2020ರಲ್ಲಿ, ಅಂದರೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ತಮ್ಮ ಓಡಾಟಕ್ಕೆಂದು ಜನರ ತೆರಿಗೆ ಹಣದಲ್ಲಿ 8,458 ಕೋಟಿ ರೂ. ವೆಚ್ಚ ಮಾಡಿ ಎರಡು ವಿದೇಶಿ, ಐಷಾರಾಮಿ ಬೋಯಿಂಗ್-777-300 ಇ ಆರ್ ವಿಮಾನಗಳನ್ನು ಖರೀದಿಸಿದ ಮೋದಿಯವರು ಸರ್ಕಾರಿ ಸಾರಿಗೆ-ಮೆಟ್ರೋ ಬಳಸುವಂತೆ ಜನರಿಗೆ ಬೋಧಿಸುವ ನೈತಿಕತೆ ಉಳಿಸಿಕೊಂಡಿದ್ದಾರಾ? ಸ್ವದೇಶಿ, ಆತ್ಮನಿರ್ಭರ್, ಮೇಕ್ ಇನ್ ಇಂಡಿಯಾ ಎನ್ನುತ್ತಲೇ ದುಬಾರಿ ಫಾರಿನ್ ಬ್ರಾಂಡೆಡ್ ಮೇಬ್ಯಾಕ್ ಕನ್ನಡಕ (ಜರ್ಮನಿ), ಮಾಂಟ್ಬ್ಲಾಂಕ್ ಪೆನ್ (ಜರ್ಮನಿ), ಮೊವ್ಯಾಡೊ ವಾಚ್ (ಸ್ವಿಟ್ಜರ್ಲೆಂಡ್), ಬಾವಲ್ಗ್ಯಾರಿ ಐವೇರ್ (ಇಟಲಿ) ಬಳಸುವ ಮೋದಿಯವರಿಗೆ ಸರಳತೆಯನ್ನು ಬೋಧಿಸುವ ನೈತಿಕತೆ ಇದೆಯೇ? – ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು.
ಮೋದಿಜಿ ಯಾವುದಾದರು ಕಾರ್ಯದಲ್ಲಿ ಎಡವಿದರೆ ಅದನ್ನು ಸಮರ್ಥಿಸಿಕೊಳ್ಳಲು ಬಿಜೆಪಿಯವರು ಮತ್ತು ಅವರ ಅನುಯಾಯಿಗಳು ಇತಿಹಾಸದಿಂದ ನೆಹರೂ ಅವರನ್ನೋ, ಇಂದಿರಾ ಅವರನ್ನೋ, ಕಡೇಪಕ್ಷ ಮನಮೋಹನ್ ಸಿಂಗ್ ಅವರನ್ನೋ ಎಳೆದುತಂದು ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ. ಅದು ಅವರ ಅನಿವಾರ್ಯತೆ. ಆದರೆ, ಮೋದಿಜಿ ಒಂದು ಸರಿಯಾದ ಕೆಲಸವನ್ನು ಮಾಡಿದಾಗಲೂ, ಅದನ್ನು ಸಮರ್ಥಿಸಿಕೊಳ್ಳಲು ಬಿಜೆಪಿಯವರಿಗೆ ಕಾಂಗ್ರೆಸ್ ನಾಯಕರೇ ಬೇಕಾದುದು ಮಾತ್ರ ಅವರ ದುಸ್ಥಿತಿಗೆ ಹಿಡಿದ ಕನ್ನಡಿ!
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕಾರಣಕ್ಕೆ ಮೊನ್ನೆ ಮೋದಿಜಿಯವರು ದೇಶದ ಜನರಿಗೆ ಮಿತಬಳಕೆಯ ಸಲಹೆ ಕೊಟ್ಟರು. ಪೆಟ್ರೋಲ್-ಡೀಸೆಲ್-ಅಡುಗೆ ಎಣ್ಣೆ ಕಡಿಮೆ ಬಳಸಿ, ಒಂದು ವರ್ಷ ವಿದೇಶ ಪ್ರವಾಸ ಮಾಡಬೇಡಿ, ಚಿನ್ನ ಖರೀದಿ ಮಾಡಬೇಡಿ ಅಂತೆಲ್ಲ ಅಷ್ಟಸೂತ್ರಗಳನ್ನು ಮುಂದಿಟ್ಟರು. ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಇಂತಹ ಉಪದೇಶಗಳೇನೊ ಒಳ್ಳೆಯವು. ಆದರೆ, ಅವುಗಳನ್ನು ಇತರರಿಗೆ ನೀಡುವ ಮುನ್ನ ನಾವು ಅವುಗಳನ್ನು ಪಾಲಿಸಬೇಕಾಗುತ್ತದೆ. ಮೋದಿಯವರ ವೈಫಲ್ಯ ಇದ್ದುದೇ ಇಲ್ಲಿ!

ಮೊದಲನೆಯದಾಗಿ, ತಾವು ಉಪದೇಶಿಸಿದ ಮಿತವ್ಯಯ ಸರಳ ಬದುಕನ್ನು ಅವರೆ ಅನುಸರಿಸದೆ ಇದ್ದುದು; ಎರಡನೆಯದು, ದೇಶವನ್ನು ಇಂಥಾ ಬಿಕ್ಕಟ್ಟಿಗೆ ತಂದು ನಿಲ್ಲಿಸಿದ್ದರೂ, ಇಷ್ಟು ದಿನ `ಎಲ್ಲವೂ ಸುಸ್ಥಿತಿಯಲ್ಲಿದೆ’ ಎಂದು ಹೇಳಿಕೊಂಡು ಬಂದಿದ್ದು. ಇದರ ಸುತ್ತ ಪ್ರಶ್ನೆಗಳು ಭುಗಿಲೆದ್ದ ಕೂಡಲೇ, ಇಂದಿರಾ ಗಾಂಧಿ 1967ರಲ್ಲಿ ಚಿನ್ನವನ್ನು ಬಳಸದಂತೆ ದೇಶದ ಜನರಿಗೆ ಹೇಳಿದ್ದರು ಎಂಬ `ದಿ ಹಿಂದೂ’ ಪತ್ರಿಕೆಯ ಪೇಪರ್ ಕಟಿಂಗ್ ಒಂದನ್ನು ಹರಿಬಿಡಲಾಯ್ತು. ವಿಷಯವನ್ನು ಆಡಳಿತ ವೈಫಲ್ಯ ಮತ್ತು ಮಾದರಿ ನಾಯಕತ್ವದಿಂದ ತಿರುಗಿಸಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಎಂಬ ತಥಾಕಥಿತ ಚರ್ಚೆಯತ್ತ ತಳ್ಳುವುದು ಅದರ ಉದ್ದೇಶವಾಗಿತ್ತು. ಆದರೆ ಅದು ತನ್ನ ಪ್ರಕಟಿತ ಸುದ್ದಿಯಲ್ಲ ಎಂದು ಸ್ವತಃ ದಿ ಹಿಂದೂ ಪತ್ರಿಕೆಯೇ ಸ್ಪಷ್ಟನೆ ಕೊಡುತ್ತಿದ್ದಂತೆ, ಬಂದಷ್ಟೇ ವೇಗದಲ್ಲಿ ಆ ಪೇಪರ್ ತುಣುಕು ಮೂಲೆಹಿಡಿಯಿತು.
ಆದರೆ ಇಲ್ಲಿ ಪ್ರಸ್ತಾಪಿಸುತ್ತಿರುವ ವಿಚಾರ, ಹಾಗೆ ಬಳಸಲ್ಪಟ್ಟ ಪೇಪರ್ ಕಟಿಂಗ್ನದ್ದಲ್ಲ. ಚಿನ್ನವನ್ನು ಕೇಂದ್ರೀಕರಿಸಿಕೊಂಡ ಇಂದಿರಾ ಮತ್ತು ಮೋದಿ ನಡುವಿನ ಹೋಲಿಕೆಯದ್ದು. ಅದಕ್ಕು ಮೊದಲು, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನದ ಮಿತಬಳಕೆಯ ಉಪದೇಶ ಯಾಕೆ ಒಳಿತಿನದ್ದು ಎಂಬುದನ್ನು ನೋಡೋಣ.
ಪ್ರತಿ ದೇಶವು ಯಾವುದೇ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ದೇಶವನ್ನು ನಿರ್ವಹಿಸಲು ಅನುಕೂಲವಾಗುವಂತೆ ಒಂದಷ್ಟು ಸಂಕಷ್ಟನಿಧಿಯನ್ನು ತನ್ನ ಕೇಂದ್ರೀಯ ಬ್ಯಾಂಕ್ ಮೂಲಕ ಶೇಖರಿಸಿಟ್ಟಿರುತ್ತವೆ. ಇದನ್ನು ಫಾರಿನ್ ಎಕ್ಸ್ಚೇಂಜ್ ರಿಸರ್ವ್ (ಫಾರೆಕ್ಸ್) ಎಂದು ಕರೆಯಲಾಗುತ್ತೆ. ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದರೆ, ಆ ದೇಶದ ಕರೆನ್ಸಿ ಮೌಲ್ಯ ಕುಸಿದಿದೆ ಎಂದರ್ಥ. ಒಂದುವೇಳೆ, ತನ್ನ ಕರೆನ್ಸಿಯಲ್ಲೆ ಆ ನಿಧಿಯನ್ನು ಶೇಖರಿಸಿಟ್ಟುಕೊಂಡರೆ ಅಂತಹ ಸಮಯದಲ್ಲಿ ಕುಸಿದ ಕರೆನ್ಸಿಯಿಂದ ಹೆಚ್ಚೇನು ಪ್ರಯೋಜನವಾಗದು. ಹಾಗಾಗಿ ಹೆಚ್ಚು ಸ್ಥಿರ ಮತ್ತು ಪ್ರಚಲಿತದಲ್ಲಿರುವ ವಿದೇಶಿ ಕರೆನ್ಸಿಗಳ ರೂಪದಲ್ಲಿ (ಡಾಲರ್, ಯೂರೋ, ಪೌಂಡ್, ಯೆನ್ ಇತ್ಯಾದಿ) ಅದನ್ನು ಕೂಡಿಡಲಾಗಿರುತ್ತದೆ. ವಿದೇಶಿ ಸರ್ಕಾರದ ಬಾಂಡ್ ಅಥವಾ ಟ್ರೆಜರಿ ಬಿಲ್ಗಳ ರೂಪದಲ್ಲಿ ಇವುಗಳಿರುತ್ತವೆ. ಆದರೆ ಇಲ್ಲೊಂದು ಸಮಸ್ಯೆ ಇದೆ. ಒಮ್ಮೊಮ್ಮೆ ಪೌಂಡ್ಗೆ ಎದುರಾಗಿ ಡಾಲರ್ ಮೌಲ್ಯ ಕುಸಿದಾಗ ಡಾಲರ್ ರೂಪದಲ್ಲಿ ನಾವು ಶೇಖರಿಸಿಟ್ಟ ಫಾರೆಕ್ಸ್ ರಿಸರ್ವ್ ಮೌಲ್ಯ ಕುಸಿದು, ಪೌಂಡ್ ರೂಪದ ರಿಸರ್ವ್ ಮೌಲ್ಯ ಹೆಚ್ಚಾಗಬಹುದು. ಅಥವಾ ಡಾಲರ್ಗೆ ಎದುರಾಗಿ ಪೌಂಡ್ ಕುಸಿದಾಗ, ಪೌಂಡ್ ರೂಪದ ನಮ್ಮ ಶೇಖರಣೆಯ ರಿಸರ್ವ್ ಮೌಲ್ಯ ಕುಸಿಯಬಹುದು. ಈ ಏರಿಳಿತ ಇದ್ದೇ ಇರುತ್ತದೆ.
ಆದರೆ ನಾವು ಚಿನ್ನದ ರೂಪದಲ್ಲಿ ಫಾರೆಕ್ಸ್ ರಿಸರ್ವ್ ಶೇಖರಿಸಿಟ್ಟಾಗ ಈ ಸಮಸ್ಯೆ ಅಷ್ಟಾಗಿ ಬಾಧಿಸುವುದಿಲ್ಲ. ಯಾವ ದೇಶದ ಕರೆನ್ಸಿ ಆ ನಮ್ಮ ಬಿಕ್ಕಟ್ಟಿನ ಕಾಲದಲ್ಲಿ ಹೆಚ್ಚಿರುತ್ತದೋ ಅದರೊಂದಿಗೆ ವಿನಿಮಯ ಮಾಡಿಕೊಂಡು, ದೇಶ ನಿರ್ವಹಣೆಗೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ಹಾಗಾಗಿ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಈ ರೀತಿ ಚಿನ್ನ ರೂಪದ ರಿಸರ್ವ್ ಅನ್ನು “safe-haven” asset ಎಂದು ಕರೆಯಲಾಗುತ್ತೆ.
ದೇಶ ಬಿಕ್ಕಟ್ಟಿನತ್ತ ಜಾರುತ್ತಿದ್ದಾಗ, ಆಂತರಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಹೆಚ್ಚಾದರೆ ಫಾರೆಕ್ಸ್ ರೂಪದಲ್ಲಿ ಕೂಡಿಟ್ಟ ಚಿನ್ನದ ಸಂಗ್ರಹಣೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಚಿನ್ನದ ಬೇಡಿಕೆಯನ್ನು ಪೂರೈಸಲು ವಿದೇಶಿ ಚಿನ್ನದ ಆಮದಿಗೆ ಮುಂದಾದಷ್ಟೂ, ಈಗಾಗಲೇ ಬಿಕ್ಕಟ್ಟಿನಿಂದಾಗಿ ತನ್ನ ಮೌಲ್ಯ ಕುಸಿತಗೊಂಡಿರುವ ಹೆಚ್ಚೆಚ್ಚು ಕರೆನ್ಸಿ ಹಣವನ್ನು ಸರ್ಕಾರ ಖರ್ಚು ಮಾಡಬೇಕಾಗುತ್ತದೆ. ಇದರಿಂದಾಗಿ ಇಂಧನ, ರಸಗೊಬ್ಬರ, ಔಷಧಿಯಂತಹ ಅಗತ್ಯ ವಸ್ತುಗಳ ಮೇಲೆ ವೆಚ್ಚ ಕಡಿಮೆಯಾಗಿ, ಅವುಗಳ ಆಮದು ಕುಂಠಿತವಾಗುತ್ತದೆ. ಪೂರೈಕೆಯ ಅಭಾವವು ಸಹಜವಾಗಿ ಅವುಗಳ ಬೆಲೆಯೇರಿಕೆಗೆ ಕಾರಣವಾಗುತ್ತದೆ. ಜನೋಪಯೋಗಿ ಆಯಾಮದಿಂದಲು ತಾವು ಅದಕ್ಕೆ ಮಾದರಿಯಾಗಿ ನಿಂತಿರಬೇಕಾಗುತ್ತದೆ. ಈ ವಿಚಾರದಲ್ಲಿ ಮೋದಿಯವರನ್ನು ಇಂದಿರಾಗಾಂಧಿಯವರೊಂದಿಗೆ ಹೋಲಿಸಿ ಸಮರ್ಥಿಸಿಕೊಳ್ಳಬಹುದೇ? ಚರ್ಚೆಯ ದೃಷ್ಟಿಯಿಂದ, ಮೇಲೆ ಉಲ್ಲೇಖಿಸಿದ ಆರ್ಥಿಕ ಉದ್ದೇಶಕ್ಕಾಗಿ ಇಂದಿರಾ ಅವರು ದೇಶದ ಜನರಿಗೆ ಅಂತದ್ದೊಂದು ಕರೆ ಕೊಟ್ಟಿದ್ದು ನಿಜ ಅಂತ ಅಂದುಕೊಂಡರು ಕೂಡಾ (ಅದು ಸುಳ್ಳೆಂಬುದು ಈಗಾಗಲೇ ದೃಢವಾಗಿದೆ), ಹಾಗೆ ಕರೆಕೊಡುವ ನೈತಿಕತೆ ಅವರಿಗಿತ್ತು. 1962ರಲ್ಲಿ ಭಾರತ-ಚೀನಾ ನಡುವೆ ಯುದ್ಧವಾದಾಗ, ದೇಶದ ರಕ್ಷಣಾ ನಿಧಿ ಕ್ಷೀಣಿಸಿತು. ಅಂದಿನ ಪ್ರಧಾನಿ ನೆಹರೂ ಅವರು ನ್ಯಾಷನಲ್ ಡಿಫೆನ್ಸ್ ಫಂಡ್ಗೆ ದೇಣಿಗೆ ನೀಡುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಆಗ ಇಂದಿರಾಗಾಂಧಿ ತಮ್ಮ ಮದುವೆಯ ಸಂದರ್ಭದಲ್ಲಿ ಸ್ತ್ರೀದಾನದ ರೂಪವಾಗಿ ತಮಗಾಗಿ ಬಂದಿದ್ದ 367 ಗ್ರಾಂ ಬಂಗಾರದ ಒಡವೆಗಳನ್ನು ರಕ್ಷಣಾ ನಿಧಿಗೆ ದೇಣಿಗೆ ನೀಡಿದ್ದರು. ಮುಂದೆ ಅವರು ಪ್ರಧಾನಿಯಾದ ನಂತರ, ದೇಶದಲ್ಲಿ ಅಕ್ರಮವಾಗಿ ಚಿನ್ನ ಸಾಗಣೆ ಮತ್ತು ಅನಧಿಕೃತ ಚಿನ್ನ ಸಂಗ್ರಹಣೆಯನ್ನು ತಡೆಗಟ್ಟಲು 1968ರಲ್ಲಿ `ಗೋಲ್ಡ್ ಕಂಟ್ರೋಲ್ ಆಕ್ಟ್’ ಜಾರಿಗೆ ತರುವ ಸಂದರ್ಭದಲ್ಲಿ, “ನಾನು ಈ ಹಿಂದೆ ಏನು ಮಾಡಿಲ್ಲವೋ, ಅದನ್ನು ಮಾಡುವಂತೆ ಜನರಿಗೆ ಹೇಳುವ ಹಕ್ಕು ನನಗಿಲ್ಲ” (I am not asking you to do anything I haven’t already done myself) ಎಂದು ಹೇಳಿದ್ದರು. “ದೇಶವೇ ಸುರಕ್ಷಿತವಿಲ್ಲ ಎಂದಮೇಲೆ, ನಾನು ಮತ್ತು ನನ್ನ ಚಿನ್ನ ಸುರಕ್ಷಿತವೇ? ಚಿನ್ನಕ್ಕಿಂತ ದೇಶದ ಸುರಕ್ಷಿತ ಮುಖ್ಯ” ಎಂದು ತನ್ನ ಸ್ವಂತ ಆಭರಣಗಳನ್ನು ಅರ್ಪಿಸಿದ್ದರಿಂದಲೇ ಹಾಗೆ ಹೇಳುವ ನೈತಿಕತೆ ಅವರಿಗೆ ಲಭಿಸಿತ್ತು ಎನ್ನಬಹುದು.

ಆದರೆ, 2015ರಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಇಂಡಿಯಾಕ್ಕೆ ಬಂದಾಗ ಅವರನ್ನು ಎದುರುಗೊಳ್ಳಲು ಚಿನ್ನದ ಎಳೆಗಳಲ್ಲಿ ತನ್ನ ಹೆಸರನ್ನು ಹೆಣಿಗೆ ಮಾಡಿಸಿಕೊಂಡ ದುಬಾರಿ ಸೂಟನ್ನು ತೊಟ್ಟು ಮೆರೆದ ಮೋದಿಯವರಿಗೆ ಚಿನ್ನವನ್ನು ಬಳಸದಂತೆ ಜನರಿಗೆ ಉಪದೇಶ ನೀಡುವ ನೈತಿಕತೆ ಉಳಿದಿದೆಯೇ? 2020ರಲ್ಲಿ, ಅಂದರೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ತಮ್ಮ ಓಡಾಟಕ್ಕೆಂದು ಜನರ ತೆರಿಗೆ ಹಣದಲ್ಲಿ 8,458 ಕೋಟಿ ರೂ. ವೆಚ್ಚ ಮಾಡಿ ಎರಡು ವಿದೇಶಿ, ಐಷಾರಾಮಿ ಬೋಯಿಂಗ್-777-300 ಇ ಆರ್ ವಿಮಾನಗಳನ್ನು ಖರೀದಿಸಿದ ಮೋದಿಯವರು ಸರ್ಕಾರಿ ಸಾರಿಗೆ-ಮೆಟ್ರೋ ಬಳಸುವಂತೆ ಜನರಿಗೆ ಬೋಧಿಸುವ ನೈತಿಕತೆ ಉಳಿಸಿಕೊಂಡಿದ್ದಾರಾ? ಸ್ವದೇಶಿ, ಆತ್ಮನಿರ್ಭರ್, ಮೇಕ್ ಇನ್ ಇಂಡಿಯಾ ಎನ್ನುತ್ತಲೇ ದುಬಾರಿ ಫಾರಿನ್ ಬ್ರಾಂಡೆಡ್ ಮೇಬ್ಯಾಕ್ ಕನ್ನಡಕ (ಜರ್ಮನಿ), ಮಾಂಟ್ಬ್ಲಾಂಕ್ ಪೆನ್ (ಜರ್ಮನಿ), ಮೊವ್ಯಾಡೊ ವಾಚ್ (ಸ್ವಿಟ್ಜರ್ಲೆಂಡ್), ಬಾವಲ್ಗ್ಯಾರಿ ಐವೇರ್ (ಇಟಲಿ) ಬಳಸುವ ಮೋದಿಯವರಿಗೆ ಸರಳತೆಯನ್ನು ಬೋಧಿಸುವ ನೈತಿಕತೆ ಇದೆಯೇ? ವಿದೇಶಾಂಗ ಸಚಿವಾಲಯವೇ ಘೋಷಿಸಿದಂತೆ, 2015ರಿಂದ 2025ರವರೆಗೆ ತಮ್ಮ ವಿದೇಶ ಪ್ರವಾಸಗಳಿಗೆ 762 ಕೋಟಿ ರೂ. ಖರ್ಚು ಮಾಡಿರುವ ಮೋದಿಯವರು ಈಗ ದೇಶದ ಜನರಿಗೆ ವಿದೇಶ ಪ್ರವಾಸ ಮಾಡಬೇಡಿ ಎನ್ನಬಹುದೇ?
ಇವೆಲ್ಲವೂ ಹಳತಾದವು ಅಂದುಕೊಳ್ಳಿ, ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣಾ ಪ್ರಚಾರದಲ್ಲಿ ಮೋದಿಯವರು ತಮ್ಮ ಪ್ರಚಾರಕ್ಕಾಗಿ ಮಾಡಿದ ಖರ್ಚೆಷ್ಟು? ವ್ಯಯಿಸಿದ ಇಂಧನವೆಷ್ಟು? ಕೇವಲ ಪಶ್ಚಿಮ ಬಂಗಾಳದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ರೋಡ್ ಶೋ ಕೂಡಾ ಸೇರಿದಂತೆ 22 ಸಾರ್ವಜನಿಕ ರ್ಯಾಲಿಗಳಲ್ಲಿ ಮೋದಿಯವರು ಭಾಗವಹಿಸಿದ್ದರು. ಅದಕ್ಕಾಗಿ ಅವರು ಏಳು ಬಾರಿ ದಿಲ್ಲಿಯಿಂದ ಕೊಲ್ಕೊತ್ತಾಗೆ ಪ್ರಯಾಣ ಬೆಳೆಸಿದ್ದರು. ವಾಪಾಸ್ ಪ್ರಯಾಣವನ್ನೂ ಸೇರಿದರೆ 14 ಬಾರಿ ಸಂಚರಿಸಿದ್ದಾರೆ. ದಿಲ್ಲಿಯಿಂದ ಕೊಲ್ಕೊತ್ತಾಗೆ ಸುಮಾರು 1300 ಕಿಮೀ ದೂರವಿದ್ದು, 14 ಸಲ ಸಂಚಾರವೆಂದರೆ ಅಜಮಾಸು 19,000 ಕಿಮೀ ಪ್ರಯಾಣಿಸಿದ್ದಾರೆ! ಮೋದಿ ಬಳಸುವ ಬೋಯಿಂಗ್ 777 ವಿಮಾನಕ್ಕೆ ದಿಲ್ಲಿಯಿಂದ ಕೊಲ್ಕೊತ್ತಾಗೆ ಪ್ರಯಾಣಿಸಲು 2 ಗಂಟೆ ಕಾಲಾವಕಾಶ ಬೇಕು. ಈ ವಿಮಾನ ತನ್ನ ಪ್ರತಿ ಗಂಟೆಯ ಹಾರಾಟಕ್ಕೆ 7,500-8,000 ಲೀಟರ್ ಇಂಧನ ವ್ಯಯಿಸುತ್ತದೆ. ಅಂದರೆ 14 ಬಾರಿ ಪ್ರಯಾಣದಲ್ಲಿ (14×2 = 28 ಗಂಟೆಗಳು) 2,10,000 ಲೀಟರ್ ಇಂಧನ ಖರ್ಚಾಗಿದೆ. ಏವಿಯೇಷನ್ ಟರ್ಬನ್ ಫ್ಯೂಯೆಲ್ಗೆ ಪ್ರತಿ ಲೀಟರ್ಗೆ ಈಗ ದೆಹಲಿ ದರದಂತೆ 104.9 ರೂ. ಇದೆ. ಅಂದರೆ ಅಜಮಾಸು 2.20 ಕೋಟಿ ರೂ. ಕೇವಲ ವಿಮಾನದ ಇಂಧನಕ್ಕೆಂದೇ ಖರ್ಚಾಗಿದೆ. ಇದೆಲ್ಲವೂ ಅವರ ರಸ್ತೆ ಸಂಚಾರ, ಬೆಂಗಾವಲು ಪಡೆ ವಾಹನಗಳ ಇಂಧನ, ರ್ಯಾಲಿಗಳ ಆಯೋಜನೆಯ ಖರ್ಚನ್ನು ಬಿಟ್ಟು ಕೇವಲ ವಿಮಾನ ಹಾರಾಟಕ್ಕೆ ಖರ್ಚಾದ ಬಾಬ್ತು, ಅದೂ ಪಶ್ಚಿಮ ಬಂಗಾಳ ಒಂದೇ ರಾಜ್ಯದಲ್ಲಿ.
ಮೋದಿಯವರು ಇಷ್ಟೆಲ್ಲ ಇಂಧನ ವ್ಯಯಿಸಿದ್ದು ಯಾವಾಗ? ಯಾವ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ನಾವೀಗ ಮಿತವ್ಯಯ ಮಾಡಬೇಕು, ಪೆಟ್ರೋಲ್-ಡೀಸೆಲ್ ಕಡಿಮೆ ಖರ್ಚು ಮಾಡಬೇಕು, ವರ್ಕ್ ಫ್ರಂ ಹೋಮ್ ಮಾಡಬೇಕು ಎಂದು ಮೋದಿಯವರು ಹೇಳುತ್ತಿದ್ದಾರೋ, ಆ ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಬಣಿಸಿದ್ದ ಅವಧಿಯಲ್ಲೇ ಮೋದಿಯವರು ಚುನಾವಣಾ ಪ್ರಚಾರಕ್ಕೆ ವ್ಯಯಿಸಿದ ಇಂಧನ ಇದು! ತಮ್ಮ ಐಷಾರಾಮಿ, ಅನಗತ್ಯ ವೆಚ್ಚದ ಖರ್ಚುಗಳೆಲ್ಲ ಪೂರೈಸಿದ ನಂತರ ಈಗ ಜನರಿಗೆ ಉಪದೇಶ ನೀಡಿದರೆ, ಅದು ಮಾದರಿ ನಾಯಕತ್ವ ಎನಿಸಿಕೊಳ್ಳುವುದೇ?
ಮಾಚಯ್ಯ ಎಂ ಹಿಪ್ಪರಿಗಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಪ್ರಭುತ್ವದ ಆರ್ಥಿಕ ವೈಫಲ್ಯದ ಹೊಣೆ; ಪ್ರಜೆಗಳ ಬದುಕಿನ ಮೇಲೆ ಹೊರೆ


