ರಂಗ ಪ್ರಯೋಗ ವಿಮರ್ಶೆ |  ದ್ವೇಷದ ಜ್ವಾಲೆಯಲಿ ಮಿಂದೆದ್ದ ‘ಮಿತ್ತಬೈಲ್ ಯಮುನಕ್ಕ’

ಕನ್ನಡ ರಂಗಭೂಮಿಯ ಮಹಾಪೋಷಕರಾಗಿದ್ದ ಡಾ.ಡಿ.ಕೆ.ಚೌಟರವರು ತೀರಿಕೊಂಡು ಏಳು ವರ್ಷಗಳಾಗಿದ್ದರೂ ತಮ್ಮ ಕಾದಂಬರಿ ಹಾಗೂ ನಾಟಕಗಳ ಮೂಲಕ ಮರುಹುಟ್ಟು ಪಡೆಯುತ್ತಲೇ ಇದ್ದಾರೆ. ಚೌಟರವರ ಅಗಲಿಕೆಯ ನೆನಪಿನಲ್ಲಿ, ಅವರ ಜನುಮ ದಿನದ ನೆಪದಲ್ಲಿ ಅವರ ‘ ಅನನ್ಯ’ ಕಾದಂಬರಿ ಆಧಾರಿತ “ಮಿತ್ತಬೈಲ್ ಯಮುನಕ್ಕ” ನಾಟಕವನ್ನು ‘ರಂಗಪಯಣ’ ತಂಡವು ನಿರ್ಮಿಸಿದ್ದು, ‘ರಂಗಚಂದಿರ’ ತಂಡವು ಪ್ರಾಯೋಜಿಸಿದೆ. ರಾಜಗುರುರವರ ನಿರ್ದೇಶನದಲ್ಲಿ ಜೂನ್ 1 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಈ ನಾಟಕವು ನೋಡುಗರಲ್ಲಿ ಬೆರಗು ಸೃಷ್ಟಿಸಿತು.

ಈಗ ಅನನ್ಯ ಕಾದಂಬರಿಯ ಸೃಷ್ಟಿಕರ್ತರಾದ ಚೌಟರವರೂ ಇಲ್ಲ, ಆ ತುಳು ಭಾಷೆಯ ಕಾದಂಬರಿಯನ್ನು “ಮಿತ್ತಬೈಲು ಯಮುನಕ್ಕ” ಹೆಸರಲ್ಲಿ ರಂಗರೂಪಾಂತರಿಸಿದ ಬಸವರಾಜ ಸೂಳೇರಿಪಾಳ್ಯರವರೂ ಬದುಕಿಲ್ಲ. ಆದರೆ “ಮಿತ್ತಬೈಲ್ ಯಮುನಕ್ಕ” ನಾಟಕದ ಮೂಲಕ ಈ ಇಬ್ಬರ ನೆನಪು ಮರುಕಳಿಸುವುದರಲ್ಲಿ ಸಂದೇಹವೇ ಇಲ್ಲ.

ತುಳುನಾಡಿನ ಸೇಡು ಕೇಡಿನ ಕಥೆಯನ್ನು ಬಿಚ್ಚಿಡುವ ಮಿತ್ತಬೈಲಿನ ಯಮುನಕ್ಕ, ಪ್ರತಿಷ್ಠೆಗಾಗಿ, ದ್ವೇಷಕ್ಕಾಗಿ ಹಾಗೂ ಭೂಮಿಗಾಗಿ ಹಿಂಸೆಯ ಹಾದಿಯಲ್ಲಿ ನಡೆಸಿದ ಕ್ರೌರ್ಯವನ್ನು ಈ ನಾಟಕ ಅನಾವರಣಗೊಳಿಸುತ್ತದೆ. ದರ್ಪ ದೌಲತ್ತುಗಳಿಗೆ ಪುರುಷಹಂಕಾರವೇ ಕಾರಣವಾಗಿರುವ ಪುರುಷ ಪ್ರಧಾನ ಸಮಾಜದಲ್ಲಿ ಮಿತ್ತಬೈಲಿನ ಯಮುನಕ್ಕಳಂತಹ ಪಾತ್ರ ಸೃಷ್ಟಿಯೇ ವಿಶೇಷವಾಗಿದೆ. ಸೇಡು ಕೇಡಿಗೆ ಲಿಂಗಭೇದ ಇಲ್ಲವೆಂಬುದಕ್ಕೆ ಉದಾಹರಣೆಯಾಗಿದೆ.

ತನ್ನ ಮಾವ ಮಾಂಕಾಳನನ್ನು ಕೊಲ್ಲಿಸಿ ಮಿತ್ತಬೈಲಿನ ಯಜಮಾನಿಕೆಯನ್ನು ಪಡೆದಳು ಎನ್ನಲಾದ ಯಮುನಕ್ಕಳು ಭಂಡಾರಿ/ಭಕ್ತರ ಮಠದ ಮಾಲೀಕತ್ವದ ಬಾರೇಬೈಲಿನ ಜಮೀನನ್ನು ಕೊಂಡುಕೊಳ್ಳುತ್ತಾಳೆ. ಆ ಜಮೀನನ್ನು ಗೇಣಿಗೆ ತೆಗೆದುಕೊಂಡು ಉಳುಮೆ ಮಾಡುತ್ತಿದ್ದ, ಮಾಂಕಾಳನ ಅಕ್ರಮ ಸಂತಾನವಾದ ತ್ಯಾಂಪಣ್ಣನಿಗೆ ಸಿಟ್ಟು ನೆತ್ತಿಗೇರಿ “ಗೇಣಿಯನ್ನೂ ಕೊಡುವುದಿಲ್ಲ, ಭೂಮಿಯನ್ನೂ ಬಿಡುವುದಿಲ್ಲ” ಎಂದು ಘೋಷಿಸಿ ಕೋರ್ಟ್ ನೋಟೀಸ್ ಕಳುಹಿಸುತ್ತಾನೆ.. ಎರಡೂ ಬೈಲುಗಳ ಗುಂಪು ಪ್ರತೀಕಾರಕ್ಕಾಗಿ ಹಾತೊರೆಯುತ್ತದೆ. ಯಮುನಕ್ಕಳು ಗುಂಪು ಕಟ್ಟಿಕೊಂಡು ಹೋಗಿ ತ್ಯಾಂಪಣ್ಣ ಹಾಗೂ ಆತನ ಆಳುಗಳನ್ನು ಸಾಯಿಸಿ, ಮನೆಗೆ ಬೆಂಕಿ ಹಚ್ಚಿ ಕ್ರೌರ್ಯವನ್ನು ಮೆರೆದು ಕೊನೆಗೆ ಪೊಲೀಸರಿಂದ ಬಂಧನಕ್ಕೊಳಗಾಗುತ್ತಾಳೆ. ಪಾಳೇಗಾರಿಕೆ ಮನಸ್ಥಿತಿಯ ಪ್ರತೀಕಾರದ ದಾಳಿಯ ದುಸ್ಥಿತಿಯ ಪ್ರತಿಫಲವನ್ನೂ ಅನುಭವಿಸುತ್ತಾಳೆ.

ಸ್ವಾತಂತ್ರ್ಯ ಪೂರ್ವದಲ್ಲಿದ್ದ ಉಳಿಗಮಾನ್ಯದ ಯಜಮಾನಿಕೆ ಹಾಗೂ ಗೇಣಿದಾರರ ನಡುವಿನ ಸಂಬಂಧ ಮತ್ತು ಸಂಘರ್ಷಗಳನ್ನು ಈ ನಾಟಕ ಪ್ರಸ್ತುತಪಡಿಸುತ್ತದೆ. ಭೂಮಾಲೀಕರ ಕ್ರೌರ್ಯ ಹಾಗೂ ಗೇಣಿದಾರ ಕೃಷಿಕರ ಪ್ರತಿರೋಧಗಳ ನಡುವಿನ ವೈಷಮ್ಯಕ್ಕೆ ಈ ನಾಟಕ ಸಾಕ್ಷಿಯಾಗಿದೆ. ಗೇಣಿದಾರ ತ್ಯಾಂಪಣ್ಣ ಕಾನೂನಾತ್ಮಕವಾಗಿ ಕೋರ್ಟ್ ನೋಟೀಸ್ ಕಳುಹಿಸಿದ್ದಕ್ಕೆ ಪ್ರತೀಕಾರವಾಗಿ ಜಮೀನ್ದಾರೆ ಯಮುನಕ್ಕಳ ಸಿಟ್ಟಿಗೆ ತುತ್ತಾಗಿ ಹತ್ಯೆಗೊಳಗಾಗುತ್ತಾನೆ. ಈ ಘಟನೆ ಸಿಜಿಕೆ ನಿರ್ದೇಶನದ “ಬೆಲ್ಚಿ” ನಾಟಕವನ್ನು ನೆನಪಿಸುವಂತಿದೆ.

ಅಕ್ಕ ಯಮುನಕ್ಕಳ ಮೂಲಕ ಹಿಂಸೆಯನ್ನು ಹಾಗೂ ತಮ್ಮ ಗಾಂಧಿ ಸುಬ್ಬನ ಮೂಲಕ ಅಹಿಂಸೆಯನ್ನೂ ಮುಖಾಮುಖಿ ಮಾಡುವ ಈ ನಾಟಕವು ಕ್ರೌರ್ಯ ಮತ್ತು ಕರುಣೆಯ ಸಂಘರ್ಷವೂ ಆಗಿದೆ. ಧಗಧಗಿಸುವ ಹಿಂಸೆಯನ್ನು ತಡೆಯುವಲ್ಲಿ ಅಹಿಂಸೆ ಅಸಹಾಯಕವಾದಾಗ, ಉರಿದುರಿದ ಪ್ರತೀಕಾರದ ಬೆಂಕಿ ಮನೆ ಮನಗಳನ್ನು ಸುಟ್ಟು ಬೂದಿಯಾಗಿಸುತ್ತದೆ. ದ್ವೇಷದಿಂದ ದ್ವಂಸವಲ್ಲದೇ ಬೇರೇನೂ ಸಾಧಿಸಲಾಗದು ಎನ್ನುವ ಸಂದೇಶವನ್ನು ಸಾರುವಲ್ಲಿ ಈ ನಾಟಕ ಸಫಲವಾಗಿದೆ.

ಇಲ್ಲಿ ಹಿಂಸೆಯನ್ನು ತಡೆಯುವಲ್ಲಿ ಅಹಿಂಸೆ ವಿಫಲವಾಗುತ್ತದೆ. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಕಾಂಡ ತಡೆಯಲು ಸಾಧ್ಯವಾಗದೇ ಉಪವಾಸ ಸತ್ಯಾಗ್ರಹ ಕೂತ ಗಾಂಧೀಯವರಂತೆ ಈ ನಾಟಕದ ಗಾಂಧಿ ಸುಬ್ಬನ ಪಾತ್ರ ಮೂಡಿಬಂದಿದೆ. ಎರಡೂ ಬೈಲುಗಳ ದ್ವೇಷದ ಬೆಂಕಿ ಆರಿಸಲು ಪ್ರಯತ್ನಿಸಿ ವಿಫಲನಾಗುವ ಗಾಂಧಿಸುಬ್ಬನೂ ಇಲ್ಲಿ ಅಸಹಾಯಕನಾಗುತ್ತಾನೆ. ನಾಟಕದ ಕೊನೆಗಾದರೂ ನಿರ್ದೇಶಕರು ತಮ್ಮ ವಿವೇಚನೆಯನ್ನು ಬಳಸಿ ‘ಹಿಂಸೆಯ ನಿರರ್ಥಕತೆ ಹಾಗೂ ಅಹಿಂಸೆಯ ಸಾರ್ಥಕತೆ’ಯ ಕುರಿತು ಗಾಂಧಿಸುಬ್ಬನ ಬಾಯಿಂದ ಹೇಳಿಸಿದ್ದರೆ ಒಂದು ಉತ್ತಮ ಸಕಾರಾತ್ಮಕ ಸಂದೇಶವನ್ನು ಸಾರಬಹುದಾಗಿತ್ತು. “ಬೆಂಕಿಯಿಂದ ಬೆಂಕಿ ಆರಿಸಲಾಗದು, ಬೆಂಕಿ ನಂದಿಸಲು ಸಹನೆ ಶಾಂತಿಯ ನೀರು ಹರಿಸಬೇಕು” ಎನ್ನುವ ಆಶಯವನ್ನು ಪ್ರತಿಪಾದಿಸಬಹುದಾಗಿತ್ತು.

ಮೂವತ್ತೈದಕ್ಕೂ ಹೆಚ್ಚು ಯುವ ನಟ / ನಟಿಯರನ್ನು ಬಳಸಿಕೊಂಡು ವೃತ್ತಿಪರತೆಯಿಂದ ನಾಟಕ ಕಟ್ಟುವುದು ಪ್ರಸ್ತುತ ಸಂದರ್ಭದಲ್ಲಿ ಕಷ್ಟಸಾಧ್ಯ. ಆದರೂ ಅಂತಹ ಸಾಹಸವನ್ನು ರಾಜಗುರು ಮಾಡಿದ್ದು ಅಭಿನಂದನಾರ್ಹ. ದರ್ಪ ದೌಲತ್ತಿನ ಯಜಮಾನಿಕೆಯ ಪಾತ್ರದಲ್ಲಿ ನಯನ ಸೂಡರವರ ಅಭಿನಯ ಇಡೀ ನಾಟಕದ ಜೀವಾಳವಾಗಿತ್ತು. ಅವರಿಗೆ ಪೈಪೋಟಿ ಕೊಡುವ ರೀತಿಯಲ್ಲಿ ಮುರುಡಯ್ಯನವರ ತ್ಯಾಂಪಣ್ಣನ ಪಾತ್ರ ಮೂಡಿಬಂತು. ಈ ಇಬ್ಬರ ಅಬ್ಬರದ ನಡುವೆ ಬಿ.ಜಿ.ರಾಮಕೃಷ್ಣರವರ ಗಾಂಧಿಸುಬ್ಬನ ಪಾತ್ರ ಬಿರುಬೇಸಿಗೆಯಲ್ಲಿ ತಂಗಾಳಿ ಬೀಸಿದಂತೆನ್ನಿಸಿತು. ತ್ಯಾಂಪಣ್ಣನ ತಾಯಿ ಪಾತ್ರದಲ್ಲಿ ಗೀತಾ ಸುರತ್ಕಲ್ ರವರ ನಟನೆ ಗಮನಸೆಳೆಯಿತು. ಈ ನಾಲ್ವರು ಅನುಭವಿ ಕಲಾವಿದರನ್ನು ಹೊರತು ಪಡಿಸಿ ಎಲ್ಲಾ ನಟ/ ನಟಿಯರೂ ಅಭಿನಯಕ್ಕೆ ಹೊಸಬರಾಗಿದ್ದರೂ ತಮ್ಮ ಪಾತ್ರಗಳನ್ನು ಸೂಕ್ತವಾಗಿ ನಿಭಾಯಿಸಿದರು.

ಇಡೀ ನಾಟಕಕ್ಕೆ ಬಹುತೇಕ ವರವಾಗಿ ಹಾಗೂ ಕೆಲವೊಮ್ಮೆ ಶಾಪವಾಗಿ ಕಾಡಿದ್ದು ಹಾಡು ಮತ್ತು ಸಂಗೀತ. ಸೂಳೇರಿಪಾಳ್ಯರವರು ಹಾಗೂ  ನಾ.ದಾಮೋದರಶೆಟ್ಟಿಯವರು ಬರೆದ ಹಾಡುಗಳು ತುಂಬಾ ಸೊಗಸಾಗಿ ಹಾಗೂ ಅರ್ಥಪೂರ್ಣವಾಗಿವೆ. ಆದರೆ ರಾಜಗುರುರವರ ತಾರಕ ಸ್ವರದ ಸಂಗೀತದ ಅಬ್ಬರದಲ್ಲಿ ಹಾಡಿನ ಸಾಹಿತ್ಯದ ಅರ್ಥಲಾಲಿತ್ಯ ಸೊರಗಿದಂತಾಗಿದೆ. ನಟರು ಮಾತಾಡುವಾಗ ಹಿನ್ನೆಲೆ ಸಂಗೀತ ಅನಗತ್ಯವಾಗಿ ಸದ್ದು ಮಾಡುತ್ತಿದ್ದುದರಿಂದಾಗಿ ಕೆಲವು ಸಂಭಾಷಣೆಗಳು ಅಸ್ಪಷ್ಟವಾಗಿವೆ. ಇದಕ್ಕೆ ರವೀಂದ್ರ ಕಲಾಕ್ಷೇತ್ರದ  ಸ್ಪೀಕರ್ ಸಿಸ್ಟಂ ಕೂಡಾ ಕಾರಣವಾಗಿದೆ. ಹಾಡುಗಳಲ್ಲಿ ಮಾಧುರ್ಯತೆ ಮಾರ್ದನಿಸಬೇಕಿದೆ.

ಸೈಕ್ ಬಳಕೆ ಸೊಗಸಾಗಿದ್ದು, ದೃಶ್ಯಗಳ ಮೂಡಿಗೆ ತಕ್ಕಂತೆ ಬಣ್ಣ ಬದಲಾಯಿಸಿದ್ದರೆ ಅದ್ಭುತ ಸೃಷ್ಟಿಸಬಹುದಾಗಿತ್ತು. ನಟರು ಮತ್ತು ಬೆಳಕಿನ ಸಂಯೋಜನೆ ನಡುವೆ ಇನ್ನೂ ಹೊಂದಾಣಿಕೆ ಬೇಕಾಗಿತ್ತು. ನಾಟಕದಾದ್ಯಂತ ಗಮನ ಸೆಳೆದಿದ್ದು ಶಶಿಧರ ಅಡಪರವರ ಸೆಟ್ ಡಿಸೈನ್. ಚಿಕ್ಕ ಪುಟ್ಟ ಬದಲಾವಣೆಗಳ ಮೂಲಕ ಎಲ್ಲಾ ಸನ್ನಿವೇಶಗಳಿಗೂ ಸೂಕ್ತವೆನ್ನಿಸುವ ರಂಗವೇದಿಕೆ ನಿರ್ಮಿಸಿದ್ದು ಸೊಗಸಾಗಿದೆ.

ದಶಕದ ಹಿಂದೆ ಇದೇ ನಾಟಕವನ್ನು ರಂಗನಿರಂತರ ತಂಡಕ್ಕೆ ಪ್ರಮೋದ್ ಸಿಗ್ಗಾಂವ್ ರವರು ನಿರ್ದೇಶಿಸಿದ್ದರು. ಈಗ ತಮ್ಮ ರಂಗಪಯಣ ತಂಡಕ್ಕೆ ರಾಜಗುರು ನಿರ್ದೇಶಿಸಿ ಗಮನ ಸೆಳೆದರು. ರಾಜಗುರು ಹಾಗೂ ನಯನ ಸೂಡ ದಂಪತಿಗಳ ಪರಿಶ್ರಮ ಇಡೀ ನಾಟಕದಾದ್ಯಂತ ಗೋಚರವಾಗುವಂತಿದೆ. ಮಾನ್ಯ ಡಿ.ಕೆ.ಚೌಟರ ಅನುಪಸ್ಥಿತಿ ಅವರನ್ನು ಬಲ್ಲವರಿಗೆ ಕಾಡುವಂತಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ಕರ್ನಾಟಕದ ಸಮಾಜವಾದೀ ಚಳುವಳಿಯ ಕೊನೆಯ ನಾಯಕ ಶ್ರೀ ಸಿದ್ದರಾಮಯ್ಯ

More articles

Latest article

Most read