ಜುಲೈ 16, 1979. ನಮ್ಮ ಬಿ ಎಸ್ ಸಿ ತರಗತಿಗಳು ಆರಂಭವಾದವು. ನಾನು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಕಾಂಬಿನೇಶನ್ ತೆಗೆದುಕೊಂಡಿದ್ದೆ. ಅದು ಕಂಪ್ಯೂಟರ್ ಯುಗ ಅಲ್ಲ ಅಲ್ಲವೇ, ಆಗ ಕಾಂಬಿನೇಶನ್ ಗಳ ಆಯ್ಕೆ ತೀರಾ ಕಡಿಮೆ ಇದ್ದವು. ವಿಜ್ಞಾನದವರಿಗೆ ಪಿ ಸಿ ಎಂ ಮತ್ತು ಪಿಸಿಬಿ. ಆರ್ಟ್ಸ್ ಮತ್ತು ಕಾಮರ್ಸ್ ನವರಿಗೆ ಹಿಸ್ಟರಿ, ಎಕಾನಮಿಕ್ಸ್, ಪಾಲಿಟಿಕಲ್ ಸೈನ್ಸ್, ಸೋಶಿಯಾಲಜಿ, ಬಿಸಿನೆಸ್ ಆರ್ಗನೈಸೇಶನ್, ಸ್ಟಾಟಿಸ್ಟಿಕ್ಸ್ ಅಕೌಂಟೆನ್ಸಿ, ಮರ್ಕೆಂಟೈಲ್ ಲಾ, ಇತ್ಯಾದಿಗಳ ಕಾಂಬಿನೇಶನ್; ಅಲ್ಲೂ ಆಯ್ಕೆಗಳು ಸೀಮಿತ.
ಬಿಎಸ್ ಸಿ ಪದವಿಗಳಿಗೆ ಪ್ರವೇಶ ಅದಾಗಲೇ ಕಡಿಮೆಯಾಗಿತ್ತು. ಉಳ್ಳವರು ಹಣ ಕೊಟ್ಟು ಎಂಜಿನೀಯರಿಂಗ್, ಮೆಡಿಕಲ್ ಸೇರಿಕೊಳ್ಳುತ್ತಿದ್ದರು, ಇನ್ನು ಕೆಲವರು ವಿದ್ಯಾಭ್ಯಾಸ ಮೊಟಕುಗೊಳಿಸಿ ಬೇರೆ ದಾರಿ ಹುಡುಕುತ್ತಿದ್ದರು.
ನಮ್ಮ ಪಿಸಿಎಂ ವಿಭಾಗದಲ್ಲಿ ನಾವಿದ್ದುದು ಕೇವಲ ಎಂಟು ಮಂದಿ. ಆರು ಮಂದಿ ಹುಡುಗರು ಮತ್ತು ಇಬ್ಬರು ಹುಡುಗಿಯರು. ಆರು ಮಂದಿ ಹುಡುಗರೆಂದರೆ ನಾನು, ಇನಾಸ್ ಮಿನೆಜಸ್ (ಮುಂದೆ ಈತ ಕುವೈಟ್ ನಲ್ಲಿ ಉದ್ಯೋಗಿಯಾದ), ರೊನಾಲ್ಡ್ ಫೆರ್ನಾಂಡಿಸ್ (ರಾಜ್ಯದಲ್ಲೇ ರ್ಯಾಂಕ್ ಪಡೆದು ಸ್ನಾತಕೋತ್ತರ ಪದವಿ ಓದಿದ), ಆನಂದ, ಮತ್ತಿಬ್ಬರು (ಹೆಸರು ಮರೆತಿದೆ). ಹುಡುಗಿಯರು ಅನಿತಾ ಶೆಣೈ ಮತ್ತು ಪ್ರೇಮಲತಾ. ಪ್ರೇಮಲತಾ ದ್ವಿತೀಯ ಬಿ ಎಸ್ ಸಿ ಓದುತ್ತಿದ್ದಾಗಲೇ ಮದುವೆಯಾಗಿ ಹೋದಳು. ಹಾಗಾಗಿ ಇಡೀ ತರಗತಿಗೆ ಉಳಿದುದು ಒಬ್ಬಳೇ ಹೆಣ್ಣುಮಗಳು, ಅನಿತಾ ಶೆಣೈ.
ಪಿಯುಸಿಯಲ್ಲಿ ಒಂದು ತರಗತಿಯಲ್ಲಿ ಸುಮಾರು ಎಂಭತ್ತು ಮಕ್ಕಳಿರುತ್ತಿದ್ದರು. ಹಾಗಾಗಿ ತರಗತಿ ಕೆಲಸಕ್ಕೆ ವಿಶಾಲವಾದ ಕೊಠಡಿ. ನಾವಿದ್ದುದು ಎಂಟು ಮಂದಿಯಲ್ಲವೇ? ಹಾಗಾಗಿ ನಮ್ಮನ್ನು ಒಂದು ಗೋಡೌನ್ ನಂತಹ ಕೊಠಡಿಗೆ ಹಾಕಿದರು. ಮೂರೋ ನಾಲ್ಕೋ ಡೆಸ್ಕ್. ಮುಂದುಗಡೆ ಇಬ್ಬರು ಹುಡುಗಿಯರು, ಆನಂತರದ ಡೆಸ್ಕ್ ಗಳಲ್ಲಿ ತಲಾ ಇಬ್ಬರಂತೆ ಹುಡುಗರು. ನಮ್ಮ ಪಕ್ಕದ ಕೊಠಡಿ ಜನರೇಟರ್ ಗೆ ಮೀಸಲಾಗಿತ್ತು. ಕರೆಂಟು ಕೈಕೊಟ್ಟಾಗ ಇಡೀ ಕಾಲೇಜಿಗೆ ವಿದ್ಯುತ್ ಸರಬರಾಜು ಮಾಡುವ ಆ ಜನರೇಟರ್ ವಿಪರೀತ ಸದ್ದು ಮಾಡುತ್ತಿತ್ತು. ಜನರೇಟರ್ ಸದ್ದು ಮುಗಿಯುವವರೆಗೂ ನಮಗೆ ತರಗತಿ ಇಲ್ಲ! ಭೌತಶಾಸ್ತ್ರ ಉಪನ್ಯಾಸಕ ಎಂ ಆರ್ ವಿ ರಾವ್ ಅವರು ಪಾಠ ಮಾಡಲಾಗದೆ, ʼನೀವು ಮುಂದೆ ವಿಜ್ಞಾನಿಗಳಾಗಿ ಸದ್ದಿಲ್ಲದ ಜನರೇಟರ್ ಅನ್ನು ಸಂಶೋಧಿಸಬೇಕುʼ ಎಂದು ನಗುತ್ತ ಹೇಳುತ್ತಿದ್ದರು.
ನಮಗೆ ಭೌತಶಾಸ್ತ್ರ ಬೋಧಿಸುತ್ತಿದ್ದುದು ಎಂ ಆರ್ ವೆಂಕಟೇಶ ರಾವ್ (ಎಂ ಆರ್ ವಿ ರಾವ್), ತುಂಬಾ ಸ್ನೇಹಶೀಲ ಮನುಷ್ಯ. ನಮ್ಮನ್ನು ಅವರ ಗೆಳೆಯನಂತೆಯೇ ನೋಡುತ್ತಿದ್ದರು. ʼಅಧ್ಯಾಪಕರನ್ನು ಪ್ರೀತಿಸುವವರು ಅವರು ಬೋಧಿಸುವ ವಿಷಯವನ್ನೂ ಪ್ರೀತಿಸುತ್ತಾರೆʼ ಎಂಬ ಮಾತಿಗೆ ಅನ್ವರ್ಥ ಅವರು.
ಮುಂದೆ ಕಾಲೇಜು ಜೀವನ ಮುಗಿದು ಹೊರಗೆ ಸಿಕ್ಕಾಗಲೂ ಅಷ್ಟೇ ಪ್ರೀತಿ. ಅವರು ಕೆಲ ವರ್ಷಗಳ ಬಳಿಕ ಮುಲ್ಕಿಯ ವಿಜಯಾ ಕಾಲೇಜಿಗೆ ವರ್ಗವಾಗಿ ಹೋದರು. 1986 ರ ಸುಮಾರಿಗೆ ನಾನು ಮೂಲ್ಕಿಯ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದಾಗ ಸಿಕ್ಕ ಅವರು ಆತ್ಮೀಯವಾಗಿ ಮಾತನಾಡಿಸಿದರು ಮಾತ್ರವಲ್ಲ, ಟಿ ಎಂ ಎ ಪೈಯವರ ಸ್ಮರಣ ಗ್ರಂಥ ʼಸುದರ್ಶನʼ ಕೊಟ್ಟಿದ್ದರು (ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಇತಿಹಾಸ ಇರುವ ಎನ್ ಸೈಕ್ಲೋಪೀಡಿಯಾ ದಂತಹ ಗ್ರಂಥ ಅದು).
ಇನ್ನೊಬ್ಬರು ನಾರಾಯಣ ರಾವ್. ಶಿವಮೊಗ್ಗ ಕಡೆಯವರು, ಫಿಸಿಕಲ್ ಬ್ಯಾಲೆನ್ಸ್ ಬಳಸಿ ತೂಕ ಮಾಡುವಾಗ, ʼತಿರ್ಗಾ ಹಾಕು.. ತಿರ್ಗಾ ಹಾಕು..ʼ ಎನ್ನುತ್ತಿದ್ದರು. ವಿದ್ಯಾರ್ಥಿಗಳು ಆಗೆಲ್ಲ, ʼತಿರ್ಗಾ ನೂರು ಹಾಕು, ಆಮೇಲೆ ಒಂದು ಸೋಡಾ ಹಾಕು..ʼ ಎಂದು ತಮಾಷೆ ಮಾಡುತ್ತಿದ್ದರು. ನಾರಾಯಣ ರಾವ್ ಪಾಠ ಮಾಡುವಾಗ ನಡುವೆ ಒಮ್ಮೊಮ್ಮೆ ಅವರಿಗೇ ಗೊಂದಲವಾಗುತ್ತಿದ್ದುದಿತ್ತು. ಅವರ ಪಾಠ ಅತ್ಯುತ್ತಮವಲ್ಲವಾದರೂ, ʼಪರವಾಗಿಲ್ಲʼ ಎಂಬಂತಿತ್ತು. ಮನುಷ್ಯ ಒಳ್ಳೆಯವರು.
ಗಣಿತಕ್ಕೆ ಇದ್ದುದು ಬಿ ಪದ್ಮನಾಭ ಗೌಡರು. ಇವರು ಕ್ಯಾಲ್ಕುಲಸ್ ಬೋಧಿಸುತ್ತಿದ್ದರು. ವಿದ್ಯಾರ್ಥಿಗಳ ತಲೆಗೆ ಹೊಕ್ಕುವ ಹಾಗೆ ಕಬ್ಬಿಣದ ಕಡಲೆ ಗಣಿತವನ್ನು ಬೋಧಿಸುತ್ತಿದ್ದರು. ಮಾಧವ ಜೋಷಿಯವರು ಮಾಡರ್ನ್ ಆಲ್ಜೀಬ್ರಾ ಬೋಧಿಸುತ್ತಿದ್ದು, ಅದು ಮುಖ್ಯವಾಗಿ ಥಿಯರಿಟಿಕಲ್ ಗಣಿತವಾಗಿದ್ದುದರಿಂದ ಅದರಲ್ಲಿ ವಾದಗಳೇ ಹೆಚ್ಚು. ಮೊದಲೇ ಬೋರು ಹೊಡೆಸುವ ವಿಷಯ, ಅಲ್ಲಿಂದ ಮಾಧವ ಜೋಷಿಯವರ ಅನಾಕರ್ಷಕ ಬೋಧನಾ ವೈಖರಿ. ನನಗಂತೂ ಮಾಡರ್ನ್ ಆಲ್ಜೀಬ್ರಾದಲ್ಲಿ ಏನೇನೂ ಅಂಕಗಳು ದೊರೆಯುತ್ತಿರಲಿಲ್ಲ. ಅಲ್ಲಿ ನಷ್ಟವಾದುದನ್ನೆಲ್ಲ ನಾನು ಕ್ಯಾಲ್ಕುಲಸ್ ನಲ್ಲಿ ತುಂಬಿಸಿಕೊಳ್ಳುತ್ತಿದ್ದೆ.
ರಸಾಯನ ಶಾಸ್ತ್ರ ಬೋಧಿಸುತ್ತಿದ್ದುದು ಶ್ಯಾಮ್ ಭಟ್ ಮತ್ತು ರಾಮಕೃಷ್ಣ ಭಟ್. ಬಿ ಎಸ್ ಸಿ ಅಂತಿಮ ವರ್ಷದಲ್ಲಿ ಆರ್ಗಾನಿಕ್ ಕೆಮಿಸ್ಟ್ರ್ರಿಯನ್ನು ಸ್ವತಃ ದಾಮೋದರ ಕಿಣಿಯವರೇ ಬೋಧಿಸುತ್ತಿದ್ದರು. ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ ಕಾರ್ಬನ್ ಬಾಂಡ್ ಗಳ ತರಲೆಗಳು ಅಧಿಕವಾಗಿದ್ದುದರಿಂದ ಅವನ್ನು ನೆನಪಿಡುವುದು ಬಹಳ ಕಷ್ಟವಾಗುತ್ತಿತ್ತು. ಶಂಕ್ರಾಣದಲ್ಲಿ ಪಿಯುಸಿಯಲ್ಲಿದ್ದಾಗಲೇ ನನಗೆ ಇದೊಂದು ಸಮಸ್ಯೆಯಾಗಿತ್ತು. ಅದು ಇಲ್ಲೂ ಮುಂದುವರಿಯಿತು.
ಹಿಂದಿಗೆ ರಾಮಚಂದ್ರ ಭಟ್, ಇಂಗ್ಲಿಷ್ ಗೆ ರಘುನಾಥ ಭಟ್ ಮತ್ತು ಕೃಷ್ಣಭಟ್ ಇದ್ದರು. ರಘುನಾಥ ಭಟ್ಟರು ನಮಗೆ ಮುಲ್ಕ್ ರಾಜ್ ಆನಂದರ ʼದಿ ಅನ್ ಟಚೆಬಲ್ʼ ನಾನ್ ಡಿಟೇಲ್ಡ್ ಪಾಠ ಮಾಡುತ್ತಿದ್ದರು. ಅದರಲ್ಲಿ ಅರ್ಚಕ ಬ್ರಾಹ್ಮಣನೊಬ್ಬ ದೇಗುಲದ ಬಳಿ ಕಸ ಗುಡಿಸುವ ಅಸ್ಪೃಶ್ಯ ಹೆಣ್ಣುಮಗಳ ಮೊಲೆ ಹಿಡಿಯುವ ಪ್ರಸಂಗ ಬರುತ್ತಿತ್ತು. ಅದನ್ನು ಇಪ್ಪತ್ತರ ಹರೆಯದ ನಮಗೆ ಪಾಠ ಮಾಡುವುದಾದರೂ ಹೇಗೆ? ಆಗ ಭಟ್ಟರು ʼಆ ಭಾಗವನ್ನು ನೀವೇ ಓದಿಕೊಳ್ಳಿʼ ಎಂದು ಹೇಳಿ ಮುಂದೆ ಹೋಗುತ್ತಿದ್ದರು.
ಮಿಡ್ಡೇ ಮೀಲ್
ಆಗ ಕಾಲೇಜಿಗೆ ಬರುತ್ತಿದ್ದವರಲ್ಲಿ ಹೆಚ್ಚಿನವರು ಆರ್ಥಿಕವಾಗಿ ತೀರಾ ಬಡವರು. ಕಾರ್ಕಳ ಪೇಟೆಯಲ್ಲಿರುವವರು, ಹೆಚ್ಚಾಗಿ ಜಿ ಎಸ್ ಬಿ ಸಮುದಾಯದವರು ಕಾಲೇಜಿಗೆ ನಡೆದೇ ಬರುತ್ತಿದ್ದರೆ, ಮೂರೋ ನಾಲ್ಕು ಕಿಲೋಮೀಟರ್ ದೂರದವರು ಸೈಕಲ್ ನಲ್ಲಿ ಬರುತ್ತಿದ್ದರು. ಅದಕ್ಕೂ ದೂರದವರು (ಅಜೆಕಾರ್, ಮುದ್ರಾಡಿ, ಕಣಂಜಾರು, ಬೈಲೂರು, ಮುಂಡ್ಕೂರು, ಬಜೆಗೋಳಿ ಇ.) ಹಣ ಉಳ್ಳವರಾದರೆ ಬಸ್ ನಲ್ಲಿ ಬರುತ್ತಿದ್ದರು. ಈ ಯಾವುದೇ ರೀತಿಯಲ್ಲಿ ಬರಲಾಗದವರು, ವಿಶೇಷವಾಗಿ ಹೆಣ್ಣುಮಕ್ಕಳು, ಓದು ಮುಂದುವರೆಸಲಾಗದವರು ಎಷ್ಟು ಮಂದಿ ಇರಬಹುದು!?
ಹೀಗೆ ಕಾಲೇಜಿಗೆ ಬರುತ್ತಿರುವವರಿಗೆ ಮಧ್ಯಾಹ್ನದೂಟದ್ದೊಂದು ದೊಡ್ಡ ಸಮಸ್ಯೆ. ಕಾಲೇಜಿನ ಕ್ಯಾಂಟೀನ್ ಹೊರತುಪಡಿಸಿದರೆ ಪಕ್ಕದಲ್ಲಿ ಉಪಹಾರಗೃಹಗಳೂ ಇಲ್ಲ. ಇದ್ದರೂ ತೆರಲು ಹಣ ಇರಲಿಲ್ಲ. ಇದನ್ನು ಮನಗಂಡು ಕಾಲೇಜು ಆಡಳಿತ ಮಧ್ಯಾಹ್ನದೂಟದ ಯೋಜನೆ ಮಾಡಿತ್ತು. ಸಾಕಷ್ಟು ಫಂಡ್ ಇಲ್ಲದಾಗ ಅದು ನಿಂತದ್ದು ಅಥವಾ ವಿಳಂಬವಾಗಿ ಆರಂಭವಾದುದೂ ಇತ್ತು. ಸಣ್ಣದೊಂದು ಶುಲ್ಕ ತೆತ್ತು ಈ ಮಧ್ಯಾಹ್ನದೂಟದ ಪ್ರಯೋಜನ ಪಡೆಯಬಹುದಾಗಿತ್ತು.
ಬಿ ಎಸ್ ಸಿ ಸೇರಿದ ನನಗಂತೂ ಅದೊಂದು ದೊಡ್ಡ ವರದಾನವಾಗಿತ್ತು. ಅಲ್ಲಿ ಪೂರಿ ಅಥವಾ ಚಪಾತಿ, ಅಲ್ಲದೆ ಅನ್ನ ಸಾಂಬಾರು ಇರುತ್ತಿತ್ತು. ಹಸಿದ ಹೊಟ್ಟೆಗೆ ಧಾರಾಳ ಮಾತ್ರವಲ್ಲ, ಮೃಷ್ಟಾನ್ನ ಭೋಜನದಂತಿರುತ್ತಿತ್ತು. ಅದರ ಇನ್ ಚಾರ್ಜ್ ಆಗಿದ್ದ ಸಸ್ಯಶಾಸ್ತ್ರ ವಿಭಾಗದ ಮೋಹನ ಕಾಮತರು ಮುಂದೆ ಮಿಡ್ಡೇ ಮೀಲ್ ಯೋಜನೆಗೆ ನನ್ನನ್ನೇ ಕಾರ್ಯದರ್ಶಿ ಮಾಡಿಬಿಟ್ಟರು. ಕೊನೆಯ ತರಗತಿ ಇಲ್ಲವಾದರೆ ನಾನು ಅಲ್ಲಿಗೆ ಹೋಗಬೇಕು. ಅಲ್ಲಿ ಒಬ್ಬರು ಅಡುಗೆ ಭಟರು ಬರುತ್ತಿದ್ದರು. ಅವರ ಜತೆ ಸೇರಿ ಪೂರಿ, ಚಪಾತಿ ಮಾಡಲು ನೆರವಾಗುತ್ತಿದ್ದೆ. ತಲಾ ಎರಡು ಪೂರಿ ಅಥವಾ ಚಪಾತಿಯಂತೆ ಸುಮಾರು ಐವತ್ತು ಮಂದಿಗೆ ಊಟವಾಗಬೇಕು ಅಂದರೆ ಎಷ್ಟು ಚಪಾತಿ ಪೂರಿ ಆಗಬೇಕು ಯೋಚಿಸಿ. ಇದಾದ ಮೇಲೆ ಕಾರ್ಯದರ್ಶಿಯಾದ ನನ್ನ ಕೆಲಸ ಎಂದರೆ ಊಟಕ್ಕೆ ಬಂದ ವಿದ್ಯಾರ್ಥಿಗಳ ಹಾಜರಿ ತೆಗೆಯಬೇಕು.
ಹೀಗೆ ಮಧ್ಯಾಹ್ನದೂಟಕ್ಕೆ ಬರುತ್ತಿದ್ದ ಅಜೆಕಾರು ಕಡೆಯ ಒಬ್ಬ ವಿದ್ಯಾರ್ಥಿಗೆ ಸ್ವಲ್ಪ ಅನ್ನ ಹಾಕಿದರೆ ಸಾಲುತ್ತಿರಲಿಲ್ಲ. ಮನೆಯಲ್ಲಿ ಏನು ಬಡತನವೋ ಏನೋ, ಪಾಪ. ʼನನಗೆ ಇನ್ನೂ ಸ್ವಲ್ಪ ಹೆಚ್ಚು ಅನ್ನ ಬೇಕುʼ ಎನ್ನುತ್ತಿದ್ದ. ನಾನು ಇದಕ್ಕೆ ಒಪ್ಪುತ್ತಿರಲಿಲ್ಲ. ಯಾಕೆಂದರೆ ಅಲ್ಲಿ ಇದ್ದ ಅನ್ನ ಸೀಮಿತ. ಆತ ಕಾಮತರ ಬಳಿ ಹೋಗಿ ತನ್ನ ಕಷ್ಟ ಹೇಳಿಕೊಂಡಿರಬೇಕು. ಕಾಮತರು ನನ್ನನ್ನು ಕರೆದು, ʼಆತನಿಗೆ ಹಸಿವು ಜಾಸ್ತಿ, ಬಡವನಿರಬೇಕು, ಸ್ವಲ್ಪ ಅನ್ನ ಸಾಲುವುದಿಲ್ಲವಂತೆ, ಆತನಿಗೊಂದು ರಿಯಾಯಿತಿ ನೀಡಿ ಸ್ವಲ್ಪ ಹೆಚ್ಚು ಹಾಕಿʼ ಎಂದರು. ಅಂದಿನಿಂದ ಆತನೊಬ್ಬನಿಗೆ ಹೆಚ್ಚುವರಿ ಅನ್ನ ಬಡಿಸುತ್ತಿದ್ದೆವು.
ದ್ವಿತೀಯ ಪದವಿಯ ಉದ್ದಕ್ಕೂ ನಾನು ಮಿಡ್ಡೇಮೀಲ್ ಯೋಜನೆಯ ಕಾರ್ಯದರ್ಶಿಯಾಗಿದ್ದೆ. ಅಂತಿಮ ಪದವಿಗೆ ಬರುತ್ತಲೇ ನಮಗೆ ಓದಲು ಹೆಚ್ಚು ಇರುತ್ತಿದ್ದುದರಿಂದ ನಮ್ಮನ್ನು ಪಾಠೇತರ ಚಟುವಟಿಕೆಗಳಿಂದ ಸ್ವಲ್ಪ ದೂರ ಇಡುತ್ತಿದ್ದರು. ಹಾಗಾಗಿ ಅಂತಿಮ ಪದವಿಯ ದಿನಗಳಲ್ಲಿ ನಾನು ಮಿಡ್ಡೇ ಮೀಲ್ ನ ಕೇವಲ ಫಲಾನುಭವಿಯಾಗಿದ್ದೆ ಎಂದು ನೆನಪು.
ಎನ್ ಎಸ್ ಎಸ್
ಪಾಠೇತರ ಚಟುವಟಿಕೆಗಳಿಗೆ ಭುವನೇಂದ್ರ ಕಾಲೇಜಿನಲ್ಲಿ ಹೇರಳ ಅವಕಾಶಗಳಿದ್ದವು. ಎನ್ ಎಸ್ ಎಸ್ (ರಾಷ್ಟ್ರೀಯ ಸ್ವಯಂಸೇವಾ ಯೋಜನೆ), ಎನ್ ಸಿ ಸಿ, ಯಕ್ಷಗಾನ, ಕ್ರೀಡೆ ಹೀಗೆ,.. ವಿಜ್ಞಾನದ ವಿದ್ಯಾರ್ಥಿಯಾಗಿದ್ದದರಿಂದ ಪ್ರಾಕ್ಟಿಕಲ್ ಅದು ಇದು ಎಂದು ನಮಗೆ ಸಮಯ ಸಿಗುತ್ತಿದ್ದುದು ಕಡಿಮೆ. ಹಾಗಾಗಿ ಎನ್ ಸಿ ಸಿ ಸೇರುವುದು ಕಷ್ಟ. ಅಲ್ಲದೆ ಈ ಕಾಲೇಜಿನಲ್ಲಿ ನಾನು ನೇರವಾಗಿ ದ್ವಿತೀಯ ಪಿಯುಗೆ ಬಂದು ಸೇರಿದವನು. ಆದ್ದರಿಂದ ನನಗೆ ಸುಲಭದಲ್ಲಿದ್ದ ಆಯ್ಕೆಯೆಂದರೆ ಎನ್ ಎಸ್ ಎಸ್. ಎನ್ ಎಸ್ ಎಸ್ ಸೇರಿಕೊಂಡೆ.
ವಾರದ ಕೊನೆಯ ದಿನ ಅಂದರೆ ಶನಿವಾರ ನಮಗೆ ಎನ್ ಎಸ್ ಎಸ್ ಚಟುವಟಿಕೆಗಳಿರುತ್ತಿದ್ದವು. ಪಕ್ಕದ ಯಾವುದಾದರೂ ಶಾಲೆಯ ಮೈದಾನ ವಿಸ್ತರಣೆ, ಸ್ವಚ್ಛತಾಕಾರ್ಯ, ಗಿಡ ನೆಡುವುದು ಇತ್ಯಾದಿ. ಹತ್ತೊಂಬತ್ತು ಇಪ್ಪತ್ತರ ಹರೆಯದ ಹುಡುಗ ಹುಡುಗಿಯರು ಒಟ್ಟಾಗಿ ಕೆಲಸ ಮಾಡುವಾಗ ಇರುವ ಉತ್ಸಾಹವೇ ಬೇರೆಯಲ್ಲವೇ? ಹಾಗಾಗಿ ಎನ್ ಎಸ್ ಎಸ್ ಚಟುವಟಿಕೆಯ ದಿನಕ್ಕಾಗಿ ನಾವು ಕಾದು ಕೂರುತ್ತಿದ್ದೆವು. ಕೆಲಸ ಮುಗಿದ ಮೇಲೆ ಪೇಟೆಯ ಹೊಟೇಲ್ ನಿಂದ ತರಿಸಿದ ಪೂರಿ, ವಡೆ ಇತ್ಯಾದಿ ತಿಂಡಿಗಳೂ ಇರುತ್ತಿದ್ದವು.
ವಾರಾಂತ್ಯದ ಎನ್ ಎಸ್ ಎಸ್ ಚಟುವಟಿಕೆಗಳಿಗೆ ಹೊರತಾಗಿ ಸ್ವಲ್ಪ ದೂರದ ಊರಿನಲ್ಲಿ ಎರಡು ದಿನದ ಎನ್ ಎಸ್ ಎಸ್ ಕ್ಯಾಂಪ್ ಇರುತ್ತಿದ್ದುದೂ ಇತ್ತು. ಎರಡು ಹಗಲು ಮತ್ತು ಒಂದು ರಾತ್ರಿ. ಪಶ್ಚಿಮಘಟ್ಟದ ಬುಡದ ದುರ್ಗ ಎಂಬಲ್ಲಿ ಅಂತಹ ಒಂದು ಕ್ಯಾಂಪ್ ಇತ್ತು. ಸುಂದರ ಹಸಿರು ಪರಿಸರದಲ್ಲಿ ಸುಮಾರು ಐವತ್ತು ವಿದ್ಯಾರ್ಥಿಗಳ ಜತೆ ಕಳೆದ ಆ ದಿನ ಈಗಲೂ ನೆನಪಾಗಿ ಕಾಡುತ್ತಿರುತ್ತದೆ.
ಹತ್ತು ದಿನಗಳ ನೆಲ್ಲಿಕಾರು ಕ್ಯಾಂಪ್
ಎನ್ ಎಸ್ ಎಸ್ ವತಿಯಿಂದ ವರ್ಷಕ್ಕೊಮ್ಮೆ ಹತ್ತು ದಿನಗಳ ಕ್ಯಾಂಪ್ ನಡೆಯುತ್ತಿತ್ತು. ಹತ್ತು ದಿನವೂ ಒಂದು ನಿರ್ದಿಷ್ಟ ಊರಿನ ಶಾಲೆ ಇತ್ಯಾದಿ ಜಾಗದಲ್ಲಿ ವಾಸ್ತವ್ಯ. ಏರುಹಗಲಿನಲ್ಲಿ ಅಗೆಯುವುದು, ಮಣ್ಣು ಹೊರುವುದು ಹೀಗೆ ದೈಹಿಕ ಶ್ರಮದ ಕೆಲಸಗಳು. ಮಧ್ಯಾಹ್ನ ಸ್ನಾನ, ಭೋಜನ, ವಿಶ್ರಾಂತಿ. ಸಂಜೆಯ ಬಳಿಕ ಏಕಾಂಕ, ಹಾಡು, ನಾಟಕ, ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳು. ಕಾಲೇಜು, ಮನೆಯ ಏಕತಾನತೆಯ ಪರಿಸರದಿಂದ ದೂರವಾಗಿ, ಹೊಸ ವಾತಾವರಣದಲ್ಲಿ ಗೆಳೆಯರೊಂದಿಗೆ ವಾಸ್ತವ್ಯ, ಹರಟೆ, ಜೋಕು, ನಗು ಹೀಗೆ ಮುದನೀಡುವ ಪರಿಸರ. ಹೊರ ಜಗತ್ತಿನ ಪರಿವೆಯೇ ಇಲ್ಲ. ಹತ್ತು ದಿನಗಳ ಕ್ಯಾಂಪ್ ಎನ್ ಎಸ್ ಎಸ್ ವಿದ್ಯಾರ್ಥಿಗಳು ಎಂದೂ ಮರೆಯಲಾರರು.
ನಾನು ದ್ವಿತೀಯ ಬಿ ಎಸ್ ಸಿ ಯಲ್ಲಿ ಓದುತ್ತಿದ್ದಾಗ ನೆಲ್ಲಿಕಾರ್ ನಲ್ಲಿ ಕ್ಯಾಂಪ್ ನಡೆಸುವುದು ಎಂದು ತೀರ್ಮಾನಿಸಲಾಯಿತು. ಮೋಹನ್ ಕಾಮತ್ ಮತ್ತು ರಾಮಚಂದ್ರ ಭಟ್ಟರು ಒಂದು ದಿನ ನಮ್ಮಲ್ಲಿ ಕೆಲವರನ್ನು ಕರೆದು, ʼನಾಳೆ ನೆಲ್ಲಿಕಾರ್ ಗೆ ಹೋಗಿ ಶಿಬಿರ ಸ್ಥಳವನ್ನು ನೋಡಿಕೊಂಡು ಬರೋಣʼ ಎಂದರು. ಮಾರನೇ ದಿನ, ಅಂದರೆ ಸೆಪ್ಟೆಂಬರ್ 21, 1980 ರಂದು ನಾವು ಸುಮಾರು ಹತ್ತು ಮಂದಿ ಮತ್ತು ಅಧ್ಯಾಪಕರು ಅಲ್ಲಿಗೆ ಹೋದೆವು. ಸುಮಾರು ಐದು ಮಂದಿ ಹುಡುಗರು ಮತ್ತು ಅಷ್ಟೇ ಸಂಖ್ಯೆಯ ಹುಡುಗಿಯರೂ ಅಲ್ಲಿದ್ದರು.
ನಮ್ಮ ತಂಡದಲ್ಲಿ ಗಣಿತ ಲೆಕ್ಚರರ್ ಪದ್ಮನಾಭ ಗೌಡರ ತಂಗಿ ಗುಲಾಬಿ ಬಿ ಎಸ್ ಕೂಡಾ ಇದ್ದರು. ನನಗೆ ಅವರಲ್ಲಿ ಮಾತನಾಡುವ ತವಕ. ಇದಕ್ಕೆ ಕಾರಣ ಆಕೆ ಮೊದಲನೆಯದಾಗಿ ನಮ್ಮದೇ ಸಮುದಾಯಕ್ಕೆ ಸೇರಿದವರಾದುದು ಮತ್ತು ಎರಡನೆಯ ಕಾರಣ, ನಮ್ಮ ಮೂಲ ಊರಿಗೆ ಅಂದರೆ ಸುಳ್ಯ ಭಾಗಕ್ಕೆ ಹತ್ತಿರದವರೇ ಅಗಿದ್ದುದು. ಕಾರ್ಕಳದಲ್ಲಿ ನಮ್ಮ ಸಮುದಾಯದವರಾಗಲೀ, ನಮ್ಮ ಊರಿನವರಾಗಲೀ ಮನೆ ಮಾಡಿ ಇದ್ದುದು ಕಡಿಮೆ. ಹಾಗಾಗಿ ಊರವರು ಸಿಕ್ಕರೆ ಏನೋ ಖುಷಿ. ಆದರೆ ಗುಲಾಬಿ ಯಾರಿಗೂ ಹತ್ತಿರವಾಗುತ್ತಿರಲಿಲ್ಲ, ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಹಳ್ಳಿ ಮೂಲದ ಹುಡುಗಿಯಾಗಿದ್ದುದು ಒಂದು ಕಾರಣವಿರಬಹುದು, ಇನ್ನೊಂದು ಕಾರಣ ತನ್ನ ಅಣ್ಣ ಅಲ್ಲೇ ಉಪನ್ಯಾಸಕನಾಗಿದ್ದುದು ಇರಬಹುದು.
ನೆಲ್ಲಿಕಾರು ಕ್ಯಾಂಪ್ ಸ್ಥಳ ನೋಡಲು ಹೋದವರು ಒಂದು ಎತ್ತರದ ಜಾಗದಲ್ಲಿ ಕುಳಿತಿದ್ದಾಗ ನಾನು ಗುಲಾಬಿಯವರನ್ನು ಮಾತಿಗೆಳೆಯಲು ಯತ್ನಿಸಿದೆ. ʼನಿಮ್ಮ ಊರಿನಲ್ಲಿ ಇರುವುದೆಲ್ಲ ಕೆಂಪು ಬಸ್ ಅಲ್ಲವೇ, ನಾನೂ ಆ ಊರಿನವನೇ, ಜಾಲ್ಸೂರಿನ ಪಕ್ಕದ ಊರುʼ ಎಂದೆ. ಹೌದಾ, ಹಾಂ, ಇತ್ಯಾದಿಯ ಆಚೆಗೆ ಮಾತು ಬೆಳೆಯಲಿಲ್ಲ. ಮುಂದೆ ಕಾಲೇಜು ಪರಿಸರದಲ್ಲಿ ಸಿಕ್ಕಾಗಲೂ ಅವರು ಎಲ್ಲರೊಂದಿಗೂ ಮಾತನಾಡುತ್ತಿದ್ದುದು ಇಷ್ಟೇ.
ನೆಲ್ಲಿಕಾರು ಕ್ಯಾಂಪ್ ಗೆ ತೆರಳುವ ದಿನ ಬಂತು. ನಾನಂತೂ ಹೀಗೆ ಮನೆಯಿಂದ ದೂರ ಹೋಗಿ ವಾಸ್ತವ್ಯ ಹೂಡುತ್ತಿದ್ದುದು ಮೊದಲ ಬಾರಿ. ಹಾಗಾಗಿ ಸರಿಯಾದ ಬ್ಯಾಗ್ ಅದರೂ ಇದೆಯೇ? ಏನೋ ಸಣ್ಣದೊಂದು ಬ್ಯಾಗ್ ಗೆ ಕೆಲವು ಬಟ್ಟೆ ಬರೆ ತುಂಬಿಕೊಂಡು ಶಿಬಿರಾಧಿಕಾರಿಗಳ ಆದೇಶದ ಮೇರೆಗೆ ನಾವು ಕೆಲವರು ಶಿಬಿರದ ಮುನ್ನಾ ದಿನವೇ, ಅಂದರೆ ಅಕ್ಟೋಬರ್ 16, 1980 ರಂದು ಅಲ್ಲಿಗೆ ಹೋಗಿ ವಾಸ್ತವ್ಯ ಹೂಡಿದೆವು. ಮಾರನೇ ದಿನ ನಲವತ್ತೈವತ್ತು ವಿದ್ಯಾರ್ಥಿಗಳು ಬರುವಾಗ ಅವರನ್ನು ಸ್ವಾಗತಿಸಿ, ಉಳಿದುಕೊಳ್ಳುವ ಜಾಗ ಇತ್ಯಾದಿ ತೋರಿಸುವುದೆಲ್ಲ ನಮ್ಮ ಕೆಲಸ.
ಮಾರನೇ ದಿನ ವಿಶೇಷ ಬಸ್ ನಲ್ಲಿ ಎಲ್ಲಾ ಎನ್ ಎಸ್ ಎಸ್ ವಿದ್ಯಾರ್ಥಿಗಳು ಬಂದರು. ಅವರನ್ನು ಸ್ವಾಗತಿಸಲಾಯಿತು. ಆದಿನ ವಿಶೇಷ ಕಾರ್ಯಕ್ರಮಗಳಿರಲಿಲ್ಲ. ಶಿಬಿರಾಧಿಕಾರಿ ಮೋಹನ್ ಕಾಮತ್ ಮತ್ತು ರಾಮಚಂದ್ರ ಭಟ್ಟರು ಶಿಬಿರಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ನಾವು ಉಳಿದುಕೊಂಡಿದ್ದ ಶಾಲೆಯಲ್ಲಿ ಶೌಚ ಸೌಲಭ್ಯಗಳು ಇರಲಿಲ್ಲ. ಹೆಣ್ಣುಮಕ್ಕಳಿಗೆ ಪಕ್ಕದ ಮನೆಯೊಂದರಲ್ಲಿ ಮಾತನಾಡಿ ಶೌಚ ಸೌಲಭ್ಯ ಮಾಡಿಕೊಡಲಾಗಿತ್ತು. ನಾವೆಲ್ಲರೂ ಬಹಿರ್ದೆಶೆಗೆ ಬಯಲಿಗೇ ಹೋಗಬೇಕು. ನಮ್ಮ ಶಿಬಿರಾಧಿಕಾರಿಗಳಿಗೂ ಬಯಲೇ ಗತಿ. ಒಮ್ಮೆ ಒಂದು ಸ್ವಾರಸ್ಯಕರ ಪ್ರಸಂಗ ನಡೆಯಿತು. ನಮ್ಮ ಒಬ್ಬರು ಶಿಬಿರಾಧಿಕಾರಿ ಹೀಗೆ ಬೆಳಗಿನ ಹೊತ್ತು ಚೊಂಬು ಪಕ್ಕದಲ್ಲಿ ಇರಿಸಿಕೊಂಡು ಪೊದೆಯ ಬಳಿ ಕುಳಿತಿದ್ದರು. ಯಾರಿಗೆ ಎಲ್ಲಿ ಅಭಿವಾದನೆ ಹೇಳಬೇಕು ಎಂಬ ಕಾಮನ್ ಸೆನ್ಸ್ ಇಲ್ಲದ ನಮ್ಮಲ್ಲೊಬ್ಬ ಅವರನ್ನು ನೋಡಿದ್ದೇ ʼಗುಡ್ ಮಾರ್ನಿಂಗ್ ಸಾರ್..ʼ ಎಂದು ಬಿಟ್ಟ. ಶಿಬಿರಾಧಿಕಾರಿಗೆ ಏನು ಹೇಳುವುದು ತೋಚದೆ ʼಹೂಂ ಹೂಂ..ʼ ಎಂದು ಬಿಟ್ಟರು. ನೋಡಿದ ನಾವು ಪೇಚಿಗೆ ಸಿಕ್ಕೆವು, ನಗುವಂತೆಯೂ ಇಲ್ಲ.
ಮಾರನೇ ದಿನದಿಂದ ನಮ್ಮ ಎನ್ ಎಸ್ ಚಟುವಟಿಕೆಗಳು ತೀವ್ರ ಗತಿಯಲ್ಲಿ ಸಾಗಿದವು. ಬೆಳಗ್ಗೆ ದೈಹಿಕ ಶ್ರಮದ ಕೆಲಸ, ಮಧ್ಯಾಹ್ನ ʼಯಾದೇವಿ ಸರ್ವಭೂತೇಶು.. ನಮಸ್ತಸ್ಯೇ ನಮಸ್ತಸ್ಯೇ ನಮೋ ನಮಃ, ಓಂ ಸಹನಾವವತು, ಸಹನೌಭುನಕ್ತು ಸಹ ವೀರ್ಯಂಕರವಾವಹೈ.ʼ ಇತ್ಯಾದಿ ಮಂತ್ರಗಳ ಸಾಮೂಹಿಕ ಪಠಣದ ಬಳಿಕ ಊಟ. ಆ ಬಳಿಕ ವಿಶ್ರಾಂತಿ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಹೊರಗಿನಿಂದ ಒಂದೊಂದು ದಿನ ಒಬ್ಬೊಬ್ಬರು ಅಧ್ಯಾಪಕರಂತೆ ಶಿಬಿರಕ್ಕೆ ಕೆಲವರ ಆಗಮನ, ನಮ್ಮೊಂದಿಗೆ ಮಾತುಕತೆ, ಹೀಗೆ ಮನಸನ್ನು ಅರಳಿಸುವ ಮನಸನ್ನು ಹರ್ಷಗೊಳಿಸುವ ಚಟುವಟಿಕೆಗಳು. ಕೊನೆಯ ದಿನ ಪ್ರತಿಯೊಬ್ಬರೂ ʼನನ್ನ ಆದರ್ಶದ ವ್ಯಕ್ತಿ, ಮತ್ತು ನನ್ನ ಮೆಚ್ಚಿನ ವ್ಯಕ್ತಿʼ ಯಾರು ಎಂದು ಸಭೆಯಲ್ಲಿ ಹೇಳಬೇಕು. ಇಲ್ಲಿ ಅನೇಕರು ನನ್ನ ಹೆಸರು ಹೇಳಿಬಿಟ್ಟರು. ಕಾಮರ್ಸ್ ವಿಭಾಗದ ಪದ್ಮಜಾ ಒಂದು ಹೆಜ್ಜೆ ಮುಂದೆ ಹೋಗಿ, ʼನನ್ನ ಮೆಚ್ಚಿನ ವ್ಯಕ್ತಿ ಶ್ರೀನಿವಾಸ್ʼ ಎಂದಾಗ ನನಗೆ ಒಳಗೊಳಗೇ ಖುಷಿ, ಹೊರಗಡೆ ಒಂದು ತರಹ ಇರಿಸುಮುರಿಸು.
ಯಾಕೆ ಗೊತ್ತಿಲ್ಲ, ನನ್ನಲ್ಲಿ ಅಂತಹ ವಿಶೇಷ ಪ್ರತಿಭೆಯೇನೂ ಇರಲಿಲ್ಲ, ಆದರೆ ನಾನು ಶಿಬಿರದಲ್ಲಿ ಬಹಳ ಜನಪ್ರಿಯ ವ್ಯಕ್ತಿ ಆಗಿಬಿಟ್ಟೆ. ಅನೇಕರು ನನ್ನ ಸ್ನೇಹ ವಲಯಕ್ಕೆ ಬಂದುಬಿಟ್ಟರು. ಇದರ ಪ್ರಭಾವ ಮುಂದೆ ಕಾಲೇಜಿಗೆ ಮರಳಿದ ಬಳಿಕವೂ ಮುಂದುವರಿಯಿತು.
ಅಂತೂ ಇಂತೂ ಹತ್ತು ದಿನಗಳ ವಿಶೇಷ ಅನುಭವ, ಅನೇಕ ಹೊಸಬರ ಪರಿಚಯ, ಗೆಳೆತನ, ಅದಾಗಲೇ ಗೆಳೆಯರಾಗಿದ್ದವರ ಗಾಢಗೊಂಡ ಗೆಳೆತನ ಹೀಗೆ ಶಿಬಿರ ಮುಗಿಯಿತು. ಅಕ್ಟೋಬರ್ 26, 1980 ರಂದು ನೆಲ್ಲಿಕಾರಿಗೆ ವಿದಾಯ ಹೇಳಿ ಕಾರ್ಕಳದತ್ತ ಪಯಣದ ಸಿದ್ಧತೆ ಆರಂಭವಾದಾಗ ಮನಸು ಭಾರವಾಗಿತ್ತು. ಶಿಬಿರ ಸಮಯದಲ್ಲಿ ನನ್ನ ಜನಪ್ರಿಯತೆಯ ಕಾರಣವೋ, ತಪ್ಪು ತಿಳಿವಳಿಕೆಯೋ ಅಥವಾ ಬೇರೆ ಕಾರಣವೋ ಗೊತ್ತಿಲ್ಲ, ನನ್ನೊಂದಿಗೆ ಶಿಬಿರಾಧಿಕಾರಿ ಮೋಹನ ಕಾಮತರ ವರ್ತನೆ ನಕಾರಾತ್ಮಕ ದಿಕ್ಕಿನಲ್ಲಿ ಬದಲಾಗಿತ್ತು. ಅದೊಂದು ಕಹಿ ಅನುಭವ.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು
ಇದನ್ನೂ ಓದಿ- https://kannadaplanet.com/its-a-big-story-autobiography-series-22/ ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ 22 – ಸಾಂತ್ ಮಾರಿಯಲ್ಲಿ ನಮ್ಮ ಸಂತೆ ವ್ಯಾಪಾರ


