(ತಂದೆ ಪೇಪರ್ ಓದುತ್ತಾ ಕೂತಿದ್ದಾನೆ. ತಾಯಿ ಸೊಪ್ಪು ಬಿಡಿಸುತ್ತಾ ಟಿವಿ ನೋಡುತ್ತಿದ್ದಾಳೆ. ಮಗಳು ಹೋಂವರ್ಕ್ ಮಾಡುತ್ತಿದ್ದಾಳೆ. ಟಿವಿಯಲ್ಲಿ ಹಾಡು ಬರುತ್ತೆ)
ಸಿನೆಮಾ ಹಾಡು : ಅಂತಿಂತಾ ಹೆಣ್ಣು ನಾನಲ್ಲಾ, ನನ್ನಂತಾ ಹೆಣ್ಣು ಬೇರಿಲ್ಲಾ..
ತಂದೆ : ಲೇ ಇವಳೇ ಮೊದಲು ಆ ದರಿದ್ರ ಟಿವಿ ಬಂದ್ ಮಾಡೇ. ಇಂತಾ ಗಂಡಬೀರಿ ಹಾಡು ಬರೆಯೋರಿಗೂ ಹಾಡೋರಿಗೂ ತೋರಿಸೋರಿಗೂ ಸ್ವಲ್ಪಾದರೂ ಬುದ್ಧಿ ಇದೆಯಾ?
ತಾಯಿ : ಅಯ್ಯೋ ಇರಲಿ ಬಿಡ್ರಿ. ಹೆಣ್ಮಕ್ಕಳಿಗೂ ಸ್ವಲ್ಪ ಸ್ವಾತಂತ್ರ್ಯ ಇರಲಿ.
ತಂದೆ : ಸ್ವಾತಂತ್ರ್ಯ ಅಂತೆ ಸ್ವಾತಂತ್ರ್ಯ. ಇಲ್ಲಿ ನೋಡೇ ಪೇಪರಲ್ಲಿ. ಹೆಣ್ಮಕ್ಕಳ ಮ್ಯಾಲೆ ರೇಪುಗಳು, ಲವ್ ಅಂತೆ ಲವ್, ಇವರ ಪಿಂಡಾ. ಇವನ್ನೋಡೆ ಬಂಟ್ವಾಳದ ಬಸ್ಟ್ಯಾಂಡಿನಲ್ಲಿ ಹಗಲೊತ್ತೆ ಆ ಪಾಪದ ಹುಡುಗೀನ ಕತ್ತರಿಸಿ ಬಿಸಾಕಿದ್ದಾನೆ. ತೊ ಥೊ.. ಪೇಪರಲ್ಲೂ ಇದೇ ಸುದ್ದಿ, ಟೀವಿಯಲ್ಲೂ ಇಂತಾದ್ದೇ ಸುದ್ದಿ. ಹೆಂಗಸರಿಗೆ ರಕ್ಷಣೆ ಅನ್ನೋದೆ ಇಲ್ಲಾ. ಅಲ್ಲಾ ಈ ಹೆಂಗಸರು ಯಾಕೆ ಮನೆ ಬಿಟ್ಟು ಆಚೆ ಹೋಗಬೇಕು? ಯಾಕೆ ಈ ಲವ್ವು ಗಿವ್ವು ಅಂತಾ ಮಾಡಬೇಕು? ಬೆಂಕಿ ಹತ್ರ ಬೆಣ್ಣೆ ಹೋದ್ರೆ ಸುಟ್ಟು ಕರಕಲಾಗದೇ ಇದ್ದೀತಾ?
ತಾಯಿ : ಹೌದುರೀ ಹೆಣ್ಮಕ್ಕಳಿಗೆ ರಕ್ಷಣೆ ಅನ್ನೋದೇ ಇಲ್ಲಾ.. ಹಿಂಗೆ ರೇಪು ಮರ್ಡರ್ರು ಮಾಡೋರನ್ನ ಪೊಲೀಸರು ಎನ್ ಕೌಂಟರ್ ಮಾಡಿ ಸಾಯಿಸ್ಬೇಕು.
ತಂದೆ : ಅದನ್ನೇ ಎಲ್ರೂ ಹೇಳ್ತಿರೋದು. ಈ ಕೊಲೆಪಾತಕರನ್ನ ಕತ್ತರಿಸಿ ಬಿಸಾಕಬೇಕು ಅಂತಾ. ಹಿಂದೂ ಧರ್ಮದ ಮಹಿಳೆಯರಿಗೆ ರಕ್ಷಣೆ ಕೊಡುವುದು ಎಲ್ಲಾ ಹಿಂದೂಗಳ ಕರ್ತವ್ಯ.
ತಾಯಿ : ಹೌದೌದು..ಸರಿಯಾಗಿ ಹೇಳಿದ್ರಿ..
ತಂದೆ: ಮತ್ತೆ.. ಈ ಹುಡುಗೀರು ಮಿಡಿ ಮ್ಯಾಕ್ಸಿ ಅಂತಾ ಚಿಕ್ಕ ಚಿಕ್ಕ ಬಟ್ಟೆ ಹಾಕ್ಕೊಂಡು ಮೇಕಪ್ ಮಾಡ್ಕೊಂಡು ನುಲೀತಾ ಓಡಾಡ್ತಿರೋವಾಗ ಯಾವ ಗಂಡಸಿಗೆ ಆಸೆ ಆಗೋದಿಲ್ಲಾ.
ಮಗಳು : ಅದಕ್ಕೇನಿವಾಗ.. ಅದಕ್ಕೆ ರೇಪ್ ಮಾಡಬೇಕಾ? ಯಾಕೆ ಹೆಣ್ಮಕ್ಕಳಿಗೆ ತಮ್ಮ ಇಷ್ಟವಾಗಿರೋ ಬಟ್ಟೆ ಹಾಕೋಕು ಸ್ವಾತಂತ್ರ್ಯ ಇಲ್ವಾ?
ತಂದೆ : ಹೋ ಸ್ವಾತಂತ್ರ್ಯಾ? ಲೇ ಮಗಳೇ ಅದು ಸ್ವಾತಂತ್ರ್ಯ ಅಲ್ವೇ ಸ್ವೇಚ್ಛಾಚಾರ. ನಿಮ್ಮಮ್ಮನ್ನ ನೋಡೇ.. ಲಕ್ಷಣವಾಗಿ ಮೈತುಂಬಾ ಸೀರೆ ಹಾಕ್ಕೊಂಡು, ಹಣೆತುಂಬಾ ಕುಂಕುಮ ಇಟ್ಕೊಂಡು, ನೆಲಾ ನೋಡ್ಕೊಂಡು ನಡೀತಾ ಇದ್ರೆ ನೋಡೋರಿಗೆ ಗೌರವದ ಭಾವನೆ ಬರುತ್ತೆ. ನೀನೂ ಇದ್ದೀಯಾ ಅದೆಂತದೋ ಮಾರ್ಡರ್ನ್ ಡ್ರೆಸ್ ಹಾಕ್ಕೊಂಡು.. ಲೇ ನೀನಾದ್ರೂ ಇವಳಿಗೆ ಬುದ್ಧಿ ಹೇಳೇ?
ತಾಯಿ : ಅದು ನಮ್ಮ ಕಾಲ ಬಿಡ್ರಿ. ಹೆಂಗಸರು ಅಂದ್ರೆ ಹಿಂಗೇ ಇರಬೇಕು, ತಲೆ ಮೇಲೆ ಸೆರಗು ಹಾಕ್ಕೊಂಡು ತಗ್ಗಿ ಬಗ್ಗಿ ನಡೀಬೇಕು ಅಂತಾ ನಮ್ಮಪ್ಪ, ಅವರಪ್ಪಾ ಆಜ್ಞೆ ಮಾಡೋರು. ಮದುವೆ ಆದ ಮ್ಯಾಲೆ ನೀವೂ ಹಿಂಗೇ ಇರಬೇಕು ಅಂತಾ ಆದೇಶಾ ಮಾಡಿದ್ರಿ. ನಮಗಂತೂ ನಮಗಿಷ್ಟಾ ಬಂದಂಗೆ ಇರೋಕಾಗಲಿಲ್ಲ, ಪಾಪ ನನ್ನ ಮಗಳಾದ್ರೂ ಅವಳಿಗಿಷ್ಟಾ ಬಂದಂಗೆ ಇರ್ಲಿ ಬಿಡ್ರಿ.
ತಂದೆ : ಲೆ ಲೇ.. ಒಬ್ಬ ತಾಯಿಯಾಗಿ ಆಡೋ ಮಾತೇನೇ ಇದು. ನಮ್ಮ ಹಿಂದೂ ಸಂಸ್ಕೃತಿಯನ್ನ ಕಾಪಾಡಿಕೊಂಡು ಹೋಗೋದು ಬೇಡ್ವೇನೆ? ಮನೆ ಹೊರಗೆ ಹೆಣ್ಮಕ್ಕಳಿಗೆ ರಕ್ಷಣೆ ಇದೆ ಏನೇ? ಹೆಂಗಸರ ರಕ್ಷಣೆಗಾಗೇ ನಮ್ಮ ಹಿರೀಕರು ಹೆಂಗಸರು ಅಂದ್ರೆ ಹಿಂಗೇ ಇರಬೇಕು ಅಂತಾ ಕಟ್ಟುನಿಟ್ಟು ಮಾಡಿದ್ದು.
ಮಗಳು : ಅಲ್ಲಪ್ಪಾ ಹೆಣ್ಮಕ್ಕಳಿಗೆ ರಕ್ಷಣೆ ಕೊಡಬೇಕು ಅಂದ್ರೆ ಏನರ್ಥ? ನನ್ನ ಒಂದ್ ಪ್ರಶ್ನೆಗೆ ಉತ್ತರ ಕೊಡಪ್ಪಾ?
ತಂದೆ : ಹೆಣ್ಮಕ್ಕಳು ಪ್ರಶ್ನೆ ಕೇಳಬಾರ್ದು. ಅದು ನಮ್ಮ ಹಿಂದೂ ಸಂಸ್ಕೃತಿ ಅಲ್ಲಾ. ಹೇಳಿದಷ್ಟು ಕೇಳಿಕೊಂಡು ಬಿದ್ದಿರಬೇಕು ಅಷ್ಟೇ.
ಮಗಳು : ಇನ್ನೂ ಯಾವ ಕಾಲದಲ್ಲಿ ಇದ್ದೀಯಪ್ಪಾ. ಹೆಣ್ಮಕ್ಕಳು ಈಗ ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ. ಆದರೆ ನೀವಿನ್ನೂ ಹಳೇ ಕಾಲದಲ್ಲೇ ಇದ್ದೀರಿ. ಮೊದಲು ನನ್ನ ಪ್ರಶ್ನೆಗೆ ಉತ್ತರಾ ಕೊಡಿ?
ತಾಯಿ : ಅವಳೇನೋ ಕೇಳ್ತಾಳೆ ಉತ್ತರಾ ಕೊಡ್ರಿ. ನೀ ಕೇಳು ಮಗಳೇ.
ಮಗಳು : ಹೆಣ್ಣು ಮಕ್ಕಳಿಗೆ ರಕ್ಷಣೆ ಬೇಕು ಅಂದ್ರಲ್ಲಾ, ಯಾರಿಂದ ರಕ್ಷಣೆ ಬೇಕಿದೆ. ಕಾಡು ಪ್ರಾಣಿಗಳಿಂದಾನೋ ಇಲ್ಲಾ ದೆವ್ವಾ ಭೂತಾ ಪಿಶಾಚಿಗಳಿಂದಾನೋ?
ತಂದೆ: ಅದೇನು ಹಿಂಗ್ ಕೇಳ್ತಿದ್ದೀ?
ಮಗಳು : ಅದೇ ಅಪ್ಪಾ. ಅತ್ಯಾಚಾರ ಮಾಡೋರು ಯಾರು? ಕೊಲೆ ಮಾಡೋರು ಯಾರು?
ತಂದೆ : ಇನ್ಯಾರು ಈ ಮತಿಗೆಟ್ಟ ಗಂಡಸರು. ಅವರಿಂದ ನಮ್ಮನೆಯ ಹೆಣ್ಮಕ್ಕಳನ್ನ ರಕ್ಷಿಸಿಕೊಳ್ಳಬೇಕಿದೆ. ಅದಕ್ಕೆ..
ಮಗಳು : ಅದಕ್ಕೆ ಹೆಣ್ಣಿಗೆ ಗಂಡಸರಿಂದ ರಕ್ಷಣೆ ಬೇಕಾಗಿಲ್ಲಾ ಅಪ್ಪಾ. ಗಂಡಸರ ಮನಸ್ಥಿತಿಯಿಂದ ರಕ್ಷಣೆ ಬೇಕಿದೆ. ಹೆಂಗಸರ ವಿಚಾರದಲ್ಲಿ ಎಲ್ಲಾ ಜಾತಿ ಧರ್ಮದ ಬಹುತೇಕ ಗಂಡಸರ ಮನಸ್ಥಿತಿ ಒಂದೇ ರೀತಿ ಇದೆ. ಆ ಕೆಟ್ಟ ಮನಸ್ಥಿತಿಯಿಂದ ಮಹಿಳೆಯರಿಗೆ ರಕ್ಷಣೆ ಬೇಕಿದೆ.
ತಾಯಿ : ಹಾಂ. ಹಂಗ್ ಕೇಳು ಮತ್ತೆ..
ಮಗಳು : ನಾವು ಹೆಣ್ಣುಮಕ್ಕಳ ರಕ್ಷಕರು ಎನ್ನುವ ಅಹಂಕಾರದಿಂದ ಈ ಪುರುಷ ಪುಂಗವರು ಆ ಸನಾತನ ಸಂಸ್ಕೃತಿ ಹೆಸರಿನಲ್ಲಿ ಹೆಂಗಸರ ಮೇಲೆ ಕಟ್ಟುಪಾಡು ಹಾಕ್ತಾರಲ್ಲಾ ಅಂತವರು ಮೊದಲು ಗಂಡಸರಿಗೆ ಕಟ್ಟುಪಾಡು ಹಾಕಬೇಕಿತ್ತು.
ತಂದೆ : ನೋಡೇ.. ಬೇಲಿ ಹಾಕದೇ ಇದ್ರೆ ದನಗಳು ನುಗ್ಗಿ ಬೆಳೆಯನ್ನ ತಿಂದಾಕ್ತಾವೆ. ನೀವು ಹೆಣ್ಮಕ್ಕಳು ಫಲವತ್ತಾದ ಬೆಳೆಗಳಿದ್ದಂತೆ. ನಿಮ್ಮನ್ನ ಕಾಪಾಡೋಕೆ ಹಿರೀಕರು ನೀತಿ ನಿಯಮ ಕಟ್ಟುಪಾಡುಗಳ ಬೇಲಿ ಹಾಕಿದ್ದು.
ಮಗಳು : ಹೌದಾ..? ಸಿಕ್ಕಸಿಕ್ಕಲ್ಲಿ ಮೇಯುವ ಪುಂಡು ದನಗಳನ್ನ ಕಟ್ಟಿ ಹಾಕಿದ್ರೆ ಬೆಳೆಗೆ ಬೇಲಿಯಾದ್ರೂ ಯಾಕೆ ಬೇಕಿತ್ತು. ಹೋಗಲಿ ಬೇಲಿ ಹಾರಬಾರದು ಎಂದು ಈ ಪುಂಡ ಪುರುಷರಿಗೆ ಯಾಕೆ ಕಟ್ಟಲೆಗಳ ಮೂಗುದಾರ ಹಾಕಬಾರದಿತ್ತು.
ತಾಯಿ : ಸರಿಯಾಗಿ ಕೇಳಿದೆ ಬಿಡು ಕಂದಾ.
ಮಗಳು : ನೋಡಿ ಅಪ್ಪಾ. ಹೆಣ್ಣು ಗಂಡಿನ ಸ್ವತ್ತು ಎಂದುಕೊಳ್ಳೋದೇ ತಪ್ಪು. ಯಾವಾಗಲೂ ತನ್ನ ನಿಯಂತ್ರಣದಲ್ಲೇ ಹೆಣ್ಣು ಇರಬೇಕು ಎಂಬ ಪುರುಷರ ಅಹಂಕಾರವೇ ಈ ಕಟ್ಟುಪಾಡಿಗೆ ಕಾರಣ. ‘ಮನೆಯಲ್ಲೇ ಇರು, ಬೀದಿ ಸುತ್ತ ಬೇಡಾ. ಗಂಡಬೀರಿ ಆಗಬೇಡಾ ಯಾಕಂದ್ರೆ ನೀನು ಹೆಣ್ಣು’ ಅಂತಾನೇ ಹೆಣ್ಮಕ್ಕಳಿಗೆ ಬೋಧನೆ ಮಾಡ್ತಾನೇ ಇರ್ತೀರಲ್ಲಾ..
ತಾಯಿ : ಹೌದು ಕಣೆ.. ಹಂಗೆನೇ ನಮ್ಮವ್ವ ಅವರವ್ವ ನನಗೂ ಹೇಳಿದ್ದು,
ಮಗಳು : ಅದೇ ತಮ್ಮ ಗಂಡು ಮಕ್ಕಳಿಗೆ ‘ಹೆಣ್ಮಕ್ಕಳಿಗೆ ಗೌರವ ಕೊಡಬೇಕು, ಕೆಟ್ಟದ್ದನ್ನ ಬಯಸಬಾರದು, ಹೆಂಡತಿಯನ್ನೇ ಜೂಜಿಗೆ ಪಣಕ್ಕಿಟ್ಟ ಪಾಂಡವರು ನೀಚರು, ಪಣಕ್ಕಿಡಿಸಿಕೊಂಡ ಕೌರವರು ಅಧಮರು, ಸೀತೆಯನ್ನು ಅಗ್ನಿ ಪರೀಕ್ಷೆಗೆ ಒತ್ತಾಯಿಸಿದ ರಾಮ ಹೇಗೆ ಮರ್ಯಾದೆ ಪುರುಷ? ಜಲಕ್ರೀಡೆಯಲ್ಲಿದ್ದ ಯುವತಿಯರ ಬಟ್ಟೆ ಕದ್ದ ಕೃಷ್ಣ ಅದ್ಯಾವ ದೇವರು? ಅಂತಾ ಯಾವತ್ತಾದರೂ ಯಾರಾದರೂ ತಮ್ಮ ಗಂಡುಮಕ್ಕಳಿಗೆ ಹೇಳಿದ್ದಾರಾ?
ತಂದೆ : ಹೌದಲ್ವಾ. ಇದು ನಮಗೆ ಹೊಳೀಲೇ ಇಲ್ವಲ್ಲಾ?
ಮಗಳು : ನೋಡಪ್ಪಾ.. ಈ ಗಂಡು ಸಮಾಜ ಇರೋದೇ ಹಿಂಗೆ. ಯಾರೋ ನೀಚರು ಹೆಂಗಸರ ಮೇಲೆ ದೌರ್ಜನ್ಯ ಮಾಡಬೇಕು. ಅದನ್ನೇ ನೆಪವಾಗಿಸಿಕೊಂಡು ಎಲ್ಲರೂ ತಮ್ಮ ಮನೆಯ ಹೆಣ್ಣು ಮಕ್ಕಳನ್ನ ಹದ್ದುಬಸ್ತಿನಲ್ಲಿಡಲು ನಿಯಂತ್ರಣ ಹೇರಬೇಕು.
ತಂದೆ : ನೀನು ಹೇಳೋದೇನೋ ಸರಿ ಇದೆ ಮಗಳೇ. ಆದರೆ ಬಟ್ಟೆ ಮೇಲೆ ಮುಳ್ಳು ಬಿದ್ದರೂ, ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ ಹರಿಯೋದು ಬಟ್ಟೆನೇ ಅಲ್ವಾ. ಅದಕ್ಕೆ ಬಟ್ಟೇನ ರಕ್ಷಣೆ ಮಾಡಬೇಕಮ್ಮಾ. ಮುಳ್ಳಿರುವ ಸಮಾಜದಲ್ಲಿ ನಮ್ಮ ಮನೆಯ ಬಟ್ಟೆಗೆ ನಾವು ರಕ್ಷಣೆ ಕೊಡಬೇಕು.
ಮಗಳು : ಅಲೆಲೆಲೇ.. ಇನ್ನೂ ಎಷ್ಟು ಕಾಲ ಇದೇ ಮುಳ್ಳು ಬಟ್ಟೆ ಕಥೆಯನ್ನ ಹೇಳ್ತಾ ಇರ್ತೀರಾ? ಹೆಣ್ಮಕ್ಕಳು ಬಟ್ಟೆ ಆದ್ರೆ ಗಂಡಸರು ಮುಳ್ಳು ಅಂತಾ ಒಪ್ಕೋಳ್ತೀರಲ್ವಾ. ಹಾಗಾದರೆ ಈ ಬಟ್ಟೆ ಮುಳ್ಳು ಎರಡೂ ನಿಮ್ಮ ಮಕ್ಕಳೇ ಅಲ್ವಾ. ಯಾಕೆ ಗಂಡು ಮಕ್ಕಳನ್ನ ಬಟ್ಟೆಗೆ ಚುಚ್ಚೋ ಮುಳ್ಳಿನ ಹಾಗೆ ಬೆಳಸ್ತೀರಾ? ಗಂಡ್ಮಕ್ಕಳಲ್ಲಿ ಮುಳ್ಳಿನ ಗುಣಗಳು ಬೆಳೆಯೋಕೆ ಮುಂಚೆನೇ ಮುರದು ಹಾಕಬೇಕಲ್ವಾ?
ತಾಯಿ : ಹೌದೌದು.. ಮುರದು ಹಾಕಬೇಕು. ನಮ್ಮನೆ ಮುಳ್ಳು ಬೇರೆ ಮನೆಯ ಬಟ್ಟೆ ಹರಿದು ಹಾಕುವಂತಾಗಬಾರದು.
ಮಗಳು : ಅಪ್ಪಾ.. ಹೆಣ್ಮಕ್ಕಳಿಗೂ ಮನಸ್ಸು ಇದೆ, ಅವರಿಗೂ ಭಾವನೆಗಳಿವೆ. ಅವರು ನಿರ್ಜೀವ ಬಟ್ಟೆಗಳಲ್ಲಾ, ಅವರ ಸುತ್ತ ಬೇಲಿ ಹಾಕಲು ಅವರು ಬೆಳೆದು ಕೊಯ್ದು ತಿನ್ನುವ ಬೆಳೆಗಳೂ ಅಲ್ಲಾ. ಜೀವಂತಿಕೆ ಇರುವ ಮನುಷ್ಯರು. ಹೀಗಾಗಿ ಹುಟ್ಟಿನಿಂದಲೇ ಗಂಡು ಹೆಣ್ಣು ಎನ್ನುವ ಭೇದ ಮಾಡೋದನ್ನ ಹೆತ್ತವರು ಬಿಡಬೇಕು.
ತಂದೆ : ಹೌದು.. ನೀನು ಹೇಳೋದ್ರಲ್ಲೂ ಅರ್ಥ ಇದೆ. ಆದರೆ ಪುಂಡು ದನಗಳು ಇರ್ತಾವಲ್ಲಮ್ಮಾ, ಅವುಗಳಿಂದಾದರೂ ಹೆಣ್ಮಕ್ಕಳಿಗೆ ರಕ್ಷಣೆ ಬೇಕಲ್ವಾ?
ಮಗಳು : ಅಪ್ಪಾ ಬೇಲಿ ಹಾರಿ ಬೆಳೆ ಮೇಯ್ದ ದನಗಳಿಗೆ ಏನು ಮಾಡ್ರಾ ಇದ್ರಿ?
ತಾಯಿ : ಇನ್ನೇನು ಮಾಡ್ತಾರೆ, ಕೊಂಡ್ವಾಡಾ ಅಂತಾ ಇದ್ವು, ಅಲ್ಲಿ ಕಟ್ಟಿ ಹಾಕಿ ದನ ಸಾಕಿದವರಿಗೆ ದಂಡಾ ಹಾಕ್ತಿದ್ರು.
ಮಗಳು : ಹಾಂ. ಹಂಗೇನೇ ಹೆಣ್ಮಕ್ಕಳ ಮೇಲೆ ದೌರ್ಜನ್ಯ ಮಾಡುವ ಪುಂಡರಿಗೆ ಶಿಕ್ಷೆ ಕೊಡೋಕೆ ಕಾನೂನು ಅಂತಾ ಇದೆಯಲ್ಲಾ, ಅದನ್ನ ಪುಲ್ ಟೈಟ್ ಮಾಡಬೇಕು. ಅಪರಾಧ ಕೃತ್ಯ ಎಸಗಿದವರ ಹೆತ್ತವರಿಗೆ ಮೊದಲು ದಂಡ ವಿಧಿಸಬೇಕು.
ತಾಯಿ : ನಮ್ಮ ಮಗ ತಪ್ಪು ಮಾಡಿದ್ರೆ ನಮಗ್ಯಾಕೆ ದಂಡಾ ?
ತಂದೆ : ಯಾಕಂದ್ರೆ.. ತಪ್ಪು ಮಾಡದೇ ಇರೋ ಹಾಗೆ ಬುದ್ಧಿ ಹೇಳಿ ಬೆಳಸಲಿಲ್ಲಾ ನೋಡು ಅದಕ್ಕೆ ನಾವು ಹೆತ್ತವರೂ ದಂಡಾ ಕಟ್ಟಬೇಕು.
ಟಿವಿಯಲ್ಲಿ ಹಾಡು : ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ.
( ಟಿವಿ ಆಫ್ ಮಾಡಲು ತಾಯಿ ರಿಮೋಟ್ ಎತ್ತಿ ಕೊಳ್ತಾಳೆ,)
ತಂದೆ : ಇರ್ಲಿ ಬಿಡೆ. ಹಾಡು ಅರ್ಥಗರ್ಭಿತವಾಗಿದೆ.
(ಫೋನ್ ರಿಂಗ್ ಆಗುತ್ತೆ.)
ತಂದೆ : ಹಲೋ ಯಾರು? ಹೌದು ನಾನೇ..
ಪೊಲೀಸ್ : ರ್ರೀ ಅದೇನಂತಾ ನಿಮ್ಮ ಮಗನ್ನ ಬೆಳ್ಸಿದ್ದೀರಿ. ಇನ್ನೂ ಇಬ್ಬರ ಜೊತೆ ಸೇರಿ ಒಂದು ಹುಡುಗಿ ರೇಪ್ ಮಾಡಿ ತಲೆತಪ್ಪಿಸಿಕೊಂಡಿದ್ದಾನೆ. ಈಗಲೇ ಸ್ಟೇಶನ್ನಿಗೆ ಬನ್ನಿ. ಮೊದಲು ನಿಮಗೆ ಪಾಠ ಕಲಿಸ್ಬೇಕಿದೆ… ಹಲೊ ಹಲೋ..
( ತಂದೆ ಕೈಯಿಂದಾ ಮೊಬೈಲ್ ಕೆಳಗೆ ಬೀಳುತ್ತದೆ. ಆತಂಕದಿಂದ ತಂದೆ ಸ್ಟಿಲ್ ಆಗಿ ನಿಂತುಕೊಳ್ಳುತ್ತಾನೆ. ಟಿವಿಯಲ್ಲಿ ಹಾಡು.. ಏನು ಮಾಡಿದೆನೆಂದು ಈ ಗತಿ ತಂದೆಯೋ ಪಶುಪತಿ)
ಶಶಿಕಾಂತ ಯಡಹಳ್ಳಿ
ಕನ್ನಡ ನಾಡಿನ ಸಾಂಸ್ಕೃತಿಕ ಮತ್ತು ರಂಗಭೂಮಿ ವಲಯದಲ್ಲಿ ಇವರು ಒಬ್ಬ ಪ್ರಮುಖ ಮತ್ತು ಕ್ರಿಯಾಶೀಲ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ – ಪ್ರೀತಿ ಏನೆಂದು ಯುವಕರಿಗೆ ಕಲಿಸುವಲ್ಲಿ ನಾವು ಸೋತು ಬಿಟ್ಟೆವೇ?


