ಲಂಕೇಶರ ‘ಅವ್ವ’ ಇಂದಿನ ಸ್ತ್ರೀಗೆ ಒಂದು ಎಚ್ಚರಿಕೆಯ ಗಂಟೆಯೂ ಹೌದು. ತನ್ನತನವನ್ನು ಸಂಪೂರ್ಣವಾಗಿ ಕಳೆದುಕೊಂಡು, “ಸುಟ್ಟಷ್ಟು ಕಸುವು” ಎನ್ನುತ್ತಾ ಕೇವಲ ಇತರರಿಗಾಗಿ ಗೊಬ್ಬರವಾಗುವ ಆ ಮಾದರಿಯನ್ನು ಇಂದಿನ ಸ್ತ್ರೀ ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸುತ್ತಾಳೆ. ಅವ್ವನ ಬಗ್ಗೆ ಕೃತಜ್ಞತೆ ಇದ್ದರೂ, ಅವ್ವನಂತಾಗುವ ಆಸೆ ಇಂದಿನ ಹೆಣ್ಣಿಗಿಲ್ಲ. ಹೀಗಾಗಿ, ಈ ಕವಿತೆ ಪುರುಷನಿಗೆ ಒಂದು ‘ಪ್ರಾಯಶ್ಚಿತ್ತ’ದ (Penance) ನಿವೇದನೆಯಾದರೆ, ಸ್ತ್ರೀಗೆ ಇದೊಂದು ‘ಎಚ್ಚರಿಕೆ’ಯ (Warning) ಪಾಠವಾಗಿದೆ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಪ್ರವೇಶಿಕೆ
ತಾಯಿಯೆಂದರೆ ತ್ಯಾಗಮಯಿ, ದೇವತೆ, ಅನ್ನಪೂರ್ಣೆ… ಹೀಗೆ ವಿಶೇಷಣಗಳ ಹೂವಿನ ಹಾರ ಹಾಕಿ, ಆಕೆಯ ಅಸ್ತಿತ್ವವನ್ನು ಪೂಜಿಸುವುದು ನಮಗೆ ರೂಢಿಯಾಗಿಬಿಟ್ಟಿದೆ. ಆದರೆ, ಆ ಹಾರವನ್ನು ಕಳಚಿ, ಆಕೆಯ ಬೆವರಿನ ವಾಸನೆಯನ್ನು ಆಘ್ರಾಣಿಸಲು ಮತ್ತು ಆಕೆಯ ಸಿಟ್ಟು-ಸೆಡವುಗಳನ್ನು ಮುಜುಗರವಿಲ್ಲದೆ ನೋಡಲು ನಾವು ಸಿದ್ಧರಿದ್ದೇವೆಯೇ?
ಸಾಹಿತ್ಯದಲ್ಲಿ ಸ್ತ್ರೀಯನ್ನು ಗುರುತಿಸುವುದು ಹೇಗೆ? ಆದರ್ಶೀಕರಣದ ಮೂಲಕ ದೇವತೆಯನ್ನಾಗಿಸುವುದೇ? ವಸ್ತುವೀಕರಣದ ಮೂಲಕ ಭೋಗ್ಯವಸ್ತುವನ್ನಾಗಿಸುವುದೇ? ಅಥವಾ ಅವಳೇನೂ ಅಲ್ಲವೆಂದು ಮೌನವಹಿಸಿ, ಅವಳ ಅಸ್ತಿತ್ವವನ್ನೇ ನಿರಾಕರಿಸುವುದೇ? ಈ ಮೂರೂ ದಾರಿಗಳು ಅವಳ ನೈಜತೆಯನ್ನು ಮರೆಮಾಚುವ ಹುನ್ನಾರಗಳೇ ಆಗಿವೆ. ದೇವತೆಯಾದರೆ ಅವಳಿಗೆ ನೋವಿರಬಾರದು, ವಸ್ತುವಾದರೆ ಅವಳಿಗೆ ಮನಸ್ಸಿರಬಾರದು ಮತ್ತು ಅವಳೇನೂ ಅಲ್ಲವಾದರೆ ಅವಳಿಗೆ ಅಸ್ತಿತ್ವವೇ ಇರಬಾರದು! ಆದರೆ ಪಿ. ಲಂಕೇಶರ ‘ಅವ್ವ’ ಕವಿತೆಯು ಈ ಹಳಸಲು ಮಾರ್ಗಗಳನ್ನು ತಿರಸ್ಕರಿಸಿ, ಸ್ತ್ರೀಯೊಬ್ಬಳ ನೈಜ ಬದುಕನ್ನು ಕಟ್ಟಿಕೊಡುವ ಹೊಸ ಹಾದಿಯನ್ನು ತುಳಿಯುತ್ತದೆ.
ಇಲ್ಲಿ ಅವ್ವ ಸಾವಿತ್ರಿಯಲ್ಲ, ಜಾನಕಿಯಲ್ಲ; ಆಕೆ ಕರಡಿ, ಆಕೆ ನಾಯಿ, ಆಕೆ ಕೇವಲ ಒಂದು ಕಪ್ಪು ನೆಲ. ತಾಯಿಯನ್ನು ಹೀಗೆ ಪ್ರಾಣಿಗಳಿಗೆ ಹೋಲಿಸುವುದು ಕವಿಯ ನಿಷ್ಠುರತೆಯೇ ಅಥವಾ ಅಸ್ತಿತ್ವದ ಅನಿವಾರ್ಯ ಶೋಧವೇ? ‘ಅಲ್ಲ’, ‘ಇಲ್ಲ’ ಎಂಬ ನಿರಾಕರಣೆಯ ತಂತ್ರಗಳು ಹೇಗೆ ಸ್ತ್ರೀಯ ಅಸ್ತಿತ್ವವನ್ನು ಶೋಧಿಸುವ ತಾತ್ವಿಕ ಸಾಧನಗಳಾಗಿವೆ? ಎಲ್ಲಕ್ಕಿಂತ ಮುಖ್ಯವಾಗಿ, ಹೆಣ್ಣೊಬ್ಬಳ ಅಸ್ತಿತ್ವವು ಆಕೆ ‘ಸತ್ತಳು’ ಎಂದು ಘೋಷಿಸಿದ ನಂತರವಷ್ಟೇ ಸಮಾಜಕ್ಕೆ ಗೋಚರವಾಗುವುದು ಎಂತಹ ವಿಪರ್ಯಾಸ?
ಪ್ರಸ್ತುತ ಲೇಖನವು ‘ಅವ್ವ’ ಕವಿತೆಯ ಕೇವಲ ಸಾಹಿತ್ಯಿಕ ವಿಶ್ಲೇಷಣೆಯಲ್ಲ; ಇದು ಭಾಷೆ, ವ್ಯಾಕರಣ ಮತ್ತು ಲಿಂಗ ರಾಜಕೀಯದ ನಡುವಿನ ಸಂಕೀರ್ಣ ಸಂಬಂಧಗಳ ಶೋಧ. ಮಣ್ಣಿನ ಮಗಳೊಬ್ಬಳ ಬದುಕನ್ನು ‘ಅಸ್ತಿತ್ವವಾದ’ದ ಅಡಿಯಲ್ಲಿ ಮತ್ತು ಆಧುನಿಕ ‘ಸ್ತ್ರೀವಾದಿ’ ಕನ್ನಡಿಯಲ್ಲಿ ನೋಡಿದಾಗ ದಕ್ಕುವ ಸತ್ಯಗಳೇನು? ಲಂಕೇಶರು ಕಟ್ಟಿಕೊಟ್ಟ ‘ಅವ್ವ’ ಇಂದಿನ ಕಾರ್ಪೊರೇಟ್ ಯುಗದ ಮಹಿಳೆಗೂ ಎಚ್ಚರಿಕೆಯ ಗಂಟೆಯಾಗಬಲ್ಲಳೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ‘ಅವ್ವ’ಳ ಮೌನವನ್ನು ಭೇದಿಸುವ ಪ್ರಯತ್ನವಿದು.
‘ಕಪ್ಪು ನೆಲ’: ಪವಿತ್ರೀಕರಣದ ಹಿಂದಿನ ಶೋಷಣೆ
ಕವಿತೆಯು ‘ನನ್ನವ್ವ ಫಲವತ್ತಾದ ಕಪ್ಪು ನೆಲ’ ಎಂಬ ರೂಪಕದೊಂದಿಗೆ ಆರಂಭವಾಗುತ್ತದೆ. “ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ…” ಎಂಬ ಜನಪದ ತ್ರಿಪದಿಯ ಆಶಯದಂತೆ ಇದು ಭೂಮಿ ಮತ್ತು ತಾಯಿಯನ್ನು ಸಮೀಕರಿಸುವ ಸಾಂಪ್ರದಾಯಿಕ ಕ್ರಮದಂತೆ ಕಂಡರೂ, ಲಂಕೇಶರು ಇಲ್ಲಿ ಬಳಸುವ ‘ಕಪ್ಪು ನೆಲ’ ಎಂಬುದು ಕೇವಲ ಬಣ್ಣವನ್ನಷ್ಟೇ ಸೂಚಿಸುವುದಿಲ್ಲ. ಅದು ಸುಟ್ಟು ಕಸುವಾಗುವ, ಬಿಸಿಲಿನಲ್ಲಿ ಬೆಂದು ಮಾಗಿದ, ನೋವನ್ನು ನುಂಗಿಕೊಂಡು ಅನ್ಯರಿಗಾಗಿ ಫಲ ನೀಡುವ ತ್ಯಾಗಮಯಿ ಬದುಕಿನ ಸಂಕೇತವಾಗಿದೆ. ಮೌನ ರೋದನದ ಕರಾಳ ಸ್ಥಿತಿಯಾಗಿದೆ. “ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು” ಎಂಬ ಸಾಲುಗಳಲ್ಲಿ ಕವಿ ಈ ದ್ರವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಾರೆ. ಕೃಷಿಯಲ್ಲಿ ನೆಲವನ್ನು ಸುಟ್ಟು ಹದಗೊಳಿಸುವಂತೆಯೇ, ಅವ್ವನ ದೇಹ ಮತ್ತು ಮನಸ್ಸುಗಳು ಸಂಸಾರ ತಾಪದಲ್ಲಿ ಬೆಂದು ಹಣ್ಣಾಗಿವೆ. ಇಲ್ಲಿ ಪವಿತ್ರೀಕರಣದ ಹಂಗಿಲ್ಲ; ಬದಲಿಗೆ ಬೆವರು ಮತ್ತು ಶ್ರಮದ ಘಾಟಿದೆ.
ಸಾಮಾನ್ಯವಾಗಿ ಜಾನಪದ ಪ್ರಜ್ಞೆಯು ಭೂಮಿಯನ್ನು ‘ಭೂದೇವಿ’ ಎಂದು ಪವಿತ್ರಗೊಳಿಸುತ್ತದೆ. ಆದರೆ ಲಂಕೇಶರು ಈ ಪವಿತ್ರೀಕರಣವೇ ಹೇಗೆ ಶೋಷಣೆಯ ಸಾಧನವಾಗುತ್ತದೆ ಎಂಬುದನ್ನು ಬಯಲುಮಾಡುತ್ತಾರೆ. ಸ್ತ್ರೀಯನ್ನು ದೇವತೆಯನ್ನಾಗಿ ಮಾಡುವುದು ಅವಳ ಮೇಲಿನ ಶೋಷಣೆಯನ್ನು ಮುಂದುವರಿಸಲು ಸಮಾಜ ಕಂಡುಕೊಂಡ ತಂತ್ರವಷ್ಟೇ. ಕವಿತೆಯು ಈ ದೈವೀಕರಣದ ಮುಸುಕನ್ನು ಕಿತ್ತುಹಾಕಿ, ಅವಳ ನೈಜ ಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಅವಳ ಯೌವನವು “ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ” ಎಂಬ ಪರಾವಲಂಬಿ ಸಂತೋಷದಲ್ಲಿ, ‘ಚಿಂದಿಯ ಸೀರೆ’ಯಲ್ಲಿ ಮತ್ತು ‘ಹೆಸರು ಕಾಳು, ತೊಗರಿ ಹೊಲ’ಗಳ ಉಸ್ತುವಾರಿಯಲ್ಲಿ ಕರಗಿಹೋಗಿದೆ. ಹೀಗೆ ಅವಳ ಬದುಕು ತನ್ನದಾಗದೆ, ಅನ್ಯರ ಪಾಲಿನ ಉರುವಲಾಗಿ ಉರಿಯುತ್ತದೆ.

ಸಾವು-ಕೇಂದ್ರಿತ ನುಡಿಗಟ್ಟುಗಳು: ಬದುಕುವಾಗ ಮರಣ, ಸತ್ತ ಮೇಲೆ ಅಸ್ತಿತ್ವ
ಕವಿತೆಯು ‘ಎವೆ ಮುಚ್ಚಿದಳು ತೆರೆಯದಂತೆ’, ‘ಸತ್ತಳು ಈಕೆ’, ‘ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ’ ಎಂಬ ಮೂರು ಪ್ರಮುಖ ನುಡಿಗಟ್ಟುಗಳ ಮೂಲಕ ಅವಳ ಬದುಕನ್ನು ಸಾವಿನ ಸುತ್ತಲೇ ನಿರೂಪಿಸುತ್ತದೆ. ಇವು ಕೇವಲ ಆಕಸ್ಮಿಕವಲ್ಲ; ಮೊದಲನೆಯದು ಅವಳ ಯೌವನದ ಸಮಾಧಿ, ಎರಡನೆಯದು ದೇಹದ ಭೌತಿಕ ಅಂತ್ಯ ಮತ್ತು ಮೂರನೆಯದು ಅವಳ ಅಸ್ತಿತ್ವದ ಗುರುತಿಸುವಿಕೆ. ಇಲ್ಲಿ “ತೆರೆಯದಂತೆ” ಎಂಬುದು ಕೇವಲ ಸಾವಿನ ಸೂಚನೆಯಲ್ಲ; ಅದು ಅವಳು ತನ್ನ ಸ್ವಂತಿಕೆಯನ್ನು, ಕನಸುಗಳನ್ನು ಮತ್ತು ಆಸೆ-ಆಕಾಂಕ್ಷೆಗಳನ್ನು ಸಂಸಾರಕ್ಕಾಗಿ ಶಾಶ್ವತವಾಗಿ ಮುಚ್ಚಿಟ್ಟುಕೊಂಡ ಸಂಕೇತ. ಇದು ಯೌವನದಿಂದ ಮುಪ್ಪಿಗೆ ಜಾರುವಾಗ ಸ್ತ್ರೀಯ ಮೇಲೆ ಹೇರಲಾಗುವ ‘ಸಾಮಾಜಿಕ ಮರಣ’ದ ಮುದ್ರೆಯೂ ಹೌದು. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಅಸ್ತಿತ್ವವೇ ಒಂದು ರೀತಿಯ ಮರಣ ಎಂದು ಸೂಚಿಸುವ ಕವಿತೆ, ಅಂತಿಮವಾಗಿ “ಅವಳು ಬದುಕಿದ್ದಾಗ ಸತ್ತಂತೆ ಇದ್ದಳು, ಸತ್ತ ಮೇಲೆಯೇ ನಿಜವಾಗಿ ಬದುಕಿದಳು(ಗುರುತಿಸಲ್ಪಟ್ಟಳು)” ಎಂಬ ಕಟುಸತ್ಯವನ್ನು ದರ್ಶಿಸುತ್ತದೆ.
ಹೆಸರುಗಳ ರಾಜಕೀಯ: ‘ಅವ್ವ’ ಇಂದ ‘ಇವಳು’ ವರೆಗೆ
ಕವಿತೆಯಲ್ಲಿ ಅವಳನ್ನು ಸಂಬೋಧಿಸುವ ರೀತಿಗಳು ಕೇವಲ ಪದಗಳಲ್ಲ, ಅವು ರಾಜಕೀಯ ನೆಲೆಗಳಾಗಿವೆ. ‘ಅವ್ವ’ ಎಂಬುದು ಸಂಬಂಧದ ಹೆಸರೇ ಹೊರತು ವೈಯಕ್ತಿಕ ಗುರುತಲ್ಲ. ಆದರೆ “ಸತ್ತಳು ಈಕೆ” ಎಂದಾಗ ಒಂದು ಪ್ರಮುಖ ಪರಿವರ್ತನೆ ಘಟಿಸುತ್ತದೆ. ಇಲ್ಲಿ ಕವಿ ಮಗನ ಸ್ಥಾನದ ಮಮಕಾರದಿಂದ ದೂರ ಸರಿದು, ಅವಳನ್ನು ಒಬ್ಬ ಸ್ವತಂತ್ರ ವ್ಯಕ್ತಿಯಾಗಿ ವಿಮರ್ಶಾತ್ಮಕವಾಗಿ ನೋಡಲು ಆರಂಭಿಸುತ್ತಾನೆ. ‘ಈಕೆ’ ಎಂಬುದು ಗೌರವದ ಮತ್ತು ನಿರ್ದಿಷ್ಟತೆಯ ಸಂಕೇತವಾದರೆ, ನಂತರ ಬರುವ ‘ಇವಳು’ ಎಂಬುದು ಭಾವನಾತ್ಮಕ ನೈಕಟ್ಯವನ್ನು ಸೂಚಿಸುತ್ತದೆ. ನಡುವೆ ಬರುವ ‘ಮುದುಕಿ’ ಎಂಬ ಪದವು ಸಮಾಜದಲ್ಲಿ ಅವಳ ಅಸ್ತಿತ್ವ ಹೇಗೆ ಮೌಲ್ಯ ಕಳೆದುಕೊಂಡು ‘ಅದೃಶ್ಯ’ವಾಗುತ್ತದೆ ಎಂಬುದರ ಸಂಕೇತ. ಕೊನೆಯಲ್ಲಿ “ಇವಳಿಗೆ ಮೆಚ್ಚುಗೆ” ಎನ್ನುವಾಗ ಎಲ್ಲಾ ಸಂಬಂಧಗಳ ಹಂಗು ಕಳಚಿ ಅವಳು ಒಬ್ಬ ವ್ಯಕ್ತಿಯಾಗಿ ನಿಲ್ಲುತ್ತಾಳೆ. ಪಿತೃಪ್ರಧಾನ ಸಮಾಜವು ಸ್ತ್ರೀಯನ್ನು ಅವಳು ‘ಇತರರಿಗೆ ಏನಾಗಿದ್ದಾಳೆ’ ಎಂಬುದರ ಮೂಲಕ ಗುರುತಿಸುತ್ತದೆಯೇ ಹೊರತು, ಅವಳು ‘ತನಗಾಗಿ ಏನಾಗಿದ್ದಾಳೆ’ ಎಂಬುದರ ಮೂಲಕವಲ್ಲ ಎಂಬ ಕಟುಸತ್ಯವನ್ನು ಈ ನಾಮಪಲ್ಲಟಗಳು ಧ್ವನಿಸುತ್ತವೆ.
ನಿರಾಕರಣೆಯ ಕಾವ್ಯಶಾಸ್ತ್ರ: ‘ಅಲ್ಲ’, ‘ಇಲ್ಲ’ಗಳ ಮೂಲಕ ಅಸ್ತಿತ್ವದ ಶೋಧ
ಕವಿತೆಯ ಎರಡನೇ ಮಜಲು “ಸತ್ತಳು ಈಕೆ” ಎಂಬ ನಿರ್ಣಾಯಕ ಘೋಷಣೆಯೊಂದಿಗೆ ತೆರೆದುಕೊಳ್ಳುತ್ತದೆ. ವಿಚಿತ್ರವೆಂದರೆ, ಅವಳು ಬದುಕಿದ್ದಾಗ ಅವಳ ಕಡೆಗೆ ಗಮನ ಹರಿಸದ ಜಗತ್ತು, ಅವಳು ಸತ್ತ ನಂತರವೇ ಅವಳ ಅಸ್ತಿತ್ವದ ಪರಾಮರ್ಶೆಗೆ ತೊಡಗುತ್ತದೆ. ಇಲ್ಲಿ ಪ್ರತಿ ಸಾಲಿನ ಅಂತ್ಯದಲ್ಲಿ ಬರುವ ‘ಅಲ್ಲ’, ‘ಇಲ್ಲ’ ಎಂಬ ನಿರಾಕರಣೆಗಳು ಕೇವಲ ಪ್ರಾಸದ ಅಥವಾ ಛಂದಸ್ಸಿನ ಪುನರಾವರ್ತನೆಯಲ್ಲ; ಬದಲಿಗೆ ಅದೊಂದು ವ್ಯವಸ್ಥಿತವಾದ ‘ಛಿದ್ರೀಕರಣ’(Deconstruction) ಪ್ರಕ್ರಿಯೆ.
ಕವಿ ಮೊದಲಿಗೆ ಪತಿಭಕ್ತಿ ಮತ್ತು ಮೌನ ತ್ಯಾಗದ ಪ್ರತೀಕಗಳಾದ ‘ಸತಿ ಸಾವಿತ್ರಿ, ಜಾನಕಿ, ಉರ್ಮಿಳೆ’ಯರ ಪೌರಾಣಿಕ ಮಾದರಿಗಳನ್ನು ನಿರಾಕರಿಸುತ್ತಾರೆ. ನಂತರ, ‘ಶಾಂತ’(ಪ್ರತಿರೋಧವಿಲ್ಲದ), ‘ಶ್ವೇತ’(ಮಾನವ ಸಹಜತೆಯಿಲ್ಲದ ಪವಿತ್ರತೆ) ಮತ್ತು ‘ಗಂಭೀರೆ’(ಜೀವಂತಿಕೆಯಿಲ್ಲದ) ಎಂಬ ಐತಿಹಾಸಿಕ ಪಡಿಯಚ್ಚುಗಳನ್ನು ಒಡೆಯುತ್ತಾರೆ. ಆಧುನಿಕತೆಯೂ ಸ್ತ್ರೀಯನ್ನು ಸ್ವತಂತ್ರ ವ್ಯಕ್ತಿಯಾಗಿ ಗುರುತಿಸಲು ವಿಫಲವಾಗಿದೆ ಎಂಬುದನ್ನು ‘ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ’ ಎಂಬ ಸಾಲುಗಳು ಸೂಚಿಸುತ್ತವೆ. ಹೀಗೆ ಅವಳು ದೇವರನ್ನು ಪೂಜಿಸದ, ಕುಂಕುಮ ಇಡದ ಕ್ರಮವು ನಾಸ್ತಿಕತೆಯಲ್ಲ; ಬದಲಿಗೆ ಅದು ಬದುಕಿನ ಕಠೋರತೆಯ ಸಂಕೇತ. ಅವಳಿಗೆ ಪೂಜೆಗೂ ಸಮಯವಿರಲಿಲ್ಲ ಎಂಬುದು ಇಲ್ಲಿನ ವ್ಯಂಗ್ಯ.
ಈ ಸರಣಿ ನಿರಾಕರಣೆಗಳು ತತ್ವಶಾಸ್ತ್ರದ ‘ಅಪೋಫಾಸಿಸ್’ ಕ್ರಮವನ್ನು ನೆನಪಿಸುತ್ತವೆ; ಅಂದರೆ ‘ಏನಲ್ಲ’ ಎಂದು ಹೇಳುವ ಮೂಲಕವೇ ‘ಏನಿದೆ’ ಎಂಬುದನ್ನು ಸ್ಥಾಪಿಸುವ ವಿಧಾನವಿದು. ಎಲ್ಲಾ ಪಿತೃಪ್ರಧಾನ ಮುಖವಾಡಗಳನ್ನು ಕಳಚಿದಾಗ ಉಳಿಯುವುದು ಅವಳ ನೈಜ, ಬೆವರಿನ ಅಸ್ತಿತ್ವ ಮಾತ್ರ. ಆದರೆ ಇಲ್ಲಿ ಒಂದು ಪ್ರಬಲ ವಿರೋಧಾಭಾಸವಿದೆ: ಈ ‘ಅಲ್ಲ’ಗಳು ಅವಳನ್ನು ಸಾಂಪ್ರದಾಯಿಕ ಬಂಧನಗಳಿಂದ ಮುಕ್ತಗೊಳಿಸಿದರೂ, ಅದೇ ಸಮಯದಲ್ಲಿ ಅವಳ ಜೀವನದ ದರಿದ್ರತೆಯನ್ನೂ ಬಯಲುಮಾಡುತ್ತವೆ. ಅವಳು ಸಾವಿತ್ರಿಯಲ್ಲದ ಕಾರಣ ಆ ಗೌರವವಿಲ್ಲ; ಪೂಜಿಸದ ಕಾರಣ ಆ ಸಾಂತ್ವನವಿಲ್ಲ. ಹೀಗೆ, ಈ ನಿರಾಕರಣೆಗಳು ಏಕಕಾಲಕ್ಕೆ ಅವಳ ವಿಮೋಚನೆ ಮತ್ತು ಅವಳ ದುರಂತ ಎರಡನ್ನೂ ಧ್ವನಿಸುತ್ತವೆ. ಅವಳ ಆ ಮುಕ್ತಿಯ ಬೆಲೆ, ಅವಳ ಸಂಪೂರ್ಣ ಜೀವನವೇ ಆಗಿದೆ.
ಪ್ರಾಣಿ ಹೋಲಿಕೆಗಳು: ಆದರ್ಶೀಕರಣವೇ ಅಮಾನವೀಕರಣ
ಸಾಂಪ್ರದಾಯಿಕ ಕಾವ್ಯವು ಸ್ತ್ರೀಯನ್ನು ಹೂವು, ಚಂದ್ರ, ಹಂಸಗಳಂತಹ ಸೌಂದರ್ಯ ಮತ್ತು ಕೋಮಲತೆಯ ಸಂಕೇತಗಳಿಗೆ ಹೋಲಿಸಿದರೆ, ಲಂಕೇಶರು ‘ಬನದ ಕರಡಿ’, ‘ನೊಂದ ನಾಯಿ’, ‘ಕೋತಿ’ಗಳಂತಹ ಒರಟು ಪ್ರತಿಮೆಗಳನ್ನು ಬಳಸುತ್ತಾರೆ. ಇದು ಕೇವಲ ಓದುಗನನ್ನು ಬೆಚ್ಚಿಬೀಳಿಸುವ ತಂತ್ರವಲ್ಲ; ಬದಲಿಗೆ ಪಿತೃಪ್ರಧಾನ ವ್ಯವಸ್ಥೆಯು ಸ್ತ್ರೀಯನ್ನು ‘ದೇವತೆ’(ಪೂಜ್ಯ) ಅಥವಾ ‘ವಸ್ತು’(ಭೋಗ್ಯ) ಎಂದು ವಿಭಜಿಸುವ ಕ್ರಮಕ್ಕೆ ನೀಡಿದ ತಾತ್ವಿಕ ಏಟು. ಈ ಅವ್ವ ದೇವತೆಯೂ ಅಲ್ಲ, ವಸ್ತುವೂ ಅಲ್ಲ; ಅವಳು ಬದುಕಿಗಾಗಿ ಸೆಣಸಾಡುವ ಜೀವ.
ಕರಡಿಯಲ್ಲಿ ಬಲ ಮತ್ತು ಪೋಷಣೆ ಇದ್ದರೂ ಅದು ಕಾಡುಪ್ರಾಣಿಯಾದ್ದರಿಂದ ಅದರ ಶ್ರಮಕ್ಕೆ ಮನ್ನಣೆ ಇಲ್ಲ; ನಾಯಿಯಲ್ಲಿ ನಿಷ್ಠೆ ಇದ್ದರೂ ಅದಕ್ಕೆ ಅವಮಾನವೇ ಗತಿ; ಕೋತಿಯಲ್ಲಿ ಬದುಕುಳಿಯುವ ಚಾಲಾಕಿತನವಿದ್ದರೂ ಸಮಾಜಕ್ಕೆ ಅದು ಹಾಸ್ಯಾಸ್ಪದ. ಕವಿ ಈ ಪ್ರಾಣಿಗಳನ್ನು ಹೋಲಿಸುವ ಮೂಲಕ ಒಂದು ಗಂಭೀರ ಪ್ರಶ್ನೆಯನ್ನು ಎತ್ತುತ್ತಾರೆ: ಸ್ತ್ರೀಯನ್ನು ಆದರ್ಶೀಕರಿಸಿ ದೇವತೆಯನ್ನಾಗಿ ಮಾಡುವ ಸಾಂಪ್ರದಾಯಿಕ ಕ್ರಮವು, ವಾಸ್ತವದಲ್ಲಿ ಅವಳ ನೋವು, ಹೋರಾಟ ಮತ್ತು ಶ್ರಮವನ್ನು ಮರೆಮಾಚುವ ಮೂಲಕ ಅವಳನ್ನು ‘ಅಮಾನವೀಕರಣ’(Dehumanization) ಮಾಡುತ್ತಿಲ್ಲವೇ? ವಿಪರ್ಯಾಸವೆಂದರೆ, ಲಂಕೇಶರ ಈ ಪ್ರಾಣಿ ಹೋಲಿಕೆಗಳೇ ಅವಳನ್ನು ರಕ್ತಮಾಂಸದ ನೈಜ ‘ಮಾನವ’ಳನ್ನಾಗಿ ಚಿತ್ರಿಸುತ್ತವೆ.
ಇಲ್ಲಿ ಕವಿಯ ‘ಪುರುಷತನದ ಪ್ರಜ್ಞಾಪೂರ್ವಕ ಸ್ಥಿತಿ’ಯೂ ಮುಖ್ಯವಾಗುತ್ತದೆ. ಆರಂಭದಲ್ಲಿ ‘ನನ್ನವ್ವ’ ಎಂದು ಮಗನಾಗಿ ಮಾತು ಶುರುಮಾಡುವ ಕವಿ, “ಸತ್ತಳು ಈಕೆ” ಎನ್ನುವಾಗ ಸಂಬಂಧದ ಹಂಗಿನಿಂದ ಕಳಚಿಕೊಂಡು ಒಬ್ಬ ಸಾಕ್ಷಿಪ್ರಜ್ಞೆಯಾಗಿ ನಿಲ್ಲುತ್ತಾರೆ. ಈ ನಿರ್ಲಿಪ್ತತೆಯೇ(Detachment) ಅವಳನ್ನು ಆದರ್ಶದ ಸುಳ್ಳುಗಳಿಂದ ಮುಕ್ತಗೊಳಿಸಿ, ಅವಳ ನೈಜ ಬದುಕನ್ನು ‘ಇದ್ದದ್ದು ಇದ್ದಹಾಗೆ’ ನೋಡಲು ಸಾಧ್ಯವಾಗಿಸಿದೆ.
ಕ್ರಿಯಾಪದಗಳ ಕಾರುಬಾರು: ವ್ಯಾಕರಣವೇ ತತ್ವಶಾಸ್ತ್ರ
ಈ ಕವಿತೆಯ ವ್ಯಾಕರಣವೇ ಅದರ ತತ್ವಶಾಸ್ತ್ರವೂ ಹೌದು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಗುಣವಾಚಕಗಳ ಅನುಪಸ್ಥಿತಿ ಮತ್ತು ಕ್ರಿಯಾಪದಗಳ ಅಬ್ಬರ. ಅವ್ವ ‘ಸುಂದರಿ’, ‘ಸುಶೀಲೆ’ ಅಥವಾ ‘ಪತಿವ್ರತೆ’ ಎಂಬ ಗುಣವಾಚಕಗಳಿಂದ ಗುರುತಿಸಿಕೊಳ್ಳುವುದಿಲ್ಲ; ಬದಲಿಗೆ ‘ಉತ್ತು’, ‘ಮೆಚ್ಚಿಸಿ’, ‘ಗೆದ್ದು’, ‘ಸಾಕಿದಳು’, ‘ಗುದ್ದಾಡಿದಳು’ ಎಂಬ ಕ್ರಿಯೆಗಳ ಮೂಲಕವೇ ಅನಾವರಣಗೊಳ್ಳುತ್ತಾಳೆ. ಇದು ಅಸ್ತಿತ್ವವಾದದ ‘ಅಸ್ತಿತ್ವವು ಸಾರಕ್ಕಿಂತ ಮುಂಚೆ’(Existence precedes Essence) ಎಂಬ ಮೂಲ ತತ್ವವನ್ನು ಪ್ರತಿಧ್ವನಿಸುತ್ತದೆ. ಪಿತೃಪ್ರಧಾನ ವ್ಯವಸ್ಥೆಯು ಸ್ತ್ರೀಯನ್ನು ‘ಸತಿ’, ‘ಸಾಧ್ವಿ’ ಎಂಬ ಸ್ಥಿರ ಗುಣವಾಚಕಗಳ (Fixed Adjectives)ಮೂಲಕ ಬಂಧಿಸಲು ನೋಡಿದರೆ, ಲಂಕೇಶರು ಆಕೆಯನ್ನು ಕ್ರಿಯಾಪದಗಳ ಮೂಲಕ ವಿವರಿಸಿ ಆಕೆಗೆ ಚಲನಶೀಲತೆಯನ್ನು ನೀಡುತ್ತಾರೆ.
ಕವಿತೆಯಲ್ಲಿ ಬಳಕೆಯಾದ ಕ್ರಿಯಾಪದಗಳು ಕೇವಲ ಕೆಲಸವನ್ನಷ್ಟೇ ಅಲ್ಲ, ಸಾಮಾಜಿಕ ವ್ಯಂಗ್ಯವನ್ನೂ ಸೂಚಿಸುತ್ತವೆ. “ತೋಳಬಂದಿಯ ಗೆದ್ದು”, “ಗಂಡನ್ನ ಸಾಕಿದಳು” ಎಂಬ ಪ್ರಯೋಗಗಳು ಗಂಡನೇ ಮನೆಯ ಒಡೆಯ ಮತ್ತು ಪೋಷಕ ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಅಣಕಿಸುತ್ತವೆ. ಅವಳು ಕೇವಲ ಮೌನ ಸಹನೆಯ ಮೂರ್ತಿಯಲ್ಲ; “ಬೈದು, ಗೊಣಗಿ, ಗುದ್ದಾಡಿದಳು” ಎಂಬ ಸಾಲುಗಳು ಅವಳ ಅಸಹಾಯಕತೆಯ ನಡುವೆಯೂ ಇದ್ದ ಪ್ರತಿರೋಧವನ್ನು ದಾಖಲಿಸುತ್ತವೆ. ಇಲ್ಲಿ “ಉರಿದೆದ್ದಾಳು” ಎಂಬ ಪದವಿದ್ದರೂ, ಅದು ತನಗಾಗಿ ಅಲ್ಲ, ಗಂಡ-ಮಕ್ಕಳಿಗಾಗಿ ಎಂಬುದು ಸ್ತ್ರೀ ಬದುಕಿನ ದುರಂತ ವಾಸ್ತವ.
ಅವಳ ಬದುಕು ‘ಕಾಳುಕಡ್ಡಿ, ಅನ್ನ, ರೊಟ್ಟಿ’ಯಂತಹ ಅತ್ಯಂತ ಮೂಲಭೂತ ಅಗತ್ಯಗಳ ಪೂರೈಕೆಗೇ ಮೀಸಲಾಗಿತ್ತು. ಅಲ್ಲಿ ಯಾವುದೇ ಆಧ್ಯಾತ್ಮಿಕ ಮೋಕ್ಷದ ಹಂಬಲವಿರಲಿಲ್ಲ. ಆದರೆ “ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ” ಎಂಬ ಒಂದೇ ಒಂದು ಆಸೆ, ‘ಘನತೆ’ಯೇ (Dignity) ಅವಳ ಬದುಕಿನ ಏಕೈಕ ಐಷಾರಾಮಿಯಾಗಿತ್ತು ಎಂಬುದನ್ನು ಸೂಚಿಸುತ್ತದೆ. ಈ ಕ್ರಿಯಾಪದಗಳ ಬಹುಸಂಖ್ಯೆಯು ಅವಳ ಬದುಕನ್ನು ‘ಇರುವಿಕೆ’((Being) ಗಿಂತ ‘ಮಾಡುವಿಕೆ’ (Doing) ಆಗಿ ಪ್ರಸ್ತುತಪಡಿಸುತ್ತದೆ. ಸ್ತ್ರೀಯನ್ನು ಸಿದ್ಧ ಮಾದರಿಗಳಲ್ಲಿ ಬಂಧಿಸುವ ಪದ್ಧತಿಗೆ ವಿರುದ್ಧವಾಗಿ, ಕವಿ ಅವಳನ್ನು ಅವಳ ಶ್ರಮ ಮತ್ತು ಹೋರಾಟಗಳ ಮೂಲಕವೇ ಮರುಸೃಷ್ಟಿಸುತ್ತಾರೆ.
ಸಾವಿನಲ್ಲಿ ಮಾತ್ರ ಅಸ್ತಿತ್ವ: ಗುರುತಿಸುವಿಕೆಯ ದುರಂತ
ಕವಿತೆಯ ಅಂತಿಮ ಸಾಲುಗಳಾದ “ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು… ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ” ಎಂಬ ಭಾಗವು ಇಡೀ ಕವಿತೆಯ ಭಾವನಾತ್ಮಕ ಪರಾಕಾಷ್ಠೆಯಾಗಿದೆ. ಇಲ್ಲಿಯವರೆಗೂ ಅವಳ ಬದುಕನ್ನು ಒಬ್ಬ ಸಾಕ್ಷಿಯಂತೆ ವಿಶ್ಲೇಷಿಸುತ್ತಿದ್ದ ಕವಿ, ಇಲ್ಲಿ ಮೊದಲ ಬಾರಿಗೆ ಕರಗಿ ಕೃತಜ್ಞನಾಗುತ್ತಾನೆ. ಆದರೆ ಈ ಕೃತಜ್ಞತೆ ಮತ್ತು ಮೆಚ್ಚುಗೆಗಳು ವ್ಯಕ್ತವಾಗುವುದು ಅವಳು ‘ಸತ್ತಳು’ ಎಂದು ಘೋಷಿಸಿದ ನಂತರವೇ ಎಂಬುದು ಇಲ್ಲಿನ ಕಟು ಸತ್ಯ. ಅವಳು ಬದುಕಿದ್ದಾಗ, ನೊಂದು ದುಡಿಯುತ್ತಿದ್ದಾಗ ಅವಳನ್ನು ಯಾರೂ ಗಮನಿಸಲಿಲ್ಲ. ಅವಳು ಬದುಕಿದ್ದಾಗ ‘ಅದೃಶ್ಯ’ಳಾಗಿದ್ದಳು, ಸತ್ತ ನಂತರವಷ್ಟೇ ‘ದೃಶ್ಯ’ಳಾಗುತ್ತಾಳೆ. ಇದು ಪಿತೃಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಅಸ್ತಿತ್ವದ ಬರ್ಬರ ದುರಂತ.

ಇಲ್ಲಿ ಕೃತಜ್ಞತೆ ಇರುವುದು ಕೇವಲ ‘ಹೆತ್ತದ್ದಕ್ಕೆ’(ಕ್ಷಣಿಕ ಕ್ರಿಯೆ) ಮಾತ್ರವಲ್ಲ, ‘ಸಾಕಿದ್ದಕ್ಕೆ’(ಜೀವಮಾನದ ಶ್ರಮ) ಕೂಡ ಹೌದು. ಅವಳು ಸಾಕಿದ್ದು ಮಕ್ಕಳನ್ನು ಮಾತ್ರವಲ್ಲ, ಗಂಡನನ್ನೂ ಮತ್ತು ಪರೋಕ್ಷವಾಗಿ ಇಡೀ ಸಮಾಜವನ್ನು. ಕವಿತೆಯ ಅತ್ಯಂತ ಸುಂದರ ಹಾಗೂ ವಿಷಾದನೀಯ ರೂಪಕವಿರುವುದು ಅವಳ ನಿರ್ಗಮನದಲ್ಲಿ; “ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದು”. ಇಲ್ಲಿ ಸಾವು ಭಯಾನಕವೂ ಅಲ್ಲ, ಅಸಾಧಾರಣವೂ ಅಲ್ಲ; ಅದೊಂದು ದೈನಂದಿನ ಸಹಜ ಕೆಲಸದಂತೆ ಚಿತ್ರಿತವಾಗಿದೆ. ಅವಳು ಬದುಕಿನುದ್ದಕ್ಕೂ ಮನೆಯಿಂದ ಹೊಲಕ್ಕೆ ದುಡಿಯಲು ಹೋಗುತ್ತಿದ್ದಂತೆಯೇ, ಸಾವಿನೆಡೆಗೂ ಅದೇ ನಿರ್ಲಿಪ್ತತೆಯಿಂದ, ಯಾವುದೇ ಪ್ರತಿರೋಧವಿಲ್ಲದೆ ನಡೆದಳು. ‘ಕಪ್ಪು ನೆಲ’ದಿಂದ ಆರಂಭವಾದ ಕವಿತೆ ‘ಮಣ್ಣಲ್ಲಿ ಬದುಕಿ’ ಎಂದು ಅಂತ್ಯವಾಗುವ ಮೂಲಕ ಒಂದು ವೃತ್ತಾಕಾರವನ್ನು ಪೂರ್ಣಗೊಳಿಸುತ್ತದೆ. ಅವಳು ಮಣ್ಣಿನಂತೆಯೇ ಇದ್ದಳು, ಮಣ್ಣಿನಂತೆಯೇ ದುಡಿದಳು, ಅಂತಿಮವಾಗಿ ಮಣ್ಣೇ ಆದಳು.
ಭಾಷೆಯ ಮೂಲಕ ಮುಕ್ತಿ: ಅಪೂರ್ಣವಾದರೂ ಅನಿವಾರ್ಯ ಪ್ರಯತ್ನ
ಪಿ.ಲಂಕೇಶರ ‘ಅವ್ವ’ ಕವಿತೆಯು ಕೇವಲ ಜೀವನ ಚರಿತ್ರೆಯಾಗದೆ, ಭಾಷೆಯ ಮೂಲಕ ಸ್ತ್ರೀ ಅಸ್ತಿತ್ವದ ಮರುಶೋಧನೆಯಾಗಿ ನಿಲ್ಲುತ್ತದೆ. ಈ ಕವಿತೆಯು ಪ್ರಮುಖವಾಗಿ ಮೂರು ತಾತ್ವಿಕ ಸಾಧನೆಗಳನ್ನು ಮಾಡುತ್ತದೆ: ಮೊದಲನೆಯದಾಗಿ, ‘ಅವ್ವ’, ‘ಹೆಂಡತಿ’ ಎಂಬ ಸಂಬಂಧವಾಚಕಗಳು ಅವಳನ್ನು ‘ಇತರರಿಗಾಗಿ’ ವ್ಯಾಖ್ಯಾನಿಸುತ್ತವೆಯೇ ಹೊರತು ‘ತನಿಗಾಗಿ’ ಅಲ್ಲ ಎಂಬುದನ್ನು ತೋರಿಸುತ್ತದೆ. ಎರಡನೆಯದಾಗಿ, ‘ನಿರಾಕರಣೆ’ಯ ಮೂಲಕ ಪಿತೃಪ್ರಧಾನ ಮಾದರಿಗಳನ್ನು ಮುರಿದು, ಆ ಖಾಲಿ ಜಾಗದಲ್ಲಿ ಅವಳ ನೈಜ ಅಸ್ತಿತ್ವವನ್ನು ಸ್ಥಾಪಿಸುತ್ತದೆ. ಮೂರನೆಯದಾಗಿ, ಗುಣವಾಚಕಗಳ ಹಂಗಿಲ್ಲದೆ ಕೇವಲ ಕ್ರಿಯಾಪದಗಳ ಮೂಲಕ, ವ್ಯಕ್ತಿಯನ್ನು ‘ಸಹಜ ಗುಣ’ಗಳಿಂದಲ್ಲದೆ ‘ಜೀವನ ಪ್ರಕ್ರಿಯೆ’ಗಳಿಂದ ಅಳೆಯಬೇಕೆಂಬ ಅಸ್ತಿತ್ವವಾದಿ ನಿಲುವನ್ನು ಪ್ರತಿಪಾದಿಸುತ್ತದೆ.
ಆದರೂ, ಕವಿತೆಯು ಒಂದು ವಿಷಾದನೀಯ ವಿರೋಧಾಭಾಸವನ್ನೂ ಒಳಗೊಂಡಿದೆ. ಸ್ತ್ರೀಯ ಈ ಅದೃಶ್ಯತೆಯನ್ನು ದೃಶ್ಯವಾಗಿಸುವ ಕವಿ, ಸ್ವತಃ ಪುರುಷನಾಗಿರುವುದು ಇಲ್ಲಿನ ಇತಿಮಿತಿ. ‘ನನ್ನವ್ವ’ ಎಂದು ಆರಂಭಿಸಿ ‘ಇವಳಿಗೆ ಮೆಚ್ಚುಗೆ’ ಎಂದು ಮುಗಿಸುವವರೆಗೆ ಕವಿ ಒಬ್ಬ ವೀಕ್ಷಕನಾಗಿಯೇ ಉಳಿಯುತ್ತಾನೆ. ಇಲ್ಲಿ ಅವಳು ಮಾತನಾಡುವುದಿಲ್ಲ, ಅವಳ ಧ್ವನಿ ನಮಗೆ ಕೇಳಿಸುವುದಿಲ್ಲ; ನಮಗೆ ಕೇಳುವುದು ಕವಿಯ ವಿವರಣೆ ಮತ್ತು ವಿಶ್ಲೇಷಣೆ ಮಾತ್ರ. ಇದು ಸ್ತ್ರೀ ಅಸ್ತಿತ್ವವನ್ನು ಪ್ರತಿನಿಧಿಸುವ ಯಾವುದೇ ಪುರುಷ ಪ್ರಯತ್ನದ ಅಂತರ್ಭೂತ ಮಿತಿ. ಆದರೆ ಈ ಮಿತಿಯನ್ನು ಅರಿತುಕೊಂಡೇ ಬರೆದ ಪ್ರಾಮಾಣಿಕತೆ ಲಂಕೇಶರಲ್ಲಿದೆ.
‘ಅವ್ವ’ ಕವಿತೆಯು ಭಾಷೆಯೇ ಹೇಗೆ ರಾಜಕೀಯವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಭಾಷೆಯ ಮೂಲಕವೇ ಅವಳನ್ನು ಬಂಧಿಸಿದ ಸಮಾಜದಲ್ಲಿ, ಲಂಕೇಶರು ಅದೇ ಭಾಷೆಯ ಮೂಲಕ ಅವಳನ್ನು ಮುಕ್ತಗೊಳಿಸಲು ಯತ್ನಿಸಿದ್ದಾರೆ. ಇದೊಂದು ಅಪೂರ್ಣವಾದರೂ, ಅತ್ಯಂತ ಅನಿವಾರ್ಯವಾದ ಪ್ರಯತ್ನ. ಈ ಕವಿತೆಯು ನಮಗೆ ಆದರ್ಶದ ‘ಮಹಿಳೆ’ಯನ್ನು ನೀಡಲಾರದು; ಆದರೆ ಬೆವರು ಸುರಿಸಿ, ನೊಂದು, ಹೋರಾಡಿ, ಅಂತಿಮವಾಗಿ ಘನತೆಯಿಂದ ನಿರ್ಗಮಿಸುವ ಅಪ್ಪಟ ‘ಮನುಷ್ಯ’ಳನ್ನು ನೀಡುತ್ತದೆ. ತಡವಾಗಿಯಾದರೂ ದೊರಕುವ ಆ ಗುರುತಿಸುವಿಕೆಯಲ್ಲಿಯೇ ಒಂದು ಸಣ್ಣ ವಿಮೋಚನೆಯ ಸಾಧ್ಯತೆ ಅಡಗಿದೆ.
ವರ್ತಮಾನದಲ್ಲಿ ‘ಅವ್ವ’: ಸ್ತ್ರೀ ದೃಷ್ಟಿಕೋನದ ಓದು
ಲಂಕೇಶರು ಈ ಕವಿತೆಯನ್ನು ಬರೆದು ದಶಕಗಳೇ ಕಳೆದಿವೆ. 2026ರ ಈ ಕಾಲಘಟ್ಟದಲ್ಲಿ ನಿಂತು, ಆಧುನಿಕ ಸ್ತ್ರೀವಾದಿ ದೃಷ್ಟಿಕೋನದಲ್ಲಿ ‘ಅವ್ವ’ನನ್ನು ನೋಡಿದಾಗ, ಕವಿತೆಯು ಕೆಲವು ಹೊಸ ಸಂಕೀರ್ಣತೆಗಳನ್ನು ಹುಟ್ಟುಹಾಕುತ್ತದೆ. ಇಂದಿನ ಸ್ತ್ರೀಯರು ‘ಅವ್ವ’ನ ಮೌನವನ್ನು ಲಂಕೇಶರಂತೆ ‘ಘನತೆ’ ಎಂದು ಕರೆಯಲು ಹಿಂಜರಿಯಬಹುದು. ಬದಲಿಗೆ, ಆ ಮೌನವನ್ನು ಪಿತೃಪ್ರಧಾನ ವ್ಯವಸ್ಥೆಯು ಹೇರಿದ ‘ಅನಿವಾರ್ಯತೆ’ ಅಥವಾ ‘ಬಾಧ್ಯತೆ’ ಎಂದು ಗುರುತಿಸುತ್ತಾರೆ. ಲಂಕೇಶರು ಅವಳ ಸಾವು ‘ಸಹಜ’ವಾಗಿತ್ತು ಎಂದು ಭಾವಿಸಿ, ಅವಳ “ತಣ್ಣಗೆ ಮಾತಾಡುತ್ತಲೇ ಹೊರಟುಹೋದ” ರೀತಿಯನ್ನು ಒಂದು ಬಗೆಯ ತಾತ್ವಿಕ ಎತ್ತರಕ್ಕೆ ಏರಿಸುತ್ತಾರೆ. ಆದರೆ, ಸ್ತ್ರೀ ದೃಷ್ಟಿಕೋನವು ಅದನ್ನು ‘ವ್ಯವಸ್ಥಿತವಾದ ಸವಕಳಿ’ (Systemic degradation) ಎಂದು ಕರೆಯಬಹುದು. “ಅವಳು ತಣ್ಣಗೆ ಹೋಗಬಾರದಿತ್ತು, ಅವಳು ಧ್ವನಿ ಎತ್ತಬೇಕಿತ್ತು, ತನ್ನ ಪಾಲನ್ನು ಕೇಳಬೇಕಿತ್ತು” ಎಂಬ ವಾದವು ಇಂದಿನ ಪ್ರಜ್ಞೆಯ ಪ್ರತೀಕವಾಗಿದೆ.
ವರ್ತಮಾನದ ಮಹಿಳೆ ಹೊಲದಿಂದ ಕಾರ್ಪೊರೇಟ್ ಜಗತ್ತಿಗೆ ಬಂದಿರಬಹುದು; ಆದರೆ ‘ಅವ್ವ’ ಅನುಭವಿಸಿದ ‘ಎರಡು ಪಾಳಿಯ ದುಡಿಮೆ’ (Double Burden) ಇಂದಿಗೂ ರೂಪಾಂತರಗೊಂಡು ಮುಂದುವರಿದಿದೆ. ಅಂದು ಅವ್ವ ಗಂಡನನ್ನು, ಮಕ್ಕಳನ್ನು ಸಾಕಿ, ಹೊಲವನ್ನೂ ಉತ್ತು ಮೌನವಾಗಿದ್ದಳು. ಇಂದು ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ, ‘ಮನೆಗೆಲಸ’ ಮತ್ತು ‘ಸಂಸಾರ ನಿರ್ವಹಣೆ’ ಎಂಬ ಅಗೋಚರ ಶ್ರಮ (Unpaid Care Work) ಇಂದಿಗೂ ಅವಳ ಹೆಗಲ ಮೇಲೆಯೇ ಇದೆ. ಅಂದು ‘ಅವ್ವ’ನಿಗೆ ಹೆಸರಿರಲಿಲ್ಲ, ಇಂದು ಮಹಿಳೆಗೆ ಹೆಸರಿದೆ, ಹುದ್ದೆಯಿದೆ; ಆದರೆ ಅಸ್ತಿತ್ವದ ಹೋರಾಟದ ಸ್ವರೂಪ ಬದಲಾಗಿದೆಯೇ ಹೊರತು, ಅದರ ಮೂಲಭೂತ ತೀವ್ರತೆಯಲ್ಲ.
ಈ ಹಿನ್ನೆಲೆಯಲ್ಲಿ, ಲಂಕೇಶರ ‘ಅವ್ವ’ ಇಂದಿನ ಸ್ತ್ರೀಗೆ ಒಂದು ಎಚ್ಚರಿಕೆಯ ಗಂಟೆಯೂ ಹೌದು. ತನ್ನತನವನ್ನು ಸಂಪೂರ್ಣವಾಗಿ ಕಳೆದುಕೊಂಡು, “ಸುಟ್ಟಷ್ಟು ಕಸುವು” ಎನ್ನುತ್ತಾ ಕೇವಲ ಇತರರಿಗಾಗಿ ಗೊಬ್ಬರವಾಗುವ ಆ ಮಾದರಿಯನ್ನು ಇಂದಿನ ಸ್ತ್ರೀ ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸುತ್ತಾಳೆ. ಅವ್ವನ ಬಗ್ಗೆ ಕೃತಜ್ಞತೆ ಇದ್ದರೂ, ಅವ್ವನಂತಾಗುವ ಆಸೆ ಇಂದಿನ ಹೆಣ್ಣಿಗಿಲ್ಲ. ಹೀಗಾಗಿ, ಈ ಕವಿತೆ ಪುರುಷನಿಗೆ ಒಂದು ‘ಪ್ರಾಯಶ್ಚಿತ್ತ’ದ (Penance) ನಿವೇದನೆಯಾದರೆ, ಸ್ತ್ರೀಗೆ ಇದೊಂದು ‘ಎಚ್ಚರಿಕೆ’ಯ (Warning) ಪಾಠವಾಗಿದೆ.
ಸ್ತ್ರೀವಾದಿ ವಿಮರ್ಶೆಯ ದೃಷ್ಟಿಯಲ್ಲಿ ಈ ಕವಿತೆಯಲ್ಲೊಂದು ಸೂಕ್ಷ್ಮ ಕೊರತೆಯೂ ಎದ್ದು ಕಾಣುತ್ತದೆ. ಇಲ್ಲಿ ಅವ್ವನ ಶ್ರಮವಿದೆ, ಸಿಟ್ಟಿದೆ, ತ್ಯಾಗವಿದೆ; ಆದರೆ ಅವಳ ‘ಏಕಾಂತ’ವಿಲ್ಲ. ಅವಳು ಜಗತ್ತಿನ ಬಗ್ಗೆ, ತನ್ನ ಲೈಂಗಿಕತೆಯ ಬಗ್ಗೆ, ತನ್ನ ವೈಯಕ್ತಿಕ ಕನಸುಗಳ ಬಗ್ಗೆ ಏನೆಂದುಕೊಂಡಿದ್ದಳು ಎಂಬುದು ನಿಗೂಢವಾಗಿಯೇ ಉಳಿಯುತ್ತದೆ. ಅವಳು ಸನ್ನಿವೇಶಗಳಿಗೆ ‘ಪ್ರತಿಕ್ರಿಯಿಸುವವಳೇ’ (Reactor)ಹೊರತು, ಸ್ವತಂತ್ರ ‘ಚಿಂತಕಿಯಾಗಿ’ (Thinker)ಇಲ್ಲಿ ಗೋಚರಿಸುವುದಿಲ್ಲ. ಇಷ್ಟಾಗಿಯೂ, ತಲೆಮಾರುಗಳಿಂದ ಅಡುಗೆಮನೆ ಮತ್ತು ಹೊಲಗಳ ನಡುವೆ ಕಳೆದುಹೋದ ಅಸಂಖ್ಯಾತ ಮಹಿಳೆಯರ ಸಾಂಸ್ಕೃತಿಕ ದಾಖಲೆಯಾಗಿ ಮತ್ತು ತಾಯಿಯನ್ನು ದೇವತೆಯ ಪಟ್ಟದಿಂದಿಳಿಸಿ ‘ಮನುಷ್ಯ’ಳನ್ನಾಗಿ ನಿಲ್ಲಿಸಿದ ಕವಿಯ ಪ್ರಾಮಾಣಿಕ ಪ್ರಯತ್ನವಾಗಿ, ಸ್ತ್ರೀ ಸಮುದಾಯವು ಈ ಕವಿತೆಯನ್ನು ಮರುಕದೊಂದಿಗೇ ಸ್ವೀಕರಿಸುತ್ತದೆ.
ಡಾ. ರವಿ ಎಂ ಸಿದ್ಲಿಪುರ
ಇವರು ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ನಾಡಗೀತೆ ವಿವಾದ; ಬೌದ್ಧ ಪದ ಸೇರ್ಪಡೆಗೆ ಯಾಕೆ ಅಪಸ್ವರ?


