ಏರುತ್ತಿರುವ ತಾಪಮಾನ ಮತ್ತು ಕುಸಿಯುತ್ತಿರುವ ಮಳೆಯ ಪ್ರಮಾಣವನ್ನು ನಾವೀಗ ಅನುಭವಿಸುತ್ತಿದ್ದೇವೆ. ಭಾರತದ ಮುಂಗಾರಿನ ಮೇಲೆ ಪರಿಣಾಮ ಬೀರುವ ಬೆಳವಣಿಗೆಗಳ ಕುರಿತು ಸವಿವರವಾಗಿ ಬರೆದಿದ್ದಾರೆ ಹಾಸನದ ವಿಜ್ಞಾನ ಲೇಖಕ ಕೆ ಎಸ್ ರವಿಕುಮಾರ್. ಸರಣಿಯಲ್ಲಿ ಪ್ರಕಟವಾಗಲಿರುವ ಲೇಖನದ ಎರಡನೆಯ ಭಾಗ ಇಲ್ಲಿದೆ.
2. ಮುಂಗಾರು ಬಂತು…! ಅಲ್ಲಲ್ಲ, ಇನ್ನು ಬಂದಿಲ್ಲ…!! ಇಲ್ಲ, ಬಂದೇ ಬಿಡ್ತು…!!!
ಏಪ್ರಿಲ್‍ನಲ್ಲಿ ಮಳೆ ತರುವ ಮಾನ್ಸೂನ್ ಅಥವಾ ಮುಂಗಾರಿನ ಮೋಡಗಳು ಮೇ 14-20ರ ನಡುವಿನಲ್ಲಿ ಅಂಡಮಾನ್ ಕಡಲನ್ನು ತಲುಪಲಿವೆ ಮತ್ತು ಜೂನ್ ಶುರುವಿನಲ್ಲಿ ಕೇರಳಕ್ಕೆ ಕಾಲಿಡಲಿವೆ ಎಂದು ಹವಾಮಾನ ಇಲಾಖೆ ಮೊಟ್ಟಮೊದಲ ಮುನ್ಸೂಚನೆ ನೀಡಿತ್ತು. ಆಮೇಲೆ ಮೇ 15ರ ಪ್ರಕಟಣೆಯಲ್ಲಿ ಮುಂಗಾರು – ನಾಲ್ಕು ದಿನ ಆಚೀಚೆ ಆಗುವ ಸಾಧ್ಯತೆಯೊಂದಿಗೆ – ಮೇ 26ರಂದು ಕೇರಳಕ್ಕೆ ಬರಲಿದೆ ಎಂದಿತು. ಆದರೆ ಹಾಗಾಗಲಿಲ್ಲ. ನಂತರ ‘ಮೇ 29ರಂದು ಮುಂಗಾರು ಕೇರಳ ಮುಟ್ಟಿತು ಹಾಗೂ ಇನ್ನು ಮುಂದೆ ದೇಶದ ಬಹುಭಾಗ ಬಿಸಿಯಲೆಗಳು ಮತ್ತು ಧಗೆಯಿಂದ ಬಳಲುವುದಿಲ್ಲ’ ಎಂದೂ ಸಾರಿಬಿಟ್ಟಿತು. ಆದರೆ ಮೇ 29ರಂದು ಕೇರಳಕ್ಕೆ ಬಂದ ಮೋಡಗಳು ಮುಂಗಾರಿನದವಾಗಿರಲಿಲ್ಲ. ಈಗೇನು ಮಾಡುವುದು? ಮೊದಲ ಮುನ್ಸೂಚನೆ ಜೂನ್ ಶುರುವಿನಲ್ಲೆ ಬರುವ ಬಗ್ಗೆ ಇತ್ತಲ್ಲ, ಅಲ್ಲಿಗೇ ಹವಾಮಾನ ಇಲಾಖೆ ಮರಳಿತು. ಅದರ ಅದೃಷ್ಟವೋ ಏನೋ ಜೂನ್ 4ರಂದು ಮುಂಗಾರಿನ ಮೋಡಗಳು ಕೇರಳದ ಮೇಲೆ ಕವಿದವು. ಇಲಾಖೆಯ ಗೌರವವನ್ನು ಉಳಿಸಿದವು. ಲಾಗಾಯ್ತಿನಿಂದಲೂ ಮುಂಗಾರು ಜೂನ್ ಮೊದಲ ವಾರದಲ್ಲೆ ಕವಿಯುತ್ತ ಬಂದಿದೆ. ಅದಕ್ಕೂ ಮುಂಚೆ ಬೀಳುವ ಮಳೆಗಳು ‘ಮುಂಗಾರು ಮೊದಲಿನ ಮಳೆಗಳು (Pre-monsoon showers)’ ಎನಿಸಿಕೊಳ್ಳುತ್ತವೆ. ಅವು ಬೇಸಗೆಯ ಅತಿತಾಪಕ್ಕೆ ಸ್ಥಳೀಯವಾಗಿ ಬಿಡುಗಡೆಗೊಂಡ ಮತ್ತು ಭಾರತವನ್ನು ಸುತ್ತುವರಿದ ಕಾದ ಕಡಲುಗಳ ತೇವಾಂಶದಿಂದ ರೂಪುಗೊಂಡ ಮಳೆಗಳು. ಇವಕ್ಕೂ ಮಾನ್ಸೂನ್ ಮಳೆಗಳಿಗು ನಂಟಸ್ತನವಿಲ್ಲ. ಹಾಗಿದ್ದರೆ ಮೇ 29ರಂದು ಕೇರಳಕ್ಕೆ ಬಂದ ಮುಂಗಾರು ಮುಂಚಿನ ಮೋಡಗಳನ್ನೆ ಮುಂಗಾರಿನ ಮೋಡಗಳೆಂದು ಇಲಾಖೆ ಬಗೆಯಿತೆ? ಹಾಗೆ ಮಾಡಿದ್ದರೆ ಅದು ತಪ್ಪಲ್ಲವೆ? ಮುನ್ಸೂಚನೆಗಳಲ್ಲಿ ಯಾಕಿಷ್ಟು ಗೊಂದಲ? ನಿಸರ್ಗ ಮತ್ತು ವೈಜ್ಞಾನಿಕ ತಿಳಿವಳಿಕೆಗಳಿಗೆ ಆತುಕೊಳ್ಳದೆ ಆಳುವವರ ಮೂಗು ತೂರಿಸುವಿಕೆಗೆ ಹೊಂದುವಂತೆ ಮುನ್ಸೂಚನೆಗಳನ್ನು ನೀಡಲಾಗುತ್ತಿದೆಯೆ?
ಈ ವರುಷದ ಏಪ್ರಿಲ್ ಮತ್ತು ಮೇ ಉತ್ತರ ಹಾಗೂ ಮಧ್ಯ ಭಾರತದ ರಾಜ್ಯಗಳಿಗೆ ಪರಿಚಯಿಸಿದ ತಾಪದ ಸನ್ನಿವೇಶ ಹೇಗಿತ್ತೆಂದರೆ ಹೆಬ್ಬೊಳೆ ಯಮುನ ಹರಿಯುತ್ತಿದ್ದರೂ ದೇಶದ ರಾಜಧಾನಿ ದೆಹಲಿಯ ಹಲವೆಡೆ ಕುಡಿಯುವ ನೀರಿಗೆ ಭೀಕರ ಕೊರತೆ ಕಾಡಿತು. ದಿನಗಟ್ಟಲೆ ಕವಿದ ಬಿಸಿಯಲೆಗಳಿಗೆ ಕಸ ತುಂಬಿ ಕೊಳಕಾದ ಯಮುನ ಬಹುತೇಕ ಬತ್ತಿತು. ಯಮುನೆಗೂ ಮುಂಚೆ ಇತರೆ ನೀರಿನ ಆಸರೆಗಳು ತಳಕಚ್ಚಿದವು. ಉಳಿದಷ್ಟು ನೀರನ್ನು ನಿರ್ವಹಿಸಬೇಕಿದ್ದ ಪರ್ಯಾಯ ವ್ಯವಸ್ಥೆಗಳನ್ನು ಮುಂದಾಗಿಯೆ ಸಜ್ಜುಗೊಳಿಸಿಕೊಳ್ಳಲು ಆಡಳಿತಗಳು ಉದಾಸೀನ ತೋರಿದ್ದವು. ಹವಾಮಾನ ಇಲಾಖೆಗೆ ಸುಡುವ ಬಿಸಿಯಲೆಗಳ ಬಗ್ಗೆ ಸುಳಿವಿರಲಿಲ್ಲವೆ? ಇದ್ದರೆ ನೀರಿಗೆ ಬರ ಬರುವ ಬಗ್ಗೆ ತಿಳಿದಿರಲಿಲ್ಲವೆ? ಅತಿರೇಕದ ಹವಾಮಾನದ ವಿದ್ಯಮಾನಗಳು ತರುವ ತೊಡಕುಗಳ ಕುರಿತು ಯಾಕೆ ಇಲಾಖೆ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಗಳನ್ನು ನೀಡುವುದಿಲ್ಲ? ಬಹುತೇಕ ಮುಂದುವರಿದ ದೇಶಗಳಲ್ಲಿ ಪರಿಣಾಮ ಆಧರಿಸಿದ ಮುನ್ನೆಚ್ಚರಿಕೆ (Impact based warning)ಗಳನ್ನು ನೀಡುವ ಪರಿಪಾಟವಿದೆ. ಅದನ್ನು ಅನುಸರಿಸಲು ಹವಾಮಾನ ಇಲಾಖೆ ಯಾರ ಒಪ್ಪಿಗೆ ಪಡೆಯಬೇಕಿದೆ? ಆಳುವವರ ಮರ್ಜಿಗೆ ತಕ್ಕಂತೆ ಹವಾಮಾನವನ್ನು ಪಳಗಿಸಿಕೊಳ್ಳಬಹುದೆ? ಹವಾಮಾನ ಇಲಾಖೆಗೆ ಇರಿಸುಮುರಿಸು ತರುವ, ಉತ್ತರ ದಕ್ಕದ ಪ್ರಶ್ನೆಗಳಿವು ಎನ್ನಬಹುದೆ?

ಕೆಲವರ ಶೇರು ಜೂಜಿಗೆ ಹಲವರ ಬದುಕು ಮುಗ್ಗರಿಸಬೇಕೆ?
ನಮಗೆಲ್ಲ ತಿಳಿದಿರುವಂತೆ ಕೊಲ್ಲಿ ಕಾಳಗದಷ್ಟೆ ಮುಂಗಾರಿನ ಮುನ್ಸೂಚನೆಯೂ ಶೇರು ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರುವ ಒಂದು ಅಂಶವಾಗಿದೆ. ‘ಈ ವರುಷ ಒಳ್ಳೆಯ ಮುಂಗಾರು ಮಳೆಯಾಗಲಿದೆ’ ಎಂದು ಹವಾಮಾನ ಇಲಾಖೆ ಬೆಳಿಗ್ಗೆ ಸುದ್ದಿಕೂಟದಲ್ಲಿ ಹೇಳಿದ ಬೆನ್ನಲ್ಲೆ ನಡುಹಗಲು ಸೆನ್ಸೆಕ್ಸ್ ಸರ್ರ್ ಎಂದು ಏರುವುದನ್ನು ಕಂಡಿದ್ದೇವೆ. ಹಾಗೆಯೆ ಮಳೆಯ ಕೊರತೆ ಇರಬಹುದು ಎಂದಾಗ ಕುಸಿದಿದ್ದನ್ನು ಕಂಡಿದ್ದೇವೆ. ಇಲಾಖೆ ಏಪ್ರಿಲ್‍ನಷ್ಟು ಮುಂಚೆಯೆ 2026ರ ಒಟ್ಟಾರೆ ಮುಂಗಾರು ಮಳೆ ವಾಡಿಕೆಯ ಮಳೆಯಲ್ಲಿ ಶೇಕಡಾ 92ರಷ್ಟು ಬೀಳಲಿದೆ ಎಂದಿತ್ತು. ಆಮೇಲೆ ಮೇ 29ರಂದು ತನ್ನ ಮೊದಲಿನ ಹೇಳಿಕೆಯನ್ನು ಶೇಕಡಾ 90ಕ್ಕೆ ಇಳಿಸಿತು. ಅಂದೇ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಶೇಕಡಾ 1.44ರಷ್ಟು (1,092.06 ಪಾಯಿಂಟ್‍ಗಳು) ಕುಸಿದು ಹೂಡಿಕೆದಾರರ 6 ಲಕ್ಷ ಕೋಟಿ ರೂಪಾಯಿಯಷ್ಟು ಸಂಪತ್ತು ಕರಗಿಹೋಗಿತ್ತು. ಕಡಿತಗೊಳಿಸಿದ್ದು ಶೇಕಡಾ 2ರಷ್ಟಾಗಿದ್ದರು ಶೇರು ಮಾರುಕಟ್ಟೆ ಕುಸಿದಿದ್ದೇಕೆ? ನಮ್ಮಂತ ಸಾಮಾನ್ಯ ಜನರಿಗೆ ತಿಳಿಯದ ಎಷ್ಟೋ ಒಳಸತ್ಯಗಳು ಶೇರು ಮಾರುಕಟ್ಟೆಗೆ ತಿಳಿಯುತ್ತವೇನೊ! ಅಂತಹ ಒಂದು ಒಳಸತ್ಯವೆಂದರೆ ಮುಂಗಾರು ಮಳೆಯ ಪ್ರಮಾಣ ಶೇಕಡಾ 90 ಎಂದಿದ್ದರೂ ವಾಸ್ತವದಲ್ಲಿ ಅದು ಇನ್ನೂ ಕಮ್ಮಿ ಇರಬೇಕು. ಹವಾಮಾನ ಇಲಾಖೆ ಮುಂಚಿನಿಂದಲೂ ಹವಾಮಾನ ಬದಲಾವಣೆ ಮುಂಗಾರಿನ ಮೇಲೆ ಎಸಗುತ್ತಿರುವ ಅಡ್ಡ ಪರಿಣಾಮಗಳ ಬಗ್ಗೆ ಚರ್ಚೆಯನ್ನು ಮುನ್ನೆಲೆಗೆ ತರುತ್ತಿಲ್ಲ. ಬರುವ ವರುಷಗಳು ಕಾಣಲಿರುವ ತೀವ್ರ ಹವಾಮಾನ ದುರಂತಗಳ ಬಗ್ಗೆ ಎಚ್ಚರಿಸಿದರೆ ಕಾರ್ಪೋರೇಟುಗಳ ಬಿಗಿಹಿಡಿತದಲ್ಲಿರುವ ಶೇರುಪೇಟೆ ಮುಚ್ಚಿಯೆ ಹೋದಿತೆಂಬ ಅಳುಕು ಒಕ್ಕೂಟ ಸರಕಾರಕ್ಕಿದ್ದು ಅದು ಇಲಾಖೆ ಮನಬಿಚ್ಚಿ ಮಾತನಾಡದಂತೆ ಅಡ್ಡ ನಿಂತಿದೆಯೆ? ಅಥವಾ ಹವಾಮಾನ ಬದಲಾವಣೆಯಿಂದಾಗಿ ಅಸಡ್ಡಾಳ ಮುಂಗಾರಿನ ಬರುವಿಕೆ, ಇರುವಿಕೆ, ಹಂಚಿಕೆ, ತೆರಳುವಿಕೆ ಮತ್ತು ಮರಳಿಕೆಗಳ ಬಗ್ಗೆ ಇಲಾಖೆ ಕರಾರುವಾಕ್ ಆಗಿ ಹೇಳಲಾಗದ ಅಸಹಾಯಕ ನೆಲೆಗೆ ದೂಡಲ್ಪಟ್ಟಿದೆಯೆ? ಕಳೆದ ಕೆಲವು ವರುಷಗಳಿಂದ ಮುಂಗಾರಿನ ಮೋಡಗಳು ವಾಯುವ್ಯ ಭಾಗವನ್ನು ಹೊರತುಪಡಿಸಿ ಭಾರತ ಉಪಖಂಡದ ಮೇಲೆ ದಟ್ಟವಾಗಿ ಕವಿದರೂ ಮಳೆ ಬೀಳದ, ಬಿದ್ದರೂ ಕಳೆಗಿಡಗಳು ಹುಲುಸಾಗಿ ಬೆಳೆಯುವಷ್ಟು ‘ಮುಂಗಾರಿನ ಕಾಲದ ಬರ (Monsoon Drought)ವನ್ನು ಭಾರತ ಹಲವೆಡೆ ಕಾಣುತ್ತಿರುವ ಬಗ್ಗೆ ಹವಾಮಾನ ಇಲಾಖೆ ತುಟಿಪಿಟಿಕ್ ಎನ್ನುತ್ತಿಲ್ಲ. 2026ರ ಏಪ್ರಿಲ್ ಭಾರತದ ಮಟ್ಟಿಗಂತೂ ವಿಪರೀತ ತಾಪದ ದಾಖಲೆಗಳನ್ನು ಪರಿಚಯಿಸಿದ್ದು ಆ ತಾಪದ ಮುಂದುವರಿದ ಪರಿಣಾಮಗಳು ಮುಂಗಾರಿನ ಮೇಲೂ ಇರಬಹುದಾಗಿದೆ. ಆ ಬಗ್ಗೆ ಹವಾಮಾನ ಇಲಾಖೆ ತನ್ನ ಪ್ರತಿಕ್ರಿಯೆಗಳನ್ನು ಇನ್ನೂ ಹೊರಗೆಡಹಿಲ್ಲ. ಹೀಗಿರುವಾಗ ಜೂನ್ ಕಾಣುವ ಮುಂಗಾರಿನ ಬಗ್ಗೆ ಏಪ್ರಿಲ್‍ನಲ್ಲೆ ಡಂಗುರ ಸಾರುವ ತರಾತುರಿ ಇಲಾಖೆಗೆ ಏಕಿತ್ತು? ಮುಂಗಾರಿನ ಗಾಳಿಯ ಹೊನಲು ಸಾಮಾನ್ಯವಾಗಿ ಅಂಡಮಾನ್ ನಡುಗಡ್ಡೆಗಳ ಮೇಲೆ ಬೀಸಿಹೋಗುವ ಮೇ ಮೂರನೇ ವಾರದ ತನಕ ಕಾಯಲು ಸಾಧ್ಯವಿರಲಿಲ್ಲವೆ? ಶೇರು ಮಾರುಕಟ್ಟೆಗೆ ನಾಟಕೀಯ ಒತ್ತು ಕೊಡಲು ಪ್ರತೀ ವರುಷ ‘ಈ ಬಾರಿಯ ಮುಂಗಾರು ಚೆನ್ನಾಗಿರುತ್ತದೆ’ ಎಂದೇ ಹವಾಮಾನ ಇಲಾಖೆ ತನ್ನ ಮುನ್ಸೂಚನೆಯ ಕಸರತ್ತನ್ನು ಆರಂಭಿಸುತ್ತದೆ. ದೇಶದ ಒಟ್ಟು ಒಳಿತಿಗಿಂತ ಜನಸಂಖ್ಯೆಯಲ್ಲಿ ಶೇಕಡಾ 9ರಷ್ಟಿರುವ ಶೇರುದಾರರ ಒಳಿತು ಮುಖ್ಯವೆ? ಶೇರು ವಹಿವಾಟು ದೇಶದ ಒಟ್ಟಾರೆ ಹಣಕಾಸಿನ ವ್ಯವಹಾರಗಳಲ್ಲಿ ಒಂದು ಹಿಸ್ಸೆ ಮಾತ್ರ. ಹವಾಮಾನದ ಹಿನ್ನೆಲೆಯಲ್ಲಿ ಅದರ ಆಗುಹೋಗುಗಳಿಗೆ ಮಹತ್ವ ಕೊಡುವುದಕ್ಕಿಂತ ದೇಶದ ಒಟ್ಟಾರೆ ಏಳಿಗೆಯ ಬಗ್ಗೆ ಸರಕಾರಗಳು ಮತ್ತು ಹವಾಮಾನ ಇಲಾಖೆ ತಲೆಕೆರೆದುಕೊಳ್ಳಬೇಕು.
ತಪ್ಪು ಮುನ್ಸೂಚನೆ ನೀಡಿದರೆ ಬಾಗಿಲಿಗೆ ಬೀಗ ಜಡಿದೇವು!
ಮೇಲಿನ ತಲೆಬರಹ ನಿಮ್ಮಲ್ಲಿ ವಿಚಿತ್ರ ಬೆರಗು ಮೂಡಿಸಿರಬಹುದು. ನಮಗೆಲ್ಲ ಗೊತ್ತಿರುವಂತೆ ದೇಶದ ಬಹುತೇಕ ಕಡೆ ಸಾಗುವಳಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ರೈತಾಪಿ ಮಂದಿ ಹೆಚ್ಚಾಗಿ ರೇಡಿಯೊ ಮೂಲಕ ಹಿಂಬಾಲಿಸುತ್ತಾರೆ. ಮುನ್ಸೂಚನೆಗಳು ಒಂದೀಟು ಆಚೀಚೆ ಆದರೆ ಅವರು ಗೊಣಗುವುದಿಲ್ಲ. ಯಾಕೆಂದರೆ ನಿಸರ್ಗ ಎಂದಿಗೂ ಇಡಿಯಾಗಿ ಮನುಷ್ಯನ ಎಣಿಕೆಗೆ ದಕ್ಕುವುದಿಲ್ಲ ಎಂಬ ಸತ್ಯ ಮಳೆಯೊಂದಿಗೆ ಜೂಜಾಡುವ ರೈತರಲ್ಲದೆ ಮತ್ತಾರಿಗೆ ತಿಳಿಯಬೇಕು ಹೇಳಿ. ಆದರೆ ತೀರ ಹಾದಿ ತಪ್ಪಿಸುವ ರೀತಿಯಲ್ಲಿ ಮುನ್ಸೂಚನೆಗಳಿದ್ದರೆ…!? ಹಾಗೆ ಆಯಿತು ಎಂಟು ವರುಷಗಳ ಹಿಂದೆ ಮಹಾರಾಷ್ಟ್ರದಲ್ಲಿ. 2017ರಲ್ಲಿ ಬೀಡ್ ಜಿಲ್ಲೆಯ ಜಿ.ತಾವಡೆ ಎಂಬ ರೈತರೊಬ್ಬರು ತಮ್ಮ ವ್ಯಾಪ್ತಿಯ ಸ್ ಠಾಣೆಯಲ್ಲಿ ಹವಾಮಾನ ಇಲಾಖೆಯ ವಿರುದ್ಧ ಒಂದು ದೂರು ದಾಖಲಿಸಿದರು. ಆ ವರುಷದ ಖಾರಿಫ್ ಋತು(ಮುಂಗಾರಿನ ತಿಂಗಳುಗಳು)ವಿನಲ್ಲಿ ಹೇರಳ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿತ್ತು. ಅದನ್ನು ನಂಬಿದ ಸಾವಿರಾರು ರೈತರು ಸಾಗುವಳಿ ಚಟುವಟಿಕೆಯಲ್ಲಿ ಬಿರುಸಿನಿಂದ ತೊಡಗಿಕೊಂಡರು. ರಾಜ್ಯದ ಮುಖ್ಯಮಂತ್ರಿ ಫಡನಾವಿಸ್ ಜುಲೈ 9ರಂದು ‘ಜುಲೈ 20ರವರೆಗೆ ಬಿತ್ತನೆ ಮಾಡಬೇಡಿ’ ಎಂದು ರೈತರಲ್ಲಿ ಮನವಿ ಮಾಡಿಕೊಂಡಿದ್ದರು. ಆತನೂ ಮೇ ತಿಂಗಳಲ್ಲಿ ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯನ್ನು ಗಮನಿಸಿರಲಿಲ್ಲವೇನೊ. ಆತ ಎಚ್ಚೆತ್ತು ಮನವಿ ಮಾಡಿಕೊಳ್ಳುವ ಹೊತ್ತಿಗಾಗಲೆ ಹವಾಮಾನ ಇಲಾಖೆಯ ಮುನ್ಸೂಚನೆ ನಂಬಿ ರಾಜ್ಯದಲ್ಲಿ ಶೇಕಡಾ 75ರಷ್ಟು ಬಿತ್ತನೆ ಆಗಿಹೋಗಿತ್ತು! ಶುರುವಿನಲ್ಲಿ ಕೆಲವು ದಿನ ಒಳ್ಳೆಯ ಮಳೆಯಾದರೂ ಆಮೇಲೆ ಹೇರಳ ಮಳೆಯ ಕೊರತೆ ರೈತರನ್ನು ಕಾಡಿತು. ಇಲಾಖೆಯ ಮುನ್ಸೂಚನೆ ನಂಬಿ ಸಾಗುವಳಿ ಸಾಲ ಪಡೆದು ಲುಕ್ಸಾನು ಮಾಡಿಕೊಂಡವರಲ್ಲಿ ತಾವಡೆ ಕೂಡಾ ಒಬ್ಬರು. ಹತಾಶೆ ಕಾಡಿದರೂ ಇಲಾಖೆಗೆ ನೈತಿಕ ಜವಾಬುದಾರಿ ನೆನಪಿಸುವ ಸಲುವಾಗಿ ದೂರು ನೀಡಿದರು. ಬೀಜ ಮತ್ತು ರಸಗೊಬ್ಬರ ಮಾರುವ ಭಾರೀ ದೊಡ್ಡ ಕಾರ್ಪೋರೇಟ್ ಕಂಪೆನಿಗಳ ವ್ಯವಹಾರ ಜೋರಾಗಿ ಕುದುರಲು ಇಲಾಖೆ ಮುಂಗಾರಿನ ಮುಂಚೆ ಮುನ್ಸೂಚನೆಗಳನ್ನು ನೀಡುತ್ತದೆ ಎಂದೂ ರೈತರು ತಗಾದೆ ತೆಗೆದರು. ನಿಜಕ್ಕೂ ಇದೊಂದು ಗುರುತರ ಆರೋಪವಾಗಿತ್ತು. ಆದರೆ ಹವಾಮಾನ ಇಲಾಖೆಯ ವಿರುದ್ಧ ಕ್ರಮ ಜರುಗಿಸಿದರೆ ಒಕ್ಕೂಟ ಸರಕಾರದ ವಿರುದ್ಧ ಹೋದಂತಲ್ಲವೆ? ಹೀಗಾಗಿ ಪೊಲೀಸರು ತಾವಡೆಯವರ ದೂರನ್ನು ತಮ್ಮ ಕಡತಗಳಲ್ಲಿ ದಫನ್ ಮಾಡಿರಬೇಕು. ವಿಚಾರ ಇಷ್ಟಕ್ಕೇ ಕೊನೆಗೊಳ್ಳಲಿಲ್ಲ.

ಮತ್ತೆ 2018ರಲ್ಲಿ ಇಲಾಖೆಯ ಸಿಕ್ಕಾಪಟ್ಟೆ ಮಳೆಯ ಮುಫತ್ತು ಮುನ್ಸೂಚನೆಯೂ ಸುಳ್ಳಾಯಿತು. ಈ ಬಾರಿ ಮರಾಠವಾಡದ ರೈತರು ಮುನಿದೆದ್ದರು. ಅವರೂ ಕೂಡಾ ‘ಸ್ವಾಭಿಮಾನಿ ಶೇತ್ಕರಿ ಸಂಘಟನೆ’ಯ ಮಾನಿಕ್ ಕದಮ್ ಮುಂದಾಳ್ತನದಲ್ಲಿ ಪರಬನಿ ಪೋಲಿಸ್ ಠಾಣೆಯಲ್ಲಿ ಐಪಿಸಿ 420ರ ಅಡಿ ದೂರು ದಾಖಲಿಸಿದ್ದಲ್ಲದೆ ಹವಾಮಾನ ಇಲಾಖೆ ತನ್ನ ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳದಿದ್ದರೆ ಅದರ ಕಛೇರಿಗಳಿಗೆ ಬೀಗ ಜಡಿಯಬೇಕಾಗುತ್ತದೆ ಎಂದೂ ಬೆದರಿಕೆ ಒಡ್ಡಿದರು. ನಿಮಗೆ ನೆನಪಿರಲಿ, ಮುಂಗಾರಿನ ಶುರುವಿನಲ್ಲಿ ಬೀಜ, ಕಳೆನಾಶಕ, ಕೀಟನಾಶಕ ಮತ್ತು ರಸಗೊಬ್ಬರದ ಕಂಪೆನಿಗಳು ವ್ಯಾಪಾರದ ಶೇಕಡಾ 60ರಷ್ಟು ವಹಿವಾಟು ನಡೆಸುತ್ತವೆ. ಟ್ರ್ಯಾಕ್ಟರ್ ಸೇರಿದಂತೆ ಹಲವಾರು ಸಾಗುವಳಿ ಸಲಕರಣೆಗಳ ಖರೀದಿ ಕೂಡಾ ಜೋರಾಗಿರುತ್ತದೆ. ಮುಂಗಾರು ಉತ್ತಮವಿದ್ದರೆ ಸೆಪ್ಟೆಂಬರ್ ತನಕ ಕಂಪೆನಿಗಳ ಲಾಭಕ್ಕೆ ಯಾವ ಅಡ್ಡಗಾಲೂ ಇರುವುದಿಲ್ಲ. ವರುಷದಲ್ಲಿ ಇದೊಂದು ಗಡುವಿನಲ್ಲಿ ಅವು ಹೆಚ್ಚು ಲಾಭ ಗೋರಿಕೊಳ್ಳುತ್ತವೆ. ಭಾರತದಂತಹ ಸಾಗುವಳಿಯೆ ಮುಖ್ಯವಾದ ನೆಲದಲ್ಲಿ ಹುಲುಸಾದ ಮಾರುಕಟ್ಟೆ ಅವಕ್ಕೆ ದಕ್ಕುತ್ತದೆ. ಹೀಗಾಗಿ ಹವಾಮಾನ ಇಲಾಖೆಯ ಆತುರದ ಮುಂಗಾರಿನ ಮುನ್ಸೂಚನೆಗಳು ಒಂದು ‘ಮ್ಯಾಚ್ ಫಿಕ್ಸಿಂಗ್’ ಇರಬಹುದೆ ಎಂಬ ಅನುಮಾನ ರೈತರಲ್ಲಿ ಮೂಡಿದ್ದರೆ ಅಚ್ಚರಿಯಿಲ್ಲ. ಕಂಪೆನಿಗಳು ಹೆಚ್ಚು ಲಾಭ ಹಿರಿದರೆ ಶೇರು ಮಾರುಕಟ್ಟೆಯಲ್ಲಿ ಅವುಗಳ ಶೇರು ಮೌಲ್ಯವೂ ಏರಿ ಒಟ್ಟಾರೆ ಸೂಚ್ಯಂಕ ಮುಗಿಲಿಗೇರುತ್ತದೆ.
ಎಲ್‍ನಿನೊ- ಭಾಗ 1 ಓದಿದ್ದೀರಾ? https://kannadaplanet.com/el-nino-the-crutch-of-the-escapists/ ಎಲ್‍ನಿನೊ, ಉಣುಚಿಕೊಳ್ಳುವವರ ಊರುಗೋಲು – ಭಾಗ 1
2018ರ ಚಳಿಗಾಲದ ಫೆಬ್ರವರಿಯಲ್ಲೆ ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭಗಳಲ್ಲಿ ಆಲಿಕಲ್ಲು ಸಹಿತ ತುರುಸಿನ ಮಳೆಗಳು ನೆಲಕ್ಕಪ್ಪಳಿಸಿ 1.25 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಜೋಳ, ಗೋಧಿ, ದ್ರಾಕ್ಷಿ, ಬಾಳೆಹಣ್ಣು, ಕಡಲೆ ಮುಂತಾದ ಚಳಿಗಾಲದ ರಾಬಿ ಬೆಳೆಗಳು ಮಕಾಡೆ ಮಲಗಿ ರೈತರ ಕನಸುಗಳನ್ನು ಮಣ್ಣುಗೂಡಿಸಿದ್ದವು. ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ನೀಡಿದ್ದಲ್ಲದೆ ರೈತರು ಕೊಯಿಲಾಗಿ ಒಂದೆಡೆ ಒಟ್ಟಿಟ್ಟ ಬೆಳೆಗಳ ಮೇಲೆ ಆಲಿಕಲ್ಲು ತಡೆಯುವ ಹೆಬ್ಬಲೆ(Hail net)ಗಳನ್ನು ಹರಡಲು ಸೂಚಿಸಿತ್ತಂತೆ! ಇದೇನೊ ಸರಿ, ಕೊಯಿಲಾಗದೆ ಜಮೀನಿನಲ್ಲೆ ಇರುವ ಹೆಕ್ಟೇರ್‌ಗಟ್ಟಲೆ ಬೆಳೆಗಳ ಮೇಲೆ ಹೆಬ್ಬಲೆ ಹರಡುವ ಬಗೆಯನ್ನು ಇಲಾಖೆಯೆ ಹೇಳಬೇಕಿತ್ತು. ಹೇಳಲಿಲ್ಲ, ಬೆಳೆಗಳು ನಾಶವಾದವು.
ಅಂದಹಾಗೆ ಪುಣೆಯಲ್ಲಿ ಒಕ್ಕೂಟ ಸರಕಾರದ ಭೂವಿಜ್ಞಾನಗಳ ಮಿನಿಸ್ಟ್ರಿಯಡಿ ಬರುವ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿರಿಯೊಲಜಿ (ಐಐಟಿಎಮ್)’ಯು 450 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕ ‘ಪ್ರತ್ಯೂಶ್’ ಹೆಸರಿನ ಹವಾಮಾನ ಅಧ್ಯಯನ ಮತ್ತು ಕರಾರುವಾಕ್ ಮುನ್ಸೂಚನೆಗಳಿಗೆಂದೆ ಒಂದು ಸೂಪರ್ ಕಂಪ್ಯೂಟರ್ ಅನ್ನು ಅಳವಡಿಸಿದೆ. ಸಂಸ್ಕ್ರುತದ ‘ಪ್ರತ್ಯೂಶ್’ ಎಂದರೆ ಮುಂಜಾವು, ಬೆಳಗು ಎಂದೆಲ್ಲ ಹುರುಳಿದೆ. ಉಲಿಯಲು ಪಕ್ಕನೆ ನಾಲಗೆ ತಿರುಗದ ಇಂತಹ ಪದಗಳನ್ನು ಚಲಾವಣೆಗೆ ತರುವಲ್ಲಿ ಒಕ್ಕೂಟ ಸರಕಾರ ಪರಿಣಿತಿ ಹೊಂದಿದೆ (ಇನ್ನೊಂದು ಸವಕಲು ಪದ ಆತ್ಮನಿರ್ಭರ). ರೈತರಿಗೆ ಬೇಕಾದ್ದು ಸಂಸ್ಕ್ರುತ ನುಡಿಯ ಪರಿಚಯವಲ್ಲ. ಸಾಗುವಳಿ ಸಂಸ್ಕ್ರುತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡು ಹೋಗುವ ಸೈಂಟಿಫಿಕ್ ಒತ್ತಾಸೆ ಅಷ್ಟೆ. ‘ಐಐಟಿಎಮ್’ ಸಂಸ್ಥೆಯನ್ನು ಹವಾಮಾನ ಇಲಾಖೆಯ ಅಡಿಯಲ್ಲೆ 1962ರಲ್ಲಿ ಒಂದು ಸಂಶೋಧನಾ ವಿಭಾಗವಾಗಿ ಅಂದಿನ ನೆಹರೂ ಸರಕಾರ ಹುಟ್ಟುಹಾಕಿತ್ತು. ಈಗದು ನೇರ ಒಕ್ಕೂಟ ಸರಕಾರದ ಮಿನಿಸ್ಟ್ರಿಯ ಹಿಡಿತದಲ್ಲಿದೆ. ಅಂದರೆ ಹವಾಮಾನ ಅಧ್ಯಯನದ ವಿಷಯದಲ್ಲಿ ಎರಡೂ ಸಂಸ್ಥೆಗಳ ನಡುವಿನ ಸಲೀಸು ಹೊಕ್ಕುಬಳಕೆಗಳು ಸಾಧ್ಯವಾಗಬೇಕಾದರೆ ಸರಕಾರ ಉದಾರವಾಗಿರಬೇಕು ಎಂದಾಯಿತು. ಬಿಕ್ಕಟ್ಟಿನ ವೇಳೆಗಳಲ್ಲಿ ಚರ್ಚಿಸಲು, ಪರಸ್ಪರ ಸಹಕರಿಸಲು ಸಂಸ್ಥೆಗಳು ಮುಕ್ತತೆಯನ್ನು ಹೊಂದಿರಬೇಕು. ಹಾಗಿದ್ದರೆ ಮಾತ್ರ ಹವಾಮಾನ ಬದಲಾವಣೆಯ ವಿಜ್ಞಾನವನ್ನು ಜನರಿಗೆ ತಲುಪಿಸಬಹುದಾಗಿದೆ. ಇಲ್ಲವಾದರೆ ಮುಂದೆ ರೈತರ ಮುನಿಸು ಹೇಗೆ ಬೇಕಾದರೂ ಪ್ರಕಟಗೊಳ್ಳಬಹುದಾದ ಸಾಧ್ಯತೆಗಳನ್ನು ನಾವು ಮುನ್ಸೂಚಿಸಬಹುದಾಗಿದೆ.
(ಮುಂದಿನ ಭಾಗ ನಾಳೆ ( 20– 06-2026) ಪ್ರಕಟವಾಗಲಿದೆ- ಸಂ.)
ಕೆ.ಎಸ್.ರವಿಕುಮಾರ್, ಹಾಸನ
ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.
ಮೊ : 9964604297
ಇದನ್ನೂ ಓದಿ- ಆರೆಸ್ಸೆಸ್ ಸಂವಿಧಾನಕ್ಕಿಂತಲೂ ದೊಡ್ಡದಾ?


