ದಾಸಿ ಜಾಬಾಲಿಯ ಮಗ ತಂದೆ ಯಾರೆಂದು ತಾಯಿಗೂ ಗೊತ್ತಿಲ್ಲದ ಸತ್ಯಕಾಮನನ್ನು ಶಿಷ್ಯನಾಗಿ ಸ್ವೀಕರಿಸಿದ ಗೌತಮ, ಮುಸಲ್ಮಾನ ಶರೀಫನಿಗೆ ತನ್ನ ಪ್ರೀತಿ ಮತ್ತು ಆಧ್ಯಾತ್ಮ ಜ್ಞಾನವನ್ನು ಜಾತಿ ಧರ್ಮ ನೋಡದೆ ಧಾರೆಯೆರೆದ ಗೋವಿಂದ ಗುರುಗಳು, ಸಮುದಾಯ ಮತ್ತು ಸಮಾಜವನ್ನು ಎದುರು ಹಾಕಿಕೊಂಡು ಅವಮಾನ, ನೋವುಂಡರೂ ಕೂಡ ಹಿಂಜರಿಯದೇ ತುಳಿತಕ್ಕೊಳಗಾದವರ ಸೇವೆಗಿಳಿದ ಕುದ್ಮುಲ್ ರಂಗರಾಯರು ಇಂತಹ ಮಹನೀಯರುಗಳನ್ನ ಬ್ರಾಹ್ಮಣತೆಯ ಯೋಗ್ಯತೆಯನ್ನು ಎತ್ತರಿಸಿದವರೆನ್ನಬಹುದೇ ವಿನಃ ಜಾತಿ ಶ್ರೇಷ್ಠತೆಯ ಸಿಂಬಳಕ್ಕೆ ಸಿಲುಕಿದ ನೊಣದಂತವರನ್ನಲ್ಲ – ಶಂಕರ್ ಸೂರ್ನಳ್ಳಿ, ಲೇಖಕರು.
ನಾವೀಗ ಅಂದಾಜು, ಕಲ್ಪನೆಗಳ ಕತೆ ಕಟ್ಟುವ ಕಾಲದಿಂದ ಹಿಂದೆ ಸರಿದು ಯಾವುದೇ ವಿಚಾರಗಳನ್ನು ಸ್ಪಷ್ಟ ವೈಜ್ಞಾನಿಕ ಚಿಂತನೆಗಳ ಮೂಲಕ ನೋಡುವಂತಹ ಕಾಲಘಟ್ಟದಲ್ಲಿದ್ದು ದಿನೇ ದಿನೇ ಬದಲಾಗುತ್ತ ಸಾಗುತ್ತಿದ್ದೇವೆ.
ಹಿಂದೆ, ಮಾವಿನ ಗೊರಟಿನೊಳಗೆ ಹುಳುವಾಗುವುದು ಹೇಗೆ ಸಾಧ್ಯ !? ಅದು ದೇವರ ಚಮತ್ಕಾರ ಎಂಬ ಮಾತಿತ್ತು. ಆದರೀಗ ಅದು ಚಮತ್ಕಾರವಲ್ಲ ಹೂವಿರುವಾಗ ಅಥವಾ ಅತೀ ಚಿಕ್ಕ ಎಳೆ ಮಿಡಿ ಇರುವಾಗಲೇ ಕೀಟ ಅದರೊಳಗೆ ತನ್ನ ವಿಶೇಷ ಅಂಗ (Ovipositor)ದಿಂದ ಚುಚ್ಚಿ ಮೊಟ್ಟೆಯಿಡುವ ಕಾರಣಕ್ಕೆ ಈ ಪ್ರಾಕೃತಿಕ ಚೋದ್ಯ ಸಂಭವಿಸುವುದೆಂಬುದು ಬಯಲಾಗಿದೆ. ಅಂದಿನ ಆಗಸದಲ್ಲಿನ ಮೋಡಗಳು ಬಸ್ಸು ಲಾರಿಗಳಂತೆ ಒಂದಕ್ಕೊಂದು ಡಿಕ್ಕಿಯಾಗುವ ಕಾರಣಕ್ಕೆ ಮಿಂಚು ಗುಡುಗುಗಳು ಸೃಷ್ಟಿಯಾಗುತ್ತವೆ ಎಂಬುದರ ಬದಲಿಗೆ ಮೋಡಗಳಲ್ಲಿ ಸಂಚಯವಾಗುವ ವಿದ್ಯುದಾವೇಶ ಕಣಗಳ ಕಾರಣಕ್ಕೆ ಗುಡುಗು ಮಿಂಚುಗಳುಂಟಾಗುತ್ತವೆ ಎಂಬ ಉತ್ತರ ದೊರತಿದೆ. ಆಕಾಶದಿಂದ ಆಗಾಗ ನಕ್ಷತ್ರಗಳು ಜಾರಿ ಬೀಳುತ್ತಿರುತ್ತವೆ ಎಂಬ ಕಲ್ಪನೆ (ಹಿಂದಿಯಲ್ಲಿ ಉಲ್ಕೆಗಳಿಗೆ ’ಟೂಟಾ ಹುವಾ ತಾರಾ” ಎಂದೇ ಕರೆಯಲಾಗುತ್ತದೆ) ಯ ಬದಲಾಗಿ ಅವು ನಕ್ಷತ್ರಗಳಲ್ಲ ಅದರಂತೆ ಭ್ರಮೆ ಹುಟ್ಟಿಸುವ ಉಲ್ಕೆಗಳು ಭೂ ವಾತಾವರಣಕ್ಕೆ ಸಿಲುಕಿ ಉರಿದು ಬೀಳುವ ಪ್ರಕ್ರಿಯೆ ಎಂಬುದು ಇವತ್ತಿನ ಅರಿವು.
ಅದೇ ರೀತಿ ಅಂದು ಒಗಟಾಗಿದ್ದ ಗ್ರಹಣಗಳು, ಸೂರ್ಯೋದಯ ಸೂರ್ಯಾಸ್ತದ ವಾಸ್ತವಿಕ ಚಿತ್ರಣ ಇಂದು ಎಳೆಯ ಮಕ್ಕಳಿಗೂ ಗೊತ್ತು. ಹಿಂದೆ ಅಕ್ರಮವಾಗಿ ಸಂಬಂಧ ಬೆಳೆಸಿ ಮಗು ನೀಡಿದಾತ ಸುಲಭದಲ್ಲಿ ನಾನಲ್ಲ ಎಂದು ತಪ್ಪಿಸಿ ಕೊಳ್ಳುವ ಕಾಲಘಟ್ಟವಿತ್ತು. ಆದರೀಗ ಡಿ ಎನ್ ಎ ಪರೀಕ್ಷೆ ವಿಧಾನಗಳೆಲ್ಲ ಬಂದ ಬಳಿಕ ಯಾರಿಗೂ ಸಹ ನುಸುಳಿ ಬಚಾವಾಗುವ ದಾರಿಯೂ ಉಳಿದಿಲ್ಲ.
ಅದೇ ರೀತಿ ಪ್ರಳಯ ಕಾಲದಲ್ಲಿ ಭೂಮಿ ಜಲಾವೃತಗೊಂಡಾಗ ಎಲ್ಲ ಬಗೆಯ ಜೀವ ಪ್ರಭೇದಗಳ ಜೋಡಿಗಳನ್ನು ಹಡಗೊಂದರಲ್ಲಿ (Ark of Noah) ತುಂಬಿಸಿ ರಕ್ಷಿಸಲಾದ ಜೀವ ಸಂಕುಲವೇ ಇಂದಿನದ್ದು ಎಂಬಂತಹ ಧರ್ಮಗಳು ಇರುವಂತೆ ಪ್ರಾಣಿಗಳು ಅದರಲ್ಲೂ ಮನುಷ್ಯನನ್ನು ಉದ್ದೇಶ ಪೂರ್ವಕವಾಗಿ ದೇವರು ’ಚಾತುರ್ವರ್ಣ್ಯಂ ಮಯಂ ಸೃಷ್ಟ್ಯಾ ಗುಣ ಕರ್ಮ ವಿಭಾಗಶಃ” ಎನ್ನುತ್ತಾ ಅವರವರ ಕರ್ಮಾನುಸಾರ ಭೇದಗಳನ್ನು ಮಾಡಿ ಕೆಲವರನ್ನು ತಲೆಯಿಂದ, ಕೆಲವರನ್ನು ಭುಜದಿಂದ, ಮತ್ಯಾರನ್ನೋ ಪಾದದಿಂದ ಹುಟ್ಟಿಸಿದ ಕಥೆಗೆ ಭಿನ್ನವಾಗಿ ಇಂದಿನ ಮಾನವನೆನ್ನುವುದು ಎಲ್ಲ ಪ್ರಾಣಿ ಪ್ರಭೇದ ಸಸ್ಯ ಪ್ರಭೇದಗಳಂತೆ ಲಕ್ಷಾಂತರ ವರ್ಷದ ವಿಕಾಸವಾದದ ಕೇವಲ ಒಂದು ಮಜಲೆಂಬುದನ್ನು ವಿಜ್ಞಾನ ಸಾಬೀತು ಪಡಿಸುತ್ತಾ ಬಂದಿದೆ. ಅಸ್ತಿತ್ವದಲ್ಲಿರುವ ಮಂಗೋಲಿಯನ್, ಇಥಿಯೋಪಿಯನ್, ಮಲಯನ್ ಮೊದಲಾದ ಮಾನವ ಜನಾಂಗೀಯ ಭೇದಗಳೇನೇ ಇದ್ದರು ಅವೆಲ್ಲವೂ ಮೂಲತಃ ಆಫ್ರಿಕಾದಿಂದ ಟಿಸಿಲೊಡೆದು ಸುದೀರ್ಘ ಕಾಲಾವಧಿಯ ದೈಹಿಕ ಮತ್ತು ಪಾರಿಸರಿಕ ಬದಲಾವಣೆ ಮತ್ತು ಪ್ರಭಾವಕ್ಕೊಳಪಟ್ಟು ವಿವಿಧೆಡೆ ಹಂಚಿಹೋದ ಒಂದೇ ಮೂಲದ ಕವಲುಗಳೆಂಬುದು ಕೂಡ ವೈಜ್ಞಾನಿಕವಾಗಿ ಸಾಬೀತಾಗುತ್ತಲೇ ಇವೆ. ಇಂತಹ ಸತ್ಯಗಳು ಕಣ್ಣೆದುರಿಗೇ ಇದ್ದರೂ ಕೂಡ ಕೆಲವರಿಗೆ ಯಾಕೋ ತಮ್ಮದೇ ಜಿಗುಟುವಾದದ ಮೊಂಡುತನ ಬಿಡಲಾಗದು.

ಇತ್ತೀಚೆಗೆ ಅತಿಯಾದ ಜಾತಿ ಮೇಲರಿಮೆಯುಳ್ಳ ಕರಾವಳಿ ಭಾಗದ ಬ್ರಾಹ್ಮಣ ರಾಜಕಾರಣಿಯೊಬ್ಬರು ಬ್ರಾಹ್ಮಣ ಎನ್ನುವುದು ಜಾತಿಯಲ್ಲ ಅದೊಂದು ಅರ್ಹತೆ. ಬೇಡಿ ಬದುಕುವಂತ ಜನಗಳು ನಾವಲ್ಲವೇ ಅಲ್ಲ ಬದುಕಿನಲ್ಲಿ ನಮಗದು ಗೊತ್ತೇ ಇಲ್ಲ. ಆ ಅಪ್ಪ ಅಮ್ಮನಿಗೆ ಹುಟ್ಟಿದ ಮಾತ್ರಕ್ಕೆ ಅವರನ್ನ ಬ್ರಾಹ್ಮಣ ಅಂತ ಕರೀತಾರೆ ಅಂತಂದುಕೊಂಡರೆ ಅದು ಕೇವಲ ಅವರ ಮೂರ್ಖತನ. ಬ್ರಾಹ್ಮಣ ಎಂಬುದು ಜಾತಿಯಲ್ಲ ಮತ್ತು ಬ್ರಾಹ್ಮಣರು ಜಾತೀಯತೆಯನ್ನು ಮಾಡಲು ಸಾಧ್ಯವೇ ಇಲ್ಲ ಎಂದಿದ್ದರು.
ಮಹನೀಯರು ಇಲ್ಲಿ ಉದುರಿಸಿರುವ ಬ್ರಾಹ್ಮಣ ಎಂಬುದು ಜಾತಿಯಲ್ಲ ಅದೊಂದು ಅರ್ಹತೆ ಎಂಬ ಮಾತು ಮತ್ತದೇ ಶ್ರೇಷ್ಠತೆಯ ಮುಖದಿಂದ, ತೊಡೆಯಿಂದ, ಪಾದದಿಂದ ಹುಟ್ಟಿದವರು ಎಂಬ ಅಸಹಜ ಶ್ರೇಷ್ಠ- ಕನಿಷ್ಠ ಎಂಬ ಭಾವವನ್ನೇ ಎತ್ತಿ ತೋರುತ್ತದೆಯೇ ಹೊರತು ಬೇರೇನಲ್ಲ.
ನೋಹಾನ ಬೋಟ್ (Ark of Noah) ಇರಲಿ ತಲೆ, ತೋಳು, ಪಾದದಿಂದಾದ ಮಾನವ ಹುಟ್ಟೇ ಆಗಿರಲಿ ಜಿಗುಟುತನವಿರದ ಬಹುತೇಕರಿಗೆ ಪ್ರಕೃತಿ ಸಹಜ ಜೀವಿಗಳ ಅಥವಾ ಮಾನವ ಹುಟ್ಟಿನ ಮತ್ತು ವಿಕಾಸದ ಅರಿವಿದ್ದೇ ಇರುತ್ತದೆ. ಜ್ವರ ಅಥವಾ ರೋಗ ಬಂದರೆ ತಲೆಯಿಂದ ಹುಟ್ಟಿದವನಿಗೆ ಕೊಡುವ ಮದ್ದೇ ಪಾದದಿಂದ ಹುಟ್ಟಿದವನಿಗೂ ಕೂಡ ನೀಡುವುದು. ಆತ ತಿನ್ನುವುದನ್ನೇ ಈತನು ಸಹ ತಿನ್ನುವುದು ಮತ್ತು ಕುಡಿಯುವುದು ಬದಲಿಗೆ ತಲೆ ಹುಟ್ಟಿನವ ಕುಡಿಯೋ ನೀರು ಸ್ವರ್ಗದ್ದೇನೂ ಆಗಿರದು ತಾನೇ.? ಪಾದದವನಿಗಿರುವ ಎರಡು ಕಾಲೇ ತಲೆಯವನಿಗೂ ಇರೋದು. ವಿಶೇಷವಾಗಿ ಮೂರು ನಾಲ್ಕು ಹತ್ತು ಯಾವತ್ತೂ ಇರದು.
ಇವೆಲ್ಲ ಗೊತ್ತಿದ್ದೂ ಸಹ ತಮ್ಮ ಜಾತಿ ಶ್ರೇಷ್ಠತೆಯ ಗುಂಗಿನಿಂದ ಹೊರಬರಲಾರದೆ ಚಡಪಡಿಸುವ ಇಂತಹ ವ್ಯಕ್ತಿಗಳು ಜಗತ್ತಿನ ಸರ್ವ ಮಾನವ ಪ್ರಭೇದಗಳಲ್ಲಿ ಮತ್ತು ಸ್ವಾರ್ಥಕ್ಕಾಗಿ ಇವರು ಹುಟ್ಟು ಹಾಕಿದ ಜಾತಿ ವರ್ಗಗಳಲ್ಲಿ ಒಟ್ಟಾರೆಯಾಗಿ ಹಂಚಿಹೋಗಿರುವ ರಕ್ತ ಗುಂಪುಗಳ ಅವಶ್ಯಕತೆ ಬಿದ್ದಾಗ ತಮ್ಮ ಪಾರಂಪರಿಕ ನಂಬಿಕೆಗಳ ಬಗ್ಗೆ ಅರ್ಹತೆಯೆಂಬ ’ಕೊಂಬಿ”ನ ಬಗ್ಗೆ ಜಾಣ ಮರೆವು ತೋರಿ ವೈಜ್ಞಾನಿಕ ಸಿದ್ಧಾಂತಕ್ಕೆ ಮೊರೆ ಹೋಗುವುದು ವಿಶೇಷ.
ಹೌದು, ಬ್ರಾಹ್ಮಣ್ಯವನ್ನು ಅಷ್ಟಾಗಿ ಹಚ್ಚಿಕೊಳ್ಳದ, ಶಾಸ್ತ್ರಗಳು ಸಾರುವ ಭೇದವನ್ನು ದೂರವಿಟ್ಟಿರುವ ಎಲ್ಲರಿಗೂ ಲೇಸ ಬಯಸುತ್ತಿದ್ದ ಮಹಾ ಬ್ರಾಹ್ಮಣರು ಸದಾ ಕಾಲದಲ್ಲೂ ಇದ್ದರು, ಇವತ್ತಿಗೂ ಕೂಡ ಇದ್ದಾರೆ, ಮುಂದೆಯೂ ಸಹ ಇದ್ದೇ ಇರುತ್ತಾರೆ. ಅವರೆಲ್ಲರು ಸದಾ ಕಾಲಕ್ಕೂ ಪ್ರಾತಃ ಸ್ಮರಣೀಯರು .
ಸ್ವತಃ ಬ್ರಾಹ್ಮಣನಾಗಿ ತಾನು ತನ್ನವರೆನ್ನದೆ ಕುರುಬರ ಕನಕನನ್ನು ಮತ್ತು ಆತನ ನಿಷ್ಕಲ್ಮಶ ಭಕ್ತಿಯನ್ನು ಲೋಕಕ್ಕೆ ತೋರಿಸಿದ್ದು ವ್ಯಾಸತೀರ್ಥರು (ಬಾಳೆ ಹಣ್ಣು ಪ್ರಕರಣ). ದಾಸಿ ಜಾಬಾಲಿಯ ಮಗ ತಂದೆ ಯಾರೆಂದು ತಾಯಿಗೂ ಗೊತ್ತಿಲ್ಲದ ಸತ್ಯಕಾಮನನ್ನು ಶಿಷ್ಯನಾಗಿ ಸ್ವೀಕರಿಸಿದ ಗೌತಮ, ಮುಸಲ್ಮಾನ ಶರೀಫನಿಗೆ ತನ್ನ ಪ್ರೀತಿ ಮತ್ತು ಆಧ್ಯಾತ್ಮ ಜ್ಞಾನವನ್ನು ಜಾತಿ ಧರ್ಮ ನೋಡದೆ ಧಾರೆಯೆರೆದ ಗೋವಿಂದ ಗುರುಗಳು, ಸಮುದಾಯ ಮತ್ತು ಸಮಾಜವನ್ನು ಎದುರು ಹಾಕಿಕೊಂಡು ಅವಮಾನ, ನೋವುಂಡರೂ ಕೂಡ ಹಿಂಜರಿಯದೇ ತುಳಿತಕ್ಕೊಳಗಾದವರ ಸೇವೆಗಿಳಿದ ಕುದ್ಮುಲ್ ರಂಗರಾಯರು ಇಂತಹ ಮಹನೀಯರುಗಳನ್ನ ಬ್ರಾಹ್ಮಣತೆಯ ಯೋಗ್ಯತೆಯನ್ನು ಎತ್ತರಿಸಿದವರು ಎನ್ನಬಹುದೇ ವಿನಃ ಜಾತಿ ಶ್ರೇಷ್ಠತೆಯ ಸಿಂಬಳಕ್ಕೆ ಸಿಲುಕಿದ ನೊಣದಂತವರನ್ನಲ್ಲ .
ಶಂಕರ್ ಸೂರ್ನಳ್ಳಿ
ಲೇಖಕರು
ಇದನ್ನೂ ಓದಿ- ಅಗೋಚರ ನಿರುದ್ಯೋಗ


