ಜಾರ್ಖಂಡ್ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಶಾ ಸಿಂಗ್ ಸೇರಿದಂತೆ ನಾಲ್ವರು, ಗುರುವಾರ ನಸುಕಿನ ಜಾವ ಜೆಮ್‌ಶೆಡ್‌ಪುರದಲ್ಲಿ ತಮ್ಮ ಕಾರು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಘಾತವು ಸೋನಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮರೀನ್ ಡ್ರೈವ್ ರಸ್ತೆಯಲ್ಲಿ ಸಂಭವಿಸಿದೆ. ಮೃತಪಟ್ಟ ಇತರರನ್ನು ಸಾರ್ಥಕ್ ಅಗರ್ವಾಲ್, ನಮನ್ ಗುಪ್ತಾ ಮತ್ತು ವಂಶಿಕಾ ಖಂಡೇಲ್‌ವಾಲ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಟ್ರಕ್ ಕೆಟ್ಟುಹೋಗಿದ್ದರಿಂದ ನಾಲ್ಕು ಪಥದ ರಸ್ತೆಯ ಬಲಬದಿಯಲ್ಲಿ, ಡಿವೈಡರ್ ಬಳಿ ನಿಲ್ಲಿಸಲಾಗಿತ್ತು. ವಾಹನ ನಿಂತಿರುವ ಬಗ್ಗೆ ಸೂಚಿಸಲು ಅದರ ಹಿಂಭಾಗದಲ್ಲಿ ಮರದ ಸಣ್ಣ ಕೊಂಬೆಯನ್ನು ಇರಿಸಲಾಗಿತ್ತು, ಆದರೆ ಸ್ಥಳದಲ್ಲಿ ಯಾವುದೇ ರಿಫ್ಲೆಕ್ಟರ್ ಅಥವಾ ಎಚ್ಚರಿಕೆ ಫಲಕ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಜಾರ್ಖಂಡ್ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಈ ಸಾವುಗಳು ತೀವ್ರ ಆಘಾತಕಾರಿ ಎಂದು ಬಣ್ಣಿಸಿದ ಸೊರೆನ್, ಮಗುವನ್ನು ಕಳೆದುಕೊಳ್ಳುವುದು ಯಾವುದೇ ಪೋಷಕರಿಗೆ ಸಹಿಸಲಾಗದ ನೋವು ಎಂದು ಹೇಳಿದರು.
ಬಿಜೆಪಿ ನಾಯಕ ಮತ್ತು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಕೂಡ ತ್ರಿಶಾ ಸಿಂಗ್ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಇದು ಹೃದಯವಿದ್ರಾವಕ ಘಟನೆ ಎಂದು ಹೇಳಿದ್ದಾರೆ.

