಷ್ಠ ಮಕ್ಕಳು ದೇವರಂತೆ ಎಂದು ಭಾವಿಸಿ ಕ್ಷಮಿಸುವ ಗುಣ ಈ ಜಾತೀಯತೆ ರೋಗದೆದುರು ಯಾರಿಗೂ ಬರಲೇ ಇಲ್ಲವೆಂಬುದು ವಿಸ್ಮಯ.
ಹೌದು, ಯಾವುದೇ ಸಮಾನತಾ ಆಶಯದ ನಡೆಗಳಾಗಲಿ ಅದರಲ್ಲಿ ಪ್ರಾಮಾಣಿಕತೆ ಮತ್ತು ದೃಢತೆ (ಯಾರು ಏನು ಹೇಳುವರೋ ಎಂಬಿತ್ಯಾದಿ ಭಯವಿರದ) ಮತ್ತು ಸಾಮೂಹಿಕವಾಗಿ ಬದಲುಗೊಳ್ಳುವ ಭಾವ ಇರದೇ ಇದ್ದಲ್ಲಿ ಅವೆಲ್ಲ ಕೇವಲ ನಾಟಕೀಯ ನಡೆಗಳಾಗಿ ಸೋರಿ ಹೋಗುತ್ತವೆಯೇ ವಿನಃ ಇದರಿಂದ ಯಾವ ಧನಾತ್ಮಕ ಪರಿಣಾಮಗಳು ಸಂಭವಿಸದು .
ಶಂಕರ್ ಸೂರ್ನಳ್ಳಿ
ಲೇಖಕರು
ಇದನ್ನೂ ಓದಿ-ಮೋದಿ, ಇಂದಿರಾ ಮತ್ತು ಚಿನ್ನದ ಸುತ್ತ…


