ಮುಂಬೈ : ಇಲ್ಲಿನ ಘಾಟ್‌ಕೋಪರ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಚಿರಾಗ್ ನಗರದ ಅಶೋಕ್ ನಗರ ಪ್ರದೇಶದಲ್ಲಿರುವ ಗೌಸಿಯಾ ಚಾಲ್‌ನಲ್ಲಿ (ಸಾಲಾಗಿ ನಿರ್ಮಿಸಲಾದ ಮನೆಗಳ ಸಮುಚ್ಚಯ) ಬೆಳಗಿನ ಜಾವ 3:48 ರ ಸುಮಾರಿಗೆ ಈ ಭೂಕುಸಿತ ಸಂಭವಿಸಿದೆ.
ಬೆಟ್ಟದ ಇಳಿಜಾರಿನಿಂದ ಮಣ್ಣು ಮತ್ತು ಅವಶೇಷಗಳು ಎರಡು-ಮೂರು ಮನೆಗಳ ಮೇಲೆ ಕುಸಿದುಬಿದ್ದಿದೆ. ಘಾಟ್‌ಕೋಪರ್‌ನಲ್ಲಿರುವ ನಾಗರಿಕ ಸಂಸ್ಥೆಯ ರಾಜವಾಡಿ ಆಸ್ಪತ್ರೆಗೆ ಸಾಗಿಸುವಾಗ ಆರು ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಮೊಹಮ್ಮದ್ ಸಮೀರ್ ಅನ್ಸಾರಿ (14), ಸಾಹಿಲ್ ಹುಸೇನ್ ಅಬ್ದುಲ್ ಖಾಜಿ (19), ಸುಮಾರು 45 ವರ್ಷ ವಯಸ್ಸಿನ ಗುರುತಿಸಲಾಗದ ವ್ಯಕ್ತಿ, ಅಬಾನ್ ಆರಿಫ್ ಶೇಖ್ (2), ಮನತ್ ಆರಿಫ್ ಶೇಖ್ (4) ಮತ್ತು ಮರ್ಜಿನಾ ಆರಿಫ್ ಶೇಖ್ (27) ಎಂದು ಗುರುತಿಸಲಾಗಿದೆ ಎಂದು ನಾಗರಿಕ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಯಗೊಂಡಿರುವ ಸೊಹೇಲ್ ಅನ್ಸಾರಿ (18), ಮೊಹಮ್ಮದ್ ಅನ್ಸಾರಿ (14), ನೈಮುದ್ದೀನ್ ಇಕ್ಬಾಲ್ ಖಾನ್ (28) ಮತ್ತು ಸಾಜಿದ್ ಅನ್ಸಾರಿ (16) ಅವರನ್ನು ಕುರ್ಲಾದಲ್ಲಿರುವ ನಾಗರಿಕ ಸಂಸ್ಥೆಯ ಭಾಭಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

