ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೋಂದಣಿ ಮಾಡಿಸಬೇಕೆಂಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಉದ್ದಟತನದ ಉತ್ತರ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, RSS ಈ ಹಿಂದೆ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂಘದ ನೋಂದಣಿಯೇ ಅದರ ಮಾನದಂಡವಲ್ಲ. ನೋಂದಣಿಯಾಗದೆ ಇದ್ದರೂ RSS ಹಿಂದೂಗಳ ರಕ್ಷಣೆಗೆ ನಿಂತಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಕುಟುಂಬದ ಹಿಂದಿನ ಸಂದರ್ಭವನ್ನು ಪ್ರಸ್ತಾಪಿಸಿದ ಸಂತೋಷ್, ರಜಾಕರ ಭೀತಿಯಿಂದ ಖರ್ಗೆ ಕುಟುಂಬ ಕಲಬುರ್ಗಿಗೆ ಓಡಿ ಬಂದಾಗ ಅವರ ರಕ್ಷಣೆಗೆ ನಿಂತಿದ್ದು ಇದೇ RSS ಎಂದು ಹೇಳಿದ್ದಾರೆ. ರಜಾಕರ ವಿರುದ್ಧ RSS ನಿಂತಿತ್ತು. ಆಗ ಪೊಲೀಸರು ಅಥವಾ ರಾಜಕಾರಣಿಗಳು ರಕ್ಷಣೆಗೆ ಬಂದಿರಲಿಲ್ಲ ಎಂದು ಟೀಕಿಸಿದ್ದಾರೆ.
ನಿಮ್ಮ ಕುಟುಂಬದ ರಕ್ಷಣೆಗೆ RSS ನಿಂತಾಗಲೂ ಸಂಘ ನೋಂದಣಿಯಾಗಿರಲಿಲ್ಲ. ಈಗಲೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಮಾಡಿಸುವುದಿಲ್ಲ ಎಂದು ಬಿ.ಎಲ್.ಸಂತೋಷ್ ಖಡಕ್ ಉತ್ತರ ನೀಡಿದ್ದಾರೆ.
RSSಗೆ ಲಗಾಮು ಹಾಕಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಮಾಡಿರುವ ಸಂತೋಷ್, ಸಂಘದ ನೋಂದಣಿ ವಿಚಾರವನ್ನು ಮುಂದಿಟ್ಟುಕೊಂಡು RSSನ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

