1990 ಮಾರ್ಚ್ ಲ್ಲಿ ಡಾ.ಬಂಜಗೆರೆ ಜಯಪ್ರಕಾಶ್ ಯವರು ಬರೆದ “ಸೂತಕ ” ಕವಿತೆಯ ಒಟ್ಟು ಸಾರಾಂಶದಲ್ಲಿ ನಾನು ಕಂಡದ್ದು ಕವಿಯ ಮನದ ತಲ್ಲಣದ ಒದ್ದಾಟ. ಅದು ಇಡೀ ಭುವಿಯ ಸದ್ದನ್ನೇ ಗದ್ದಲೆಬ್ಬಿಸಿರುವ ಹಾಗೆ. ಬಾಳೆ ಎಲೆಯ ಬಾಡೂಟವೂ ಕೂಡಾ ಕಣ್ಣಿಗೆ ರಕ್ತಸಿಕ್ತವಾಗಿ ಗೋಚರಿಸಿ, ಎಲೆಯ ಎಡ ಭಾಗವನು ಮಡಚಿ ಮೇಲೆದ್ದು ಸುತ್ತಲ ಜಗತ್ತಿಗೆ ಬಿಟ್ಟೇನೆಂದರು ಬಿಡದ ಸಂಸ್ಕೃತಿಯ “ಜಾತಿ ” ಸತ್ತ ಹೆಣ ಸಂಸ್ಕಾರವಿಲ್ಲದೆ ನಾರುತ್ತಿದ್ದರೂ ಕಣ್ಣು ಮುಚ್ಚದ ಹೆಣದ ದೇಹ ಕೊಳೆತು ಬಿದ್ದ ಹಾಗಿದೆ. ..
ಇದು ಬರೀ ಭ್ರಮೆಯ ಪ್ರಪಂಚದ ಬಾವಿ. ಇದಕೆ ನೂರೆಂಟು ಬಾಯಿಗಳ ಶಾಪ. ಸೂತಕದ ತವಕಕೆ ಇಡೀ ಭುವಿಯ ಅಗ್ರಹಾರ ನಡುಗುತ್ತಿದೆ. ಸಾಲದಕ್ಕೆ ಮಡಿ ಊಟದ “ಪಣಿ ಜನಿವಾರದೊಳು ” ನಾಲಗೆಯು ಬಾಯಾರಿಕೆಗೆ ಒದ್ದಾಡಿ ಸಂಪ್ರದಾಯವೆಂಬ ಕಡಿವಾಣದೊಳು ಜಾತಕದ ಸೂಚಿಯ ಪುಟ ತಿರುಗಿಸುವ ಹುನ್ನಾರದೊಲುಮೆಯಲಿ ಭಗವಂತನಿಗೆ “ಸೂತಕದ ”ಹೂವಿಟ್ಟು ಬೇಡುತ್ತಿದ್ದಾರೆ. ಆದರೂ ನಿಲ್ಲಲೊಲ್ಲದೇ ಜಗದ ಸೂಕ್ಷ್ಮ ಕುತಂತ್ರದ ರಕ್ತವನು ಅರಿಯದ ಜಗದ ಕಂದಮ್ಮಗಳು ಕಕ್ಕಾಬಿಕ್ಕಿ ಯಾಗಿ ಗೂಡಿಲ್ಲದೆ ಪರಿತಪಿಸಿ ಚೀರುತ್ತಿವೆ. ಆಗಸದ ನಿಲುವಿನಲಿ ಕಾಗೆ ಗೂಬೆಗಳ ಹಾರಾಟ. ಇದರ ಹಾರಾಟಕೆ ಮನವೊಲಿವ ಮನಸ್ಸು ಕೂಡಾ ಇನ್ನೂ ಹೊರನೋಟಕ್ಕೆ ಕುಚೇಷ್ಟೆ ಮಾಡಿ ಆಲಿಸಿ ನಗುತಿದೆ. .

ಕವಿತೆಯ ಸಾಲಾದ “ಸಾವ ಸುದ್ದಿಯು ಹೂಗಳ ನಾರಿನಲಿ ಪೋಣಿಸಿಟ್ಟಿರುವಂತೆ ಕಾಗದ ಮುದುಡಿಕೊಳ್ಳುತ್ತಿದೆ ” ಎನ್ನುವ ಡಾಕ್ಟರ್. ಜೆ ಪಿ ಯವರ 1990 ರ ದಶಕದ ವಿಚಾರವು ಇಂದಿನ ಪ್ರಸ್ತುತ ಗಮನದ “ಸೂತಕ ” ನೀರೊಳು ನೆಲೆಯಿಲ್ಲದೆ ಹರಿಯುತಿದೆ. ದಿನಾಲು ಸುಡುವ ಹೆಣದ ಬೆಂಕಿಯ ಒಡಲು ಯಾವ ಸಿಡಿಲುಗಳದ್ದೋ? ಕಾಣೆವು.
ಸೂತಕವಿಲ್ಲದೆಯೇ ಬೂದಿಯನು ಸ್ಮಾರಕದ ಹಣೆಯ ಮೇಲೆ ಸುರಿದು “ವಿಭೂತಿ ”ಎಂದು ಕೊಡುವರಲ್ಲ? ಇದು ಯಾರ ಮತ್ತು ಯಾವ ಸೂತಕದ ಸಂಕೇತ?. ಶತ ಶತಮಾನದ ಶಾಪ ಸೂತಕದ ಗಿರಣಿಯೊಳು ಇಂದಿನ ದಿನದ ಕಾಡಾಟದೊಳು ಸುತ್ತಿ ಮನೆ ಮನೆಯ ಹೊಕ್ಕಿದೆ. ಇದಕೆ ಯಾವ ಮಂತ್ರ ಹೇಳೋಣ?
ಯಾವ ನೀರನ್ನು ಸಿಂಪಡಿಸೋಣ? ಏಕಾಬಿಕಿಯ ಕಲ್ಲ ಇಟ್ಟಿಗೆಯ ಸೂತಕದ ಬಾಗಿಲಿಗೆ ಯುಗದ ಹೊಸ ಮಾವಿನೆಲೆಯ ತೋರಣ? ಎಷ್ಟು ನಗೆತನದ ವ್ಯವಸ್ಥೆಯ ವ್ಯಂಗ್ಯವಲ್ಲವೇ? …
ಪ್ರತಿ ದಿನವೂ ಸೂತಕದ ಇರುಳು ಬೆಳಕಲ್ಲವೇ? ಬಿಳಿ ಎಲೆಯ ಕಾಗದಕೆ ಮದ್ದು ಗುಂಡಿನ ಕೆಂಪು ರಕ್ತ ಚಿಮ್ಮಿ ಜಗದ ಮಾಯೆಗೆ ಅಲ್ಲೋಲ ಕಲ್ಲೋಲ ಮಾಡಿ ಸೂತಕದ ಕತ್ತಲಲಿ ಎಲ್ಲರನು ಎಲ್ಲವನು ಮಬ್ಬಾಗಿಸಿದೆ. ಇದರ ಮಧ್ಯೆ “ಹಣೆಯ ಸಿಂಧೂರ” ಬೆವರ ಹನಿಗೆ ಬೆಳ್ಮೋಡದ ಹಸಿ ನೆಲದಲ್ಲಿ ಇಳಿಯುತಿದೆ. ..
ಕಳೆದ ಕಾಲದ ಪ್ರೇಯಸಿಯರು ಎನ್ನುವ ಕವಿತೆಯಲಿ ಈ “ಸೂತಕ ”ಕವಿತೆ ನನಗೆ ತುಂಬಾ ಇಷ್ಟ ವಾಯಿತು.
ಡಾ. ಕೃಷ್ಣವೇಣಿ ಆರ್ ಗೌಡ , ರಾಯದುರ್ಗ
ಇದನ್ನೂ ಓದಿ- ಉರುಳುವ ಕಾಲದ ಜೊತೆಗೆ ತುಳುವರ ವೃತ್ತಿ ಬದುಕು


