ಜಿಗಜಿಣಗಿಯ “ದಲಿತ ಮನುಷ್ಯ” ಎಂಬ ಧ್ವನಿಯ ಸುತ್ತ….

ಜಿಗಜಿಣಗಿಯವರ ಆರೆಸ್ಸೆಸ್‌ ಮನಸ್ಥಿತಿ ಎಷ್ಟು ಕರ್ಮಠದ್ದೆನ್ನುವುದಕ್ಕೆ ಒಂದು ನಿದರ್ಶನವುಂಟು. ಕಳೆದ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಅವರು, ‘ನಾನು ಸಂಸದನಾಗಿದ್ದರೂ, ಮೇಲ್ಜಾತಿ ಜನರ ಮನಸಿಗೆ ಬೇಸರವಾಗಬಾರದೆಂಬ ಕಾರಣಕ್ಕೆ ದೇವಸ್ಥಾನಗಳಿಗೆ ಭೇಟಿ ನೀಡಿದಾಗ, ಒಳಹೋಗದೆ ಹೊರಗೇ ನಿಲ್ಲುತ್ತೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅಂದರೆ, ತಾನು ಪ್ರತಿಭಟಿಸಬೇಕಿದ್ದ ಅನ್ಯಾಯವನ್ನು, ವಿಜೃಂಭಿಸಿ ಸಮರ್ಥಿಸಿಕೊಂಡಿದ್ದರು. ಆರ್ ಎಸ್ ಎಸ್‌ ಹೀಗೆ ನಮ್ಮ ಬೌದ್ಧಿಕತೆಯನ್ನು ನಾಶ ಮಾಡಿ, ನಮ್ಮ ದೇಹ ಮತ್ತು ನಾಲಗೆಗಳನ್ನು ಅದರ ಕೈಗೊಂಬೆಯಾಗಿಸಿಕೊಳ್ಳುತ್ತದೆ ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು.

“ಆರ್ ಎಸ್ ಎಸ್ ನ ವಿಚಾರ ದಲಿತ ಮನುಷ್ಯನಿಗೆ ಯಾಕೆ ಬೇಕು?”

ಆರ್ ಎಸ್ ಎಸ್ ಎಂಥಾ ಅಪಾಯಕಾರಿ ಮನಸ್ಥಿತಿ ಎನ್ನುವುದಕ್ಕೆ ಬಿಜೆಪಿ ಸಂಸದ ರಮೇಶ್‌ ಜಿಗಜಿಣಗಿಯವರ ಈ ಮಾತು ಸಾಕ್ಷಿ. ಅದರ ನೋಂದಣಿ, ವ್ಯವಹಾರ ಪಾರದರ್ಶಕತೆಯ ಬಗ್ಗೆ ಸಕಾರಣ ಪ್ರಶ್ನೆ ಎತ್ತುತ್ತಿರುವ ಪ್ರಿಯಾಂಕ್‌ ಖರ್ಗೆಯವರನ್ನು `ದಲಿತ ಮನುಷ್ಯ’ ಎಂದು ಕರೆದಿರುವ ರಮೇಶ್‌ ಜಿಗಜಿಣಗಿಯವರು ಸ್ವತಃ ಒಬ್ಬ ದಲಿತರು! ಆ ಕೋಟದಲ್ಲೆ ಸಂಸದರಾಗಿರುವಂತವರು!!

ತನ್ನ ಐಡೆಂಟಿಟಿಯನ್ನು ತಾನೇ ಹೀಯಾಳಿಸಿಕೊಂಡು, ತನ್ನ ಮೇಲಿನ ಶೋಷಣೆಯನ್ನು ತಾನೇ ಸಮರ್ಥಿಸಿಕೊಂಡು ಮಾತಾಡುವುದಿದೆಯಲ್ಲ, ಇದನ್ನೇ ಅವರು ಶಾರ್ಟ್‌ ಅಂಡ್‌ ಸ್ವೀಟ್ ಆಗಿ ಆರೆಸ್ಸೆಸ್‌ ಎಂದು ಕರೆದುಕೊಳ್ಳುತ್ತಾರೆ. ಇದನ್ನವರು ಶಾಖೆಗಳ ರೂಪದಲ್ಲಿ ಮಿದುಳು ಕೊರೆಯುವ ಮೂಲಕ ಮಾಡಿ ತೋರಿಸುತ್ತಾರೆ. ಈಗೀಗ ಈ ಕೃತ್ಯಕ್ಕೆ ಶಾಖೆಗಳೂ ಬೇಡ; ವಾಟ್ಸಾಪ್‌ ಯೂನಿವರ್ಸಿಟಿ ಸಾಕು.

ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆರೆಸ್ಸೆಸ್‌ನ ಕಾಳಜಿಯಿರುವುದು ಬ್ರಾಹ್ಮಣ್ಯದ ಪುನರುತ್ಥಾನದ ಕುರಿತು. ಹಿಂದೂತ್ವ ಅಥವಾ ಹಿಂದೂ ಧರ್ಮದ ಹೆಸರಿನಲ್ಲಿ ಅದನ್ನವರು ಸಾಧಿಸಿಕೊಳ್ಳುತ್ತಿದ್ದಾರೆ. ಆ ಸಾಧನೆಗೆ ಅಡಿಯಾಳಾಗಿ ಬಳಕೆಗೊಳ್ಳುತ್ತಿರುವುದು ಅದೇ ಬ್ರಾಹ್ಮಣ್ಯದ ಸಂತ್ರಸ್ತ ಸಮುದಾಯಗಳಾದ ಶೂದ್ರರು ಮತ್ತು ಅಂತ್ಯಜರು. ರಾಷ್ಟ್ರಭಕ್ತಿ, ಧರ್ಮರಕ್ಷಣೆ, ಸಂಸ್ಕೃತಿಶ್ರೇಷ್ಠತೆಯ ನೆಪ ಮಾಡಿಕೊಂಡು ಈ ಬ್ರೈನ್‌ವಾಶ್‌ ಆಪರೇಷನನ್ನು ಯಶಸ್ವಿಯಾಗಿ ಮಾಡಿಮುಗಿಸುತ್ತಾರೆ. ಒಮ್ಮೆ ನಮ್ಮ ಮಿದುಳಿನ ಸ್ವಾಧೀನತೆಯನ್ನು ಪರರ ಸುಪರ್ದಿಗೆ ಒಪ್ಪಿಸಿಬಿಟ್ಟರೆ ಮುಗಿಯಿತು, ಯಾವುದು ಸರಿ? ಯಾವುದು ತಪ್ಪು? ಎಂಬ ವಿವೇಚನೆ ನಮ್ಮ ಕೈತಪ್ಪಿ ಹೋಗುತ್ತದೆ. ನಮ್ಮ ಬುದ್ಧಿಯು ನೇಣು ಕುಣಿಕೆಯನ್ನೂ ಹೂಮಾಲೆಯೆಂದು ಭ್ರಮಿಸಲು ಮುಂದಾಗುತ್ತದೆ.

ಒಬ್ಬ ಶೋಷಿತ ವ್ಯಕ್ತಿ ತನ್ನನ್ನು ತಾನು `ದಲಿತ ವ್ಯಕ್ತಿ’ ಎಂದು ಕರೆದುಕೊಳ್ಳುವಾಗ, ಅದರಲ್ಲಿ ಸ್ವಾಭಿಮಾನದ ಧ್ವನಿ ಮತ್ತು ಪ್ರತಿಭಟನೆಯ ಕಿಚ್ಚುಗಳು ಧ್ವನಿಸುತ್ತವೆ. ಅದೇ ವ್ಯಕ್ತಿಯನ್ನು ಬೇರೊಬ್ಬರು “ದಲಿತ ಮನುಷ್ಯ” ಎಂದು ಕರೆಯುವಾಗ ಅದರೊಳಗೆ ಜಾತಿಕ್ರೌರ್ಯದ ಹೀಯಾಳಿಕೆ ಇಣುಕುತ್ತಿರುತ್ತದೆ. ಪದ ಒಂದೆಯಾದರೂ, ಸಾಮಾಜಿಕ-ಸಾಂಸ್ಕೃತಿಕ ಭಿನ್ನತೆಗಳ ಕಾರಣಕ್ಕೆ ಉದ್ದೇಶವೂ ಭಿನ್ನವಾಗಿಯೇ ಧ್ವನಿಸುತ್ತದೆ. ಹಾಗಾಗಿಯೇ ಬಾಬಾ ಸಾಹೇಬರು ತಳಸಮುದಾಯಗಳ ಪರ ಹೋರಾಡುವಾಗ ಐಡೆಂಟಿಟಿಯ ಪದಗಳ ಬಗ್ಗೆ ಬಹಳ ಎಚ್ಚರವಹಿಸಿದ್ದರು. ಜ್ಯೋತಿಬಾ ಫುಲೆಯವರ ಬರಹಗಳಲ್ಲಿ ಅದಾಗಲೆ `ದಲಿತ’ ಎಂಬ ಪದಬಳಕೆಯಿದ್ದರೂ, ಮತ್ತು ಫುಲೆಯವರನ್ನು ತಮ್ಮ ಆದರ್ಶವಾಗಿ ಸ್ವೀಕರಿಸಿದ್ದರೂ ಬಾಬಾಸಾಹೇಬರು ತಮ್ಮ ಬರಹ ಮತ್ತು ನಿರೂಪಣೆಗಳಲ್ಲಿ `ದಲಿತ’ ಎನ್ನುವುದಕ್ಕಿಂತ ಹೆಚ್ಚಾಗಿ ‘ಡಿಪ್ರೆಸ್ಡ್‌ ಕ್ಲಾಸಸ್’ (ದಮನಿತ ವರ್ಗಗಳು), ಶೆಡ್ಯೂಲ್ಡ್‌ ಕ್ಲಾಸಸ್‌ (ಅನುಸೂಚಿತ ವರ್ಗಗಳು) ಮತ್ತು `ಅನ್‌ಟಚಬಲ್ಸ್‌’ (ಅಸ್ಪೃಶ್ಯರು) ಎಂಬ ಸಹಜ-ವಿವರಣಾತ್ಮಕ ಪದಗಳನ್ನೇ ಬಳಸಿದರು. ಜಾತಿವ್ಯವಸ್ಥೆ, ಅಸ್ಪೃಶ್ಯತೆಯ ಕ್ರೂರತೆಗಳು ಅವುಗಳ ವಂಚನರೂಪದಲ್ಲೇ ಚರ್ಚೆಗೊಳ್ಳಲಿ ಎಂಬ ನಿಲುವು ಅವರದ್ದಾಗಿರಬಹುದು. ಕಾನೂನು ತಜ್ಞರಾಗಿದ್ದರಿಂದ ಪದಗಳ ಬಳಕೆಯ ಬಗ್ಗೆ ಅವರಿಗೆ ವಿಶಾಲ ಅರಿವು ಇತ್ತು.  ಹಾಗಾಗಿಯೇ, ಮಹಾತ್ಮಾ ಗಾಂಧಿಯವರು ಅಸ್ಪೃಶ್ಯ ಸಮುದಾಯವನ್ನು ‘ಹರಿಜನ’ (ದೇವರ ಮಕ್ಕಳು) ಎಂದು ಕರೆದಾಗ ಅಂಬೇಡ್ಕರರು ಅದನ್ನು ಖಂಡಿಸಿದರು. ಆ ಪದ ಅಸ್ಪೃಶ್ಯರ ಬಗ್ಗೆ ಮರುಕ ಹುಟ್ಟಿಸಬಹುದೆ ಹೊರತು, ಅವರ ಆ ಸ್ಥಿತಿಗೆ ಕಾರಣವಾದ ವ್ಯವಸ್ಥೆಯ ಕ್ರೌರ್ಯವನ್ನು ಅದು ಪ್ರಶ್ನಿಸುವುದಿಲ್ಲ ಎಂಬ ನಿಖರ ನಿಲುವು ಅವರದಾಗಿತ್ತು.

ಮುಂದೆ ಎಪ್ಪತ್ತರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್‌ ಚಳವಳಿ ಮುನ್ನೆಲೆಗೆ ಬಂದ ನಂತರ ಅಸ್ಪೃಶ್ಯ ಸಮುದಾಯಗಳ ಪಾಲಿಗೆ `ದಲಿತ’ ಎನ್ನುವುದು ಸ್ವಾಭಿಮಾನದ ಕಿಚ್ಚಾಗಿ ಬದಲಾಯ್ತು. ಅಮೆರಿಕೆಯಲ್ಲಿ ಕಪ್ಪುವರ್ಣೀಯರು ತಮ್ಮ ಮೇಲಿನ ಶೋಷಣೆಯನ್ನು ಪ್ರತಿರೋಧಿಸಲು ಕಪ್ಪು ಬಣ್ಣವನ್ನೇ ತಮ್ಮ ಐಡೆಂಟಿಟಿಯಾಗಿಸಿಕೊಂಡು ‘ಬ್ಲ್ಯಾಕ್‌ ಪ್ಯಾಂಥರ್ಸ್‌’ ಮೂಲಕ ಬ್ಲ್ಯಾಕ್‌ ಅನ್ನು ಸ್ವಾಭಿಮಾನದ ಸಂಕೇತವಾಗಿ ಮರುರೂಪಿಸಿದಂತೆ ಇಲ್ಲಿ `ದಲಿತ್‌’ ಪದ ದಲಿತರ ಪಾಲಿಗೆ ಸ್ವಾಭಿಮಾನದ ಕಿಚ್ಚಾಯ್ತು.

ಪ್ರಿಯಾಂಕ್‌ ಖರ್ಗೆ ಮತ್ತು ರಮೇಶ್‌ ಜಿಗಜಿಣಗಿ

ಆದರೆ ಜಾತಿಕ್ರೌರ್ಯವನ್ನು ಅನುಭವಿಸದ ಅಸ್ಪೃಶ್ಯನಲ್ಲದ ವ್ಯಕ್ತಿ `ದಲಿತ’ ಪದವನ್ನು ಬಳಸುವಾಗ ಆತನ ಧ್ವನಿಯಲ್ಲಿ ಈ ಸ್ವಾಭಿಮಾನವಾಗಲಿ, ಕಿಚ್ಚಾಗಲಿ ಇರುವುದಿಲ್ಲ. ಹಾಗಾಗಿ ಅಸ್ಪೃಶ್ಯನೋರ್ವ ‘ನಾನು ದಲಿತ’ ಎಂದು ಕರೆದುಕೊಂಡು ದಲಿತ ಸಂಘಟನೆ ಕಟ್ಟಿಕೊಳ್ಳುವುದಕ್ಕೂ, ದಲಿತರಲ್ಲದವರು “ದಲಿತ ಮನುಷ್ಯ” ಎಂದು ಕರೆಯುವುದಕ್ಕೂ ವೈರುಧ್ಯಗಳಿರುತ್ತವೆ. ಇದು ಸಾಂಸ್ಕೃತಿಕ ರಾಜಕಾರಣದ ಸೂಕ್ಷ್ಮ. ಹಾಗಾಗಿಯೇ ಕೇಂದ್ರ ಬಿಜೆಪಿ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆಗಸ್ಟ್‌ 7, 2018ರಂದು ಒಂದು ಆದೇಶ ಹೊರಡಿಸಿ “ಇನ್ಮುಂದೆ ಮಾಧ್ಯಮಗಳು ದಲಿತ ಎಂಬ ಪದವನ್ನು ಬಳಸಬಾರದು” ಎಂದು ಹೇಳಿದಾಗ, ಖ್ಯಾತ ಅಂಬೇಡ್ಕರ್‍‌ವಾದಿಯಾದ ಆನಂದ್‌ ತೇಲ್ತುಂಬ್ಡೆ ಮೊದಲಾದವರು ಅದನ್ನು ವಿರೋಧಿಸಿದರು. ಸಮಸ್ಯೆ ಇರುವುದು ದಲಿತ ಎಂಬ ಪದದಲ್ಲಿ ಅಲ್ಲ; ಅದನ್ನು ಬಳಸುವ ಭಿನ್ನ ಮನಸ್ಥಿತಿಗಳಲ್ಲಿ. ಶೋಷಿತರ ಪಾಲಿಗೆ ‘ದಲಿತ’ ಎಂಬುದು ಒಗ್ಗಟ್ಟು ಮತ್ತು ಸ್ವಾಭಿಮಾನದ ಸಂಕೇತವಾಗಿರುವಾಗ, ಆ ಪದವನ್ನಷ್ಟೇ ಬಹಿಷ್ಕರಿಸಿ, ಆ ಮನಸ್ಥಿತಿಯನ್ನು ಜಾರಿಯಲ್ಲಿಟ್ಟುಕೊಳ್ಳುವುದು ಶೋಷಿತರ ಸಂಘಟನೆಯ ಶಕ್ತಿಯನ್ನು ಕಿತ್ತುಕೊಂಡಂತೆ ಎಂದು ವಾದಿಸಿದರು. “ನಾ ದಲಿತ” ಎಂದುಕೊಳ್ಳುವುದಕ್ಕೂ, “ಆ ದಲಿತ” ಎಂದು ಕೂಗುವುದಕ್ಕೂ ಇರುವ ವ್ಯತ್ಯಾಸ ಇಷ್ಟು ಸೂಕ್ಷ್ಮವಾದುದು.

ಪ್ರಿಯಾಂಕ್‌ ಖರ್ಗೆಯವರನ್ನು “ದಲಿತ ಮನುಷ್ಯ” ಎಂದು ಕರೆದ ರಮೇಶ್‌ ಜಿಗಜಿಣಗಿಯವರ ಧ್ವನಿಯಲ್ಲೂ ಅಂತದ್ದೊಂದು ಜಾತಿವ್ಯವಸ್ಥೆಯ ಕ್ರೌರ್ಯ ಧ್ವನಿಸುತ್ತಿದೆ. ಒಬ್ಬ ದಲಿತ ಹಿನ್ನೆಲೆಯ ವ್ಯಕ್ತಿಯನ್ನೇ ಆ ಕ್ರೌರ್ಯಕ್ಕೆ ಧ್ವನಿಯಾಗಿಸುತ್ತಿದೆಯೆಂದರೆ, ಆರ್‍‌ ಎಸ್ ಎಸ್‌ ನಂಜು ಎಂತದ್ದೆಂಬುದು ನಮಗೆ ಅರ್ಥವಾಗಬೇಕು. ಯಾಕೆಂದರೆ, ಜಾತಿವ್ಯವಸ್ಥೆಯು ದಲಿತನಲ್ಲದ ವ್ಯಕ್ತಿಯಿಂದ “ದಲಿತ ವ್ಯಕ್ತಿ” ಎಂದು ಅಸೂಕ್ಷ್ಮವಾಗಿ ಮಾತನಾಡುವಂತೆ ಮಾಡಿಸಿದರೆ; ಆರೆಸ್ಸೆಸ್‌, ಜಾತಿವ್ಯವಸ್ಥೆಗಿಂತ ಒಂದು ಹೆಜ್ಜೆ ಮುಂದೆಹೋಗಿ ದಲಿತ ವ್ಯಕ್ತಿಯಿಂದಲೇ ದಲಿತ ವ್ಯಕ್ತಿಯನ್ನು “ದಲಿತ ಮನುಷ್ಯ” ಎಂದು ಹೀಯಾಳಿಸುವಷ್ಟು ಮನಸ್ಸುಗಳನ್ನು ಕಲುಷಿತಗೊಳಿಸಿದೆ.

ಆರೆಸ್ಸೆಸ್‌ ಶಾಖೆ ಮತ್ತು ಸಿದ್ಧಾಂತಗಳಲ್ಲಿ ಮಿಂದೆದ್ದು ಬಂದವರಿಗೆ ರಮೇಶ್‌ ಜಿಗಜಿಣಗಿಯವರ ಧ್ವನಿಯು ಸಹಜ ಅಂತನ್ನಿಸಬಹುದು, ಅಥವಾ ಸಮರ್ಥನೀಯವಾಗಿಯೂ ಕಾಣಿಸಬಹುದು; ಆದರೆ ಬಾಬಾಸಾಹೇಬರು ಬಹಳ ಶ್ರಮಪಟ್ಟು ಹುಟ್ಟುಹಾಕಿದ ಎಚ್ಚರವನ್ನು ಕೈಚೆಲ್ಲಿ ಅವರು ಹಿಮ್ಮುಖವಾಗಿ ಚಲಿಸುತ್ತಿರುವ ಅಪಾಯ ಅವರನ್ನಲ್ಲದಿದ್ದರೂ ಅವರ ಮಕ್ಕಳು-ಮೊಮ್ಮಕ್ಕಳನ್ನು ಬಾಧಿಸುವುದರಲ್ಲಿ ಯಾವ ಅನುಮಾನವಿಲ್ಲ. 

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ರೈ ವಿರುದ್ಧ ತಿರುಗಿ ಬಿದ್ದ ಮಾರಿಕೊಂಡ ಮಾಧ್ಯಮಗಳು

More articles

Latest article

Most read