ಲೀಲಾವತಿಯವರು ಜಿಲ್ಲೆಯ ಏಕೈಕ ಮಹಿಳಾ ಪತ್ರಿಕೋದ್ಯಮಿಯಾಗಿ ಬೆಳೆದ ದಿಟ್ಟೆ! ಸದಾ ನೇರ ನಿಷ್ಠುರ ನಡೆ, ನುಡಿ! ಬದುಕಿನ 50ಕ್ಕೂ ಹೆಚ್ಚು ವರ್ಷಗಳನ್ನು ಪತ್ರಿಕೋದ್ಯಮದಲ್ಲೇ ಕಳೆದು ಸುದೀರ್ಘವಾಗಿ ಜನರ ಮತ್ತು ಓದುಗರ ವಿಶ್ವಾಸಾರ್ಹತೆ ಕಾಪಾಡಿಕೊಂಡಿದ್ದು ಇವರ ವಿರಳವಾದ ವ್ಯಕ್ತಿತ್ವಕ್ಕೊಂದು ಸಾಕ್ಷಿ – ಡಾ.ಶಾಂತ ಅತ್ನಿ, ಹಾಸನ.
ಪತ್ರಿಕೋದ್ಯಮ ಪ್ರವೇಶಿಸುವುದು ಹೆಣ್ಣುಮಕ್ಕಳಿಗೆ ಯಾವತ್ತಿಗೂ ಅಷ್ಟೇನೂ ಸುಲಭವಾದ ಕೆಲಸವಲ್ಲ. ಪತ್ರಿಕೆಯೊಂದು ದಿನ ಬೆಳಗಾಗುವುದರೊಳಗೆ ಅಚ್ಚಾಗಿ, ಅಚ್ಚುಕಟ್ಟಾಗಿ ಹೊರಬಂದು ಜನರ ಕೈ ಸೇರುವ ಮೊದಲು ಅದಕ್ಕಾಗಿ ಎಷ್ಟೊಂದು ಶ್ರಮ ವಹಿಸಬೇಕಾಗುತ್ತದೆ, ಎಷ್ಟೊಂದು ಸಂಕಷ್ಟಗಳು ಎದುರಾಗುತ್ತವೆ. ನಿದ್ರೆ ಇರದ ರಾತ್ರಿಗಳು, ವಿಶ್ರಾಂತಿ ಇರದ ಹಗಲುಗಳು, ಮಾಹಿತಿ ಮತ್ತು ಸಂಪನ್ಮೂಲ ಸಂಗ್ರಹಣೆಯ ತಲೆಬಿಸಿಗಳು… ಅವರನ್ನು ಹೇಗೆ ಪರಿತಪಿಸುವಂತೆ ಮಾಡುತ್ತದೆ ಎಂಬುದು ಅವರಿಗಷ್ಟೇ ಗೊತ್ತು. ಅಂತಹ ಸವಾಲಿನ ವೃತ್ತಿ ಬದುಕಿನಲ್ಲಿ ತಮ್ಮ ಸಾಮರ್ಥ್ಯ ನಿರೂಪಿಸಲು ಸಾಕಷ್ಟು ಹೋರಾಟ ಮಾಡಿದವರ ಪಟ್ಟಿಯಲ್ಲಿ ಲೀಲಾವತಿಯವರದ್ದು ಪ್ರಮುಖ ಹೆಸರು. ಅವರು ಜಿಲ್ಲೆಯ ಏಕೈಕ ಮಹಿಳಾ ಪತ್ರಿಕೋದ್ಯಮಿಯಾಗಿ ಬೆಳೆದ ದಿಟ್ಟೆ! ಸದಾ ನೇರ ನಿಷ್ಠುರ ನಡೆ, ನುಡಿ! ಬದುಕಿನ 50ಕ್ಕೂ ಹೆಚ್ಚು ವರ್ಷಗಳನ್ನು ಪತ್ರಿಕೋದ್ಯಮದಲ್ಲೇ ಕಳೆದು ಸುದೀರ್ಘವಾಗಿ ಜನರ ಮತ್ತು ಓದುಗರ ವಿಶ್ವಾಸಾರ್ಹತೆ ಕಾಪಾಡಿಕೊಂಡಿದ್ದು ಇವರ ವಿರಳವಾದ ವ್ಯಕ್ತಿತ್ವಕ್ಕೊಂದು ಸಾಕ್ಷಿ.
ಸುಮಾರು 21 ವರ್ಷಗಳಿಂದ ತಮ್ಮ ಹಾಸನವಾಣಿ ದೈನಂದಿನ ಪತ್ರಿಕೆಯನ್ನು ಲೀಲಾಜಾಲವಾಗಿ ನಡೆಸಿಕೊಂಡು ಬರುತ್ತಿರುವ ಅವರು, ಅನೇಕ ಕಷ್ಟ ಕೋಟಲೆಗಳನ್ನು ಎದುರಿಸಿ, ಅದನ್ನು ಮೆಟ್ಟಿ ನಿಂತವರು. ಪತ್ರಕರ್ತೆ, ಮುದ್ರಕಿ, ಪ್ರಕಾಶಕಿ, ಮಾಲೀಕಳು, ಸಮಾಜ ಸೇವಕಿ, ಚಿಂತಕಿ ಎಲ್ಲದಕ್ಕಿಂತ ಮುಖ್ಯವಾಗಿ ಸ್ನೇಹಜೀವಿ ಆಗಿದ್ದಾರೆ. ಅಷ್ಟೇ ಅಲ್ಲದೆ ಅವರು 70ರ ದಶಕದ ಆ ಕಾಲಘಟ್ಟದಲ್ಲಿಯೇ ಸ್ನಾತಕೋತ್ತರ ಎಂಎ ಪದವಿಯ ಜೊತೆಗೆ, ಎಲ್‍ಎಲ್‍ಬಿ ಕಲಿಯುತ್ತಿರುವಾಗಲೇ ಪತ್ರಿಕೋದ್ಯಮದಲ್ಲಿ ಆಸಕ್ತಿ ಬೆಳೆದು, ಜನಮಿತ್ರ ದೈನಿಕ ಪತ್ರಿಕೆಗೆ ಉಪ ಸಂಪಾದಕಿಯಾಗಿ ಸೇರಿದ್ದರು. ಜನತಾಮಾಧ್ಯಮ, ಹಾಸನಪ್ರಭ ಪತ್ರಿಕೆಗಳಲ್ಲಿ ಹವ್ಯಾಸಿ ಪತ್ರಕರ್ತೆಯಾಗಿ, ಕೆಲಸ ನಿರ್ವಹಿಸಿದ್ದರು. ಮುಂದೆ ಕನ್ನಡಪ್ರಭ ಪತ್ರಿಕೆಯಲ್ಲಿ ಹಾಸನ ಜಿಲ್ಲಾ ಪ್ರತಿನಿಧಿಯಾಗಿ, ಬೆಂಗಳೂರು ಕಚೇರಿಯಲ್ಲಿ ಉಪಸಂಪಾದಕಿಯಾಗಿ ಕೆಲಸ ಮಾಡಿದರು. ನಂತರದ ದಿನಗಳಲ್ಲಿ ತಮ್ಮದೇ ಹಾಸನವಾಣಿ ಪತ್ರಿಕೆ ಪ್ರಾರಂಭಿಸುವ ಮೂಲಕ ತಮ್ಮನ್ನು ತಾವು ಛಲ ಬಿಡದ ಪತ್ರಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.
ಒಬ್ಬ ಮಹಿಳೆಯಾಗಿ ಪುರುಷರ ಪಾರುಪತ್ಯದ ಪತ್ರಿಕೋದ್ಯಮ ಜಗತ್ತಿನಲ್ಲಿ ಹೋರಾಟ ನಡೆಸುತ್ತಾ, ಮಹಿಳಾ ಪತ್ರಕರ್ತರಿಗೆ ಮಾದರಿಯಾಗಿ, ಧೀಮಂತ ಪತ್ರಕರ್ತೆಯಾಗಿ ನಿಲ್ಲುವ ಮಹಿಳೆಯರನ್ನು ನೋಡುವುದು ಅಂದಿಗೂ ಇಂದಿಗೂ ಅಪರೂಪದಲ್ಲಿ ಅಪರೂಪ. ಅಂತಹ ಹೊತ್ತಿನಲ್ಲಿಯೂ ಒಂದಿಷ್ಟೂ ಎದೆಗುಂದದೆ, ಕೆಲಸ ಮಾಡಿಕೊಂಡು ಬಂದ ಲೀಲಾವತಿ ಅವರಿಗೆ ಎದುರಾದ ಸವಾಲುಗಳೇನು ಕಡಿಮೆ ಇರಲಿಲ್ಲ. ಅವರೇನಾದರೂ ಅಂದು ಟೀಕೆ, ಟಿಪ್ಪಣಿಗಳಿಗೆ ಕಿವಿಗೊಟ್ಟು ಅಧೈರ್ಯದಿಂದ ಹಿಂದಡಿ ಇಟ್ಟಿದ್ದರೆ, ಬಹುಶಃ ಇಷ್ಟು ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ತಮ್ಮ ಹಾಸನವಾಣಿ ಪತ್ರಿಕೆಯ ಮೂಲಕ ನಿತ್ಯವೂ ಸಮಾಜವನ್ನು ಸದ್ದಿಲ್ಲದೆ ತಿದ್ದಿ ತೀಡಿ, ಅತ್ಯಂತ ಜವಾಬ್ದಾರಿಯಿಂದ ಎಚ್ಚರಿಸುತ್ತಾ ಬಂದಿದ್ದಾರೆ ಲೀಲಾವತಿಯವರು.
ಹಾಸನ ಜಿಲ್ಲೆಯ, ಮಲೆನಾಡಿನ ಸೆರಗಿನಂಚಿನಲ್ಲಿರುವ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿಗೆ ಸೇರಿದ ಹರಿಹಳ್ಳಿ ಎನ್ನುವ ಗ್ರಾಮದ ಶಾನುಭೋಗರಾದ ವೆಂಕಟನಾರಾಯಣಪ್ಪ ಮತ್ತು ಗೌರಮ್ಮನವರ ಹಿರಿಯ ಪುತ್ರಿಯಾಗಿ 23 ನವೆಂಬರ್ 1950ರಲ್ಲಿ ಲೀಲಾವತಿಯವರು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹೊಸಕೋಟೆ, ಕೊಡಲಿಪೇಟೆ ಮತ್ತು ಚಿಕ್ಕಮಗಳೂರಿನಲ್ಲಿ ಮಾಡಿದರು. ನರಸಿಂಹರಾಜಪುರದಲ್ಲಿದ್ದ ಅಜ್ಜಿಯ ಮನೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದರು. ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಸಕಲೇಶಪುರದಲ್ಲಿ ಮುಗಿಸಿದರು.

‘ಹೆಣ್ಣಿಗೆ ಯಾವುದೇ ಜಾತಿ-ಧರ್ಮಗಳು ಇರಬಾರದು, ಹೆಣ್ಣೆ ಒಂದು ಜಾತಿ’ ಎನ್ನುವವರು ಲೀಲಾವತಿಯವರು. ಸಾಮಾಜಿಕ ಅನ್ಯಾಯಗಳನ್ನು, ಅನಾಚಾರಗಳನ್ನು, ಅತ್ಯಾಚಾರಗಳನ್ನು ಖಂಡಿಸುವ, ಸಿಡಿದೇಳುವ- ಹೆಣ್ಣುಮಕ್ಕಳ ಪರ ಧ್ವನಿ ಎತ್ತುವ ಸ್ವಭಾವ ಇವರದ್ದು. ಹೆಣ್ಣುಮಕ್ಕಳು ಕಷ್ಟದಲ್ಲಿ ಇದ್ದಾಗ ಸಾಂತ್ವನ ನೀಡಿ, ಸಹಾಯ ಮಾಡಿ, ಆಪ್ತಸಮಾಲೋಚನೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಯಾವುದೇ ಪ್ರತಿಫಲ ನಿರೀಕ್ಷಿಸದೆ ನೊಂದವರ ಸೇವೆಗೆ ಸದಾ ನಿಲ್ಲುವವರು. ಗೆಳತಿಯರಾದ ಹೇಮರಾಜ್, ಬಾನುಮುಷ್ತಾಕ್, ಕುಮುದಾ ಅವರ ನೆರವಿನೊಂದಿಗೆ- ಮಾನಸಿ ಕುಟುಂಬ ಸಮಾಲೋಚನಾ ಕೇಂದ್ರದ ಮೂಲಕ ಅಸಹಾಯಕ ಮಹಿಳೆಯರ ಸಂಸಾರಗಳನ್ನು ಒಗ್ಗೂಡಿಸಿದ್ದಾರೆ. ನಾಲ್ಕು ಮಂದಿ ಭಿಕ್ಷುಕಿಯರಿಗೆ ಬಾಣಂತನ ಮಾಡಿದ್ದಾರೆ. ವಿಕಸನ ವೇದಿಕೆಯ ಮೂಲಕ ಯುವ ರಕ್ತ ದಾನಿಗಳ ಪಟ್ಟಿ ಮಾಡಿಕೊಂಡಿದ್ದು- ನೂರಾರು ರೋಗಿಗಳಿಗೆ ಸಂಕಷ್ಟದ ಸಮಯದಲ್ಲಿ ರಕ್ತದಾನಕ್ಕೆ ನೆರವಾಗಿದ್ದಾರೆ. ಹೀಗೆ ಜನಪರ ಕಾಳಜಿ ಸಮಾಜಮುಖಿ ಚಿಂತನೆಗಳ ಜೊತೆಗೆ ಸಾರ್ವಜನಿಕ ಜೀವನವನ್ನು ಒಂದು ತಪಸ್ಸಿನಂತೆ ನಡೆಸಿದವರು ಲೀಲಾವತಿ.
ಲೇಖಕಿಯರ ಬಳಗದಲ್ಲಿ ಕೊರೋನಾ ಕಾಲದಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ನಡೆಸುತ್ತಿದ್ದಂತಹ ಕಥೆ ಮತ್ತು ಕವನ ಸ್ಪರ್ಧೆಗಳಿಗೆ ವೇದಿಕೆಯಾಗಿದ್ದು ಲೀಲಾವತಿಯವರ ಹಾಸನವಾಣಿ ಪತ್ರಿಕೆ. ಪ್ರತಿ ಭಾನುವಾರ ಒಂದು ಪುಟವನ್ನು ಲೇಖಕಿಯರಿಗಾಗಿ ಮೀಸಲಿಟ್ಟು, ಸುಮಾರು ಎರಡು ವರ್ಷಗಳ ಕಾಲ ಹಿರಿ ಕಿರಿಯ ಲೇಖಕಿಯರನ್ನು ಇವರು ಬೆಳೆಸಿದರು. ಇವರದು ಸ್ಥಳೀಯ ಪತ್ರಿಕೆಯಾಗಿದ್ದರೂ, ಪ್ರಾದೇಶಿಕವಲ್ಲದೆ ಹೊರರಾಜ್ಯ ಹೊರದೇಶಗಳಲ್ಲು ಕೂಡ ಅಂತರ್ಜಾಲದ ಮೂಲಕ ಪತ್ರಿಕೆ ಪ್ರಸಾರವಾಗುತ್ತಿದ್ದು, ಹೆಚ್ಚಿನ ನಿಯಮಿತ ಓದುಗರು ಇವರಿಗಿದ್ದಾರೆ. ಲೀಲಾವತಿಯವರ ಹಾಸನವಾಣಿ ಪತ್ರಿಕೆಯು ಒಂದು ದಿನವೂ ತಪ್ಪದೇ ಪ್ರಕಟವಾಗುತ್ತಿರುವುದು ಅವರ ಪ್ರಾಮಾಣಿಕತೆ ಮತ್ತು ಶಿಸ್ತುಬದ್ಧ ಜೀವನಕ್ಕೆ ಸಾಕ್ಷಿಯಾಗಿದೆ.
ಭಾರತೀಯ ಭಾಷಾ ಪತ್ರಿಕಾ ಸಂಪಾದಕರ ಸಂಘದ ರಾಜ್ಯ ಪ್ರತಿನಿಧಿಯಾಗಿ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆಯಾಗಿ, ರಾಜ್ಯ ಪತ್ರಿಕಾ ಮಾನ್ಯತಾ ಸಮಿತಿಯ ಸದಸ್ಯೆಯಾಗಿ, ರಾಜ್ಯ ಸಣ್ಣ ಪತ್ರಿಕಾ ಸಂಪಾದಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ರಾಜ್ಯ ಬ್ರಾಹ್ಮಣ ಮಹಾಸಭಾ ವಲಯದ ಸಂಘಟನಾ ಕಾರ್ಯದರ್ಶಿಯಾಗಿ, ಹಾಸನ ಜಿಲ್ಲಾ ಬಳಕೆದಾರರ ಸಂಘದ ಅಧ್ಯಕ್ಷೆಯಾಗಿ, ಜೀವನಧಾರ ಕುಟುಂಬ ಸಮಾಲೋಚನಾ ಕೇಂದ್ರದ ನಿರ್ದೇಶಕಿಯಾಗಿ, ಹೇಮಾವತಿ ಮಹಿಳಾ ಬ್ಯಾಂಕ್ ನಿರ್ದೇಶಕಿಯಾಗಿ, ಭಾರತ ಸೇವಾದಳ ಮಹಿಳಾ ಘಟಕದ ಕಾರ್ಯದರ್ಶಿಯಾಗಿ, ಬಾ ಬಾಲೆ ಶಾಲೆಗೆ ಹಾಸನ ಜಿಲ್ಲಾಮಟ್ಟದ ಸಮಿತಿ ಸದಸ್ಯೆಯಾಗಿ, ಮಾನವೀಯ ಮಹಿಳಾ ಅಧ್ಯಯನ ಕೇಂದ್ರದ ಗೌರವ ಸಲಹೆಗಾರರಾಗಿ, ಕೆಂಪು ಚೆಲುವಾಜಮ್ಮಣ್ಣಿ ಮಹಿಳಾ ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಜಿಲ್ಲಾ ಸಮಿತಿಯ ಸದಸ್ಯೆಯಾಗಿ… ಇವರ ಕಾರ್ಯ ವ್ಯಾಪ್ತಿ ಅತ್ಯಂತ ದೊಡ್ಡದು.
ಇದನ್ನೂ ಓದಿ- ಮಹಿಳಾ ಸಬಲೀಕರಣದ ಆಶಾಕಿರಣಗಳು
ದೂರದರ್ಶನ ಪ್ರಸಾರಿತ- ಬೆಳಗು ಕಾರ್ಯಕ್ರಮದಲ್ಲಿ ಲೀಲಾವತಿಯವರ ಸಂದರ್ಶನ ಪ್ರಸಾರವಾಗಿದೆ. ಉದಯ ಟಿವಿ ‘ಜಾಣರ ಜಗಲಿ’ ಕಾರ್ಯಕ್ರಮದಲ್ಲಿ ಹಾಗೂ ಹಾಸನ ಆಕಾಶವಾಣಿ ಹಮ್ಮಿಕೊಳ್ಳುವ ‘ಭಾವೈಕ್ಯತೆ’ಯ ಕಾರ್ಯಕ್ರಮದಲ್ಲಿ ಸಹ ಪಾಲ್ಗೊಂಡಿದ್ದಾರೆ. ಗೋಕಾಕ್ ಚಳವಳಿಯಲ್ಲಿ ಕನ್ನಡಪರ ಹೋರಾಟದಲ್ಲಿಯೂ ಇವರು ಭಾಗಿಯಾಗಿದ್ದಾರೆ. ಅನೇಕ ಸಂಘ, ಸಂಸ್ಥೆ, ಸಂಘಟನೆಗಳಲ್ಲಿ, ಹೋರಾಟಗಳಲ್ಲಿ ತಮ್ಮನ್ನು ತಾವು ಅವಿರತ ತೊಡಗಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಹಲವಾರು ಪ್ರಶಸ್ತಿಗಳು ಇವರ ಮುಡಿ ಏರಿವೆ.
ರಾಷ್ಟ್ರಮಟ್ಟದ, ರಾಜ್ಯಮಟ್ಟದ- ಕಾವ್ಯ ಪ್ರಶಸ್ತಿ, ಸೇವಾ ಪ್ರಶಸ್ತಿ, ಪ್ರಾಮಾಣಿಕ ಗ್ರಾಹಕ ಪ್ರಶಸ್ತಿ, ಶಾಂತಿಗಾಗಿ ನಡಿಗೆ ಪ್ರಶಸ್ತಿ, ಭಾವ ಸಂಗಮ- ಸುಗಮ ಸಂಗೀತ ಅಭಿನಂದನಾ ಪತ್ರ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಜೈನ ಮಹಿಳಾ ರಾಷ್ಟ್ರೀಯ ಸಮ್ಮೇಳನದಲ್ಲಿ- ಆದರ್ಶ ಮಹಿಳೆ ರಾಷ್ಟ್ರೀಯ ಪ್ರಶಸ್ತಿ, ರಾಜ್ಯಮಟ್ಟದ ಸ್ತ್ರೀ ಜಾಗೃತಿ ಪತ್ರಿಕೆಯ- ದಿಟ್ಟ ಮಹಿಳೆ ಪ್ರಶಸ್ತಿ… ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಪ್ರೀತಿಯ ಲೀಲಾವತಿ ಅಮ್ಮನ ಸಾಧನೆಯನ್ನು ಗೌರವಿಸಿ, ಇವರಿಗೆ ‘ಹೋರಾಟದ ಹಾದಿಯಲ್ಲಿ ಬೆಳ್ಳಿ ಹೆಜ್ಜೆ’ ಎಂಬ ಅಭಿನಂದನ ಗ್ರಂಥವನ್ನು ಕೂಡ ಅಭಿಮಾನಿಗಳು ಸಲ್ಲಿಸಿದ್ದಾರೆ. ಅವರು ಅಭಿನಂದನೆಗೆ ನಿಜವಾಗಿಯೂ ಅರ್ಹರು.
ಲೀಲಾವತಿಯವರು ಕೇವಲ ಪತ್ರಿಕೋದ್ಯಮ ಮಾತ್ರವಲ್ಲದೇ ಭಾಗಿಯಾಗಿರುವ ವಿಭಿನ್ನ ಕ್ಷೇತ್ರಗಳ ಪಟ್ಟಿ ಬಹಳ ದೊಡ್ಡದು. ಕಲೆ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ… ಎಲ್ಲಾ ವಿಭಾಗಗಳಲ್ಲೂ ತೊಡಗಿಕೊಂಡು, ಸಮಾಜದಲ್ಲಿ ಸದಾ ಒಳ್ಳೆಯ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರ ಸಹನೆ ಮತ್ತು ಕರುಣೆ ಮೆಚ್ಚುಗೆಯಾಗುವ ಗುಣಗಳು. ಹಾಗೇ ಶಿಸ್ತಿನ ಸಿಪಾಯಿ ಕೂಡ. ಅವರದು ಬಹುಮುಖ ಪ್ರತಿಭೆ. ಪತ್ರಕರ್ತೆ, ಲೇಖಕಿ, ಕವಿ, ಗಾಯಕಿ, ಸಮಾಜ ಸುಧಾರಕಿ… ಇನ್ನು ಹಲವಾರು ವೈಶಿಷ್ಟ್ಯಗಳನ್ನು ಅವರಲ್ಲಿ ಅಳವಡಿಸಿಕೊಂಡಿದ್ದಾರೆ. ಇವರ ಜನಪರ ಚಿಂತನೆಗಳು ಇನ್ನೂ ಹೆಚ್ಚು ಜನರಿಗೆ ತಲುಪಬೇಕಿದೆ. ಸದ್ಯ 76 ವರ್ಷದ ಲೀಲಾವತಿಯವರು, ತಮ್ಮ ಸಂಧ್ಯಾಕಾಲದ ಸಮಯವನ್ನು ಸುಖಮಯವಾಗಿ, ಆರೋಗ್ಯವಾಗಿ, ಚೇತೋಹಾರಿಯಾಗಿ ಕಳೆಯಲಿ ಎಂಬುದೇ ಜಿಲ್ಲೆಯ ಎಲ್ಲ ಹೆಣ್ಣುಮಕ್ಕಳ ಪ್ರೀತಿಪೂರ್ವಕ ಹಾರೈಕೆ.
ಡಾ.ಶಾಂತ ಅತ್ನಿ, ಹಾಸನ
ಇದನ್ನೂ ಓದಿ- ಮಹಿಳಾ ದಿನ ವಿಶೇಷ | ಮರೆತುಹೋದ ಮಹಿಳಾ ವಿಜ್ಞಾನಿ: ಡಾ. ಬಿಭಾ ಚೌಧುರಿ


