ನವದೆಹಲಿ : ಭಾರತೀಯ ಧ್ವಜ ಹೊತ್ತ ಹಡಗಿನ ಮೇಲೆ ಒಮಾನ್ ಕರಾವಳಿಯ ಬಳಿ ಕ್ಷಿಪಣಿ ದಾಳಿ ನಡೆದಿದೆ. ಭಾರತ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಸದ್ಯ ಎಲ್ಲಾ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ದಾಳಿಯನ್ನು ಯಾರು ನಡೆಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದ ಅಧಿಕೃತ ಹೇಳಿಕೆಯಲ್ಲಿ ದಾಳಿ ಮಾಡಿದವರ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಯುದ್ಧ ವಿರಾಮದ ನಂತರವೂ ಸಹ ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಪರಿಸ್ಥಿತಿ ಇನ್ನೂ ಸೂಕ್ಷ್ಮವಾಗಿದೆ ಎಂಬುದನ್ನು ಇದು ಖಚಿತಪಡಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ನೀಡಿದ ಹೇಳಿಕೆಯಲ್ಲಿ, ಒಮಾನ್ ಕರಾವಳಿಯಲ್ಲಿ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲೆ ನಡೆದ ದಾಳಿ ನಡೆದಿದೆ. ವಾಣಿಜ್ಯ ಹಡಗು ಸಾಗಣೆ ಮತ್ತು ನಾವಿಕರ ಮೇಲೆ ನಿರಂತರವಾಗಿ ಗುರಿ ಇಡುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ. ಹಡಗಿನಲ್ಲಿದ್ದ ಎಲ್ಲಾ ಭಾರತೀಯ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಇದೇ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸಿ ಸಹಾಯ ಮಾಡಿದಕ್ಕಾಗಿ ಒಮಾನ್ ಅಧಿಕಾರಿಗಳಿಗೆ ಭಾರತ ಧನ್ಯವಾದ ಹೇಳಿದೆ.
ಎರಡು ಹಡಗು ಭಾರತದತ್ತ:
ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಹೊತ್ತ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಆದರೆ ಭಾರತದ ಧ್ವಜ ಹೊಂದಿದ್ದ ಮತ್ತೊಂದು ಹಡಗು ಆಯಕಟ್ಟಿನ ಹಡಗು ಕಾರಿಡಾರ್ ಬಳಿ ಡಿಕ್ಕಿ ಹೊಡೆದು ಮುಳುಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಎಲ್‌ಪಿಜಿ ಟ್ಯಾಂಕರ್ ಸಿಮಿ, ಮೇ 13 ರಂದು ಜಲಸಂಧಿಯ ಮೂಲಕ ಸಾಗಿತು. ಅಲ್ಲದೆ ಎನ್‌ವಿ ಸನ್‌ಶೈನ್ ಗುರುವಾರ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿತು. ಇದರೊಂದಿಗೆ ಎರಡು ತಿಂಗಳ ಹಿಂದೆ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಂತರ ಟೆಹ್ರಾನ್ ಪ್ರತೀಕಾರ ತೀರಿಸಿಕೊಳ್ಳಲು ಹಾರ್ಮುಜ್ ಮುಚ್ಚಲ್ಪಟ್ಟ ನಂತರ ಆ ಜಲ ಮಾರ್ಗವನ್ನು ದಾಟಿದ ಒಟ್ಟು ಭಾರತೀಯ ಹಡಗುಗಳ ಸಂಖ್ಯೆ 13 ಕ್ಕೆ ತಲುಪಿದೆ.
ಸೊಮಾಲಿಯಾದಿಂದ ಯುಎಇಯ ಶಾರ್ಜಾಗೆ ಪ್ರಯಾಣಿಸುತ್ತಿದ್ದ ಭಾರತೀಯ ಹಡಗು ಹಾಜಿ ಅಲಿ ಬುಧವಾರ ಬೆಳಗ್ಗೆ ಒಮಾನಿ ಸಮುದ್ರದಲ್ಲಿ ಡಿಕ್ಕಿ ಹೊಡೆದಿದೆ. ಬಳಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಮುಳುಗಲು ಕಾರಣವಾಯಿತು. ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಖೇಶ್ ಮಂಗಲ್ ಹೇಳಿದ್ದಾರೆ.
ಹಾಜಿ ಅಲಿ ಹಡಗಿನಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ಒಮಾನಿ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ರಕ್ಷಿಸಿದೆ ಮತ್ತು ಅವರು ಒಮಾನ್‌ನ ದಿಬ್ಬಾ ಬಂದರನ್ನು ತಲುಪಿದ್ದಾರೆ. ಸಿಬ್ಬಂದಿ ಸುರಕ್ಷಿತರಾಗಿದ್ದಾರೆಂದು ವರದಿಯಾಗಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಅಗತ್ಯ ಔಪಚಾರಿಕತೆಗಳು ಪೂರ್ಣಗೊಂಡಿವೆ” ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

