ಬೆಂಗಳೂರು, ಸೆ.18 : ಕರಾವಳಿ ಭಾಗಕ್ಕೆ ಆದ್ಯತೆ ನೀಡುವ ಸಂಬಂಧ ರಾಜ್ಯ ಸರ್ಕಾರ ಇಂದು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಿದೆ. ಕಂದಾಯ ಇಲಾಖೆಯು, ಮಂಗಳೂರು ಜಿಲ್ಲೆ ಎಂದು ಮರು ನಾಮಕರಣ ಮಾಡಲು ಕೇಂದ್ರ ಗೃಹ ಸಚಿವಾಲಯದಿಂದ ನಿರಾಕ್ಷೇಪ ಪತ್ರ ಪಡೆಯಲು ಸಚಿವ ಸಂಪುಟದ ಅನುಮೋದನೆ ಕೋರಿದೆ ಎನ್ನಲಾಗಿದೆ. ಸೆ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಗೆ ಮಂಡಿಸಲಿದ್ದು, ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದ್ದು, ಅಧಿಕೃತ ಅನುಮೋದನೆ ದೊರೆಯುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡಬೇಕು ಎಂದು 1931ರಿಂದ ಎಸ್.ಯು.ಪಣಿಯಾಡಿ ಅವರ ಕಾಲದಿಂದಲೂ ಹೋರಾಟ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಸ್ಥಳಗಳನ್ನು ಮಂಗಳೂರು ಹೆಸರಲ್ಲಿ ಕರೆಯಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆಯೂ ಮಂಗಳೂರು ಸಮಾಚಾರ, ಮಂಗಳೂರು ಎಂಬ ಹೆಸರು ಜಗಜ್ಜಾಹಿರವಾಗಿರುವಂಥ ಹೆಸರಾಗಿದೆ. ಮಂಗಳೂರು ಅನ್ನೋದು ಒಂದು ಬ್ರಾಂಡ್ ಆಗಿರುವ ಹೆಸರು. ನಾವು ಎಲ್ಲೆಲ್ಲಾ ವ್ಯಾಪಾರ ಮಾಡುತ್ತೇವೆ, ಎಲ್ಲೆಲ್ಲಾ ಇದ್ದೇವೆ, ನಾವು ಮಂಗಳೂರಿನವರು ಎಂದು ಗುರುತಿಸಿಕೊಂಡವರು ಎಂಬುದು ಆ ಭಾಘದ ಜನರ ಅಭಿಪ್ರಾಯ.
ಮಂಗಳೂರು ಹೆಸರಿಡಲು ಒತ್ತಾಯ
ಸೌತ್ ಕೆನರಾ ಎಂದು ಬ್ರಿಟಿಷರು ಉಲ್ಲೇಖ ಮಾಡುತ್ತಿದ್ದದ್ದು, ಬಳಿಕ ದಕ್ಷಿಣ ಕನ್ನಡ ಎಂದು ಆಗಿದೆ. ಮಂಗಳೂರು ಅನ್ನೋದು ತಾಯಿ ಮಂಗಳಾಂಬಿಕೆಯಿಂದ ಸೃಷ್ಟಿಯಾದ ನಗರ. ಈ ತುಳುನಾಡಿಗೆ ಮಂಗಳೂರು ಅಂತ ಆದರೆ, ಜಾಗತಿಕಮಟ್ಟದಲ್ಲಿ ಬ್ರಾಂಡ್ ಬೆಂಗಳೂರು ಮಾಡಲು ಸಹಕಾರಿಯಾಗಲಿದೆ. ಉಡುಪಿಗೆ ಉಡುಪಿ ಜಿಲ್ಲೆ, ಚಿಕ್ಕಮಗಳೂರಿಗೆ ಚಿಕ್ಕಮಗಳೂರು ಜಿಲ್ಲೆ, ಹಾಸನಕ್ಕೆ ಹಾಸನ ಜಿಲ್ಲೆ ಅಂತ ಇದೆ. ಆದರೆ ಮಂಗಳೂರಿಗೆ ದಕ್ಷಿಣ ಕನ್ನಡ ಅಂತ ಇದೆ. ಬ್ರಿಟಿಷರು, ಪೋರ್ಚುಗೀಸರು ಬಿಟ್ಟು ಹೋದ ಹೆಸರನ್ನು ಉಳಿಸಿಕೊಳ್ಳುವ ದಾಸ್ಯದ ಮಾನಸಿಕತೆ ಇರಬಾರದು. ಹೇಗೆ ರಾಮನಗರವನ್ನು ಬೆಂಗಳೂರು ದಕ್ಷಿಣ ಅಂತ ನಾಮಕರಣ ಮಾಡಿದ್ರಿ ಅದೇ ಉತ್ಸಾಹದಿಂದ ಮಂಗಳೂರು ಅಂತ ಮರುನಾಮಕರಣ ಮಾಡಿ ಎಂಬ ಒತ್ತಾಯವಿತ್ತು.
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ
ಕಲಬುರಗಿ ಹಾಗೂ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಚುನಾಯಿತ ಪ್ರತಿನಿಧಿಗಳು ಕರಾವಳಿ ಭಾಗದಲ್ಲೂ ಸಚಿವ ಸಂಪುಟ ಸಭೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಬೇಡಿಕೆಯ ಹಿನ್ನೆಲೆಯಲ್ಲಿ ಇದೀಗ ಮಂಗಳೂರಿನಲ್ಲಿ ಸಭೆ ನಡೆಯುತ್ತಿದೆ.
ಕರಾವಳಿಯಲ್ಲಿ ಆಯೋಜಿಸಲಾಗುತ್ತಿರುವ ರಾಜ್ಯ ಸಚಿವ ಸಂಪುಟ ಸಭೆಯಯಲ್ಲಿ ಕರಾವಳಿ ಜಿಲ್ಲೆಗಳ ಆರ್ಥಿಕತೆ, ಮೀನುಗಾರಿಕೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ ಹಾಗೂ ಸಂಸ್ಕೃತಿಯ ರಕ್ಷಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 5,000 ಕೋಟಿ ರೂ. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸುವಂತೆ ಕರಾವಳಿ ಭಾಗದ ಶಾಸಕರುಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ. ಶುಕ್ರವಾರ ನಡೆಯುವ ಸಂಪುಟದಲ್ಲಿ ಕರಾವಳಿಗೆ ವಿಶೇಷ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅಲ್ಲಿನ ಜನ ಕಾತರರಾಗಿದ್ದಾರೆ.
ಕರಾವಳಿ, ಮಲೆನಾಡಿಗೆ ಹೊಸ ರೂಪ: ಸಿಎಂ
ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಹೊಸ ರೂಪ ನೀಡುವ ಮೂಲಕ ಇಲ್ಲಿನ ಮಾನವ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗಕ್ಕೆ 340 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಬೇಕು. ಕರಾವಳಿ ಹಾಗೂ ಮಲೆನಾಡಿನಲ್ಲಿ ವಲಸೆ ಹೋಗುವುದನ್ನು ತಡೆಯುವಂತಹ ಅವಕಾಶಗಳನ್ನು ಸೃಷ್ಟಿಸಬೇಕು ಎಂದರು.
ಕರ್ನಾಟಕದಲ್ಲೇ ಕರಾವಳಿ–ಮಲೆನಾಡು ಭಾಗದಲ್ಲಿ ಹೆಚ್ಚು ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಪ್ರತಿಭಾವಂತ ಮಾನವ ಸಂಪನ್ಮೂಲವಿದೆ. ಈ ಮಾನವ ಸಂಪತ್ತಿಗೆ ಸ್ಥಳೀಯವಾಗಿಯೇ ಅವಕಾಶ ಮತ್ತು ಶಕ್ತಿ ತುಂಬುವ ಅಗತ್ಯವಿದೆ. ಈ ನಾಡು ಯಾವುದಕ್ಕೂ ಕಡಿಮೆಯಿಲ್ಲ ಎಂದು ಹೇಳಿದರು.
30–40 ವರ್ಷಗಳ ಬೇಡಿಕೆಗಳತ್ತ ಸರ್ಕಾರದ ಗಮನ
ಕರಾವಳಿ ಭಾಗದ ಜನರು ಕಳೆದ 30–40 ವರ್ಷಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು, ಪಕ್ಷದವರು ಸೇರಿದಂತೆ ಬಿಜೆಪಿ ಶಾಸಕರು ಹಾಗೂ ಸಂಸದರೂ ತಮ್ಮ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ತಿಳಿಸಿದ್ದಾರೆ. “ನಾವು ಕೈಹಿಡಿಯದಿದ್ದರೆ ಇನ್ನಾರು ಕೈಹಿಡಿಯುತ್ತಾರೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರ ಹಲವು ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡಿದ್ದೇನೆ” ಎಂದು ಹೇಳಿದರು.
ಈ ಎಲ್ಲ ವಿಚಾರಗಳ ಕುರಿತು ಶುಕ್ರವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸರ್ಕಾರ ಕೈಗೊಳ್ಳುವ ತೀರ್ಮಾನಗಳನ್ನು ಬಳಿಕ ತಿಳಿಸಲಾಗುವುದು ಎಂದರು.

