ಸುಳ್ಳು ಕಥನಗಳಲ್ಲಿ ಬಲಿಪಶುವಾಗುತ್ತಿರುವ ಸಾಮಾನ್ಯರ ಬದುಕು ಕಳೆದುಹೋಗುತ್ತಿದೆ. ಮನೆಗಳು ಧ್ವಂಸಗೊಂಡು, ಸೂರು, ನೀರು, ಅನ್ನವಿಲ್ಲದೆ ಜನರು ಹುಳು-ಹುಪ್ಪಟೆಗಳಂತೆ ಸಾಯುತ್ತಿದ್ದಾರೆ. ಸಾವಿರಾರು ಮಕ್ಕಳು ಬಲಿಯಾಗುತ್ತಿದ್ದಾರೆ. ಆದರೆ ಜನರ ಈ ನಿಜ ಕಥೆಗಳು ಸುದ್ದಿಯಿಂದ ಮರೆಯಾಗಿವೆ. ಈ ಕಥೆಗಳನ್ನು ಹೇಳ ಹೊರಟ ನೂರಾರು ಪತ್ರಕರ್ತರೂ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಈ ದೊಡ್ಡವರ ಸುದ್ದಿಗಳಲ್ಲಿ ಸಾಮಾನ್ಯರ ಸುದ್ದಿಗೆ ಜಾಗವಿಲ್ಲವಾಗಿದೆ. ವಿಚಿತ್ರವೆಂದರೆ, ಇವರ ಈ ಕಥೆಗಳು ಮುಂದೊಮ್ಮೆ ಬಣ್ಣ ಬಳಿದುಕೊಂಡು ಗರಿಕೆದರಿ ಕಥನವಾಗಿ ಮತ್ತೊಂದು ಹಿಂಸೆಗೆ ಬುನಾದಿಯಾಗುತ್ತವೆ – ಲತಾಮಾಲಾ, ಬರಹಗಾರರು.
ನಮ್ಮ ಬದುಕು ನಾವೇ ಹುಟ್ಟುಹಾಕಿದ ಸಂಸ್ಕೃತಿ, ಧರ್ಮ, ರಾಜಕೀಯ ಮತ್ತು ಸಾಮಾಜಿಕ ನೆಲೆಯಡಿ ಸೃಷ್ಟಿತವಾದ ಮಾಂತ್ರಿಕ ಕಥನಗಳ ಸುಳಿಯೊಳಗೆ ಸಿಲುಕಿದೆ. ಅನೇಕ ಕಲ್ಪಿತ ಕಥನಗಳು ಸತ್ಯದ ಮುಖವಾಡದೊಂದಿಗೆ ಬದುಕಿನ ಚಾಲಕ ಶಕ್ತಿಯಾಗಿ ಈ ಪ್ರಪಂಚವನ್ನು ಪ್ರಭಾವಿಸುತ್ತಿರುವ ಪರಿಯು ಅಚ್ಚರಿಯಾಗಿದೆ.
ಮಾನವನ ಇತಿಹಾಸವೆಂದರೆ, ಕೇವಲ ಸಂಶೋಧಿತ ಇತಿಹಾಸವಾಗಿರದೆ, ನಾವೇ ಸೃಷ್ಟಿಸಿದ ಕಥನಗಳ ಐತಿಹ್ಯವೂ ಆಗಿದೆ. ಹಸಿವು, ನಿದ್ರೆ, ಮತ್ತು ಸಂತಾನೋತ್ಪತ್ತಿಯಂತಹ ಪ್ರಾಣಿಸಹಜ ಗುಣಗಳನ್ನು ಮೀರಿ ಮನುಷ್ಯನನ್ನು ಒಂದುಗೂಡಿ ಬದುಕಲು ಪ್ರೇರೇಪಿಸಿದ್ದು ಒಂದು ‘ಅದೃಶ್ಯ ಶಕ್ತಿಯ’ ಮೇಲಿನ ನಂಬಿಕೆ. ಈ ಹಿನ್ನೆಲೆಯಲ್ಲಿ ಸೃಷ್ಟಿತವಾದ ಅಮೂರ್ತ ಕಥೆಗಳ ಹುಟ್ಟನ್ನು ಮನುಷ್ಯ ಅಲೆಮಾರಿಯಾಗಿದ್ದ ಕಾಲದಿಂದಲೇ ಕಾಣಬಹುದಾಗಿದೆ. ಗುಂಪುಗಾರಿಕೆಗೆ ಕೇವಲ ರಕ್ತಸಂಬಂಧ ಸಾಕಾಗದೆ, ನೂರಾರು ಅಲೆಮಾರಿಗಳನ್ನು ಒಂದುಗೂಡಿಸಲು ‘ದೈವಿಕ ಶಕ್ತಿ’ ಅಥವಾ ಪೂಜನೀಯ ಸಂಕೇತಗಳ ((Totem)) ಕಥೆಗಳು ಹುಟ್ಟಿಕೊಂಡವು. ಬೆಂಕಿಯ ಸುತ್ತ ಕುಳಿತು ಹೇಳಿದ-ಕೇಳಿದ ಆ ಕಥೆಗಳು ‘ನಾವೆಲ್ಲರೂ ಒಂದೇ ಗುಂಪಿಗೆ ಸೇರಿದವರು’ ಎಂಬ ಭಾವನೆಯನ್ನು ಗಟ್ಟಿಗೊಳಿಸಿದವು.
ಹಿಗೆ ಜನಿಸಿದ ಕಥೆಗಳ (ಸ್ಟೋರಿಸ್) ಮತ್ತು ಕಥನಗಳ (ನೆರೆಟಿವ್ಸ್) ನಡುವೆ ವ್ಯತ್ಯಾಸವನ್ನು ಗಮನಿಸಬೇಕು. ಕಥೆಗಳು ನಡೆದ ಘಟನೆ ಅಥವಾ ಕಲ್ಪಿಸಿದ್ದನ್ನು ಹೀಗಾಯಿತು ಎಂದು ಹೇಳಿ ರಂಜಿಸುವ ಜೊತೆಗೆ ಕಲಿಯಲೊಂದು ನೀತಿ ಪಾಠವಿರುತ್ತದೆ. ಆದರೆ ಕಥನಗಳು ಹಾಗಲ್ಲ; ಅವು ಇತಿಹಾಸದ ಘಟನೆಗಳನ್ನು ಅಥವಾ ಧರ್ಮಗ್ರಂಥ-ಪುರಾಣಗಳ ಸಾರವನ್ನು ತಮ್ಮ ಉದ್ದೇಶಗಳಿಗೆ ಪೂರಕವಾಗಿ ತಿರುಚಿ ಮತ್ತೇ ಮತ್ತೇ ಹೆಣೆದೆಹೆಣೆದು ಹೇಳುವ ಮೂಲಕ ಜನರನ್ನು ಪ್ರಭಾವಗೊಳಿಸುತ್ತವೆ. ಕಥನಗಳ ಉದ್ದೇಶ ಮನುಷ್ಯರನ್ನು ಸನ್ಮಾರ್ಗದಲ್ಲಿ ನಡೆಸಲು ಎನ್ನುವುದು ಕೇವಲ ತೋರಿಕೆಯಾಗಿದ್ದು, ಕೊನೆಗದು ಸ್ವಾರ್ಥ ಸಾಧನೆಗೆ ಹೆಚ್ಚು ಬಳಕೆಯಾಗುತ್ತದೆ.

ಹೀಬ್ರೂ ಬೈಬಲ್ಲಿನಲ್ಲಿ ಹಿಗೊಂದು ಕಥೆ ಇದೆ; ಮಹಾ ಪ್ರಳಯದ ನಂತರ, “ನೋಹಾ ಎಂಬ ಪ್ರವಾದಿಯು ದ್ರಾಕ್ಷಾರಸದ ಅಮಲಿನಲ್ಲಿ ಅರಿವೆ ಇಲ್ಲದೆ ಅರೆನಗ್ನನಾಗಿ ಮಲಗಿರುತ್ತಾನೆ. ಇದನ್ನು ಕಂಡ ಅವನ ಮಗ ಹ್ಯಾಮ್ ತನ್ನ ಸಹೋದರರಿಗೆ ಅದನ್ನು ತಿಳಿಸಿದಾಗ, ಅವರು ತಂದೆಯ ಕಡೆ ನೋಡದೆ, ಗೌರವದಿಂದ ಬಟ್ಟೆ ಹೊದಿಸುತ್ತಾರೆ. ನಂತರ ಎಚ್ಚರಗೊಂಡ ನೋಹಾ ಕುಪಿತನಾಗಿ, ಹ್ಯಾಮ್ನ ಮಗ ಕಾನನ್ ಗೆ ‘ನೀನು ದಾಸನಾಗಿ ಬಾಳು’ ಎಂದು ಶಾಪ ನೀಡುತ್ತಾನೆ”. ಈ ಮೂಲ ಕಥೆಯನ್ನು ಬಳಸಿಕೊಂಡ ಅಮೆರಿಕ ಮತ್ತು ಯುರೋಪಿನ ಸಿರಿವಂತರು, ಹ್ಯಾಮ್ ಆಫ್ರಿಕನ್ನರ ಪೂರ್ವಜನೆಂದೂ, ಆದ್ದರಿಂದ ಕಪ್ಪು ವರ್ಣದವರು ಹುಟ್ಟಿನಿಂದಲೇ ಶಾಪಗ್ರಸ್ತರೆಂದು ಜನರನ್ನು ನಂಬಿಸಿ, ಸಾವಿರಾರು ಆಫ್ರಿಕನ್ನರನ್ನು ಗುಲಾಮಗಿರಿಗೆ ತಳ್ಳಿದ ಇತಿಹಾಸವಿದೆ. ಅಂತೆಯೇ, ಸ್ವರ್ಗ, ನರಕ, ಪಾಪ, ಪುಣ್ಯದ ಕಲ್ಪನೆಗಳು ಮನುಷ್ಯರ ನಡವಳಿಕೆಗಳನ್ನು ನಿಯಂತ್ರಿಸಲು ಸೃಷ್ಟಿಯಾಗಿವೆ. ವಿಜ್ಞಾನವು ಸಾವು ಎಲ್ಲದರ ಅಂತ್ಯವೆಂದರೆ, ಪುನರ್ಜನ್ಮ ಸಿದ್ಧಾಂತವು ಒಳ್ಳೆಯ ಕರ್ಮಕ್ಕೆ ಉತ್ತಮ ಫಲವೆಂಬ ನಂಬಿಕೆ ಬೆಳೆಸಿ ದೌರ್ಜನ್ಯವನ್ನು ಪ್ರಶ್ನಿಸದಂತೆ ಮಾಡಿದೆ. ಹೀಗೆ ಕಥನಗಳು ಬಲಿಷ್ಠರ ಮತ್ತು ಬುದ್ಧಿವಂತರ ಸ್ವಾರ್ಥಕ್ಕೆ ಬಳಕೆಯಾಗುತ್ತಾ, ದುರ್ಬಲರನ್ನು ಶೋಷಿಸುತ್ತಿವೆ.
ಧರ್ಮ, ಜಾತಿ, ಜನಾಂಗ, ಮತ್ತು ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ನಡೆಯುವ ಮಾರಣ ಹತ್ಯೆಗಳನ್ನು ಪುಣ್ಯದ ಕೆಲಸವೆಂಬ ಕಥನಗಳಿಂದ ಮಾನ್ಯಗೊಳಿಸಲಾಗಿದೆ. ಅಧಿಕಾರ ಮತ್ತು ಸಂಪತ್ತನ್ನು ಕಾಪಿಡುವ ಸಲುವಾಗಿ ಸೃಷ್ಟಿತವಾದ ಸುಳ್ಳು ಕಥನಗಳು ಅದೆಷ್ಟು ಪ್ರಭಾವ ಬೀರಿವೆ ಎಂದರೆ ಕಣ್ಣಿಗೆ ರಾಚುವ ಸತ್ಯವನ್ನೂ ಸಹ ಜನರು ಅಲ್ಲಗೆಳೆಯುತ್ತಾರೆ; ಮನುಷ್ಯನು ತರ್ಕಕ್ಕಿಂತ ಭ್ರಮೆಗಳಿಗೆ ಮಾರುಹೋಗುವುದೇ ಮಾಯೆಯಾಗಿರಬಹುದೇ? ಪುರಾತನದಿಂದಲೂ ಬಂದಿರುವ ಈ ವೃತ್ತಾಂತ ಪ್ರವೃತ್ತಿಯು ವಿರೋಧಿಗಳನ್ನು ಹಣಿದು ಗದ್ದುಗೆ ಉಳಿಸಿಕೊಳ್ಳಲು ಒಂದು ಪ್ರಭಾವಿ ಅಸ್ತ್ರವಾಗಿದೆ. ಇತಿಹಾಸದುದ್ದಕ್ಕೂ ಈ ಕಥನಗಳು, ಬೇರೊಂದು ಗುಂಪಿನ ದಬ್ಬಾಳಿಕೆಗೆ ತಮ್ಮ ಸಾಮ್ರಾಜ್ಯ, ಸಂಪತ್ತು, ಧರ್ಮ ಮತ್ತು ಸಂಸ್ಕತಿಗಳು ಪತನಗೊಂಡು ತಮ್ಮವರು ಬಲಿಪಶುವಾದ ಘಟನೆಗಳನ್ನು ಬಿಚ್ಚಿಡುತ್ತಾ, ತಮ್ಮ ಜನಾಂಗಿಯ ಶ್ರೇಷ್ಠತೆ ಮತ್ತು ಧರ್ಮ-ದೇಶಗಳ ಮರುಸ್ಥಾಪನೆ ಹಾಗೂ ರಕ್ಷಣೆಯನ್ನು ಪ್ರತಿಪಾದಿಸುತ್ತವೆ. ಅನೇಕವು ಇತಿಹಾಸದಲ್ಲಿ ಘಟಿಸಿದ್ದರೂ, ಅವು ಕಾಲಾಂತರದಲ್ಲಿ ಪುರಾಣದ ಲೇಪನ ಮತ್ತು ಧರ್ಮ ಗ್ರಂಥಗಳಲ್ಲಿನ ಉಲ್ಲೇಖಗಳೊಂದಿಗೆ ತಿರುಚಿ, ಸುಳ್ಳುಗಳನ್ನು ಮೇಳೈಸಿಕೊಂಡು ಏಕಪಕ್ಷೀಯ ವಾದವನ್ನು ಮುಂದಿಡುವ ಕಥನಗಳೇ ಹೆಚ್ಚು ಸೃಷ್ಟಿಯಾಗಿವೆ. ಇವುಗಳ ಮೊನಚು ಭಾಷೆ ಮತ್ತು ವರ್ಣರಂಜಿತವಾಗಿ ತೆರೆದಿಡುವ ರೀತಿಯು ಕೇಳುಗರನ್ನು ಭಾವೋದ್ರೇಕಕ್ಕೆ ತಳ್ಳುತ್ತವೆ. ತಮ್ಮ ಮೂಲದವರಿಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ತಹತಹಿಸುವ ಕೇಳುಗರ ಮನಸ್ಸುಗಳು ಶತ್ರುಗಳನ್ನು ಮಾರಣಗೈದಾದರೂ ತಮ್ಮ ಬೇರುಗಳನ್ನು ರಕ್ಷಿಸುವುದು ಒಂದು ದೈವಿಕ ಉದ್ದೇಶವೆಂದು ಭ್ರಮಿಸುತ್ತವೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕಥನಗಳ ಸೃಷ್ಟಿದಾತರು ಜನರನ್ನು ಮತ್ತಷ್ಟು ರೊಚ್ಚಿಗೇಳಿಸುತ್ತಾ ತಮ್ಮ ಗದ್ದುಗೆಯನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ.
ಈ ಯುದ್ಧದ ಸಂದರ್ಭದಲ್ಲಿ ಅನೇಕ ಕಥನಗಳು ನೆನಪಾಗುತ್ತವೆ. ಯಹೂದಿಗಳು (ಜ್ಯೂಯಿಶ್) ತಮ್ಮ ಬೈಬಲ್ನ ಹಳೆಯ ಹಿಬ್ರೂ ಗ್ರಂಥದಲ್ಲಿ ದೇವರು ಅಬ್ರಹಾಮನಿಗೆ ‘ಜೋರ್ಡಾನ್ ನದಿಯ ಪಶ್ಚಿಮ ದಂಡೆಯ ಪ್ರದೇಶವನ್ನು (ಇಂದಿನ ಇಸ್ರೇಲ್, ಪ್ಯಾಲೆಸ್ಟೈನ್, ಗಾಝಾ, ಜೋರ್ಡಾನ್, ಲೆಬನಾನ್, ಸಿರಿಯಾ, ಇತ್ಯಾದಿಗಳು) ನಿನ್ನ ಸಂತಾನದವರಿಗೆ ಕೊಟ್ಟಿದ್ದೆನೆ’ ಎಂದು ಹೇಳಿದ ಉಲ್ಲೇಖವಿದೆಯಂತೆ. ಈ ಒಂದು ಸಾಲನ್ನು ಬಳಸಿಕೊಂಡು ಇಸ್ರೇಲ್ನ ಜಿಯೋನಿಸ್ಟ್ ಗುಂಪು ‘ಗ್ರೇಟರ್ ಇಸ್ರೇಲ್’ ಕಥನ ಹೆಣೆದಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಪ್ಯಾಲೆಸ್ಟೈನ್, ಲೆಬನಾನ್, ಸಿರಿಯಾ ಮತ್ತು ಇರಾನ್ ಮೇಲೆ ಯುದ್ಧ ಸಾರಿದ್ದು, ಇದಕ್ಕೆ ನೀಡಿರುವ ಕಾರಣಗಳು ಬೇರೆಯಾದರೂ, ಅಂತಿಮ ಉದ್ದೇಶವು ‘ಗ್ರೇಟರ್ ಇಸ್ರೇಲ್’ ಆಗಿದೆ. ಅಮೇರಿಕವು ತೈಲ ಮತ್ತು ಭೂ-ರಾಜಕೀಯದಲ್ಲಿ ತನ್ನ ಹಿಡಿತವನ್ನು ಹೆಚ್ಚಿಸಲು ಮತ್ತಷ್ಟು ಕಥೆಗಳ ನೆರಳಿನಲ್ಲಿ ಇರಾನ್ ವಿರುದ್ಧ ಇಸ್ರೇಲಿನ ಜೊತೆಗೂಡಿದ್ದು, ಈ ಯುದ್ಧದಿಂದ ಇಡೀ ಪ್ರಪಂಚವೇ ಸಂಕಷ್ಟಕ್ಕೆ ಒಳಗಾಗಿದೆ.

ಇದೇ ರೀತಿ, ಐಸಿಸ್, ಅಲ್-ಖೈದಾನಂತಹ ಗುಂಪುಗಳು ‘ಖಿಲಾಫತ್’ ವ್ಯವಸ್ಥೆಯ ಮರುಸ್ಥಾಪನೆಗಾಗಿ ಭಯೋತ್ಪಾದನೆಯಲ್ಲಿ ತೊಡಗಿ ನರಮೇಧಗಳನ್ನು ನಡೆಸುತ್ತಾ ಧರ್ಮ ರಕ್ಷಣೆ ಮಾಡುತ್ತಿದ್ದೇವೆ ಎಂದುಕೊಂಡಿದ್ದಾರೆ. ಭಾರತದ ಹಿಂದುತ್ವವಾದಿ ಗುಂಪುಗಳು ಹಿಂದು ರಾಷ್ಟ್ರ ನಿರ್ಮಾಣದ ಕಲ್ಪನೆಯಿಂದ ಕೋಮುಗಲಭೆಗಳನ್ನು ಹರಡುತ್ತಿದ್ದಾರೆ. ಉಗಾಂಡದ ಲಾರ್ಡ್ ರೆಸಿಸ್ಟೆನ್ಸ್ ಆರ್ಮಿ ಗುಂಪು ಬೈಬಲ್ಲಿನ ಹತ್ತು ಆಜ್ಞೆಗಳ ಪ್ರಕಾರದಂತೆ ಆಡಳಿತವಿರುವ ರಾಜ್ಯ ಕಟ್ಟಲು ದಂಗೆ ನಡೆಸುತ್ತಾರೆ. ಅಹಿಂಸಾ ಪ್ರತಿಪಾದಿತ ಬೌದ್ಧ ಧರ್ಮವೂ ಸಹ ಮ್ಯಾನ್ಮಾರ್ ಬೌದ್ಧ ರಾಷ್ಟ್ರವಾಗಬೇಕೆಂಬ ಇರಾದೆಯಲ್ಲಿ ಹಿಂಸಾ ಮಾರ್ಗ ಹಿಡಿಯುತ್ತದೆ. ಇವೆಲ್ಲವೂ ಶ್ರೇಷ್ಠತೆ ಮೆರೆಯುವ ಸಂಘರ್ಷವಾಗಿದ್ದು, ‘ನಾವೊಮ್ಮೆ ದಿವ್ಯ-ಭವ್ಯವಾಗಿದ್ದೆವು, ಆದರೆ ಶತ್ರುಗಳು ಅದನ್ನು ನಾಶಪಡಿಸಿ ನಮ್ಮನ್ನು ಬಲಿಪಶುವನ್ನಾಗಿಸಿದರು’ ಎಂಬಂತಹ ಈ ಕಥನಗಳು ಜನರಲ್ಲಿ ಸೇಡಿನ ಭಾವವನ್ನು ತುಂಬಿ ಮಾನವ ಜನಾಂಗದ ವಿನಾಶಕ್ಕೆ ಕಾರಣವಾಗುತ್ತಿದೆ.
ಈ ಸುಳ್ಳು ಕಥನಗಳಲ್ಲಿ ಬಲಿಪಶುವಾಗುತ್ತಿರುವ ಸಾಮಾನ್ಯರ ಬದುಕು ಕಳೆದುಹೋಗುತ್ತಿದೆ. ಮನೆಗಳು ಧ್ವಂಸಗೊಂಡು, ಸೂರು, ನೀರು, ಅನ್ನವಿಲ್ಲದೆ ಜನರು ಹುಳು-ಹುಪ್ಪಟೆಗಳಂತೆ ಸಾಯುತ್ತಿದ್ದಾರೆ. ಸಾವಿರಾರು ಮಕ್ಕಳು ಬಲಿಯಾಗುತ್ತಿದ್ದಾರೆ. ಆದರೆ ಜನರ ಈ ನಿಜ ಕಥೆಗಳು ಸುದ್ದಿಯಿಂದ ಮರೆಯಾಗಿವೆ. ಈ ಕಥೆಗಳನ್ನು ಹೇಳ ಹೊರಟ ನೂರಾರು ಪತ್ರಕರ್ತರೂ ಸಹ ಪ್ರಾಣ ಕಳೆದುಕೊಂಡಿದ್ದಾರೆ. ತೈಲ ನಿಕ್ಷೇಪಗಳು, ಸೇನಾ ನೆಲೆಗಳು ಹೇಗೆ ಧ್ವಂಸಗೊಳ್ಳುತ್ತಿವೆ, ಯಾರಿಗೆ ಎಷ್ಟು ನಷ್ಟ, ಯಾವ ಯಾವ ಕ್ಷಿಪಣಿಗಳು, ಮತ್ತು ನಾಯಕರ ಕ್ಷಣ ಕ್ಷಣದ ಹೇಳಿಕೆಗಳ ಬಣ್ಣನೆಗಳು ಬ್ರೇಕ್ ಇಲ್ಲದಂತೆ ಸುದ್ದಿಯಾಗುತ್ತಿವೆ. ಈ ದೊಡ್ಡವರ ಸುದ್ದಿಗಳಲ್ಲಿ ಸಾಮಾನ್ಯರ ಸುದ್ದಿಗೆ ಜಾಗವಿಲ್ಲವಾಗಿದೆ. ವಿಚಿತ್ರವೆಂದರೆ, ಇವರ ಈ ಕಥೆಗಳು ಮುಂದೊಮ್ಮೆ ಬಣ್ಣ ಬಳಿದುಕೊಂಡು ಗರಿಕೆದರಿ ಕಥನವಾಗಿ ಮತ್ತೊಂದು ಹಿಂಸೆಗೆ ಬುನಾದಿಯಾಗುತ್ತವೆ.
ಸತ್ಯ-ಮಿಥ್ಯೆಗಳ ನಡುವಿನ ವ್ಯತ್ಯಾಸವನ್ನು ಕಾಣಬಲ್ಲ ಕೆಲ ವಿವೇಕಿಗಳು ಕೆಲವರಿದ್ದರೂ, ಕಥನಗಳ ಮುಖವಾಡವನ್ನು ಬಯಲಿಗೆಳೆಯುವ ಧೀಮಂತರು ಬಹು ಕಡಿಮೆ. ಹೆಚ್ಚುತ್ತಿರುವ ಮೌಢ್ಯದ ಪ್ರಭಾವವನ್ನು ವೈಚಾರಿಕತೆಯಿಂದ ಮೆಟ್ಟಿ ನಿಲ್ಲಲು ಈ ಧೀಮಂತರು ತಮ್ಮ ಜೀವನವನ್ನೆ ಬಲಿಕೊಡುತ್ತಿದ್ದಾರೆ. ಸೂರ್ಯನ ಸುತ್ತ ಭೂಮಿ ಸುತ್ತುತ್ತದೆಂಬ ಸತ್ಯ ಹೇಳಿದ ವಿಜ್ಞಾನಿಗಳಿಂದ ಹಿಡಿದು, ಇತ್ತೀಚಿನ ನರೇಂದ್ರ ದಾಬೋಲ್ಕರ್ ಅಥವಾ ಕಲ್ಬುರ್ಗಿಯವರ ಹತ್ಯೆಯವರೆಗಿನ ಮೌಢ್ಯದ ಕ್ರೌರ್ಯಕ್ಕೆ ಇತಿಹಾಸವು ಸಾಕ್ಷಿಯಾದರೆ, ಕಥನಗಳು ನಿರಂತರ, ಅಂತೆಯೇ ಸಂಘರ್ಷವೂ ಸಹ.
ಲತಾಮಾಲ
ಬರಹಗಾರ್ತಿ
ಇದನ್ನೂ ಓದಿ- ವಿಶೇಷ | ಬಸವ ಜಯಂತಿ ಮತ್ತು ನಡೆ ನುಡಿ ಸಿದ್ಧಾಂತ


