ದೆಹಲಿ: ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಂಭೀರ ಭದ್ರತಾ ಲೋಪವೊಂದು ವರದಿಯಾಗಿದ್ದು, ಅಗತ್ಯವಾದ ವಲಸೆ (Immigration) ತಪಾಸಣೆಯನ್ನು ಪೂರ್ಣಗೊಳಿಸದೆ ಮೂವರು ಇಟಲಿ ಪ್ರಜೆಗಳು ಅಂತರರಾಷ್ಟ್ರೀಯ ವಿಮಾನವನ್ನೇರಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯವು ಏರ್ ಇಂಡಿಯಾಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಅಮೃತಸರದಿಂದ ದೆಹಲಿ ಮಾರ್ಗವಾಗಿ ಜರ್ಮನಿಯ ಮ್ಯೂನಿಕ್‌ಗೆ ತೆರಳಬೇಕಿದ್ದ ಈ ಪ್ರಯಾಣಿಕರಿಗೆ, ಅಮೃತಸರ ವಿಮಾನ ನಿಲ್ದಾಣದಲ್ಲೇ ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ ಹಂತಗಳ ಬೋರ್ಡಿಂಗ್ ಪಾಸ್‌ಗಳನ್ನು ನೀಡಲಾಗಿತ್ತು. ಲುಫ್ತಾನ್ಸಾ ಏರ್‌ಲೈನ್ಸ್ ಜೊತೆಗಿನ ಕೋಡ್‌ಶೇರ್ ವ್ಯವಸ್ಥೆಯಡಿಯಿದ್ದ ಈ ವಿಮಾನಯಾನದ ವೇಳೆ ಅಮೃತಸರದಲ್ಲಿ ಸಂಭವಿಸಿದ ತಪ್ಪು ದೆಹಲಿ ನಿಲ್ದಾಣದಲ್ಲೂ ಪತ್ತೆಯಾಗದಿರುವುದು ವಿಮಾನ ನಿಲ್ದಾಣದ ಭದ್ರತಾ ಪ್ರೋಟೋಕಾಲ್‌ಗಳ ಮೇಲೆಯೇ ಪ್ರಶ್ನೆ ಏಳುವಂತೆ ಮಾಡಿದೆ
ಭಾರತವನ್ನು ಜಾಗತಿಕ ವಿಮಾನಯಾನ ‘ಹಬ್’ ಮಾಡುವ ಉದ್ದೇಶದಿಂದ ‘ಹಬ್-ಅಂಡ್-ಸ್ಪೋಕ್’ ಸಂಪರ್ಕ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದ್ದು, ಜುಲೈ 28ರಿಂದ ಅಮೃತಸರ ನಿಲ್ದಾಣವನ್ನೂ ಇದಕ್ಕೆ ಸೇರಿಸಲಾಗಿತ್ತು. ಇದರ ಜೊತೆಗೆ, ಸೆಪ್ಟೆಂಬರ್ 1ರಿಂದ ಬೋರ್ಡಿಂಗ್ ಪಾಸ್‌ಗಳ ಮೇಲೆ ವಲಸೆ ಅಧಿಕಾರಿಗಳು ಮುದ್ರೆ (Stamp) ಒತ್ತುವುದನ್ನು ನಿಲ್ಲಿಸಿರುವುದು ಕೂಡ ಈ ಗೊಂದಲಕ್ಕೆ ಕಾರಣವೇ ಎಂಬ ಬಗ್ಗೆ ತಪಾಸಣೆ ನಡೆಯುತ್ತಿದೆ.
2047ರ ಮಹತ್ವಾಕಾಂಕ್ಷೆಯ ಗುರಿಗೆ ಎಚ್ಚರಿಕೆ ಗಂಟೆ
2047ರ ವೇಳೆಗೆ ಭಾರತವನ್ನು ಪ್ರಮುಖ ಅಂತರರಾಷ್ಟ್ರೀಯ ವಿಮಾನಯಾನ ಕೇಂದ್ರವನ್ನಾಗಿ ರೂಪಿಸುವ ಕೇಂದ್ರ ಸರ್ಕಾರದ ಯೋಜನೆಗೆ ಇಂತಹ ಕಾರ್ಯಾಚರಣಾ ಲೋಪಗಳು ಹಿನ್ನಡೆಯನ್ನು ಉಂಟುಮಾಡಬಹುದು. ಈ ಹಿನ್ನೆಲೆಯಲ್ಲಿ, ಈ ಹಿಂದೆ ಇಥಿಯೋಪಿಯನ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡಿ ಅನುಭವವಿರುವ ಏರ್ ಇಂಡಿಯಾದ ನೂತನ ಸಿಇಒ ಟೆವೊಲ್ಡೆ ಗೆಬ್ರಿಯರಿಯಂ ಅವರ ನೇತೃತ್ವದಲ್ಲಿ ಸಿಬ್ಬಂದಿಗೆ ಸೂಕ್ತ ತರಬೇತಿ, ಸುಧಾರಿತ ಕಾರ್ಯಾಚರಣೆ ಹಾಗೂ ಕಟ್ಟುನಿಟ್ಟಿನ ತಪಾಸಣಾ ವ್ಯವಸ್ಥೆಯನ್ನು ರೂಪಿಸುವುದು ಪ್ರಸ್ತುತ ತುರ್ತು ಅಗತ್ಯವಾಗಿದೆ.
ಒಲಿವರ್ ಡಿʼಸೋಜ, ಮುಂಬೈ


